Homeಕರ್ನಾಟಕಬಿಜೆಪಿ ವರ್ಸಸ್ ಒಕ್ಕಲಿಗರು ಇದರಲ್ಲಿ ಅಡಗಿರುವ ರಾಜಕೀಯ ಏನು?

ಬಿಜೆಪಿ ವರ್ಸಸ್ ಒಕ್ಕಲಿಗರು ಇದರಲ್ಲಿ ಅಡಗಿರುವ ರಾಜಕೀಯ ಏನು?

- Advertisement -
- Advertisement -

| ನೀಲಗಾರ |

ಒಕ್ಕಲಿಗ ಸಮುದಾಯದ ಬಹಳಷ್ಟು ಜನರು ಇದು ಬಿಜೆಪಿ ಪಕ್ಷವು ತಮ್ಮ ಜಾತಿಯ ಮೇಲೆ ನಡೆಸುತ್ತಿರುವ ದಾಳಿ ಎಂದು ಭಾವಿಸಲು ಕಾರಣಗಳಿವೆ. ಒಕ್ಕಲಿಗ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಬಿಜೆಪಿ ಇಳಿಸಿತು; ಅದಕ್ಕೆ ಮುಂಚೆ ಒಕ್ಕಲಿಗರ ಇನ್ನೊಬ್ಬ ದೊಡ್ಡ ನಾಯಕ ಎಸ್.ಎಂ.ಕೃಷ್ಣರ ಅಳಿಯ ಮತ್ತು ‘ಸಾರ್ವಜನಿಕವಾಗಿ ಒಳ್ಳೆಯ ಹೆಸರು ಸಂಪಾದಿಸಿದ್ದ’ ಉದ್ಯಮಿ ಸಿದ್ಧಾರ್ಥ ಹೆಗಡೆಯ ಆತ್ಮಹತ್ಯೆಗೆ ಕಾರಣವಾಗುವ ಕ್ರಮಗಳನ್ನು ತೆಗೆದುಕೊಂಡಿತು; ಜೊತೆಗೆ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಲ್ಲೊಬ್ಬರಾದ ಆರ್.ಅಶೋಕ್‍ರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ.

ಆಂಧ್ರದ ಈಗಿನ ಮುಖ್ಯಮಂತ್ರಿ ಜಗನ್‍ಮೋಹನ್‍ರೆಡ್ಡಿಯ ಬಂಧನ ಥೇಟ್ ಇದೇ ರೀತಿ ಆಗಿತ್ತು. ಹಲವು ಸುತ್ತುಗಳಲ್ಲಿ ದಾಳಿ, ಪದೇ ಪದೇ ವಿಚಾರಣೆ ಮತ್ತು ಒಮ್ಮೆ ಮ್ಯಾರಥಾನ್ ವಿಚಾರಣೆಯ ನಂತರ ಬಂಧನ. ಯಾವ ಕೇಸಿನಡಿ ಆತನನ್ನು ಬಂಧಿಸಿದರೋ ಅದು ನಂತರದಲ್ಲಿ ಕೋರ್ಟಿನಲ್ಲಿ ನಿಲ್ಲುವುದಿಲ್ಲ ಎಂದು ಬಂಧಿಸಿದವರಿಗೂ ಗೊತ್ತಿತ್ತು. ಅಕ್ರಮ ಆಗಿದ್ದು ನಿಜ. ಜಗನ್ ಸಾವಿರಾರು ಕೋಟಿ ರೂ. ಅಕ್ರಮ ಆಸ್ತಿ ಸಂಪಾದಿಸಿದ್ದೂ ನಿಜ. ಆದರೆ, ಕೇಸು ನಿಲ್ಲುವಂಥದ್ದಾಗಿರಲಿಲ್ಲ. ಆದರೂ ಬಂಧಿಸಲಾಯಿತು. ಜಾಮೀನು ಸಿಗದೇ 16 ತಿಂಗಳು ಜೈಲಿನಲ್ಲಿರಿಸಲಾಯಿತು. ಏಕೆಂದರೆ, ಜಗನ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಕ್ಷದ ಕೋರ್‍ಅನ್ನು ಎದುರು ಹಾಕಿಕೊಂಡಿದ್ದರು.

