Homeರಾಜಕೀಯನಮ್ಮ ನಾಯಕರಿಗೆ ಹೋರಾಟದ ಮನೋಭಾವವಿಲ್ಲ. ಅಭಿವೃದ್ಧಿಯ ಕಣ್ಣೋಟವಿಲ್ಲ

ನಮ್ಮ ನಾಯಕರಿಗೆ ಹೋರಾಟದ ಮನೋಭಾವವಿಲ್ಲ. ಅಭಿವೃದ್ಧಿಯ ಕಣ್ಣೋಟವಿಲ್ಲ

- Advertisement -
- Advertisement -

ರಜಾಕ್ ಉಸ್ತಾದರೇ, ಮಾಜಿ ಪ್ರಧಾನಿ ದೇವೇಗೌಡರು ಹೈದ್ರಾಬಾದ್ ಕರ್ನಾಟಕದ ಹಿಂದುಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ್ಯಾವ ಜಾತಿಯ ಮುಖ್ಯಮಂತ್ರಿ ಎಷ್ಟೆಷ್ಟು ಕಾಲ ಅಧಿಕಾರದಲ್ಲಿದ್ದರು, ಅವರ್ಯಾಕೆ ಅಭಿವೃದ್ಧಿ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಇಷ್ಟು ದಿನ ಪಕ್ಷಗಳ ಆಧಾರದಲ್ಲಿ ಆರೋಪ, ಸಮರ್ಥನೆ ನಡೀತಿದ್ವು. ಈಗ ಮಂತ್ರಿ, ಮುಖ್ಯಮಂತ್ರಿಗಳ ಜಾತಿಗಳ ಆಧಾರದಲ್ಲಿ ಅಭಿವೃದ್ಧಿಯ ಚರ್ಚೆ ಆರಂಭವಾಗಿದೆ. ಈ ಬಗ್ಗೆ ಏನಂತೀರಿ?
ನೋಡ್ರೀ, ಪಕ್ಷ ಜಾತಿ ಇವೆರಡನ್ನೂ ಬಿಟ್ಟು ನಾನೂ ಲೆಕ್ಕ ಮಾಡೀನಿ. ನನ್ನ ಲೆಕ್ಕ ಪ್ರದೇಶವನ್ನ ಆಧರಿಸಿದ್ದು. ಕೆಂಗಲ್ ಹನುಮಂತಯ್ಯ, ಅರಸು, ಗುಂಡೂರಾವ್, ಹೆಗಡೆ, ಬಂಗಾರಪ್ಪ, ವೀರಪ್ಪಮೊಯ್ಲಿ, ದೇವೇಗೌಡ, ಇವರೆಲ್ಲಾ ಸೇರಿ ಒಟ್ಟು 35 ವರ್ಷ. ಜೆ.ಹೆಚ್.ಪಟೇಲ್, ನಿಜಲಿಂಗಪ್ಪ, ಯಡಿಯೂರಪ್ಪ, ಸೇರಿ 25ವರ್ಷ ಮುಖ್ಯಮಂತ್ರಿಗಳಾಗಿ ಅಧಿಕಾರ ಮಾಡ್ಯಾರ. ಪ್ರದೇಶವಾರು ಲೆಕ್ಕ ಹಾಕಿದ್ರೆ, ಆಕಡೆ ಮುಂಬೈ ಕರ್ನಾಟಕದಲ್ಲಿ ಬಿ.ಡಿ.ಜತ್ತಿ, ಎಸ್.ಆರ್.ಕಂಠಿ. ಎಸ್.ಆರ್.ಬೊಮ್ಮಾಯಿ, ಜಗದೀಶ್ ಶೆಟ್ರು, ಅವರೆಲ್ಲ ಮುಖ್ಯಮಂತ್ರಿ ಆಗಿದ್ರು, ಸರಿ. ಆದರೆ, ಸ್ವಾತಂತ್ರ್ಯ ಬಂದ 70 ವರ್ಷಗಳಲ್ಲಿ ಹೈದ್ರಾಬಾದ್ ಕರ್ನಾಟಕದವರು ಮುಖ್ಯಮಂತ್ರಿಗಳಾಗಿದ್ದದ್ದು ವೀರೇಂದ್ರ ಪಾಟೀಲರು ಎರಡು ಅವಧಿಗಳಲ್ಲಿ, 3ವರ್ಷ 242ದಿನ, ಧರ್ಮಸಿಂಗ್ 1ವರ್ಷ 253ದಿನ. ಇಬ್ಬರದೂ ಸೇರಿ ಒಟ್ಟು 5ವರ್ಷ 130ದಿನ. ನಾನಿಷ್ಟೇ ಹೇಳೋದು.
ಅಂದ್ರೆ, ದಕ್ಷಿಣ ಕರ್ನಾಟಕದ ರಾಜಕಾರಣಿಗಳೇ ಸಮಗ್ರ ಕರ್ನಾಟಕದ ಅಭಿವೃದ್ಧಿಯನ್ನು ನಿರ್ಧರಿಸುವ ಅಧಿಕಾರ ಇಟ್ಕೊಂಡಾರಾ ಅಂತೀರೇನು?
ಕರ್ನಾಟಕದ ರಾಜಕಾರಣದಲ್ಲಿ ದಕ್ಷಿಣ ಕರ್ನಾಟಕ ಯಾವಾಗ್ಲೂ ಡಾಮಿನೇಶನ್ ಮಾಡಿದೆ. ಅವರು ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿರೋಧ ಮಾಡಿಲ್ಲ, ಆದ್ರೆ ಎಲ್ಲಾ ಯೋಜನೆಗಳನ್ನ ತಮ್ಮ ಕಡೆ ಒಯ್ದಾರ.
