Homeಕರ್ನಾಟಕಭ್ರಮಗಳಲ್ಲಿ ಬದುಕದೆ, ಭ್ರಮನಿರಸನಕ್ಕೂ ಗುರಿಯಾಗದೆ ಮುಂದಡಿ ಇಡಬೇಕಾದ ಕಾಲ

ಭ್ರಮಗಳಲ್ಲಿ ಬದುಕದೆ, ಭ್ರಮನಿರಸನಕ್ಕೂ ಗುರಿಯಾಗದೆ ಮುಂದಡಿ ಇಡಬೇಕಾದ ಕಾಲ

ಬದುಕು ಭ್ರಮೆಗಳ ಮೇಲೆ ನಡೆಯುವುದಿಲ್ಲ. ಕೃಷಿ ಬಿಕ್ಕಟ್ಟು ಭ್ರಮೆಯಲ್ಲ, ನಿರುದ್ಯೋಗ ಭ್ರಮೆಯಲ್ಲ, ವೇತನಗಳ ಕಡಿತ, ದಮನಿತರ ಮೇಲಿನ ದಾಳಿ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರಗಳು, ಕುಡಿತ, ಬೆಲೆ ಏರಿಕೆ, ಮೊಟಕುಗೊಳ್ಳುತ್ತಿರುವ ಸಂವಿಧಾನಾತ್ಮಕ ಹಕ್ಕುಗಳು ಯಾವುದೂ ಭ್ರಮೆಯಲ್ಲ.

- Advertisement -
- Advertisement -

|ನ್ಯಾಯಪಥ ಸಂಪಾದಕೀಯ|

“ಭ್ರಮೆಗಳಿಗೂ ಒಳಗಾಗದೆ ಭ್ರಮನಿರಸನಕ್ಕೂ ಗುರಿಯಾಗದೆ ಮುನ್ನಡೆಯಬೇಕಿರುವುದೇ ಇಂದಿನ ಸಮಾಜದ ಮುಂದಿರುವ ಅತಿದೊಡ್ಡ ಸವಾಲು” – ಇಟಲಿಯ ಸರ್ವಾಧಿಕಾರಿ ಆಳ್ವಿಕೆಯಡಿ ಜೈಲುಪಾಲಾಗಿ 1937ರಲ್ಲಿ ಜೈಲಲ್ಲೇ ಮರಣ ಹೊಂದಿದ ದಿಟ್ಟ ಹೋರಾಟಗಾರ, ಅಚ್ಚರಿಯ ಚಿಂತಕ ಆಂಟೋನಿಯೋ ಗ್ರಾಮ್ಷಿ ತಮ್ಮ ಜೈಲು ನೋಟ್ ಬುಕ್ಕಿನಲ್ಲಿ ಬರೆದ ಮಾತಿದು.

‘ಬಂಡವಾಳಶಾಹಿ ವ್ಯವಸ್ಥೆ ಸೃಷ್ಟಿಸಿರುವ ಸಮೂಹ ಉನ್ಮಾದಿ ಫ್ಯಾಸಿಸಂ ಅನ್ನು ಬೇಗನೇ ಸೋಲಿಸಿಬಿಡಬಹುದೆಂಬ ಭ್ರಮೆಗಳಿಗೂ ಒಳಗಾಗಬಾರದು. ಫ್ಯಾಸಿಸ್ಟ್ ಶಕ್ತಿಯನ್ನು ಮಣಿಸಲು ಸಾಧ್ಯವೇ ಇಲ್ಲ ಎಂಬ ಭ್ರಮನಿರಸನಕ್ಕೂ ಗುರಿಯಾಗದೆ ತಾಳ್ಮೆ, ವಿವೇಕ ಮತ್ತು ದೃಢ ಸಂಕಲ್ಪದ ಜೊತೆ ಕೆಲಸ ಮಾಡಬೇಕಾದ ಸಂದರ್ಭವಿದು’ ಎಂಬುದು ಅವರ ಮಾತಿನ ಅರ್ಥ. ಗ್ರಾಮ್ಷಿ ಹೇಳಿದಂತೆ ಅಂತಿಮವಾಗಿ ಫ್ಯಾಸಿಸಂ ಸೋತಿತು.

