ಪೊಲೀಸ್ ಕಸ್ಟಡಿಯಲ್ಲಿ ಚಿತ್ರ ಹಿಂಸೆ ನೀಡಲಾಗಿದೆ ಎಂದು ಆರೋಪಿಸಿ ಬಿಲ್ಲಾವರ್‌ನ ಗುಜ್ಜರ್ ಯುವಕ ಮಖಾನ್ ದೀನ್ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಐದು ದಿನಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕಥುವಾ ಉಪ ಆಯುಕ್ತ ರಾಕೇಶ್ ಮಿನ್ಹಾಸ್ ಅವರು ಲೋಹೈ ಮಲ್ಹಾರ್ ತಹಶೀಲ್ದಾರ್ ಅನಿಲ್ ಕುಮಾರ್ ಅವರಿಗೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ಬಗ್ಗೆ ಉಪ ಪೊಲೀಸ್ ಮಹಾನಿರ್ದೇಶಕ (ಕಥುವಾ-ಸಾಂಬಾ-ಜಮ್ಮು ಶ್ರೇಣಿ) ಶಿವಕುಮಾರ್ ನೇತೃತ್ವದಲ್ಲಿ ಇಲಾಖಾ ತನಿಖೆಗೂ ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆ ಆದೇಶಿಸಿದೆ. ಯಾವುದೇ ಗಡುವನ್ನು ನಿರ್ದಿಷ್ಟಪಡಿಸದೆ ಸಾಧ್ಯವಾದಷ್ಟು ಬೇಗ ತನಿಖೆ ಪೂರ್ಣಗೊಳಿಸಲಾಗುವುದು ಎಂದಿದೆ.
ಕಸ್ಟಡಿ ಹತ್ಯೆ ಎಂದೇ ಆರೋಪಿಸಲಾದ ಯುವಕನ ಆತ್ಮಹತ್ಯೆಯನ್ನು ಜಮ್ಮು ಕಾಶ್ಮೀರದ ನಾಗರಿಕ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಆತ್ಮಹತ್ಯೆ ಮಾಡಿಕೊಂಡ ಬುಡಕಟ್ಟು ಯುವಕನಿಗೆ ನ್ಯಾಯ ದೊರಕಿಸಿಕೊಡುವಂತೆ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೇತೃತ್ವದಲ್ಲಿ ದೊಡ್ಡ ಮಟ್ಟದ ಆಗ್ರಹ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ಬರೆದುಕೊಂಡಿರುವ ಮೆಹಬೂಬಾ ಮುಫ್ತಿ, “ಮಖಾನ್ ದೀನ್ ಅವರನ್ನು ಕ್ರೂರವಾಗಿ ಥಳಿಸಿ ಚಿತ್ರಹಿಂಸೆ ನೀಡಲಾಗಿದೆ. ತಪ್ಪೊಪ್ಪಿಗೆ ನೀಡುವಂತೆ ಒತ್ತಾಯಿಸಲಾಗಿದೆ. ಇದರಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದಿದ್ದಾರೆ.
