Homeಅಂತರಾಷ್ಟ್ರೀಯಜನರ ತೆರಿಗೆ ದುಡ್ಡಲ್ಲಿ ದಾವೂದ್ ಇಬ್ರಾಹಿಂ ನಷ್ಟ ತುಂಬಲು ಮುಂದಾಯ್ತಾ ‘ನಮೋ’ ಸರ್ಕಾರ?

ಜನರ ತೆರಿಗೆ ದುಡ್ಡಲ್ಲಿ ದಾವೂದ್ ಇಬ್ರಾಹಿಂ ನಷ್ಟ ತುಂಬಲು ಮುಂದಾಯ್ತಾ ‘ನಮೋ’ ಸರ್ಕಾರ?

- Advertisement -
- Advertisement -

| ಮಾಚಯ್ಯ |

ಏಪ್ರಿಲ್ 12ರಂದು ಒಂದು ವಿಶೇಷ ಘಟನೆ ನಡೆಯಿತು. ಆದರೆ ಎಲೆಕ್ಷನ್ ಅಬ್ಬರದಲ್ಲಿ ಅದು ಪ್ರಚಾರಕ್ಕೆ ಬರಲಿಲ್ಲ. ಕೆಲವು ಮಾಧ್ಯಮಗಳು ಈ ಕುರಿತು ಸುದ್ದಿ ಮಾಡಿದರೂ ಕೇಂದ್ರ ಸರ್ಕಾರಕ್ಕೆ ಅನುಕೂಲವಾಗುವಂತೆ ಒಂದು ಮಗ್ಗುಲನ್ನಷ್ಟೇ ತೋರಿಸಿ ಸುಮ್ಮನಾದವು. ಅಂದಹಾಗೆ, ಪ್ರಧಾನ ಮಂತ್ರಿಯವರ ಕಚೇರಿ ಕರೆದಿದ್ದ ತುರ್ತು ಸಭೆ ಅದು. ಚುನಾವಣಾ ಕಾವನ್ನೂ ಪಕ್ಕಕ್ಕಿರಿಸಿ ಸರ್ಕಾರಿ ಅಧಿಕಾರಿಗಳು ಈ ಪರಿ ತರಾತುರಿಯಲ್ಲಿ ಸಭೆ ನಡೆಸುವಂತ ಯಾವ ವಿಪತ್ತು ದೇಶದ ಮೇಲೆ ಬಂದೆರಗಿತ್ತು? ಅದು, ಸಂಕಷ್ಟದಲ್ಲಿರುವ ರೈತರಿಗೆ ಸಂಬಂಧಿಸಿದ್ದಾ? ನಿರುದ್ಯೋಗದಿಂದ ಬಳಲುತ್ತಿರುವ ಯುವಜನರಿಗೆ ಸಂಬಂಧಿಸಿದ್ದಾ? ಅಥವಾ ಶತ್ರುದೇಶಗಳೇನಾದರು ಭಾರತದ ಮೇಲೆ ಯುದ್ಧ ಸಾರಿದ್ದವಾ ಇಲ್ಲವೇ ಗಂಭೀರ ಪಿತೂರಿ ನಡೆಸಿದ್ದವೇ? ಊಹೂಂ, ಇವ್ಯಾವುವೂ ಅಲ್ಲ. ಅದು ಒಬ್ಬ ಉದ್ಯಮಿಯ ಲುಕ್ಸಾನಿಗೆ ಸಂಬಂಧಿಸಿದ್ದು!