ನಮ್ಮ ಭಾಗದ ನಾಯಕರೂ ಈ ಪ್ರದೇಶದ ಅಭಿವೃದ್ಧಿಗಾಗಿ ಯೋಜನೆಗಳನ್ನು ತರುವಲ್ಲಿ ವಿಫಲರಾಗಿದ್ದಾರೆ ಅಲ್ಲವಾ?
ನಮ್ಮ ಭಾಗದ ರಾಜಕೀಯ ನಾಯಕತ್ವದ ವಿಫಲತೆಯನ್ನೂ ನಾವೂ ಒಪ್ಕೋಬೇಕು. ಖರ್ಗೆಯವರು, ಹೆಚ್.ಕೆ.ಪಾಟೀಲ್, ಬಸವರಾಜ್ ಬೊಮ್ಮಾಯಿ, ಎಂ.ಬಿ.ಪಾಟೀಲ್, ಹೀಗೆ ಕಳೆದ 20ವರ್ಷದಲ್ಲಿ ಇವರು ನಾಲ್ಕು ಜನ ನೀರಾವರಿ ಮಂತ್ರಿಗಳಾಗಿದ್ರೂ, ಒಂದೇ ಒಂದು ಪ್ರೊಜೆಕ್ಟ್ ಕಂಪ್ಲೀಟ್ ಮಾಡ್ಕೊಳ್ಳಾಕ ಆಗ್ಲಿಲ್ಲ ನಮ್ಮ ಹಣೇಬರಹಕ್ಕ.
ಹೈ.ಕಕ್ಕೆ ವಿಶೇಷ ಸೌಲಭ್ಯಗಳನ್ನು ಒದಗಿಸುವಂತೆ ಹೋರಾಟ ಮಾಡಿದ್ದರಿಂದ 371ಜೆ ಜಾರಿಯಾಯ್ತು. ಅದರ ಅನುಸಾರ ಈ ಪ್ರದೇಶಕ್ಕೆ ಆದ ಅನುಕೂಲಗಳೇನು?
ಕಳೆದ 5ವರ್ಷಗಳಲ್ಲಿ ನಾವು 2380 ಮೆಡಿಕಲ್ ಸೀಟ್‍ಗಳನ್ನ ತಗೊಂಡೀವಿ. ಇಷ್ಟು ಸೀಟು ಹಿಂದಿನ 20 ವರ್ಷಗಳಲ್ಲಿ ತಗೊಂಡಿರ್ಲಿಲ್ಲ. ಮೊನ್ನೆ 444 ಜನ ಕೆ.ಎ.ಎಸ್. ಆಫೀಸರ್ಸ್ ನೇಮಕ ಆತಲ್ಲಾ, ಅದ್ರಲ್ಲಿ ಹೈ.ಕ.ಭಾಗದಿಂದ 36ಜನ ತಹಸೀಲ್ದಾರರಾಗಿ, 12ಜನ ಅಸಿಸ್ಟೆಂಟ್ ಕಮೀಷನರ್‍ಗಳಾಗಿ ಅಪಾಯಿಂಟ್ ಆಗಿದ್ದಾರ. ಇಡೀ ಇತಿಹಾಸದಲ್ಲಿ ಬರೀ 19 ಜನ ಇದ್ರು. ಇದು ಬದಲಾವಣೆ.
ಹೀಗೆ ನೇಮಕವಾದವರು ಹೈ.ಕ.ಪ್ರದೇಶದಲ್ಲಿಯೇ ಸೇವೆ ಸಲ್ಲಿಸುತ್ತಾರೆ ಅಂತ ಖಾತ್ರಿ ಏನು? ಇವರು ಬೇರೆ ಕಡೆ ಹೋಗೋ ಸಾಧ್ಯತೆ ಅಥವಾ ಬೇರೆಯವರು ಇಲ್ಲಿಗೆ ಬರೋ ಸಾಧ್ಯತೆಯಿಂದ ತೊಂದರೆ ಏನು?
ಸರಕಾರದಿಂದ ಒಂದು ಆದೇಶವಾಗಿದೆ. ಹೈ. ಕದ ಮೀಸಲಾತಿ ಪಡೆದು ಹೊಸದಾಗಿ ಆಯ್ಕೆಯಾದವರು ಕಡ್ಡಾಯವಾಗಿ 10ವರ್ಷ ಹೈ.ಕದಲ್ಲಿ ಸೇವೆ ಸಲ್ಲಿಸಬೇಕು ಅಂತಾ. ಇಲ್ಲಿ ಇನ್ನೊಂದು ಸೂಕ್ಷ್ಮ ಇದೆ. ನಮ್ಮ ಭಾಗದ ಮಂತ್ರಿ, ಶಾಸಕರು ಮಿನಿಟ್ ಕೊಡ್ತಾರ ಟ್ರ್ಯಾನ್ಸ್‍ಫರ್‍ಗಳಿಗೆ. ಅವಾಗ ಅವ್ರು ನಮ್ಮ ಭಾಗದವರಿಗೇ ಕೊಡ್ಬೇಕು. ಇವರೇನು ಮಾಡ್ತಾರ, ಬೇರೆ ಭಾಗದವರನ್ನ ತಂದು ಅಲ್ಲಿ ಹಾಕ್ಕೆಂತಾರ. ಆ ಕೆಲ್ಸ ನಮ್ಮ ಶಾಸಕ, ಮಂತ್ರಿಗಳು ಮಾಡಬಾರದು.
