Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹುಬ್ಬಳ್ಳಿ-ಧಾರವಾಡ ಪಶ್ಚಿಮ: ಬೆಲ್ಲದ್ ಸಾಹೇಬ್ರಿಗ ಬಿಜೆಪಿ ಟಿಕೆಟ್ ಖಾತ್ರಿರಿ; ಗೆದ್ರ...

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹುಬ್ಬಳ್ಳಿ-ಧಾರವಾಡ ಪಶ್ಚಿಮ: ಬೆಲ್ಲದ್ ಸಾಹೇಬ್ರಿಗ ಬಿಜೆಪಿ ಟಿಕೆಟ್ ಖಾತ್ರಿರಿ; ಗೆದ್ರ ಏನ್ ಫಾಯ್ದೆ ಆಕ್ಕೇತ್ರಿ?!

- Advertisement -
- Advertisement -

ಧಾರವಾಡ ತಾಲೂಕಿನ ಕೆಲವು ಗ್ರಾಮೀಣ ಪ್ರದೇಶಗಳ ಜತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕಡೆಯ ವಾರ್ಡ್‌ಗಳನ್ನು ಸೇರಿಸಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ ರಚಿಸಲಾಗಿದೆ. ಇದು 2007ರಲ್ಲಾದ ಕ್ಷೇತ್ರಗಳ ಭೌಗೋಳಿಕ ಪರಿಧಿ ಪುನರ್‌ರಚನೆಯಲ್ಲಿ ಜನ್ಮತಳೆದ ಹೊಸ ಕ್ಷೇತ್ರ. ವಿಮಾನ ನಿಲ್ದಾಣ ಮತ್ತು ಹಲವು ಕೈಗಾರಿಕೆಗಳಿರುವ ಹು.ಧಾ-ಪಶ್ಚಿಮ ನಿರಂತರ ವ್ಯಾವಹಾರಿಕ ಚಟುವಟಿಕೆಗಳುಳ್ಳ ಪ್ರತಿಷ್ಠೆಯ ಕ್ಷೇತ್ರ. ನಗರ ವ್ಯಾಪ್ತಿಯ ಮಂದಿ ಕೈಗಾರಿಕೆ, ವ್ಯಾಪಾರ, ವಹಿವಾಟು ಮತ್ತು ಕೂಲಿ-ನಾಲಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರೆ, ಗ್ರಾಮೀಣ ಭಾಗದಲ್ಲಿ ರೈತಾಪಿಯೆ ಜೀವನಾಧಾರ. ಪಟ್ಟಣ ಕಾಸ್ಮೋಪಾಲಿಟನ್; ಹಳ್ಳಿಗಳದು ಅಪ್ಪಟ ದೇಶಿ ಸಂಸ್ಕೃತಿ. ಹೆಸರಾಂತ ಕರ್ನಾಟಕ ವಿಶ್ವವಿದ್ಯಾಲಯ, ಕಾನೂನು ವಿಶ್ವವಿದ್ಯಾಲಯ, ಎಸ್‌ಡಿಎಂ ಮೆಡಿಕಲ್ ಕಾಲೇಜು, ಐಐಐಟಿ, ವಿವಿಧ ಕೋರ್ಸ್‌ಗಳ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಅತ್ಯಾಧುನಿಕ ಆಸ್ಪತ್ರೆಗಳಿರುವ ಈ ಕ್ಷೇತ್ರ ಮಿನಿ ಎಜುಕೇಶನ್ ಮತ್ತು ಹೆಲ್ತ್ ಹಬ್ ಎಂದು ಪರಿಗಣಿತವಾಗಿದೆ.

ಲಿಂಗಾಯತರು ನಿರ್ಣಾಯಕವಾಗಿರುವ ಹುಬ್ಬಳ್ಳಿ-ಧಾರವಾಡ ವಿಧಾನಸಭಾ ಕ್ಷೇತ್ರ ಹುಟ್ಟಿದಾರಭ್ಯ ಹಿಂದುತ್ವದ ಬಾಲಗ್ರಹಪೀಡಿತವಾಗಿದೆ ಎಂಬ ಅನಿಸಿಕೆ ಸ್ಥಳೀಯ ರಾಜಕೀಯ ವಲಯದಲ್ಲಿದೆ. ’2007ರಲ್ಲಿ ಅಸೆಂಬ್ಲಿ ಕ್ಷೇತ್ರಗಳ ಡಿಲಿಮಿಟೇಶನ್ ಮಾಡುವಾಗ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಆಗ ಬಿಜೆಪಿಗೆ ಅನುಕೂಲವಾಗುವಂತೆ ಹುಬ್ಬಳ್ಳಿ ಹಾಗು ಧಾರವಾಡದಲ್ಲಿ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಲಾಗಿದೆ; ಮುಸ್ಲಿಮರು ನಾಲ್ಕು ಕ್ಷೇತ್ರಗಳಲ್ಲಿ ಎಲ್ಲಿಯೂ ಗೆಲ್ಲದಂತೆ ನೋಡಿಕೊಳ್ಳಲಾಗಿದೆ’ ಎಂಬ ಮಾತು ಮಾಮೂಲಾಗಿದೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಂತೂ ಡಿಲಿಮಿಟೇಶನ್ ಬಳಿಕದ ಮೂರೂ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಅಂತರದಲ್ಲೇ ಜಯ ಸಾಧಿಸಿದೆ.

