Homeಅಂಕಣಗಳುಥೂತ್ತೇರಿ | ಯಾಹೂರೇಣುಕಾಚಾರಿಗೆ ಹೊನ್ನಾಳಿ ಹೊಡೆತ ಗೊತ್ತಿಲ್ಲವಂತಲ್ಲಾ.....ಯಾಹೂ

ರೇಣುಕಾಚಾರಿಗೆ ಹೊನ್ನಾಳಿ ಹೊಡೆತ ಗೊತ್ತಿಲ್ಲವಂತಲ್ಲಾ…..ಯಾಹೂ

- Advertisement -

ನೋಡಿದ ಕೂಡಲೇ ಆರೆಸ್ಸೆಸ್‍ನ ಸಕ್ರಿಯ ಕಾರ್ಯಕರ್ತನಂತೆ ಕಾಣುವ ಆದಿತ್ಯರಾವ್ ಮೀಡಿಯಾ ಜನಿವಾರಿಗಳ ನಿಜಬಣ್ಣ ಬಯಲು ಮಾಡಿದ ಯುಗಪುರುಷನಂತೆ ಗೋಚರಿಸುತ್ತಿದ್ದಾನಲ್ಲಾ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬು ಮಡಗಿ ಆತ ಮಾಯವಾದ ನಂತರ ಬೆಳಗ್ಗೆ ಚಡ್ಡಿ ಪತ್ರಿಕೆಗಳನ್ನ ತೆಗೆದು ನೋಡಿದರೆ, ದೇಶವೇ ಬೆಚ್ಚಿಬೀಳುವಂತಹ ಸುದ್ದಿ ಮಾಡಿದ್ದರಲ್ಲಾ. ಅದರಲ್ಲೂ ನಿದ್ರೆಯಲ್ಲೂ ಬುದೂರನೆದ್ದು ನೀರು ಕುಡಿದು ಬೆವರು ಒರೆಸಿಕೊಳ್ಳುತ್ತ ಬುಲೆಟ್‍ನಿಂದ ಬಚಾವಾದವನಂತೆ ತೊದಲುವ ವಿಜಯಸಂಕೇಶ್ವರ ಎಂಬ ಹಳೆ ಲಾರಿ ಇಂಜಿನ್ ತನ್ನ ವಿಶದವಾಣಿ ಎಂಬ ಪತ್ರಿಕೆಯಲ್ಲಿ ಗಣರಾಜ್ಯೋತ್ಸವದ ಟೈಮಿಗೆ ದುಷ್ಕೃತ್ಯವೆಸಗಿ ದೇಶವನ್ನೇ ಗಂಡಾಂತರಕ್ಕೆ ದೂಡುವ ಕೃತ್ಯವಿದು ಎಂದು ತನ್ನ ಮನಸ್ಸಿನಾಳದಲ್ಲಿದ್ದ ಮುಸ್ಲಿಂ ದ್ವೇಷವನ್ನ ಕಾರಿಕೊಂಡಿದ್ದನಲ್ಲಾ. ಆದರೇನು ಮರುದಿನವೇ ಸಿಕ್ಕ ಆದಿತ್ಯರಾವ್ ಬಗ್ಗೆ ಕನಿಕರ ಉಕ್ಕಿ ಹರಿದ ಪರಿಣಾಮ ಈತ ಮಾನಸಿಕ ಅಸ್ವಸ್ಥನಾದ. ಈ ಮನೋರೋಗಿ ಅಂತಿಂಥವನಲ್ಲ ಡಿಗ್ರಿ ಪಡೆದವನು. ಬಾಂಬು ತಯಾರಿಸುವ ತಂತ್ರಜ್ಞಾನ ಹೊಂದಿದ್ದವನು. ಆನ್‍ಲೈನ್ ಮುಖಾಂತರ ಬಾಂಬು ಸಾಮಗ್ರಿ ಖರೀದಿಸಿದವನು. ಆದರೂ ಬುದ್ಧಿಮಾಂದ್ಯನೆಂದು ಬಿಂಬಿತನಾಗಿರುವ ಈತನೇನಾದರೂ ಸಿಕ್ಕಿ ಬೀಳದಿದ್ದರೆ, ವಿಜಯ ಸಂಕೇಶ್ವರ ಸಾಬರ ಭಯೋತ್ಪಾದನೆ ಬಗ್ಗೆ ವಿಶೇಷ ಪುರವಣಿಯನ್ನೇ ತರುತ್ತಿದ್ದನಂತಲ್ಲಾ. ತನ್ನ ತಮ್ಮನ ಪರ ವಕಾಲತ್ತು ವಹಿಸಿದವನಂತೆ ಇನ್ನೂ ಒದರುತ್ತಲೇ ಇದ್ದಾನೆ. ಈ ನಡುವೆ ಸಂಕೇಶ್ವರನಿಗೆ ಪದ್ಮಶ್ರೀ ಬೇರೆ ಬಂದಿದೆ. ಪತ್ರಿಕೆಯನ್ನೂ ಚಡ್ಡಿಗಳ ಕರಪತ್ರ ಮಾಡಿರೋದು ಮತ್ತು ಅತಿಹೆಚ್ಚು ಲಾರಿಗಳನ್ನು ಮಡಗಿರೋದೆ ಪ್ರಶಸ್ತಿಗೆ ಆತನನ್ನು ಆಯ್ಕೆ ಮಾಡಿರೋದಕ್ಕೆ ಮಾನದಂಡವಂತಲ್ಲ. ಅಂದಹಾಗೆ, ಪ್ರಶಸ್ತಿ ಪಟ್ಟಿಯಲ್ಲಿ ಕೊನೇ ಘಳಿಗೆಯಲ್ಲಿ ಸಂಕೇಶ್ವರ ಹೆಸರು ಮಿಸ್ ಆಗುವ ಸಂಭವ ಇತ್ತಂತೆ, ಹಾಗಾಗಿ ಎರಡು ದಿನ ಮೋದಿ ಸರ್ಕಾರದ ವಿರುದ್ಧ ಮುಖಪುಟ ಸುದ್ದಿ ಪ್ರಕಟಿಸಿ, ಬ್ಲ್ಯಾಕ್‍ಮೇಲ್ ಮಾಡಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾನೆ ಅಂತ ಜನ ಮಾತಾಡುತ್ತಿದ್ದಾರಲ್ಲಾ, ಥೂತ್ತೇರಿ….

