Homeಕರ್ನಾಟಕಉತ್ತರ ಪ್ರದೇಶ ಚುನಾವಣೆ; ಕರ್ನಾಟಕದ ಕಾಂಗ್ರೆಸ್‌ಗೆ ದೊಡ್ಡ ಎಚ್ಚರಿಕೆ

ಉತ್ತರ ಪ್ರದೇಶ ಚುನಾವಣೆ; ಕರ್ನಾಟಕದ ಕಾಂಗ್ರೆಸ್‌ಗೆ ದೊಡ್ಡ ಎಚ್ಚರಿಕೆ

- Advertisement -
- Advertisement -

ಉತ್ತರ ಪ್ರದೇಶದ ಸಾಮಾಜಿಕ ಸನ್ನಿವೇಶಕ್ಕೂ, ಅಲ್ಲಿನ ರಾಜಕೀಯ ಪಕ್ಷಗಳ ಸ್ಥಿತಿಗತಿಗೂ ಕರ್ನಾಟಕದ ಸನ್ನಿವೇಶಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಜೊತೆಗೆ ಉ.ಪ್ರದೇಶವು ಕರ್ನಾಟಕದ ಸುಮಾರು ನಾಲ್ಕು ಪಟ್ಟು ಇರುವ ದೊಡ್ಡ ರಾಜ್ಯ. ಕಳೆದ ಚುನಾವಣೆಯಲ್ಲಿ ಬಿಜೆಪಿಯು ಅಲ್ಲಿನ ವಿಧಾನಸಭೆಯಲ್ಲಿ ನಾಲ್ಕರಲ್ಲಿ ಮೂರರಷ್ಟು ಬಹುಮತ ಪಡೆದಿತ್ತು. ಆದರೆ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತವೇ ಇರಲಿಲ್ಲ; ಅದು ಅಕ್ರಮ ಮಾರ್ಗದಿಂದ ಅಧಿಕಾರ ಕಬಳಿಸಿತು. ಎಲ್ಲಕ್ಕಿಂತ ಮುಖ್ಯವಾಗಿ ಮತಪ್ರಮಾಣದಲ್ಲಿ ಬಿಜೆಪಿಗೂ ಅದರ ಸಮೀಪ ಸ್ಫರ್ಧಿ ಎಸ್‌ಪಿಗೂ ದೊಡ್ಡ ವ್ಯತ್ಯಾಸವಿದೆ. ಆದರೆ ಕರ್ನಾಟಕದಲ್ಲಿ 2018ರಲ್ಲಿ ಸೋತ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಬಿಜೆಪಿಗಿಂತ ಹೆಚ್ಚೇ ಮತ ಬಂದಿತ್ತು. ಹೀಗಿರುವಾಗ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶವು ಕರ್ನಾಟಕದ ಕಾಂಗ್ರೆಸ್‌ಗೆ ಎಚ್ಚರಿಕೆಯ ವಿಚಾರ ಹೇಗಾದೀತು?

ನಿಸ್ಸಂದೇಹವಾಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಜನ ಮೆಚ್ಚಿಕೊಂಡ ಆಡಳಿತ ನೀಡಿದ ಸರ್ಕಾರವಾಗಿರಲಿಲ್ಲ. ಇಂದು ಹಿಂತಿರುಗಿ ನೋಡಿ ಆ ವಿಚಾರದಲ್ಲಿ ಒಳ್ಳೆಯ ಆಳ್ವಿಕೆಯಿತ್ತು; ಈ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತಮವಾದ ಆಡಳಿತ ನೀಡಿದ್ದರಿಂದಲೇ ಜನರು ಮೆಚ್ಚಿ ಮತ ಹಾಕಿದ್ದಾರೆ ಎಂದು ಯಾರಾದರೂ ಹೇಳಿದರೆ ಅದು ವಾಸ್ತವವಲ್ಲ. ಕೋವಿಡ್ ನಿರ್ವಹಣೆ ಮಾತ್ರವಲ್ಲದೇ ಕಳೆದ ಚುನಾವಣೆಯಲ್ಲಿ ಚರ್ಚೆಗೆ ಬಂದ ಹಲವಾರು ಸಂಗತಿಗಳಲ್ಲಿ ಸದರಿ ಸರ್ಕಾರದ ಸಾಧನೆ ಅತ್ಯಂತ ಕಳಪೆಯಾಗಿತ್ತು. ಕರ್ನಾಟಕದಲ್ಲೂ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಗಳ ಸಾಧನೆಯೂ ಕಳಪೆಯೇ ಆಗಿದೆ. ಅಲ್ಲಿ ಒಬ್ಬರೇ ಮುಖ್ಯಮಂತ್ರಿ ಆಡಳಿತ ನಡೆಸಿದ್ದರೆ, ಇಲ್ಲಿ ಇಬ್ಬಿಬ್ಬರು ಬಂದೂ ಏನೂ ಪ್ರಯೋಜನವಾಗಿಲ್ಲ. ಆದರೆ ಉತ್ತರ ಪ್ರದೇಶದಲ್ಲಿ ಆದಂತೆ ಇಲ್ಲಿಯೂ ಈ ಸರ್ಕಾರ ತೊಲಗಿದರೆ ಸಾಕು ಎಂದು ಜನರಿಗೆ ಅನ್ನಿಸುತ್ತಿಲ್ಲ. ಬಹಳ ಮುಖ್ಯವಾಗಿ ಸರ್ಕಾರದ ವೈಫಲ್ಯದ ಕುರಿತು ವ್ಯಕ್ತವಾದ ಅಥವಾ ಅವ್ಯಕ್ತವಾದ ಸಿಟ್ಟು ಜನರಲ್ಲಿರಬೇಕು. ಅದು ಉತ್ತರ ಪ್ರದೇಶದಲ್ಲಿ ಕಂಡಷ್ಟೂ ಕರ್ನಾಟಕದಲ್ಲಿ ಕಾಣುತ್ತಿಲ್ಲ ಎಂಬುದನ್ನು ಗಮನಿಸಬೇಕು. ಏಕೆಂದರೆ ಜನರು ಗಮನ ಹರಿಸಲು ಬೇಕಾದ ಬೇರೆ (ಅವುಗಳ ಬಗ್ಗೆ ಬಿಜೆಪಿ ವಿರೋಧಿಗಳ ಅಭಿಪ್ರಾಯವೇನೇ ಇರಬಹುದು) ಇಶ್ಯೂಗಳನ್ನು ಬಿಜೆಪಿಯು ರಾಶಿರಾಶಿ ತಂದು ಹಾಕುತ್ತದೆ.

ಯೋಗಿ ಆದಿತ್ಯನಾಥ್

ಇಂತಹ ಸನ್ನಿವೇಶ ಇದ್ದಾಗ, ಇನ್ನೊಬ್ಬರು ಬಂದರೆ ಇವರಿಗಿಂತ ಒಳ್ಳೆಯ ಅಧಿಕಾರ ನೀಡುತ್ತಾರೆ ಎಂಬ ಭರವಸೆ ಹುಟ್ಟಿಸುವಂತಹ ಪಕ್ಷ ಹಾಗೂ ನಾಯಕತ್ವ ಇರಬೇಕು. ನಿಸ್ಸಂದೇಹವಾಗಿ ಎಚ್‌ಡಿಕೆ, ಬಿಎಸ್‌ವೈ ಮತ್ತು ಬೊಮ್ಮಾಯಿಯವರಿಗಿಂತ ಇದರ ಹಿಂದಿನ ಐದು ವರ್ಷಗಳ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ಹಲವು ವಿಧಗಳಲ್ಲಿ ಉತ್ತಮವಾದುದಾಗಿತ್ತು. ಆದರೂ ಅದು 2018ರ ಚುನಾವಣೆಯಲ್ಲಿ ಸೋತಿತ್ತು. ಅಂದರೆ ಕಾಂಗ್ರೆಸ್‌ನ ಆಡಳಿತದ ಒಳ್ಳೆಯ ಅಂಶಗಳನ್ನು ಆಗಲೇ ನೆನಪಿಸಿಕೊಳ್ಳದ ಜನರು ಈಗ ನೆನಪಿಸಿಕೊಳ್ಳಬೇಕೆಂದರೆ, ಅದಕ್ಕಿಂತ ಈಗಿನ ಸರ್ಕಾರ ಕಡು ಜನವಿರೋಧಿ ಎನ್ನಿಸಬೇಕು. ಅದಾಗುತ್ತಿಲ್ಲ. ಇನ್ನು ಸಿದ್ದರಾಮಯ್ಯನವರನ್ನು ಹಿಂದೂ ವಿರೋಧಿಯೆಂತಲೂ, ಡಿ.ಕೆ.ಶಿವಕುಮಾರ್‌ರನ್ನು ರೌಡಿ ಎಂತಲೂ ಬಿಂಬಿಸಲು ಬೇಕಾದ್ದೆಲ್ಲವನ್ನೂ ಬಿಜೆಪಿ ಮಾಡುತ್ತಿದೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯನವರನ್ನು ವಿಶೇಷವಾಗಿ ಒಕ್ಕಲಿಗ ವಿರೋಧಿ ಎಂದೂ ಯಶಸ್ವಿಯಾಗಿ ಬಿಂಬಿಸಲಾಗಿತ್ತು.