ಡಿ.ಕೆ.ಶಿವಕುಮಾರ್‍ರ ಕೇಸೂ ಸಹಾ ಹಾಗೆಯೇ. ಕರ್ನಾಟಕದ ಅತೀ ಶ್ರೀಮಂತ ರಾಜಕಾರಣಿಗಳಲ್ಲೊಬ್ಬರಾದ ಡಿಕೆಶಿ ಎಲ್ಲವನ್ನೂ ನ್ಯಾಯಯುತ ಮಾರ್ಗದಲ್ಲೇ ಸಂಪಾದಿಸಿದ್ದೇನೆಂದು ಹೇಳಿದರೆ ನಂಬುವವರು ಮೂರ್ಖರಷ್ಟೇ. ಸಾತನೂರು ಬಳಿಯ ಹಳ್ಳಿಯ ಸಾಧಾರಣ ಕುಟುಂಬದಿಂದ ಬಂದ ಡಿಕೆಶಿ ಸಾವಿರಾರು ಕೋಟಿ ರೂ.ಗಳ ಸಾಮ್ರಾಜ್ಯ ಕಟ್ಟಿರುವುದು ‘ಶುದ್ಧ ವ್ಯವಹಾರ’ ಮಾತ್ರ ಮಾಡಿಯಲ್ಲ ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೆ, ಭ್ರಷ್ಟಾಚಾರದ ಕಾರಣಕ್ಕೇ ಜೈಲಿಗೆ ಹೋಗಿಬಂದ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಿರುವ ಪಕ್ಷ ಡಿಕೆಶಿಯನ್ನು ಅಷ್ಟು ಗಟ್ಟಿಯಲ್ಲದ ಕೇಸಿನಲ್ಲಿ ಬಂಧಿಸಿ ಪ್ರಾಮಾಣಿಕತೆಯ ಪಾಠ ಹೇಳಲಾಗದು. ಪತ್ರಿಕೆ ಮುದ್ರಣಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಆಗಿರುವ ಈ ಬಂಧನಕ್ಕೆ ಕಾರಣ ನೋಟು ರದ್ದತಿಯ ಸಂದರ್ಭದಲ್ಲಿ ಹಲವು ಕೋಟಿ ರೂ.ಗಳ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಿಸಿಕೊಂಡಿದ್ದ ಕೇಸು ಎಂದು ಹೇಳಲಾಗುತ್ತಿದೆ. ಇದೇ ನೋಟು ರದ್ದತಿಯ ಸಂದರ್ಭದಲ್ಲಿ ಕೇಂದ್ರದ ಈಗಿನ ಗೃಹ ಸಚಿವ ಅಮಿತ್‍ಷಾ ನಿರ್ದೇಶಕರಾಗಿದ್ದ ಅಹಮದಾಬಾದ್ ಜಿಲ್ಲಾ ಸಹಕಾರ ಬ್ಯಾಂಕ್‍ನಲ್ಲಿ 745.59 ಕೋಟಿ ರೂ.ಗಳ ಬದಲಾವಣೆ ನಡೆಯಿತೆಂದು ಹೇಳಲಾಗುತ್ತದೆ.