ಜೆಟ್ ಏರ್ವೇಸ್.ನ ನರೇಶ್ ಗೋಯೆಲ್

ಹೌದು, ನರೇಶ್ ಗೋಯಲ್ ಎಂಬ ಉದ್ಯಮಿಯ ವೈಮಾನಿಕ ಸಂಸ್ಥೆ ‘ಜೆಟ್ ಏರ್‌ವೇಸ್’ ಸಾಲದ ಸುಳಿಯಲ್ಲಿ ಸಿಲುಕಿ ನರಳಾಡುತ್ತಿದೆ. ಅವತ್ತು ಏಪ್ರಿಲ್ ೧೧ರಂದು ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಯ್ತೆಂದರೆ, ತನ್ನ ಹನ್ನೊಂದು ದೇಶಿ ಮತ್ತು ಅಂತಾರಾಷ್ಟ್ರೀಯ ಯಾನದ ವಿಮಾನಗಳನ್ನು ಹಾರಾಡಿಸಲೂ ತ್ರಾಣವಿಲ್ಲದೆ ದಿಢೀರ್ ಪ್ರಕಟಣೆಯೊಂದನ್ನು ಹೊರಡಿಸಿ ‘ಮುಂದಿನ ಸೋಮವಾರದವರೆಗೆ ತನ್ನ ವಿಮಾನಗಳು ಹಾರಾಟ ನಡೆಸುವುದಿಲ್ಲ’ ಎಂದು ಕೈಸೋತು ಕುಳಿತುಕೊಂಡಿತು. ಮುಂಗಡ ಟಿಕೇಟು ಕಾಯ್ದಿರಿಸಿದ್ದ ಪ್ರಯಾಣಿಕರು ನಿಲ್ದಾಣಗಳಲ್ಲೇ ಪರದಾಡಿದರೂ ಕಂಪನಿ ಕ್ಯಾರೇ ಅನ್ನಲಿಲ್ಲ. ಅದಾದ ಮಾರನೇ ದಿನವೇ ಕೇಂದ್ರ ವಿಮಾನಯಾನ ಸಚಿವರಾದ ಸುರೇಶ್ ಪ್ರಭು ಅವರು ಚುನಾವಣಾ ಬಿಸಿಯ ನಡುವೆಯೂ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಫೋನಾಯಿಸಿ ಈ ಕೂಡಲೇ ಜೆಟ್ ಏರ್‌ವೇಸ್‌ಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಸಿ ಎಂದು ತಾಕೀತು ಮಾಡಿದರು. ಅದರ ಫಲವಾಗಿ ನಡೆದದ್ದೇ ಆ ಸಭೆ.

ಯಾರೀ ನರೇಶ್ ಗೋಯೆಲ್? ಏನಿದು ಜೆಟ್ ಏರ್‌ವೇಸ್ ಫಜೀತಿ? ಆತನ ವೈಯಕ್ತಿಕ ಲುಕ್ಸಾನಿಗೆ ಸರ್ಕಾರವೇಕೆ ಇಷ್ಟು ತಡಬಡಿಸಬೇಕು? ಎಂಬ ಪ್ರಶ್ನೆಗಳು ಪುಟಿದೆದ್ದ ಬೆನ್ನಿಗೇ, 2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಮೋದಿಯವರ ಸರ್ಕಾರ ಇಂಥಾ ಕಾರ್ಪೊರೇಟ್ ಉದ್ಯಮಿಗಳ ಹಿತಾಸಕ್ತಿ ಕಾಯುವುದಕ್ಕೇ ತನ್ನನ್ನು ಸಮರ್ಪಿಸಿಕೊಂಡಿರುವುದರಿಂದ ಇದೂ ಅಂತದ್ದೇ ಮತ್ತೊಂದು ಪ್ರಕರಣವಿರಬಹುದು ಎಂಬ ಹತಾಶೆಗೆ ನಾವು ಭಾರತೀಯರು ಬಂದು ನಿಲ್ಲುತ್ತೇವೆ. ಆದರೆ ಅಸಲೀ ವಿಷಯ ಇದಲ್ಲ. ನರೇಶ್ ಗೋಯೆಲ್ ಈ ಜೆಟ್ ಏರ್‌ವೇಸ್‌ನ ಮೇಲ್ನೋಟದ ಮಾಲೀಕನಾದರೂ, ಇದಕ್ಕೆ ಬೇನಾಮಿ ಕಾಸು ಸುರಿದು ನಡೆಸುತ್ತಿರೋದು ಮೋಸ್ಟ್ ವಾಂಟೆಡ್ ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ!!!

2016ರಲ್ಲಿ ಪ್ರಕಟಗೊಂಡ ‘ದಿ ಫೀಸ್ಟ್ ಆಫ್ ವಲ್ಚರ‍್ಸ್ : ದಿ ಹಿಡನ್ ಬ್ಯುಸಿನೆಸ್ ಆಫ್ ಡೆಮಾಕ್ರೆಸಿ ಇನ್ ಇಂಡಿಯಾ’ ಎಂಬ ತಮ್ಮ ಪುಸ್ತಕದಲ್ಲಿ ತನಿಖಾ ಪತ್ರಕರ್ತ ಜೋಸಿ ಜೋಸೆಫ್‌ರವರು ಜೆಟ್ ಏರ್‌ವೇಸ್‌ನಲ್ಲಿ ದಾವೂದ್ ಇಬ್ರಾಹಿಂನ ಬೇನಾಮಿ ವ್ಯವಹಾರವನ್ನು ಇಂಚಿಂಚಾಗಿ ಬಿಚ್ಚಿಟ್ಟಿದ್ದಾರೆ. ಇದು ಅಂತೆಕಂತೆಗಳ ಗಾಳಿ ಸುದ್ದಿಯಲ್ಲ, ಸ್ವತಃ ಇಂಡಿಯಾದ ಬೇಹುಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳೇ ದಾಖಲೆಸಹಿತ ಕಲೆಹಾಕಿದ ಮಾಹಿತಿ. ಅವನ್ನೆಲ್ಲ ಆಧಾರವಾಗಿಟ್ಟುಕೊಂಡೇ ಜೋಸೆಫ್‌ರವರು ಪುಸ್ತಕ ಬರೆದಿರೋದು. ಹಾಗಾಗಿಯೇ ನರೇಶ್ ಗೋಯೆಲ್, ಇಡೀ ಇಂಡಿಯಾದಲ್ಲೆ ಅತಿ ದುಬಾರಿ ಎನ್ನುವಂಥಾ ಒಂದು ಸಾವಿರ ಕೋಟಿ ಮೌಲ್ಯದ ಮಾನಹಾನಿ ಮೊಕದ್ದಮೆ ಹೂಡಿದ್ದರೂ ಯಾವ ಅಂಜಿಕೆಯೂ ಇಲ್ಲದೆ ಜೋಸೆಫ್ ವಿಚಾರಣೆ ಎದುರಿಸುತ್ತಿದ್ದಾರೆ.

