1936 ರ ಸಮಯ. ಈಗಿನ ಹರಿಯಾಣಾದ ಹಿಸಾರ್ ಎನ್ನುವ ಪಟ್ಟಣದಲ್ಲಿ ರಾಮ್ ಸಿಂಗ್ ಒಂದು ಶಾಲೆಯ ಶಿಕ್ಷಕರಾಗಿದ್ದರು. ಸ್ವಾತಂತ್ರಪೂರ್ವದ ಸಮಯ. ಅಲ್ಲಲ್ಲಿ ಕೋಮು ದಳ್ಳುರಿಗಳು ನಡೆಯುತ್ತಿದ್ದವು. ರಾಮ್‍ಸಿಂಗ್ ಅವರು ಶಿಕ್ಷಕರಾಗಿದ್ದ ಶಾಲೆಗೆ ಕೋಮು ಗಲಭೆಯನ್ನೆಬ್ಬಿಸುತ್ತ ಮುಸಲ್ಮಾನರ ಗುಂಪೊಂದು ಬಂದು ಅಲ್ಲಿದ್ದ ಮಕ್ಕಳನ್ನು ತಮ್ಮ ವಶಕ್ಕೆ ನೀಡಬೇಕೆಂದು ಆದೇಶಿಸಿದರು. ಮಕ್ಕಳನ್ನು ಮುಟ್ಟೂಕಿಂತ ಮುಂಚೆ ಮೊದಲು ನನ್ನನ್ನು ನೋಡಿಕೊಳ್ಳಿ ಎಂದು ತಮ್ಮ ಕರ್ತವ್ಯ ಪಾಲಿಸಿದರು ರಾಮ್‍ಸಿಂಗ್. ಆಗ ಅವರ ಕುತ್ತಿಗೆಯನ್ನು ಕುಡಗೋಲಿನಿಂದ ಸೀಳಿದರು ಆ ಗಲಭೆಕೋರರು. ಈ ಘಟನೆಯನ್ನು ನೋಡುತ್ತ ನಿಂತವರಲ್ಲಿ ಏಳು ವರ್ಷದ ಒಬ್ಬ ಬಾಲಕ ದೇವೇಂದ್ರ ಸಿಂಗ್, ಕೊಲೆಗೀಡಾದ ಶಿಕ್ಷಕ ರಾಮ್‍ಸಿಂಗ್ ಅವರ ಪುತ್ರ.
ತನ್ನ ಕಣ್ಣೆದುರಿಗೆ ಆದ ತನ್ನ ತಂದೆಯ ಕೊಲೆಯಿಂದ ಆ ಬಾಲಕನ ಮೇಲೆ ಏನೆಲ್ಲ ಪರಿಣಾಮ ಬೀರಿತೋ ಏನೋ. ತನ್ನ ತಂದೆಯನ್ನು ತನ್ನ ಕಣ್ಣೆದುರಿಗೇ ಕೊಂದ ಮುಸಲ್ಮಾನರನ್ನು ದ್ವೇಷಿಸಲು ಅವರಿಗೆ ಸಾಕಷ್ಟು ಕಾರಣಗಳಿದ್ದವು. ಆದರೆ ಆ ಬಾಲಕ ಬೆಳೆಯುತ್ತಿರುವ ಸಮಯ ಸ್ವಾತಂತ್ರ ಸಂಗ್ರಾಮದ ಸಮಯ. ಗಾಂಧೀಜಿಯವರ ಸತ್ಯಾಗ್ರಹಗಳ, ಹಿಂದು ಮುಸ್ಲಿಂ ಏಕತೆಗಾಗಿ ಜೀವ ತೇಯುತ್ತಿದ್ದ ಸಮಯ. ‘ನಾನೊಬ್ಬ ಹಿಂದು ಆಗಲಿ, ಮುಸಲ್ಮಾನನಾಗಲಿ ಆಗುವುದಿಲ್ಲ, ನಾನು ಆಗುವುದು ಒಬ್ಬ ಮನುಷ್ಯ’ ಎನ್ನುವ ಮಾತುಗಳನ್ನು ಕೇಳಿದ ದೇವೇಂದ್ರ ಸಿಂಗ್, ತಮ್ಮ ಜೀವನದಲ್ಲಿ ದ್ವೇಷವು ಪರಿಣಾಮ ಬೀರಲು ಅವಕಾಶ ನೀಡಲಿಲ್ಲ.
ಮುಂದೆ ಬೆಳೆದು ಅರ್ಥಶಾಸ್ತ್ರದ ಪ್ರಾಧ್ಯಾಪಕರಾದ ದೇವೇಂದ್ರ ಸಿಂಗ್, ತಮ್ಮ ಮಕ್ಕಳಿಗೆ ಮುಸ್ಲಿಂ ಹೆಸರುಗಳನ್ನು ನೀಡಲು ನಿರ್ಧರಿಸಿದರು. ತನ್ನ ತಂದೆಯನ್ನು ತನ್ನೆದುರಿಗೆ ಕೊಂದ ಸಮುದಾಯದವರ ಹೆಸರನ್ನು ನೀಡಲು ನಿರ್ಧರಿಸಿದರು. ಮೊದಲ ಮಗುವಿಗೆ ನಜ್ಮಾ ಎಂದು ಹೆಸರಿಡುವಾಗ ಅವರ ಹೆಂಡತಿ, ‘ಮಗಳಿಗೆ ಬೇಡ, ಮುಂದೆ ಗಂಡು ಮಗುವಾದಾಗ ಈ ಪ್ರಯೋಗವನ್ನು ಮಾಡುವ, ಹೆಣ್ಣು ಮಗಳ ಮೇಲೆ ಬೇಡ, ಮುಂದೆ ಮದುವೆಗೆ ಸಮಸ್ಯೆಯಾಗುತ್ತೆ’ ಎಂದರು. ಹಾಗಾಗಿ ಆ ಹೆಣ್ಣು ಮಗುವಿಗೆ ನೀಲಂ ಎಂದು ನಾಮಕರಣ ಮಾಡಲಾಯಿತು. ನಂತರ ಗಂಡು ಮಗುವಾದಾಗ ಸಲೀಂ ಎನ್ನುವ ಹೆಸರನ್ನಿಟ್ಟರು.
ರಾಜಸ್ಥಾನದ ಒಂದು ಹಳ್ಳಿಯಲ್ಲಿ ಶಾಲೆಗೆ ಹೋಗುತ್ತಿದ್ದ ಆ ಬಾಲಕನ ಶಾಲೆಯಲ್ಲಿ ಯಾವ ಮುಸಲ್ಮಾನ ಮಕ್ಕಳೂ ಇರಲಿಲ್ಲ. ಹಾಗಾಗಿ ಎಲ್ಲ ಮಕ್ಕಳಿಗೂ ಇವನ ಬಗ್ಗೆ ಕುತೂಹಲ. ‘ನೀನ್ಯಾರು, ನಿನ್ನನ್ನು ದತ್ತು ತೆಗೆದುಕೊಂಡಿದ್ದಾರಾ? ಮುಸಲ್ಮಾನರು ಹೇಗಿರುತ್ತಾರೆ?’ ಎಂದೆಲ್ಲಾ ಪೀಡಿಸಲಾರಂಭಿಸಿದರು. ತಂದೆ ದೇವೇಂದ್ರ ಜಾತ್ಯತೀತತೆಯ ಬಗ್ಗೆ ಆ ಪುಟ್ಟ ಮಗು ಸಲೀಂನಿಗೆ ಏನೆಲ್ಲಾ ಹೇಳಿದರೂ ಅವನಿಗೆ ತಲೆಬುಡ ಅರ್ಥವಾಗಲಿಲ್ಲ. ಒಂದು ದಿನ ಮನೆಗೆ ಬಂದು, ‘ಇಲ್ಲ ನನ್ನ ಹೆಸರನ್ನು ಬದಲಾಯಿಸಿ, ಇಲ್ಲವಾದರೆ ಇನ್ನು ಮುಂದೆ ನಾನು ಶಾಲೆಗೆ ಹೋಗೂದಿಲ್ಲ’ ಎಂದು ಘೋಷಿಸಿದರು. ಆಗ ಸಲೀಂ ಅಂತ ಇದ್ದ ಹೆಸರು ಯೋಗೇಂದ್ರ ಯಾದವ್ ಎಂದಾಯಿತು.
ಈ ಘಟನೆಯ ಬಗ್ಗೆ ಯಾಕೆ ಹೇಳಬೇಕಾಯಿತು?