ಗ್ರಾಮ್ಷಿಯಂಥ ಸಹಸ್ರಾರು ಹೋರಾಟಗಾರರನ್ನು ಕೊಂದಿದ್ದ, ಫ್ಯಾಸಿಸಂ ಎಂಬ ಸಾಮಾಜಿಕ ಸರ್ವಾಧಿಕಾರಿ ವಿದ್ಯಮಾನಕ್ಕೆ ಚಾಲನೆ ನೀಡಿದ, ಹಿಟ್ಲರನ ವಿನಾಶಕಾರಿ ಚಿಂತನೆಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದ ಸರ್ವಾಧಿಕಾರಿ ಮುಸಲೋನಿ ಕೊನೆಯಲ್ಲಿ ತನ್ನ ಜನರ ಕೈಯಲ್ಲೇ ಕಲ್ಲಲ್ಲಿ ಹೊಡೆಸಿಕೊಂಡು ಸತ್ತ. ಆದರೆ ಫ್ಯಾಸಿಸಂ ಸುಲಭಕ್ಕೇನೂ ನಾಶವಾಗಿರಲಿಲ್ಲ. ಜನಾಂಗೀಯ ಹತ್ಯೆ ಹಾಗೂ ಪ್ರಪಂಚ ಯುದ್ಧದ ರೂಪದಲ್ಲಿ ವಿವರಿಸಲು ಅಸಾಧ್ಯವಾದ ನಷ್ಟಗಳಿಗೆ ಜಗತ್ತನ್ನು ಗುರಿಮಾಡಿತು. ಹೋರಾಟನಿರತ ಜನ ಧೀರ ಹಾಗೂ ದೀರ್ಘ ಸಂಘರ್ಷದ ಮೂಲಕ ಫ್ಯಾಸಿಸಂಅನ್ನು ಮಣಿಸಿ ಹಿಮ್ಮೆಟ್ಟಿಸುವಲ್ಲಿ ಅಂತಿಮವಾಗಿ ಯಶಸ್ವಿಯಾದರು. ಗ್ರಾಮ್ಷಿಯ ಮಾತನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಾದ, ಅನ್ವಯಿಸಿಕೊಳ್ಳಬೇಕಾದ ಸಂದರ್ಭ ನಮ್ಮ ಮುಂದಿದೆ.

2019ರ ಚುನಾವಣಾ ಫಲಿತಾಂಶ 2014ರ ಚುನಾವಣಾ ಫಲಿತಾಂಶಕ್ಕಿಂತಲೂ ಘೋರ ಚಿತ್ರಣವನ್ನು ನಮ್ಮ ಮುಂದೆ ತೆರೆದಿಟ್ಟಿದೆ. ಸುಳ್ಳುಗಳ ಸರಮಾಲೆ, ಹಣದ ಹೊಳೆ, ಎಲೆಕ್ಷನ್ ಕಮಿಷನ್ನಿನ ದುರ್ಬಳಕೆ, ಪುಲ್ವಾಮ ದಾಳಿಯ ದುರ್ಬಳಕೆ, ಧ್ಯಾನದ ನಾಟಕ, ಇವಿಯಂ ತಿರುಚುವಿಕೆಯ ಸಾಧ್ಯತೆ ಈ ಎಲ್ಲಾ ಕಳ್ಳ ಮಾರ್ಗಗಳನ್ನು ಬಿಜೆಪಿ ಮತ್ತು ಸಂಘಪರಿವಾರ ಈ ಚುನಾವಣೆಯಲ್ಲಿ ಯಥೇಚ್ಛವಾಗಿ ಬಳಸಿದೆ. ಆದರೆ ಅದರಿಂದಲೇ ಅದು ಗೆದ್ದಿದೆ ಎಂದುಕೊಂಡರೆ ನಾವು ನಮ್ಮ ದೇಶದಲ್ಲಿ ರೂಪಗೊಳ್ಳುತ್ತಿರುವ ಅಪಾಯಕಾರಿ ಸಾಮಾಜಿಕ-ಆರ್ಥಿಕ-ರಾಜಕೀಯ ವಿದ್ಯಮಾನವನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲಗೊಳ್ಳುತ್ತೇವೆ. ಸರ್ವಾಧಿಕಾರಿ ಮೌಲ್ಯ, ಮನಸ್ಥಿತಿ ಹಾಗೂ ಶಕ್ತಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ವ್ಯವಸ್ಥಿತವಾಗಿ ಹರಡಿ ಬೆಳೆದಿರುವುದನ್ನು ಮತ್ತು ಬೆಳೆಯುತ್ತಿರುವುದನ್ನು ಚುನಾವಣಾ ಫಲಿತಾಂಶಗಳು ತೋರಿಸುತ್ತಿವೆ.