ಚಂದ್ರಕಾಂತ್ ಬೆಲ್ಲದ್

ಧಾರವಾಡ, ಹುಬ್ಬಳ್ಳಿಯಲ್ಲಿ ಮತೀಯ ಧ್ರುವೀಕರಣ ಅದೆಷ್ಟು ವ್ಯವಸ್ಥಿತವಾಗಿ ಮಾಡಲಾಗಿದೆಯೆಂದರೆ, ನಾಲ್ಕು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಎಲ್ಲಿಯೇ ಮುಸ್ಲಿಮ್ ಅಭ್ಯರ್ಥಿಯನ್ನು ನಿಲ್ಲಿಸಿದರೂ ಅಲ್ಲಿ ಬಿಜೆಪಿ ನಿರಾಯಾಸವಾಗಿ ಗೆಲ್ಲುತ್ತದೆ! ಒಟ್ಟು 2,55,252 ಮತದಾರರಿರುವ ಹು.ಧಾ-ಪದಲ್ಲಿ ಲಿಂಗಾಯತರು 70 ಸಾವಿರ, ಮುಸ್ಲಿಮರು 40 ಸಾವಿರ, ಪಜಾ-ಪಪಂ 37 ಸಾವಿರ, ಬ್ರಾಹ್ಮಣರು 24 ಸಾವಿರ, ಮರಾಠರು, ಕಿಶ್ಚಿಯನ್ನರು, ಆಂಧ್ರದವರು, ಗುಜರಾತಿಗಳೇ ಮತ್ತಿತರ ಸಣ್ಣಪುಟ್ಟ ಸಮುದಾಯದ ವೋಟುದಾರರು ಗಣನೀಯ ಸಂಖ್ಯೆಯಲ್ಲಿದ್ದಾರೆಂದು ಅಂದಾಜಿಸಲಾಗಿದೆ. ಲಿಂಗಾಯತರು ನಿರ್ಣಾಯಕರಾಗಿರುವ ಈ ಕ್ಷೇತ್ರದಲ್ಲಿ 1990ರ ದಶಕದಲ್ಲಾದ ಹುಬ್ಬಳ್ಳಿ ಈದ್ಗಾ ಮೈದಾನ ವಿವಾದ ಮತ್ತು ಮತೀಯ ಸಂಘರ್ಷ, ಜನಸಾಮಾನ್ಯರ ಮನಸ್ಸುಗಳನ್ನು ಒಡೆದುಹಾಕಿದೆ. ಶಾಸಕ ಅರವಿಂದ ಬೆಲ್ಲದ್‌ರಂಥವರು ಮುಸ್ಲಿಮರನ್ನು ಗುರಿಯಾಗಿ ಇಟ್ಟುಕೊಂಡು ರಾಜಕೀಯ ದಾಳ ಉರುಳಿಸುವುದು ಹು.ಧಾ-ಪ ಕ್ಷೇತ್ರವನ್ನು “ಧರ್ಮ ಯುದ್ಧ”ದ ರಣರಂಗವನ್ನಾಗಿ ಮಾರ್ಪಾಡು ಮಾಡಿದೆ; ಇತ್ತೀಚೆಗಷ್ಟೇ ಶಾಸಕ ಬೆಲ್ಲದ್ ಮುಸ್ಲಿಮರಿಗೆ ಉದ್ಯೋಗ-ಶಿಕ್ಷಣದಲ್ಲಿ ಮೀಸಲಾತಿ ಕೊಡಕೂಡದು; ಮುಸ್ಲಿಮರನ್ನು ಮೀಸಲಾತಿಯ 2ಬಿ ಪಟ್ಟಿಯಿಂದ ತೆಗೆಯಬೇಕೆಂದು ಹೇಳುತ್ತಿರುವುದು 2023ರ ಇಲೆಕ್ಷನ್‌ನಲ್ಲಿ ಬಲಪಂಥೀಯ ಬಂಪರ್ ಬೆಳೆ ತೆಗೆಯುವ, ತನ್ಮೂಲಕ ಸಂಘಿ ಸರದಾರರ ಮೆಚ್ಚುಗೆಗೆ ಪಾತ್ರರಾಗಿ ಮುಖ್ಯಮಂತ್ರಿ ಪೀಠವೇರುವ ದೂ(ದು)ರಾಲೋಚನೆ ಎಂಬ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ಶುರುವಾಗಿದೆ.

ಅಪ್ಪ-ಮಗನ ಆಡುಂಬೊಲ!

ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ ರಚನೆಗೂ ಮೊದಲಿನ ಧಾರವಾಡ ಕ್ಷೇತ್ರದಿಂದ ಪ್ರಸಿದ್ಧ ವರ್ತಕ-ಸಂಘ ಪರಿವಾರ ಕೃಪಾಶ್ರಯದ ಪ್ರಮುಖ ಲಿಂಗಾಯತ ಮುಖಂಡ ಚಂದ್ರಕಾಂತ್ ಬೆಲ್ಲದ್ ಮೂರು ಸಲ ಶಾಸಕರಾಗಿ ಆಳ್ವಿಕೆ ನಡೆಸಿದ್ದರು. ಒಮ್ಮೆ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದರು. ಕ್ಷೇತ್ರ ಪುನರ್‌ರಚನೆಯಲ್ಲಿ ತಮಗೆ ಅನುಕೂಲಕರವಾದ ರೀತಿಯಲ್ಲಿ ಹು.ಧಾ ಪಶ್ಚಿಮ ಕ್ಷೇತ್ರ ರಚನೆಯಾಗುವಂತೆ ನೋಡಿಕೊಂಡರೆನ್ನಲಾದ ಬೆಲ್ಲದ್ 2008ರ ಮೊದಲ ಚುನಾವಣೆಯಲ್ಲಿ ಜಾತಿ-ಧರ್ಮದ ಅಲೆಯೇರಿ ತೀರಾ ಸುಲಭವಾಗಿ ಆಯ್ಕೆಯಾದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಧಾರವಾಡ: ಲಿಂಗಾಯತ ಏಕಸ್ವಾಮ್ಯದ ರಾಜಕಾರಣಕ್ಕೆ ಕೇಸರಿ ಖದರು!