2014 ರಲ್ಲಿ ಯೋಗೇಂದ್ರ ಯಾದವ ಅವರು, ಹರಿಯಾಣದ ಗುರುಗ್ರಾಮದಲ್ಲಿ ಚುನಾವಣೆಗೆ ನಿಂತಾಗ ಬಿಜೆಪಿಯವರು ಒಂದು ಪತ್ರಿಕಾಗೋಷ್ಠಿ ನಡೆಸಿದರು. ಅಲ್ಲಿ ಯೋಗೇಂದ್ರ ಯಾದವ ಅವರು ತಮ್ಮ ನಿಜವಾದ ಹೆಸರು ಸಲೀಂ ಎಂದು ಹೇಳಿಕೊಂಡು, ಅದರ ಆಧಾರದ ಮೇಲೆ ಮತಯಾಚಿಸುತ್ತಿದ್ದಾರೆ ಎಂದು ಆರೋಪಿಸಿದರು. ಆಗ ಯೋಗೇಂದ್ರ ಯಾದವ ಅವರು, ತಾವು ಹಾಗೆ ಮಾಡಿದ ಒಂದೇ ಒಂದು ಸಾಕ್ಷ್ಯವನ್ನು ಒದಗಿಸಿ ತಾನು ರಾಜಕೀಯದಿಂದ ನಿವೃತ್ತನಾಗುವೆ ಎಂದು ಘೋಷಿಸಿದರು ಮತ್ತು ಆ ಮಾತನ್ನು ಪುನರುಚ್ಛಿಸುತ್ತಲೇ ಇದ್ದಾರೆ. ಮೊನ್ನೆ ಇಂಡಿಯಾ ಟುಡೇಯ ಸಂವಾದವೊಂದರಲ್ಲಿ ಜಾತ್ಯತೀತತೆಯ ಬಗ್ಗೆ ಮಾತನಾಡಿದಾಗ ಬಿಜೆಪಿಯ ಅಮಿತ್ ಮಾಳವಿಯ ಅವರು ಯೋಗೇಂದ್ರ ಯಾದವ ಅವರಿಗೆ ಇದರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ, ಚುನಾವಣೆಯ ಸಮಯದಲ್ಲಿ ತಮ್ಮ ಮುಸ್ಲಿಂ ಹೆಸರಿನ ಆಧಾರದ ಮೇಲೆ ರಾಜಕೀಯ ಮಾಡಿದ್ದಾರೆ ಎಂದು ಹೇಳಿದಾಗ, ಯೋಗೇಂದ್ರ ಯಾದವ ಅವರಿಗೆ ಈ ಎಲ್ಲ ಕಥೆಯನ್ನು ಮತ್ತೊಮ್ಮೆ ಹೇಳಬೇಕಾಯಿತು.
ಅಮಿತ್ ಮಾಳವೀಯ ನಂತಹ ವ್ಯಕ್ತಿಗೆ ಇಂತಹ ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳುವ ಸಾಮಥ್ರ್ಯ ಇಲ್ಲ ಎಂದು ಹೇಳಿ, ತಾವು ತಮ್ಮ ಮುಸ್ಲಿಂ ಹೆಸರಲ್ಲಿ ಮತಯಾಚನೆ ಮಾಡಿದ ಆರೋಪ ನಿಜವಾಗಿದ್ದಲ್ಲಿ, ಸಾಕ್ಷ್ಯ ಒದಗಿಸಿ ಇಲ್ಲವಾದರೆ ಸುಮ್ಮನಿರಿ (‘ಶಟ್ ಅಪ್’) ಎಂದು ಗುಡುಗಿದರು. ಬಿಜೆಪಿಯವರು ಸಾಕ್ಷ್ಯವನ್ನು ಒದಗಿಸುವ ಯಾವುದೇ ಪ್ರಯತ್ನ ಮಾಡಿಲ್ಲ. ಇನ್ನು ಮುಂದೆಯೂ ಇಂತಹ ಆರೋಪವನ್ನು ಮಾಡುವದಿಲ್ಲ ಎಂದು ಹೇಳಲಾಗುವುದಿಲ್ಲ. ಆದರೆ ಅವರು ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಅವರ ಮತ್ತು ತಂದೆಯ ಮೇಲೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ನೀವೂ ಆ ವಿಡಿಯೋ ನೋಡಿ
.@_YogendraYadav shares the tragic story of his grandfather's murder, challenges @amitmalviya to produce any proof that shows him playing caste politics
Watch #NewsToday with @sardesairajdeep: https://t.co/DpV7oVVA9F pic.twitter.com/I7IIItYzxp— India Today (@IndiaToday) April 18, 2019


