Homeಅಂಕಣಗಳುನಿಮಗೆ ಭೀಮ್ ಆರ್ಮಿ ಗೊತ್ತಿರಬಹುದು; ಭೀಮ್ ಪಾಠಶಾಲಾ?

ನಿಮಗೆ ಭೀಮ್ ಆರ್ಮಿ ಗೊತ್ತಿರಬಹುದು; ಭೀಮ್ ಪಾಠಶಾಲಾ?

- Advertisement -
- Advertisement -

ಚಂದ್ರಶೇಖರ್ ಆಜಾದ್ ‘ರಾವಣ್’, ಯಾವುದೇ ಬಾಲಿವುಡ್ ಹೀರೋಗೂ ಕಡಿಮೆಯಿಲ್ಲದಂತೆ ಸಂಚಲನ ಮೂಡಿಸಿರುವ ಹೆಸರುಗಳಲ್ಲೊಂದು. ಈವರೆಗೆ ರಾಮಾಯಣದ ರಾವಣನ ಪೌರಾಣಿಕ ಪಾತ್ರವನ್ನು ಬಿಟ್ಟು ಆ ಹೆಸರಿನ ಇನ್ಯಾವ ವ್ಯಕ್ತಿಯ ಬಗ್ಗೆಯೂ ಗೊತ್ತಿಲ್ಲದವರೂ ಕೂಡಾ, ಕಳೆದ ಕೆಲವು ದಿನಗಳಲ್ಲಿ ಮಾಧ್ಯಮಗಳು ಪದೇ ಪದೇ ಪ್ರಸ್ತಾಪಿಸಿದ ಈ ಹೆಸರಿನ ವ್ಯಕ್ತಿಯ ಬಗ್ಗೆ ಕುತೂಹಲದಿಂದ ಪರಿಶೀಲಿಸುವಂತಾಯಿತು. ವಿವರಗಳನ್ನು ಕೆದಕಿದವರಿಗೆ ಕಂಡಿದ್ದು ಚಂದ್ರಶೇಖರ್ ಅಥವಾ ರಾವಣ್ ಎಂಬ ಪಶ್ಚಿಮ ಉತ್ತರ ಪ್ರದೇಶದ ದಲಿತ ಯುವ ವಕೀಲನೊಬ್ಬನು ಹೊಸ ತಲೆಮಾರನ್ನು ಪ್ರಭಾವಿಸಿದ ರೀತಿ; ವಿಶೇಷವಾಗಿ ಈತ, ವಿನಯ್ ರತನ್‍ಸಿಂಗ್ ಎಂಬ ಮತ್ತೊಬ್ಬ ದಲಿತ ಯುವ ವಕೀಲನೊಂದಿಗೆ ಸೇರಿ ಕಟ್ಟಿದ ‘ಭೀಮ್ ಆರ್ಮಿ’ ತಂಡವು ದಲಿತ ಯುವಕರಲ್ಲಿ ಮಿಲಿಟೆನ್ಸಿಯನ್ನು ಹುಟ್ಟುಹಾಕಿ ಯಾರಿಗೂ ತಲೆಬಾಗಿ ಬದುಕಬೇಡಿ ಎಂಬ ಸಂದೇಶ; ನಂತರ ಆಜಾದ್ ಮೇಲೆ ಸುಳ್ಳು ಕೇಸುಗಳನ್ನು ಜಡಿದು ಜೈಲುಪಾಲು ಮಾಡಿ ಇವೆಲ್ಲವನ್ನೂ ಹತ್ತಿಕ್ಕಲು ಉತ್ತರ ಪ್ರದೇಶದ ಸರ್ಕಾರ ನಡೆಸಿದ ವಿಫಲ ಯತ್ನ ಮತ್ತು ನಂತರ ಅನಿವಾರ್ಯವಾಗಿ ಈ ಸೆಪ್ಟೆಂಬರ್ 13ರ ಮಧ್ಯರಾತ್ರಿ ಚಂದ್ರಶೇಖರ್ ಆಜಾದ್ ರ  ಬಿಡುಗಡೆ!

