ಸಂವಿಧಾನವನ್ನು ರೂಪಿಸುವಲ್ಲಿ ದಲಿತರ ಪಾತ್ರವನ್ನು ಶ್ಲಾಘಿಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂವಿಧಾನ ದಲಿತರ ಸಿದ್ಧಾಂತವನ್ನು ಪ್ರತಿಬಿಂಬಿಸುತ್ತದೆಯಾದರೂ, ದಲಿತರು ವ್ಯವಸ್ಥಿತ ದಬ್ಬಾಳಿಕೆಯನ್ನು ಎದುರಿಸುತ್ತಿದ್ದಾರೆ ಹೇಳಿದ್ದಾರೆ.
ಉತ್ತರ ಪ್ರದೇಶದ ರಾಯ್ ಬರೇಲಿಯ ಬರ್ಗಡ್ ಚೌರಾಹಾ ಬಳಿಯ ‘ಮೂಲ್ ಭಾರತಿ’ ಹಾಸ್ಟೆಲ್‌ನಲ್ಲಿ ಅಮೇಥಿಯ ಕಾಂಗ್ರೆಸ್ ಸಂಸದ ಕಿಶೋರಿ ಲಾಲ್ ಶರ್ಮಾ ಮತ್ತು ಪಕ್ಷದ ಇತರ ಹಿರಿಯ ಜೊತೆ ದಲಿತ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಗುರುವಾರ (ಫೆ.20) ಸಂವಾದ ನಡೆಸಿದ್ದಾರೆ.
‘ಬಿಗ್ 500’ನ ಕೆಲವು ಉನ್ನತ ಖಾಸಗಿ ಕಂಪನಿಗಳ ಹೆಸರುಗಳನ್ನು ಹೇಳಿದ ರಾಹುಲ್ ಗಾಂಧಿ, “ಇವುಗಳಲ್ಲಿ ಎಷ್ಟು ಕಂಪನಿಗಳ ನೇತೃತ್ವವನ್ನು ದಲಿತ ಯುವಕರು ವಹಿಸಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.
ಒಬ್ಬ ಯುವಕ “ಯಾರೂ ಇಲ್ಲ” ಎಂದು ಉತ್ತರಿಸಿದಾಗ, ರಾಹುಲ್ ಗಾಂಧಿ “ಯಾಕೆ ಇಲ್ಲ?” ಎಂದು ಮರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಮತ್ತೊಬ್ಬ ಯುವಕ “ನಮ್ಮಲ್ಲಿ ಸಾಕಷ್ಟು ಸೌಲಭ್ಯಗಳಿಲ್ಲದ ಕಾರಣ” ಎಂದಿದ್ದಾರೆ.
ಯುವಕನ ಉತ್ತರಕ್ಕೆ ಅಸಮ್ಮತಿ ವ್ಯಕ್ತಪಡಿಸಿದ ರಾಹುಲ್ ಗಾಂಧಿ, “ಡಾ.ಬಿಆರ್ ಅಂಬೇಡ್ಕರ್ ಅವರು ಯಾವುದೇ ಸೌಲಭ್ಯ ಇಲ್ಲದಿದ್ದರೂ, ತನ್ನ ಪ್ರಯತ್ನದಿಂದ ಒಬ್ಬಂಟಿಯಾಗಿ ದೇಶದ ರಾಜಕೀಯವನ್ನು ಅಲುಗಾಡಿಸಿದರು” ಎಂದಿದ್ದಾರೆ.
“ನಿಮಗೆ ವಿರುದ್ಧವಾಗಿರುವ ಮತ್ತು ನೀವು ಪ್ರಗತಿ ಹೊಂದುವುದನ್ನು ಬಯಸದ ಒಂದು ಇಡೀ ವ್ಯವಸ್ಥೆಯೇ ಇದೆ. ಈ ವ್ಯವಸ್ಥೆಯು ಪ್ರತಿದಿನ ನಿಮ್ಮ ಮೇಲೆ ದಾಳಿ ಮಾಡುತ್ತದೆ. ಅದು ನಿಮ್ಮ ಮೇಲೆ ಹೇಗೆ ದಾಳಿ ಮಾಡುತ್ತದೆ ಎಂದು ನಿಮಗೆ ತಿಳಿದಿರುವುದಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮುಂದುವರಿದು, “ಸಂವಿಧಾನದ ಸಿದ್ಧಾಂತವೇ ನಿಮ್ಮ ಸಿದ್ಧಾಂತ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಈ ದೇಶದಲ್ಲಿ ದಲಿತರು ಇಲ್ಲದಿದ್ದರೆ, ದೇಶಕ್ಕೆ ತನ್ನದೇ ಆದ ಸಂವಿಧಾನ ಸಿಗುತ್ತಿರಲಿಲ್ಲ ಎಂದು ನಾನು ನಿಮಗೆ ಖಚಿತವಾಗಿ ಹೇಳಬಲ್ಲೆ. ಸಂವಿಧಾನವೇ ನಿಮ್ಮ ಸಿದ್ಧಾಂತ. ಆದರೂ, ನೀವು ಈಗ ಎಲ್ಲಿಗೆ ಹೋದರೂ, ವ್ಯವಸ್ಥೆಯಿಂದ ನಲುಗಿ ಹೋಗುತ್ತೀರಿ” ಎಂದಿದ್ದಾರೆ.
ರಾಹುಲ್ ಗಾಂಧಿ ಗುರುವಾರ (ಫೆ.20) ತಮ್ಮ ಸಂಸದೀಯ ಕ್ಷೇತ್ರದಲ್ಲಿ ಎರಡು ದಿನಗಳ ಪ್ರವಾಸವನ್ನು ಪ್ರಾರಂಭಿಸಿದ್ದಾರೆ. ಈ ವೇಳೆ ಅವರು ರಾಯ್ ಬರೇಲಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಮತ್ತು ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ. ಕಾರ್ಮಿಕರೊಂದಿಗೂ ಅವರು ಸಂವಾದ ನಡೆಸಲಿದ್ದಾರೆ. ಮಹಿಳಾ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ರಣಬೇನಿ ಮಾಧವ್ ಸಿಂಗ್ ಸ್ಮಾರಕ ಇಂಟರ್ ಕಾಲೇಜಿನಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ ಮತ್ತು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಉಂಚಹಾರ್ ಮತ್ತು ಸದರ್ ಕ್ಷೇತ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಲಿದ್ದಾರೆ. ನಂತರ ಪಕ್ಷದ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರ ಬಂಡವಾಳಶಾಹಿಗಳನ್ನು ಉತ್ತೇಜಿಸುತ್ತಿದೆ – ರಾಹುಲ್ ಗಾಂಧಿ


