Homeಮುಖಪುಟ"ಕಲ್ಯಾಣ ನಾಡಿನಲ್ಲಿ ಕೋಮುವಾದಕ್ಕೆ ಮಣೆ": ಹೈ.ಕ ಚುನಾವಣಾ ಫಲಿತಾಂಶ ವಿಶ್ಲೇಷಣೆ

“ಕಲ್ಯಾಣ ನಾಡಿನಲ್ಲಿ ಕೋಮುವಾದಕ್ಕೆ ಮಣೆ”: ಹೈ.ಕ ಚುನಾವಣಾ ಫಲಿತಾಂಶ ವಿಶ್ಲೇಷಣೆ

- Advertisement -
- Advertisement -

| ಭೀಮನಗೌಡ ಕಾಶಿರೆಡ್ಡಿ, ಕಂಪ್ಲಿ |

ಕೊನೆಗೂ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿವೆ. ಹೈದರಾಬಾದ್ ಕರ್ನಾಟಕದಲ್ಲಿ 5ಕ್ಕೆ 5 ಸ್ಥಾನಗಳನ್ನೂ ಬಿಜೆಪಿ ಗೆದ್ದುಕೊಂಡು ಈ ಭಾಗದಲ್ಲಿ ಹೊಸ ದಾಖಲೆ ಮಾಡಿದೆ. ಈ ಐದರಲ್ಲಿ ಎರಡು ಕ್ಷೇತ್ರಗಳು ( ಬಳ್ಳಾರಿ, ರಾಯಚೂರು) ಪರಿಶಿಷ್ಟ ಪಂಗಡದವರಿಗೆ ಮೀಸಲಾಗಿದ್ದು, ಒಂದು ( ಕಲ್ಬುರ್ಗಿ) ಕ್ಷೇತ್ರ ಪರಿಶಿಷ್ಟ ಜಾತಿಯವರಿಗೆ ಮೀಸಲಿದೆ.

ಎರಡು ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಸೇರಿವೆ. 2009 ಹಾಗೂ2014ರಲ್ಲಿ ಕಾಂಗ್ರೆಸ್ 2 ಮತ್ತು ಬಿಜೆಪಿ 3 ಸ್ಥಾನಗಳಲ್ಲಿ ಜಯಗಳಿಸಿದ್ದವು. ಆದರೆ ಈ ಬಾರಿ ಮಾತ್ರ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿಬಿಟ್ಟಿತು. ಮಲ್ಲಿಕಾರ್ಜುನ ಖರ್ಗೆ, ಈಶ್ವರ ಖಂಡ್ರೆ ಹಾಗೂ ವಿ.ಎಸ್.ಉಗ್ರಪ್ಪ ನಂತಹ ದಿಗ್ಗಜರು ಸೋಲಿನ ರುಚಿ ನೋಡಬೇಕಾಯಿತು.

ಖರ್ಗೆಗೆ ಮುಳುವಾದ ಪುತ್ರ ವ್ಯಾಮೋಹ:
ಪುರಾಣದಲ್ಲಿನ ಯಯಾತಿಯ ಕಥೆ ಖರ್ಗೆ ವಿಷಯದಲ್ಲಿ ತಿರುವು ಮುರುವಾಗಿದೆ. ಆ ಕತೆಯಲ್ಲಿ ತಂದೆ ಯಯಾತಿ ಮಗ ಪುರುವಿನ ಯೌವ್ವನವನ್ನು ಕಡವಾಗಿ ಪಡೆದರೆ, ಇಲ್ಲಿ ಪ್ರಿಯಾಂಕ ಖರ್ಗೆ ತಂದೆಯ ರಾಜಕೀಯ ಆಯುಷ್ಯವನ್ನೇ ಎರವಲು ಪಡೆದುಬಿಟ್ಟ. ಕಳೆದ ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಮಗನನ್ನು ಮಂತ್ರಿಯನ್ನಾಗಿ ಮಾಡುವ ಹಟಕ್ಕೆ ಬಿದ್ದ ಖರ್ಗೆಯವರು ಕಮರುಲ್ ಇಸ್ಲಾಂ, ಬಾಬುರಾವ್ ಚಿಂಚನಸೂರ್ ಹಾಗು ಮಾಲಿಕಯ್ಯ ಗುತ್ತೇದಾರ್‌ರಂತಹ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿ ಅವರ ವಿರೋಧ ಕಟ್ಟಿಕೊಳ್ಳಬೇಕಾಯಿತು.

