ರಾಜಕೀಯ ಸಂಘರ್ಷಗಳು, ಯುದ್ಧ ಮತ್ತು ಇನ್ನಿತರ ಕಾರಣಗಳಿಂದ ಮನೆ ಕಳೆದುಕೊಳ್ಳುವ, ತಮ್ಮ ಹುಟ್ಟಿದ ನೆಲ – ಊರುಗಳನ್ನು ಕಳೆದುಕೊಂಡು ನಿರಾಶ್ರಿತರಾಗುವ, ವಲಸೆ ಹೋಗಬೇಕಾಗಿ ಬರುವ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಅವರ ಬಗ್ಗೆ ಕರುಣೆ ಮತ್ತು ಗೌರವವನ್ನು ಬೆಳೆಸಿಕೊಳ್ಳಲು ತಿಳಿವು ಮೂಡಿಸಿ ಅನುವಾಗಲು ಜೂನ್ 20 ರಂದು ವಿಶ್ವಸಂಸ್ಥೆ ವಿಶ್ವ ನಿರಾಶ್ರಿತರ ದಿನವನ್ನಾಗಿ ಘೋಷಿಸಿದೆ.
ಈ ದಿನದಂದು ಕನ್ನಡದ ಕವಿ ಚಿದಂಬರ ನರೇಂದ್ರ ಅನುವಾದಿಸಿದ ಈ ಎರಡು ಕವಿತೆಗಳು ನಿಮ್ಮ ಓದಿಗೆ. ಈ ಕವನಗಳನ್ನು ಸಂಕಥನ ಪ್ರಕಟಿಸಿರುವ ‘ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.
ರೇಫ್ಯೂಜಿ ಕ್ಯಾಂಪಿನ ನಾಲ್ಕು ಕವಿತೆಗಳು
—————————-
1
ಅವಳ ಹೆಸರು ಯಾರಿಗೂ ಗೊತ್ತಿಲ್ಲ,
ಮರದ ದಿಣ್ಣೆಯ ಮೇಲೆ ಕುಳಿತಿರುವ
ಆ ಹೆಂಗಸನ್ನು ಯಾರೂ
ಅವಳ ಹೆಸರಿನಿಂದ ಕೂಗುವುದೇ ಇಲ್ಲ .
ಗರಗಸದಿಂದ ಕತ್ತರಿಸಲ್ಪಟ್ಟ
ಮಗುವಿನ ತಾಯಿ ಎಂದೇ
ಗುರುತಿಸುತ್ತಾರೆ ಅವಳನ್ನು ಇಲ್ಲಿ ಎಲ್ಲ
ಈ ರೆಫ್ಯೂಜಿ ಕ್ಯಾಂಪ್ ನಲ್ಲಿ.
2
ಅವರು, ತಮ್ಮ ಹಳ್ಳಿ, ಮನೆ, ಒಲೆ,
ಒಲೆ ಮೇಲಿನ ರೊಟ್ಟಿ ಎಲ್ಲವನ್ನೂ
ಇದ್ದಕ್ಕಿದ್ದ ಹಾಗೆಯೇ ಬಿಟ್ಟು
ಓಡಿ ಬಂದ ರಾತ್ರಿಯ
ಹಿಂದಿನ ರಾತ್ರಿ
ಯಾರು ತಟ್ಟಿದ್ದರು ಅವರ ಮನೆಯ ಬಾಗಿಲನ್ನ?
ಯಾಕೆ ಅವರು ತಮ್ಮ ಮನೆಯ
ಬಾಗಿಲು, ಕಿಟಕಿಗಳನ್ನ
ಆಮೇಲೆ ಯಾರಿಗೂ ತೆರೆಯಲೇ ಇಲ್ಲ?
ಯಾಕೆ ಅವರು ಆಮೇಲೆ
ತಮ್ಮ ಮನೆಯ ಹೆಣ್ಣು ಮಕ್ಕಳ ಕಣ್ಣಲ್ಲಿ
ಕಣ್ಣಿಟ್ಟು ನೋಡಲೇ ಇಲ್ಲ
ಎನ್ನುವುದನ್ನ ಹೇಳುವುದಕ್ಕಿಂತ ಮೊದಲೇ….
ಭಾರಿ ಚಿನಾರ್ ಮರ
ಕರ್ಕಶವಾಗಿ ಸದ್ದು ಮಾಡುತ್ತಾ
ನೆಲಕ್ಕುರುಳಿತು.
ಅವರಿಗೆ ಹೇಳಬೇಕಾದ್ದನ್ನು ಹೇಳಲಿಕ್ಕಾಗಲೇ ಇಲ್ಲ.