ಜೈಲಿಗೆ ಹೋಗಿದ್ದ ಯಡಿಯೂರಪ್ಪನವರನ್ನು ನೋಡಲು ಜೈಲಿಗೇ ಹೋಗಿದ್ದ ‘ನಡೆದಾಡುವ ದೇವರು’ ಸಿದ್ದಗಂಗೆ ಶ್ರೀಗಳ ನಡೆಯ ಹಿಂದಿನ ಪ್ರೇರಣೆ ಏನಾಗಿತ್ತು? ಜಾತಿಯಲ್ಲದೆ ಬೇರೇನೂ ಅಲ್ಲ. ‘ನಮ್ಮವನೊಬ್ಬನು ಮೇಲೆ ಬಂದರೆ ಸಹಿಸದೇ’ ಆತನನ್ನು ಜೈಲಿಗೆ ತಳ್ಳಲಾಗಿದೆ ಎಂದು ಲಿಂಗಾಯಿತ ಸಮುದಾಯದ ಗಣನೀಯ ಪ್ರಮಾಣ ನಂಬಿತ್ತು. ಆ ಮೇಲೆ ಬರುವುದಕ್ಕೆ ಅಧಿಕಾರ ದುರುಪಯೋಗ, ಭ್ರಷ್ಟಾಚಾರ ಅಥವಾ ಕಚ್ಚಾ ಭಾಷೆಯಲ್ಲಿ ಹೇಳುವುದಾದರೆ ಲೂಟಿ ಮಾಡಿದರೂ ಅದು ಅಷ್ಟು ಮುಖ್ಯವಲ್ಲ ಎನ್ನುವ ಮಟ್ಟಕ್ಕೆ ನಮ್ಮ ಸಮಾಜದ ನೀತಿ ಸಂಹಿತೆ ಇಳಿದಿದೆ.

ಹಾಗಿದ್ದ ಮೇಲೆ ಡಿ.ಕೆ.ಶಿವಕುಮಾರ್ ಒಬ್ಬರನ್ನೇ ಏಕೆ ಈ ಪರಿ ಹಿಂಸಿಸಲಾಗುತ್ತಿದೆ ಎಂಬ ಪ್ರಶ್ನೆಯನ್ನು ಒಕ್ಕಲಿಗ ಸಮುದಾಯವೂ ಕೇಳುತ್ತದೆಯೇ? ಡಿ.ಕೆ.ಶಿವಕುಮಾರ್‍ರನ್ನು ‘ಬಲಿಪಶು’ ಮಾಡಲು ಅವರು ಅಮಿತ್‍ಷಾರನ್ನು ಎದುರು ಹಾಕಿಕೊಂಡು ಕಾಂಗ್ರೆಸ್ ಪಕ್ಷದ ಹಿತ ಕಾಯಲು ನಿಂತಿದ್ದೇ ಕಾರಣ ಎಂಬುದು ವಾಸ್ತವ. ಸ್ವತಃ ಬಿಜೆಪಿಯು ಚುನಾವಣಾ ವಿಚಾರವಾಗಿಸಿದ್ದ ಶಾರದಾ ಚಿಟ್ ಹಗರಣದಲ್ಲಿ ಭಾಗಿಯಾಗಿದ್ದವರನ್ನು ಪಕ್ಷಕ್ಕೆ ಸೇರಿಸಿಕೊಂಡು ಕ್ಲೀನ್ ಚಿಟ್ ಕೊಟ್ಟು ಬಹಳ ಕಾಲವೇನಾಗಿಲ್ಲ. ದೇಶದ ಉದ್ದಗಲಕ್ಕೂ ಇಂತಹ ನೂರಾರು ಉದಾಹರಣೆಗಳಿದ್ದು ಇದಕ್ಕೆ ಕಾಂಗ್ರೆಸ್ ಸಹಾ ಹೊರತಾಗಿಲ್ಲ. ಬೆಂಗಳೂರಿನಿಂದ ಬಳ್ಳಾರಿಗೆ ಸಿದ್ದರಾಮಯ್ಯನವರು ಪಾದಯಾತ್ರೆ ಮಾಡಿದ್ದು ಗಣಿ ಲೂಟಿಯ ವಿರುದ್ಧ. ಆ ಸಂದರ್ಭದಲ್ಲಿ ಬಿಜೆಪಿಯಲ್ಲಿದ್ದು ಗಣಿ ಅಕ್ರಮಗಳಲ್ಲೂ ಭಾಗಿಯಾಗಿದ್ದ ಶಾಸಕರನ್ನು ನಂತರ ಕಾಂಗ್ರೆಸ್ಸಿಗೆ ಸೇರಿಸಿಕೊಂಡಿದ್ದರು. ಆ ಇಬ್ಬರು ಶಾಸಕರಲ್ಲಿ ಒಬ್ಬರು ಈಗ ಬಿಜೆಪಿಯಲ್ಲಿದ್ದಾರೆ, ಇನ್ನೊಬ್ಬರು ತಾಂತ್ರಿಕವಾಗಿಯಷ್ಟೇ ಕಾಂಗ್ರೆಸ್ಸಿನಲ್ಲಿದ್ದಾರೆ. ಆದರೆ, ಅಕ್ರಮ ಎಸಗಿರುವವರನ್ನು ಪಕ್ಷಕ್ಕೆ ಸೇರಿಸಿಕೊಂಡು ಕ್ಲೀನ್‍ಚಿಟ್ ಕೊಡುವುದರಲ್ಲಿ ಬಿಜೆಪಿ ಎಲ್ಲರಿಗಿಂತ ಮುಂದಿದೆ.

