ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಕ್ಯಾಂಪಸ್ ರಸ್ತೆ ಮೂಲಕ ಸೀಮಿತ ಸಾರ್ವಜನಿಕ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ರಕ್ಕೆ ಪ್ರತಿಕ್ರಿಯಿಸಿದ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ, ಸರ್ಕಾರದ ವಿನಂತಿಯನ್ನು ನಿರಾಕರಿಸಿದರು.
“ಸರ್ಜಾಪುರ ಕ್ಯಾಂಪಸ್ ಖಾಸಗಿ ಆಸ್ತಿ ಮತ್ತು ಜಾಗತಿಕ ಗ್ರಾಹಕರಿಗೆ ಸೇವೆಗಳನ್ನು ಒದಗಿಸುವ ವಿಶೇಷ ಆರ್ಥಿಕ ವಲಯ (ಎಸ್‌ಇಝಡ್) ದ ಭಾಗವಾಗಿದೆ” ಎಂದು ಹೇಳಿದ ಪ್ರೇಮ್‌ಜಿ, ‘ಕಾನೂನು, ಆಡಳಿತ ಮತ್ತು ಶಾಸನಬದ್ಧ ಸವಾಲುಗಳನ್ನು’ ಎತ್ತಿ ಸರ್ಕಾರದ ಮುಂದಿಟ್ಟಿದ್ದಾರೆ.
“ಒಪ್ಪಂದದ ಬಾಧ್ಯತೆಗಳು ಕಟ್ಟುನಿಟ್ಟಾದ ಪ್ರವೇಶ ನಿಯಂತ್ರಣವನ್ನು ಕಡ್ಡಾಯಗೊಳಿಸುತ್ತವೆ, ಕ್ಯಾಂಪಸ್‌ನ ಸಾರ್ವಜನಿಕ ಬಳಕೆಗೆ ಅವಕಾಶ ನೀಡುವುದು ಸುಸ್ಥಿರ, ದೀರ್ಘಕಾಲೀನ ಪರಿಹಾರವನ್ನು ನೀಡುವುದಿಲ್ಲ” ಎಂದು ಅವರು ಹೇಳಿದರು.
ಆದರೂ, ಬೆಂಗಳೂರಿನ ಸಂಚಾರ ಸವಾಲುಗಳನ್ನು ಪರಿಹರಿಸಲು ಸಹಯೋಗದ, ಡೇಟಾ-ಚಾಲಿತ ವಿಧಾನದ ಮೇಲೆ ರಾಜ್ಯ ಸರ್ಕಾರದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಇಚ್ಛೆಯನ್ನು ಕಂಪನಿಯು ವ್ಯಕ್ತಪಡಿಸಿತು. ಕಾರ್ಯಗತಗೊಳಿಸಬಹುದಾದ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನಗರ ಸಾರಿಗೆ ನಿರ್ವಹಣೆಯ ತಜ್ಞರ ನೇತೃತ್ವದಲ್ಲಿ ಸಮಗ್ರ ಅಧ್ಯಯನವನ್ನು ನಿಯೋಜಿಸಲು ಸೂಚಿಸಿತು.
ಕರ್ನಾಟಕಕ್ಕೆ ವಿಪ್ರೋ ನೀಡಿದ ಕೊಡುಗೆಗಳನ್ನು ಗುರುತಿಸಿದ್ದಕ್ಕಾಗಿ ಅಜೀಂ ಪ್ರೇಮ್‌ಜಿ ತಮ್ಮ ಪತ್ರದಲ್ಲಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಅರ್ಪಿಸಿದರು. ರಫ್ತು-ಆಧಾರಿತ ಆರ್ಥಿಕ ಕೇಂದ್ರವೆಂದು ಗುರುತಿಸಲ್ಪಟ್ಟ ಹೊರ ವರ್ತುಲ ರಸ್ತೆ ಪ್ರದೇಶದ ಉದ್ದಕ್ಕೂ ಸಂಚಾರ ಸಮಸ್ಯೆಗಳನ್ನು ಪರಿಹರಿಸುವ ತುರ್ತು ಅಗತ್ಯವನ್ನು ಒಪ್ಪಿಕೊಂಡರು. “ಹಲವು ಕಾರಣಗಳಿಂದ ಉಂಟಾಗುವ ಸಮಸ್ಯೆಯ ಸಂಕೀರ್ಣತೆಯು ಒಂದೇ ಪರಿಹಾರವನ್ನು ಹೊಂದಿರುವುದು ಅಸಂಭವ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಗರ ಸಾರಿಗೆ ನಿರ್ವಹಣೆಯಲ್ಲಿ ತಜ್ಞರ ನೇತೃತ್ವದಲ್ಲಿ ವೈಜ್ಞಾನಿಕ ಅಧ್ಯಯನವನ್ನು ನಿಯೋಜಿಸುವ ಪ್ರಸ್ತಾಪವನ್ನು ಸರ್ಕಾರದ ಮುಂದಿಟ್ಟಿದ್ದಾರೆ.
“ಇಂತಹ ಉಪಕ್ರಮಗಳು ಅಲ್ಪ, ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ಕಾರ್ಯಗತಗೊಳಿಸಬಹುದಾದ ಪರಿಣಾಮಕಾರಿ ಪರಿಹಾರಗಳ ಸಮಗ್ರ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಲು ನಮಗೆ ಅನುವು ಮಾಡಿಕೊಡುತ್ತದೆ. ಪರಿಹಾರದ ಭಾಗವಾಗಲು ನಮ್ಮ ಬದ್ಧತೆಯನ್ನು ಪ್ರದರ್ಶಿಸಲು, ವಿಪ್ರೋ ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಈ ತಜ್ಞರ ಅಧ್ಯಯನಕ್ಕಾಗಿ ವೆಚ್ಚದ ಗಮನಾರ್ಹ ಭಾಗವನ್ನು ಭರಿಸಲು ಸಂತೋಷಪಡುತ್ತದೆ” ಎಂದು ಅವರು ಬರೆದಿದ್ದಾರೆ.
ಈ ನಿರ್ಬಂಧಗಳ ಹೊರತಾಗಿಯೂ, ಅಜೀಂ ಪ್ರೇಮ್‌ಜಿ ಅವರು ಕರ್ನಾಟಕ ಸರ್ಕಾರದೊಂದಿಗೆ ಸಹಕರಿಸಲು ವಿಪ್ರೋದ ಬದ್ಧತೆಯನ್ನು ಪುನರುಚ್ಚರಿಸಿದರು. “ಡೇಟಾ-ಚಾಲಿತ ವಿಧಾನವು ನಮ್ಮ ನಗರಕ್ಕೆ ಅತ್ಯಂತ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತದೆ” ಎಂದು ಒತ್ತಿ ಹೇಳಿದರು.