ಮಾಲಿಕಯ್ಯ, ಬಾಬುರಾವ್‌ರಂತಹ ಹಿಂದುಳಿದ ವರ್ಗಗಳ ಪ್ರಬಲ ನಾಯಕರು ಬಿಜೆಪಿ ಸೇರಿ ಖರ್ಗೆ ಸೋಲಿಸಲು ಟೊಂಕ ಕಟ್ಟಿ ನಿಂತುಬಿಟ್ಟರು. ಒಂದು ರೀತಿಯಲ್ಲಿ ಹೇಳುವುದಾದರೆ ಖರ್ಗೆಯವರನ್ನು ಸೋಲಿಸುವ ಸಂಚು ಒಂದು ವರ್ಷದ ಹಿಂದೆಯೇ ರೂಪುಗೊಂಡಿತ್ತು. ಅಸ್ಪೃಶ್ಯ ದಲಿತ ಸಮುದಾಯದ ಖರ್ಗೆ ವಿರುದ್ಧ, ಅಸ್ಪೃಶ್ಯೇತರ ದಲಿತರಾದ ಉಮೇಶ್ ಜಾಧವ್‌ರನ್ನು ಆಪರೇಷನ್ ಕಮಲದ ಮೂಲಕ ಸೆಳೆದು ಅಭ್ಯರ್ಥಿಯಾಗಿಸುವ ಮೂಲಕ ಬಿಜೆಪಿ ತನ್ನ ಜಾತಿ ರಾಜಕಾರಣದ ಅಸ್ತ್ರ ಪ್ರಯೋಗ ಮಾಡಿತು.

ಇದನ್ನು ಓದಿ: ಕಲಬುರ್ಗಿ: ‘ಈ ಸಲ ಖರ್ಗೆಯವರಿಗೆ ಟಫ್ ಇದೆ’

ಕಳೆದೆರೆಡು ಚುನಾವಣೆಯಲ್ಲಿ ಅದೇ ಲಂಬಾಣಿ ಸಮುದಾಯದ ರೇವುನಾಯಕ್ ಬೆಳಮಗಿ ವಿರುದ್ದ ಒಮ್ಮೆ14 ಸಾವಿರ, ಮತ್ತೊಮ್ಮೆ 75 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಖರ್ಗೆಯವರು ಈ ಬಾರಿ ಜಾಧವ್ ಎದುರು 85 ಸಾವಿರ ಮತಗಳಿಂದ ಸೋಲುಣಬೇಕಾಯಿತು. ತಮ್ಮ ಮಗನಿಗಾಗಿ ನಮ್ಮ ಕೋಲಿ ಸಮಾಜಕ್ಕೆ ದೊರಕಿದ್ದ ಏಕೈಕ ಮಂತ್ರಿಸ್ಥಾನವನ್ನೂ ಕಿತ್ತುಕೊಂಡರೆಂದು ಖರ್ಗೆ ವಿರುದ್ಧ ಅಸಮಧಾನಗೊಂಡಿದ್ದ ಆ ಸಮಾಜದವರನ್ನು ಬಾಬುರಾವ್ ಚಿಂಚನಸೂರ್ ನೇತೃತ್ವದಲ್ಲಿ ವ್ಯವಸ್ಥಿತವಾಗಿ ಸಂಘಟಿಸಿದ್ದೇ ಸಂಘ ಪರಿವಾರ.

ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 3 ಲಕ್ಷದಷ್ಟಿರುವ ಈ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡುವ ಹುಸಿ ಭರವಸೆ ನೀಡುವ ಮೂಲಕ ಸಾರಾಸಗಟಾಗಿ ಬಿಜೆಪಿಗೆ ಮತ ಚಲಾಯಿಸುವಂತೆ ನೋಡಿಕೊಳ್ಳಲಾಯಿತು. ಕೊನೆಗೆ 371j ಹಾಗು ತಾವು ಮಾಡಿದ ಅಭಿವೃದ್ಧಿ ಕಾರ್ಯಗಳು ಕೂಡಾ ಖರ್ಗೆಯವರ ಕೈ ಹಿಡಿಯಲಿಲ್ಲ.