2014ರ ಚುನಾವಣೆಗಿಂತ 2019ರ ಚುನಾವಣೆಯಲ್ಲಿ ಅತಿ ದುಷ್ಟ ಪಕ್ಷವಾದ ಬಿಜೆಪಿಯ ಸೀಟುಗಳ ಸಂಖ್ಯೆ ಹಾಗೂ ಓಟುಗಳ ಸಂಖ್ಯೆ ಎರಡೂ ಹೆಚ್ಚಾಗಿವೆ. ಬಿಜೆಪಿಯಲ್ಲೇ ಅತಿಉಗ್ರ ಸ್ವರೂಪದ ಚಿಂತನೆಗಳನ್ನು ಹೊಂದಿದ್ದ ಸಾಕ್ಷಿ ಮಹಾರಾಜ್, ಪ್ರಗ್ಯಾ ಸಿಂಗ್, ಕಟೀಲ್, ಹೆಗ್ಡೆ, ತೇಜಸ್ವಿ ಸೂರ್ಯರಂಥವರಿಗೆ ಟಿಕೆಟ್ ನೀಡಿದ್ದಲ್ಲದೆ ಅವರೆಲ್ಲರೂ ಹೆಚ್ಚಿನ ಅಂತರದಿಂದ ಗೆದ್ದಿದ್ದಾರೆ. ವಿರೋಧ ಪಕ್ಷವಾದ ಕಾಂಗ್ರೆಸ್ ರಾಷ್ಟ್ರೀಯ ಸ್ವರೂಪವನ್ನೇ ಕಳೆದುಕೊಂಡಿದೆ. 22 ರಾಜ್ಯಗಳಲ್ಲಿ ಕಾಂಗ್ರೆಸ್ ಕೊಚ್ಚಿಹೋಗಿದೆ. ದೇಶಕ್ಕೇ ಮಾದರಿ ಎಂದು ಕರೆಯಲಾದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ನೆಲೆಕಚ್ಚಿದ್ದಷ್ಟೇ ಅಲ್ಲದೆ ಈ ಎರಡೂ ಪಕ್ಷದ ಗಮನಾರ್ಹ ಓಟುಗಳು ಬಿಜೆಪಿ ಕಡೆ ದೃವೀಕರಣಗೊಂಡಿವೆ.

ತಮಿಳುನಾಡು ಹಾಗೂ ಒರಿಸ್ಸಾಗಳನ್ನು ಹೊರತುಪಡಿಸಿದರೆ ಪ್ರಾಂತೀಯ ಪಕ್ಷಗಳು ಬಿಜೆಪಿಯ ಆರ್ಭಟದಿಂದ ತತ್ತರಿಸಿವೆ. ಕಮ್ಯುನಿಸ್ಟ್ ಭದ್ರಕೋಟೆಯಾಗಿದ್ದ, ಆಮೇಲೆ ದೀದಿಯ ಬಿಗಿಮುಷ್ಠಿಯಲ್ಲಿದ್ದ ಬೆಂಗಾಲದ ಕೋಟೆಯನ್ನು ಬಿಜೆಪಿ ಬೇಧಿಸಿದೆ. ತಮಿಳುನಾಡು, ಕೇರಳಗಳಲ್ಲೂ ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಂಡಿದೆ. ದೇವೇಗೌಡರಂಥ ದಿಗ್ಗಜರೇ ಸೋತಿದ್ದಾರೆ. ರಾಹುಲ್ ಗಾಂಧಿ ತಮ್ಮ ಪಾರಂಪರಿಕ ಕ್ಷೇತ್ರವಾದ ಅಮೇಥಿಯಲ್ಲಿ ಸೋತಿದ್ದಾರೆ. ಮಲ್ಲಿಕಾರ್ಜುನರಂಥ ಹಿರಿಯ ನಾಯಕರೇ ಸ್ವಕ್ಷೇತ್ರದಲ್ಲಿ ಸೋತಿದ್ದಾರೆ. ಪರ್ಯಾಯ ಶಕ್ತಿಗಳಾಗಿ ಗಮನ ಸೆಳೆದಿದ್ದ ಪ್ರಕಾಶ್ ರೈ, ಕನ್ಹಯ್ಯ ಕುಮಾರ್, ಪ್ರಕಾಶ್ ಅಂಬೇಡ್ಕರ್ ಮುಂತಾದ ಅಭ್ಯರ್ಥಿಗಳೆಲ್ಲರೂ ಸೋತಿದ್ದಾರೆ.

