Homeಸಾಮಾಜಿಕಈ ಸಾರಿ ಹಂಗರಹಳ್ಳಿಯಲ್ಲಿ ನಡೆದಿರುವುದು ಜೀತಗಾರನ ಕೊಲೆ

ಈ ಸಾರಿ ಹಂಗರಹಳ್ಳಿಯಲ್ಲಿ ನಡೆದಿರುವುದು ಜೀತಗಾರನ ಕೊಲೆ

- Advertisement -
- Advertisement -

ಇತಿಹಾಸದಲ್ಲಿ ಓದಿದ ಗುಲಾಮಿ ಪರಂಪರೆ ಇನ್ನು ಓದಿನಿಂದ ಮಾತ್ರ ತಿಳಿಯಲು ಸಾಧ್ಯವೆಂದು ಭಾವಿಸಿದ್ದ ಭಾರತದಲ್ಲಿ ಜೀತ ಪದ್ಧತಿ ಇನ್ನೂ ನಿಂತಿಲ್ಲ. ಜಾತಿ ಆಧಾರದ ದೌರ್ಜನ್ಯಗಳು ಹಾಗೂ ಮರ್ಯಾದಾ ಹತ್ಯೆಗಳು ದಿನನಿತ್ಯದ ನಡಾವಳಿ ಎಂಬಂತೆ ಪ್ರತಿದಿನ ದೌರ್ಜನ್ಯ, ಅತ್ಯಾಚಾರ, ಹತ್ಯೆಗಳು ಸುದ್ದಿಯಾಗುತ್ತಲೇ ಇವೆ. ಸಕ್ಕರೆಯ ನಾಡೆಂದು ಕರೆಸಿಕೊಳ್ಳುತ್ತಿದ್ದ ಮಂಡ್ಯ ಜಿಲ್ಲೆ ಇತ್ತೀಚೆಗೆ ಕರ್ನಾಟಕದಲ್ಲಿ ಇಂತಹ ಮರ್ಯಾದೆಗೇಡು ಹತ್ಯೆಗಳಿಗೆ, ಜಾತಿ ಆಧಾರದ ದೌರ್ಜನ್ಯಗಳಿಗೆ ಕುಖ್ಯಾತಿಯಾಗುತ್ತಿದೆ!
ಹೀಗೆ ಹೇಳಲು ಕಾರಣವಿದೆ. ಮೊನ್ನೆ ಅಕ್ಟೋಬರ್ 9ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹಂಗರಹಳ್ಳಿಯಲ್ಲಿ ಕರಿಯಪ್ಪ ಮಾದಾರ್ ಎಂಬ ದಲಿತ ಜೀತಗಾರನ ಕೊಲೆ ನಡೆದಿದೆ! ಕೆಲವು ವರ್ಷಗಳ ಹಿಂದೆ ಆಬಲವಾಡಿ ಸುವರ್ಣ ಪ್ರಕರಣದಿಂದ ಹಿಡಿದು ಸರಣಿ ಮರ್ಯಾದೆಗೇಡು ಹತ್ಯೆಗಳನ್ನು ಕಂಡ ಮಂಡ್ಯ ಜಿಲ್ಲೆಯಲ್ಲಿ ಕಳೆದ ತಿಂಗಳಿನಲ್ಲಿ ಕೂಲಿ ಕಾರ್ಮಿಕರನ್ನು ಜೀತಕ್ಕಿಟ್ಟುಕೊಂಡು ಅವರ ಮೇಲೆ ಅಮಾನುಷ ದೌರ್ಜನ್ಯ-ಕೊಲೆ ನಡೆಸಿದ ಸರಣಿ ಪ್ರಕರಣಗಳು ಹೊರಬಿದ್ದು ಪ್ರಜ್ಞಾವಂತರನ್ನು ಕಂಗೆಡಿಸಿದವು.