ಇವೆಲ್ಲವೂ ಕೇವಲ 30ರ ಆಸುಪಾಸಿನಲ್ಲಿರುವ, ದಲಿತರ ಪರವಾದ ಖಚಿತವಾದ ರಾಜಕೀಯ ನಿಲುವುಗಳನ್ನುಳ್ಳ, ಪ್ರಖರ ವಾಗ್ಮಿಯೂ ಹೋರಾಟಗಾರನೂ ಆದ ಈ ಯುವಕನನ್ನು ಭಾರತದ ಬಹುಪಾಲು ದಲಿತ ಮತ್ತು ಚಿಂತನಶೀಲ ಯುವಕರ ಕಣ್ಮಣಿಯಾಗಿಸಿದೆ. ತಮ್ಮ ಸಮುದಾಯವನ್ನು ಸುದೀರ್ಘ ಕಾಲದಿಂದ ಕಾಡುತ್ತಾ ಬಂದಿರುವ ಉತ್ತರ ಪ್ರದೇಶದ ಬಲಾಢ್ಯ ಠಾಕೂರ್ ಸಮುದಾಯದ ರೀತಿಯಂತೆ ಉದ್ದೇಶಪೂರ್ವಕವಾಗಿಯೇ ಮೇಲೆತ್ತಿ ತಿರುಗಿಸಿದ ಮೀಸೆಯನ್ನೂ, ಬಲಗೈಗೆ ಧರಿಸುವ ದಪ್ಪ ಕಡಗವನ್ನೂ ತಮ್ಮ ವಿಶಿಷ್ಟ (ಸಿಗ್ನೇಚರ್) ಶೈಲಿಯಾಗಿಸಿಕೊಂಡಿರುವ ಭೀಮ್ ಆರ್ಮಿಯ ಹೋರಾಟಗಾರರು ಸದ್ಯಕ್ಕೆ ಸಮಾನತೆಯನ್ನು ಕನಸುವ ಯುವಕರ ಫ್ಯಾಶನ್ ಐಕಾನ್‍ಗಳು ಕೂಡಾ ಹೌದು!

ಚಂದ್ರಶೇಖರ್ ಆಜಾದ್ ‘ರಾವಣ್’ ಭೀಮ್ ಆರ್ಮಿಯನ್ನು ಆರಂಭಿಸಿದ್ದು 2015ರ ಜುಲೈನಲ್ಲಿ. ‘ರಾವಣ್’ ಎಂಬುದು ಖಳನಾಯಕರಂತೆ ಬಿಂಬಿಸಲ್ಪಟ್ಟ ಈ ದೇಶದ ಮೂಲನಿವಾಸಿ ಹೋರಾಟಗಾರರ ನಿಜವಾದ ಇತಿಹಾಸವನ್ನು ಎತ್ತಿತೋರುವುದಕ್ಕಾಗಿ ಬೇಕೆಂದೇ ಇಟ್ಟುಕೊಂಡ ಹೆಸರು. ಠಾಕೂರರ ಉಸಿರುಕಟ್ಟಿಸುವ ದಮನ ದಬ್ಬಾಳಿಕೆಗಳ ನಡುವೆ ತಲೆಯೆತ್ತಲು ಹೆಣಗುತ್ತಿದ್ದ ಸಹರಾನ್‍ಪುರದ ದಲಿತ ಸಮುದಾಯದೊಳಕ್ಕೆ ಅಂಬೇಡ್ಕರ್ ಚಿಂತನೆಗಳೊಂದಿಗೆ ಅವರ ತಂಡ ನುಗ್ಗಿತು. ಅತ್ಯಂತ ಸಣ್ಣ ಅವಧಿಯಲ್ಲಿ ಜನಬೆಂಬಲವನ್ನೂ, ಜನಪ್ರಿಯತೆಯನ್ನೂ ಗಳಿಸಿದ ಆಜಾದ್ ರ ಮಿಂಚಿನ ವೇಗವು ದಲಿತ ಸಮುದಾಯದಲ್ಲಿ ಐಕ್ಯತೆಯನ್ನು ತಂದಿತ್ತು. ಇದು ಬಲಾಢ್ಯ ಸಮುದಾಯಗಳ ಫ್ಯೂಡಲ್ ದೊರೆಗಳ ಮತ್ತು ಉತ್ತರ ಪ್ರದೇಶದ ಸರಕಾರಗಳ (ಈಗಿನ ಮತ್ತು ಹಿಂದಿನ) ನಿದ್ದೆ ಕೆಡಿಸಿತ್ತು. ಆದ್ದರಿಂದಲೇ, ಸುಮಾರು 24 ಗಂಭೀರ ದೋಷಾರೋಪಗಳನ್ನು ಅವರ ಮೇಲೆ ಹೊರಿಸಿತು. ಅದು ಸಾಲದೆಂದು ದೇಶದ ಭದ್ರತೆಗೇ ಅಪಾಯವಾಗುವಂತಹ ಕೆಲಸ ಮಾಡಿದ್ದಾನೆಂದು ಆರೋಪಿಸುತ್ತಾ ‘ರಾಷ್ಟ್ರೀಯ ಭದ್ರತಾ ಕಾಯ್ದೆ’ಯ ಅತಿ ಗಂಭೀರ ಆರೋಪಗಳನ್ನೂ ಬಳಸಿ 2017ರಲ್ಲಿ ಅವರನ್ನು ಜೈಲಿಗೆ ದಬ್ಬಲಾಯಿತು.

