| ಆಕಾಶ್ ಕೆರೆಕಟ್ಟೆ |
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಈಗ ಕಾಂಗ್ರೆಸ್ ನಾಯಕರ ಮನೆಗೆ ಭೇಟಿ ನೀಡುತ್ತಿದ್ದಾರೆ. ಒಂದು ಕಾಲದಲ್ಲಿ ಸಾರ್ವಜನಿಕವಾಗಿ ಮೂದಲಿಸಿ ಅವಮಾನಿಸಿ ಪಕ್ಷ ಬಿಡಿಸಿದ್ದ ನಾಯಕರನ್ನು ಹುಡುಕಿ ಮಾತನಾಡಿಸುತ್ತಿದ್ದಾರೆ. ತನ್ನ ಮಗನನ್ನು ಗೆಲ್ಲಿಸಿ ಎಂದು ಗೋಗರೆಯುತ್ತಿದ್ದಾರೆ. ಕಾಂಗ್ರೆಸ್ ನಾಯಕರು ತಾವು ಹಾಸನ ಕ್ಷೇತ್ರವನ್ನು ಜೆ.ಡಿ.ಎಸ್ ಗೆ ಬಿಟ್ಟು ಕೊಡಲು ಸಿದ್ಧರಿಲ್ಲ ಎನ್ನುತ್ತಿದ್ದಾಗ, ತಮಗೇನೂ ಕಾಂಗ್ರೆಸ್ ಬೆಂಬಲ ಅಗತ್ಯವಿಲ್ಲ. ಬೇಕಿದ್ದರೆ ಅವರೂ ಅಭ್ಯರ್ಥಿ ಹಾಕಲಿ ಎಂದು ಗುಟುರು ಹಾಕಿದ್ದ ರೇವಣ್ಣ ಶತಮಾನಗಳಿಂದ ಎದುರಿಗೆ ಸಿಕ್ಕರೂ ಮಾತನಾಡಿಸದಿದ್ದ ಬಿ.ಶಿವರಾಮು ಅವರನ್ನು ಹುಡುಕಿಕೊಂಡು ಹೋಗಿ ಬೆಂಬಲ ಬೇಕು ಎಂದು ಕೇಳಿದ್ದಾರೆ. ಸಂಭಾವಿತ ಮನುಷ್ಯ ಸಿ.ಎಸ್.ಪುಟ್ಟೇಗೌಡ ಅವರಿಗೆ 2013ರಲ್ಲಿ ಶ್ರವಣಬೆಳಗೊಳದಿಂದ ಮತ್ತೆ ಸ್ಪರ್ಧಿಸಲು ಅವಕಾಶ ಕೊಡದ ಹಾಗೆ ಮಾಡಿ, ಪಕ್ಷ ಬಿಡುವಂತೆ ಮಾಡಿದ್ದರು. ಅವರ ಜಾಗದಲ್ಲಿ ಸಂಬಂಧಿ ಸಿ.ಎನ್.ಬಾಲಕೃಷ್ಣ ಅವರಿಗೆ ಟಿಕೇಟ್ ಕೊಡಬೇಕಿತ್ತಲ್ಲ. ಈಗ ಅವರದೂ ಬೆಂಬಲ ಬೇಕಾಗಿದೆ. ಇದುವರೆಗೆ ಸಮ್ಮಿಶ್ರ ಸರಕಾರದ ಆಡಳಿತ ಇದ್ದರೂ ತಮ್ಮ ಯಾವ ಕೆಲಸಗಳೂ ಆಗುತ್ತಿಲ್ಲ, ಜೆಡಿಎಸ್ ದರಬಾರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿನಾಕಾರಣ ಪೆÇಲೀಸ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಯಾರಾದರೂ ದೂರಿದರೆ, “ಅಯ್ಯೋ ಅವರ ಮಾತಿಗೆಲ್ಲಾ ಉತ್ತರ ಕೊಡ್ತಾ ಹೋದರೆ ನಾವು ಪೊಳ್ಳಾಗ್ತೀವಿ”, ಎಂದು ಸುಮ್ಮನಾಗುತ್ತಿದ್ದ ರೇವಣ್ಣ ಈಗ ಮನೆ ಮನೆ ತಿರುಗುತ್ತಿದ್ದಾರೆ.