ಫೆಬ್ರವರಿ 6ರಂದು ಎಕ್ಸ್‌ನಲ್ಲಿ ಹಾಕಿದ್ದ ಪೋಸ್ಟ್‌ನಲ್ಲಿ ಮೆಹಬೂಬಾ ಮುಫ್ತಿ “ಕಥುವಾದಿಂದ ಆಘಾತಕಾರಿ ಸುದ್ದಿ : ಬಿಲ್ಲಾವರ್‌ನ ಪೆರೋಡಿಯ 25 ವರ್ಷದ ಮಖಾನ್ ದೀನ್ ಅವರನ್ನು ಬಿಲ್ಲಾವರ್ ಎಸ್‌ಹೆಚ್‌ಒ ಅವರು ಓವರ್ ಗ್ರೌಂಡ್ ವರ್ಕರ್ (ಒಜಿಡಬ್ಲ್ಯು) ಎಂಬ ಸುಳ್ಳು ಆರೋಪದ ಮೇಲೆ ಬಂಧಿಸಿದ್ದರು. ಬಳಿಕ ಆತನಿಗೆ ಕ್ರೂರವಾಗಿ ಥಳಿಸಿ, ಚಿತ್ರಹಿಂಸೆ ನೀಡಿ ಬಲವಂತವಾಗಿ ತಪ್ಪೊಪ್ಪಿಗೆ ಪತ್ರ ಬರೆಯಿಸಲಾಗಿದೆ. ದುರಂತ ಎಂಬಂತೆ ಇಂದು ಮಖಾನ್ ದೀನ್ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಆ ಪ್ರದೇಶವನ್ನು (ಕಥುವಾ) ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಇಂಟರ್ನೆಟ್ ಸೇವೆಗಳನ್ನು ಕಡಿತಗೊಳಿಸಲಾಗಿದೆ. ಇದು ಭಾರೀ ಆತಂಕಕ್ಕೆ ಕಾರಣವಾಗಿದೆ. ನಿರಂತರ ಕ್ರಮ ಕೈಗೊಳ್ಳಲಾಗುತ್ತಿದೆ. ಹೆಚ್ಚಿನ ಜನರನ್ನು ಬಂಧಿಸಲಾಗುತ್ತಿದೆ. ಈ ಘಟನೆಯು ಸುಳ್ಳು ಆರೋಪಗಳ ಮೇಲೆ ಮುಗ್ಧ ಯುವಕರನ್ನು ಗುರಿಯಾಗಿಸಿದಂತೆ ತೋರುತ್ತಿದೆ. ಈ ಕುರಿತು ತಕ್ಷಣ ತನಿಖೆ ಕೈಗೊಳ್ಳುವಂತೆ ನಾನು ಜಮ್ಮು ಕಾಶ್ಮೀರ ಡಿಜಿಪಿಗೆ ಒತ್ತಾಯಿಸುತ್ತಿದ್ದೇನೆ” ಎಂದಿದ್ದರು
Shocking news from Kathua: Makhan Din, aged 25 from Perody, Billawar, was detained by the SHO of Billawar on false charges of being an Over Ground Worker (OGW). He was reportedly subjected to brutal thrashing and torture, forced into a confession, and tragically found dead today.…
— Mehbooba Mufti (@MehboobaMufti) February 6, 2025
ಕಥುವಾ ಮತ್ತು ಅದರ ಪಕ್ಕದ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆದ ಕೆಲವು ಉಗ್ರಗಾಮಿ ಸಂಬಂಧಿತ ಘಟನೆಗಳಲ್ಲಿ ಮಖಾನ್ ದೀನ್ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ತನಿಖೆ ನಡೆಸಲು ಈ ವಾರದ ಆರಂಭದಲ್ಲಿ ಕಥುವಾ ಪೊಲೀಸರು ಅವರನ್ನು ಬಂಧಿಸಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಬುಧವಾರ (ಫೆ.5) ಸಂಜೆ ಸಾವಿಗೂ ಮುನ್ನ ರೆಕಾರ್ಡ್ ಮಾಡಲಾದ ವಿಡಿಯೋದಲ್ಲಿ ಮಖಾನ್ ದೀನ್ ತಲೆಯ ಮೇಲೆ ಪವಿತ್ರ ಕುರಾನ್ ಪ್ರತಿಯನ್ನು ಹಿಡಿದು, ಇಸ್ಲಾಮಿಕ್ ಶುಭಾಶಯಗಳನ್ನು ವ್ಯಕ್ತಪಡಿಸುತ್ತಿರುವುದು ಮತ್ತು ಜಮ್ಮು ಪ್ರದೇಶದಲ್ಲಿ ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದಾನೆಂದು ಆರೋಪಿಸಲಾದ ಸಕ್ರಿಯ ಉಗ್ರಗಾಮಿ ಸ್ವರ್ ದೀನ್ ಅಲಿಯಾಸ್ ಸ್ವರು ಗುಜ್ಜರ್‌ನನ್ನು ನೋಡಿಲ್ಲ ಎಂದು ಪ್ರಮಾಣ ಮಾಡುತ್ತಿರುವುದು ಇದೆ.
