Homeಅಂಕಣಗಳು'ಭಾರತ್ ಸೇವಕ್’ ಸಮಾಜ ಮತ್ತು ನಾನು

‘ಭಾರತ್ ಸೇವಕ್’ ಸಮಾಜ ಮತ್ತು ನಾನು

- Advertisement -
- Advertisement -

1952ರಲ್ಲಿ ನಾನು ಭಾರತ ಸೇವಕ ಸಮಾಜದ ಸಂಚಾಲಕನಾದೆ. ಭಾರತ ಸೇವಕ ಸಮಾಜ ಜವಾಹರ ಲಾಲರ ಕನಸಿನ ಕೂಸು. ಭಾರತ ಸೇವಕ ಸಮಾಜ ಬಡವರ, ದಲಿತರ, ಶೋಷಣೆಗೊಳಗಾದವರ ಸಲುವಾಗಿ ಕೆಲಸ ಮಾಡುವ ಸೇವಾ ಸಂಸ್ಥೆ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿರುವ ನುರಿತ ಸಮಾಜ ಸೇವಕರು ತಮ್ಮದೇ ರೀತಿಯಲ್ಲಿ ಪ್ರಯೋಗಾರ್ಥವಾಗಿ ಸಮಾಜದ ಉಪೇಕ್ಷೆಗೊಳಗಾದವರ ಒಳಿತಿಗಾಗಿ ಪ್ರಯೋಗಗಳನ್ನು ನಡೆಸತಕ್ಕ ಜವಾಬ್ದಾರಿ ಸಂಚಾಲಕರ ಮೇಲಿತ್ತು. ಇವರು ಕೈಗೊಂಡ ಪ್ರಯೋಗಗಳು ಪೂರ್ಣ ಫಲ ನೀಡಿದರೆ ಅಂತಹ ಪ್ರಯೋಗಗಳನ್ನು ಪೈಲಟ್ ಪ್ರಾಜೆಕ್ಟ್ ಎಂದು ಭಾರತ ಸರ್ಕಾರ ಅಂಗೀಕರಿಸಿ ಆ ಪ್ರಯೋಗಗಳನ್ನು ದೇಶಾದ್ಯಂತ ಜಾರಿಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳುತ್ತಿತ್ತು. ಭಾರತ ಸೇವಕ ಸಮಾಜ ಪರಿಣಾಮಕಾರಿಯಾಗಿ ಪ್ರಯೋಗಗಳನ್ನು ಕೊಡಬೇಕೆಂಬುದು ಸರ್ಕಾರದ ಆಶಯವಾಗಿತ್ತು. ಪ್ರಧಾನಿ ಜವಹರಲಾಲ್ ನೆಹರುರವರು ಭಾರತ ಸೇವಕ ಸಮಾಜದ ರಾಷ್ಟ್ರಾಧ್ಯಕ್ಷರಾಗಿದ್ದರು. ಸಚಿವ ಗುಲ್ಚಾರಿಲಾಲ್ ನಂದ ಅದರ ಕಾರ್ಯಾಧ್ಯಕ್ಷರಾಗಿದ್ದರು.