ಇಷ್ಟಕ್ಕೆಲ್ಲಾ ಕಾರಣ, ಜನರೇನಾದ್ರೂ ಬಿಜೆಪಿ ಕಡೆಗೆ ವಾಲಿಬಿಟ್ಟರೆ ಎಂಬ ಆತಂಕ. ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ಪ್ರೀತಂ ಗೌಡ ಗೆದ್ದರು. ಜೆಡಿಎಸ್‍ನ ಹಿರಿಯ ನಾಯಕರು ಆತನನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಗೆಲ್ಲಲಾರ ಎಂದೇ ನಂಬಿದ್ದರು. ಆದರೆ ಜನ ಹಿಂದುತ್ವದ ಜೊತೆಗೆ ಆತ ಮಾಡಿದ್ದ ಒಂದಿಷ್ಟು ಜನೋಪಯೋಗಿ ಕೆಲಸಗಳಿಗಾಗಿ ಆತನಿಗೆ ಮತ ಹಾಕಿದರು. ಮೇಲಾಗಿ, ಸಿದ್ದರಾಮಯ್ಯ-ರಾಹುಲ್ ಗಾಂಧಿಯವರ `ಜೆಡಿಎಸ್ ಬಿಜೆಪಿಯ ಬಿ-ಟೀಮ್’ ಎಂಬ ಹೇಳಿಕೆ ಆ ಪಕ್ಷ ತನ್ನ ಸಾಂಪ್ರದಾಯಿಕ ಮುಸ್ಲಿಂ ಮತಗಳನ್ನು ಕಳೆದುಕೊಳ್ಳುವಂತೆ ಮಾಡಿತು. ಈ ಸಂದರ್ಭದ ಬಿಜೆಪಿಗೆ ವರದಾನವಾಗಿ ಪ್ರೀತಂ ಗೌಡ ಗೆದ್ದರು. ಈಗ ಕಾಂಗ್ರೆಸ್ ಅಭ್ಯರ್ಥಿ ಇಲ್ಲ. ಅದರ ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರೇನು ಸುಮ್ಮನಿಲ್ಲ. ಮಾಜಿ ಸಚಿವ ಎ.ಮಂಜು ಜೊತೆ ಸೇರಿ ಒಂದು ದಂಡು ಬಿಜೆಪಿಗೆ ಹೊರಟಿದೆ. ಮೇಲಾಗಿ ಹಾಸನ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಈಗಾಗಲೇ ಎರಡು ಕಡೆ ಬಿಜೆಪಿ ಶಾಸಕರಿದ್ದಾರೆ. ಏನೋ ಚಮತ್ಕಾರ ನಡೆದು, ಬಿಜೆಪಿ ಪ್ರಬಲವಾಗಿಬಿಟ್ಟರೆ ಎಂಬ ಆತಂಕ ರೇವಣ್ಣ ಹಾಗೂ ಅವರ ಮನೆಯವರನ್ನು ಕಾಡುತ್ತಿದೆ.