ಜೋಸಿ ಜೋಸೆಫ್‌ರವರ ಕೃತಿಯ ಒಟ್ಟಾರೆ ಸಾರಾಂಶವನ್ನು ಹೆಕ್ಕಿ ತೆಗೆಯಲು ಹೋದರೆ ಇಡೀ ಭಾನ್ಗಡಿ ಶುರುವಾಗೋದು 2000ನೇ ಇಸವಿಯ ಆಸುಪಾಸಿನಿಂದ. ಹೌದು, ಎನ್‌ಡಿಎ ಸರ್ಕಾರದ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗಿನಿಂದ. ಜೈಶ್-ಇ-ಮೊಹಮದ್ ಸಂಘಟನೆಯ ಸಂಸ್ಥಾಪಕ ಮೌಲಾನಾ ಮಸೂದ್ ಅಝರ್‌ನನ್ನು ಬಿಡಿಸಿಕೊಳ್ಳಲು ಉಗ್ರರು ನಡೆಸಿದ ಕಂದಾಹಾರ್ ವಿಮಾನ ಅಪಹರಣ ಪ್ರಕರಣ, ಅದಕ್ಕೂ ಮುನ್ನ 1995ರಲ್ಲಿ ಪಶ್ಚಿಮ ಬಂಗಾಳದ ಪುರೊಲಿಯಾದಲ್ಲಿ ಲಾಟ್ವೀಯನ್ ಎ.ಎನ್-16 ಎಂಬ ನಿಗೂಢ ವಿಮಾನವೊಂದು ಭಾರತದ ರೆಡಾರ್‌ಗಳ ಕಣ್ಣಿಗೆ ಮಣ್ಣೆರಚಿ ರಾಶಿಗಟ್ಟಲೆ ಎಕೆ-47 ಮತ್ತಿತರ ಶಸ್ತ್ರಾಸ್ತ್ರಗಳನ್ನು ಸುರಿದುಹೋಗಿದ್ದ ಘಟನೆಗಳ ಕಾವಿನಿಂದಾಗಿ ಭಾರತದ ಬೇಹುಗಾರಿಕಾ ತಂಡ ಖಾಸಗಿ ವಿಮಾನಯಾನ ಸಂಸ್ಥೆಗಳ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿತ್ತು.