ಉತ್ತರ ಪ್ರದೇಶದಲ್ಲಿ ಅಧಿಕೃತ ವಿರೋಧ ಪಕ್ಷವಾಗಿ ದೀರ್ಘಕಾಲ ನಿದ್ರೆಯಲ್ಲಿದ್ದ ಅಖಿಲೇಶ್ ಯಾದವ್ ನೇತೃತ್ವದ ಎಸ್‌ಪಿಗಿಂತ ಕರ್ನಾಟಕದ ವಿರೋಧ ಪಕ್ಷ ಕಾಂಗ್ರೆಸ್ ಸಕ್ರಿಯವಾಗಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಕೋವಿಡ್ ಸಂದರ್ಭದ ದುರಾಡಳಿತ, ಭ್ರಷ್ಟಾಚಾರದ ವಿಷಯದಂತಹ ಕೆಲವು ಸಂಗತಿಗಳನ್ನು ಕಾಂಗ್ರೆಸ್ ಮುನ್ನೆಲೆಗೆ ತಂದಿತ್ತು ಅನ್ನುವುದೂ ನಿಜ. ಆದರೂ, ಜನರ ಕಣ್ಣಿನಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮೇಲು ಎನ್ನುವಂತಹ ಭಾವನೆ ಮೂಡುವಲ್ಲಿ ಇವು ಸಾಕಾಗಿಲ್ಲ. ಇಲ್ಲೇ ಎರಡಕ್ಕೂ ಸಾಮ್ಯತೆ ಇರುವುದು. ಬಿಜೆಪಿಯ ಕುರಿತು (ಕೋಮುವಾದೀ ಪ್ರೊಪಗಾಂಡಾದ ಪರಿಣಾಮದಿಂದ ಪೂರಾ ಒಮ್ಮುಖವಾಗಿರುವವರನ್ನು ಬಿಟ್ಟು) ಕರ್ನಾಟಕದ ಜನರಿಗೆ ವಿಶೇಷ ಪ್ರೇಮವೂ ಇಲ್ಲ; ಅದೇ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಕೆಲವು ಸಮುದಾಯಗಳಲ್ಲಿ ಕಂಡಷ್ಟು ಸಿಟ್ಟೂ ಇಲ್ಲ. ಅದಕ್ಕಿಂತ ಮುಖ್ಯವಾಗಿ ಕಾಂಗ್ರೆಸ್‌ನ ಪರವಾದ ಭಾವನೆಯೂ ಇಲ್ಲ. ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಮತ್ತು ಯಾದವರಿಗಿದ್ದ ಎಸ್‌ಪಿ ಪ್ರೇಮದಂಥದ್ದು ಇಲ್ಲಿ ಕಾಂಗ್ರೆಸ್‌ನ ಕುರಿತಾಗಿ ಮುಸ್ಲಿಮರಿಗೆ ಬಿಟ್ಟರೆ ಬೇರಾರಿಗೂ ಇಲ್ಲ. ಮುಸ್ಲಿಮರಿಗಿರುವುದೂ ಪ್ರೇಮವಲ್ಲ; ಅನಿವಾರ್ಯತೆ.

