Homeಮುಖಪುಟತೆರಿಗೆ ಹೆಸರಲ್ಲಿ ಮೋದಿ ಸರ್ಕಾರದ ಸುಲಿಗೆ

ತೆರಿಗೆ ಹೆಸರಲ್ಲಿ ಮೋದಿ ಸರ್ಕಾರದ ಸುಲಿಗೆ

- Advertisement -
- Advertisement -
  • ವಿಕಾಸ್ ಆರ್. ಮೌರ್ಯ |

2012ರ ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಸಭೆ ಚುನಾವಣೆ ಆದತಕ್ಷಣ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದ್ದವು. ಬಿಜೆಪಿ ಮತ್ತು ಎಡಪಕ್ಷಗಳು ಬೀದಿಗಿಳಿದು ಯುಪಿಎ ಸರ್ಕಾರದ ವಿರುದ್ಧ ಹೋರಾಡಿದ್ದವು. ಜನರು ಸಹ ಬೇಸತ್ತುಹೋಗಿದ್ದರು. ಮಾಧ್ಯಮಗಳಂತೂ ದಿನಗಟ್ಟಲೆ ಬೆಲೆ ಏರಿಕೆಯ ವಿರುದ್ಧದ ಹೋರಾಟವನ್ನು ಪ್ರಸಾರ ಮಾಡಿದ್ದವು, ಜೊತೆಗೆ ತೈಲಬೆಲೆ ಏರಿಕೆಯನ್ನು ಪ್ರಧಾನ ವಿಚಾರವಾಗಿ ಚರ್ಚಿಸಿದ್ದರು. ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಬ್ಯಾರೆಲ್ಲಿಗೆ 113 ಡಾಲರ್ ಇದ್ದದ್ದನ್ನು ಮುಂದು ಮಾಡಿ ಯುಪಿಎ ಸರ್ಕಾರ ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿತ್ತು. ಜೊತೆಗೆ ರಾಜ್ಯ ಸರ್ಕಾರಗಳಿಗೆ ತಮ್ಮ ಪಾಲಿನ ತೆರಿಗೆಯನ್ನು ಕಡಿಮೆ ಮಾಡಿಕೊಳ್ಳಲು ತಿಳಿಸಿತ್ತು. ಇಂತಹ ಪರಿಸ್ಥಿತಿಯಲ್ಲೂ ಮನಮೋಹನ್ ಸಿಂಗ್ ಅವರ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ರೂ. 73 ಮತ್ತು ರೂ. 64 ರೂಪಾಯಿಗಳಿತ್ತು. ಪೆಟ್ರೋಲ್ ಗರಿಷ್ಠ ರೂ. 76 ಮುಟ್ಟಿತ್ತು. ಆದರೆ ಅಂದು ಯುಪಿಎ ಸರ್ಕಾರದ ತೈಲ ಬೆಲೆ ಏರಿಕೆ ವಿರುದ್ಧ ಬೀದಿಗಿಳಿದು ಬೊಬ್ಬಿರಿದಿದ್ದ ಬಿಜೆಪಿಯವರು ತಮ್ಮದೇ ಆಡಳಿತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ರೂ. 84 ಮತ್ತು ರೂ. 68 ಆಗಿರುವುದಕ್ಕೆ ತುಟಿ ಬಿಚ್ಚುತ್ತಿಲ್ಲ. ಬದಲಾಗಿ ಈ ಹಿಂದೆ ಯುಪಿಎ ಸರ್ಕಾರ ರಾಜ್ಯಗಳಿಗೆ ತಾಕೀತು ಮಾಡಿದಂತೆ ರಾಜ್ಯ ತೆರಿಗೆ ಕಡಿಮೆ ಮಾಡುವಂತೆ ಒತ್ತಾಯಿಸುತ್ತಿದೆ.

ಈ ರೀತಿಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಸತ್ಯವೆಂದರೆ ತೈಲ ಬೆಲೆ ಏರಿಕೆಯ ಹಿಂದೆ ಕೇಂದ್ರ ಸರ್ಕಾರದ ಹೆಚ್ಚು ಪಾಲಿದೆಯಾದರೂ ರಾಜ್ಯದ ಪಾಲನ್ನು ಕಡೆಗಣಿಸುವಂತಿಲ್ಲ. ಜೊತೆಗೆ ಸರ್ಕಾರಗಳ ನೀತಿಗಳ ಮೇಲೆ ನಿಯಂತ್ರಣ ಹೊಂದಿರುವ ಖಾಸಗಿ ತೈಲ ಕಂಪೆನಿಗಳ ದಂಧೆಯ ಪಾಲನ್ನೂ ಕಡೆಗಣಿಸುವಂತಿಲ್ಲ.

