Homeಚಳವಳಿಕೃಷಿ ಕಾಯ್ದೆಗಳ ವಿರುದ್ಧ ಮಹಿಳೆಯರ ಗುಡುಗು: 20 ಹಳ್ಳಿಗಳಲ್ಲಿ ಜಾಗೃತಿ ಜಾಥಾ

ಕೃಷಿ ಕಾಯ್ದೆಗಳ ವಿರುದ್ಧ ಮಹಿಳೆಯರ ಗುಡುಗು: 20 ಹಳ್ಳಿಗಳಲ್ಲಿ ಜಾಗೃತಿ ಜಾಥಾ

ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಹಾಗೂ ರೈತ ಪರವಾದ ಕಾನೂನುಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಆಯಾ ಗ್ರಾಮ ಪಂಚಾಯತ್‌ಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ.

- Advertisement -
- Advertisement -

ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತಂದಿರುವಂತಹ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಗುತ್ತಿಗೆ ಕೃಷಿ ಕಾಯ್ದೆ ಹಾಗೂ ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಚಿಂತಾಮಣಿ ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮಹಿಳೆಯರು ಜಾಗೃತಿ ಜಾಥಾ ನಡೆಸಿದ್ದಾರೆ.

ಮಕ್ಕಾಂ ಕರ್ನಾಟಕ, ನಮ್ಮೂರ ಭೂಮಿ ನಮಗಿರಲಿ, ಐಕ್ಯ ಹೋರಾಟ ಸಮಿತಿಗಳ ವತಿಯಿಂದ ಮಹಿಳಾ ರೈತ ದಿನಾಚರಣೆಯ ಅಂಗವಾಗಿ ದೆಹಲಿ ರೈತ ಹೋರಾಟವನ್ನು ಬೆಂಬಲಿಸಿ ರೈತ ವಿರೋಧಿ ಕಾಯ್ದೆಗಳಿಗೆ ಮಹಿಳಾ ರೈತರು ಪ್ರತಿರೋಧ ವ್ಯಕ್ತಪಡಿಸಿದರು.

ಸಾಮಾಜಿಕ ಕಾರ್ಯಕರ್ತ ಶಶಿರಾಜ್ ಮಾತನಾಡಿ, ಭಾರತದ ಸಂವಿಧಾನವು ಭೂ ಸುಧಾರಣೆಗೆ ಸಾಕಷ್ಟು ಮಹತ್ವ ನೀಡಿದೆ. ಉತ್ಪಾದನಾ ಮೂಲವಾದ ಭೂಮಿಯ ಒಡೆತನ ಸಮಾಜದ ಪ್ರತಿಯೊಬ್ಬರ ಅವಶ್ಯಕತೆಯನ್ನು ಈಡೇರಿಸುವಂತಿರಬೇಕು. ಅದು ಕೆಲವೇ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕೃತವಾಗಬಾರದು ಎಂದು ಸ್ಪಷ್ಟಪಡಿಸಿದೆ ಎಂದರು.