ಹೀಗಿದ್ದೂ ಕರ್ನಾಟಕದ ಕಾಂಗ್ರೆಸ್ ಪಕ್ಷದ ನಾಯಕರು ಮುಂದಿನ ಚುನಾವಣೆಯಲ್ಲಿ ನಾವು ಗೆದ್ದುಬಿಡುವ ಸಾಧ್ಯತೆ ಅಪಾರವಾಗಿದೆ ಎಂದು ಐದು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬರುವವರೆಗೂ ನಂಬಿಕೊಂಡಿದ್ದರು. ಉತ್ತರ ಪ್ರದೇಶಕ್ಕಿಂತ ಭಿನ್ನವಾಗಿ ಇಲ್ಲಿ ತಮಗೆ ಹೆಚ್ಚಿನ ಓಟ್‌ಬೇಸ್ ಇದೆ ಎಂಬ ಅಂಶವನ್ನು ಅವರುಗಳು ಹೇಳಬಹುದಾದರೂ, 2018ರಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮತ ಬಂದಿದೆ ಎಂಬ ವಿಚಾರದಲ್ಲಿ ಅವರು ಖುಷಿ ಪಟ್ಟುಕೊಳ್ಳಲು ಏನೂ ಇಲ್ಲ. ಅದು ಇಡೀ ರಾಜ್ಯದಲ್ಲಿ ಹರಡಿಕೊಂಡಿರುವ ಮತ. ಕನಿಷ್ಠ 50 ಕ್ಷೇತ್ರಗಳಲ್ಲಿ ಬಿಜೆಪಿಯ ಅಸ್ತಿತ್ವ ಅಷ್ಟಾಗಿ ಇಲ್ಲವಾದ್ದರಿಂದ, ಆದರೆ ತಾನಿರುವ 175 ಕ್ಷೇತ್ರಗಳಲ್ಲಿ ಅದು ಬಲಾಢ್ಯವಾಗಿರುವುದರಿಂದ, ಬಿಜೆಪಿಗೆ ಕಡಿಮೆ ಮತ ಬಂದರೂ ಕಾಂಗ್ರೆಸ್‌ಗಿಂತ ಹೆಚ್ಚಿನ ಸೀಟು ಪಡೆಯುತ್ತದೆ.

ಅಖಿಲೇಶ್ ಯಾದವ್

ಹಾಗೆಯೇ ಬಿಎಸ್‌ಪಿ ಹಾಗೂ ಎಂಐಎಂ ಉ.ಪ್ರದೇಶದಲ್ಲಿ ವಹಿಸಿದ ಪಾತ್ರವನ್ನು ಕರ್ನಾಟಕದಲ್ಲಿ ಜೆಡಿಎಸ್ ವಹಿಸುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಈ ವಾದದಲ್ಲಿ ಎರಡು ಸಮಸ್ಯೆಗಳಿವೆ. ಒಂದು ಬಿಎಸ್‌ಪಿ ಅಥವಾ
ಎಂಐಎಂ ಕುರಿತಾಗಿ ಮುಂದಿಡುತ್ತಿರುವ ವಾದವೇ ಅಸಂಬದ್ಧ. ಒಂದು ಕೋಟಿಗೂ ಹೆಚ್ಚು ಮತ ಗಳಿಸಿರುವ ಬಿಎಸ್‌ಪಿಯಿಂದ ಎಸ್‌ಪಿ ಬೆಂಬಲ ನಿರೀಕ್ಷಿಸುವುದಾದಲ್ಲಿ ತಾನೇ ಮುಂದಾಗಬೇಕಿತ್ತು. ಅದೇನೂ ಪುಟ್ಟ ಪಕ್ಷವಲ್ಲ. ಎರಡನೆಯದಾಗಿ ಈ ಪಕ್ಷಗಳು ಸ್ಪರ್ಧಿಸದೇ ಇದ್ದಲ್ಲಿ ಆ ಮತಗಳು ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಬಿಎಸ್‌ಪಿಯ ಮತಗಳು ಬಿಜೆಪಿಗೆ ಹೋಗಿವೆ ಎಂಬುದು ಈಗಾಗಲೇ ಸಾಬೀತಾಗಿರುವ ವಿಚಾರ. ಈ ದೇಶದಲ್ಲಿ ಸೆಕ್ಯುಲರ್ ಮತಗಳು ಎಂಬುದು ಬಹುತೇಕ ಕಡಿಮೆ. ಎರಡು ಬಿಜೆಪಿಯೇತರ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡರೆ ಅವೆರಡರ ಮತಗಳೂ ಜೊತೆಯಾಗಿಬಿಡುತ್ತವೆ ಎಂಬ ತಿಳುವಳಿಕೆ ರಾಜಕೀಯ ಅಮಾಯಕತನದಿಂದ ಮಾತ್ರ ಬರಲು ಸಾಧ್ಯ. ಎಲ್ಲಕ್ಕಿಂತ ಮುಖ್ಯವಾಗಿ ಹಿಂದುತ್ವವಾದಿಗಳು ಪಕ್ಷ ಮಾಡಿಕೊಳ್ಳಬಹುದು, ಯಾದವರು ಪಕ್ಷ ಮಾಡಿಕೊಳ್ಳಬಹುದು, ವಿವಿಧ ಹಿಂದುಳಿದ ಜಾತಿಗಳು ಪಕ್ಷ ಮಾಡಿಕೊಳ್ಳಬಹುದು, ದಲಿತರು ಮತ್ತು ಮುಸ್ಲಿಮರು ಮಾತ್ರ ತಮ್ಮದೇ ಪಕ್ಷ ಮಾಡಿಕೊಳ್ಳಬಾರದು ಎಂದು ಹೇಳುವವರಿಗೆ ಏನು ಹೇಳಬೇಕೋ ಗೊತ್ತಿಲ್ಲ.