ಆದರೆ, ಈ ಸುದ್ದಿಗಳ ನಡುವೆ ಭೀಮ್ ಆರ್ಮಿಯು ತನ್ನ ಹುಟ್ಟಿನೊಂದಿಗೇನೆ ಆರಂಭಿಸಿದ ‘ಭೀಮ್ ಪಾಠ್‍ಶಾಲಾ’ಗಳ ಯಶಸ್ಸಿನ ಕಥೆ ಸ್ವಲ್ಪ ಮಸುಕಾದಂತಾಗಿದೆ. ಮೊಟ್ಟಮೊದಲ ಭೀಮ್ ಪಾಠ್‍ಶಾಲಾ 2015ರಲ್ಲಿ ಸಹರನ್‍ಪುರದ ಫತೇಪುರ್ ಭಾಡೋ ಗ್ರಾಮದಲ್ಲಿ ಆರಂಭವಾಯಿತು. ಭೀಮ್ ಆರ್ಮಿ (ಈ ಸಂಘಟನೆಯ ಪೂರ್ಣ ಹೆಸರು ‘ಭೀಮ್ ಆರ್ಮಿ ಭಾರತ್ ಏಕ್ತಾ ಮಿಶನ್’)ಯ ಸಂಸ್ಥಾಪಕರಾದ ಆಜಾದ್ ಮತ್ತು ವಿನಯ್ ರತನ್‍ರಿಗೆ ಮತ್ತು ಅವರ ಜೊತೆಗಾರರಿಗೆ ಇಂತಹ ಶಾಲೆಗಳ ಅಗತ್ಯವೇನೆಂಬುದು ನಿಚ್ಚಳವಾಗಿ ತಿಳಿದಿತ್ತು.
‘ಯಾವುದೇ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಮೊದಲ ಹತ್ತು ವರ್ಷಗಳಲ್ಲಿ ಆ ಮಗು ಏನು ಕಲಿಯುತ್ತದೆಂಬುದು ಬಹಳ ಮುಖ್ಯ. ಆದರೆ ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳು ಅಸಹನೀಯವಾದ ಸ್ಥಿತಿಯಲ್ಲಿವೆ. ಬಹುಪಾಲು ದಲಿತ ಸಮುದಾಯ ಖಾಸಗಿ ಶಾಲೆಗಳ ದುಬಾರಿ ಶುಲ್ಕವನ್ನು ಭರಿಸುವ ಸ್ಥಿತಿಯಲ್ಲಿಲ್ಲ; ಒಂದು ವೇಳೆ ಹಾಗೆ ಖಾಸಗಿ ಶಾಲೆಗಳಿಗೆ ಕಳಿಸಿದರೂ ಜಾತಿಯ ಕಾರಣದಿಂದಾಗಿ ಅಲ್ಲಿ ಅವರಿಗೆ ಸಮಾನ ಗೌರವ ಅಥವಾ ಕಲಿಕೆ ಸಿಗುವುದಿಲ್ಲವೆಂಬುದು ಗೊತ್ತೇ ಇದೆ. ಬಾಬಾಸಾಹೇಬರು ಶಿಕ್ಷಣಕ್ಕೆ ಪ್ರಮುಖ ಸ್ಥಾನ ಕೊಟ್ಟಿದ್ದು ಸುಮ್ಮನೇ ಅಲ್ಲ. ಅದಕ್ಕಾಗಿಯೇ ನಮ್ಮ ಸಂಘಟನೆಯ ಮೊದಲ ಮತ್ತು ಆದ್ಯತೆಯ ಕೆಲಸವಾಗಿ ನಾವು ಆರಂಭಿಸಿದ್ದು ಉಚಿತವಾಗಿ ಉತ್ತಮ ಕಲಿಕೆಯನ್ನು ರೂಪಿಸುವ ‘ಭೀಮ್ ಪಾಠ್‍ಶಾಲಾ’ಗಳನ್ನು’ ಎನ್ನುತ್ತಾರೆ ಸಿಂಗ್.