ನಂಜುಂಡಪ್ಪನವರು ಕೂಡ ಅವರ ವರದಿಯಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ, ಹೈ.ಕ. ಹಿಂದುಳಿಯಲು ಮೂಲ ಕಾರಣ ಇಲ್ಲಿರುವ ವರ್ಗಕ್ಕೆ ಆಡಳಿತದಲ್ಲಿ ತಾಂತ್ರಿಕ ನೈಪುಣ್ಯತೆಯಿಲ್ಲ ಅಂತ. 60 ವರ್ಷಗಳಲ್ಲಿ ಇಲ್ಲಿ ಏನಾಗಿತ್ತು ಅಂದ್ರೆ ಉನ್ನತ ಅಧಿಕಾರಿಗಳಾಗಿ ಬಂದವರೆಲ್ಲ ಬಹುತೇಕ ಬೇರೆ ಕಡೆಯಿಂದ ಬಂದವರೇ ಅಗಿದ್ದರಿಂದ ಅವರಿಗೆ ಇಲ್ಲಿಯ ಪ್ರದೇಶಗಳ ಬಗ್ಗೆ ಕಾಳಜಿ ಇಲ್ಲದ್ದರಿಂದ ಅವರು ಬಹುತೇಕ ತಮ್ಮ ಅಮೂಲ್ಯ ಸೇವಾವಧಿಯನ್ನು ಬೇರೆ ಕಡೆ ಕಳೆದು ಇಲ್ಲಿ ಟೈಂಪಾಸಿಗೆಂದು ಬಂದು ಹೋದದ್ದೂ ಈ ಪ್ರದೇಶ ಹಿಂದುಳಿಯಲು ಒಂದು ಕಾರಣ ಆಯಿತು. ಈ ಭಾಗದವರಿಗೇ ಇಲ್ಲಿ ಸೇವೆ ಸಲ್ಲಿಸೋ ಅವಕಾಶ ಸಿಕ್ಕರೆ ಅವರಿಗಿರುವ ಪ್ರಾದೇಶಿಕ ತಿಳಿವಳಿಕೆ, ಜನಸ್ಪಂದನೆ ಅಭಿಮಾನ ಇವುಗಳೆಲ್ಲ ಅಭಿವೃದ್ಧಿಗೆ ಕಾರಣವಾಗ್ತವೆ.
371 ಜೆ ಜಾರಿಗೊಳಿಸುವಲ್ಲಿ ಆಗ್ತಿರೋ ಸಮಸ್ಯೆಗಳೇನು? ಇದರ ಅನುಸಾರ ಸಿಗುವ ಸೌಲಭ್ಯಗಳನ್ನಾದರೂ ಜನಪ್ರತಿನಿಧಿಗಳು ಪ್ರದೇಶಕ್ಕೆ ತಂದುಕೊಳ್ತಿದ್ದಾರಾ?
371ಜೆ ಜಾರಿ ಆಗ್ತಿದೆ, ಇಲ್ಲ ಅಂತಲ್ಲ. ಆದರೆ ಅದು ನಮ್ಮ ಭಾಗಕ್ಕೆ ಅವರ್ಯಾರೋ ಕೊಡ್ತಾ ಇರೋ ಭಿಕ್ಷೆ ಅನ್ನೋ ರೀತಿಯಲ್ಲಿ ಅನುಷ್ಠಾನ ಆಗ್ತಿದೆ. ಹೆಚ್ಚು ಕೊಡು ಅಂತ ಕೇಳೊ ಹಾಗಿಲ್ಲ, ಅವರು ಕೊಡೋ ಹಾಗೂ ಇಲ್ಲ. ನಮ್ಮ ಪರಿಸ್ಥಿತಿ ಹೀಗಾಗಿದೆ. ನಮ್ಮ ಜನ ಕೂಡಾ ಅವ್ರು ಎಷ್ಟು ಕೊಟ್ಟಾರೋ ಅಷ್ಟು ತಗಂಡಾರ. ಇಷ್ಟೇ ಯಾಕೆ ಅಂತಾ ಕೇಳೋರು ಗತಿಯಿಲ್ಲ.
371ಜೆ ಸರಿಯಾಗಿ ಅನುಷ್ಠ್ಠಾನ ಆಗಬೇಕು. ಯಾವ ಅಧಿಕಾರಿ ಕೂಡ ಇದನ್ನು ಮೀರಿ ಅಥವಾ ಅನ್ವಯ ಮಾಡದೇ ತಪ್ಪು ಮಾಡಬಾರದು. ತಪ್ಪು ಮಾಡಿದ ಅಧಿಕಾರಿಯ ಮೇಲೆ ತಕ್ಷಣ, ಕಠಿಣ ಕ್ರಮ ತಗೊಳ್ಳಬೇಕು.
ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಎಷ್ಟು ಸಮರ್ಥರಿದ್ದಾರೆ ನೋಡಿ. ಉದಾಹರಣೆಗೆ ಹೆಚ್.ಕೆ.ಪಾಟೀಲರು ಸಚಿವ ಸಂಪುಟ ಉಪಸಮಿತಿ ಅಧ್ಯಕ್ಷರು ಮತ್ತು ಹಿರಿಯ ಸಚಿವರು. ಇವರು 2015ರ ಅಕ್ಟೋಬರ್ 1ರಂದು, 12ಜನ ಪ್ರಿನ್ಸಿಪಲ್ ಸೆಕ್ರೆಟರಿಗಳಿಗೆ ಪತ್ರ ಬರೀತಾರೆ. `ನೀವು 371ಜೆ ಅನುಷ್ಠಾನ ಮಾಡುವಲ್ಲಿ ವಿಫಲರಾಗಿದ್ದೀರಿ, ಯಾಕೆ ಅನುಷ್ಠಾನ ಆಗಿಲ್ಲ ಅಂತ ನನಗೆ ಒಂದು ಒಂದು ವಾರದಲ್ಲಿ ವರದಿ ಕೊಡ್ರೀ’ ಅಂತ. ಆದ್ರೆ, ಯಾವ ಅಧಿಕಾರೀನೂ ಇವತ್ತಿನ ತನಕ ಉತ್ತರ ಕೊಟ್ಟಿಲ್ಲ, ಇವರಿಗೆ. ಇವರೂ ಮುಂದುವರಿದು ಕ್ರಮಾನೂ ತಗೊಂಡಿಲ್ಲ. ಇದನ್ನು ಎರಡು ರೀತಿಯಿಂದ ಅರ್ಥ ಮಾಡ್ಕೋಬಹ್ದು. ಹೆಚ್.ಕೆ.ಪಾಟೀ¯ರು ವೀಕ್ ಅದಾರ ಅಥವಾ ಹೆಚ್.ಕೆ.ಪಾಟೀಲರಿಗೆ ಹೈ.ಕ.ಬಗ್ಗೆ ನಿಜವಾದ ಕಾಳಜಿಯಿಲ್ಲ ಅಂತ. ಇವರು ನಿಜಕ್ಕೂ ಸ್ಟ್ರಾಂಗ್ ಇದ್ರೆ ಆ ಅಧಿಕಾರಿಗಳ ಮೇಲೆ ಕ್ರಮ ತಗೋಬಹುದಿತ್ತು. ಅದಾಗಿಲ್ಲ. ಇದರರ್ಥವೇನು?
ಹೈ.ಕ.ಅಭಿವೃದ್ಧಿ ಮಂಡಳಿಯಲ್ಲಿ ಸಾಕಷ್ಟು ಹಣ ಇದ್ದರೂ ಅದನ್ನ ಸರಿಯಾಗಿ ಬಳಸಿಕೊಳ್ಳೋದೆ ಇರೋಕೆ ಯಾರು ಕಾರಣ?
ಹೆಚ್.ಕೆ.ಆರ್.ಡಿ.ಬಿ.ಗೆ ಸರಕಾರ ಈ ತನಕ ಒಟ್ಟು 6150 ಕೋಟಿ ಅನುದಾನ ನೀಡಿದೆ, ಇಲ್ಲ ಅಂತಲ್ಲ. ಈ ಹಣವನ್ನ ಯಾವುದಕ್ಕ ಖರ್ಚು ಮಾಡಬೇಕು ಅನ್ನೋ ತಿಳುವಳಿಕೆ ಇರ್ಬೇಕಲ್ಲಾ! ಮಂಡಳಿ ಮಾಡಿದಾರೆ, ಅದಕ್ಕೆ ಛೇರ್ಮನ್ ಮಾಡಿದಾರೆ, ಸದಸ್ಯರಾಗಿ ಎಂ.ಎಲ್.ಸಿಗಳಿದ್ದಾರೆ, ಎಂಪಿ.ಗಳಿದ್ದಾರೆ ಸರಿ. ಆದರೆ ಇವರಿಗೆಲ್ಲ ಆ ಹಣ ಯಾವ ಉದ್ದೇಶಕ್ಕೆ ಬಳಸಬೇಕು ಅನ್ನೋದು ತಿಳಿದಂಗಿಲ್ಲ. ಅವರಿಗೆ ಜನರ ಬೇಡಿಕೆ ಏನು ಅಂತಾನೇ ಗೊತ್ತಿಲ್ಲ.
ವಿಶೇಷ ಅನುದಾನದ ಹಣ ಏತಕ್ಕೆ ಬಳಕೆಯಾಗ್ತಿದೆ? ಏತಕ್ಕೆ ಬಳಕೆಯಾಗಬೇಕು?