ಅಂಥಾ ಸಂದರ್ಭದಲ್ಲಿ 2001 ಡಿಸೆಂಬರ್ 12ರಂದು ಭಾರತೀಯ ಇಂಟೆಲಿಜೆನ್ಸ್ ಬ್ಯೂರೋದ ಜಂಟಿ ನಿರ್ದೇಶಕರಾಗಿದ್ದ ಅಂಜನ್ ಘೋಷ್ ಅವರು ಗೃಹಖಾತೆಯ ಅಂದಿನ ಜಂಟಿ ಕಾರ್ಯದರ್ಶಿ ಸಂಗೀತಾ ಗೈರೋಲಾ ಅವರಿಗೆ ಬರೆದ ಕೆಲವೇ ಸಾಲುಗಳುಳ್ಳ ಪುಟ್ಟ ಪತ್ರವೊಂದು ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಘೋಷ್‌ರವರು ತಮ್ಮ ಪತ್ರದಲ್ಲಿ ವ್ಯಾವಹಾರಿಕ ತಕರಾರುಗಳನ್ನು ಬಗೆಹರಿಸಿಕೊಳ್ಳುವ ಕುರಿತಂತೆ ನರೇಶ್ ಗೋಯೆಲ್, ಡಾನ್‌ಗಳಾದ ಚೋಟಾ ಶಕೀಲ್, ದಾವೂದ್ ಇಬ್ರಾಹಿಂ ನಡುವೆ ಆಗಿಂದಾಗ್ಗೆ ಸಂಪರ್ಕಿಸಿರುವ ಕುರಿತು ನಮಗೆ ಅಧಿಕೃತ ಮಾಹಿತಿಗಳು ಸಿಕ್ಕಿವೆ. ಗೋಯೆಲ್‌ನ ಹೂಡಿಕೆಯ ಒಂದಷ್ಟು ಭಾಗ ಭೂಗತ ಜಗತ್ತಿನವರಿಂದ, ಮುಖ್ಯವಾಗಿ ಶಕೀಲ್ ಮತ್ತು ದಾವೂದ್, ಹರಿದುಬಂದಿರುವ ಬಗ್ಗೆ ನಮಗೆ ಬಲವಾದ ಅನುಮಾನಗಳಿವೆ. ಶೇಖ್‌ಗಳೊಂದಿಗೆ ನರೇಶ್‌ಗೆ ಕಳೆದ ಎರಡು ದಶಕಗಳಿಂದಲೂ ಆತ್ಮೀಯ, ನಿಕಟ ವ್ಯವಹಾರಗಳಿವೆ. ಈ ಕನೆಕ್ಷನ್‌ಗಳು ಕೇವಲ ಬ್ಯುಸಿನೆಸ್‌ನಲ್ಲಿ ಬಂಡವಾಳ ಹೂಡಿಕೆ ಮಾಡುವುದಕ್ಕಷ್ಟೇ ಅಲ್ಲ, ಭಾರತದ ಕಾಳಧನವನ್ನು ಮತ್ತೆ ಭಾರತದ ಬ್ಯುಸಿನೆಸ್‌ನಲ್ಲೇ ತೊಡಗಿಸಲೂ ಬಳಕೆಗೊಳ್ಳುತ್ತಿವೆ. ಇಂತಹ ಬಹುಪಾಲು ಹಣವನ್ನು ಸ್ಮಗ್ಲಿಂಗ್, ಸುಲಿಗೆಯಂತಹ ಅಕ್ರಮ ಮಾರ್ಗಗಳಿಂದ ಸಂಗ್ರಹಿಸುತ್ತಿರುವ ಬಗ್ಗೆಯೂ ನಮಗೆ ಖಚಿತ ಮಾಹಿತಿ ತಿಳಿದು ಬಂದಿದೆ ಎಂಬ ಗಂಭೀರ ಆರೋಪಗಳನ್ನು ಮಾಡಿದ್ದರು.

ಆ ಪತ್ರ ಬಹಿರಂಗಗೊಂಡ ನಂತರ ದೊಡ್ಡ ಚರ್ಚೆ ಭುಗಿಲೆದ್ದಿತ್ತು. ಪಾರ್ಲಿಮೆಂಟ್‌ನಲ್ಲಿ ವಿರೋಧ ಪಕ್ಷಗಳು ಸ್ಪಷ್ಟನೆ ಕೊಡುವಂತೆ ಸರ್ಕಾರಕ್ಕೆ ದುಂಬಾಲು ಬಿದ್ದವು. ಆಗ ಉಪಪ್ರಧಾನಿ ಕಂ ಗೃಹಮಂತ್ರಿ ಹುದ್ದೆಯಲ್ಲಿದ್ದ ಲಾಲ್‌ಕೃಷ್ಣ ಅಡ್ವಾಣಿಯವರ ಮೇಲೆ ಹೆಚ್ಚಿನ ಒತ್ತಡಗಳು ಬಂದವು. ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಲು ಇಂಟೆಲಿಜೆನ್ಸ್ ಬ್ಯೂರೋದ ಕೆ.ಪಿ.ಸಿಂಗ್ ಮತ್ತು ಪತ್ರ ಬರೆದಿದ್ದ ಘೋಷ್ ಅವರನ್ನು ತಮ್ಮ ಬಳಿ ಕರೆಸಿಕೊಂಡು ವಿಚಾರಿಸಿದ್ದರು. ಅವರಿಬ್ಬರು ಹೇಳಿದ ಮಾಹಿತಿ ಕೇಳಿ ಅಡ್ವಾಣಿ ಶಾಕ್‌ಗೆ ಒಳಗಾದರು. ಯಾಕೆಂದರೆ ಕೇವಲ ಬಲವಾದ ಅನುಮಾನ ಮಾತ್ರವಲ್ಲದೆ ನರೇಶ್ ಗೋಯೆಲ್ ಇತ್ತೀಚೆಗಷ್ಟೆ ದಾವೂದ್ ಇಬ್ರಾಹಿಂ ಜೊತೆ ಮೂರು ಸಲ ಫೋನ್ ಮಾಡಿ ಮಾತಾಡಿದ್ದನ್ನು ಸಬೂತುಗಳ ಸಮೇತ ಮುಂದಿಟ್ಟಿದ್ದರು.