ಕುಟುಂಬ ಕಲಹ
ಪ್ರಜ್ವಲ್ ರೇವಣ್ಣ ಲೋಕಸಭಾ ಅಭ್ಯರ್ಥಿ ಎನ್ನುವುದು ಮೂರು ವರ್ಷದ ಮಾತು. ದೇವೇಗೌಡರು ಆಗಾಗ ಹೇಳುತ್ತಲೇ ಇದ್ದದು. ಆದರೆ 28-ವರ್ಷದ ಹುಡುಗನಿಗೆ ವಿಧಾನಸಭೆ ಚುನಾವಣೆ ಕಡೆಗೆ ಹೆಚ್ಚು ಒಲವಿತ್ತು. ಮೊದಲು ಬೇಲೂರಿನ ಕಡೆ ಗಮನ ಹರಿಸಿದ. ಮಾಜಿ ರಾಜ್ಯಸಭಾ ಸದಸ್ಯ ಎಚ್.ಕೆ.ಜವರೇಗೌಡರು ತಮ್ಮ ಕಾರ್ಯಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡಿದ್ದ ಊರಿಗೆ ಹೋಗಿ ತನ್ನ ದಾಂಗುಡಿ ಇಟ್ಟಿದ್ದ. ಹಿರಿಯರ ಬಗ್ಗೆ ಕೇವಲವಾಗಿ ಮಾತನಾಡಿ, ಅವರ ಸ್ವಾಭಿಮಾನಕ್ಕೆ ಪೆಟ್ಟು ಕೊಟ್ಟಿದ್ದ. ಅದೇ ನೋವಿನಲ್ಲಿ ಜವರೇಗೌಡರು 2013 ರಲ್ಲಿ ಬಹಳ ಕಾಲದಿಂದ ದೇವೇಗೌಡರೊಂದಿಗೆ ಆತ್ಮೀಯರಾಗಿದ್ದರೂ ಆ ಪಕ್ಷ ತೊರೆದು ಕಾಂಗ್ರೆಸ್ ಸೇರಿದರು. (ಆ ನಂತರ, ಬೇರೇನೋ ಲೆಕ್ಕಾಚಾರವಾಗಿ ಅಲ್ಲಿ ಒಬ್ಬ ಲಿಂಗಾಯತ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು ಎಂದು ಪಕ್ಷ ತೀರ್ಮಾನಿಸಿ ಕೆ.ಎಸ್.ಲಿಂಗೇಶ್ ಅವರನ್ನು ನಿಲ್ಲಿಸಿದರು. ಅವರು 2013ರಲ್ಲಿ ಸೋತರೂ, 2018ರಲ್ಲಿ ಗೆಲ್ಲುವಲ್ಲಿ ಸಫಲರಾದರು.)
ಆ ನಂತರ ಪ್ರಜ್ವಲ್ ಕಣ್ಣಿಟ್ಟದ್ದು ಹುಣಸೂರು ಮೇಲೆ. ಅಲ್ಲಿಗೆ ಹೋಗಿ ತನ್ನ ಚಿಕ್ಕಪ್ಪನನ್ನೇ ಅನುಮಾನಿಸುವ ಮಾತನಾಡಿ ಸುದ್ದಿಯಾದರು. ಅಲ್ಲಿಯೂ ಟಿಕೆಟ್ ಸಿಗಲಿಲ್ಲ. ಕಾಂಗ್ರೆಸ್ ನಿಂದ ಬಂದಿದ್ದ ಎಚ್.ವಿಶ್ವನಾಥ್ ಅಭ್ಯರ್ಥಿಯಾದರು. ಅಲ್ಲಿಗೆ ಪ್ರಜ್ವಲ್ ಸುಮ್ಮನಾಗಲಿಲ್ಲ. ಬೆಂಗಳೂರಲ್ಲಿ ರಾಜರಾಜೇಶ್ವರಿ ನಗರದ ಮೇಲೂ ಕಣ್ಣಿಟ್ಟರು. ಇಷ್ಟೆಲ್ಲಾ ಆದ ಮೇಲೆ ಗೌಡರೇ ಸ್ವತಃ ತನ್ನ ಕ್ಷೇತ್ರವನ್ನೇ ಬಿಟ್ಟು ಕೊಡ್ತೀನಿ, ಬೇರೆಲ್ಲೂ ಹೋಗಬೇಡ ಎಂದು ಹುಡಗನನ್ನು ಸಮಾಧಾನ ಮಾಡಿದ್ದರು. ಅದರಂತೆಯೆ ಮೊಮ್ಮಗನೇ ಮುಂದಿನ ಅಭ್ಯರ್ಥಿ ಎಂಬ ಸೂಚನೆಯನ್ನೂ ಆಗಾಗ ಕೊಟ್ಟರು. ಅಷ್ಟಲ್ಲದೇ ತನಗೆ ವ್ಹೀಲ್ ಚೇರ್‍ನಲ್ಲಿ ಕುಳಿತು ಸಂಸತ್ತಿಗೆ ಹೋಗಬೇಕಾದ ಪರಿಸ್ಥಿತಿ ಬೇಡ ಎಂದಿದ್ದರು. (ಆದರೆ ಈಗ ಮತ್ತೆ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಂತಿದೆ).