ಮೈಸೂರು ಸಂಸ್ಥಾನದ ಘಟಕಕ್ಕೆ ಸಂಚಾಲಕನಾದ ಮೇಲೆ ನಾನು ಎರಡು ಕೊಳಗೇರಿಗಳನ್ನು ಆಯ್ಕೆ ಮಾಡಿಕೊಂಡು ಪ್ರಯೋಗ ಮಾಡತೊಡಗಿದೆ. ಅವುಗಳೆಂದರೆ ಬೆಂಗಳೂರು ವಿಜಯ ಕಾಲೇಜ್ ಹಿಂಭಾಗದಲ್ಲಿರುವ ದಾಸರ ಕಾಲೋನಿ ಹಾಗೂ ಮೈಸೂರು ರಸ್ತೆಯಲ್ಲಿರುವ ವಾಲ್ಮೀಕಿ ನಗರ. ಜಯನಗರದ ದಾಸರ ಕಾಲೋನಿ ಬಹಳ ಹಳೆಯ ಕೊಳೆಗೇರಿ. ಅಲ್ಲಿನ ನಿವಾಸಿಗಳು ಬ್ರಿಟಿಷ್ ಸೈನ್ಯದ ಕುದುರೆಗಳನ್ನು ತೊಳೆಯುವ ಕೆಲಸ ಮಾಡುತ್ತಿದ್ದರು. ಅವರದು 23 ಗುಡಿಸಲುಗಳು ಇದ್ದವು. ಆ ಕೊಳೆಗೇರಿಯ ಸ್ವಚ್ಛತಾ ಕಾರ್ಯವನ್ನು ಮೊದಲು ಕೈಗೆತ್ತಿಕೊಳ್ಳಲಾಯಿತು. ಈ ಕೆಲಸದಲ್ಲಿ ಸ್ವಯಂಸೇವಕರಾಗಿ ಆಗ ವಿದ್ಯಾರ್ಥಿಗಳಾಗಿದ್ದ ಎಂ.ಆರ್.ದೊರೆಸ್ವಾಮಿ, ಮುಂದೆ ಶಾಸಕರಾದ ವಕೀಲ ಸುಬ್ಬಾರೆಡ್ಡಿ ಮುಂತಾದವರು ತೊಡಗಿಸಿಕೊಳ್ಳುತ್ತಿದ್ದರು. ಜಯನಗರ ಆ ಹೊತ್ತಿಗೆ ಉತ್ತಮ ಬಡಾವಣೆಯಾಗಿ ರೂಪಿತವಾಗಿತ್ತು. ಉನ್ನತಾಧಿಕಾರಿಗಳು, ಪ್ರತಿಷ್ಟಿತ ವ್ಯಕ್ತಿಗಳು ಸುಸಜ್ಜಿತ ಮನೆಗಳನ್ನು ಕಟ್ಟಿಕೊಂಡಿದ್ದರು. ಅವರಿಗೆ ಈ ಕೊಳೆಗೇರಿ ಅಲ್ಲಿರುವುದು ಸರಿಕಾಣಲಿಲ್ಲ. ದಾಸರ ಕಾಲೋನಿ ಖಾಲಿಮಾಡಿಸಿ, ಅಲ್ಲಿದ್ದವರನ್ನು ಓಡಿಸಿಬಿಡುವ ಪ್ರಯತ್ನದಲ್ಲಿದ್ದರು. ಈ ಕೊಳೆಗೇರಿ ನಿವಾಸಿಗಳನ್ನು ಅಲ್ಲಿಯೇ ಉಳಿಸಿ ಅವರ ಜೀವನ ಶೈಲಿ ಬದಲಾಯಿಸಲಿಕ್ಕಾಗಿ ಗುಡಿಸಲುಗಳನ್ನು ತೆಗೆದು ಮನೆಗಳನ್ನು ಕಟ್ಟಿಸಿಕೊಡುವ ತೀರ್ಮಾನ ತೆಗೆದುಕೊಂಡೆ. ಬೆಂಗಳೂರು ನಗರಾಭಿವೃದ್ಧಿ ಸಮಿತಿಗೆ ಆಗ ದೀನದಯಾಳು ನಾಯ್ಡು ಛೇರ್‍ಮನ್ ಆಗಿದ್ದರು. ಅವರು ಬೆಂಗಳೂರು ನಗರ ಮೇಯರ್ ಆಗಿದ್ದವರು. ಅವರು ವಿದ್ಯಾರ್ಥಿ ದೆಸೆಯಲ್ಲೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸೆರೆಮನೆವಾಸವನ್ನೂ ಅನುಭವಿಸಿದ್ದರು.
