ಸಾವಂತ್ರಿ |

ಈ ಸಾರಿಯ ಚುನಾವಣೆಯ ಫಲಿತಾಂಶವು ಹಣ, ಜಾತಿ, ಧರ್ಮಗಳ ರಾಜಕಾರಣ ಮಾಡುವವರಲ್ಲೇ ಅತ್ಯಂತ ದುಷ್ಟರೂ ಪ್ರತಿಗಾಮಿಗಳು ಯಾರೋ ಅವರ ಪಾಲಾಗಿದೆ. ಮೂರು ಮುಖ್ಯ ರಾಜಕೀಯ ಪಕ್ಷಗಳ ನಡುವಿನ ಸ್ಪರ್ಧೆಯೇ ಪ್ರಧಾನವಾಗಿತ್ತು ಮತ್ತು ಅದರ ಫಲಿತಾಂಶ ಇದನ್ನು ಸಾಬೀತುಪಡಿಸಿದೆ. ಜನಪರ ಚಳವಳಿಗಳ ಪ್ರತಿನಿಧಿಗಳಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಅನುಭವ ಈ ವಿಚಾರದಲ್ಲಿ ಇನ್ನಷ್ಟು ಢಾಳಾಗಿದೆ. ಈ ಬಾರಿ ಹಿರಿಯ ಅನುಭವಿ ಹೋರಾಟಗಾರರ ಜೊತೆಗೆ ಹೊಸ ತಲೆಮಾರಿನ ಯುವಕರೂ ಕೂಡಾ ಚಳವಳಿಯ ಹಿನ್ನೆಲೆಯ ಪಕ್ಷಗಳಿಂದ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. ಬಹುಜನ ಸಮಾಜ ಪಕ್ಷದ ಪ್ರಮುಖ ನೇತಾರರಾದ ಎನ್.ಮಹೇಶ್‍ರವರು ಕೊಳ್ಳೇಗಾಲದಲ್ಲಿ, ಸ್ವರಾಜ್ ಇಂಡಿಯಾದ ವತಿಯಿಂದ ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆಯಲ್ಲಿ, ಬಾಗೇಪಲ್ಲಿಯಲ್ಲಿ ಮಾಜಿ ಶಾಸಕರು ಮತ್ತು ಸಿಪಿಐಎಂನ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿಯವರು ಒಂದೋ ಗೆಲ್ಲುತ್ತಾರೆ ಅಥವಾ ಎರಡನೇ ಸ್ಥಾನಕ್ಕೆ ಬರುತ್ತಾರೆ ಎಂದು ಭಾವಿಸಲಾಗಿತ್ತು. ಇವರಲ್ಲಿ ಎನ್.ಮಹೇಶ್ ಅವರು ಗೆದ್ದಿದ್ದಾರೆ ಮತ್ತು ಉಳಿದಿಬ್ಬರು ಎರಡನೇ ಸ್ಥಾನಕ್ಕೆ ಬಂದಿದ್ದಾರೆ.