ಡಿ.ಕೆ.ಶಿವಕುಮಾರ್ ಕುರಿತು ಜನಸಾಮಾನ್ಯರು ಬಹಳ ಅನುಕಂಪ ತೋರಿಸುವ ಸಾಧ್ಯತೆಯೇನೂ ಇಲ್ಲ. ಆದರೆ, ಒಕ್ಕಲಿಗ ಸಮುದಾಯದ ಬಹಳಷ್ಟು ಜನರು ಇದು ಬಿಜೆಪಿ ಪಕ್ಷವು ತಮ್ಮ ಜಾತಿಯ ಮೇಲೆ ನಡೆಸುತ್ತಿರುವ ದಾಳಿ ಎಂದು ಭಾವಿಸಲು ಕಾರಣಗಳಿವೆ. ಒಕ್ಕಲಿಗ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಇಳಿಸಿತು; ಅದಕ್ಕೆ ಮುಂಚೆ ಒಕ್ಕಲಿಗರ ಇನ್ನೊಬ್ಬ ದೊಡ್ಡ ನಾಯಕ ಎಸ್.ಎಂ.ಕೃಷ್ಣರ ಅಳಿಯ ಮತ್ತು ‘ಸಾರ್ವಜನಿಕವಾಗಿ ಒಳ್ಳೆಯ ಹೆಸರು ಸಂಪಾದಿಸಿದ್ದ’ ಉದ್ಯಮಿ ಸಿದ್ಧಾರ್ಥ ಹೆಗಡೆಯ ಆತ್ಮಹತ್ಯೆಗೆ ಕಾರಣವಾಗುವ ಕ್ರಮಗಳನ್ನು ತೆಗೆದುಕೊಂಡಿತು; ಆ ಕಾರಣಕ್ಕಾಗಿಯೇ ಎಸ್.ಎಂ.ಕೃಷ್ಣ ಬಿಜೆಪಿ ಸೇರಿದರೂ ಪ್ರಯೋಜನವಾಗಲಿಲ್ಲ. ಜೊತೆಗೆ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಲ್ಲೊಬ್ಬರಾದ ಆರ್.ಅಶೋಕ್‍ರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ. ಈ ಅಂಶಗಳು ತಮ್ಮ ಬದುಕಿನ ಪ್ರಧಾನ ಸಮಸ್ಯೆಗಳೆಂದು, ಸಣ್ಣ ಮತ್ತು ಅತೀ ಸಣ್ಣ ಹಿಡುವಳಿದಾರರೇ ಪ್ರಧಾನವಾಗಿರುವ ಒಕ್ಕಲಿಗರು ತಮ್ಮಂತೆ ತಾವೇ ಭಾವಿಸುವುದಿಲ್ಲ.