ಹಂಗರಹಳ್ಳಿ ಎಂದಾಕ್ಷಣ ಕೆಲವು ವರ್ಷಗಳ ಹಿಂದೆ ಪದೇಪದೇ ಕೇಳಿದ್ದ ಈ ಹೆಸರಿನ ಹಳ್ಳಿಯ ಜಾಡನ್ನು ನೆನಪು ಮಾಡಿಕೊಳ್ಳಲು ನೀವು ಪ್ರಯತ್ನಿಸುತ್ತೀರಿ. ಅಧಿಕೃತ ಮತ್ತು ಅನಧಿಕೃತವಾಗಿ ತೋಳ್ಬಲ, ರಾಜಕೀಯ ಬೆಂಬಲದೊಂದಿಗೆ ನಡೆಯುವ ಅನೇಕ ಕಲ್ಲಿನ ಕ್ವಾರಿಗಳು, ಅಲ್ಲಿ ದುಡಿಸಲು ದೂರದೂರುಗಳಿಂದ ಅಲ್ಪಸ್ವಲ್ಪ ದುಡ್ಡು ಕೊಟ್ಟು ಕರೆತರುವ ಬಡ ಕೂಲಿ ಕಾರ್ಮಿಕರು, ಕ್ವಾರಿಗಳ ಮಾಲೀಕರಿಂದ ತಮ್ಮೂರಿನಲ್ಲಿ ಮಾಡಿಕೊಂಡಿದ್ದ ಅಲ್ಪಸ್ವಲ್ಪ ಸಾಲ ತೀರಿಸಲು ಒಂದೇ ಕಂತಿನಲ್ಲಿ ದುಡ್ಡು ಪಡೆದು, ನಂತರ ಅದಕ್ಕಾಗಿ ಕುಟುಂಬ ಸಮೇತರಾಗಿ ಬಂದು ಸುದೀರ್ಘ ಕಾಲ ಜೀತ ಮಾಡುವ ಈ ಕೂಲಿ ಕಾರ್ಮಿಕರ ಬವಣೆ……..ಇದೆಲ್ಲವೂ ಯಾವಾಗಲೋ ಒಮ್ಮೊಮ್ಮೆ ಸುದ್ದಿಯಾದದ್ದಿದೆ; ಏನಾದರೊಂದು ದುರಂತ ಸಂಭವಿಸಿದ ಸಂದರ್ಭಗಳಲ್ಲಿ. ಈ ಬಾರಿಯೂ ಹಂಗರಹಳ್ಳಿ ಸುದ್ದಿಯಾಗಲು ಕಾರಣವಾದ ಕರಿಯಪ್ಪ ಮಾದಾರನ ಕೊಲೆ, ಮಾನವೀಯ ಸಂವೇದನೆಯುಳ್ಳ ಎಲ್ಲರನ್ನೂ ಕಲಕುವಂತಹ ಒಂದು ದುರ್ಘಟನೆ!
ಕರಿಯಪ್ಪ ಮಾದರ್ ಹಾಗೂ ಆತನ ಕುಟುಂಬ ಒಂದು ವರ್ಷದ ಹಿಂದೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಓಬಾಳಪುರ ಎಂಬ ಹಳ್ಳಿಯಿಂದ ಹಂಗರಹಳ್ಳಿಗೆ ದುಡಿಯಲು ಬಂದವರು. ತನ್ನ ಹಳ್ಳಿಯಲ್ಲಿ ಮಾಡಿದ್ದ ಸಾಲ ತೀರಿಸುವ ಸಲುವಾಗಿ ಹಂಗರಹಳ್ಳಿ ಕ್ವಾರೆಯಲ್ಲಿ ಯಾವುದೇ ಲೈಸನ್ಸ್ ಇಲ್ಲದೆ ಗಣಿಗಾರಿಕೆ ನಡೆಸುವ ಉಮೇಶ್‍ನಿಂದ 70,000 ರೂಗಳನ್ನು ಕರಿಯಪ್ಪ ಮತ್ತು ಆತನ ಕುಟುಂಬ ಸಾಲ ಪಡೆದಿದ್ದರು. ಆ ಮೊತ್ತ ತೀರಿಸಲು ಒಂದು ವರ್ಷಗಳ ಕಾಲ ಕ್ವಾರೆಯ ಕೆಲಸ ಮಾಡುವುದಾಗಿ ಒಪ್ಪಂದ ಮಾಡಿಕೊಂಡು ಬಂದು ನೆಲೆಸಿದ್ದರು. ಕರಿಯಪ್ಪ ಮಾದಾರ, ಆತನ ಪತ್ನಿ ಕಾಕವ್ವ ಮತ್ತು ತಮ್ಮ ಮಹಾದೇವ ಮಾದರ್ ಮೂವರು (ಕರಿಯಪ್ಪ ಮಾದಾರನ ಎಳೆಯ ಕೂಸೂ ಜೊತೆಗಿತ್ತು) ಕ್ವಾರೆಯ ಬಳಿಯ ಶೆಡ್ಡುಗಳಲ್ಲಿ ಉಳಿದ ಜೀತಗಾರ ಕುಟುಂಬಗಳಂತೆಯೇ ಬದುಕು ನಡೆಸುತ್ತಿದ್ದರು. ಹೀಗೆ ಬದುಕಲು ಅವರಿಗೆ ಉಮೇಶ್ ಬೇರಾವ ಕೂಲಿ ಹಣವನ್ನೂ ಕೊಡುತ್ತಿರಲಿಲ್ಲ; ಆತ ಕೊಡುತ್ತಿದ್ದದ್ದು ಒಂದಷ್ಟು ದಿನಸಿ, ತೀರಾ ತುರ್ತೆಂದಾಗ ನಾಲ್ಕು ಬಿಡಿಗಾಸು. ಅಷ್ಟರಲ್ಲೇ ತಮ್ಮ ಹೊಟ್ಟೆಹೊರೆದುಕೊಳ್ಳುತ್ತಾ ಒಂದು ವರ್ಷ ತಾವು ಪಡೆದಿದ್ದ 70000ಕ್ಕೆ ಪ್ರತಿಯಾಗಿ ಮೂವರೂ ಕ್ವಾರೆಯಲ್ಲಿ ದುಡಿಯುತ್ತಿದ್ದರು.
ಜೀತದ ಒಪ್ಪಂದದಂತೆ ಒಂದು ವರ್ಷದ ಅವಧಿ ಮುಗಿಯಿತೆಂದು ಕರಿಯಪ್ಪನ ಕುಟುಂಬ ತಮ್ಮೂರಿಗೆ ಹಿಂದಿರುಗುವುದಾಗಿ ಮೇಸ್ತ್ರಿ ಪುನೀತ್‍ಗೆ ಮೊನ್ನೆ ಅ.9ರಂದು ತಿಳಿಸಿದ್ದಾರೆ. ಇವರ ಮಾತನ್ನು ಕೇಳಿದ ಪುನೀತ್ ಇವರು ಹೊರಟುಹೋದರೆ ಕ್ವಾರೆಯಲ್ಲಿ ಬಿಟ್ಟಿ ದುಡಿಯುವವರು ಇಲ್ಲವಾಗುತ್ತಾರೆಂದು ರೇಗಿಹೋಗಿದ್ದಾನೆ. ಅವರನ್ನು ಬಾಯಿಗೆ ಬಂದಂತೆ ಬೈದು, ಕಾಕವ್ವನ ಎದುರೇ ಕರಿಯಪ್ಪನನ್ನು ಥಳಿಸಿದ್ದಾನೆ. ‘ಎಲ್ಲಿಗೆ ಹೋಗುತ್ತೀಯಾ? ನಿನ್ನ ಸಾಲ ಇನ್ನೂ ಮುಗಿದಿಲ್ಲ, ಬಾ ನಿನಗೆ ಲೆಕ್ಕ ತೋರಿಸುತ್ತೇನೆ’ ಎಂದು ಕರಿಯಪ್ಪನೊಬ್ಬನನ್ನೇ ಎಳೆದೊಯ್ದಿದ್ದಾನೆ. ಲೆಕ್ಕ ನೋಡಲು ಹೋದ ಗಂಡನಿಗಾಗಿ ಕಾಕವ್ವ ಮತ್ತು ತಮ್ಮ ಮಹಾದೇವ ಸ್ಥಳದಲ್ಲಿಯೇ ಕಾಯುತ್ತಾ ಕುಳಿತಿದ್ದಾರೆ. ಸ್ವಲ್ಪ ಹೊತ್ತಿನ ನಂತಹ ಬಂದ ಮೇಸ್ತ್ರಿ ಪುನೀತ್ ಕಾಕವ್ವಳಿಗೆ, ‘ನಿನ್ನ ಗಂಡ ಅಲ್ಲಿ ಸತ್ತು ಬಿದ್ದಿದ್ದಾನೆ, ಹೋಗಿ ನೋಡು’ ಎಂದು ಕಳಿಸಿದ್ದಾನೆ. ಇದನ್ನು ಕೇಳಿ ಗಾಬರಿಗೊಂಡ ಕಾಕವ್ವ ಮತ್ತು ಮಹಾದೇವರು ಎದ್ದೆವೋ ಬಿದ್ದೆವೋ ಎಂದು ಕರಿಯಪ್ಪನನ್ನು ಹುಡುಕಿಕೊಂಡು ಓಡಿಹೋಗಿದ್ದಾರೆ. ಕರಿಯಪ್ಪನ ಹೆಣ ಮರದ ಕೊಂಬೆಯಲ್ಲಿ ನೇಣು ಬಿಗಿದು ನೇತಾಡುತ್ತಿದ್ದ ಸ್ಥಿತಿಯಲ್ಲಿ ಸಿಕ್ಕಿದೆ!