ಮುಸ್ಲಿಮ್ ಮೀಸಲು ಕ್ಷೇತ್ರದಂತಿದ್ದ ಹುಬ್ಬಳ್ಳಿ ನಗರ ಕ್ಷೇತ್ರವನ್ನು 2008ರ ಕ್ಷೇತ್ರ ಪರಿಮಿತಿ ಬದಲಾವಣೆ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಪರಿಶಿಷ್ಟ ಜಾತಿಗೆ ಮೀಸಲು ಮಾಡಲಾಯಿತು. ಹೀಗಾಗಿ ಮುಸ್ಲಿಮ್ ಪ್ರತಿನಿಧಿ ಸುಲಭವಾಗಿ ಗೆಲ್ಲಬಹುದಾಗಿದ್ದ ಕ್ಷೇತ್ರ ಹುಬ್ಬಳ್ಳಿ-ಧಾರವಾಡದಲ್ಲಿ ಇಲ್ಲದಾಯಿತು. ಕಾಂಗ್ರೆಸ್ ಹು.ಧಾ ವ್ಯಾಪ್ತಿಯ ಮೂರು ಸಾಮಾನ್ಯ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರು ಜಾಸ್ತಿಯಿರುವ ಹು.ಧಾ-ಪಶ್ಚಿಮದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಟಿಕೆಟ್ ಕೊಡುವ ’ಸಾಮಾಜಿಕ ನ್ಯಾಯ’ದ ತಂತ್ರಗಾರಿಕೆಯ ಪರಿಪಾಠ ಪ್ರಾರಂಭಿಸಿತು. ಇದು ಕೇಸರಿ ರಾಜಕಾರಣದ ಆಡುಂಬೊಲದಂತಾಗಿದ್ದ ಹು.ಧಾ ಪಶ್ಚಿಮದಲ್ಲಿ ಬಿಜೆಪಿಗೆ ಸೆಣಸಾಟ ಸುಲಭಗೊಳಿಸಿತು ಎಂದು ರಾಜಕೀಯ ವಿಶ್ಲೇಷಕರು ವಿವರಿಸುತ್ತಾರೆ.

2008ರ ಅಸೆಂಬ್ಲಿ ಇಲೆಕ್ಷನ್‌ನಲ್ಲಿ ಸಂಘಪರಿವಾರದ ಹಳೆ ಹುಲಿ ಚಂದ್ರಕಾಂತ ಬೆಲ್ಲದ್‌ಗೆ ಎದುರಾಗಿ ಹುಬ್ಬಳ್ಳಿ ನಗರದಿಂದ ಎರಡು ಬಾರಿ ಶಾಸಕರಾಗಿದ್ದ ಪ್ರಭಾವಿ ಮುಸ್ಲಿಮ್ ಮುಖಂಡ ಜಬ್ಬಾರ್ ಖಾನ್ ಹೊನ್ನಳ್ಳಿ ಕಾಂಗ್ರೆಸ್ ಕ್ಯಾಂಡಿಡೇಟಾದರು. ಜೆಡಿಎಸ್‌ನಿಂದ ಮುಸ್ಲಿಮ್ ತರುಣರ ತಂಡ ಕಟ್ಟಿಕೊಂಡಿದ್ದ ಇಸ್ಮಾಯಿಲ್ ತಮಟಗಾರ್ ಆಖಾಡಕ್ಕಿಳಿದಿದ್ದರು. ಈ ಚುನಾವಣೆಯಲ್ಲಿ ದೊಡ್ಡಮಟ್ಟದ ಮತೀಯ ಧ್ರುವೀಕರಣವಾಯಿತು ಎಂದು ಅಂದಿನ ಕಾಳಗ ಕಂಡವರು ಹೇಳುತ್ತಾರೆ. ಈ ಮಾತನ್ನು ಚುನಾವಣೆಯಲ್ಲಿ ಗೆದ್ದ ಮತ್ತು ಸೋತ ಅಭ್ಯರ್ಥಿಗಳು ಪಡೆದ ಮತಗಳು ಸಮರ್ಥಿಸುವಂತಿದೆ. ಕಾಂಗ್ರೆಸ್(27,453) ಮತ್ತು ಜೆಡಿಎಸ್(14,200) ನಡುವೆ ಅಲ್ಪ ಸಂಖ್ಯಾತರ ಓಟು ಹಂಚಿಹೋಯಿತು. ಬಿಜೆಪಿಗೆ ಹಿಂದುತ್ವದ ತಂತ್ರಗಾರಿಕೆಯಿಂದ 60,800 ಮತ ಬಂದಿತೆನ್ನಲಾಗುತ್ತಿದೆ. ಚಂದ್ರಕಾಂತ ಬೆಲ್ಲದ್ ತಮ್ಮ ನಿರೀಕ್ಷೆಯನ್ನೆ ಮೀರಿದಂತೆ 33,347 ಮತದಂತರದಿಂದ ನೂತನ ಕ್ಷೇತ್ರ ಹು.ಧಾ-ಪಶ್ಚಿಮದ ಪ್ರಥಮ ಶಾಸಕ ಎನಿಸಿಕೊಂಡರೆಂಬ ಮಾತು ಈಗಲೂ ಉತ್ತರ ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿದೆ!