ಸರ್ವಾಧಿಕಾರಿ ಶಕ್ತಿಗಳು ನಮ್ಮ ದೇಶದ ಜನರ ಮಾನಸಿಕತೆಯ ಮೇಲೆ, ನಮ್ಮ ದೇಶದ ಸಾಮಾಜಿಕ ರಚನೆಯ ಮೇಲೆ, ನಮ್ಮ ದೇಶದ ಸಾಂಸ್ಥಿಕ ರಚನೆಗಳ ಮೇಲೆ, ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಜಯ ಸಾಧಿಸಿವೆ. ದೇಶದ ಪ್ರಮುಖ ಕಾರ್ಪೊರೇಟ್ ಶಕ್ತಿಗಳು ಬಿಜೆಪಿಯ ಜೊತೆ ಬಲವಾಗಿ ಕೈಗೂಡಿಸಿದ್ದಾರೆ. ಇವರಿಬ್ಬರ ಅಕ್ರಮ ಸಂತಾನವಾದ ಮಾಧ್ಯಮ ಭ್ರಮಾಲೋಕವನ್ನು ಸೃಷ್ಟಿಸುತ್ತಿದೆ. ಆಳಲು ಬೇಕಾದ ಅಭಿಪ್ರಾಯಗಳನ್ನು, ಓಟುಗಳನ್ನು, ಸೀಟುಗಳನ್ನು ಉತ್ಪಾದಿಸುವ ಸುಸ್ಥಿತ ಸ್ಥಿತಿಯಲ್ಲಿ ಅವರಿದ್ದಾರೆ. ಮತ್ತೊಂದೆಡೆ ಅದನ್ನು ಎದುರಿಸಬಲ್ಲ ರಾಜಕೀಯ ಪರ್ಯಾಯ ಈ ದೇಶಕ್ಕೆ ಇಲ್ಲವಾಗಿದೆ. ಜನರ ವಿಶ್ವಾಸವನ್ನು ಗೆಲ್ಲಬಲ್ಲ, ಜನರಿಗೆ ವಿಶ್ವಾಸ ಬರುವಂಥ ಪರಿಹಾರಗಳನ್ನು ಮುಂದಿಡುವಂಥ, ಜನರು ವಿಶ್ವಾಸ ಇಡುವಂಥ ರೀತಿಯಲ್ಲಿ ನಡೆದುಕೊಳ್ಳಬಲ್ಲ, ಜನರ ಸಂಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವಂತಹ ನಿಜವಾದ ಪರ್ಯಾಯ ರಾಜಕೀಯ ಶಕ್ತಿ ಇಲ್ಲವಾಗಿದೆ.

ಜನರ ವಿಶ್ವಾಸವನ್ನು ಗಳಿಸಿಕೊಳ್ಳುವುದರಲ್ಲಿ ಕಾಂಗ್ರೆಸ್ಸಿನಿಂದ ಹಿಡಿದು ಎಲ್ಲಾ ರಾಜಕೀಯ ಪಕ್ಷಗಳು ವಿಫಲಗೊಂಡಿವೆ. ದುರ್ಬಲ ವಿಪಕ್ಷಗಳಿಗಿಂತ ದೇಶ ಹಾಗೂ ಧರ್ಮದ ಬಗ್ಗೆ ಮಾತನಾಡುವ ಬಲಿಷ್ಟ ಪಕ್ಷ ಬಿಜೆಪಿ ಮತ್ತು ಮೋದಿ ಹೆಚ್ಚು ಆಕರ್ಷಿತರಾಗಿ ಕಾಣುತ್ತಿದ್ದಾರೆ. ಈ ಎಲ್ಲಾ ಆಳುವವರ ಬಣ್ಣವನ್ನು ಬಯಲುಗೊಳಿಸುವಂತಹ, ಜನರ ನಿಜವಾದ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ದೇಶದ ರಾಜಕಾರಣದ ಕೇಂದ್ರವನ್ನಾಗಿ ಮಾಡಬಲ್ಲಂಥ ಚಳವಳಿಗಳ ಅಲೆಯೂ ಇಲ್ಲವಾಗಿದೆ. ಈ ನಿರ್ವಾತ ಬಿಜೆಪಿಯ ಸಮೂಹ ಸನ್ನಿ ರಾಜಕಾರಣಕ್ಕೆ ವಿಪುಲ ಅವಕಾಶಗಳನ್ನು ಒದಗಿಸುತ್ತಿದೆ.