ಆದರೆ, ಇಂದು ಎಲ್ಲಾ ದೊಡ್ಡ ಮತ್ತು ಬಲಾಢ್ಯ ಜಾತಿಗಳಲ್ಲಿ ಅಸ್ತಿತ್ವದಲ್ಲಿರುವ ಲಾಬಿಗಳು ಆ ರೀತಿ ಭಾವಿಸುವಂತೆ ಪ್ರಯತ್ನ ನಡೆಸುತ್ತಾರೆ. ಮೇಲೆ ಹೇಳಲಾದ, ಎರಡೇ ತಿಂಗಳುಗಳಲ್ಲಿ ಒಂದಾದ ಮೇಲೆ ಒಂದರಂತೆ ನಡೆದ, ಬೆಳವಣಿಗೆಗಳು ಆ ಪ್ರಯತ್ನವನ್ನು ಸುಲಭವಾಗಿಸುತ್ತವೆ. ಒಮ್ಮೆಯೂ ಸಚಿವರೂ ಆಗದಿದ್ದ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ನೇರವಾಗಿ ಉಪಮುಖ್ಯಮಂತ್ರಿಯಾಗಿಸಿದ್ದು ಬಿಜೆಪಿಯ ನೆರವಿಗೆ ಬರುವ ಸಾಧ್ಯತೆ ಕಡಿಮೆ. ಏಕೆಂದರೆ, ಒಕ್ಕಲಿಗರ ಸಂಘ, ಒಕ್ಕಲಿಗರ ಮಠ, ಅಧಿಕಾರಿಗಳು, ಗುತ್ತಿಗೆದಾರರು, ಜನಪ್ರತಿನಿಧಿಗಳು ಆಗಿರುವವರು ಇವರೆಲ್ಲರೂ ಸೇರಿ ರೂಪುಗೊಂಡಿರುವ ಒಕ್ಕಲಿಗ ಲಾಬಿಗೆ ಬಿಜೆಪಿಯಲ್ಲಿ ಯಾರಾದರೂ ಹತ್ತಿರವಿದ್ದರೆ ಅದು ಆರ್.ಅಶೋಕೇ ಹೊರತು ಅಶ್ವತ್ಥನಾರಾಯಣ್ ಅಲ್ಲ. ಅದಕ್ಕಿಂತ ಹೆಚ್ಚಾಗಿ ಆ ಲಾಬಿಗೆ ಜೆಡಿಎಸ್ ಮತ್ತು ಡಿ.ಕೆ.ಶಿವಕುಮಾರ್ ಅಶೋಕ್‍ಗಿಂತ ಪ್ರಿಯರಾದವರು.

ಇದು ಗೊತ್ತಿರುವುದರಿಂದಲೇ ಮೂರ್ನಾಲ್ಕು ದಿನಗಳಿಂದ ಬಿಜೆಪಿಯ ಒಳಗೂ ಕೆಲವು ಹಿರಿಯ ನಾಯಕರುಗಳು ಆತಂಕದಲ್ಲಿದ್ದರು. ಡಿ.ಕೆ.ಶಿವಕುಮಾರ್‍ರ ಸಂಭವನೀಯ ಬಂಧನದ ಕುರಿತು, ‘ಆಗದೇ ಇದ್ದರೆ ಒಳ್ಳೆಯದು ಸಾರ್. ಆದರೆ ಮೇಲಿನವರು ಏನು ತೀರ್ಮಾನ ಮಾಡುತ್ತಾರೋ ಹೇಳಕ್ಕಾಗಲ್ಲ. ಹಾಗೇನಾದರೂ ಆದರೆ, ಇಲ್ಲಿ ಸಫರ್ ಆಗುವವರು ನಾವು’ ಎಂಬ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿದ್ದರು. ಇನ್ನೇನು ಬಂಧನ ಆಗಿಯೇ ಬಿಡಬಹುದು ಎನ್ನುವಾಗ, ಒಕ್ಕಲಿಗರ ಕೋಟಾದಲ್ಲಿ ಉಪಮುಖ್ಯಮಂತ್ರಿಯಾದ ಅಶ್ವತ್ಥನಾರಾಯಣ್ ‘ತಪ್ಪು ಮಾಡಿದವರು ಅದಕ್ಕೆ ತಕ್ಕ ಫಲವನ್ನು ಅನುಭವಿಸಲೇಬೇಕು. ಅದೇ ಡಿ.ಕೆ.ಶಿವಕುಮಾರ್‍ರಿಗೂ ಆಗಿದೆ. ನೀವು ಬಿತ್ತಿರುವ ಫಲವನ್ನೇ ಉಣ್ಣಬೇಕು’ ಎಂದು ಹೇಳಿದ್ದಲ್ಲದೇ, ಡಿ.ಕೆ.ಶಿವಕುಮಾರ್ ಜನರ ಅನುಕಂಪ ಗಿಟ್ಟಿಸಲು ಕಣ್ಣೀರು ಹಾಕಿದ್ದಾರೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಆದರೆ, ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಹೇಳಿದ್ದ ಶ್ರೀರಾಮುಲು ಅದೇ ದಿನ ಡಿಕೆಶಿಯ ಕ್ಷಮೆ ಯಾಚಿಸಿದರು.