ಜಬ್ಬಾರ್ ಖಾನ್ ಹೊನ್ನಳ್ಳಿ

ಚಂದ್ರಕಾಂತ ಬೆಲ್ಲದ್‌ರ 2008-2013ರ ಶಾಸಕತ್ವದ ಅವಧಿಯಲ್ಲಿ ಅವರ ಸುಪುತ್ರ ಅರವಿಂದ ಬೆಲ್ಲದ್ ತಂದೆಯ ಉತ್ತರಾಧಿಕಾರಿ ತಾನೆಂಬ ಪ್ರಭಾವಳಿಯಲ್ಲಿ ಕ್ಷೇತ್ರದ ಉದ್ದಗಲಕ್ಕೆ ಓಡಾಡಲಾರಂಭಿಸಿದ್ದರು. 2013ರ ಅಸೆಂಬ್ಲಿ ಇಲೆಕ್ಷನ್ ಹತ್ತಿರಾದಾಗ ಶಾಸಕ ಚಂದ್ರಕಾಂತ ಬೆಲ್ಲದ್ ಮಗ ಅರವಿಂದ್‌ಗೆ ಬಿಜೆಪಿ ಟಿಕೆಟ್ ಖಾತ್ರಿಪಡಿಸಿಕೊಂಡು ರಾಜಕೀಯ ನಿವೃತ್ತಿ ಘೋಷಿಸಿದರು. ಅರವಿಂದ್ ಬೆಲ್ಲದ್‌ಗೆ ಅಪ್ಪನ ಪ್ರಭಾವಳಿ, ಆರೆಸ್ಸೆಸ್ ಕೃಪಾಶೀರ್ವಾದ ಮತ್ತು ಲಿಂಗಾಯತ ಲಾಬಿಯ ಬಲವಿದ್ದುದರಿಂದ ಬಿಜೆಪಿ ಟಿಕೆಟ್ ತರುವುದು ಕಷ್ಟವೇನಾಗಲಿಲ್ಲ. ಆದರೆ ಅಪ್ಪನಷ್ಟು ಸಲೀಸಾಗಿ ಗೆಲ್ಲಲು ಸಾಧ್ಯವಾಗಲಿಲ್ಲ. ಹಿಂದಿನ ಧಾರವಾಡ ಕ್ಷೇತ್ರದಲ್ಲಿ ನಾಲ್ಕು ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಮೂರು ಸಲ ಶಾಸಕರಾಗಿದ್ದ ಮರಾಠ ಸಮುದಾಯದ ಎಸ್.ಆರ್.ಮೋರೆ ಪ್ರಬಲ ಪೈಪೋಟಿ ಒಡ್ಡಿದ್ದರು. ಮೋರೆ ಎರಡು ಬಾರಿ ಅರವಿಂದ ಬೆಲ್ಲದ್ ತಂದೆ ಚಂದ್ರಕಾಂತ ಬೆಲ್ಲದ್‌ರನ್ನೇ ಮಣಿಸಿದ್ದರು.

ಈ ಚುನಾವಣೆಯಲ್ಲಿ ಬಿಜೆಪಿ(42,003)-ಕಾಂಗ್ರೆಸ್(30,821)-ಜೆಡಿಎಸ್(30,312) ನಡುವೆ ನಿಕಟ ತ್ರಿಕೋನ ಕಾಳಗ ಏರ್‍ಪಟ್ಟಿತ್ತು. ಯಡಿಯೂರಪ್ಪರ ಕೆಜೆಪಿಯಿಂದ ಕಣಕ್ಕಿಳಿದಿದ್ದ ಪದವೀಧರ ಕ್ಷೇತ್ರದ ಎಮ್ಮೆಲ್ಸಿ ಮೋಹನ ಲಿಂಬಿಕಾಯಿ 12,216 ಮತ ಗಳಿಸಿದ್ದರು. ಬಿಜೆಪಿಯ ಅರವಿಂದ್ ಬೆಲ್ಲದ್ 11,182 ಮತದಂತರದಿಂದ ಸಮೀಪದ ಪ್ರತಿಸ್ಪರ್ಧಿ ಮೋರೆಯವರನ್ನು ಸೋಲಿಸಿ ಆಯ್ಕೆಯಾದರು. ಜೆಡಿಎಸ್‌ನ ಇಸ್ಮಾಯಿಲ್ ತಮಟಗಾರ್ ಅವರ ತೀವ್ರ ಸ್ಪರ್ಧೆಯೊಡ್ಡಿ 30,312 ಮತಗಳನ್ನು ಪಡೆದದ್ದು ಬಿಜೆಪಿಯ ಅರವಿಂದ್ ಬೆಲ್ಲದ್‌ಗೆ ವರವಾಯಿತೆಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿದೆ.