ಹಾದಿಬೀದಿಯಲ್ಲಿ ಸಿಗುವ ಸಾಬರೆಲ್ಲಾ ವಿಧ್ವಂಸಕರೆಂದು ಸದಾ ಚಿಂತಿಸುತ್ತ ನನ್ನ ಲಾರಿಗಳ ಕತೆಯೇನೆಂದು ಯೋಚಿಸುವ ಸಂಕೇಶ್ವರನಿಗೆ ತಿಳಿಯದ ಇನ್ನೊಂದೆರಡು ವಿಷಯಗಳೇನೆಂದರೆ ಬಾಬಾ ಬುಡನ್‍ಗಿರಿ ವಿಷಯವನ್ನ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹಬ್ಬಿಸುವ ಹವಣಿಕೆಯಿಂದ ಚಿಕ್ಕಮಗಳೂರು ದೇವಸ್ಥಾನದ ಮೇಲಕ್ಕೆ ಮೆಟ್ಟು ತಂದು ಕಟ್ಟಿದ್ದವರು ಪರಮಭಕ್ತರಾದ ಭಜರಂಗಿಗಳು! ಹಾಗೇ ಮಾನ್ವಿಯಲ್ಲಿ ಮಧ್ಯರಾತ್ರಿ ವೇಳೆ ಬಸ್ಟ್ಯಾಂಡಿಗೆ ಬಂದು ಪಾಕಿಸ್ತಾನದ ಧ್ವಜ ಹಾರಿಸಿಹೋದವರು ಸನಾತನ ಸಂಘದವರು. ಈತ ಮುಂದೆ ಗೌರಿ ಕೊಲೆಯಲ್ಲಿ ಆರೋಪಿಯಾದ. ಹಾಗೆಯೇ ಹೊನ್ನಾಳಿ ತಾಲ್ಲೂಕಿನಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿಹೋದವನು ಶಾಸಕ ರೇಣುಕಾಚಾರಿ ಎಂಬುದು ಈಚೆಗೆ ಬಹಿರಂಗಗೊಂಡಿದೆಯಲ್ಲಾ. ಹೇಗೆಂದರೆ ನನಗೆ ಮುಸ್ಲಿಮರು ಓಟು ಮಾಡಿಲ್ಲ, ಜೊತೆಗೆ ಸದಾ ಮಸೀದಿಯಲ್ಲಿ ಬಾಂಬು ತಯಾರಿಸುತ್ತ ಚೂರಿ ಮಸೆಯುತ್ತ ಪಾಕಿಸ್ತಾನದ ಪರವಿರುವ ಹೊನ್ನಾಳಿ ಸಾಬರಿಗೆ ನಾನು ಯಾವ ಸರಕಾರಿ ಸವಲತ್ತನ್ನು ಕೊಡುವುದಿಲ್ಲವೆಂದು ಹೇಳಿರುವ ವಿಲಾಸಿಜೀವನದ ರೇಣುಕಾಚಾರಿಯ ಮನಸ್ಸಿನಾಳದಲ್ಲಿ ಸಾಬರ ಗಲ್ಲಿಯ ಚರಂಡಿ ನೀರೇ ಹರಿಯುತ್ತಿರುವುದರಿಂದ ಅವನಿನ್ನೇನು ಹೇಳಲು ಸಾಧ್ಯ ಎಂಬುದು ಹೊನ್ನಾಳಿ ಕುರುಬರ ಅಭಿಪ್ರಾಯವಾಗಿದೆಯಂತಲ್ಲಾ, ಥೂತ್ತೇರಿ.