ಎಲ್ಲವನ್ನೂ ಕೇಳಿಸಿಕೊಂಡ ನಂತರ ಅಡ್ವಾಣಿಯವರು ಇದು ಇನ್ನು ಮುಂದುವರೆಯಲೇಕೂಡದು ಎನ್ನುವ ದೃಢ ನಿಲುವಿನಲ್ಲಿ ಮಾತನಾಡಿದ್ದರಂತೆ. ಅವರ ಮಾತನ್ನು ಕೇಳುತ್ತಿದ್ದರೆ ಇನ್ನು ಕೆಲವೇ ದಿನಗಳಲ್ಲಿ ಜೆಟ್ ಏರ್‌ವೇಸ್ ಅನ್ನು ಸರ್ಕಾರ ಬಂದ್ ಮಾಡಿಸಲಿದೆ ಎಂದು ನನಗನ್ನಿಸಿತ್ತು ಎಂದು ಅವತ್ತಿನ ಮಾತುಕತೆ ಸಂದರ್ಭದಲ್ಲಿ ಉಪಸ್ಥಿತರಿದ್ದ ಮತ್ತೊಬ್ಬ ಅಧಿಕಾರಿ ತನ್ನ ಬಳಿ ಒಂದು ದಶಕದ ನಂತರ ಈ ಪುಸ್ತಕ ಬರೆಯುವಾಗ ಹೇಳಿಕೊಂಡರು ಎಂದು ಜೋಸೆಪ್ ಕೃತಿಯಲ್ಲಿ ದಾಖಲಿಸಿದ್ದಾರೆ.

ಆದರೆ ಹಾಗಾಗಲಿಲ್ಲ. ಮಾಹಿತಿಗಳು ಹೇಳುವಂತೆ, ಅಡ್ವಾಣಿಯವರು ನರೇಶ್ ಗೋಯೆಲ್ ಮೇಲೆ ಕ್ರಮ ಕೈಗೊಳ್ಳುವ ಕುರಿತೇ ಮುಂದಾಗಿದ್ದರು. ಆದರೆ ಮಹಾರಾಷ್ಟ್ರ ಮೂಲದ ಪ್ರಭಾವಿ ರಾಜಕಾರಣಿ ಮತ್ತು ಆ ಸಂದರ್ಭದಲ್ಲಿ ಕೇಂದ್ರ ಸಚಿವರೂ ಆಗಿದ್ದ ವ್ಯಕ್ತಿಯೊಬ್ಬರು ಅಡ್ಡಬಂದು ಯಾವ ಕಾರಣಕ್ಕೂ ಗೋಯೆಲ್ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ಪಟ್ಟು ಹಿಡಿದಿದ್ದರಿಂದ ಅಡ್ವಾಣಿ ಕೂಡಾ ದೇಶದ ಭದ್ರತೆಗೆ ಆತಂಕವಿರುವ ಸುಳಿವು ಗೊತ್ತಿದ್ದೂ ಸುಮ್ಮನಾಗಬೇಕಾಯ್ತು. ದಾವೂದ್ ಇಬ್ರಾಹಿಂನ ಮಹಾರಾಷ್ಟ್ರದ ಬಾಂಬೆ ನಂಟು ಮತ್ತು ಅದೇ ಮಹಾರಾಷ್ಟ್ರ ಬಿಜೆಪಿ ರಾಜಕಾರಣಿಯ ಒತ್ತಾಯಗಳು ಇಲ್ಲಿ ಅನೇಕ ಅನುಮಾನ ಮೂಡಿಸುತ್ತವೆ.