2018ರ ವಿಧಾನಸಭಾ ಚುನಾವಣೆ ವೇಳೆಗೆ ಜೆಡಿಎಸ್‌ಗೆ ವಿದಾಯ ಹೇಳಿ ಇಸ್ಮಾಯಿಲ್ ತಮಟಗಾರ್ ಕಾಂಗ್ರೆಸ್ ಸೇರ್‍ಪಡೆಯಾದರು; ಅರವಿಂದ್ ಬೆಲ್ಲದ್ ಇಂಟಲೆಕ್ಚುವಲ್-ಸೊಫೆಸ್ಟಿಕೇಟೆಡ್ ಪಾಲಿಟಿಶಿಯನ್ ಎಂದು ಬಿಂಬಿಸಲ್ಪಟ್ಟಿದ್ದರು. ಸಾಮಾನ್ಯರ ಸಮಸ್ಯೆ ಅರ್ಥವಾಗದ ಅಸಾಮಾನ್ಯ ಎಂಬ ಆಕ್ಷೇಪವೂ ಕೇಳಿಬಂದಿತ್ತು. ಅಲ್ಪಸಂಖ್ಯಾತರಿಗೆ ಅವಕಾಶ ಕೊಡುವ ಕಾಂಗ್ರೆಸ್‌ನ ಜಾತಿ-ಧರ್ಮ ಲೆಕ್ಕಾಚಾರದ ಟಿಕೆಟ್ ತಂತ್ರಗಾರಿಕೆಯಲ್ಲಿ ಇಸ್ಮಾಯಿಲ್ ತಮಟಗಾರ್ ಆ ಪಕ್ಷದ ಅಭ್ಯರ್ಥಿಯಾದರು. ವಿಭಜಕ ರಾಜಕಾರಣದ ಜಿದ್ದಾಜಿದ್ದಿ ಏರ್‍ಪಟ್ಟಿತು. ಜತೆಗೆ ಯಡಿಯೂರಪ್ಪ ಫ್ಯಾಕ್ಟರ್ ಮತ್ತು ಅರವಿಂದ ಬೆಲ್ಲದ್ ಮೈಗೂಡಿಸಿಕೊಂಡಿದ್ದ ಆರೆಸ್ಸೆಸ್‌ನ ಅಸಲಿ ಗುಣ-ಧರ್ಮ ಅವರಿಗೆ ಧಂಡಿಯಾಗಿ ಮತ ಬೀಳುವಂತೆ ಮಾಡಿತು; ಕಾಂಗ್ರೆಸ್‌ನ ಇಸ್ಮಾಯಿಲ್ ತಮಟಗಾರ್ 55,975 ಮತ ಗಳಿಸುವಷ್ಟರಲ್ಲೆ ಸುಸ್ತಾಗಿ ಹೋದರು ಎಂಬ ವಿಶ್ಲೇಷಣೆ ಕ್ಷೇತ್ರದಲ್ಲಿ ಕೇಳಿಬರುತ್ತದೆ. ಅರವಿಂದ ಬೆಲ್ಲದ್ 40,487 ಮತಗಳ ಭರ್ಜರಿ ಅಂತರದಲ್ಲಿ ಎರಡನೆ ಸಲ ಶಾಸಕನಾದರು. ಇದು ವಿಭಜಕ ರಾಜಕಾರಣದ ದಿಗ್ವಿಜಯಕ್ಕೆ ಸ್ಯಾಂಪಲ್ ಎಂದು ಇಂದಿಗೂ ವ್ಯಾಖ್ಯಾನಿಸಲಾಗುತ್ತಿದೆ.

ಕ್ಷೇತ್ರದ ಕತೆ-ವ್ಯಥೆ!

ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಉದ್ದಗಲಕ್ಕೆ ಹೆಜ್ಜೆ ಹಾಕಿದರೆ ಮಾಮೂಲಿ ಬಜೆಟ್ ಕಾಮಗಾರಿಗಳು ಆಗಿರುವುದು ಕಣ್ಣಿಗೆ ಬೀಳುತ್ತದೆಯೆ ಹೊರತು ಮಹಾನಗರ ಪಾಲಿಕೆ ಇಲ್ಲವೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜನಜೀವನಮಟ್ಟ ಸುಧಾರಿಸುವ ಯೋಜನೆಗಳು ಶಾಸಕ ಅರವಿಂದ ಬೆಲ್ಲದ್ ದೂರದರ್ಶಿತ್ವದಿಂದ ಬಂದಿರುವುದು ಕಾಣಿಸದು. ಗ್ರಾಮೀಣ ಪ್ರದೇಶದಲ್ಲಿ ಜಲಸಂಪನ್ಮೂಲ ಅಭಿವೃದ್ಧಿ, ಕೃಷಿ ಉನ್ನತೀಕರಣ ಆಗಬೇಕಾಗಿದೆ. ಸಿಟಿಯಲ್ಲಿ ಕುಡಿಯುವ ನೀರು, ನೈರ್ಮಲೀಕರಣ, ರಸ್ತೆ, ಸಾರಿಗೆ, ಶಿಕ್ಷಣ, ಆರೋಗ್ಯದಂಥ ಮೂಲ ಸೌಕರ್ಯಗಳನ್ನು ಜನ ಕೇಳುತ್ತಿದ್ದಾರೆ. ನಗರಪಾಲಿಕೆ ಆಡಳಿತ ಧಾರವಾಡ ಭಾಗದ ಅಭಿವೃದ್ಧಿಯನ್ನು ಕಡೆಗಣಿಸಿದೆ. ಧಾರವಾಡ ಕಡೆಗೆ ಸಾಕಷ್ಷು ಅನುದಾನ-ಯೋಜನೆಗಳು ಬರದೆ ಹಿಂದುಳಿದಿದೆ. ಬಿಆರ್‌ಟಿಎಸ್ ಎಂಬ ಅವೈಜ್ಞಾನಿಕ ಕ್ಷಿಪ್ರ ಸಾರಿಗೆ ಯೋಜನೆಯ ಆದ್ವಾನದಿಂದ ಸಾವು-ನೋವು ಹೆಚ್ಚುತ್ತಿದೆ; ಈ ಯೋಜನೆಗೆ ವ್ಯಯವಾಗುತ್ತಿರುವ ಹಣಕ್ಕೂ ಸಿಗುತ್ತಿರುವ ಸೌಲಭ್ಯಕ್ಕೂ ಅಜಗಜಾಂತರ. ಕ್ಷೇತ್ರದ ಈ ಕುಂದುಕೊರತೆ, ಯೋಜನೆಗಳ ನ್ಯೂನತೆ ಸರಿಪಡಿಸುವ ಯೋಚನೆ ಮೇಧಾವಿ ಇಮೇಜಿನ ಶಾಸಕ ಬೆಲ್ಲದ್ ಅವರಿಗೆ ಏಕೆ ಹೊಳೆಯುತ್ತಿಲ್ಲ ಎಂಬುದೇ ಯಕ್ಷಪ್ರಶ್ನೆಯಾಗಿದೆ ಎಂಬ ಅಳಲು ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