ಇವರಲ್ಲದೇ ಲಂಚಮುಕ್ತ ಕರ್ನಾಟಕ ವೇದಿಕೆಯ ರವಿಕೃಷ್ಣಾರೆಡ್ಡಿಯವರು ಸ್ಪರ್ಧಿಸಿದ್ದ ಜಯನಗರದಲ್ಲಿ ಬಿಜೆಪಿ ಅಭ್ಯರ್ಥಿಯ ಸಾವಿನಿಂದಾಗಿ ಚುನಾವಣೆ ಮುಂದಕ್ಕೆ ಹೋಗಿದೆ. ಸಿಪಿಐಎಂನ ಮುನೀರ್ ಕಾಟಿಪಳ್ಳ (ಮಂಗಳೂರು ಉತ್ತರ) ಮತ್ತಿತರರು, ಆಮ್ ಆದ್ಮಿ ಪಕ್ಷದಿಂದ ಪೃಥ್ವಿರೆಡ್ಡಿ (ಸರ್ವಜ್ಞನಗರ), ಮೋಹನ್‍ದಾಸರಿ (ಸಿ.ವಿ.ರಾಮನ್ ನಗರ), ಭಾಸ್ಕರ್ ಪ್ರಸಾದ್ (ಮಹದೇವಪುರ) ಮತ್ತಿತರರು ಸ್ಪರ್ಧಿಸಿದ್ದರು. ಸಿಪಿಐಎಂಎಲ್ ರೆಡ್‍ಸ್ಟಾರ್‍ನ ಮಾನಸಯ್ಯನವರು ಲಿಂಗಸುಗೂರಿನಿಂದ, ಎಸ್‍ಯುಸಿಐ ಪಕ್ಷದ ರಾಮಾಂಜಿನಪ್ಪನವರು ಸಂಡೂರಿನಿಂದ, ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾದ ಅಬ್ದುಲ್ ಬಾರಿಯವರು ಕಲಬುರಗಿ ದಕ್ಷಿಣದಿಂದ ಸ್ಪರ್ಧಿಸಿದ್ದು ಇವರಲ್ಲಿ ಕೆಲವರಿಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದವು. ಇವರುಗಳ ಜೊತೆಗೆ ರಾಜ್ಯದೆಲ್ಲೆಡೆ ಇನ್ನೂ ಹಲವಾರು ಜನ ಚಳವಳಿಯ ಹಿನ್ನೆಲೆಯ ವ್ಯಕ್ತಿಗಳು ಸ್ಪರ್ಧಿಸಿದ್ದರು.

ಇಂತಹವರ ಪೈಕಿ ಇಡೀ ರಾಜ್ಯದಲ್ಲಿ ಗೆದ್ದ ಏಕೈಕ ಅಭ್ಯರ್ಥಿ ಎನ್.ಮಹೇಶ್ ಅವರಾಗಿದ್ದಾರೆ. ಮೇಲುಕೋಟೆಯಲ್ಲಿ ದರ್ಶನ್ ಅವರು 73,779 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರು ಮತ್ತು ಶ್ರೀರಾಮರೆಡ್ಡಿಯವರು 51,697 ಮತಗಳನ್ನು ಪಡೆದಿದ್ದಾರೆ. ಉಳಿದಂತೆ ಯಾವ ಅಭ್ಯರ್ಥಿಗಳೂ 2,500 ಮತಗಳನ್ನೂ ಪಡೆದುಕೊಳ್ಳುವುದು ಸಾಧ್ಯವಾಗಿಲ್ಲ. ಇದು ಪರ್ಯಾಯ ರಾಜಕಾರಣದ ಕುರಿತು ಗಂಭೀರವಾದ ಪ್ರಯೋಗಗಳಲ್ಲಿ ತೊಡಗಿರುವ ಪಕ್ಷಗಳು ಮತ್ತು ಅವರನ್ನು ಬೆಂಬಲಿಸುತ್ತಿರುವ ಚಳವಳಿಗಳನ್ನು ಖಂಡಿತಾ ಚಿಂತನೆಗೆ ದೂಡಬೇಕಿದೆ. ಇಂದಿನ ರಾಜಕೀಯ ಸಂದರ್ಭದಲ್ಲಿ ಜನಪರವಾದ ಅಭ್ಯರ್ಥಿಗಳು ಸ್ಪರ್ಧಿಸುವುದರಿಂದ ಬಿಜೆಪಿಗೆ ಅನುಕೂಲವಾಗಬಹುದು ಎಂಬ ಆತಂಕ ಹಲವರಿಗಿತ್ತು. ವಾಸ್ತವದಲ್ಲಿ ಈ ಎಲ್ಲಾ ಕ್ಷೇತ್ರಗಳಲ್ಲಿ ಯಾರಿಗೂ ಅನುಕೂಲ ಅಥವಾ ಅನಾನುಕೂಲವಾಗದಷ್ಟು ನಗಣ್ಯವಾಗಿ ಇವರುಗಳ ಸ್ಪರ್ಧೆ ಇದ್ದುದು ಏಕೆ ಎಂಬುದು ಗಂಭೀರವಾದ ಸಂಗತಿಯೇ.