ಇದಿಷ್ಟೇ ಅಲ್ಲ, ಗೃಹ ಸಚಿವಾಲಯ ಮತ್ತು ಕೇಂದ್ರ ವಿಮಾನಯಾನ ಸಚಿವಾಲಯದಿಂದ ಅನುಮತಿಯನ್ನು ಪಡೆಯದೇ ಶೆಡ್ಯೂಲ್ಡ್ ಏರ್‌ವೇಸ್ ರೀತಿಯಲ್ಲಿ ಜೆಟ್ ಸಂಸ್ಥೆ ಕೆಲಸ ಮಾಡುತ್ತಿರುವುದರ ಬಗ್ಗೆಯೂ ಜನವರಿ 4, 2002ರಲ್ಲೂ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಎ.ಎಚ್.ಜಂಗ್ ಅವರು ಗೃಹ ಕಾರ್ಯದರ್ಶಿ ಕಮಲ್ ಪಾಂಡೆಯವರಿಗೆ ಪತ್ರ ಬರೆದಿದ್ದರು. ಒನ್ಸ್ ಎಗೇನ್, ಜೆಟ್ ಏರ್‌ವೇಸ್ ವಿರುದ್ಧ ಕ್ರಮಕೈಗೊಳ್ಳುವ ಅವಕಾಶ ಅಡ್ವಾಣಿಯವರ ಎದುರಿಗೆ ಬಂದಿತ್ತು. ಆದರೂ ಅವರು ಅಸಹಾಯಕರಾಗಿ ಕುಳಿತುಕೊಳ್ಳದೆ ಬೇರೆ ವಿಧಿಯಿರಲಿಲ್ಲ.

ಆದರೆ ಮೂರು ವರ್ಷಗಳ ನಂತರ, ಅವತ್ತು ಅಡ್ವಾಣಿ ಎದುರಿಗೆ ನರೇಶ್ ಗೋಯೆಲ್‌ನ ವೃತ್ತಾಂತ ಬಿಚ್ಚಿಟ್ಟಿದ್ದ ಬೇಹುಗಾರಿಕಾ ಮುಖ್ಯಸ್ಥ ಕೆ.ಪಿ.ಸಿಂಗ್ ಸಂಪೂರ್ಣ ತದ್ವಿರುದ್ಧ ಹೇಳಿಕೆ ಕೊಟ್ಟು, ’ಐಬಿ ಅಥವಾ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ಸಂಸ್ಥೆಗಳಲ್ಲಾಗಲಿ ಆ ಸಮಯದಲ್ಲಿ ಜೆಟ್ ಏರ್‌ವೇಸ್ ವಿರುದ್ಧವಾಗಲಿ ಅಥವಾ ಅದರ ನಿರ್ದೇಶಕರ ವಿರುದ್ಧವಾಗಲಿ ಯಾವ ನಿರ್ದಿಷ್ಟ ಪ್ರತಿಕೂಲ ಪ್ರಕರಣಗಳೂ ಇರಲಿಲ್ಲ. ನರೇಶ್ ಗೋಯೆಲ್ ಅಥವಾ ಅವರ ಸಂಸ್ಥೆಯ ವಿರುದ್ಧ ಬೇಹುಗಾರಿಕಾ ಸಂಸ್ಥೆಗಳು ಮಾಡಿರುವ ಅರೋಪಗಳು ಅವರ ವಿಮಾನಯಾನ ಸಂಸ್ಥೆಗೆ ನೀಡಲಾಗಿರುವ ಸೆಕ್ಯುರಿಟಿ ಕ್ಲಿಯರೆನ್ಸ್ ಅನುಮೋದನೆಯನ್ನೇ ರದ್ದುಪಡಿಸುವಷ್ಟು ಗಂಭೀರವಾದವಲ್ಲ’ ಎಂದುಬಿಟ್ಟರು. ಅದಾದನಂತರ ಗೋಯೆಲ್ ವಿರುದ್ಧ ನಡೆಯುತ್ತಿದ್ದ ಬೇಹುಗಾರಿಕಾ ತನಿಖೆಯ ಫೈಲುಗಳು ದೂಳು ಹಿಡಿಯ ತೊಡಗಿದವು. ಯಾವ ರಾಜಕೀಯ ಪ್ರಭಾವಗಳು ಬೇಹುಗಾರಿಕಾ ಸಂಸ್ಥೆಯನ್ನೇ ಹೀಗೆ ತಲೆಕೆಳಗು ಮಾಡಿದವು ಅನ್ನೋದು ಇವತ್ತಿಗೂ ನಿಗೂಢವಾಗಿಯೇ ಉಳಿದಿದೆ.

ವಿಪರ್ಯಾಸವೆಂದರೆ, ಗೋಯೆಲ್‌ಗೆ ಕ್ಲೀನ್‌ಚಿಟ್ ಕೊಡುವ ಹೇಳಿಕೆ ಕೊಡುವುದಕ್ಕೂ ಕೆಲ ದಿನ ಮೊದಲು ಇದೇ ಸಿಂಗ್ ಜೆಟ್ ಏರ್‌ವೇಸ್‌ನ ಮಾಲೀಕರು ಸ್ಮಗ್ಲಿಂಗ್ ಮತ್ತು ಇನ್ನಿತರೆ ಅಕ್ರಮ ಮಾರ್ಗಗಳ ಮೂಲಕ ಇಷ್ಟೆಲ್ಲ ಆಸ್ತಿ ಸಂಪಾದಿಸಿರುವ ಬಗ್ಗೆ ನಮಗೆ ಖಚಿತ ಅನುಮಾನಗಳಿರುವುದರಿಂದ ಅವರ ವಿರುದ್ಧ ಫೆರಾ (ಫಾರಿನ್ ಎಕ್ಸ್‌ಚೇಂಜ್ ರೆಗ್ಯುಲೇಷನ್ ಆಕ್ಟ್) ಕಾಯ್ದೆಯಡಿಯೂ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದರು!