ಯಾರದೋ ಸಹಾಯದಿಂದ ಪೊಲೀಸರಿಗೆ ವಿಷಯ ತಿಳಿಸಿದ ಕರಿಯಪ್ಪನ ಕುಟುಂಬ ಶವವನ್ನು ಪೋಸ್ಟ್‍ಮಾರ್ಟಮ್‍ಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರಿಗೆ ಏನು ನಡೆಯಿತೆಂಬ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ. ಮೇಲ್ನೋಟಕ್ಕೇ ಇದೊಂದು ಅಸಹಜ ಸಾವೆಂಬುದು ಯಾರಿಗಾದರೂ ತಿಳಿಯುವ ಸಂಗತಿ. ಅದರಲ್ಲೂ, ಕುಟುಂಬದವರ ವಿವರಣೆ ಕೇಳಿದ ಕೂಡಲೇ ಇದರ ಹಿಂದೆ ಅನುಮಾನಾಸ್ಪದವಾದ ಸಂಗತಿಗಳಿವೆಯೆಂಬುದು ಅರಿವಾಗುತ್ತದೆ. ಅಷ್ಟಾದರೂ ಪೊಲೀಸರು ಆಘಾತಗೊಂಡು ರೋದಿಸುತ್ತಿದ್ದ ಕಾಕವ್ವ ಮತ್ತು ಮಹಾದೇವರಿಂದ ದೂರು ಪಡೆದು ಎಫ್‍ಐಆರ್ ದಾಖಲಿಸಿಲ್ಲ. ಇಂತಹ ಅದೆಷ್ಟೋ ಘಟನೆಗಳಲ್ಲಿ ಕ್ವಾರಿಗಳ ಮಾಲೀಕರ ಕಾನೂನುಬಾಹಿರ ಕೃತ್ಯಗಳ ಕಡೆಗೆ ಜಾಣ ಕುರುಡರಂತಿರುವ ಪೊಲೀಸರು, ‘ಸಾವಿನ ಹಿಂದಿನ ರಾತ್ರಿ ಕರಿಯಪ್ಪ ಕುಡಿದು ಬಂದು ಕಾಕವ್ವಳನ್ನು ಹೊಡೆದಿದ್ದ; ದಂಪತಿಗಳ ನಡುವೆ ಜಗಳವಾಗಿತ್ತು; ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಹೇಳುತ್ತಾ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ.
ಈ ನಡುವೆ, ಘಟನೆಯ ಬಗ್ಗೆ ತಮ್ಮ ಕಾರ್ಯಕರ್ತರಿಂದ ತಿಳಿದು ಆಸ್ಪತ್ರೆಗೆ ಧಾವಿಸಿದ ದಲಿತ ಸಂಘರ್ಷ ಸಮಿತಿಯ ಹಿರಿಯ ನಾಯಕರಾದ ಗುರುಪ್ರಸಾದ್ ಕೆರಗೋಡುರವರು ಹಾಗೂ ಬಿಎಸ್‍ಪಿಯ ಕೃಷ್ಣಮೂರ್ತಿಯವರುಗಳು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೋರಾಟಗಾರರ ಒತ್ತಡಕ್ಕೆ ಮಣಿದ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಜೀತದ ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ 4 ಲಕ್ಷ ಪರಿಹಾರವನ್ನು ಕೊಡಿಸುವಲ್ಲಿ ಹೋರಾಟಗಾರರು ಯಶಸ್ವಿಯಾಗಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ ಎಲ್ಲ ಜನಪರರನ್ನೂ ಸಭೆ ಕರೆದು ಈ ಬಗ್ಗೆ ಚರ್ಚಿಸಿ ಹೋರಾಟ ರೂಪಿಸಿದ್ದಾರೆ. ಇಂತಹ ದೌರ್ಜನ್ಯದ ಪ್ರಕರಣಗಳನ್ನು ತಡೆಯುವಲ್ಲಿ ವಿಫಲವಾಗಿರುವ ಜಿಲ್ಲಾಡಳಿದ ವಿರುದ್ಧ ಅಕ್ಟೋಬರ್ 11ರ ಗುರುವಾರ ಹೋರಾಟ ಮಾಡಿದ ಮಂಡ್ಯದ ಎಲ್ಲಾ ದಲಿತ-ಪ್ರಗತಿಪರ ಸಂಘಟನೆಗಳು, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಎಚ್ಚರ ವಹಿಸಬೇಕು ಹಾಗೂ ಕರಿಯಪ್ಪನ ಸಾವಿಗೆ ಕಾರಣವಾಗಿರುವ ಉಮೇಶ್ ಮತ್ತು ಪುನೀತ್‍ರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಮಂಡ್ಯದಲ್ಲಿ ಅಥವಾ ಹಂಗರಹಳ್ಳಿಯಲ್ಲಿ ಕರಿಯಪ್ಪನ ಘಟನೆಯೇ ಮೊದಲನೆಯದಲ್ಲ. ಇಂತಹ ಆಧುನಿಕ ಜೀತದ ಹಲವಾರು ಘಟನೆಗಳು ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಲೇ ಇವೆ. ಇದೇ ಹಂಗರಹಳ್ಳಿಯಲ್ಲಿ ಹೊರಗಿನಿಂದ ಜನರನ್ನು ಒಂದಷ್ಟು ದುಡ್ಡುಕೊಟ್ಟು ಕರೆತಂದು ಜೀತದಾಳುಗಳಾಗಿ ವರ್ಷಾನುಗಟ್ಟಲೆ ದುಡಿಸಿಕೊಳ್ಳುತ್ತಿದ್ದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದಿವೆ. ಹದಿನೈದು ವರ್ಷಗಳ ಹಿಂದೆ ಜೀತಕ್ಕೆಂದು ಕರೆತಂದ ಕೂಲಿಕಾರ್ಮಿಕರನ್ನು ಪ್ರಾಣಿಗಳ ರೀತಿಯಲ್ಲಿ ದುಡಿಸಿಕೊಳ್ಳುತ್ತಾ, ಈ ದಬ್ಬಾಳಿಕೆಯಿಂದ ತಪ್ಪಿಸಿಕೊಳ್ಳಲು ಹೋದವರನ್ನು ಎಳೆದು ತಂದು ಥಳಿಸಿ, ಕಾಲಿಗೆ ಕಬ್ಬಿಣದ ಕೋಳ ಹಾಕಿ ಕೆಲಸದ ಜಾಗ ಬಿಟ್ಟು ಬೇರೆಲ್ಲೂ ಹೋಗದ ರೀತಿಯಲ್ಲಿ ಒಂದೇ ಕಡೆ ಕಟ್ಟಿ ದುಡಿಸಿಕೊಳ್ಳುವ ಹೀನ ಪ್ರಕರಣ ನಡೆದು, ಹಂಗರಹಳ್ಳಿ ಸುದ್ದಿಯಾಗಿತ್ತು!