ಅವರ ಮುಖಾಂತರ ದಾಸರ ಕಾಲೋನಿಯ ಗುಡಿಸಲುಗಳನ್ನು ತೆರವುಗೊಳಿಸಿ ಅಲ್ಲಿ ಮನೆಗಳನ್ನು ಕಟ್ಡಿಕೊಡಲು ವಿನಂತಿ ಮಾಡಿಕೊಂಡೆ. ದೀನ ದಯಾಳು ನಾಯ್ಡು ಈ ನನ್ನ ಸಲಹೆಗೆ ಒಪ್ಪಿದರು. ದಾಸರ ಕಾಲೋನಿ ವಾಸಿಗಳು ತಾವೇ ಗುಡಿಸಲುಗಳನ್ನು ತೆಗೆದು ಜಾಗ ಖಾಲಿ ಮಾಡಿಕೊಟ್ಟರು. 23 ಮನೆಗಳನ್ನು ಕಟ್ಟಲಾಯಿತು. ಪ್ರತಿ ಮನೆಗೂ ಒಂದು ಮಲಗುವ ಕೋಣೆ, ಒಂದು ಹಜಾರೆ, ಒಂದು ಅಡುಗೆ ಕೋಣೆಯನ್ನೊಳಗೊಂಡ ಮನೆಗಳು ತಯಾರಾದವು. ಆ ಮನೆಗಳನ್ನು ಕಟ್ಟಿ ಇಲ್ಲಿಗೆ 50 ವರ್ಷಗಳಾಗಿವೆ. ಈಗ ದಾಸರ ಕಾಲೋನಿಯ ಮಕ್ಕಳೆಲ್ಲ ಓದಿ ಮುಂದಕ್ಕೆ ಬಂದಿದ್ದಾರೆ. ಅನೇಕರು ಫ್ಯಾಕ್ಟರಿಗಳಲ್ಲಿ, ಖಾಸಗಿ ಉದ್ಯಮಿಗಳ ಬಳಿ ಕೆಲಸ ಮಾಡುತ್ತಾರೆ. ದಾಸರ ಕಾಲೋನಿಯ ಜನರಿಗೆ ಒಂದು ರೀತಿಯಲ್ಲಿ ಶಾಪವಿಮೋಚನೆ ಆಗಿದೆ. ಕೊಳಗೇರಿಯನ್ನು ಕಾಲಿ ಮಾಡಿಸಲು ತುದಿಗಾಲಲ್ಲಿ ನಿಂತಿದ್ದ ಸಭ್ಯಸ್ಥರಿಗೂ ಅಲ್ಪಸ್ವಲ್ಪ ಸಮಾಧಾನವಾಗಿರಬಹುದು.
ವಾಲ್ಮೀಕಿ ನಗರ ಒಂದು ಹರಿಜನ ಕಾಲೋನಿ. ಸಂಪಂಗಿರಾಮ ನಗರದ ಕಡೆ ಇದ್ದ ಜನರನ್ನು ಬೆಂಗಳೂರು ಬೆಳೆದಂತೆ ದೂಡುತ್ತಾ ಮೈಸೂರು ರೋಡಿಗೆ ತಂದು ದಬ್ಬಿದ್ದರು. ಇಲ್ಲಿನ ಬಹುತೇಕರು ಬೂಟು, ಚಪ್ಪಲಿ ತಯಾರಿಸುವುದರಲ್ಲಿ ಪರಿಣಿತರಿದ್ದರು. ಆ ಏರಿಯಾದಲ್ಲಿ ಒಂದು ಚಪ್ಪಲಿ ಉದ್ಯಮವನ್ನು ನೊಂದಾವಣೆ ಮಾಡಿಸಿ, ಒಂದು ಕಾರ್ಯಾಗಾರ ಕಟ್ಟಿಸಿದೆ. ಕೇಂದ್ರ ಸರ್ಕಾರದ ಸಣ್ಣ ಕೈಗಾರಿಕೆಗಳ ನಿಗಮದಿಂದ 2 ಲಕ್ಷ ರೂಪಾಯಿ ಸಹಾಯಧನ ದೊರಕಿತು. 40 ಜನರನ್ನು ಕೆಲಸಕ್ಕೆ ತೆಗೆದುಕೊಂಡು ಅವರಿಗೆ ಬೇರೆಯವರು ಕೊಡುವುದಕ್ಕಿಂತ ಹೆಚ್ಚಿಗೆ ಮಜೂರಿ ಕೊಡಲಾಯಿತು. ಬಂದ ಕಾಸಿನಿಂದ ಹೋಲ್‍ಸೇಲ್‍ದರದಲ್ಲಿ ಚರ್ಮವನ್ನು ಖರೀದಿಸಲಾಯಿತು. ಕೆಲವು ಯಂತ್ರ ಸಾಮಗ್ರಿಗಳನ್ನೂ ಕೊಳ್ಳಲಾಯಿತು. ಅವರು ತಯಾರಿಸುವ ಬೂಟ್‍ಗೆ ‘ಭಾರತ್ ಸೇವಕ್’ ಎಂದು ನಾಮಕರಣ ಮಾಡಲಾಯಿತು. ಕೆಲಸ ಬಿರುಸಿನಿಂದ ನಡೆಯಿತು. ಶೂ ಅಂಗಡಿಯವರು ಬೂಟು ಚಪ್ಪಲಿಗಳನ್ನು ಹೋಲ್‍ಸೇಲ್ ದರದಲ್ಲಿ ಕೊಂಡುಕೊಳ್ಳುತ್ತಿದ್ದರು.