ಇದೆಲ್ಲದರ ಹಿಂದೆ ಗೌಡರ ಕುಟುಂಬದ ಒಳಗೆ ಬಹಳ ಕಾಲದಿಂದ ನಡೆಯುತ್ತಿರುವ ಹೊಯ್ದಾಟವಿದೆ. ಅದೊಂದು ದಿನ ದೇವೇಗೌಡರೇ ಖುದ್ದು `ಕರುಣಾನಿಧಿ ಕುಟುಂಬ ಎದುರಿಸಿದ ಪರಿಸ್ಥಿತಿಯನ್ನು ನನ್ನ ಇಳೀ ವಯಸ್ಸಿನಲ್ಲಿ ನನ್ನ ಮನೆಯಲ್ಲಿ ಎದುರು ನೋಡಲು ಸಿದ್ಧನಿಲ್ಲ’ ಎಂದಿದ್ದರು. ಕರುಣಾನಿಧಿ ಮಕ್ಕಳ ನಡುವೆ ಇದ್ದ ಭಿನ್ನಮತ ತಾರಕಕ್ಕೇರಿ ನಡೆದ ಘಟನೆಗಳು ಇಲ್ಲಿಯೂ ಸಂಭವಿಸುತ್ತವೆಯೋ ಎಂಬ ಆತಂಕವಿತ್ತು. ಒಂದೇ ಚುನಾವಣೆಯಲ್ಲಿ ಇಬ್ಬಿಬ್ಬರು ಮೊಮ್ಮಕ್ಕಳನ್ನು ನಿಲ್ಲಿಸುತ್ತಿರುವುದರ ಹಿಂದೆ ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆ ಇದೆ. ಒಂದು ಪಕ್ಷ ದೇವೇಗೌಡರು ಹಾಸನದಲ್ಲಿಯೇ ಬಂದು ನಿಲ್ಲಿಸುವ ನಿರ್ಧಾರ ಮಾಡಿದರೂ, ಅದು ಕುಟುಂಬದ ಒಳಗೆ ಮತ್ತಷ್ಟು ಗೊಂದಲಗಳಿಗೆ ಕಾರಣವಾಗಬಹುದು. ಹಾಗಾಗಿ ಈ ಬಾರಿ ತಾನು ನಿಲ್ಲದಿರಬಹುದೇ ಹೊರತು ಹಾಸನಕ್ಕೆ ಹೋಗಲಾಗುವುದಿಲ್ಲ ಎಂದು ಅವರೇ ಆಪ್ತರ ಬಳಿ ಹೇಳಿದ್ದಾರೆ. ಈಗ ಇಬ್ಬರನ್ನು ನಿಲ್ಲಿಸಿದ ಮೇಲೆ ಗೆಲ್ಲಿಸಲೇಬೇಕಲ್ಲ. ನಿಖಿಲ್ ಮತ್ತು ಪ್ರಜ್ವಲ್ ಅವರ ರಾಜಕಾರಣದ ಮೊದಲ ಚುನಾವಣೆ ಇದು. ಇಲ್ಲಿ ಎಡವಿದರೆ ಕಷ್ಟ. ಹಾಗಾಗಿ ಯಾವ ಅವಕಾಶವನ್ನೂ ತಪ್ಪಿಸಿಕೊಳ್ಳದೆ, ಕಡುವಿರೋಧಿಗಳ ಬೆಂಬಲವನ್ನೂ ಪಡೆದು ಗೆಲ್ಲಲೇಬೇಕೆಂದು ಕುಟುಂಬದವರು ಹೊರಟಿದ್ದಾರೆ.