ಈ ಶಾಲೆಗಳಲ್ಲಿ ಮಕ್ಕಳು ಪಠ್ಯ ವಿಷಯಗಳಾದ ಗಣಿತ, ವಿಜ್ಞಾನ, ಇಂಗ್ಲೀಷ್ ಮೊದಲಾದವುಗಳ ಜೊತೆಗೆ, ಇತಿಹಾಸದ ಪುಟಗಳಲ್ಲಿ ಹೂತುಹೋಗಿರುವ ದಲಿತ ಸಮುದಾಯದ ಚರಿತ್ರೆಯನ್ನೂ, ಶೋಷಿತರ ವಿಮೋಚನೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳ ಜೀವನ ಚಿತ್ರಣಗಳನ್ನೂ, ಅಂಬೇಡ್ಕರ್‍ರವರ ಚಿಂತನೆಗಳನ್ನೂ ಕಲಿಯುತ್ತಾರೆ. ಆರಂಭದಲ್ಲಿ ಸಹರನ್‍ಪುರದ ಸುತ್ತಲಿನ ಪ್ರದೇಶದಲ್ಲಷ್ಟೇ ಸಂಜೆಯ ಕೋಚಿಂಗ್ ತರಗತಿಗಳಾಗಿ 2 ಗಂಟೆಗಳ ಕಾಲ ನಡೆಯುತ್ತಿದ್ದ ಈ ಶಾಲೆಗಳು ಬಹಳ ವೇಗವಾಗಿ ಮೀರಟ್, ಮುಜಫ್ಫರ್‍ನಗರ್, ಆಗ್ರಾ ಮೊದಲಾದೆಡೆಗಳಿಗೂ ವ್ಯಾಪಿಸಿದವು. ಇಂದು ಸುಮಾರು 350ರಷ್ಟು ‘ಭೀಮ್ ಪಾಠ್‍ಶಾಲಾ’ಗಳು ಕಾರ್ಯನಿರ್ವಹಿಸುತ್ತಿದ್ದು ಸಾವಿರದ ಸಂಖ್ಯೆಯನ್ನು ಮುಟ್ಟುವ ದಿಕ್ಕಿನಲ್ಲಿ ಮುನ್ನಡೆಯುತ್ತಿವೆ.

ಮೊದಲ ಶಾಲೆ ಫತೇಪುರದಲ್ಲಿ ಆರಂಭವಾಗುತ್ತಿದ್ದಂತೆ ಬುಢಖೇರಾದ ದಲಿತ ಯುವಕರಿಗೆ ತಮ್ಮಲ್ಲೂ ಇಂತಹ ಶಾಲೆ ಬೇಕೆಂದೆನಿಸಿತು. ನಿವೃತ್ತ ಶಿಕ್ಷಕ ಕನ್ವರ್ ಪಾಲ್ ಸಿಂಗ್‍ರವರ ಮನೆಯೆದುರಿನ ಖಾಲಿ ಬಯಲೇ ಶಾಲಾ ಆವರಣವಾದರೆ ಆಗಷ್ಟೇ 10ನೇ ತರಗತಿ ಮುಗಿಸಿದ್ದ 15 ವರ್ಷದ ಸಿಂಗ್‍ರವರ ಕಿರಿಯ ಪುತ್ರಿ ನಿಶಾ ಆ ಭೀಮ್ ಶಾಲೆಯ ಮೊದಲ ಬೋಧಕಿಯಾದಳು. ಮೊದಲ ದಿನ 30 ಇದ್ದ ಮಕ್ಕಳ ಸಂಖ್ಯೆ ಕೇವಲ 2 ವಾರಗಳಲ್ಲಿ 100ರ ಸಂಖ್ಯೆಯನ್ನೂ ದಾಟಿ ಹಿಗ್ಗುತ್ತಾ ಹೋಗಿ ಶಾಲೆಯನ್ನು ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಬೇಕಾದ ಅನಿವಾರ್ಯತೆ ಸೃಷ್ಟಿಸಿತು. ಈಗ ಶಾಲೆಯಲ್ಲಿ 200ಕ್ಕೂ ಹೆಚ್ಚು ಮಕ್ಕಳು 1-4 ಹಾಗೂ 5-9ರವರೆಗಿನ ವಿಭಾಗಗಳಲ್ಲಿ ನಿರಂತರ ಕಲಿಕೆಯಲ್ಲಿದ್ದಾರೆ.