ಸಾಮಾಜಿಕ ಸಂಘಟನೆಗಳು ಇಂತಹ ಅಮಾನವೀಯ ಕೃತ್ಯಗಳನ್ನು ಬೆಳಕಿಗೆ ತಂದು ಹೋರಾಟ ಮಾಡಿದ್ದರ ಫಲವಾಗಿ ಜೀತದಿಂದ ಒಂದಷ್ಟು ಜನ ಮುಕ್ತಿ ಪಡೆದಿದ್ದರು. ಇದಾದ ನಂತರ ಜೀತ ಪದ್ದತಿ ಕೊನೆಯಾಯಿತೆಂದು ಭಾವಿಸಿ ನಿಟ್ಟುಸಿರು ಬಿಟ್ಟವರಿಗೆ, ಮೊನ್ನೆ ನಡೆದ ಕರಿಯಪ್ಪನೆಂಬ ದಲಿತ ಜೀತಗಾರನ ಕೊಲೆಯ ಘಟನೆ ಆಘಾತ ಉಂಟುಮಾಡಿದೆ. ಹಂಗರಹಳ್ಳಿ ಅಷ್ಟೇ ಅಲ್ಲದೆ ಕಳೆದ ತಿಂಗಳು ಮದ್ದೂರಿನ ಕುದುರುಗುಂಡಿಯಲ್ಲಿ ನಾಗೇಶ್ ಎಂಬಾತನ ಮನೆಯ ಆಳಾಗಿ ಒಬ್ಬ ತಮಿಳು ದಲಿತ ಮಹಿಳೆಯನ್ನು ಜೀತಕ್ಕಿರಿಸಿಕೊಳ್ಳಲಾಗಿದ್ದ ಮತ್ತೊಂದು ಪ್ರಕರಣವೂ ಬೆಳಕಿಗೆ ಬಂದಿತ್ತು. ಆ ಮಹಿಳೆ ಜೀತದಿಂದ ಮುಕ್ತಿ ಪಡೆಯಲು ಜೀತಕ್ಕಿದ್ದ ಮನೆಯಿಂದ ತಪ್ಪಿಸಿಕೊಂಡು ಹೊರಬಂದಿದ್ದಳು. ಹೊರಬಂದ ಮಹಿಳೆಯನ್ನು ಸಾರ್ವಜನಿಕವಾಗಿ ಹೊಡೆದು, ದೌರ್ಜನ್ಯ ನಡೆಸಿ ಹೊತ್ತೊಯ್ಯಲು ಜೀತಕ್ಕಿಟ್ಟುಕೊಂಡಿದ್ದ ಮಾಲೀಕ ಮತ್ತು ಆತನ ಕಡೆಯವರು ಯತ್ನಿಸಿದ್ದರು. ಈ ಘಟನೆಯನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರಿಂದಾಗಿ ಅದು ಹೊರಜಗತ್ತಿಗೆ ತಿಳಿಯುವಂತಾಯಿತು. ಅಷ್ಟೇ ಅಲ್ಲದೆ, ಜೀತಕ್ಕಿಟ್ಟುಕೊಂಡಿದ್ದ ನಾಗೇಶ್ ಮತ್ತು ಈ ಅಮಾನವೀಯ ಹಲ್ಲೆಗೆ ಸಹಕರಿಸಿದ ಇತರ ಕೆಲವರನ್ನು ಬಂಧಿಸಲಾಗಿತ್ತು. ಆದರೆ, ದುರಂತವೆಂದರೆ, ಇಷ್ಟೆಲ್ಲ ನಡೆದು ಮಾಲೀಕನ ಬಂಧನದ ಹೊತ್ತಿಗೂ, ಆಕೆಯ ಮಗ ಈ ಘಟನೆ ನಡೆದ ಕೆಲವು ದಿನಗಳ ನಂತರವೂ ಅವರ ಮನೆಯಲ್ಲಿಯೇ ಜೀತ ಮಾಡುತ್ತಿದ್ದದ್ದು, ‘ನಿಮ್ಮ ತಾಯಿ ವಾಪಾಸ್ ಬರುವವರೆಗೆ ನೀನು ಹೋಗುವಂತಿಲ್ಲ’ ಎಂದು ಆತನನ್ನು ನಿರ್ಬಂಧಿಸಿಟ್ಟಿದ್ದು ಬೆಳಕಿಗೆ ಬಂದಿದೆ! ಕಾನೂನು ಮತ್ತು ಶಿಕ್ಷೆಯ ಭಯವನ್ನೂ ಮೀರಿದ ಈ ಅನಾಗರಿಕತೆಯನ್ನು ಏನೆಂದು ವ್ಯಾಖ್ಯಾನಿಸುವುದು?!
ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರವೂ ಜೀತಪದ್ಧತಿ ಬೇರೆ ಬೇರೆ ರೀತಿಗಳಲ್ಲಿ ಜೀವಂತವಾಗಿರುವುದು ಸಮಾಜದಲ್ಲಿನ ಅಸಮಾನತೆಗೆ ಕೈಗನ್ನಡಿ ಹಿಡಿದಂತಿದೆ. ಪ್ರಜಾಪ್ರಭುತ್ವದ ಆಶಯಗಳನ್ನು ಕಾಲಡಿಯಲ್ಲಿ ಹಾಕಿ ತುಳಿಯುತ್ತಿರುವ ಪ್ರಜಾಪ್ರತಿನಿಧಿಗಳು ಹಾಗೂ ವಿದ್ಯಾವಂತ ಅಧಿಕಾರಿಗಳು ಸಹಾ ಇಂತಹ ಸಂದರ್ಭಗಳಲ್ಲಿ ಜಾಣಗುರುಡು ಪ್ರದರ್ಶಿಸುತ್ತಾ ಈ ಬಗೆಯ ಶೋಷಣೆ ಅನೂಚಾನವಾಗಿ ನಡೆದುಕೊಂಡು ಹೋಗಲು ಕಾರಣರಾಗುತ್ತಿದ್ದಾರೆ. ಸ್ವಾತಂತ್ರ್ಯಾನಂತರದಲ್ಲಿ ಜೀತ ಪದ್ದತಿಗೆ ಪೂರ್ಣವಿರಾಮ ಇಡುವಂತಹ ಹಲವಾರು ಕಾರ್ಮಿಕ ಕಾನೂನುಗಳು ಜಾರಿಯಾಗಿವೆ. ಆದರೆ ಇಂತಹ ಕಾನೂನುಗಳನ್ನು ಜಾರಿಗೊಳಿಸಿ ದುರ್ಬಲರನ್ನು ದಮನದಿಂದ ರಕ್ಷಿಸಬೇಕಾದ ಆಡಳಿತ ವರ್ಗಗಳು ಉಳ್ಳವರ ಎಂಜಲು ಕಾಸಿಗಾಗಿ ಹಪಹಪಿಸುತ್ತ ಶೋಷಿತರನ್ನು ಮತ್ತಷ್ಟು ಶೋಷಣೆ ಮಾಡುತ್ತವೆ. ಇಂತಹ ಶೋಷಣೆಯ ಮತ್ತೊಂದು ಕೊಂಡಿ ಮಂಡ್ಯ ಜಿಲ್ಲೆಯ ಹಂಗರಗಳ್ಳಿ ಕ್ವಾರಿಯಲ್ಲಿ ದುಡಿಯುತ್ತಿದ್ದ ಕರಿಯಪ್ಪ ಮಾದರ್‍ನ ಸಾವು. ಈ ದುರ್ಘಟನೆಯಿಂದಾದರೂ ಸರ್ಕಾರ ಮತ್ತು ಜಿಲ್ಲಾಡಳಿತಗಳು ಎಚ್ಚೆತ್ತು, ಇಂತಹ ಅಮಾನವೀಯ ಸಂಪ್ರದಾಯಕ್ಕೆ ಕೊನೆಹಾಡುವುದೇ ಎಂಬ ಪ್ರಶ್ನೆ ಈಗ ನಾಡಿನ ಪ್ರಜ್ಞಾವಂತರನ್ನು ಕಾಡುತ್ತಿದೆ.

– ಸೋಮಶೇಖರ್ ಚಲ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...

‘ನನ್ನ ಮೌನವನ್ನು ಸೋಲು ಎಂದು ತಿಳಿಯಬೇಡಿ’’: ರಾಜ್ಯಸಭೆಯಲ್ಲಿ ಪದಚ್ಯುತಿಯ ನಂತರ ಎಎಪಿಗೆ ತಿರಗೇಟು ನೀಡಿದ ಸಂಸದ ರಾಘವ್ ಛಡ್ಡಾ

ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಸ್ಥಾನದಿಂದ ತೆಗೆದುಹಾಕಲ್ಪಟ್ಟ ಒಂದು ದಿನದ ನಂತರ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾ ಅವರು ಶುಕ್ರವಾರ "ನನ್ನ ಬಾಯಿ ಮುಚ್ಚಿಸಬಹುದು, ಸೋಲಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಪಕ್ಷದ...

ಮಾಲ್ಡಾ ನ್ಯಾಯಾಂಗ ಅಧಿಕಾರಿಗಳ ಘೇರಾವ್ ಪ್ರಕರಣದಲ್ಲಿ 17 ಜನರ ಬಂಧನ: ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿದ ಇಸಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಏಳು ನ್ಯಾಯಾಂಗ ಅಧಿಕಾರಿಗಳ ಘೇರಾವ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ ಚುನಾವಣಾ ಅಭ್ಯರ್ಥಿ ಸೇರಿದಂತೆ ಕನಿಷ್ಠ 17 ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು...

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...