ಅದೇ ಸಂದರ್ಭದಲ್ಲಿ ಗೆದ್ದ ಅಥವಾ ಗೆಲುವಿನ ಸಮೀಪ ಬಂದಿರುವ ಈ ಮೂರು ಕ್ಷೇತ್ರಗಳಲ್ಲಿ ಆ ಸಾಧನೆಗೆ ಏನು ಕಾರಣ ಎಂಬುದನ್ನೂ ನೋಡಬೇಕು. ಈ ಕ್ಷೇತ್ರಗಳಲ್ಲಿ ಆಯಾ ಪಕ್ಷಗಳು/ಸಂಘಟನೆಗಳು ಕನಿಷ್ಠ 20 ವರ್ಷಗಳಿಂದ 50 ವರ್ಷಗಳವರೆಗೆ ಅಸ್ತಿತ್ವದಲ್ಲಿವೆ. ನಿರಂತರವಾಗಿ ಅಲ್ಲಿ ಕ್ಷೇತ್ರಗಳನ್ನು ಮ್ಯಾನೇಜ್ ಮಾಡುತ್ತಿರಲಾಗುತ್ತದೆ. ಉಳಿದವರೆಲ್ಲರೂ ಚುನಾವಣೆಗೆ ಮುಂಚೆ ಅಲ್ಲಿ ಹೋಗಿ ಅಥವಾ ಕೆಲವು ತಿಂಗಳುಗಳ ಪ್ರಚಾರ ನಡೆಸಿದ ಮ್ಯಾಜಿಕ್ ನಿರೀಕ್ಷಿಸಿದವರು. ಈ ಸಾರಿ ಪ್ರಯೋಗಾತ್ಮಕವಾಗಿ ಸ್ಪರ್ಧಿಸಿದ್ದೇವೆಂದು ಹೇಳಿದರೆ ತೊಂದರೆಯಿಲ್ಲ. ಈ ಅನುಭವವೂ ಕೆಲಸಕ್ಕೆ ಬರುತ್ತದೆ. ಆದರೆ, ಚುನಾವಣೆ ನಡೆದ ಮರುದಿನದಿಂದ ಅಲ್ಲಿ ಏನು ಮಾಡುತ್ತಾರೆಂಬುದು ಮುಖ್ಯ. ಅದನ್ನು ಮಾಡದೇ, ತಾವು ನಡೆಸಿದ ಒಂದು ಸಣ್ಣ ಜನವಿಭಾಗಕ್ಕೆ ಸೀಮಿತವಾದ ಚಳವಳಿಯ ಕಾರಣದಿಂದ ತಮ್ಮನ್ನು ಗೆಲ್ಲಿಸಬೇಕೆಂದು ಬಯಸಿದರೆ, ಇತರ ರಾಜಕಾರಣಿಗಳಿಗಿಂತ ಉಡಾಫೆಯಿಂದ ರಾಜಕಾರಣವನ್ನು ತೆಗೆದುಕೊಂಡಿದ್ದಾರೆಂದು ಅರ್ಥವಾಗುತ್ತದೆ.