ಬುಧವಾರ ಸಂಜೆ ಪೊಲೀಸರು ಮಖಾನ್ ದೀನ್ ಅವರನ್ನು ಬಂಧನದಿಂದ ಬಿಡುಗಡೆ ಮಾಡಿ, ಉಗ್ರಗಾಮಿಗಳೊಂದಿಗೆ ಸಂಪರ್ಕದಲ್ಲಿದ್ದರೆಂದು ಹೇಳಲಾದ ಫೋನ್ ತರಲು ಸೂಚಿಸಿದ್ದರು. ಅವರೊಂದಿಗೆ ಯಾರಾದರು ಪೊಲೀಸ್ ಸಿಬ್ಬಂದಿಯನ್ನು ಕಳುಹಿಸಲಾಗಿತ್ತೋ ಎಂಬುವುದು ತಿಳಿದು ಬಂದಿಲ್ಲ.
“ನಾನು ಬೇರೆ ಫೋನ್ ಬಳಸಿ ಉಗ್ರಗಾಮಿಗಳೊಂದಿಗೆ ಸಂಪರ್ಕದಲ್ಲಿದ್ದೆ ಎಂದು ಪೊಲೀಸರಿಗೆ ಸುಳ್ಳು ಹೇಳಿದ್ದೇನೆ. ನನಗೆ ಕ್ರೂರವಾಗಿ ಹೊಡೆಯುತ್ತಿದ್ದರು. ಅದರಿಂದ ತಪ್ಪಿಸಿಕೊಳ್ಳಲು ಸುಮ್ಮನೆ ಸುಳ್ಳು ಕಥೆ ಹೇಳಿದ್ದೆ. ಪೊಲೀಸರು ಈಗ ಆ ಫೋನ್ ತರಲು ನನಗೆ ಸೂಚಿಸಿದ್ದಾರೆ. ನಾನು ಯಾವುದೇ ಉಗ್ರಗಾಮಿಗಳೊಂದಿಗೆ ಸಂಪರ್ಕದಲ್ಲಿ ಇಲ್ಲ. ಹೀಗಿರುವಾಗ, ಅವರನ್ನು ಸಂಪರ್ಕಿಸಿದ ಫೋನ್ ಎಲ್ಲಿಂದ ತರಲಿ? ಎಂದು ಸಾವಿಗೂ ಮುನ್ನ ಮಾಡಿದ ವಿಡಿಯೋದಲ್ಲಿ ಮಖಾನ್ ದೀನ್ ಅಳಲು ತೋಡಿಕೊಂಡಿದ್ದರು.
ಮುಂದುವರಿದು, “ನಾನು ಚಿಕ್ಕವನಿದ್ದಾಗ, ಬಹುಶಃ ಹಾಗೆ ಮಾಡಿರಬಹುದು. ಆದರೆ, ಯಾರು ಹೇಗೆ ಎಂದು ನನಗೆ ತಿಳಿದಾಗಿನಿಂದ ನಾನು ಯಾವುದೇ ಉಗ್ರಗಾಮಿಯನ್ನು ನೋಡಿಲ್ಲ. ನಾನು ಎಂದಿಗೂ ಪೊಲೀಸರಿಗೆ ದ್ರೋಹ ಮಾಡುವುದಿಲ್ಲ ಎಂದು ಶಫಿ ಭಾಯ್‌ಗೆ ಭರವಸೆ ನೀಡಿದ್ದೇನೆ. ನಾನು ನನ್ನ ಭರವಸೆಯನ್ನು ಉಳಿಸಿಕೊಂಡಿದ್ದೇನೆ” ಎಂದು ಎಂದಿದ್ದರು.
