ಉತ್ತರ ಪ್ರದೇಶ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯ ಅಡಿಯಲ್ಲಿ ಉಚಿತವಾಗಿ ಅಕ್ಕಿ ಮತ್ತು ಗೋಧಿಯನ್ನು ವಿತರಿಸುವುದನ್ನು ನಿಲ್ಲಿಸಲು ತೀರ್ಮಾನಿಸಿದೆ. ಈ ಪಡಿತರ ಹಿಂತೆಗೆತದಿಂದ ಕನಿಷ್ಠ 3.6 ಕೋಟಿ ಪಡಿತರ ಚೀಟಿದಾರರು- 15 ಕೋಟಿ ಫಲಾನುಭವಿಗಳು- ಸಂಕಷ್ಠಕ್ಕಿಡಗಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಾರಂಭದಲ್ಲಿ ರಾಜ್ಯ ಸರ್ಕಾರವು ಉಚಿತ ಆಹಾರ ಧಾನ್ಯ ವಿತರಣೆ ಯೋಜನೆಯನ್ನು ಪ್ರಾರಂಭಿಸಿತು. ಇಲ್ಲಿಯವರೆಗೆ, ಸುಮಾರು 15ಕೋಟಿ ಜನರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದರು. ಅವರು ತಿಂಗಳಿಗೆ ಎರಡು ಬಾರಿ ಉಚಿತ ಪಡಿತರವನ್ನು ಪಡೆಯುತ್ತಿದ್ದರು. ಅಲ್ಲದೆ ಈ ಯೋಜನೆಯು ರಾಜ್ಯ ಬಿಜೆಪಿ ಸರ್ಕಾರಕ್ಕೆ ಖ್ಯಾತಿಯನ್ನು ತಂದುಕೊಟ್ಟಿದ್ದಲ್ಲದೆ 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಮತ ಹಾಕುವಂತೆ ಕೆಲಸ ಮಾಡಿದೆ ಎಂದು ಹಲವರು ವಿಶ್ಲೇಷಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯವು ದೇಶದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ (22 ಕೋಟಿ) ರಾಜ್ಯವಾಗಿದೆ.
ರಾಜ್ಯ ಆಹಾರ ಹಾಗೂ ನಾಗರೀಕ ಸರಬರಾಜು ಇಲಾಖೆಯ ಪ್ರಕಾರ, ಪಡಿತರ ಚೀಟಿದಾರರು ಜುಲೈನಲ್ಲಿ ಪಡಿತರ ತೆಗೆದುಕೊಳ್ಳುವಾಗ ಒಂದು ಕೆಜಿ ಅಕ್ಕಿಗೆ 3ರೂ ಮತ್ತು ಒಂದು ಕೆಜಿ ಗೋಧಿಗೆ 2ರೂ ಪಾವತಿಸಬೇಕಿದೆ. ಆದರೆ ಜುಲೈ ತಿಂಗಳ ಪಡಿತರ ವಿತರಣೆ ಆಗಸ್ಟ್ 25ರಂದು ಪ್ರಾರಂಭವಾಗಿದೆ ಎನ್ನಲಾಗಿದೆ.
ಲಕ್ನೋದ ಜಿಲ್ಲಾ ವಿತರಣಾ ಅಧಿಕಾರಿ ಸುನೀಲ್ ಕುಮಾರ್ ಸಿಂಗ್ ಅವರನ್ನು ದಿವೈರ್ ಮಾತನಾಡಿಸಿದಾಗ, “ಪಡಿತರ ಚೀಟಿದಾರರು ಆಹಾರ ಧಾನ್ಯಗಳಿಗೆ ಹಣ ಪಾವತಿಸಬೇಕು (ಅಕ್ಕಿ & ಗೋಧಿ). ಆದಾಗ್ಯೂ, ಸರ್ಕಾರವು ಒಂದು ಲೀಟರ್ ಅಡುಗೆ ಎಣ್ಣೆ ಮತ್ತು 1ಕೆಜಿ ಉಪ್ಪು, 1ಕೆಜಿ ಕಡ್ಲೆ ಬೇಳೆಯನ್ನು ಉಚಿತವಾಗಿ ನೀಡುವುದನ್ನು ಮುಂದುವರೆಸುತ್ತದೆ” ಎಂದು ಹೇಳಿದ್ದಾರೆ.
ರಾಜ್ಯದ 3.6 ಕೋಟಿ ಪಡಿತರ ಚೀಟಿದಾರರಲ್ಲಿ ಸುಮಾರು 3.19 ಕೋಟಿ ಫಲಾನುಭವಿಗಳು ಹಕ್ಕುಪತ್ರ ಹೊಂದಿದ್ದ ಕುಟುಂಬದ (ಪಿಹೆಚ್‌ಹೆಚ್) ಕೆಟಗರಿಯ ಅಡಿಯಲ್ಲಿ ಬಂದರು, 40 ಲಕ್ಷ ಫಲಾನುಭವಿಗಳು ಅಂತ್ಯೋದಯ ಕೆಟಗರಿಯ ಅಡಿಯಲ್ಲಿ ಬರುತ್ತಾರೆ.
ಅಂತ್ಯೋದಯ ರೇಷನ್ ಕಾರ್ಡ್ಅನ್ನು ಉತ್ತಮ ಆದಾಯ ಹೊಂದಿರದ ವ್ಯಕ್ತಿಗಳಿಗೆ ಅಥವಾ ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳಿಗೆ ನೀಡಲಾಗುತ್ತಿದೆ.
ಪಿಹೆಚ್‌ಹೆಚ್ ರೇಷನ್ ಕಾರ್ಡ್‌ಗಳನ್ನು ವಿಶೇಷವಾಗಿ ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ನೀಡಲಾಗಿದೆ. ರಾಜ್ಯ ಸರ್ಕಾರ ನಿಗದಿಪಡಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸಿರುವ ಗ್ರಾಮೀಣ ಪ್ರದೇಶದ ಕುಟುಂಬಗಳು ಇದರ ಫಲಾನುಭವಿಗಳಾಗಿವೆ.
ಕೃಪೆ: ದಿ ವೈರ್
ಅನುವಾದ: ಸಂಜಯ್, ಚಿಕ್ಕಬಳ್ಳಾಪುರ
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ; ಬೋಣಿ ಅಂತೂ ಚೆನ್ನಾಗಾಯ್ತು, ಆದರೆ ಮುಂದಿನ ದಾರಿ ದೊಡ್ಡದಿದೆ!