ವಿಶೇಷ ಅನುದಾನ ಹಣದಲ್ಲಿ 90% ಅನುದಾನವನ್ನ ರೋಡು ಮತ್ತು ಕಟ್ಟಡಗಳಿಗೆ ಖರ್ಚು ಮಾಡ್ಯಾರ. ನಮ್ಮ ಭಾಗದ ಸಮಸ್ಯೆ ರಸ್ತೆ ಅಷ್ಟೇ ಅಲ್ಲ. ಏನಾಗಬೇಕಂದ್ರೆ ಶಿಕ್ಷಣಕ್ಕೆ ಹೆಚ್ಚು ಖರ್ಚು ಮಾಡಬೇಕು. ನಾನು ಹೇಳಿದ್ದೆ; ಇಡೀ ಹೈ.ಕ.ದ ಎಲ್ಲಾ ರೀತಿಯ ವಿದ್ಯಾರ್ಥಿಗಳ ಎಲ್ಲಾ ರೀತಿಯ ಶುಲ್ಕವನ್ನ ಮಂಡಳಿ ಭರಿಸಲಿ ಅಂತ. ಜಾತಿಗೀತಿ ಏನೂ ನೋಡಬ್ಯಾಡ್ರಿ, ಬಡವ ಶ್ರೀಮಂತ ಅಂತಾನೂ ನೋಡಬ್ಯಾಡ್ರಿ, ಎಲ್ಲಾ ವಿದ್ಯಾರ್ಥಿಗಳ ಎಲ್ಲಾ ಫೀಜು, ಈವನ್ ಹೈಯರ್ ಎಜುಕೇಶನ್, ಪಿ.ಯು.ಸಿ ಅಂಡ್ ಅಬೋವ್ ಎಲ್ಲರಿಗೂ ಕೊಟ್ಟರೂ ವರ್ಷಕ್ಕ 300 ಕೋಟಿ ಆಗುತ್ತ. ಹೀಗಾದ್ರೆ ಯಾವ ಹುಡುಗನೂ ಎಂಜಿನಿಯರಿಂಗ್ ಮೆಡಿಕಲ್, ಟಿ.ಸಿ.ಹೆಚ್, ಬಿ.ಎಡ್. ಯಾರೂ ಬಿಡಾದಿಲ್ಲ. ಎಜುಕೇಶನ್ ಕಂಟಿನ್ಯೂ ಆಗುತ್ತ. ಡ್ರಾಪ್ ಔಟ್ ಆಗೋದೇ ಇಲ್ಲ. ಹೀಗೆ ಹತ್ತು ವರ್ಷ ನಿರಂತರ ಕೊಟ್ರೆ ಈ ಅವಧಿಯಲ್ಲಿ ಹೈ.ಕದ ಶಿಕ್ಷಣರಂಗದÀ ಅಭಿವೃದ್ಧಿಯ ಚಿತ್ರಣವೇ ಬದಲಾಗಿ ಬಿಡ್ತದೆ. ಈ ಮಾತನ್ನ ಮಂಡಳಿಯ ಛೇರ್ಮನ್, ಸದಸ್ಯರತ್ರ ಮಾತಾಡೀನಿ. ‘ಏ ಅದ್ಹೆಂಗ ಕೊಡಾಕಾಗ್ತೈತಿ’ ಅಂತಾರವ್ರು. ಈ ಕಮಿಟಿಗೆ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಅದ. ಆದ್ರ ಇವರೇನು ಮಾಡ್ಯಾರ? ರೋಡ್ ಮಾಡಿದ್ರೆ, ಬಿಲ್ಡಿಂಗ್ ಕಟ್ಟಿಸಿದ್ರೆ, ಕಂಟ್ರ್ಯಾಕ್ಟರ್ಸು ಪರ್ಸಂಟೇಜ್ ಕೊಡ್ತಾರ. ಇಲ್ಲಿ ಕಾಲೇಜಿನವರಿಂದ ಸ್ಟುಡೆಂಟ್ಸ್‍ರಿಂದ ತಗೊಳ್ಳಾಕ ಅಗುತ್ತೇನು? ಇಲ್ಲಲ್ಲ. ಅದಕ್ಕ ಮಾಡಲ್ಲ.
ಕಾವೇರಿಗೆ ಹೋಲಿಸಿದ್ರೆ, ಕೃಷ್ಣಾ ನದಿ ಬಹು ದೊಡ್ಡ ಜಲ ಸಂಪನ್ಮೂಲ. ಅದನ್ನ ಬಳಸಿಕೊಳ್ಳೋದ್ರಲ್ಲಿ ಯಾವ ಅಡಚಣೆಗಳಿವೆ?
ಹೌದು, ಕಾವೇರಿ ನೀರು ಕರ್ನಾಟಕ ರಾಜ್ಯಕ್ಕ ಅಲೋಕೇಶನ್ ಆಗಿರಾದು 270 ಟಿ.ಎಂ.ಸಿ. ಆದರೆ ಕೃಷ್ಣಾದು ಅಲೋಕೇಶನ್ಸ್ ಆಗಿರಾದು 877 ಟಿ.ಎಂ.ಸಿ. ಕಾವೇರಿಗಿಂತ ಮೂರು ಪಟ್ಟು ದೊಡ್ಡ ನದಿ ಕೃಷ್ಣಾ. ತುಂಗಭದ್ರಾ, ಭೀಮ, ಘಟಪ್ರಭ, ಮಲಪ್ರಭಾ, ಅಷ್ಟೂ ಬರ್ತಾವು ಅದ್ರಲ್ಲಿ. 1976ರ ಬಚಾವತ್ ಆಯೋಗದ ತೀರ್ಪಿನಂತೆ ನಮಗೆ 700 ಟಿ.ಎಂ.ಸಿ ನೀರು ಬಳಸಿಕೊಳ್ಳಬೇಕಿದೆ. ಕೃಷ್ಣಾ ಎ ಸ್ಕೀಮ್ ಜಡ್ಜ್ಮೆಂಟ್ ಪ್ರಕಾರ, ಈ ನೀರಿನಲ್ಲಿ 50% ಕರ್ನಾಟಕಕ್ಕ ಹೋಗ್ಬೇಕು, 25% ಆಂದ್ರಕ್ಕ ಹೋಗ್ಬೇಕು, 25% ಮಹಾರಾಷ್ಟ್ರಕ್ಕ ಹೋಗ್ಬೇಕು. ಆ ಪ್ರಕಾರ ನಮಗೆ 277ಟಿ.ಎಂ.ಸಿ ಬರಬೇಕಿತ್ತು. ಇವರು ಸರೀಗೆ ಫೈಟ್ ಮಾಡ್ಲಿಲ್ಲ, ನಮ್ಮ ಸರಕಾರಗಳ ವೈಫಲ್ಯದ ಪರಿಣಾಮವಾಗಿ ಅಷ್ಟು ಅಲೋಕೇಶನ್ ಆಗ್ಲಿಲ್ಲ. ಯಾರೂ ಕೇಳೋರು ಇರ್ಲಿಲ್ಲ. ಬರೀ 177ಟಿ.ಎಂ.ಸಿ ಬಂತು. ಒಟ್ಟು 870ಟಿ.ಎಂ.ಸಿ ನಮಗೆ ಅಲೋಕೇಶನ್ ಆಯ್ತು. 2011ರಲ್ಲಿ ಕೃಷ್ಣಾ-ಬಿ ಸ್ಕೀಂ ಡಿಸಿಷೆನ್ ಆಯ್ತು. ಆದ್ರೆ ಇದುವರೆಗೆ ಆ ತೀರ್ಪುಗಳ ಪ್ರಕಾರ ಕೃಷ್ಣಾ ನೀರನ್ನ ಸಂಪೂರ್ಣವಾಗಿ ಬಳಕೆ ಮಾಡ್ಕೊಳ್ಳೋಕೂ ಆಗಿಲ್ಲ.