ತೈಲಬೆಲೆ ಏರಿಕೆಯ ಮೂಲ 90ರ ದಶಕದಲ್ಲಿ ಹಂತಹಂತವಾಗಿ ಭಾರತದಲ್ಲಿ ಜಾರಿಯಾದ ಮುಕ್ತ ಮಾರುಕಟ್ಟೆ ನೀತಿಯಲ್ಲಿದೆ. ಎಲ್.ಪಿ.ಜಿ (ಉದಾರಿಕರಣ, ಖಾಸಗೀಕರಣ, ಜಾಗತೀಕರಣ) ಯಿಂದಾಗಿ ಭಾರತ ‘ಮುಕ್ತ ಮಾರುಕಟ್ಟೆ’ಗೆ ತೆರೆದುಕೊಳ್ಳುತ್ತಾ ಹೋಯಿತು. ಇದರ ಪರಿಣಾಮವಾಗಿ ಖಾಸಗಿ ಕಂಪೆನಿ ಲೂಟಿಕೋರರು ಸರ್ಕಾರದ ನೀತಿಗಳ ಮೇಲೆ ನಿಯಂತ್ರಣ ಸಾಧಿಸುತ್ತಾ ಹೋದರು. ಕ್ರಮೇಣ ಸಾರ್ವಜನಿಕ ವಲಯಕ್ಕೆ ಸರ್ಕಾರಗಳು ನೀಡುತ್ತಿದ್ದ ‘ಸಬ್ಸಿಡಿ’ ಗಳ ಮೇಲೆ ಕಣ್ಣಿಟ್ಟ ಖಾಸಗಿ ಕುಳಗಳು ‘ಸಬ್ಸಿಡಿ’ ಗಳನ್ನು ಕಡಿತಗೊಳಿಸಲು ಸರ್ಕಾರದ ಮೇಲೆ ಒತ್ತಡ ಹೇರಿದವು. ಬಂಡವಾಳಶಾಹಿಗಳ ಮೇಲೆ ಅವಲಂಬಿತವಾದ ಸರ್ಕಾರಗಳು ಅವರಿಗೆ ರತ್ನಗಂಬಳಿ ಹಾಸುತ್ತಾ ಬಂದು ಇಂದು ಭಾರತ ದೇಶವನ್ನು ಈ ಸ್ಥಿತಿಯಲ್ಲಿಟ್ಟಿವೆ. ಈ ಬೆಳವಣಿಗೆ ಮೋದಿ ಸರ್ಕಾರದಲ್ಲಿ ಇನ್ನಿಲ್ಲದಷ್ಟು ಹದ್ದು ಮೀರಿದೆ.

