ರಾಜ್ಯದಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಸರ್ಕಾರ ತೀರ್ಮಾನಿಸಿದ್ದು, ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇಂದು ಒಪ್ಪಿಗೆ ಸಿಕ್ಕಿದೆ. ಆದರೆ ಈ ಬಾರಿಯೂ ಅಧಿವೇಶನ ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಲಿದೆ. ಇದುವರೆಗೂ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿತ್ತು.
ಅಧಿವೇಶನವು ಡಿಸೆಂಬರ್ 7 ರಿಂದ 15 ರ ವರೆಗೆ ಒಂದು ವಾರಗಳ ಕಾಲ ನಡೆಯಲಿದೆ. ಕಳೆದ ವರ್ಷದಿಂದ ಈ ಅಧಿವೇಶನವನ್ನು ರಾಜಧಾನಿಯ ವಿಧಾನಸೌಧದಲ್ಲಿ ನಡೆಸಲಾಗುತ್ತಿದೆ.
ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದರ ಕುರಿತು ತೀರ್ಮಾನಿಸಲಾಗಿದ್ದು, ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ಈ ಕುರಿತು ಮಾಹಿತಿ ನೀಡಿದರು.
ಇದನ್ನೂ ಓದಿ: ಸರ್ಕಾರ ಮರಾಠಿಗರ ಪ್ರಾಧಿಕಾರ ರಚಿಸಿ ಕನ್ನಡಿಗರನ್ನ ಕೆರಳಿಸಿದೆ – ಸಿದ್ದರಾಮಯ್ಯ ಸರಣಿ ಟ್ವೀಟ್!
ವಾಡಿಕೆಯಂತೆ ಚಳಿಗಾಲದ ಅಧಿವೇಶನವನ್ನು ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಕಾಲ ನಡೆಸಲಾಗುತ್ತಿತ್ತು. ಆದರೆ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಮಂಡಲ ಅಧಿವೇಶನವನ್ನೇ ನಡೆಸಲಿಲ್ಲ. 2019ರಲ್ಲಿ ‘ಪ್ರವಾಹ’ ಪರಿಸ್ಥಿತಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಅಧಿವೇಶನವನ್ನು ನಡೆಸಲಾಯಿತು. 2020ನೆ ಸಾಲಿನಲ್ಲಿಯೂ ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೆ ವಿಧಾನ ಮಂಡಲ ಅಧಿವೇಶನವನ್ನು ನಡೆಸಲು ತೀರ್ಮಾನಿಸಲಾಗಿದೆ.
ಕಳೆದ ಬಾರಿಯು ಅಧಿವೇಶನದಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಜಾರಿಗೆ ತರಲು ಹೊರಟಿದ್ದ ಕೃಷಿ ಮಸೂದೆಗಳು ಸೇರಿದಂತೆ ಕೊರೊನಾ ನಿರ್ವಹಣೆಯಲ್ಲಿನ ಭ್ರಷ್ಟಾಚಾರವು ಪ್ರಮುಖ ಚರ್ಚಾ ವಿಷಯವಾಗಿತ್ತು. ಈ ಬಾರಿಯ ಅಧಿವೇಶನದಲ್ಲಿ ಯಾವ ವಿಷಯಗಳು ಚರ್ಚೆಗೆ ಬರಲಿವೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ‘ಮರಾಠರು ತಲತಲಾಂತರದಿಂದ ಇಲ್ಲಿಯೇ ಇದ್ದಾರೆ’- ಯಡಿಯೂರಪ್ಪ ಹೇಳಿಕೆಗೆ ನೆಟ್ಟಿಗರ ಆಕ್ರೋಶ!