ಇಂತಹ ಹೇಳಿಕೆಗಳನ್ನು ಒಕ್ಕಲಿಗ ನಾಯಕರು, ಅದರಲ್ಲೂ ದೇವೇಗೌಡರ ಕುಟುಂಬದ ವಿರುದ್ಧ ಆರ್.ಅಶೋಕ್ ನೀಡಲಿಲ್ಲ ಎಂಬುದೇ ಅವರ ವಿರುದ್ಧ ಬಿಜೆಪಿ ಗರ್ಭಗುಡಿಯ ಆರೋಪವಾಗಿದೆ. ಆ ರೀತಿ ಮಾಡಿದರೆ ತಾನು ‘ಒಕ್ಕಲಿಗರ ನಾಯಕ ಆಗುವುದು ಕಷ್ಟ’ ಎಂಬುದು ಅಶೋಕ್ ಲೆಕ್ಕಾಚಾರ. ಅದನ್ನು ಮೀರಿ ಮುಂದುವರೆಯಬೇಕೆನ್ನುವ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳದಿದ್ದರೆ ಅಶ್ವತ್ಥನಾರಾಯಣ್ ಗರ್ಭಗುಡಿಯ ಕಣ್ಣಲ್ಲಿ ಪರವಾಗಿಲ್ಲ ಎನಿಸಿಕೊಳ್ಳುವುದಾದರೂ ಹೇಗೆ?

ಒಕ್ಕಲಿಗರಲ್ಲಿ ಅರ್ಧದಷ್ಟು ಜನರು ಮಹಾಲಯ ಅಮಾವಾಸ್ಯೆ (ಮಾರ್ನಮಿ)ಯ ಸಂದರ್ಭದಲ್ಲಿ ಹಿರಿಯರಿಗೆ ಎಡೆ ಇಟ್ಟರೆ, ಇನ್ನೊಂದಷ್ಟು ಜನರು ಗಣೇಶನ ಹಬ್ಬದ ಸಂದರ್ಭದಲ್ಲಿ ಎಡೆ ಇಡುವ ಸಂಪ್ರದಾಯವಿದೆ. ತನಗೆ ಅದಕ್ಕೂ ಅವಕಾಶ ನೀಡದೇ ಇಡಿಯವರು ಕೂರಿಸಿಕೊಂಡರು ಎಂದು ಕಣ್ಣೀರು ಹಾಕಿದಾಗ ಅಶ್ವತ್ಥನಾರಾಯಣ್ ಡಿಕೆಶಿಗೇ ಕುಟುಕಿದ್ದು ಯಾವ ಪರಿಣಾಮ ಬೀರುತ್ತದೆ ಕಾದು ನೋಡಬೇಕು. ಎಡೆ ಇಡುವವರ ಜೊತೆಗೆ ಕನೆಕ್ಟ್ ಮಾಡಿಕೊಳ್ಳಲೆಂದೇ ಡಿಕೆಶಿ ಅದನ್ನು ಮಾಡಿರುವ ಸಾಧ್ಯತೆಯಿದೆ. ಮೇಲಾಗಿ 15ಕ್ಕೂ ಹೆಚ್ಚು ಶಾಸಕರನ್ನು ಮುಂಬೈನಲ್ಲಿ ಇಟ್ಟುಕೊಂಡು, ಅದಕ್ಕೆ ಫೈನಾನ್ಸ್ ಮಾಡಿರುವ ಅಶ್ವತ್ಥನಾರಾಯಣ ಪ್ರಾಮಾಣಿಕತೆ, ಭ್ರಷ್ಟಾಚಾರದ ವಿರುದ್ಧ ಮಾತಾಡುವುದು ‘ಪ್ರಾಮಾಣಿಕತೆ ವರ್ಸಸ್ ಭ್ರಷ್ಟಾಚಾರ’ ಬಿಲ್ಡಪ್ ಕೊಡಲು ನೆರವಿಗೆ ಬರುವುದಿಲ್ಲ. ಸುತ್ತಲೂ ಭ್ರಷ್ಟರನ್ನೇ ಇಟ್ಟುಕೊಂಡಿದ್ದರೂ, ಬೇರೆ ಬೇರೆ ಪಕ್ಷಗಳಿಂದ ಪರಮ ಭ್ರಷ್ಟರನ್ನು ಕರೆತಂದು ಪಕ್ಷ ಬೆಳೆಸುತಿದ್ದರೂ, ಅಶ್ವತ್ಥನಾರಾಯಣ್ ಥರದವರಿಗೆ ಇಂತಹ ಹುಕುಂ ಕೊಡಲು ಸದ್ಯದ ಗರ್ಭಗುಡಿಯ ಪುರೋಹಿತ ಬಿ.ಎಲ್.ಸಂತೋಷ್ ಹಿಂದೆ ಮುಂದೆ ನೋಡುವುದಿಲ್ಲ. ಇನ್ನು ಅಮಿತ್‍ಷಾ ಅಂತೂ ಸಕಲ ರೀತಿಯ ಅಪರಾಧಗಳ ಆರೋಪ ಹೊತ್ತ ವ್ಯಕ್ತಿ.