ಇದೇ ಶಾಲೆಯ ಹಿರಿಯ ವಿದ್ಯಾರ್ಥಿನಿ ರಚನಾ, ತನ್ನ ಔಪಚಾರಿಕ ಖಾಸಗಿ ಶಾಲೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ತರಗತಿಗೆ ಮೊದಲ ಸ್ಥಾನ ಗಳಿಸಿ ಆಜಾದ್ ರವರಿಂದ ಬಹುಮಾನ ಪಡೆದಿರುವುದನ್ನು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ರಚನಾ ಕೂಲಿಕಾರ್ಮಿಕರಾದ ತನ್ನ ತಂದೆತಾಯಿಯರ 7 ಮಂದಿ ಮಕ್ಕಳಲ್ಲಿ ಒಬ್ಬಳು. ‘ಭೀಮ್ ಆರ್ಮಿಯೊಂದಿಗೆ ಗುರುತಿಸಿಕೊಂಡಿರುವುದರಿಂದ ನಾವು ದಲಿತ ಹೆಣ್ಣುಮಕ್ಕಳು ಇಂದು ಲೈಂಗಿಕ ದೌರ್ಜನ್ಯಗಳ ಭೀತಿಯಿಲ್ಲದೆ ಸೈಕಲ್ ತುಳಿದುಕೊಂಡು ಶಾಲೆಗೆ ಹೋಗಲು ಸಾಧ್ಯವಾಗುತ್ತಿದೆ. ನಾನು ಜೀವಶಾಸ್ತ್ರ ಕಲಿತು ಮುಂದೆ ವೈದ್ಯೆಯಾಗಬೇಕು, ನೊಂದವರಿಗಾಗಿ ಉಚಿತ ಚಿಕಿತ್ಸಾಲಯಗಳನ್ನು ತೆರೆಯಬೇಕು’ ಎಂಬ ಕನಸು ಕಾಣುವುದು ರಚನಾಗೆ ಈಗ ಸಾಧ್ಯವಾಗಿದೆ. ಆಕೆಯು ಭೀಮಶಾಲೆಯ ಮತ್ತೊಬ್ಬ ಸ್ವಯಂಸೇವಕ ಬೋಧಕಿ!