ಇದೇ ಮಾತು ಕರ್ನಾಟಕದಲ್ಲಿ ಜೆಡಿಎಸ್‌ಗೂ ಅನ್ವಯಿಸುತ್ತದೆ. ಜೆಡಿಎಸ್ ತನ್ನ ರಾಜಕಾರಣವನ್ನು ತಾನು ಮಾಡುತ್ತಿದೆ. ಅದರ ಹೆಸರಲ್ಲಿ ಜಾತ್ಯತೀತ ಎಂಬ ಪದ ಇದ್ದ ಮಾತ್ರಕ್ಕೆ ಅದು ಪಕ್ಷವನ್ನು ವಿಸರ್ಜಿಸಿ ಕಾಂಗ್ರೆಸ್ ಸೇರಲಾಗುವುದಿಲ್ಲ. ಜೆಡಿಎಸ್ ಅಸ್ತಿತ್ವದಲ್ಲಿರುವ ಬಹುತೇಕ ಕಡೆ ಅದರ ವಿರೋಧಿ ಕಾಂಗ್ರೆಸ್ಸೇ ಹೊರತು ಬಿಜೆಪಿಯಲ್ಲ. ಒಂದು ವೇಳೆ ಜೆಡಿಎಸ್ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ಸಿನ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಬಿಟ್ಟರೆ, ಆ ಭಾಗದ ಅರ್ಧದಷ್ಟು ಜನರು ಬಿಜೆಪಿಯ ಕಡೆಗೇ ಹೊರಳುತ್ತಾರೆ. ಕರ್ನಾಟಕಕ್ಕೆ ಜೆಡಿಎಸ್, ಕೇಂದ್ರದಲ್ಲಾದರೆ ನರೇಂದ್ರ ಮೋದಿ ಎಂದು ಹೇಳುವ ಜೆಡಿಎಸ್ ಮತದಾರರು ಇದ್ದಾರಷ್ಟೇ ಅಲ್ಲ; ಜೆಡಿಎಸ್ ಸ್ಪರ್ಧಿಯನ್ನು ಸೋಲಿಸಲು ಮಂಡ್ಯ ಹಾಗೂ ತುಮಕೂರುಗಳಲ್ಲಿ ಬಿಜೆಪಿಗೆ ಮತ ಹಾಕಿದವರಲ್ಲಿ ಕಾಂಗ್ರೆಸ್‌ನ ಮತದಾರರೂ ಮುಂದಾಗಿದ್ದರು. ಹಾಸನದಲ್ಲಂತೂ ಸಮಾಜವಾದಿಗಳು, ದಲಿತ ಸಂಘಟನೆಯವರೂ ಸಹಾ ಜೆಡಿಎಸ್ ಸ್ಪರ್ಧಿಯನ್ನು ಸೋಲಿಸಲು ಬಿಜೆಪಿಗೆ ಮತ ಹಾಕಿ ಎಂದು ಪತ್ರಿಕಾಗೋಷ್ಠಿ ಮಾಡಿ ಕರೆ ನೀಡಿದ್ದರು.

