ಬಿಹಾರದ ಸಮಸ್ತಿಪುರದ ಮಹಿಳೆಯೊಬ್ಬರು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಹಾಯದಿಂದ ದೆಹಲಿಯ ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ರೈಲು ಬೋಗಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಆ ಸಮಯದಲ್ಲಿ ಗುರುವಾರ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಸಬ್-ಇನ್ಸ್‌ಪೆಕ್ಟರ್ ನವೀನ್ ಕುಮಾರಿ, ಪರಿಸ್ಥಿತಿಗೆ ತ್ವರಿತವಾಗಿ ಪ್ರತಿಕ್ರಿಯಿಸಿದ್ದಾರೆ. ಪೊಲೀಸ್ ಕಾನ್‌ಸ್ಟೆಬಲ್ ಮತ್ತು ಸಹ ಪ್ರಯಾಣಿಕರೊಂದಿಗೆ ಸಮನ್ವಯ ಸಾಧಿಸಿ ತಾಯಿ ಮತ್ತು ಮಗುವನ್ನು ಹೆಚ್ಚಿನ ಆರೈಕೆಗಾಗಿ ಆಸ್ಪತ್ರೆಗೆ ವರ್ಗಾಯಿಸಲು ವ್ಯವಸ್ಥೆ ಮಾಡಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
“ಮಾಹಿತಿ ಸಿಕ್ಕಾಗ ನಾನು ಕರ್ತವ್ಯದಲ್ಲಿದ್ದೆ, ನಾನು ಆಂಬ್ಯುಲೆನ್ಸ್‌ಗೆ ಕರೆ ಮಾಡಿದೆ. ಬಿಹಾರದ ಸಮಸ್ತಿಪುರದ ಮಹಿಳೆಯೊಬ್ಬರು ಹೆರಿಗೆ ನೋವು ಅನುಭವಿಸುತ್ತಿದ್ದರು. ಪೊಲೀಸ್ ಕಾನ್‌ಸ್ಟೆಬಲ್ ಮತ್ತು ಬೋಗಿಯಲ್ಲಿದ್ದ ಇತರ ಮಹಿಳೆಯರ ಸಹಾಯದಿಂದ ನಾವು ಹೆರಿಗೆಗೆ ಸಹಾಯ ಮಾಡಿದೆವು. ನಂತರ, ಅವರನ್ನು ಆಸ್ಪತ್ರೆಗೆ ಕಳುಹಿಸಿದ್ದೇವೆ” ಎಂದು ಕುಮಾರಿ ಮಾಧ್ಯಮಗಳಿಗೆ ತಿಳಿಸಿದರು.
ಆರ್‌ಪಿಎಫ್ ಇನ್ಸ್‌ಪೆಕ್ಟರ್ ಶೈಲೇಂದ್ರ ಕುಮಾರ್ ಅವರು ತಾಯಿ ಮತ್ತು ಮಗು ಇಬ್ಬರೂ ಚೆನ್ನಾಗಿದ್ದಾರೆ ಎಂದು ಹೇಳಿದರು.
“ಆನಂದ್ ವಿಹಾರ್ ನಿಂದ ಸಹರ್ಸಾಗೆ ಹೋಗುವ ರೈಲಿನಿಂದ ಮಹಿಳೆಗೆ ಹೆರಿಗೆ ನೋವಿನ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು. ನಮ್ಮ ಮಹಿಳಾ ಸಬ್-ಇನ್ಸ್‌ಪೆಕ್ಟರ್ ಮತ್ತು ಇತರ ಸಿಬ್ಬಂದಿ ಅಲ್ಲಿಗೆ ಧಾವಿಸಿದರು. ಕೋಚ್‌ನಲ್ಲಿದ್ದ ಇತರ ಮಹಿಳೆಯರ ಸಹಾಯದಿಂದ ಹೆರಿಗೆ ಮಾಡಲಾಯಿತು. ನಂತರ, ಆಂಬ್ಯುಲೆನ್ಸ್ ಬಂದು ಅವರನ್ನು ಆಸ್ಪತ್ರೆಗೆ ಕಳುಹಿಸಿದೆವು. ನವಜಾತ ಶಿಶು ಮತ್ತು ತಾಯಿ ಇಬ್ಬರೂ ಚೆನ್ನಾಗಿದ್ದಾರೆ” ಎಂದು ಅವರು ಹೇಳಿದರು.
ಇದನ್ನೂ ಓದಿ; ಶೀಘ್ರದಲ್ಲೇ ಅಮೆರಿಕದಿಂದ 487 ಅಕ್ರಮ ಭಾರತೀಯ ವಲಸಿಗರ ಗಡೀಪಾರು: ಕೇಂದ್ರ ಸರ್ಕಾರ