ಕೃತಿಯ ಲೇಖಕ ಜೋಸಿ ಜೋಸೆಫ್

ಗೃಹ ಸಚಿವಾಲಯದ ಮುಖೇಶ್ ಮಿತ್ತಲ್ ಸಹಾ ವಿಮಾನಯಾನ ಖಾತೆಗೆ ಒಂದು ಪತ್ರ ಬರೆದು ಅಂಜನ್ ಘೋಷ್ ಮಾಡಿದ್ದ ಅಷ್ಟೂ ಆರೋಪಗಳನ್ನು ಪುನರುಚ್ಚರಿಸುವಂತೆ ಜೆಟ್ ಏರ್‌ವೇಸ್‌ನ ಮುಖ್ಯಸ್ಥ ನರೇಶ್ ಗೋಯೆಲ್ ವಿರುದ್ಧ ಕೆಲವು ಪ್ರತಿಕೂಲ ಆರೋಪಗಳು ಕೇಳಿಬಂದಿದ್ದು, ವರದಿಗಳು ದೃಢಪಡದೇ ಇದ್ದಾಗ್ಯೂ ಸಂಸ್ಥೆಯ ಸಂಪತ್ತು ಹವಾಲಾ ಹಣದಿಂದ ರೂಪುಗೊಂಡಿರಬಹುದು. ಈ ನಿಟ್ಟಿನಿಂದ ಸೂಕ್ತ ವಿಚಾರಣೆ ನಡೆಸಿ, ತಕ್ಕ ಕ್ರಮ ಕೈಗೊಳ್ಳುವಂತೆ ಕೇಳಿಕೊಳ್ಳುತ್ತೇನೆ ಎಂದಿದ್ದರು. ಆಗಲೂ ಗೃಹಮಂತ್ರಿಯಾಗಿದ್ದ ಅಡ್ವಾಣಿಯವರು ಜೆಟ್ ಏರ್‌ವೇಸ್ ಮೇಲೆ ಕ್ರಮಕ್ಕೆ ಮುಂದಾಗಲಿಲ್ಲ.

ಇಷ್ಟೆಲ್ಲಾ ಆದಾಗ್ಯೂ ಜೆಟ್ ಏರ್‌ವೇಸ್ ಮೇಲಿದ್ದ ಕೇಸುಗಳ್ಯಾವುವು ರದ್ದಾಗಿಲ್ಲ, ನನಗೆ ತಿಳಿದಂತೆ 2015ರವರೆಗೂ ಅವು ವಿಚಾರಣೆ ಮುಕ್ತವಾಗಿಯೇ ಇವೆ ಎಂದು ಲೇಖಕರು ಕೃತಿಯಲ್ಲಿ ಹೇಳಿದ್ದಾರೆ. ಎನ್‌ಡಿಎ ಸರ್ಕಾರ ಬಿದ್ದುಹೋಗಿ, ಆನಂತರ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹತ್ತು ವರ್ಷ ಅಧಿಕಾರ ನಡೆಸಿದರೂ ನರೇಶ್ ಗೋಯೆಲ್ ವಿಚಾರಣೆಗಳು ಮುಂದಕ್ಕೆ ಕದಲಲಿಲ್ಲ. ಅದಾದಮೇಲೆ, 2014ರಲ್ಲಿ ಪಾಕಿಸ್ತಾನಕ್ಕೆ ಅದರ ಭಾಷೆಯಲ್ಲೇ ಉತ್ತರ ಕೊಡ್ತೀನಿ, ದಾವೂದ್ ಇಬ್ರಾಹಿಂನಂತಹ ಕ್ರಿಮಿಗಳನ್ನು ಬಂಧಿಸಿ ತರ‍್ತೀನಿ ಎಂಬಂತಹ ಭರವಸೆಗಳನ್ನು ಬಿತ್ತಿ ಅಧಿಕಾರಕ್ಕೆ ಬಂದ ಮೋದಿಯವರು ಕೂಡಾ ದಾವೂದ್ ಇಬ್ರಾಹಿಂ ನಂಟಿನ ಆರೋಪದ ಜೆಟ್ ಏರ್‌ವೇಸ್ ನರೇಶ್ ಗೋಯೆಲ್ ಮೇಲೆ ವಿಚಾರಣೆ ಮುಂದುವರೆಸಲಿಲ್ಲ.