ಖಂಡ್ರೆ

ಇನ್ನು ಬೀದರ್‌ನಲ್ಲಿ ಗೆಲ್ಲಲು ವಿಫುಲ ಅವಕಾಶಗಳಿದ್ದ ಈಶ್ವರ ಖಂಡ್ರೆಯವರು 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದಾರೆ. ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳನ್ನು ಹೊಂದಿದ ಲಿಂಗಾಯತ ಹಾಗೂ ದಲಿತರು ಬಿಜೆಪಿಗೆ ಹೆಚ್ಚು ಒಲವು ತೋರಿದ್ದಾರೆನ್ನಲಾಗಿದೆ. ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಐವರು ಮೈತ್ರಿಕೂಟದ ಶಾಸಕರಿದ್ದು ಅದರಲ್ಲಿ ಮೂವರು ಸಚಿವರಾಗಿದ್ದಾರೆ. ಆದರೂ ಖಂಡ್ರೆ ಸೋತಿದ್ದು ವಿಪರ್ಯಾಸವೇ ಸರಿ.

ರಾಯಚೂರು-ಕೊಪ್ಪಳ : ಕಳೆದ ಬಾರಿ ಕೇವಲ ಒಂದೂವರೆ ಸಾವಿರ ಮತಗಳ ಅಂತರದಿಂದ ಗೆದ್ದಿದ್ದ ಬಿ.ವಿ.ನಾಯಕ ತನ್ನ ಸೋಮಾರಿತನದಿಂದಲೇ ಈ ಬಾರಿ ಸೋಲತ್ತಾರೆನ್ನುವುದು  ಹೆಚ್ಚು ಕಡಿಮೆ ಖಚಿತವಾಗಿತ್ತು. ಅದೇ ರೀತಿ ಆಗಿದೆ. ಇತ್ತ ಕೊಪ್ಪಳದಲ್ಲಿ ರಾಯರೆಡ್ಡಿ ಅಥವಾ ಬಸವನಗೌಡ ಬಾದರ್ಲಿ ಯವರಿಗೆ ಟಿಕೆಟ್ ಕೊಟ್ಟಿದ್ದರ ಕಾಂಗ್ರೆಸ್ ಗೆಲ್ಲಬಹುದಾಗಿತ್ತು. ಆದರೆ ಸಿದ್ಧರಾಮಯಯ್ಯನವರ ಹಠಮಾರಿತನದಿಂದಾಗಿ ಸ್ವಜಾತಿಯ ರಾಜಶೇಖರ ಹಿಟ್ನಾಳರು ಸ್ಪರ್ಧಿಸಿ ಕೇವಲ ಕುರುಬರ ಹಾಗೂ ಮುಸ್ಲಿಮರ ಮತ ಪಡೆದು ಸೋಲಬೇಕಾಯಿತು.

ಬಳ್ಳಾರಿ:  ಗಣಿನಾಡು ಬಳ್ಳಾರಿಯಲ್ಲಿ ಕಳೆದ ಆರು ತಿಂಗಳ ಹಿಂದಷ್ಟೇ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನ ಉಗ್ರಪ್ಪ ಗೆದ್ದಿದ್ದರು.ಆದರೆ ನಂತರದ ದಿನಗಳಲ್ಲಿ ನಡೆದಿದ್ದ ಆನಂದ್‌ಸಿಂಗ್, ಕಂಪ್ಲಿ ಗಣೇಶ್ ಹಾಗೂ ಭೀಮಾನಾಯ್ಕ್ ಮಧ್ಯೆ ನಡೆದಿದ್ದ ಮಾರಾಮಾರಿ, ಅತಿಥಿ ಉಸ್ತುವಾರಿ ಸಚಿವ ಡಿ.ಕೆ‌.ಶಿವಕುಮಾರ್‌ರವರ ಅತಿಯಾದ ಆತ್ಮವಿಶ್ವಾಸಗಳು ಈಗಾಗಲೇ ಉಗ್ರಪ್ಪನವರ ಸೋಲಿಗೆ ಮುನ್ನುಡಿ ಬರೆದಿದ್ದವು. ಹೀಗಾಗಿ ಕ್ಷೇತ್ರದಲ್ಲಿ ಐವರು ಶಾಸಕರು, ಅದರಲ್ಲಿ ಇಬ್ಬರು ಸಚಿವರಾಗಿದ್ದರೂ ಕೂಡಾ ಉಗ್ರಪ್ಪನವರು ಐವತ್ತಾರು ಸಾವಿರ ಮತಗಳ ಅಂತರದಿಂದ ಸೋಲಬೇಕಾಯಿತು. ಒಟ್ಟಿನಲ್ಲಿ ಹೇಳುವುದಾದರೆ ಕಲ್ಯಾಣದ ನಾಡಿನಲ್ಲಿ ಕೋಮುವಾದದ ಕಮಲ ಸಂಪೂರ್ಣ ಅರಳಿದಂತಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...