ಅಸ್ಸಾಂನ ನಲ್ಬಾರಿ ಜಿಲ್ಲೆಯ ಹಳ್ಳಿಯ ಯುವತಿಯೊಬ್ಬರು ವಾಟ್ಸಾಪ್ ಸ್ಟೇಟಸ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಅಪ್ಲೋಡ್ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪೋಸ್ಟ್‌ನಲ್ಲಿ ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಗೋಮಾಂಸವನ್ನು ಉಡುಗೊರೆಯಾಗಿ ನೀಡುವ ಪ್ರಸ್ತಾಪವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ನಿನ್ನೆ ಯುವತಿಯೊಬ್ಬಳು ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ‘ಆಕ್ಷೇಪಾರ್ಹ ಪೋಸ್ಟ್’ ಅನ್ನು ಅಪ್‌ಲೋಡ್ ಮಾಡಿದ್ದಾರೆ. ನಾವು ಈ ಕುರಿತು ಪ್ರಕರಣ ದಾಖಲಿಸಿ ಬಂಧಿಸಿದ್ದೇವೆ. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ” ಎಂದು ಪೊಲೀಸ್ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಸ್ಸಾಂನಲ್ಲಿ ಜಾನುವಾರುಗಳ ಅಕ್ರಮ ಸಾಗಣೆ ಮತ್ತು ಗೋಮಾಂಸ ಮಾರಾಟವನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ವಿಧಾನಸಭೆಯಲ್ಲಿ ಹೊಸ “ಅಸ್ಸಾಂ ಜಾನುವಾರು ಸಂರಕ್ಷಣಾ ಮಸೂದೆ- 2021″ ಮಂಡಿಸಿದ ಬಳಿಕ ಇದು ಮೊದಲ ಪ್ರಕರಣವಾಗಿದೆ.
ಈ ಕಾಯ್ದೆ ಪ್ರಕಾರ, ಹಿಂದೂ, ಜೈನ, ಸಿಖ್ ಮತ್ತು ಇತರ ಗೋಮಾಂಸೇತರ ಸಮುದಾಯಗಳು ಹೆಚ್ಚಾಗಿ ವಾಸಿಸುವ ಸ್ಥಳಗಳಲ್ಲಿ ಮತ್ತು ಹಿಂದೂ ದೇವಾಲಯಗಳು, ಧಾರ್ಮಿಕ ಸಂಸ್ಥೆಗಳು ಇರುವ ಪ್ರದೇಶದಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟ, ಸಾಗಣೆ ಮಾಡುವಂತಿಲ್ಲ.
ಇದನ್ನೂ ಓದಿ: ಕೊರೊನಾ ಸಮಯದಲ್ಲಿ ಮಹಿಳೆಯರ ಸ್ಥಿತಿ; ಬಾಣಲೆಯಿಂದ ಬೆಂಕಿಗೆ…
ಯುವತಿ ಬುಧವಾರ ತನ್ನ ಹಸುವಿನ ಫೋಟೋವನ್ನು ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಸತ್ತ ಹಸುವಿನ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಬಳಿಕ, ಎರಡನೇ ಪೋಸ್ಟ್‌ನಲ್ಲಿ ಗೋಮಂಸವನ್ನು ಮುಖ್ಯಮಂತ್ರಿಗೆ ನೀಡುವ ಮಾತನಾಡಿದ್ದರು ಎನ್ನಲಾಗಿದೆ.
“ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಗೋಮಾಂಸದ ತುಂಡನ್ನು ಉಡುಗೊರೆಯಾಗಿ ನೀಡುವಂತ ಪೋಸ್ಟ್‌ವೊಂದನ್ನು ಯುವತಿ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಉಲ್ಲೇಖಿಸಿದ್ದಾರೆ. ಬುಧವಾರ, ಮುಸ್ಲಿಂ ಸಮುದಾಯವು ಪ್ರಪಂಚದಾದ್ಯಂತ ಬಕ್ರೀದ್ ಹಬ್ಬವನ್ನು ಆಚರಿಸಿದೆ. ಇಂತಹ ಸಮಯದಲ್ಲಿ ಈ ರೀತಿಯ ‘ಆಕ್ಷೇಪಾರ್ಹ ಪೋಸ್ಟ್’ ಎರಡು ಸಮುದಾಯಗಳಲ್ಲಿ ಗಲಭೆ ಸೃಷ್ಟಿಸಬಹುದು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ಯುವತಿಯು ಮಾಜಿ ಸ್ಥಳೀಯ ಬಿಜೆಪಿ ಮುಖಂಡರ ಮಗಳಾಗಿದ್ದು, ಸದ್ಯ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ನಲ್ಬಾರಿ ಘಟಕವು ಯುವತಿ ವಿರುದ್ಧ ಎರಡು ಸಮುದಾಯಗಳ ನಡುವೆ ಕೋಮು ಗಲಭೆ ಉಂಟುಮಾಡಿದ ಪ್ರಕರಣ ದಾಖಲಿಸಿತ್ತು.
“ಇಂತಹ ವಿವಾದಾತ್ಮಕ ಪೋಸ್ಟ್ ಹಿಂದೂ ಸಂಸ್ಕೃತಿಗೆ ಮಾಡಿದ ಅವಮಾನ. ನಮ್ಮ ಸಂಸ್ಕೃತಿಯನ್ನು ಅವಮಾನಿಸುವ ಇಂತಹ ಪ್ರಯತ್ನಗಳನ್ನು ನಾವು ಸಹಿಸಲಾರೆವು. ಹಿಂದೂಗಳು ಹಸುವನ್ನು ಪವಿತ್ರವೆಂದು ಪರಿಗಣಿಸುತ್ತಾರೆ. ಇಂತಹ ವಿಷಯದ ಬಗ್ಗೆ ಆಕೆ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹೇಗೆ ಅಂತಹ ‘ಆಕ್ಷೇಪಾರ್ಹ ಪೋಸ್ಟ್’ ಅನ್ನು ಹಾಕಬಹುದು” ಎಂದು ವಿಶ್ವ ಹಿಂದೂ ಪರಿಷತ್ ಸದಸ್ಯರೊಬ್ಬರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಗುಜರಾತ್: ಬುಡಕಟ್ಟು ಮಹಿಳೆಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಪತಿ ಮತ್ತು ಗ್ರಾಮಸ್ಥರು