ಈ ಮಧ್ಯೆ ಒಂದು ಸಮಸ್ಯೆ ಎದುರಾಯಿತು. ಶನಿವಾರ ಕಾರ್ಮಿಕರಿಗೆ ವಾರದ ಬಟವಾಡೆ ಮಾಡಿದರೆ ಅವರು ಸೋಮವಾರ, ಮಂಗಳವಾರ ಕೆಲಸಕ್ಕೆ ಗೈರುಹಾಜರಾಗುತ್ತಿದ್ದರು. ಪಡೆದ ಹಣದ ಬಹುಭಾಗ ಅವರ ಕುಡಿತಕ್ಕೆ ಹೋಗುತ್ತಿತ್ತು. ಇದನ್ನು ಗಮನಿಸಿ ಕೆಲಸಗಾರರಿಗೆ ಶನಿವಾರ 15ರೂ ಕೊಡುವುದು, ಉಳಿದ ಹಣಕ್ಕೆ ಅವರ ಮನೆಗೆ ಬೇಕಾದಷ್ಟು ರೇಷನ್, ಅಕ್ಕಿ, ರಾಗಿ, ನುಚ್ಚು ಹಾಗೂ ಇತರ ಪರಿಗಳನ್ನು ಹೋಲ್‍ಸೇಲ್‍ನಲ್ಲಿ ಕೊಂಡು ತಂದು ಅವರ ಮನೆಗಳಿಗೆ ತಂದು ಹಾಕುವುದೆಂದು ನಿರ್ಧರಿಸಿದೆವು. ಈ ಏರ್ಪಾಡಿನಿಂದ ಅವರ ಮನೆಮಂದಿಗೆ ಊಟ ಸಿಗೋದು ಖಾತ್ರಿಯಾಯ್ತು. ಕೆಲಸಗಾರರು ತಪ್ಪಿಸಿಕೊಳ್ಳದೆ ಪ್ರತಿದಿನವೂ ಕೆಲಸಕ್ಕೆ ಬರುವಂತಾಯಿತು. ಆಗಾಗ ನಾವು ಅವರ ಮನೆಗಳಿಗೆ ಹೋಗಿ ಕೊಡಿಸಿದ್ದ ರೇಷನ್ ಇದೆಯೋ, ಇಲ್ಲ ಮಾರಿಹಾಕಿಬಿಟ್ಟಿದ್ದಾರೆಯೋ ಎಂದು ತನಿಖೆ ನಡೆಸುತ್ತಿದ್ದೆವು.
ಇದಲ್ಲದೆ ಕೊಳಚೆಯಿಂದ ಕೂಡಿದ್ದ ಈ ಸ್ಲಂ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳಲು ಅಲ್ಲಿಯ ಯುವಕರ ತಂಡವೊಂದನ್ನು ರಚಿಸಿದೆ. ಸಣ್ಣ ಮಕ್ಕಳಿಗಾಗಿ ಒಂದು ಕ್ರಷ್, 3 ರಿಂದ 5 ವರ್ಷದ ಮಕ್ಕಳಿಗೆ ಒಂದು ನರ್ಸರಿ ಸ್ಥಾಪಿಸಲಾಯಿತು. ಈ ಮಕ್ಕಳಿಗೆಲ್ಲಾ ಹಾಲು, ಹಣ್ಣಿನ ರಸ ಹಂಚುವ ವ್ಯವಸ್ಥೆಯಾಯಿತು. ಕೇರಿಯ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕೆಂದು ಒತ್ತಾಯ ತಂದ ಕಾರಣದಿಂದಾಗಿ ಎಲ್ಲಾ ಮಕ್ಕಳಿಗೂ ಶಿಕ್ಷಣ ದೊರಕಿತು. ಸ್ಲಂನಲ್ಲಿ ಜಗಳವಾದರೆ ಇದನ್ನು ಪರಿಹರಿಸಲು ಊರಿನ ಯಜಮಾನರ ತಂಡವಿತ್ತು. ಇವರು ವಿಚಾರಣೆ ನಡೆಸಿ ಎರಡೂ ಬಣದವರಿಗೂ ಜುಲ್ಮಾನೆ ಹಾಕಿ ಬಂದ ಹಣವನ್ನು ಕುಡಿಯಲು ಬಳಸುತ್ತಿದ್ದರು. ಅದನ್ನೂ ತಪ್ಪಿಸಿ, ಊರಿನ ಎಲ್ಲರ ಸಭೆ ಕರೆದು ಅವರೆದುರಿನಲ್ಲಿ ವ್ಯಾಜ್ಯಗಳನ್ನು ಪರಿಹರಿಸಲು ಆರಂಭಮಾಡಿದೆ. ಕಾಲಕ್ರಮೇಣ ಜಗಳ, ಕದನಗಳು ನಿಂತುಹೋದವು.