ತೈಲಬೆಲೆ ಏರಿಕೆಯಲ್ಲೂ ಇದೇ ‘ಮುಕ್ತಬೆಲೆ ನೀತಿ’ ಪ್ರಮುಖ ಪಾತ್ರ ವಹಿಸಿದೆ. ಇಂಧನ ಬೆಲೆಯನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಬೆಲೆ ನೀತಿಗೊಳಪಡಿಸಬೇಕೆಂದು ಮೊದಲು ತೀರ್ಮಾನಿಸಿದ್ದು 1997 ರ ಯುನೈಟೆಡ್ ಫ್ರಂಟ್‌ನ ದೇವೇಗೌಡರ ಸರ್ಕಾರ. ಆದರೆ ಆ ಸರ್ಕಾರ ಅಲ್ಪಾಯುಷಿಯಾಗಿದ್ದುದರಿಂದ 2002 ರಲ್ಲಿ ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ತೈಲಬೆಲೆಯನ್ನು ಮುಕ್ತಬೆಲೆ ನೀತಿಗಳವಡಿಸುವ ಖಚಿತ ನಿರ್ಧಾರ ತೆಗೆದುಕೊಂಡಿತು. ಆದರೆ ವಿರೋಧ ಪಕ್ಷಗಳ ವಿರೋಧದಿಂದ ಅದು ಜಾರಿಗೊಳ್ಳಲಿಲ್ಲ. ಈ ಬೆಳವಣಿಗೆ ಭಾರತದ ಖಾಸಗಿ ತೈಲ ಸಂಸ್ಕರಣೆ ಮತ್ತು ವಿತರಣೆ ಕಂಪೆನಿಗಳಾದ ಶೆಲ್, ರಿಲಯನ್ಸ್ ಮತ್ತು ಎಸ್ಸಾರ್‌ಗಳಿಗೆ ಹಲವು ತೊಡಕುಂಟುಮಾಡಿತು. ಕೇಂದ್ರ ಸರ್ಕಾರದ ಸಬ್ಸಿಡಿಯಿಂದಾಗಿ ಸಾರ್ವಜನಿಕ ಸಂಸ್ಥೆಗಳ ಬಂಕ್‌ಗಳು ಪೆಟ್ರೋಲ್ ಮತ್ತು ಡೀಸೆಲ್‌ಗಳನ್ನು ರಿಲಯನ್ಸ್ನಂತ ಖಾಸಗಿ ಬಂಕ್‌ಗಳಿಗಿಂತ ಕಡಿಮೆ ಬೆಲೆಯಲ್ಲಿ ಮಾರುತ್ತಿದ್ದವು. ಈ ಕಾರಣಕ್ಕಾಗಿಯೇ 2004 ರಿಂದ ಯುಪಿಎ ಸರ್ಕಾರದ ಮೇಲೆ ಖಾಸಗಿ ತೈಲ ಕಂಪೆನಿಗಳು ತೈಲಗಳ ಮೇಲಿನ ಸಬ್ಸಿಡಿಯನ್ನು ಹಿಂದೆಗೆದುಕೊಳ್ಳುವಂತೆ ಒತ್ತಾಯಿಸಿದವು. ಇದರ ಭಾಗವಾಗಿಯೇ 2012 ರಲ್ಲಿ ರಚನೆಯಾದದ್ದು ಕೇತನ್ ಪಾರೆಖ್ ಸಮಿತಿ. ಚಿಂತಕ ಶಿವಸುಂದರ್ ಗುರುತಿಸುವಂತೆ ಪಾರೆಖ್ ಸಮಿತಿಯು ‘ಇಂಧನ ಸಬ್ಸಿಡಿ ಹೊರೆಯನ್ನು ಸರ್ಕಾರವಾಗಲೀ, ಸಾರ್ವಜನಿಕ ಇಂಧನ ಕಂಪೆನಿಗಳಾಗಲೀ ಹೊರಲು ಸಾಧ್ಯವಿಲ್ಲವೆಂದೂ ಸರ್ಕಾರ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಮತ್ತು ಅಡುಗೆ ಅನಿಲಗಳಿಗೆ ಕೊಡುತ್ತಿರುವ ಎಲ್ಲಾ ಸಬ್ಸಿಡಿಯನ್ನೂ ವಾಪಸ್ ತೆಗೆದುಕೊಳ್ಳಬೇಕೆಂದೂ, ಬೆಲೆ ನಿಗದಿಯ ಪರಮಾಧಿಕಾರವನ್ನು ಮಾರುಕಟ್ಟೆಗೆ ಬಿಟ್ಟುಕೊಡಬೇಕೆಂದೂ ಶಿಫಾರಸ್ಸು ಮಾಡಿತು’. ಬಿಜೆಪಿಯ ಆರ್ಥಿಕ ವ್ಯವಹಾರಗಳ ಸೆಲ್ ಸಹ ಪಾರೆಖ್ ವರದಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿತ್ತು!