ಹಾಸನದ ರಾಜಕೀಯದ ಇತಿಹಾಸದಲ್ಲಿ ಕಾಂಗ್ರೆಸ್ ಮತ್ತು ದೇವೇಗೌಡರ ಕುಟುಂಬ (ಜೆಡಿಎಸ್) ಸದಾ ಎದುರಾಳಿಗಳು. ಪುಟ್ಟಸ್ವಾಮಿಗೌಡರು ಹಾಗೂ ದೇವೇಗೌಡರ ನಡುವಿನ ಜಿದ್ದಾಜಿದ್ದಿ ಜಗತ್ಪ್ರಸಿದ್ಧ. ಅದು ವಂಶವಾಹಿನಿಯ ಜೊತೆಗೆ ಮುಂದಿನ ಪೀಳಿಗೆಗೂ ಹರಿದು ಬಂದಿದೆ. ರೇವಣ್ಣ ಮಂತ್ರಿಯಾದಾಗಲೆಲ್ಲಾ ಹಾಸನಕ್ಕೆ ಹಲವು ಶಾಲೆ, ಕಾಲೇಜು ತಂದಿದ್ದಾರೆ. ಆದರೆ ಅವರು ಹಾಸನದ ಹೊರವಲಯದಲ್ಲಿರುವ ಹೇಮಗಂಗೋತ್ರಿ ಎಂಬ ಮೈಸೂರು ವಿಶ್ವವಿದ್ಯಾನಿಲಯದ ಹಾಸನ ಕ್ಯಾಂಪಸ್ ನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಒಂದೇ ಒಂದು ಮಾತನಾಡಿಲ್ಲ. ಎಪ್ಪತ್ತು ಎಕರೆಯಷ್ಟು ವಿಸ್ತಾರವಾಗಿರುವ ಜಾಗದಲ್ಲಿ ಈ ಹೊತ್ತಿಗೆ ಒಂದು ವಿಶ್ವವಿದ್ಯಾನಿಲಯ ಬಂದು ನಿಲ್ಲಬಹುದಿತ್ತು. ಆದರೆ ರೇವಣ್ಣನವರಿಗೆ ಆ ಬಗ್ಗೆ ಕಾಳಜಿ ಇಲ್ಲ. ಏಕೆಂದರೆ, ಹೇಮಗಂಗೋತ್ರಿ ಸ್ಥಾಪಿಸಿದ್ದು ಪುಟ್ಟಸ್ವಾಮಿಗೌಡರು. ಅವರು ಮಾಡಿದ್ದನ್ನು ಇಲ್ಲವಾಗಿಸುವಲ್ಲಿಯೇ ಇವರಿಗೆ ಸಂತೋಷ. ಹಾಸನ ನಗರ ಮಧ್ಯಭಾಗದಲ್ಲಿ ಚಾಮರಾಜ ಆಸ್ಪತ್ರೆ ಇದೆ. ಅದೇ ಮೆಡಿಕಲ್ ಕಾಲೇಜಿನ ಭಾಗವಾಗಿ ಈಗ ಹಿಮ್ಸ್ ವ್ಯಾಪ್ತಿಯಲ್ಲಿದೆ. ಈಗ ಅದರ ಒಂದು ಭಾಗ ನೆಲಸಮಗೊಂಡು ಅಲ್ಲಿ ಬಹುಮಹಡಿ ಹೊಸ ಆಸ್ಪತ್ರೆ ಬರುತ್ತಿದೆ. ಅದಕ್ಕೂ ಅದೇ ಕಾರಣ. ಪುಟ್ಟಸ್ವಾಮಿಗೌಡರು ಮಂತ್ರಿಯಾಗಿದ್ದಾಗ ಸ್ಥಾಪಿಸಿದ್ದ ಆಸ್ಪತ್ರೆ ನೆಲಸಮ ಆಗಬೇಕು. ಹೀಗೆ ಇವರ ರಾಜಕೀಯ ಜಿದ್ದಿಗಾಗಿ ಹಲವು ನೀರಾವರಿ ಯೋಜನೆಗಳು ಅರ್ಧಕ್ಕೇ ನಿಂತಿವೆ.