ಮೇಲ್ಕಂಡ ಕಠೋರ ವಾಸ್ತವವನ್ನು ಯಾವ ಮುಚ್ಚುಮರೆಯೂ ಇಲ್ಲದೆ ಕಣ್ಣು ತೆರೆದು ನಾವು ನೋಡಬೇಕಿದೆ. ವಿಚಲಿತಗೊಳ್ಳುವುದಲ್ಲ, ಚಿವುಟಿಕೊಂಡು ಮಂಪರಿಂದ ಹೊರಬರಬೇಕಿದೆ. ಹೆದರುವುದಲ್ಲ ವಾಸ್ತವವನ್ನು ಎದುರಿಸಲು ಸಿದ್ಧರಾಗಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಕರೆಯಲಾಗುವ ಈ ಬಲಾಢ್ಯರ ವ್ಯವಸ್ಥೆಯಲ್ಲಿ ದುಡಿಯುವವರು, ಬಡವರು, ಜನಪರರು ಗೆದ್ದು ಬರುವುದೇ ಕಷ್ಟ. ಇಡೀ ಸಮಾಜ, ಸರ್ಕಾರ, ಸಂಪತ್ತು, ಮಾಧ್ಯಮ ಅವರ ಕೈಯಲ್ಲಿರುವಾಗ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸುವುದು ಸುಲಭ ಸಾಧ್ಯವಿಲ್ಲ. ಒಂದು ವೇಳೆ ಚುನಾವಣೆಯಲ್ಲಿ ಸೋತರೂ ಸಮಾಜವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವ ವಿಕೃತ ಸಂತಾನ ಸೋತುಬಿಡುವುದಿಲ್ಲ. ಬೆನ್ನು ಮೂಳೆ ಇಲ್ಲದ, ಪರ್ಯಾಯ ಸತ್ವವಿಲ್ಲದ ರಾಜಕೀಯ ವಿಪಕ್ಷಗಳನ್ನು ನಂಬಿ ಕೂತರೂ ಈ ಕೆಲಸ ಆಗುವುದಿಲ್ಲ. ಪರ್ಯಾಯ ಪ್ರಜ್ಞೆಯನ್ನು ಜನರಲ್ಲಿ ಉದ್ದೀಪನಗೊಳಿಸಬಲ್ಲ ಪ್ರಬಲ ಚಳವಳಿಯನ್ನೂ ಕಟ್ಟದೆ ಪರ್ಯಾಯ ಅಭ್ಯರ್ಥಿಗಳಾಗಿ ನಿಲ್ಲುವ ಪ್ರಯತ್ನಗಳು ಯಾವ ಪ್ರಯೋಜನಕ್ಕೂ ಬರುವುದಿಲ್ಲ. ಹಾಗಿದ್ದರೆ ಮಾಡಬೇಕಾದುದೇನು?