ಈ ರೀತಿ ಇಂಧನಗಳಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಸಬ್ಸಿಡಿ ನಿಂತಿತು. ಮಾರುಕಟ್ಟೆ ಮುಕ್ತ ನೀತಿಗೆ ಒಳಪಟ್ಟ ಇಂಧನಗಳ ಬೆಲೆಯನ್ನು ಖಾಸಗಿ ತೈಲ ಕಂಪೆನಿಗಳು ನಿರ್ಧರಿಸುವಂತಾಯಿತು. ರಿಲಯನ್ಸ್ ಬಂಕ್‌ಗಳು ಸಾರ್ವಜನಿಕ ಬಂಕ್‌ಗಳಿಗಿಂತ ಒಂದು ರೂಪಾಯಿ ಕಡಿಮೆ ಬೆಲೆಗೆ ಪೆಟ್ರೋಲ್ ಡೀಸೆಲ್ ಮಾರುವಂತಾಯಿತು. ಶೆಲ್ ಪೆಟ್ರೋಲ್ ಬಂಕ್‌ಗಳು ಹೆಚ್ಚು ಸಂಸ್ಕರಿತ ಮತ್ತು ಕಡಿಮೆ ಸಂಸ್ಕರಿತವೆಂಬ ಹೆಸರಲ್ಲಿ ಹಣ ಸುಲಿಯಲು ಆರಂಭಿಸಿದವು. ಇಂದಿನ ಈ ಸ್ಥಿತಿಗೆ ಹಿಂದಿನ ಎಲ್ಲಾ ಸರ್ಕಾರಗಳು ಕಾರಣವಾದರೂ, ಯುಪಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಅಧಿಕಾರ ಹಿಡಿದ ಬಿಜೆಪಿ ಸರ್ಕಾರದಲ್ಲಿ ಯಾವ ವ್ಯತ್ಯಾಸಗಳೂ ಕಾಣಲಿಲ್ಲ. ಬದಲಾಗಿ ಯುಪಿಎ ಸರ್ಕಾರಕ್ಕಿಂತ ಹೆಚ್ಚು ಮೋದಿ ಸರ್ಕಾರ ಜನರ ಮೇಲೆ ತೆರಿಗೆಯ ಹೊರೆ ಏರಿದೆ.

ಆಶ್ಚರ್ಯವೆಂದರೆ ಭಾರತದಿಂದ ತೈಲವನ್ನು ಖರೀದಿಸುವ ಶ್ರೀಲಂಕ, ನೇಪಾಳ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಭಾರತಕ್ಕಿಂತಲೂ ಕಡಿಮೆ ಬೆಲೆಯಲ್ಲಿ ತಮ್ಮ ಪ್ರಜೆಗಳಿಗೆ ಇಂಧನವನ್ನು ನೀಡುತ್ತಿವೆ. ಆದರೆ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕಡಿಮೆಯಾದರೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿತು. ಇದಕ್ಕೆ ಮೋದಿ ಸರ್ಕಾರದ ತುಘಲಕ್ ತೆರಿಗೆ ನೀತಿಯೇ ಕಾರಣವಾಗಿದೆ.

ನಾನಾಗಲೇ ತಿಳಿಸಿದಂತೆ 2012 ರಲ್ಲೂ ಸಹ ಯುಪಿಎ ಸರ್ಕಾರ ಇನ್ನಿಲ್ಲದಂತೆ ತೈಲ ಬೆಲೆ ಏರಿಸಿತ್ತು. ಅದರ ಹಿಂದೆಯೂ ಖಾಸಗಿ ತೈಲ ಕಂಪೆನಿಗಳ ಕೈವಾಡವಿತ್ತು. ಜೊತೆಗೆ ಅಂತಾರಾಷ್ಟ್ರೀಯ ತೈಲ ಬೆಲೆಯೂ ಹೆಚ್ಚಾಗಿತ್ತು. ಅಂತಾರಾಷ್ಟ್ರೀಯ ಕಚ್ಛಾತೈಲ ಬೆಲೆ ಬ್ಯಾರೆಲ್‌ಗೆ 113 ಡಾಲರ್ ಇದ್ದಾಗಲೂ ಮನಮೋಹನ್ ಸಿಂಗ್ ಅವರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ರೂ.73 ಮತ್ತು ರೂ.64ಕ್ಕೆ ನೀಡುತ್ತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದ ಕೆಲವೇ ತಿಂಗಳಲ್ಲಿ, ಅಂದರೆ ಜನವರಿ, 2015 ರಷ್ಟೊತ್ತಿಗೆ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ 50 ಡಾಲರ್‌ಗೆ ಕುಸಿಯಿತು. ಸ್ವತಃ ಮೋದಿಯವರೇ ಇದನ್ನು ಅದೃಷ್ಟವೆಂದು ಹೇಳಿಕೊಂಡಿದ್ದರು. ಈ ಅದೃಷ್ಟ ಮುಂದುವರಿದು ಜನವರಿ, 2016 ರಷ್ಟೊತ್ತಿಗೆ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ 29 ಡಾಲರ್‌ಗೆ ಕುಸಿಯಿತು. ಆದರೆ ಮೋದಿಯವರ ಸರ್ಕಾರ ಜನತೆಯ ಮೇಲೆ ಹೊರೆ ಇಳಿಸಲೇ ಇಲ್ಲ. ಪೆಟ್ರೋಲ್ ಬೆಲೆ ಆಗಲೂ ಪ್ರತಿ ಲೀಟರ್‌ಗೆ ರೂ.60 ಇತ್ತು. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕಚ್ಚಾ ತೈಲ 113 ಡಾಲರ್ ಇದ್ದಾಗ ರೂ.73 ಕ್ಕೆ ಪೆಟ್ರೋಲ್ ದೊರಕುತ್ತಿತ್ತು. ಆದರೆ ಮೋದಿಯವರ ಸರ್ಕಾರದಲ್ಲಿ ಕಚ್ಚಾ ತೈಲ ರೂ.29 ಇದ್ದಾಗಲೂ ಪೆಟ್ರೊಲ್ ರೂ.60 ರಲ್ಲೆ ಏಕೆ ಉಳಿಯಿತು. ಈಗ 72 ಡಾಲರ್ ಇದ್ದಾಗಲೂ ಪ್ರತಿ ಲೀಟರ್‌ಗೆ ರೂ.84 ರಷ್ಟು ಹೆಚ್ಚಾಗಿದ್ದು ಹೇಗೆ? ಉತ್ತರ ಒಂದೇ ಸುಲಿಗೆ. ತೆರಿಗೆ ಎಂಬ ಹೆಸರಿನಲ್ಲಿ ಜನತೆಯ ಸುಲಿಗೆ.