ಇಸ್ಮಾಯಿಲ್ ತಮಟಗಾರ್

ಐಐಟಿ ಮತ್ತು ಐಐಐಟಿ ಶಿಕ್ಷಣ ಸಂಸ್ಥೆಗಳನ್ನು ಧಾರವಾಡಕ್ಕೆ ತರುವ ಪ್ರಯತ್ನದ ಮುಂಚೂಣಿಯಲ್ಲಿದ್ದ ಶಾಸಕ ಬೆಲ್ಲದ್, ಕ್ಷೇತ್ರದ ಅಕಾಡೆಮಿಕ್ ಪರಿಸರ ಕಲುಷಿತಗೊಳಿಸಿರುವ ಟ್ಯೂಷನ್ ಮಾಫಿಯಾ, ಡೊನೇಷನ್-ಕ್ಯಾಪಿಟೇಷನ್ ಸುಲಿಗೆಯ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಕಡಿವಾಣ ಹಾಕಲು ಪ್ರಯತ್ನಿಸದಿರುವುದು ವಿಪರ್ಯಾಸ ಎಂಬ ಮಾತು ಕೇಳಿಬರುತ್ತದೆ. ಸೌಂದರ್ಯೀಕರಣದ ಹೆಸರಲ್ಲಿ ಕೆರೆ ಅಭಿವೃದ್ದಿ ಕಾಮಗಾರಿಯಲ್ಲಿ ಲೂಟಿಯಾಗುತ್ತಿದೆ; ಸಿಮೆಂಟ್ ರೋಡ್ ಮಾಡುವಾಗ ಬೀದಿ ಬದಿಯಲ್ಲಿ ಹೊಟ್ಟೆಪಾಡಿಗೆ ವ್ಯಾಪಾರ ಮಾಡುತ್ತಿದ್ದವರನ್ನು ನಿರಾಶ್ರಿತರನ್ನಗಿ ಮಾಡಲಾಗಿದೆ. ಬೀದಿ ವ್ಯಾಪಾರಿಗಳನ್ನು ತೆರವು ಮಾಡಿಸುವಾಗ ನಗರಪಾಲಿಕೆಯ ಕಾಂಪ್ಲೆಕ್ಸ್‌ನಲ್ಲಿ ಅವಕಾಶ ಕಲ್ಪಿಸುವ ಸಮಾಧಾನದ ಮಾತು ಹೇಳಲಾಗಿತ್ತು; ಅದಿನ್ನೂ ಈಡೇರಿಲ್ಲ. ಸ್ಲಮ್‌ಗಳು ಅಧಿಕಾರಸ್ಥರ ಅವಜ್ಞೆಗೀಡಾಗಿ ಅಭಿವೃದ್ಧಿ ಕಾಣುತ್ತಿಲ್ಲ. ಇದೆಲ್ಲ ತನಗೆ ಸಂಬಂಧಿಸಿದ್ದಲ್ಲ ಎಂಬಂತೆ ಶಾಸಕ ಬೆಲ್ಲದ್ “ಅಂಗಿ ಕೊಳೆಯಾಗದ ಠಾಕು-ಠೀಕಿನ ರಾಜಕಾರಣ” ಮತ್ತು ತಮ್ಮ ಕೋಟ್ಯಾಂತರ ರೂ.ಗಳ ಅಟೋಮೊಬೈಲ್ ಬಿಸ್ನೆಸ್‌ನಲ್ಲಿ ನಿರತರಾಗಿದ್ದಾರೆ ಎಂಬ ಆಕ್ರೋಶದ ಆರೋಪ ಕ್ಷೇತ್ರದಲ್ಲಿದೆ!

ಕ್ಷೇತ್ರವಾಸಿಗಳ ನೋವು-ನಲಿವು ಶ್ರೀಮಂತ ಉದ್ಯಮಿಗಳಾದ ಬೆಲ್ಲದ್ ಅಪ್ಪ-ಮಗನಿಗೆ ಅರ್ಥವಾಗುವುದಿಲ್ಲ ಎಂಬ ಅಸಮಾಧಾನ ಲಾಗಾಯ್ತಿನದು; ಶಾಸಕ ಸಾಹೇಬರು ಕೈಗೆ ಸಿಗುವುದಿಲ್ಲ; ಮುಖ್ಯಮಂತ್ರಿ-ಮಂತ್ರಿ ಆಗುವ ರಾಜಕಾರಣದಲ್ಲವರು ಕ್ಷೇತ್ರವನ್ನು ಕಡೆಗಣಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರೇ ದೂರುತ್ತಾರೆ. ಕಳೆದೆರಡು ಚುನಾವಣೆಗಳ ಸಂದರ್ಭದಲ್ಲಿ ಬಸವ ಆವಾಸ್ ಯೋಜನೆ ಕಾರ್ಯಗತಗೊಳಿಸಿ ಸೂರಿಲ್ಲದವರಿಗೆ ಮನೆ ಸಿಗುವಂತೆ ಮಾಡುವುದಾಗಿ ಶಾಸಕರು ಹೇಳುತ್ತ ಬಂದಿದ್ದಾರೆ. ಜಿ+2 ಮನೆ ಸಂಕೀರ್ಣ ನಿರ್ಮಾಣ ಆಗಿದ್ದರೂ ಹಂಚಿಕೆ ಆಗಿಲ್ಲ. ಇದು ಶಾಸಕ ಬೆಲ್ಲದ್‌ರ ಇಲೆಕ್ಷನ್ ಸ್ಟಂಟ್ ಎಂಬ ಆಕ್ಷೇಪ ವ್ಯಾಪಕವಾಗಿ ಕೇಳಿಬರುತ್ತಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮುಳಬಾಗಿಲು: ಪಕ್ಷೇತರ ಅಭ್ಯರ್ಥಿಗಳ ಪಾರುಪತ್ಯಕ್ಕೆ ಈ ಬಾರಿ ಬ್ರೇಕ್ ಬೀಳಲಿದೆಯೆ?