ಹೀಗಿರುವಾಗ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿಗೆ ಪ್ರಚಾರ ಮಾಡಿ ಗೆಲ್ಲಿಸಲು ಮುಂದಾಗುವುದಾದರೂ ಹೇಗೆ? ಕಳೆದ ವರ್ಷ ನಡೆದ ಚುನಾವಣೆಯ ವೇಳೆಯೂ ಇದೇ ಎರಡು ಪಕ್ಷಗಳು ವಿರೋಧಿಗಳಾಗಿ ಸೆಣೆಸಿವೆ. ಚುನಾವಣೆ ನಂತರ ಸಮ್ಮಿಶ್ರ ಸರಕಾರ ಆಡಳಿತಕ್ಕೆ ಬಂದರೂ ಹಲವು ಕಾಂಗ್ರೆಸ್ ಕಾರ್ಯಕರ್ತರು ಪೋಲೀಸ್ ಪ್ರಕರಣ ಎದುರಿಸಿದರು. ನೋವು ತಿಂದಿದ್ದಾರೆ. ಅವರೆಲ್ಲಾ ಈಗ ಪ್ರಜ್ವಲ್ ಹಿಂದೆ ಬಾವುಟ ಹಿಡಿದು ಜೈಕಾರ ಹಾಕಲು ಸಾಧ್ಯವೆ?
ಹಾಸನದಲ್ಲಿ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಬೆಂಬಲಿಗರು ಒಬಿಸಿ ಹಾಗೂ ದಲಿತರು. ಬಹುಸಂಖ್ಯಾತ ಒಕ್ಕಲಿಗರ ಮತಗಳು ಹೇಗೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಹಂಚಿ ಹೋಗುತ್ತಿದ್ದವು. ಈಗ ದಲಿತರಿಗೆ ಆಯ್ಕೆ ಇಲ್ಲದಂತಾಗಿದೆ. ಸಕಲೇಶಪುರ, ಆಲೂರು ಹಾಗೂ ಬೇಲೂರು ಭಾಗಗಳಲ್ಲಿ ಮಾಯಾವತಿ ನೇತೃತ್ವದ ಬಿಎಸ್ ಪಿಗೆ ಬೆಂಬಲ ಇದೆ ಆದರೂ ಆ ಪಕ್ಷ ಗೆಲ್ಲಲಾಗುವುದಿಲ್ಲ. “ನಾವು ದಿನಾ ಇಲ್ಲಿ ನೋವು ತಿನ್ನುತ್ತಿರುವುದು ಇದೇ ಜೆಡಿಎಸ್ ಬೆಂಬಲಿಗರಿಂದ. ಕಾಂಗ್ರೆಸ್ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಕಾರಣಕ್ಕೆ ನಾವು ಆ ಅಭ್ಯರ್ಥಿಗೆ ಮತ ಹಾಕಲು ಸಾಧ್ಯವೆ?” ಎಂದು ಪ್ರಶ್ನಿಸುವ ಅನೇಕ ದಲಿತ ಯುವಕರಿದ್ದಾರೆ. ಅವರಲ್ಲೇ ಕೆಲವರು “ನಮಗೆ ದೆಹಲಿಯಲ್ಲಿ ಮೋದಿ ಬಗ್ಗೆ ವಿರೋಧ ಇದೆ. ಆದರೆ ಇಲ್ಲಿ ನಮಗೆ ಮೋದಿ ರೂಪದಲ್ಲಿ ಕಾಣುವುದು ರೇವಣ್ಣ. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯೇ ಆಗಬಹುದು” ಎಂಬ ವಾದ ಮಂಡಿಸುತ್ತಾರೆ.