ಅಂದ್ರೆ, ಕೃಷ್ಣಾನದಿ ನೀರಿನ ಬಳಕೆಗೆ ಸಂಬಂಧಿಸಿಯೂ ರಾಜ್ಯ ಸರ್ಕಾರ ಉದಾಸೀನ ಮಾಡಿದೆ ಅಂತೀರಾ?
ದೊಡ್ಡ ಮಟ್ಟದ ಉದಾಸೀನ ಅದು. ಕೃಷ್ಣಾ ಬಿ.ಸ್ಕೀಮಿನಲ್ಲಿ, ನೀರು 2020ರ ಒಳಗೆ ಬಳಕೆ ಆಗಬೇಕು ಅಂತ ಡಿಸೆಷನ್ ಆಗಿದೆ. 2020ರ ಒಳಾಗ ಅಷ್ಟು ನೀರು ಉಪಯೋಗ ಮಾಡ್ಕೊಳ್ಳಾಕ ಯಾವಾಗ ಆಗ್ತದ ಅಂದ್ರ, ಆಲಮಟ್ಟಿ ಡ್ಯಾಂ ಎತ್ತರ ಮಾಡಿದಾಗ ಮಾತ್ರ. ಆಲಮಟ್ಟಿ ಡ್ಯಾಮು 519 ಮೀಟರ್‍ನಿಂದ 524.25 ಮೀಟರ್‍ವರೆಗೆ ಏರಿಸಬಹುದು. ಅಷ್ಟನ್ನ ಎತ್ತರಿಸಿದ್ರೆ 1ಲಕ್ಷ ಎಕರೆ ಜಮೀನು ಮುಳುಗಡೆ ಆಗ್ತದ. ಈ ವ್ಯಾಪ್ತಿಯಲ್ಲಿ 28 ಹಳ್ಳಿಗಳನ್ನ ಶಿಫ್ಟ್ ಮಾಡಬೇಕಾಗ್ತದೆ. ಇಷ್ಟೆಲ್ಲಾ ಮಾಡಬೇಕಂದ್ರೆ 50ಸಾವಿರ ಕೋಟಿ ಖರ್ಚು ಬರ್ತದೆ. ಇವರು ತಡ ಮಾಡ್ತಾ ಹೋದಷ್ಟೂ ಈ ಖರ್ಚು ಹೆಚ್ಚಾಗ್ತಾ ಹೋಗ್ತದೆ. ಇದು ಸಮಸ್ಯೆ. ನಮ್ಮಲ್ಲಿ ನೀರಾವರಿ ಸಂಪನ್ಮೂಲ ಇದೆ ಬಳಕೆ ಮಾಡ್ಕೊಳ್ಳೋಕೆ ಆಗಿಲ್ಲ. ಇದಕ್ಕೆ ರಾಜ್ಯ ಸರ್ಕಾರದ ಕಡೆಗಣನೆ ಮುಖ್ಯ ಕಾರಣ. ಈ ಸರ್ಕಾರವನ್ನು ಶೇ.80ರಷ್ಟು ಅವಧಿಯನ್ನು ದಕ್ಷಿಣ ಕರ್ನಾಟಕದವರು ನಡೆಸಿದ್ದು. ಇದರ ಜೊತೆ ನಮ್ಮ ಭಾಗದ ಜನರ ದೊಡ್ಡ ಸೋಮಾರಿತನ ಇವೆಲ್ಲಾ ಕಾರಣಗಳು ಅವ.
ಈ ಹೊತ್ತಿಗೆ, ಕರ್ನಾಟಕದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು, ವಿಧಾನ ಪರಿಷತ್ತಿನಲ್ಲಿ ವಿರೋಧಪಕ್ಷದ ನಾಯಕರು, ವಿಧಾನ ಪರಿಷತ್ತಿನ ಚೀಫ್‍ವಿಪ್, ವಿಧಾನಸಭೆಯ ಚೀಫ್‍ವಿಪ್, ಎಲ್ಲಾ ಪಕ್ಷಗಳ ರಾಜ್ಯ ಅಧ್ಯಕ್ಷರುಗಳು….ಇವರೆಲ್ಲಾ ದಕ್ಷಿಣ ಕರ್ನಾಟಕದವರು. ಇಷ್ಟು ಸ್ಥಾನಗಳಿಗೆ ಉತ್ತರ ಕರ್ನಾಟಕದ ಒಬ್ಬರೂ ಸಮರ್ಥರಿಲ್ಲವೆ? ಇದೇಕೆ ಹೀಗಾಗುತ್ತದೆ ಎಂದರೆ, ನಮ್ಮ ಭಾಗದವರು ಅವರ ಹಿಂಬಾಲಕರಾಗಿಯೇ ಉಳಿದಿದ್ದಾರೆ ವಿನಃ ನಾಯಕರಾಗಿಲ್ಲ ಇಲ್ಲಿಯವರೆಗೂ, ಅದಕ್ಕೆ.