ಸ್ಥಳೀಯ ರಾಜಕಾರಣದ ಒಳಸುಳಿಯನ್ನು ಆಧರಿಸಿ ರಾಜಕೀಯ ಅಸ್ತಿತ್ವದ ಲೆಕ್ಕಾಚಾರ ಕಾಂಗ್ರೆಸ್‌ಗೆ ಮಾತ್ರ ಇರಬೇಕೆಂದು ಹಲವರು ಏಕೆ ಬಯಸುತ್ತಾರೋ ಅರ್ಥವಾಗುವುದಿಲ್ಲ. ಇದೇ ಲೆಕ್ಕಾಚಾರವನ್ನು ಅನ್ವಯಿಸಿ ನೋಡುವುದಾದಲ್ಲಿ ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡದೇ ಎಸ್‌ಪಿ ಹಾಗೂ ತೃಣಮೂಲ ಕಾಂಗ್ರೆಸ್‌ಗೆ ಬೆಂಬಲಿಸಬೇಕಿತ್ತು.

ಕುಮಾರಸ್ವಾಮಿ

ಇದೆಲ್ಲದರ ಅರ್ಥ ಇಷ್ಟೇ. ಜೆಡಿಎಸ್ ಎಂಬ ಪಕ್ಷದ ಅಸ್ತಿತ್ವ ಇದೆ. ಅದನ್ನು ಒಪ್ಪಿ ಕಾಂಗ್ರೆಸ್ ತನ್ನ ರಾಜಕಾರಣವನ್ನು ತಾನು ಮಾಡಬೇಕು. ಒಂದರ್ಥದಲ್ಲಿ ಆ ಪಕ್ಷ ಇರುವುದೂ ಕಾಂಗ್ರೆಸ್‌ಗೆ ಒಳ್ಳೆಯದೇ. ಈ ಭಾಗದಲ್ಲಿ ತಾನು ಗೆಲ್ಲಲಾಗದು ಎನಿಸಿದ ಕೂಡಲೇ ಬಿಜೆಪಿಯು ಜೆಡಿಎಸ್‌ಅನ್ನು ಒಳಗಿಂದೊಳಗೇ ಬೆಂಬಲಿಸುತ್ತದೆ. ಕಳೆದ ಸಾರಿ ಮಾಡಿದಂತೆ. ಇದಕ್ಕೆ ಕಾರಣವೇನೆಂದರೆ ಬಿಜೆಪಿಯು ಪ್ರತಿ ಕ್ಷೇತ್ರದ ಕುರಿತು ಲೆಕ್ಕ ಹಾಕಿ ತನ್ನ ಕಾರ್ಯತಂತ್ರವನ್ನು ರೂಪಿಸುತ್ತದೆ. ಉತ್ತರ ಪ್ರದೇಶದಲ್ಲಿ ಮಾಡಿದಂತೆ. ಇದೂ ಸಹಾ ಕಾಂಗ್ರೆಸ್‌ಗೆ ಒಂದು ಪಾಠವೇ.

ಆದರೆ ಇದರಿಂದ ಪಾಠವನ್ನೇನೂ ಕಾಂಗ್ರೆಸ್ ಕಲಿಯುವಂತೆ ತೋರುವುದಿಲ್ಲ. ಇಂದಿಗೂ ಕಾಂಗ್ರೆಸ್‌ಗೆ ಸರಿಯಾದ ಅಭ್ಯರ್ಥಿ ಇಲ್ಲದ ಸುಮಾರು 75 ಕ್ಷೇತ್ರಗಳು ಕರ್ನಾಟಕದಲ್ಲಿವೆ. ಉಳಿದ 150ರ ಪೈಕಿ 100ರಲ್ಲಾದರೂ ಗೆದ್ದೇ ಬಿಡಬಹುದು ಎಂದು ಹೇಳುವ ಸ್ಥಿತಿಯಿಲ್ಲ. ಈ ಸಾರಿಯಂತೂ ರಾಜ್ಯಮಟ್ಟದಲ್ಲಿ ಕಾಂಗ್ರೆಸ್‌ಗೆ ಅನುಕೂಲ ಮಾಡುವಂತಹ ನೆರೆಟಿವ್ ಏನೂ ಇಲ್ಲ; ಬದಲಿಗೆ ಇಲ್ಲಿನ ಲೀಡರ್‌ಗಳ ವಿರುದ್ಧದ ಸತತ ಅಪಪ್ರಚಾರ ಹಾಗೂ ಲೀಡರ್‌ಗಳ ನಡುವಿನ ಸಾಮರಸ್ಯದ ಕೊರತೆಯು ಇನ್ನೂ ದೊಡ್ಡ ಪೆಟ್ಟೇ ಕೊಡಬಹುದು.