After he was allegedly tortured by J&K Police, man dies by suicide in Jammu's Kathua. The video, shot moments before his death is chilling. #nayakashmir pic.twitter.com/hVJ75lJteT
— Vijaita Singh (@vijaita) February 7, 2025
ಮಖಾನ್ ದೀನ್ ಅವರು ಉಗ್ರಗಾಮಿ ಎಂದು ಹೇಳಲಾದ ಸ್ವರು ಗುಜ್ಜರ್ ಅವರ ಸೋದರಳಿಯ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ಬದ್ನೋಟಾ ಪ್ರದೇಶದಲ್ಲಿ ಸೇನಾ ಬೆಂಗಾವಲು ಪಡೆಯ ಮೇಲೆ ಹೊಂಚು ಹಾಕಿ ದಾಳಿ ನಡೆಸಿದ್ದ ಉಗ್ರರ ಗುಂಪಿನೊಂದಿಗೆ ಈತ ಸಂಪರ್ಕ ಹೊಂದಿದ್ದ ಎಂದು ಆರೋಪಿಸಲಾಗಿದೆ. ಈ ದಾಳಿಯಲ್ಲಿ ಜೂನಿಯರ್ ಕಮಿಷನರ್ ಅಧಿಕಾರಿ ಸೇರಿದಂತೆ ಐವರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದರು.
“ಕೊಹಾಗ್ ಕಾರ್ಯಾಚರಣೆಯಲ್ಲಿ ಹೆಚ್‌ಸಿ ಬಶೀರ್ ಅವರ ಸಾವಿಗೆ ಕಾರಣವಾದ ಗುಂಪು ಇದೇ ಆಗಿದೆ. ಮಖಾನ್‌ಗೆ ಪಾಕಿಸ್ತಾನ ಮತ್ತು ಇತರ ವಿದೇಶಗಳಲ್ಲಿ ಹಲವಾರು ಅನುಮಾನಾಸ್ಪದ ಸಂಪರ್ಕಗಳಿದ್ದವು. ಯಾವುದೇ ಕಸ್ಟಡಿ ಚಿತ್ರಹಿಂಸೆ ಅಥವಾ ಹಲ್ಲೆ ಆಗಿಲ್ಲ. ಮಖಾನ್ ಅವರನ್ನು ವಿಚಾರಣೆಗೆ ಒಳಪಡಿಸಿ, ಬಿಟ್ಟು ಕಳುಹಿಸಲಾಗಿದೆ. ಆತನ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ ಎಂಬ ಮೆಹಬೂಬಾ ಮುಫ್ತಿ ಅವರ ಆರೋಪಗಳನ್ನು ‘ಆಧಾರರಹಿತ ಮತ್ತು ದಾರಿತಪ್ಪಿಸುವ’ ಹೇಳಿಕೆ ಎಂದಿದ್ದಾರೆ.
ಪೂಂಚ್‌ನ ನಾರ್ ಗ್ರಾಮದ ನಿವಾಸಿ, ಉಗ್ರಗಾಮಿ ದಾಳಿ ಸಂಬಂಧ ವಿಚಾರಣೆಗೆ ಕರೆಯಲ್ಪಟ್ಟಿದ್ದ 50 ವರ್ಷದ ಮುಖ್ತಾರ್ ಹುಸೇನ್ ಶಾ ಎಂಬಾತ ಏಪ್ರಿಲ್ 27, 2023ರಂದು ವಿಷ ಸೇವಿಸಿ ಸಾವನ್ನಪ್ಪಿದ್ದರು. ಅದಾಗಿ, ಎರಡು ವರ್ಷಗಳ ಒಳಗೆ ಈ ಘಟನೆ ನಡೆದಿದೆ. ಮುಖ್ತಾರ್ ಹುಸೇನ್ ಶಾ ಕೂಡ ಸಾವಿಗೂ ಮುನ್ನ 9 ನಿಮಿಷ 45 ಸೆಕೆಂಡುಗಳ ವೀಡಿಯೊವನ್ನು ರೆಕಾರ್ಡ್ ಮಾಡಿದ್ದರು.