ಈ ವರದಿ ಸಿದ್ಧವಾಗುತ್ತಿರುವ ಹೊತ್ತಿಗೆ ಶಾಸಕ ಬೆಲ್ಲದ್ ತಮ್ಮ ಮನೆ ಎದುರಿದ್ದ ನಗರ ಪಾಲಿಕೆಯ ಸಾರ್ವಜನಿಕ ಬಾವಿಯನ್ನು ಮುಚ್ಚಿಸಿ ಆ ಜಾಗ ಕಬ್ಜಾ ಮಾಡಿಕೊಂಡು ಕಾಂಪೌಂಡ್ ಗೋಡೆ ಹಾಕಿಕೊಂಡಿದ್ದಾರೆಂಬ ಆರೋಪ ಮಾಜಿ ಕಾರ್ಪೋರೇಟರ್ ನಾಗರಾಜ ಗೌರಿ ಮಾಡಿದ್ದಾರೆ!

ಬೆಲ್ಲದ್‌ಗೆ ಎದುರಾಳಿ ಯಾರು?!

ಆರೆಸ್ಸೆಸ್‌ನಲ್ಲಿ ಗುರುತಿಸಿಕೊಂಡಿರುವ ಶಾಸಕ ಅರವಿಂದ ಬೆಲ್ಲದ್ ರಾಜ್ಯ ಬಿಜೆಪಿಯ ಸರ್ವೋಚ್ಚ ನಾಯಕ ಬಿ.ಎಲ್.ಸಂತೋಷ್‌ರ ನೀಲಿಗಣ್ಣಿನ ಹುಡುಗ ಎನ್ನಲಾಗುತ್ತಿದೆ. ಹಿಂದಿ-ಇಂಗ್ಲಿಷ್ ಸುಲಲಿತವಾಗಿ ಮಾತಾಡುವ ನಡುವಯಸ್ಸಿನ, ಸಂಘಪರಿವಾರ ಬದ್ಧತೆಯ ಅರವಿಂದ್ ಬೆಲ್ಲದ್‌ರನ್ನು ಮುಖ್ಯಮಂತ್ರಿ ಮಾಡಲು ಯಡಿಯೂರಪ್ಪ ವಿರೋಧಿ ಬಣ ಪ್ರಯತ್ನಿಸಿದ್ದು ದೊಡ್ಡ ಸುದ್ದಿಯಾಗಿತ್ತು; ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಇಳಿಸುವಾಗ ಬಿಜೆಪಿ ಹೈಕಮಾಂಡ್ ಲಿಂಗಾಯತನೊಬ್ಬನಿಗೆ ಪಟ್ಟಕಟ್ಟಬೇಕಾದ ಸಂದಿಗ್ಧಕ್ಕೆ ಸಿಲುಕಿತ್ತು. ಸಹಜವಾಗಿಯೇ ಸಂಘ ಪರಿವಾರದ ಆಯ್ಕೆ ಅರವಿಂದ್ ಬೆಲ್ಲದ್ ಆಗಿದ್ದರು; ಆದರೆ ತನ್ನ ಮರ್ಜಿ-ಮುಲಾಜಿಲ್ಲದ ಬೆಲ್ಲದ್ ಸಿಎಂ ಪೀಠ ಏರುವುದು ಯಡಿಯೂರಪ್ಪನವರಿಗೆ ಇಷ್ಟವಿರಲಿಲ್ಲ. ಯಡಿಯೂರಪ್ಪರಿಂದ ಮುಖ್ಯಮಂತ್ರಿ ಸ್ಥಾನ ತಪ್ಪಿಸಿಕೊಂಡ ಬೆಲ್ಲದ್ ಮಂತ್ರಿ ಆಗದಂತೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಡ್ಡಗಾಲು ಹಾಕಿದರು ಎನ್ನಲಾಗಿದೆ. ಶೆಟ್ಟರ್‌ಗೆ ತನ್ನ ಮಗ್ಗುಲಲ್ಲೆ ಸ್ವಜಾತಿಯವನೊಬ್ಬ ಸಮಾನಾಂತರವಾಗಿ ಬೆಳೆಯುವುದು ಬೇಡವಾಗಿತ್ತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ನಾಗರಾಜ ಗೌರಿ