ನಾವು ತುರ್ತಾಗಿ ಮಾಡಬೇಕಾದ್ದು, ಮಾಡಿಕೊಳ್ಳಬೇಕಾದದ್ದು ನಿಷ್ಠುರ ಆತ್ಮಾವಲೋಕನ. ಸರ್ವಾಧಿಕಾರಿ ಶಕ್ತಿಗಳನ್ನು ಮಣಿಸಬೇಕೆಂದು ಬಯಸಿದ, ಪ್ರಯತ್ನಿಸಿದ ನಾವೆಲ್ಲರೂ ನಮ್ಮ ಇದುವರೆಗಿನ ಪ್ರಯತ್ನಗಳನ್ನು ಬಿಚ್ಚು ಮನಸ್ಸಿನಿಂದ ತಿರುಗಿ ನೋಡಿಕೊಳ್ಳಬೇಕಾದ ಸಂದರ್ಭವಿದು. ಸತ್ವರಹಿತ ವಿಪಕ್ಷಗಳು ಸರ್ವಾಧಿಕಾರಿ ಶಕ್ತಿಗಳನ್ನು ಮಣಿಸುತ್ತವೆ ಎಂಬ ಭ್ರಮೆಯನ್ನು ಬೆಳೆಸಿಕೊಳ್ಳದೆ, ಕೂಡಲೇ ಚುನಾವಣೆಗೆ ನಿಂತು ಗೆಲ್ಲಬೇಕೆಂಬ ಶಾರ್ಟ್‍ಕಟ್ ಮಾರ್ಗಗಳನ್ನು ಹುಡುಕದೆ ತಾಳ್ಮೆಯ, ಯೋಜಿತ, ದೀರ್ಘಕಾಲೀನ ಹೋರಾಟಕ್ಕೆ ರಂಗ ಸಜ್ಜುಗೊಳಿಸಿಕೊಳ್ಳುವ ಕಾಲವಿದು.

ಸುಳ್ಳು ಮೇಲ್ಗೈ ಸಾಧಿಸಿದೆ, ಆದರೆ ನಮ್ಮ ದೇಶದಲ್ಲಿ ಸತ್ಯವಿನ್ನು ಸತ್ತಿಲ್ಲ. ಸರ್ವಾಧಿಕಾರಿ ಶಕ್ತಿಗಳು ಹೂಂಕರಿಸುತ್ತಿವೆ ಆದರೆ ಈ ನೆಲದೊಳಗಿನ ಪ್ರಜಾಪ್ರಭುತ್ವದ ಮೌಲ್ಯಗಳು ಮುರುಟಿಲ್ಲ. ಎಲ್ಲಾ ಸತ್ವಶಾಲಿ ಮನಸ್ಸುಗಳನ್ನು, ಶಕ್ತಿಶಾಲಿ ಹೋರಾಟದ ಸೆಲೆಗಳನ್ನು ಒಂದುಗೂಡಿಸಿಕೊಂಡಲ್ಲಿ, ಸರಿಯಾದ ಸಮಗ್ರವಾದ ಯೋಜನೆ ಜೊತೆ, ತಾಳ್ಮೆಯಿಂದ ಕೆಲಸ ಮಾಡಿದಲ್ಲಿ ಇಡೀ ದೇಶ ನಿದ್ದೆಯಿಂದ ಮೈಕೊಡವಿ ಏಳುವಂಥ ಚಳವಳಿಯನ್ನು ದೇಶದ ಹೋರಾಟಗಾರರೆಲ್ಲರೂ ಸೇರಿ ಹುಟ್ಟುಹಾಕಬಹುದು.