ಹೀಗಾಗಿಯೇ ಎಚ್‍ಡಿಕೆ, ಡಿಕೆಶಿ ಇದನ್ನು ಬಳಸಿಕೊಳ್ಳಲು ತಮ್ಮ ದಾಳಗಳನ್ನು ಉರುಳಿಸುತ್ತಿದ್ದಾರೆ. ಡಿಕೆಶಿ ಪರವಾಗಿ ಕಾಂಗ್ರೆಸ್ ನಾಯಕರು ಮಾತಾಡಿದ್ದಕ್ಕಿಂತ ಕುಮಾರಸ್ವಾಮಿ ಬ್ಯಾಟಿಂಗ್ ಮಾಡಿದ್ದೇ ಹೆಚ್ಚು. ಕಾಂಗ್ರೆಸ್‍ನ ಅಧಿನಾಯಕರ ಸೂಚನೆಗನುಗುಣವಾಗಿಯೇ ಡಿಕೆಶಿ ಗುಜರಾತ್ ಶಾಸಕರನ್ನು ‘ಮೈಂಟೇನ್ ಮಾಡಿ’ ಅಮಿತ್‍ಶಾ ವಿರೋಧ ಕಟ್ಟಿಕೊಂಡಿದ್ದು. ಆ ಸಂದರ್ಭದಲ್ಲಿ ಸ್ವತಃ ಷಾ ಡಿಕೆಶಿಗೆ ಫೋನ್ ಮಾಡಿದ್ದರೆಂಬ ಗುಲ್ಲೂ ಇದೆ. ಅದಕ್ಕೆ ಸೊಪ್ಪು ಹಾಕದೇ ಪಕ್ಷದ ನಾಯಕರ ಸೂಚನೆಯಂತೆ ನಿಷ್ಠೆಯಿಂದ ಕೆಲಸ ಮಾಡಿದ್ದು, ಮುಂದೊಂದು ದಿನ ಮುಖ್ಯಮಂತ್ರಿಯಾಗಬೇಕೆನ್ನುವ ಮಹತ್ವಾಕಾಂಕ್ಷೆಗೆ ಅನುಕೂಲವಾಗಲೆಂದೇ. ಆದರೆ, ಪಕ್ಷ ತನ್ನ ಪರವಾಗಿ ಸಮರ್ಥನೆಗೆ ಇಳಿದಿಲ್ಲವೆಂದು ಡಿಕೆಶಿ ಬಹಿರಂಗವಾಗಿ ಹೇಳಿದ ಮೇಲೆಯೇ ಸಿದ್ದರಾಮಯ್ಯ ಅವರ ಪರವಾಗಿ ಟ್ವೀಟ್ ಮಾಡಲು ಶುರು ಮಾಡಿದ್ದು.