ಈ ಅನೌಪಚಾರಿಕ ಶಾಲೆಗಳು ದಲಿತ ಸ್ವಾಭಿಮಾನದ, ಅರಿವಿನ ಮತ್ತು ಐಕ್ಯತೆಯ ಪ್ರತೀಕಗಳಾಗಿ ಛಾಪು ಮೂಡಿಸುತ್ತಾ ವಿಸ್ತರಣೆಗೊಳ್ಳುತ್ತಲೇ ಹೋಗುತ್ತಿವೆ.
ಶೋಷಿತರ ಸ್ವಾಭಿಮಾನದ ಚಳವಳಿಗಳಿಗೆ ಶಿಕ್ಷಣವು ಕೇವಲ ಅನ್ನದ ಮಾರ್ಗ ಮಾತ್ರವಲ್ಲ; ಸಮಾಜ ಪರಿವರ್ತನೆಯ ಮಾರ್ಗ. ಶೋಷಿತ ಸಮುದಾಯಗಳು ತಮ್ಮದೇ ಆದ ಸಾಮಾಜಿಕ ಸಾಂಸ್ಕøತಿಕ ಗುರುತನ್ನು ಗಳಿಸಿಕೊಳ್ಳುವ ಮತ್ತು ಉಳಿಸಿಕೊಳ್ಳುವ ಮಾರ್ಗ. ಆದ್ದರಿಂದಲೇ ರಷ್ಯಾ ಕ್ರಾಂತಿಯ ನಂತರ ಲೆನಿನ್ ತಮ್ಮ ಭಾಷಣವೊಂದರಲ್ಲಿ “ರಷ್ಯಾದ ದುಡಿಯುವ ಜನತೆಯ ಶೇ.90ಕ್ಕಿಂತ ಹೆಚ್ಚು ಮಂದಿ ಶಿಕ್ಷಣ ಪಡೆದಿಲ್ಲ; ಆದರೆ, ಬಂಡವಾಳಶಾಹಿಗಳ ಮೇಲೆ ವಿಜಯ ಸಾಧಿಸಲು ತಮಗೆ ಅದು ಬೇಕೇಬೇಕು ಎಂಬುದನ್ನು ಅರಿತಿದ್ದಾರೆ. ಇಲ್ಲಿ ಶಿಕ್ಷಣ ಕೇವಲ ಅಕ್ಷರ ಜ್ಞಾನವಲ್ಲ, ಹೊಸ ಮಾನವರ ಹುಟ್ಟು” ಎನ್ನುತ್ತಾರೆ. ಇದೇ ಮಾದರಿಯಲ್ಲಿ ಭೀಮ್ ಪಾಠಶಾಲೆಯ ಪ್ರಯೋಗ ಏಕಕಾಲದಲ್ಲಿ ರಚನಾತ್ಮಕವಾದದ್ದೂ ಹಾಗೂ ಅತ್ಯಂತ ರಾಜಕೀಯವಾದದ್ದೂ ಹೌದು.

ಛತ್ತೀಸ್‍ಗಢದಲ್ಲಿ ಹೋರಾಟ ಮತ್ತು ರಚನಾತ್ಮಕ ಕೆಲಸಗಳು ಜೊತೆಜೊತೆಯಾಗಿ ಸಾಗಬೇಕಿರುವ ಕುರಿತು ಛತ್ತೀಸ್‍ಗಡ ಮುಕ್ತಿ ಮೋರ್ಚಾದ ಸಂಸ್ಥಾಪಕ ಶಂಕರ್ ಗುಹಾ ನಿಯೋಗಿ ‘ಸಂಘರ್ಷ್ ಔರ್ ನಿರ್ಮಾಣ್’ ಎಂದು ಸೂತ್ರೀಕರಿಸಿದ್ದರು. ಶಹೀದ್ ಶಾಲೆಗಳು ಮತ್ತು ಶಹೀದ್ ಆಸ್ಪತ್ರೆಗಳು ಇಂದಿಗೂ ಮಾದರಿ ಸಂಸ್ಥೆಗಳಾಗಿವೆ. ಮಹಾರಾಷ್ಟ್ರದಲ್ಲಿ ಅನೂಪ್ ವಾರ್ಧಾರವರು ನಡೆಸುತ್ತಿರುವ ನಳಂದ ಅಕಾಡೆಮಿಯ ಪ್ರಯೋಗದ ಕುರಿತು, ಅವರ ಸಂದರ್ಶನದ ಮೂಲಕ ಓದುಗರಿಗೆ ‘ಪತ್ರಿಕೆ’ ತಿಳಿಸಿತ್ತು.

ಬಹುಶಃ ಸಂಘರ್ಷ್ ಔರ್ ನಿರ್ಮಾಣ್‍ಗಳು ಇಂದು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ. ಈ ತಲೆಮಾರಿನ ಯುವಜನರನ್ನು ಒಳಗೊಂಡು, ಮಕ್ಕಳು ಕುಟುಂಬ ಎಲ್ಲರನ್ನೂ ಜೊತೆಗೊಯ್ಯಬಲ್ಲ ಹೋರಾಟದ ಮಾದರಿಗಳು ಹೆಚ್ಚೆಚ್ಚು ಜನರನ್ನೂ ತಲುಪುತ್ತವೆ ಹಾಗೂ ಇದರ ಪ್ರಭಾವ ಹಾಗೂ ಪರಿಣಾಮ ದೂರಗಾಮಿಯಾದದ್ದೂ ಆಗಿರುತ್ತದೆ. ಇದನ್ನು ಭೀಮ್‍ಆರ್ಮಿ ತಂಡವು ಚೆನ್ನಾಗಿಯೇ ಮನಗಂಡಿದೆ. ಅವರಿಗೊಂದು ಜೈಭೀಮ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...