20, ಮೇ 2018 ರಂದು ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಬ್ಯಾರೆಲ್ಲಿಗೆ 72.5 ಡಾಲರ್ ಅಂದರೆ 4930 ರೂಪಾಯಿಗಳು. ಒಂದು ಬ್ಯಾರೆಲ್‌ನಲ್ಲಿ ಸುಮಾರು 159 ಲೀಟರ್ ಇರುತ್ತದೆ. ಅಲ್ಲಿಗೆ ಒಂದು ಲೀಟರ್ ಕಚ್ಚಾ ತೈಲದ ಬೆಲೆ 31 ರೂಪಾಯಿಗಳಾಗುತ್ತದೆ. ಈ ಕಚ್ಚಾ ತೈಲದಿಂದ ಪೆಟ್ರೋಲನ್ನು ಸಂಸ್ಕರಿಸಲು ಪ್ರತಿ ಲೀಟರಿಗೆ 2.62 ರೂಪಾಯಿ ಮತ್ತು ಡೀಸಲ್‌ಗೆ 5.91 ರೂಪಾಯಿ ತಗಲುತ್ತದೆ. ಸರಬರಾಜು ಮತ್ತು ವಿತರಣೆಗೆ ಪೆಟ್ರೋಲ್ ಗೆ 3.31 ರೂಪಾಯಿ ಮತ್ತು ಡೀಸೆಲ್‌ಗೆ 2.87 ರೂಪಾಯಿ ಖರ್ಚಾಗುತ್ತದೆ. ಇವೆರಡನ್ನೂ ಸೇರಿಸಿದ ನಂತರ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ.36.93 ಮತ್ತು ಡೀಸೆಲ್ ರೂ.39.78 ಆಗುತ್ತದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಅಸಲಿ ಬೆಲೆ. ಈ ಬೆಲೆಗೆ ಕೇಂದ್ರ ಸರ್ಕಾರ ಎಕ್ಸೈಜ್ ತೆರಿಗೆ ಮತ್ತು ರೋಡ್ ಟ್ಯಾಕ್ಸ್ ಎಂದು ಪ್ರತಿ ಲೀಟರ್ ಪೆಟ್ರೋಲಿಗೆ ರೂ.19.48 ಮತ್ತು ಡೀಸೆಲ್‌ಗೆ ರೂ.15.33 ಸೇರಿಸುತ್ತದೆ. ರಾಜ್ಯ ಸರ್ಕಾರಗಳು ಇದಕ್ಕೆ ಕ್ರಮವಾಗಿ ವ್ಯಾಟ್ ತೆರಿಗೆ ರೂ.16.21 ಮತ್ತು ರೂ.9.91 ಜೊತೆಗೆ 25 ಪೈಸೆ ಪರಿಸರ ಸೆಸ್ ಸೇರಿಸುತ್ತದೆ. ನಂತರ ಬಂಕ್‌ಗಳು ಕ್ರಮವಾಗಿ ರೂ.3.62 ಮತ್ತು ರೂ.2.52 ಕಮಿಷನ್ ಸೇರಿಸಿ 76.24 ಮತ್ತು 67.54 ಆಗಿದೆ. ಈ ಪರಿಣಾಮದಿಂದಾಗಿಯೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ಐತಿಹಾಸಿಕ ರೂ.84 ಮತ್ತು ರೂ.70 ಮುಟ್ಟಿದೆ.