ಹಾಗೆ ನೋಡಿದರೆ ಕಾಂಗ್ರೆಸ್ ಬಗ್ಗೆಯೂ ಪ್ರೇಮವಿಲ್ಲದ, ಬಿಜೆಪಿಯ ಬಗ್ಗೆ ತಿರಸ್ಕಾರವಾಗಲೀ ಒಲವಾಗಲೀ ಇಲ್ಲದ ಗಣನೀಯ ಸಂಖ್ಯೆಯ ಯುವ ಹಾಗೂ ಇತರ ಸಮುದಾಯಗಳ ಮತಗಳನ್ನು ತೆಗೆದುಕೊಳ್ಳುವ ಹೊಸದೊಂದು ಪಕ್ಷವು ಹುಟ್ಟಿಕೊಂಡಲ್ಲದೇ ಕಾಂಗ್ರೆಸ್‌ಗೆ ಅನುಕೂಲಕರವಾದ ಸಂದರ್ಭ ಒದಗಿಬರುವುದು ಕಷ್ಟವೆಂದೇ ತೋರುತ್ತಿದೆ. ಏಕೆಂದರೆ ಎಷ್ಟೇ ದುರಾಡಳಿತ ನೀಡಿದರೂ, ಜನರು ಅದರ ಬಗ್ಗೆ ಯೋಚಿಸದಂತೆ ಮಾಡಲು, ವಿರೋಧಿಗಳ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡಲು ಬಿಜೆಪಿಯ ಕೈಯ್ಯಲ್ಲಿ ಪ್ರಬಲ ಪ್ರಚಾರ ಯಂತ್ರಾಂಗ ಇದೆ. ಉತ್ತರ ಪ್ರದೇಶದಲ್ಲಿ ಆಗಿದ್ದು ಅದೇ. ಇದನ್ನು ಅರಿತು ಎಲ್ಲಾ ರೀತಿಯಿಂದಲೂ ಭಿನ್ನ ಕಾರ್ಯತಂತ್ರ ಮಾಡದೇ ಕಾಂಗ್ರೆಸ್ ಕರ್ನಾಟಕದಲ್ಲಿ ಗೆಲ್ಲುವುದು ಬಹಳ ಕಷ್ಟ.

ಸಿಸುಮಗ


ಇದನ್ನೂ ಓದಿ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ಪ್ರಶ್ನೆ ಮತ್ತು ಸುಪ್ರೀಂ ತೀರ್ಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಈಗಲೂ ಮಮತಾ ಬ್ಯಾನರ್ಜಿಯೇ ನಮ್ಮ ನಾಯಕಿ’ : ಟಿಎಂಸಿ ಬಂಡಾಯ ಬಣದ ಅಧ್ಯಕ್ಷ ಅರೂಪ್ ರಾಯ್ ಹೇಳಿಕೆ

"ಮಮತಾ ಬ್ಯಾನರ್ಜಿ ಅವರೇ ಇಂದಿಗೂ ನಮ್ಮ ನಾಯಕಿ. ಅವರೇ ಈ ಪಕ್ಷವನ್ನು ಸ್ಥಾಪಿಸಿದವರು. ಅವರೇ ನಮ್ಮ ಪಕ್ಷದ ಕಾಂದಾರಿ (ಮಾರ್ಗದರ್ಶಕರು ಅಥವಾ ಪಕ್ಷವನ್ನು ಮುನ್ನಡೆಸುವವರು). ಮಮತಾ ಬ್ಯಾನರ್ಜಿ ಅವರಿಂದಾಗಿಯೇ ನಾವು ಈ ಪಕ್ಷವನ್ನು...

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...