3
ತನ್ನ ಟೆಂಟ್ ಹೊರಗೆ
ಆಟ ಆಡುತ್ತಿದ್ದ
ಆ ಪುಟ್ಟ ಹುಡುಗಿ
ಹತ್ತಾರು ಬಾರಿ ಕರೆದರೂ
ನಮ್ಮತ್ತ ಕಣ್ಣೆತ್ತಿ ನೋಡಲಿಲ್ಲ.
ಆಕೆ ಓಡಿ ಹೋಗಿ
ತನ್ನ ಟೆಂಟ್ ನ ಬಾಗಿಲಲ್ಲಿ
ಎರಡೂ ಬದಿಯ ಹಗ್ಗ ಜಗ್ಗಿ ಹಿಡಿದು
ಅಡ್ಡ ನಿಂತುಕೊಂಡಳು,
ಇನ್ನು ಮುಂದೆ
ಯಾರನ್ನೂ ಒಳಗೆ ಬಿಡಲಾರೆ ಎಂಬಂತೆ.
ಅವಳು ಗುರುತಿಸದ
ಯಾವ ಮುಖಕ್ಕೂ
ಇನ್ನು ಅವಳ ಹೊಸಮನೆಯಲ್ಲಿ
ಜಾಗವಿಲ್ಲ .
4
ಒಂದು ಟೆಂಟ್ ನಿಂದ
ಇನ್ನೊಂದು ಟೆಂಟ್ ಗೆ ,
ಎರಡೇ ಎರಡು ಹೆಜ್ಜೆ ದಾಟಿ
ನವ ವಧು
ಗಂಡನ ಮನೆಗೆ ಬಂದಿದ್ದಾಳೆ.
ನಿನ್ನೆಯ ತನಕ
ಗುರುತು ಪರಿಚಯವೇ ಇಲ್ಲದ
ಎರಡು ಪರಿವಾರಗಳು
ಇಂದು
ಮದುವೆಯ ಹಾಡು ಹಾಡುತ್ತಾ
ಜೋರಾಗಿ ಗದ್ದಲ ಹಾಕುತ್ತಿವೆ,
ಗುಂಡಿನ ಸದ್ದಿನ ಸುದ್ದಿ
ಒಂದಿಷ್ಟು ಹೊತ್ತಾದರೂ
ಕಿವಿ ಮೇಲೆ ಬೀಳದಂತೆ.
ಚಹಾದ ಪಾತ್ರೆಯಲ್ಲಿ
ವಿಧಿಯಿಲ್ಲದೇ
ಕುದಿಯುತ್ತಿರುವ ಕೇಸರಿ
ವಧುವಿನ ಮೊದಲರಾತ್ರಿ.
ಮೂಲ: ಕಲ್ಪನಾ ಸಿಂಗ್
_______________________________________________
ನನ್ನ ಮಗಳು,
ಅವಳ ಸೈಕಲ್ ನ ಹ್ಯಾಂಡಲ್ ನಡುವೆ ಕಟ್ಟಿದ್ದ
ಜೇಡರ ಬಲೆಯನ್ನು ಕತ್ತರಿಸಿ
ಆ ಜೇಡರ ಹುಳುವನ್ನು ಘಾಸಿ ಮಾಡಲು
ಸುತರಾಂ ಸಿದ್ಧಳಾಗಲಿಲ್ಲ.
ಎರಡು ವಾರ ಕಾಯ್ದಳು
ಜೇಡ ತಾನೇ ತಾನಾಗಿ
ಆ ಜಾಗ ಖಾಲೀ ಮಾಡುವ ತನಕ.
ನಾನು ಅವಳಿಗೆ ಬುದ್ಧಿ ಹೇಳಿದೆ.
ಅಲ್ಲ ಮಗಳೇ,
ನೀನು ಆ ಬಲೆಯನ್ನು ಕತ್ತರಿಸಿಬಿಟ್ಟಿದ್ದರೆ
ಜೇಡಕ್ಕೆ ಗೊತ್ತಾಗುತ್ತಿತ್ತು
ಆ ಜಾಗ ಅದರ ಮನೆಯಲ್ಲವೆಂದು,
ಮತ್ತು ನೀನು ಸೈಕಲ್ ಕೂಡ ಓಡಾಡಿಸಬಹುದಿತ್ತು.
ಮಗಳು ಕಣ್ಣು ಪಿಳುಕಿಸುತ್ತ….
ಅಪ್ಪಾ
ಹೀಗೆ ಮಾಡುವುದರಿಂದಲೇ ಅಲ್ವಾ
ಜನ, ರೆಫ್ಯೂಜಿಗಳಾಗೋದು?
ಮೂಲ: ಫಾದಿ ಜುಡಾ