ಇದು ಇಂಧನ ಬೆಲೆ ಏರಿಕೆಯ ಅಸಲಿಯತ್ತು. ಮೋದಿ ಸರ್ಕಾರ ಬಂದನಂತರ ಇಂಧನ ತೈಲಗಳ ಮೇಲೆ 12 ಬಾರಿ ಎಕ್ಸೈಸ್ ತೆರಿಗೆಯನ್ನು ಏರಿಸಲಾಗಿದೆ. ಅಂದರೆ ಪೆಟ್ರೋಲ್ ಮೇಲೆ ಶೇ.54 ರಷ್ಟು, ಡೀಸೆಲ್ ಮೇಲೆ ಶೇ.154 ರಷ್ಟು ಪೆಟ್ರೋಲ್ ತೆರಿಗೆಯನ್ನೂ, ಶೇ.46 ರಷ್ಟು ವ್ಯಾಟ್ ತೆರಿಗೆಯನ್ನೂ, ಶೇ.73 ರಷ್ಟು ಡೀಲರ್‌ಗಳ ಕಮಿಷನ್ ಏರಿಸಲಾಗಿದೆ. ಒಂದು ಕಡೆ ಕಚ್ಚಾತೈಲ ಬೆಲೆ ಕುಸಿಯುತ್ತಿದ್ದರೆ ಮತ್ತೊಂದು ಕಡೆ ಮೋದಿಯವರು ಜನತೆಯ ಮೇಲೆ ತೈಲ ಬೆಲೆ ಹೆಚ್ಚು ಮಾಡುತ್ತಾ ಹೋದರು. ಇದರಿಂದಾಗಿ ಮೋದಿ ಸರ್ಕಾರ ತನ್ನ ಖಜಾನೆಯನ್ನು ಜನಸಾಮಾನ್ಯರು ಬೆವರು ಸುರಿಸಿ ಸಂಪಾದಿಸಿದ ಹಣದಿಂದ ತುಂಬಿಸಿಕೊಂಡಿದೆ. 2014-15 ನೇ ಸಾಲಿನಲ್ಲಿ ತೈಲ ತೆರಿಗೆಗಳಿಂದ 99 ಸಾವಿರ ಕೋಟಿ ಖಜಾನೆ ಸೇರಿತ್ತು. ಆದರೆ 2016-17ನೇ ಸಾಲಿನಲ್ಲಿ ಬರೋಬ್ಬರಿ 2.42 ಲಕ್ಷ ಕೋಟಿ ಖಜಾನೆ ಸೇರಿದೆ! ಇದು ಜನರಿಂದ ಮೋದಿಯವರು ಸುಲಿದಿರುವ ಹಣವಲ್ಲದೆ ಬೇರೇನಲ್ಲ.

ಕೊನೆಯದಾಗಿ, ಮತ್ತೊಂದು ಕಡೆ ಮೋದಿಯವರ ಆಡಳಿತದಲ್ಲಿ ಸಾರ್ವಜನಿಕ ಬ್ಯಾಂಕ್‌ಗಳು ಶ್ರೀಮಂತ ಉದ್ಯಮಿಗಳ 2.42 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿವೆ. ಇದರ ಅರ್ಥ ಇಷ್ಟೆ. ಜನರಿಂದ ಸುಲಿಗೆ ಮಾಡಿದ ಹಣವನ್ನು ಸರ್ಕಾರಗಳು ಜನಕಲ್ಯಾಣ ಕಾರ್ಯಗಳಿಗೆ ಬಳಸಲಾರವು. ಬದಲಾಗಿ ಉದ್ಯಮಿಗಳ ಸಾಲಮನ್ನಾ ಮಾಡಲು ಬಳಸಿಕೊಳ್ಳುತ್ತದೆ. ಈ ಶ್ರೀಮಂತರಿಂದ ಸರ್ಕಾರ ನ್ಯಾಯಬದ್ಧವಾಗಿ ಸಾಲ ಮರುಪಾವತಿ ಮಾಡಿಸಿಕೊಂಡಿದ್ದರೆ ಇಂದು ಪೆಟ್ರೋಲ್ ಮತ್ತು ಡೀಸಲ್ ಪ್ರತಿ ಲೀಟರ್‌ಗೆ ಕೇವಲ ರೂ. 30 ಕ್ಕೆ ದೊರಕುತ್ತಿತ್ತು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...