ಈ ಹಿಂದೆ ಕರ್ನಾಟಕದಲ್ಲಿ ಉಳುವವನೇ ಭೂ ಒಡೆಯ ಎಂಬಂತಹ ಕಾನೂನು ತರುವ ಮೂಲಕ ಭೂ ರಹಿತ ದಲಿತ, ಹಿಂದುಳಿದ ವರ್ಗದ ಜನರಿಗೆ ಭೂಮಿಯನ್ನು ನೀಡಲಾಗಿತ್ತು. ಇದೀಗ ಆ ಕಾಯ್ದೆಗೆ ತಿದ್ದುಪಡಿ ತಂದು ಬಡವರ, ದಲಿತರ, ಹಿಂದುಳಿದ ವರ್ಗದ ಜನರ ಬಳಿಯಿರುವ ಭೂಮಿಯನ್ನು ಕಿತ್ತು ಖಾಸಗಿಯವರ ಕೈಗೆ ನೀಡಲು ಸರಕಾರ ಹೊರಟಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಹಿಂದಿನ ಭೂ ಸುಧಾರಣೆ ಕಾಯ್ದೆಯಲ್ಲಿ ಅಧಿಕ ವಾರ್ಷಿಕ ಆದಾಯ ಉಳ್ಳವರು ಭೂಮಿ ಖರೀದಿ ಮಾಡಲು ಅವಕಾಶವಿರಲಿಲ್ಲ. ಅಲ್ಲದೆ, ಕೃಷಿಕರಲ್ಲದವರು ಕೃಷಿ ಭೂಮಿಯನ್ನು ಖರೀದಿ ಮಾಡಲು ಅವಕಾಶವಿರಲಿಲ್ಲ. ಯಾರೇ ಆಗಲಿ ಭೂಮಿ ಖರೀದಿ ಮಾಡಬೇಕು ಎಂದುಕೊಂಡಲ್ಲಿ ಅದನ್ನು ಸರಕಾರಕ್ಕೆ ತಿಳಿಸಬೇಕಿತ್ತು. ಆದರೆ, ಈಗ ತಂದಿರುವ ತಿದ್ದುಪಡಿಯಲ್ಲಿ ಇವೆಲ್ಲವನ್ನೂ ಬದಲಿಸಲಾಗಿದೆ. ಈಗ ಯಾರು ಬೇಕಾದರೂ ಭೂಮಿ ಖರೀದಿ ಮಾಡಬಹುದು ಎಂದು ಹೇಳಲಾಗಿದೆ. ಈ ಮೂಲಕ ಬಡವರು ಭೂಮಿಯನ್ನು ಸ್ವಯಂ ಪ್ರೇರಿತವಾಗಿ ಮಾರಿಕೊಳ್ಳುವಂತೆ ಮಾಡಲಾಗಿದೆ. ಹೀಗಾಗಿ, ಇದು ರೈತ ವಿರೋಧಿ ಕಾಯ್ದೆಯಾಗಿದ್ದು, ಇದನ್ನು ಕೂಡಲೇ ಸರಕಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಸಮಿತಿಯ ಸುಮಾರವರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಸದನದಲ್ಲಿ ಸೂಕ್ತ ಚರ್ಚೆ ನಡೆಸದೆ ಏಕಾಏಕಿ ಕಾಯ್ದೆಗಳಿಗೆ ಅನುಮೋದನೆ ಪಡೆದುಕೊಂಡಿದ್ದಾರೆ. ಅಲ್ಲದೆ, ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಭಾದಿಸುತ್ತಿರುವಂತಹ ಸಂದರ್ಭದಲ್ಲಿಯೇ ಸರಕಾರ ಇದನ್ನು ಚರ್ಚೆಯಿಲ್ಲದೇ ಜಾರಿ ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.

