ವಿಕಾಸ್ ಆರ್ ಮೌರ್ಯ | 
ಅತಿಥಿ ದೇವೋಭವ
ನಿಮ್ಮ ದೇವಭಾಷೆಯಲ್ಲಿ
ನೀವು ಬರೆದಿಟ್ಟುಕೊಂಡಿರಿ
ನಮಗೆ ಕೊಟ್ಟಿಗೆಯಲ್ಲಿ
ತಂಗಳವೋ, ಹಳಸಿದ್ದೋ ನೀಡಿದಿರಿ
ನಾವು ಕಣ್ಣಿಗೊತ್ತಿ ತಿಂದಿದ್ದೆವು
ನೀವು ಮನೆಯೊಳಗೆ ಉಣಿಸಿದ
ಇತಿಹಾಸವೇ ಇಲ್ಲ
ಈಗೇನೋ ನಮ್ಮನೆ ಆತಿಥ್ಯ ಬಯಸಿದ್ದೀರಿ
ನಾವು ಬರೆದವರಲ್ಲ, ಬದುಕಿದವರು
ಹಸಿವೆಂದು ಬಂದವರಿಗೆ
ಹಳಸಿದ್ದನ್ನು ನೀಡೆವು
ತಂಗಳಾದರೂ ಸರಿಯೇ
ಬಿಸಿ ಮಾಡಿ ಬಡಿಸುವೆವು
ಇಗೋ ಬಾಳೆಎಲೆ
ಅಪ್ಪ ಹರಿವಾಗ, ಕುಡುಗೋಲು
ರೋಹಿತನನ್ನು ನೆನೆಸಿತಂತೆ
ಈ ನೀರು
ದೊಡ್ಡವ್ವ ಬಾವೀಲಿ ಸೇದುವಾಗ
ಚೆಲ್ಲಿ ಅರ್ಧವಾಗಿ ಆಸೀಫಾ ಅಂತಂತೆ
ಈ ಚೊಂಬೂ ಅಷ್ಟೆ
ತೊಳೆವಾಗ ಊನಾ ಎಂದು ಕಿರುಚಿತಂತೆ
ಇಂದೇಕೋ ಹಿಟ್ಟಿನೆಸರು
ಕೊತಕೊತವೆನ್ನದೆ ಕಥುವಾ ಕಥುವಾ ಎಂದಿತು
ಅನ್ನದ ಗಂಜಿ ಉಕ್ಕಿ
ಉನ್ನಾವೋ ಎಂದಿತು
ಒಲೆ ಹೊಗೆ ಉಗುಳಿ
ಜೀವಾನಿಲವಿಲ್ಲದೆ ಕರುಳು ಹಿಂಡಿದಂತಾಯಿತು
ಸಾರು ಕುದಿಯುವಾಗ ಎದ್ದ ಗುಳ್ಳೆಗಳು
ಗೋಲಿಬಾರ್ ಗುಂಡುಗಳಂತೆ ಕಂಡವು
ಇಗೋ ಸೊಪ್ಪಿನ ಪಲ್ಯ, ಹಿತ್ತಲಿನದು
ನೀರ ಮನೆಯ ಬೆವರ ಹೀರಿ ಬೆಳೆದಿದೆ
ಈ ಉಪ್ಪಿನ ಕಾಯಿ, ಮನೆಯದ್ದು
ಎಳ್ಳಿಕಾಯಿ ಸ್ವಲ್ಪ ಕಹಿಯಿದೆ
ಅಲ್ಲಲ್ಲಿ ಮೆತ್ತಿದ ಮೆಣಸು
ಹಪ್ಪಳದೊಂದಿಗೆ ಕಾರ ಸೇರಿಸಿದೆ
ರಸದಲ್ಲಿನ ಮೆಣಸಿನಕಾಯಿ
ಕುದ್ದು ಕುದ್ದು ಕೆಂಪಾಗಿದೆ
ಮಸಾಲೆ ಘಮವ ಘಮಿಸಿ
ಬೆಚ್ಚಿ ಬೀಳಬೇಡಿ
ನಿಮ್ಮ ಆಹಾರ ನಿಮಗೆ ನೀಡಿಹೆವು
ನಮ್ಮದು, ಶುಂಠಿ ಬೆಳ್ಳುಳ್ಳಿಯೊಂದಿಗೆ ಬೇಯುತ್ತಿದೆ
ಹಲ್ಲಿಗೂ ರುಚಿಯೆನಿಸುವ ದನದ ಬಾಡು
ಇಂದೇಕೋ ಹೆಚ್ಚು ಘಮಿಸುತ್ತಿದೆ
ನಿಮ್ಮ ಪೂರ್ವಜರ ಆತ್ಮಗಳು ಇಲ್ಲೇ ಎಲ್ಲೋ
ಗಿರಕಿ ಹೊಡೆಯುತ್ತಿರಬೇಕು
ಸಿಹಿ ಮಾಡಿಲ್ಲವೆಂದು ಬೇಸರವಾಗಬೇಡಿ
ಹೋಳಿಗೆ ಮಾಡಲು ತಂದಿದ್ದ ಮೈದಾವನ್ನ
ಅಜ್ಜಿ ತಿಕದಡಿ ಹಾಕಿಕೊಂಡು ಕುಂತಿದ್ದಾಳೆ
ಸಂಬಂಧಿಗಳಿಗೆ ಸಿಹಿಯುಣಿಸುವುದು ಅವಳ ವಾಡಿಕೆ
ಕ್ಷಮಿಸಿ, ಎಲೆ ಅಡಿಕೆ ಕೊಡಲಾರೆವು
ನಿಮಗೆ ಸುಣ್ಣ ಸವರಿ ಅಭ್ಯಾಸವಿಲ್ಲವಲ್ಲ
ಹೋಗಿ.. ಬರಬೇಡಿ
ಕನ್ನ ಹಾಕದಂತೆ ಕಾವಲಿರಬೇಕಿದೆ