ಸ್ಲಂನಲ್ಲಿ ಕೊಳೆತ ಹಣ್ಣುಗಳು, ಕೊಳೆತ ತರಕಾರಿಗಳನ್ನು ಮಾರಲಾಗುತ್ತಿತ್ತು. ಅವನ್ನು ತಪ್ಪಿಸಿ, ತಾಜಾ ಹಣ್ಣು ತರಕಾರಿಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಯಿತು. ಹೀಗೆ ನನಗೆ ಸಾಮಾಜಿಕ ಜವಾಬ್ದಾರಿಗಳು ಹೆಚ್ಚುತ್ತಿದ್ದಂತೆ, ಹಣಕಾಸಿನ ವಹಿವಾಟು ನೋಡಿಕೊಳ್ಳಲು ಮ್ಯಾಸ್ಕರ್‍ನಾಸ್ ಎಂಬ ಸಜ್ಜನರನ್ನು ವಿನಂತಿಸಿಕೊಂಡೆ. ಅವರು ಚಾಮರಾಜಪೇಟೆಯಿಂದ ಅಸೆಂಬ್ಲಿ ಸದಸ್ಯರಾಗಿದ್ದವರು. ಎಲ್ಲವೂ ಸುಗಮವಾಗಿ ನಡೆಯಲು ಈ ಏರ್ಪಾಟು ನೆರವಿಗೆ ಬಂದಿತು.
ಇದೆಲ್ಲಾ ನಡೆದು 50 ವರ್ಷಗಳಾಗಿವೆ. ದುಶ್ಚಟಗಳು ಗಣನೀಯವಾಗಿ ಇಳಿಮುಖವಾಗಿದ್ದವು. ಈಗ ವಾಲ್ಮೀಕಿ ನಗರದ ನಿವಾಸಿಗಳು ಆರ್ಥಿಕವಾಗಿ ಸುಧಾರಿಸಿದ್ದಾರೆ. ಕಲಿತ ಯುವಕ-ಯುವತಿಯರ ಸಂಖ್ಯೆ ಗಣನೀಯವಾಗಿದೆ. ಡಿಪ್ಲೊಮಾ, ಡಿಗ್ರಿಗಳನ್ನು ಪಡೆದಿದ್ದಾರೆ. ಅಂದು ನಾನು ಮಾಡಿದ ಸೇವೆ ಒಳ್ಳೆಯ ಫಲವನ್ನು ಕೊಟ್ಟಿದೆ ಎಂಬ ಸಮಾಧಾನ ನನಗಿದೆ.
ಸ್ವಾರ್ಥ ಫಲಾಪೇಕ್ಷೆಯಿಲ್ಲದೆ ಸಮಾಜಮುಖಿಯಾಗಿ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡರೆ ಸಮಾಜದಿಂದ ಉತ್ತಮ ಸ್ಪಂದನೆ ಸಿಗುತ್ತದೆ ಎಂಬುದಕ್ಕೆ ಇವು ನಿದರ್ಶನ ಎನ್ನಬಹುದು. ರಚನಾತ್ಮಕ ಧೋರಣೆಯಿಂದ, ಸೇವಾ ಭಾವದಿಂದ ಕಾರ್ಯೋನ್ಮುಖರಾಗುವ ಯುವಕ-ಯುವತಿಯರ ಅವಶ್ಯಕತೆ ಹಿಂದಿಗಿಂತಲೂ ಇಂದು ಹೆಚ್ಚಾಗಿಯೇ ಇದೆ. ಇದು ನಿಜವಾದ ಅರ್ಥದಲ್ಲಿ ರಾಷ್ಟ್ರ ನಿರ್ಮಾಣದ ಕಾರ್ಯ ಎಂಬುದನ್ನು ಇಂದಿನ ಪೀಳಿಗೆ ಮನಗಾಣುತ್ತದೆ ಎಂಬ ಆಶಾಭಾವ ನನ್ನದು.

 

– ಹೆಚ್.ಎಸ್.ದೊರೆಸಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...