“ನನಗೆ ಸೇನೆ, ಪೊಲೀಸರು ಅಥವಾ ಯಾವುದೇ ಗ್ರಾಮಸ್ಥರಿಂದ ಯಾವುದೇ ಒತ್ತಡವಿಲ್ಲ. ನನ್ನ ಕುಟುಂಬ ಮತ್ತು ನೆರೆಹೊರೆಯವರು ಎದುರಿಸುತ್ತಿರುವ ಚಿತ್ರ ಹಿಂಸೆಯಿಂದಾಗಿ ನನ್ನ ಧರ್ಮವು ನಿಷೇಧಿಸಿರುವ ಆತ್ಮಹತ್ಯೆ ಮೂಲಕ ನನ್ನ ಪ್ರಾಣವನ್ನು ನಾನು ತೆಗೆದುಕೊಳ್ಳುತ್ತಿದ್ದೇನೆ…ನನಗೆ ಏನೂ ತಿಳಿದಿಲ್ಲ” ಎಂದು ಶಾ ವಿಡಿಯೋದಲ್ಲಿ ಹೇಳಿದ್ದರು. ವಿಡಿಯೋ ಮಾಡುವ ವೇಳೆ ಕೀಟನಾಶಕದ ಬಾಟಲಿಯನ್ನು ಹೊಂದಿದ್ದ ಸಣ್ಣ ಪಾಲಿಥಿನ್ ಚೀಲವನ್ನು ಕೈಯಲ್ಲಿ ಹಿಡಿದುಕೊಂಡಿದ್ದರು.
ಫೆಬ್ರವರಿ 6ರಂದು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, “ಕಳೆದ 24 ಗಂಟೆಗಳಲ್ಲಿ ಬಾರಾಮುಲ್ಲಾ ಮತ್ತು ಕಥುವಾದಲ್ಲಿ ಇಬ್ಬರು ನಾಗರಿಕರ ಸಾವುಗಳ ವಿಷಯವನ್ನು ಗಮನಿಸಿದ್ದೇನೆ. ಒಬ್ಬರು ಸೇನೆಯ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದು ಅತ್ಯಂತ ದುರದೃಷ್ಟಕರ. ಈ ಘಟನೆಗಳು ನಡೆಯಬಾರದಿತ್ತು ಎಂದು ಬರೆದುಕೊಂಡಿದ್ದರು.
ಮುಂದುವರಿದು, “ಸ್ಥಳೀಯ ಜನರ ಸಹಕಾರ ಮತ್ತು ಪಾಲುದಾರಿಕೆ ಇಲ್ಲದೆ ಜಮ್ಮು ಕಾಶ್ಮೀರ ಎಂದಿಗೂ ಸಂಪೂರ್ಣವಾಗಿ ಸಹಬದಿಗೆ ಬರಲು ಮತ್ತು ಭಯೋತ್ಪಾದನೆ ಮುಕ್ತವಾಗಲು ಸಾಧ್ಯವಿಲ್ಲ. ಈ ರೀತಿಯ ಘಟನೆಗಳು ಸಾಮಾನ್ಯ ಸ್ಥಿತಿಗೆ ಮರಳಲು ನಾವು ನಮ್ಮೊಂದಿಗೆ ಕೊಂಡೊಯ್ಯಬೇಕಾದ ಜನರನ್ನೇ ದೂರವಿಡುವ ಅಪಾಯವನ್ನುಂಟುಮಾಡುತ್ತವೆ. ನಾನು ಈ ಘಟನೆಗಳನ್ನು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿದ್ದೇನೆ ಮತ್ತು ಎರಡೂ ಘಟನೆಗಳನ್ನು ಸಮಯಕ್ಕೆ ಅನುಗುಣವಾಗಿ, ಪಾರದರ್ಶಕ ರೀತಿಯಲ್ಲಿ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದೇನೆ. ಜಮ್ಮು ಕಾಶ್ಮೀರ ಸರ್ಕಾರವು ತನ್ನದೇ ಆದ ವಿಚಾರಣೆಗೆ ಆದೇಶಿಸಿದೆ ಎಂದು ತಿಳಿಸಿದ್ದರು.
I have seen the reports of excessive use of force & harassment of Makhan Din in police custody in Billawar leading to his suicide and the death of Waseem Ahmed Malla, shot by the army under circumstances that are not entirely clear. Both these incidents are highly unfortunate and…
— Omar Abdullah (@OmarAbdullah) February 6, 2025
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104
ನ್ಯಾಯಾಲಯದಲ್ಲೇ ಮುಸ್ಲಿಂ ಯುವಕನಿಗೆ ಥಳಿಸಿದ ಹಿಂದುತ್ವ ಸಂಘಟನೆ ದುಷ್ಕರ್ಮಿಗಳು! : ವರದಿ