ಬಿಜೆಪಿಯ ಆಯಕಟ್ಟಿನ ನಾಯಕಾಗ್ರೇಸರ ಸಖ್ಯ-ಸಲುಗೆಯಲ್ಲಿರುವ ಅರವಿಂದ್ ಬೆಲ್ಲದ್‌ಗೆ 2023ರ ಚುನಾವಣೆಯಲ್ಲಿ ಅಭ್ಯರ್ಥಿತನ ಪಡೆಯುವುದೇನೂ ಕಷ್ಟವಲ್ಲ; ಬೆಲ್ಲದ್‌ಗೆ ಟಿಕೆಟ್ ಪೈಪೋಟಿ ಕೊಡುವ ಗಟ್ಟಿಗರೂ ಬಿಜೆಪಿಯಲ್ಲಿಲ್ಲ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತದೆ. ಹು.ಧಾ-ಪಶ್ಚಿಮದಲ್ಲಿರುವ ಕುತೂಹಲ ಎಂದರೆ, ಬೆಲ್ಲದ್ ಎದುರು ಸೆಣಸಾಡಲು ಕಾಂಗ್ರೆಸ್ ಯಾರನ್ನು ಆಖಾಡಕ್ಕಿಳಿಸಲಿದೆ ಎಂಬುದಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಪ್ತ ಎನ್ನಲಾಗುತ್ತಿರುವ ಮಾಜಿ ಕಾರ್ಪೊರೇಟರ್ ನಾಗರಾಜ ಗೌರಿ ಲಕ್ಷಾಂತರ ರೂ. ಹರಿಸಿ ತಾನೆ ಕ್ಯಾಂಡಿಡೇಟ್ ಎಂಬಂತೆ ತೋರಿಸಿಕೊಳ್ಳುತ್ತಿದ್ದಾರೆ. ಸಂದರ್ಭ ಸಿಕ್ಕಾಗೆಲ್ಲ ಶಾಸಕರ ಲೋಪದೋಷ ಎತ್ತಿ ಆಡುತ್ತ ಸ್ವಜಾತಿ ಲಿಂಗಾಯತರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಮತ್ತೊಬ್ಬ ಮಾಜಿ ಕಾರ್ಪೊರೇಟರ್-ಚಿತ್ಪಾವನ್ ಬ್ರಾಹ್ಮಣ ಜಾತಿಯ ದೀಪಕ್ ಚಿಂಚೋರೆ ಟಿಕೆಟ್ ತರಲು ಕಟಿಪಿಟಿ ನಡೆಸಿದ್ದಾರೆ. ಎಐಸಿಸಿ ಸದಸ್ಯನಾಗಿರುವ ಚಿಂಚೋರೆ ತಮ್ಮ ಬೆಂಗಳೂರು-ದಿಲ್ಲಿ ಸಂಪರ್ಕಗಳನ್ನೆಲ್ಲ ಬಳಸಿ ಕಾಂಗ್ರೆಸ್ ಹುರಿಯಾಳಾಗುವ ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ ಎಂಬ ಸುದ್ದಿ ಕಾಂಗ್ರೆಸ್ ಬಿಡಾರದಿಂದ ಬರುತ್ತಿದೆ. ಹಿಂದಿನ ಎರಡು ಚುನಾವಣೆಯಲ್ಲಿ ಜೆಡಿಎಸ್ ಮತ್ತು ಒಮ್ಮೆ ಕಾಂಗ್ರೆಸ್‌ನಿಂದ ಸೋತಿರುವ ಇಸ್ಮಾಯಿಲ್ ತಮಟಗಾರ್‌ಗೆ ಇಲ್ಲಿಂದ ಸ್ಪರ್ಧಿಸುವ ಮನಸ್ಸಿಲ್ಲ; ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟಾದರೆ ಗೆಲ್ಲಬಹುದೆಂಬ ವಾದ ತಮಟಗಾರ್‌ರದು. ಆದರೆ ಮಾಜಿ ಮಂತ್ರಿ ವಿನಯ್ ಕುಲಕರ್ಣಿ ತವರು ಕ್ಷೇತ್ರ ಬಿಟ್ಟುಕೊಡಲು ಸಿದ್ಧರಿಲ್ಲ.

ಮುಸ್ಲಿಮ್‌ರ ಪ್ರಭಾವಿ ಅಂಜುಮಾನ್ ಇಸ್ಲಾಮ್ ಸಂಸ್ಥೆ ಅಧ್ಯಕ್ಷ ತಮಟಗಾರ್‌ಗೇ ಕಾಂಗ್ರೆಸ್ ಹುರಿಯಾಳಾಗಿಸುವ ಸಾಧ್ಯತೆ ಹೆಚ್ಚೆಂಬ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್ ಮುಸಲ್ಮಾನರಿಗೆ ಟಿಕೆಟ್ ಕೊಟ್ಟರೆ ವಿಭಜಕ ರಾಜಕಾರಣದ ಬೇರುಗಳು ತೀರ ಆಳಕ್ಕೆ ಇಳಿದಿರುವ ಹು.ಧಾ-ಪಶ್ಚಿಮ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಸ್ವಜಾತಿ ಅರವಿಂದ್ ಬೆಲ್ಲದ್‌ರತ್ತ ಕ್ರೋಢೀಕೃತವಾಗಿ ಬಿಜೆಪಿ ಗೆಲುವು ಸುಭವಾಗಲಿದೆ; ಕಾಂಗ್ರೆಸ್ ಗೆಲ್ಲುವ ಸ್ಟ್ರಾಟರ್ಜಿ ಮಾಡಬೇಕೆಂದರೆ ಲಿಂಗಾಯತರಿಗೆ ಟಿಕೆಟ್ ಕೊಟ್ಟು ಮುಸ್ಲಿಮರ ವಿಶ್ವಾಸ ಗಳಿಸಬೇಕೆಂಬ ತರ್ಕ ನಿಷ್ಠಾವಂತ ಕಾಂಗ್ರೆಸಿಗರದು. ಸಲೀಮ್ ಅಹ್ಮದ್‌ರನ್ನು ವಿಧಾನ ಪರಿಷತ್ ಸದಸ್ಯರಾಗಿ ಮಾಡಿರುವುದರಿಂದ ಮುಸ್ಲಿಮರಿಗೆ ಅಸೆಂಬ್ಲಿ ಟಿಕೆಟ್ ಕೊಡದಿದ್ದರೆ ಅನ್ಯಾಯವೇನಾಗುವುದಿಲ್ಲ ಎಂದು ಈ ಕಾಂಗ್ರೆಸ್ಸಿಗರು ವಾದಿಸುತ್ತಾರೆ. ಜೆಡಿಎಸ್ ಅಭ್ಯರ್ಥಿಯಾಗಲು ಹು.ಧಾ ಜೆಡಿಎಸ್ ಘಟಕದ ಅಧ್ಯಕ್ಷ ಗುರುರಾಜ್ ಹುಣಸಿಮರದ್ ಅಣಿಯಾಗುತ್ತಿದ್ದಾರೆ. ಹೋರಾಟ ಏನಿದ್ದರೂ ಬಿಜೆಪಿ-ಕಾಂಗ್ರೆಸ್ ಮಧ್ಯೆ ಮಾತ್ರ ಎಂಬುದು ಕ್ಷೇತ್ರದಲ್ಲಿ ಎಲ್ಲೆಲ್ಲಿಯ ಮಾತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...