ಈ ಸಮಸ್ಯೆಗೆ ಕಾರಣ, ನಮ್ಮಲ್ಲಿಯೂ ಇರಬೇಕಲ್ವಾ? ಬರೀ ಅವರ ಕಡೆನೇ ಬೆರಳು ತೋರಿಸ್ಬೇಕಾ?
ಹೌದು, ನಾವು ಬರೀ ಅವರಿಗೇ ಹೇಳ್ತೀವಿ ಅಂತಲ್ಲ, ನಮ್ಮ ನಾಯಕರ ದೌರ್ಬಲ್ಯಗಳೂ ಇದಕ್ಕೆ ಕಾರಣ ನಿಜ. ನಮ್ಮ ಭಾಗದ ರಾಜಕಾರಣಿಗಳು ರಾಜಕೀಯವಾಗಿ ಕ್ರಿಯಾಶೀಲರಲ್ಲದ್ದರಿಂದ ಹೀಗಾಗಿದೆ. ಇವರೇನಂದ್ರೆ ಒಂದು ಪ್ರೊಜೆಕ್ಟ್ ಇದೆಯಪ್ಪ, ಅದನ್ನ ಸ್ಯಾಂಕ್ಷನ್ ಮಾಡ್ಕೊಂಡು ಬರಬೇಕು ಅಷ್ಟೇ ಕೆಲಸ. ಪೊಲಿಟಿಕಲಿ ಪ್ರೋಆಕ್ಟಿವ್ ಆಗಿರ್ಬೇಕು ಅನ್ನೋದಿಲ್ಲ. ಅವರದೇ ಪಕ್ಷದ ಚಟುವಟಿಕೆಗಳಲ್ಲಿ ಅವರು ಮುನ್ನುಗ್ಗುವವರಲ್ಲ. ‘ನಿಮ್ಮ ಪಕ್ಷದಾಗಾ ಕಾರ್ಯದರ್ಶಿ ಆಗಬೇಕಿತ್ತಲ್ಲ ಅಂದ್ರೆ, ಏ ಅದನ್ಯಾವನು ಮಾಡ್ತಾನ ಹೋಗ್ಲಿಬಿಡ್ರಿ’ ಅನ್ನುವಂಥವರು. ಈ ರೀತಿ ಉದಾಸೀನತೆಯಿಂದ ಅವರವರ ಪಕ್ಷಗಳಲ್ಲಿಯೇ ಇವರು ನಾಯಕರಾಗಿ ಬೆಳೆಯೋಕೆ ಆಗಿಲ್ಲ.
ಒಂದಿಬ್ಬರ ಹೆಸರಿನ ಸಮೇತ ಉದಾಹರಣೆ ನೀಡಿ ವಿವರಿಸೋಕೆ ಸಾಧ್ಯವೇ?
ಹೆಚ್ಕೆ ಪಾಟೀಲ್. ಇವರು ನೋಡಿ, ಕಳೆದ 5ವರ್ಷ ಮಂತ್ರಿ ಇದ್ರು. ಅವತ್ತೇ ನಮಗೆ ಅನ್ಯಾಯ ಆಗಿತ್ತು. ಅವರು ಧ್ವನಿ ಎತ್ತಲಿಲ್ಲ. ಇವತ್ತು ಅವರು ಮಾತಾಡ್ತಿದ್ದಾರ. ಯಾಕಂದ್ರ ಅವರಿಗೆ ಮಂತ್ರಿ ಪದವಿ ಕೊಟ್ಟಿಲ್ಲ ಅಂತಾ ಧ್ವನಿ ಎತ್ಯಾರೋ ಏನೋ. ಅಧಿಕಾರ ಇದ್ದಾಗ ತಮ್ಮ ಪ್ರದೇಶದ ಬಗ್ಗೆ ಹೆಚ್ಚು ಕೆಲಸ ಮಾಡೋಕೆ ಸಾಧ್ಯ ಆಗ್ತದೆ. ಅಧಿಕಾರ ಹೋದ ಮ್ಯಾಲೆ ಮಾತಾಡೋದೇನಿದೆಯಲ್ಲ, ಅದು ಅರಣ್ಯರೋದನ. ಇನ್ನು, ಖರ್ಗೆಯವರು. ಇವರು ಇನ್ನೂ ಯಾಕ ಬ್ರಾಡ್ ಆಗಿ ಯೋಚ್ನೆ ಮಾಡ್ತಿಲ್ಲ ಅಂತಾ ತಿಳೀವಲ್ದು. ನಮ್ಮ ಹೈ.ಕದ ಜನÀ ಖರ್ಗೆ ನಮ್ಮ ನಾಯಕ ಅಂತಾ ಒಪ್ಕೊಂಡು ಬಿಟ್ಟಾರ. ವಿವಾದಾತೀತ ನಾಯಕ ಅವರು. ಆದರೆ ಅವರ ಅಭಿವೃದ್ಧಿಯ ದೃಷ್ಟಿಕೋನ ಗುಲ್ಬರ್ಗಾ ಜಿಲ್ಲೆಯ ಆಚೆ ಇಲ್ಲೇಇಲ್ಲ. ಹಂಗೇನಾದ್ರೂ ಖರ್ಗೆಯವರಿಗೆ ಅನ್ನಿಸಿದ್ದಿದ್ರೆ ಐ.ಐ.ಟಿ.ಯನ್ನ ನಾವು ಕಳಕೋತಿದ್ದಿಲ್ಲ. ಈ ವಿಷಯದಲ್ಲಿ 371ಜೆ ಅನ್ವಯ ಆಗ್ಲಿಲ್ಲ ಅಂತ ಅವರು ಧ್ವನಿ ಎತ್ತಬಹುದಾಗಿತ್ತು. ವಿರೋಧ ಮಾಡದೇ ಇದ್ರೂ ಸೈತಾ, ಮುಖ್ಯಮಂತ್ರಿ ಹತ್ತಿರ ಹೋಗಿ `ಎಲ್ಲಾ ಆಫೀಸರ್ಸನ್ನ ಕರೀರಿ. ಮೀಟಿಂಗ್ ಮಾಡ್ರೀ’ ಅಂತಾ ಹೇಳಬೇಕಿತ್ತು ಅವ್ರು, ಅದನ್ನೂ ಮಾಡ್ಲಿಲ್ಲ ಅವ್ರು. ಇವೆಲ್ಲ ಫೇಲ್ಯೂರ್ ಆಫ್‍ದಿ ಲೀಡರ್‍ಶಿಪ್ಪನ್ನ ಎತ್ತಿ ತೊರಿಸ್ತಾವು.