ಬಿಜೆಪಿಯ ವಿರುದ್ಧ ಕೆಲಸ ಮಾಡಿದರೂ, ಆ ಪಕ್ಷದ ನಾಯಕರ ಜೊತೆಗೆ ಸಂಬಂಧ ಡಿಕೆಶಿಗೆ ಇದ್ದೇ ಇದೆ. ಯಡ್ಡಿ ಮತ್ತು ಡಿಕೆಶಿ ನಡುವಿನ ಸಂಬಂಧ ಅಷ್ಟು ಗುಟ್ಟಿನದ್ದೇನಲ್ಲ. ಈ ಮಧ್ಯೆ ಗಡ್ಕರಿ ಜೊತೆಗೆ ಡಿಕೆಶಿಗೆ ನಿರಂತರ ಸಂಪರ್ಕವಿದೆ. ಒಮ್ಮೆ ಆನಂದ್‍ಸಿಂಗ್ ಡಿಕೆಶಿಯನ್ನು ರಾಜನಾಥ್‍ಸಿಂಗ್ ಬಳಿಗೂ ಕೊಂಡೊಯ್ದ ಸುದ್ದಿಯಿದೆ. ಇವೆಲ್ಲದರ ಜೊತೆಗೆ ಆದಿಚುಂಚನಗಿರಿಯ ಮಠಾಧೀಶ ನಿರ್ಮಲಾನಂದ ನಾಥರ ಮೂಲಕ ಯೋಗಿ ಆದಿತ್ಯನಾಥ್‍ಗೂ ಹೇಳಿಸುವ ಕೆಲಸವನ್ನೂ ಮಾಡಿದ್ದಾರೆ. ಇವೆಲ್ಲದರಾಚೆಗೂ ಬಂಧನ ನಡೆದೇ ಹೋಗುತ್ತದೆಂದು ಗೊತ್ತಾದ ಮೇಲೆ ಡಿಕೆಶಿ ‘ಹಿರಿಯರಿಗೆ ಎಡೆ ಇಕ್ಕಲು ಅವಕಾಶ ಕೊಡದ ಬಿಜೆಪಿ ನಾಯಕರ’ ಕುರಿತು ಗುಟುರು ಹಾಕಿದರು. ಅಲ್ಲಿಗೆ ಒಕ್ಕಲಿಗ ಅಭಿಮಾನವನ್ನು ಕೆರಳಿಸಲು ಅವರು ನಿಶ್ಚಯಿಸಿಯಾಗಿತ್ತು.

ಕರ್ನಾಟಕದಲ್ಲಿ ಮೆಜಾರಿಟಿಯಿಂದ ಅಧಿಕಾರ ಹಿಡಿಯಲು ಒಕ್ಕಲಿಗ ಬೆಲ್ಟ್‍ನಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳಲೇಬೇಕೆಂದು ತೀರ್ಮಾನಿಸಿರುವ ಬಿಜೆಪಿಗೆ ಇದರಿಂದ ಎಷ್ಟು ನಷ್ಟ ಎಷ್ಟು ಲಾಭ ಎಂಬುದನ್ನು ಮುಂದಿನ ದಿನಗಳು ಹೇಳುತ್ತವೆ. ಆದರೆ, ಸಿದ್ದಾರ್ಥ, ಎಚ್‍ಡಿಕೆ, ಆರ್.ಅಶೋಕ್ ಮತ್ತು ಡಿಕೆಶಿ ಪ್ರಕರಣಗಳು ಸದ್ಯಕ್ಕಂತೂ ಬಿಜೆಪಿ ವರ್ಸಸ್ ಒಕ್ಕಲಿಗ ನಾಯಕರು ಎಂಬ ಸಂದೇಶವನ್ನೇ ನೀಡುತ್ತಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...