ಈಗಾಗಲೇ ಆರ್ಥಿಕವಾಗಿ, ಸಾಮಾಜಿಕವಾಗಿ ದಿವಾಳಿಯಾಗಿರುವ ಸಣ್ಣ ರೈತರು ಹಣದಾಸೆಗೆ ಅಥವಾ ತಮ್ಮ ಕಷ್ಟಗಳ ನಿವಾರಣೆ ಅನಿವಾರ್ಯತೆಗೆ ತಮ್ಮಲ್ಲಿರುವ ಅಲ್ಪಸ್ವಲ್ಪ ಜಮೀನನ್ನು ಮಾರಿಕೊಳ್ಳುತ್ತಾರೆ. ಈ ರೀತಿ ಭೂಮಿ ಕಳೆದುಕೊಂಡ ಲಕ್ಷಾಂತರ ಜನರಿಗೆ ಯಾವ ಕೆಲಸ ಸಿಗುತ್ತದೆ ಎಂದು ಪ್ರಶ್ನಿಸಿದ ಅವರು, ಈ ಹಿಂದೆ ದೇವನಹಳ್ಳಿ ಬಳಿ ವಿಮಾನ ನಿಲ್ದಾಣ ನಿರ್ಮಿಸಲು ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಯಿತು. ಆ ನಂತರ ಅಲ್ಲಿನ ಕೃಷಿಕರು ಈಗ ದಿವಾಳಿಯಾಗಿದ್ದು, ಕೆಲಸವಿಲ್ಲದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ದೊಡ್ಡ ಬಂಡವಾಳಿಗರು, ಭೂ ಮಾಫಿಯಾಗಳು, ಕಾರ್ಪೋರೇಟ್ ಸಂಸ್ಥೆಗಳು ರೈತರಿಂದ ಖರೀದಿ ಮಾಡಿದ ಭೂಮಿಯನ್ನು ರಿಯಲ್ ಎಸ್ಟೇಟ್, ರೆಸಾರ್ಟ್, ಫಾರ್ಮ್ ಹೌಸ್, ಇತ್ಯಾದಿಗಳಿಗೆ ಬಳಸುತ್ತಾರೆ. ಒಟ್ಟಿನಲ್ಲಿ ರೈತರು ತಮ್ಮ ಭೂಮಿ ಕಳೆದುಕೊಂಡು ತಮ್ಮದೇ ಜಮೀನಿನಲ್ಲಿ ಕೂಲಿ ಮಾಡಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ದೋಮಲಪಲ್ಲಿ, ಬಂಡಕೋಟೆ, ನಾಯನಹಳ್ಳಿ, ಮಹಮದ್‌ಪುರ, ನಾಗಸಂದ್ರಗಡ್ಡೆ, ಧನಮಿಟ್ಟೇನಹಳ್ಳಿ, ದ್ವಾರಪ್ಪಲ್ಲಿ, ಚೌಡದೇನಹಳ್ಳಿ, ಶೆಟ್ಟಿಹಳ್ಳಿ, ಭಕ್ತರಹಳ್ಳಿ, ಮೈಲಾಪುರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮಹಿಳಾ ರೈತರು ಸಭೆ ಸೇರುವ ಮೂಲಕ ಕೇಂದ್ರ ಸರಕಾರದ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಹಾಗೂ ರೈತ ಪರವಾದ ಕಾನೂನುಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಆಯಾ ಗ್ರಾಮ ಪಂಚಾಯತ್‌ಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಪರವಾಗಿ ರೇಣುಕ.ಸಿ, ನಾಗೇಶ್, ಅಂಬರೀಶ್, ಬಾಬುರೆಡ್ಡಿ, ನಾಗರಾಜು, ಚೌಡಪ್ಪ, ಹರೀಶ್, ದೇವಪ್ಪ, ನರಸಿಂಹಮೂರ್ತಿ ಸೇರಿದಂತೆ ಹಲವಾರು ಕಾರ್ಯಕರ್ತರು ಹಳ್ಳಿಗಳಲ್ಲಿ ನಡೆದ ಜಾಗೃತಿ ಸಭೆಗಳಲ್ಲಿ ಮಾತನಾಡಿದರು.


ಇದನ್ನೂ ಓದಿ: ತೀವ್ರಗೊಳ್ಳುತ್ತಿರುವ ರೈತ ಹೋರಾಟ: ಹರಿಯಾಣದ 60 ಗ್ರಾಮಗಳಲ್ಲಿ ಬಿಜೆಪಿಗೆ ಪ್ರವೇಶ ನಿಷೇಧ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿಗೆ ನೊಟೀಸ್‌ ಕಳುಹಿಸುವ ಬದಲು ‘ಜೆ.ಪಿ.ನಡ್ಡಾ’ಗೆ ನೊಟೀಸ್‌ ನೀಡಿದ ಚುನಾವಣಾ ಆಯೋಗ!

0
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದೂರುಗಳ ಆಧಾರದ ಮೇಲೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ನೋಟಿಸ್ ನೀಡಿದೆ. ಆದರೆ, ಈ ನೊಟೀಸ್‌ನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಳುಹಿಸಲಾಗಿದ್ದು,...