ಆದರೆ, ನಿರಂತರವಾಗಿ ಜನಪರವಾಗಿದ್ದು ಸರಳವಾಗಿ ಸ್ವಚ್ಛವಾಗಿ ಬದುಕುತ್ತಿರುವ ವೈ.ಎಸ್.ವಿ.ದತ್ತಾರನ್ನೂ ಜನರು ಸೋಲಿಸಿದ್ದಾರೆ. ದತ್ತಾ ಕೆಲಸ ಮಾಡಿಲ್ಲ ಎಂದು ಸ್ಥಳೀಯರು ಹೇಳುತ್ತಾರಂತೆ. ನಿರಂತರವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದ ರೈತಸಂಘದ ಕೆ.ಎಸ್.ನಂಜುಂಡೇಗೌಡರು ಸತತವಾಗಿ 6 ಚುನಾವಣೆಗಳಲ್ಲಿ ಸೋತರು. ಸೋತ ಮರುದಿನದಿಂದಲೇ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಾ ಕಚೇರಿಗಳಿಗೆ ಅಲೆಯುತ್ತಿದ್ದರು. ಆದರೂ ಸತತವಾಗಿ ಸೋಲಬೇಕಾಗಿ ಬಂದುದು ಅವರನ್ನು ಕಂಗೆಡಿಸಿತ್ತು. ಜೆಡಿಎಸ್ ಎಂಎಲ್‍ಎ ಕಾಂಗ್ರೆಸ್‍ಗೆ ಪಕ್ಷಾಂತರ ಮಾಡುವುದು ಖಾತರಿಯಾದಾಗ, ಜೆಡಿಎಸ್ ಸೇರಿದರು. ಅಲ್ಲಿ ಟಿಕೆಟ್ ದೊರಕುವುದಿಲ್ಲ ಎಂಬುದು ಖಾತ್ರಿಯಾದಾಗ ಬಿಜೆಪಿಗೂ ಹೋಗಿ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಹಿಂದೊಮ್ಮೆ 2-3 ಸಾವಿರ ಮತಗಳ ಅಂತರದಿಂದ ಸ್ಪರ್ಧಿಸಿ ಸೋಲುಂಡಿದ್ದ ನಂಜುಂಡೇಗೌಡರಿಗೆ ಬೀಳುವ ಮತಗಳ ಪ್ರಮಾಣ ಚುನಾವಣೆಯಿಂದ ಚುನಾವಣೆಗೆ ಕಡಿಮೆಯಾಗುತ್ತಾ ಬಂದಿತ್ತು. ಈ ಸಾರಿ ಬಿಜೆಪಿ ಅಭ್ಯರ್ಥಿಯಾದರೂ 11,326 ಮತಗಳಷ್ಟೇ ಬಿದ್ದವು. ಕೊಳ್ಳೇಗಾಲದಲ್ಲೂ ಯಾವ್ಯಾವ ಅಂಶಗಳು ಗೆಲುವಿಗೆ ಕಾರಣವಾಗಿವೆ ಮತ್ತು ಹಣ ಎಷ್ಟು ಖರ್ಚಾಗಿದೆ ಎಂಬುದನ್ನು ಪ್ರತ್ಯೇಕವಾಗಿ ಖಾಸಗಿಯಾಗಿ ಎನ್.ಮಹೇಶ್ ಅವರ ಜೊತೆ ಚರ್ಚಿಸಿಕೊಳ್ಳಬೇಕಿದೆ.
ಆಗ ಪರ್ಯಾಯ ರಾಜಕಾರಣಕ್ಕೆ ಬೇಕಾದ ಪಾಠಗಳು ಸಿಗುತ್ತವೆ ಮತ್ತು ಇಂದಿನ ಕಾಲಮಾನದಲ್ಲಿ ಪರ್ಯಾಯ ರಾಜಕಾರಣ ಸಾಧ್ಯವೇ? ಇಲ್ಲವೇ? ಎಂಬುದು ತಿಳಿಯುತ್ತದೆ. ಈ ಚುನಾವಣಾ ಮಾದರಿಯಲ್ಲಿಯೇ ಇರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೇ ಪರ್ಯಾಯ ಸಾಧ್ಯವೇ ಎಂಬುದು ಚರ್ಚೆಯ ಒಂದು ಸಂಗತಿಯಾಗಿದ್ದರೆ, ಪರ್ಯಾಯ ಜನಾಂದೋಲನವಿಲ್ಲದೇ ಪರ್ಯಾಯ ರಾಜಕಾರಣ ಸಾಧ್ಯವೇ ಎಂಬುದು ಇನ್ನೊಂದು ಚರ್ಚಾಸ್ಪದ ಸಂಗತಿಯಾಗಿದೆ. ಇದನ್ನು ಈ ಸಾರಿಯ ಚುನಾವಣೆಯೂ ಸಾಬೀತುಪಡಿಸಿದೆ.