ರೇವಣ್ಣನವರನ್ನು ಬಹಳ ಕಾಲದಿಂದ ನೋಡಿಕೊಂಡು ಬಂದಿರುವ ಹಲವು ಮಂದಿ ನೋಡಿರುವ ಪ್ರಕಾರ, ಬೆಳ್ಳಂಬೆಳಗ್ಗೆ ದಲಿತರಾರೂ ಅವರ ಮನೆ ಮುಂದೆ ಹೋಗುವಂತಿಲ್ಲ. ಅಪ್ಪಿ ತಪ್ಪಿ ಯಾರಾದರೂ ದಲಿತರು ಮುಂಜಾನೆ ಅವರ ಎದುರು ಬಂದರೆ, ರೇವಣ್ಣ ಮನೆಗೆ ಹಿಂತಿರುಗಿ ಮತ್ತೆ ಸ್ನಾನ ಮಾಡುತ್ತಾರೆ. ಈ ಮಾತನ್ನು ಈಗ ಬಿಜೆಪಿ ಅಭ್ಯರ್ಥಿ ಆಗಿರುವ ಎ.ಮಂಜು ಅವರೇ ಪತ್ರಿಕಾಗೋಷ್ಟಿಯಲ್ಲಿ ಹಿಂದೊಮ್ಮೆ ಹೇಳಿದ್ದರು.
ಇತ್ತೀಚಿನ ವರ್ಷಗಳಲ್ಲಿ ಹೊಳೇನರಸೀಪುರ ಕ್ಷೇತ್ರ ವ್ಯಾಪ್ತಿಯಲ್ಲಿಯೇ ನಡೆದ ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳಲ್ಲಿ ರೇವಣ್ಣ ನಡೆದುಕೊಂಡ ರೀತಿ ಜಿಲ್ಲಾದ್ಯಂತ ದಲಿತರನ್ನು ಸಿಟ್ಟಿಗೆಬ್ಬಿಸಿದೆ. ಅವರೆಲ್ಲಾ ತಮ್ಮ ಸಿಟ್ಟನ್ನು ವ್ಯಕ್ತಪಡಿಸಲು ನಿರ್ಧರಿಸಿದರೆ ರೇವಣ್ಣನವರ ಮಗನಿಗೆ ಸಂಕಷ್ಟ ಆಗಬಹುದು. ಅಲ್ಲಿಗೆ ಯಾವ ಕೋಮುವಾದಿ ಪಕ್ಷವನ್ನು ದೂರವಿಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡವೋ, ಅದೇ ಪಕ್ಷಕ್ಕೆ ಲಾಭವಾಗುತ್ತದೆ.
ದೇವೇಗೌಡ, ರೇವಣ್ಣ, ಭವಾನಿ ರೇವಣ್ಣ ಹಾಗೂ ಪಕ್ಷದ ಆರು ಜನ ಶಾಸಕರು ಹಗಲಿರುಳು ದುಡಿದು ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದರೂ, ಬಿಜೆಪಿ ಆ ಹೊತ್ತಿಗೆ ತನ್ನ ಬೇರುಗಳನ್ನು ಇಲ್ಲಿ ಆಳಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿರುತ್ತದೆ. ಹಾಸನದ ಮಟ್ಟಿಗಂತೂ, ಯಾರೇ ಗೆದ್ದರೂ, ಯಾರೇ ಸೋತರು, ಬಿಜೆಪಿಗೆ ಆಗುವ ಲಾಭವನ್ನು ನಿರಾಕರಿಸಲಾಗದು.
ಆಕಾಶ್ ಕೆರೆಕಟ್ಟೆ