ಹೈ.ಕ ಅಭಿವೃದ್ಧಿಯ ಹೋರಾಟದಲ್ಲಿ ಅಥವಾ 371ಜೆ ಜಾರಿ ನಂತರವೂ ಅದರ ಸದ್ಬಳಕೆಗಾಗಿ ಜನಸ್ಪಂದನೆ ಹೇಗಿದೆ?
ಜನ ಹೆಂಗದಾರಂದ್ರ, ಅಲ್ಲಿ, ಕಾವೇರಿ ಇಶ್ಯೂ ಬಂದ್ರ ಎಲ್ಲಾ ಜನ ಎಲ್ಲಾ ಲೀಡ್ರು ಒಂದಾಗ್ತಾರ. ಬಟ್ ನಮ್ಹತ್ರ ಹಂಗಾಗಾದಿಲ್ಲ. ಕೃಷ್ಣಾ ನೀರು ಅಂದ್ರೆ ಅದು ಆ ಜಿಲ್ಲೆಗೆ ಸಂಬಂಧಿಸಿದ್ದು ಅಂತಾರ. ಜನರ ಮನಸ್ಸು ಕೂಡ ಇನ್ನೂ ರಾಜಮಹಾರಾಜರ ಕಾಲದಾಗ ಐತಿ. ಪ್ರಜಾಪ್ರಭುತ್ವಕ್ಕ ಬಂದೀವಿ ಅನ್ನಾದ ಮರ್ತ್‍ಬಿಟ್ಟಾರ ವಿಶೇಷವಾಗಿ ನಮ್ಮ ಹೈ.ಕ ಜನ. ಪ್ರಜಾಪ್ರಭುತ್ವ ಅಂದ್ರೆ ದಿನನಿತ್ಯದ ಚಟುವಟಿಕೆ ಇರ್ಬೇಕು. ಪೊಲಿಟಿಕಲ್ ಇನ್ವಾಲ್ವ್‍ಮೆಂಟ್ ಇರ್ಬೇಕು. ಹೋರಾಟ ಇರ್ಬೇಕು. ಇದ್ಯಾವ್ದೂ ನಮ್ಮ ಜನರ ಹತ್ರ ಕಾಣ್ತಾ ಇಲ್ಲ. ಹೈದ್ರಾಬಾದ್ ನಿಜಾಮ ತನ್ನ ರಾಜ್ಯದಾಗ ಬರ ಬಂದಾಗ ಎಲ್ಲಾ ಊರಾಗ ಬಾವಿ ತೋಡಿಸಿದ್ದನಂತ. ಜನ ಕೇಳಿದ್ರೋ ಬಿಟ್ಟಿದ್ರೋ ಗೊತ್ತಿಲ್ಲ. ಆದ್ರ ನಿಜಾಮಂತೂ ಪ್ರತಿಯೊಂದು ಊರಾಗ ಒಂದಾ ಸಲಕ್ಕ ಎಂಟು ಮಂದೀ ನೀರು ಸೇದೋಹಂಗ ಬಾವಿ ತೋಡಿಸಿದ್ನಂತ. ಈಗ್ಲೂ ಜನ ಹಂಗಾ ಅದಾರ ಕೇಳದಿದ್ರೂ ಮಾಡೋರು ಮಾಡ್ತಾರ ಅಂತಾ. ಇದು ಈ ಭಾಗದ ಜನರ ಮನಸ್ಥಿತಿ.

ಸಂದರ್ಶನ
ಪೀರ್‍ಬಾಷಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀವು ಕಾನೂನಿಗಿಂತ ಮೇಲಲ್ಲ: ಜಾರಿ ನಿರ್ದೇಶನಾಲಯಕ್ಕೆ ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್‌

0
ಜಾರಿ ನಿರ್ದೇಶನಾಲಯವು (ಇಡಿ) ಕಾನೂನಿನ ಚೌಕಟ್ಟಿಗೆ ಒಳಪಟ್ಟಿದೆ ಮತ್ತು ಸಾಮಾನ್ಯ ನಾಗರಿಕರ ವಿರುದ್ಧ ಬಲಪ್ರದರ್ಶನ ಮಾಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ ಜಾರಿ ನಿರ್ದೇಶನಾಲಯಕ್ಕೆ ಹೇಳಿದ್ದು, ನೀವು ಕಾನೂನಿಗಿಂತ ಮೇಲಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಮಧ್ಯಂತರ...