ನರೇಶ್ ಗೋಯೆಲ್ ಜೊತೆ ಮೋದಿ (ಫೋಟೊ ಕೃಪೆ: ಡಿಎನ್ಎ)

ವಿಚಾರಣೆ ನಡೆಸುವ ಮಾತು ಒತ್ತಟ್ಟಿಗಿರಲಿ, ಈಗ ಇದೇ ಮೋದಿಯವರ ಸರ್ಕಾರ ಜೆಟ್ ಏರ್‌ವೇಸ್ ನಷ್ಟಕ್ಕೆ ಸಿಲುಕಿದ ಕೂಡಲೇ ಅದಕ್ಕೆ ನೆರವಾಗಲು ತಡಬಡಾಯಿಸಿ ಸಭೆ ನಡೆಸುತ್ತಿದೆ. ಮೂಲಗಳು ಹೇಳುವ ಪ್ರಕಾರ ತನ್ನನ್ನು ನಷ್ಟದಿಂದ ಮೇಲೆತ್ತಲು ಸರ್ಕಾರ ಮುಂದೆ ಬರಬೇಕು, ಸಾಲದ ಭಾರದಿಂದ ಹೊರಬರಲು ‘ಬೇಲ್‌ಔಟ್’ ನೀಡಬೇಕು ಎಂದು ಒತ್ತಾಯಿಸುತ್ತಿರುವ ನರೇಶ್ ಗೋಯೆಲ್‌ಗೆ ‘ಸಾಲಮನ್ನಾ’ ಭಾಗ್ಯ ಕರುಣಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆಯಂತೆ. ಅಂದರೆ ದೇಶದ ದುಷ್ಮನ್ ದಾವೂದ್ ಇಬ್ರಾಹಿಂನ ಬೇನಾಮಿ ಹಣ ಹೂಡಿಕೆಯ ಗುಮಾನಿಯಿರುವ ಸಂಸ್ಥೆಯ ನಷ್ಟವನ್ನು ಸರಿದೂಗಿಸಲು ಚೌಕಿದಾರ್ ಮೋದಿಯವರ ಸರ್ಕಾರ ಜನರ ತೆರಿಗೆ ಹಣ ವ್ಯಯಿಸುವ ಇರಾದೆಯಲ್ಲಿದೆ ಅಂದಂತಾಯ್ತು.

ಇದಕ್ಕಿಂತ ವಿಪರ್ಯಾಸ ಮತ್ತೊಂದಿದ್ದೀತೆ……….!!!! ದಾವೂದ್ ಇಬ್ರಾಹಿಂಗೂ ಸಹಾ ಇವರೇ ಚೌಕೀದಾರ್ ಎಂದಾಗಬಾರದು. ಯಾವ ಬೇಲ್‌ಔಟ್ ಸಹಾ ನೀಡದೇ, ದಾವೂದ್ ಕನೆಕ್ಷನ್ ಕುರಿತು ಇರುವ ಮಾಹಿತಿ ಆಧರಿಸಿ, ಅಧಿಕೃತ ನಿಷ್ಠುರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯುವುದು ಭಾರತದ ಜನತೆಯ ಹಿತಾಸಕ್ತಿಯ ದೃಷ್ಟಿಯಿಂದ ಅತ್ಯಂತ ಅಗತ್ಯ.

ಹೆಚ್ಚಿನ ವಿವರಗಳಿಗೆ ಈ ಕೆಳಗಿನ ಲಿಂಕ್‌ಗಳನ್ನು ನೋಡಬಹುದು. ಇನ್ನೂ ಹೆಚ್ಚಿನ ಮಾಹಿತಿ ’ಫೀಸ್ಟ್ ಆಫ್ ವಲ್ಚರ‍್ಸ್’ ಪುಸ್ತಕದಲ್ಲಿ ದೊರೆಯುತ್ತದೆ.

https://www.bloombergquint.com/politics/did-dawood-ibrahim-aid-jet-airways-rise-new-book-reveals-all-josy-joseph

https://www.newsclick.in/why-people-josy-joseph-heroes-without-cape-make-india-what-it

https://www.outlookindia.com/magazine/story/a-jet-propelled-by-don-ibrahim/297557

https://www.businesstoday.in/current/corporate/jet-airways-pmo-meeting-lenders-sbi-naresh-goyal-airline/story/336775.html

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...