ಒಂದಷ್ಟು ವರ್ಷ ಭಾವುಕ ಹಾಗೂ ಭ್ರಾಮಕ ರಾಜಕಾರಣದ ಮೇಲೆ ಜನರನ್ನು ತೇಲಿಸಿಕೊಂಡು ಹೋಗಬಹುದು. ಆದರೆ ಬದುಕು ಭ್ರಮೆಗಳ ಮೇಲೆ ನಡೆಯುವುದಿಲ್ಲ. ಕೃಷಿ ಬಿಕ್ಕಟ್ಟು ಭ್ರಮೆಯಲ್ಲ, ನಿರುದ್ಯೋಗ ಭ್ರಮೆಯಲ್ಲ, ವೇತನಗಳ ಕಡಿತ, ದಮನಿತರ ಮೇಲಿನ ದಾಳಿ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರಗಳು, ಕುಡಿತ, ಬೆಲೆ ಏರಿಕೆ, ಮೊಟಕುಗೊಳ್ಳುತ್ತಿರುವ ಸಂವಿಧಾನಾತ್ಮಕ ಹಕ್ಕುಗಳು ಯಾವುದೂ ಭ್ರಮೆಯಲ್ಲ. ಎಲ್ಲವೂ ವರ್ಷವರ್ಷಕ್ಕೂ ಗಂಭೀರ ಸ್ವರೂಪ ತಾಳುತ್ತಿರುವ, ಜನರ ಬದುಕನ್ನು ಸುಡುತ್ತಿರುವ ಜೀವಂತ ವಾಸ್ತವಗಳು. ಜನರ ಈ ಜೀವಂತ ಸಮಸ್ಯೆಗಳ ಮೇಲೆ ನಮ್ಮ ಗಮನ ಕೇಂದ್ರೀಕರಿಸಿ, ಆಯಾ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಶಕ್ತಿಗಳನ್ನೆಲ್ಲಾ ಒಂದುಗೂಡಿಸಿ, ಜನರ ಜೊತೆ ನಿಂತು ಕೆಲಸ ಮಾಡುವ ಶಕ್ತಿಗಳು ಕ್ರಿಯಾಶೀಲರಾಗಬೇಕು. ಹಾಗೆ ಮಾಡಿದಾಗ ಮುಂದಿನ ಕೆಲವು ವರ್ಷಗಳಲ್ಲಿ ವಿವಿಧ ಜನ ಸಮುದಾಯಗಳ ಹೋರಾಟದ ಧಾರೆಗಳು ಈ ನೆಲದಲ್ಲಿ ಹರಿಯತೊಡಗುವುದರಲ್ಲಿ ಯಾವ ಸಂಶಯವೂ ಇಲ್ಲ. ಈ ಎಲ್ಲಾ ಧಾರೆಗಳು ಸಾಮಾನ್ಯ ಅಜೆಂಡಾದ ಮೇಲೆ ಎದ್ದು ನಿಂತಲ್ಲಿ ಅದು ಜನರ ಸಂಯುಕ್ತ ಶಕ್ತಿಯಾಗಿ ಹೊರಹೊಮ್ಮುತ್ತದೆ. ನೈಜ ಹಾಗೂ ಅತ್ಯಗತ್ಯ ಹಕ್ಕುಗಳಿಗಾಗಿ ಮೂಡಿಬರುವ ಇಂತಹ ಪ್ರಬಲ ಜನರ ಶಕ್ತಿಯೇ ಸರ್ವಾಧಿಕಾರಿ ಶಕ್ತಿಗಳನ್ನು ಎದುರಿಸಬಲ್ಲದು, ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡು ಜನರ ಅಜೆಂಡ ದೇಶದ ಅಜೆಂಡ ಆಗುವಂತೆ ಮಾಡಬಲ್ಲದು. ಇದಕ್ಕಾಗಿ ರಾಜ್ಯದ, ದೇಶದ ಹೋರಾಟನಿರತ ಶಕ್ತಿ ಒಗ್ಗೂಡಬೇಕು, ಹಂತಹಂತವಾಗಿ ಸರ್ವಾಧಿಕಾರಿಗಳನ್ನು ಮಣಿಸಬಲ್ಲಂಥ ಯುಕ್ತಿ ರೂಪುಗೊಳ್ಳಬೇಕು.

ಆದರೆ ಇದನ್ನು ಮಾಡುವುದು ಹೇಗೆ? ಸಾಧಿಸುವುದು ಹೇಗೆ? ಈ ಪ್ರಶ್ನೆಗೆ ಉತ್ತರ ನಮ್ಮ ಆತ್ಮಾವಲೋಕನದಿಂದ ಹುಟ್ಟಬೇಕು, ನಮ್ಮೊಳಗಿನ ಪ್ರಾಮಾಣಿಕ ಮತ್ತು ಆಳವಾದ ಮಂಥನದಿಂದ ಹುಟ್ಟಬೇಕು. ಈ ಅತ್ಯಗತ್ಯ ತುರ್ತು ಕರ್ತವ್ಯಕ್ಕೆ ನಮ್ಮನ್ನು ನಾವು ಒಡ್ಡಿಕೊಂಡಲ್ಲಿ, ಹೊಸ ಬಯಲಿಗೆ ನಮ್ಮನ್ನು ತೆರೆದುಕೊಂಡಲ್ಲಿ ಹೊಸ ಹಾದಿ ಖಂಡಿತ ಗೋಚರಿಸುತ್ತದೆ. ಕಗ್ಗತ್ತಲಿನೊಳಗಿಂದಲೇ ಬೆಳಕು ಹುಟ್ಟುತ್ತದೆ. ಇಂದಿನ ಸಂದಿಗ್ಧ, ಸಂಕಷ್ಟಮಯ ಪರಿಸ್ಥಿತಿಯೇ ಹೊಸ ಹಾದಿಯ ಹುಟ್ಟಿಗೆ ಕಾರಣವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...