ಭೂಗತಲೋಕದ ದೊರೆಯಾಗಿ ಮೆರೆದಿದ್ದ ಮುತ್ತಪ್ಪ ರೈ ಐದಾರು ಗುಂಡುಗಳಿಂದ ಬಚಾವಾಗಿ ಉಳಿದಿದ್ದರಂತೆ. ಆದರೇನು ಕ್ಯಾನ್ಸರ್ ಗುಂಡಿನಿಂದ ತಪ್ಪಿಸಿಕೊಳ್ಳಲಾಗಿಲ್ಲ. ಕಡೆಗೂ ಬಂದ ಸಾವನ್ನು ಸಂಭ್ರಮಿಸುತ್ತಿರುವ ಆತನನ್ನು ಮಾಧ್ಯಮದ ಮಂದಮತಿಗಳು ಇನ್ನಿಲ್ಲದ ಉಪಮೆಗಳೊಂದಿಗೆ ಹೊಗಳಿ ಹೊಗಳಿ ಸುಸ್ತಾಗುತ್ತಿವೆ. ಮುತ್ತಪ್ಪ ರೈ ದಕ್ಷಿಣ ಕನ್ನಡದ ಬುದ್ಧಿವಂತಿಕೆಯನ್ನ ಭೂಗತಲೋಕಕ್ಕೆ ಪರಿಚಯಿಸಿ ಮಚ್ಚು, ಲಾಂಗು, ಚಾಕುವಿನ ಬದಲು ಜೀವಹತ್ಯೆಗೆ ಪಿಸ್ತೂಲು ಬಳಸಿದ ವ್ಯಕ್ತಿ. ಆತನನ್ನ ಪೊಲೀಸರು ಕೂಡ ಪಿಸ್ತೂಲಿನಿಂದಲೇ ಮುಗಿಸಲು ಯತ್ನಿಸಿದಾಗ, ಲಂಕೇಶರ ಬಳಿಯಿದ್ದ ಕೂಗುಮಾರಿಯೊಬ್ಬಳು ಪೊಲೀಸರನ್ನೇ ವಿಲನ್‍ಗಳನ್ನಾಗಿ ಮಾಡಿ ಮುತ್ತಪ್ಪರೈಯನ್ನ ಹೀರೋ ಮಾಡಿ ಬರೆಸಿದ್ದಳು. ಅಲ್ಲದೆ ಆಗಿನ ಪೊಲೀಸ್ ಅಧಿಕಾರಿ ಕೆಂಪಯ್ಯನನ್ನೇ ಟಾರ್ಗೆಟ್ ಮಾಡಿದ ಕೂಗುಮಾರಿ ಕಡೆಗೂ ಮುತ್ತಪ್ಪರೈ ಬಚಾವಾಗುವಂತೆ ಮಾಡಿದ್ದಳು. ಆದರೆ ಲಂಕೇಶರು ಆಕೆಯ ನಡವಳಿಕೆ ಬಗ್ಗೆ ಗುಮಾನಿಪಟ್ಟು ಕೆಲಸದಿಂದ ತೆಗೆದಿದ್ದರು. ಪೊಲೀಸರಿಂದ ಬಚಾವಾಗಲು ದೇಶವನ್ನೇ ಬಿಟ್ಟಿದ್ದ ಮುತ್ತಪ್ಪ ರೈ ಕನ್ನಡಿಗರ ಸಂಘಟನೆ ನೆವದಲ್ಲಿ ಸೈನ್ಯ ಕಟ್ಟಿ ಮೆರವಣಿಗೆ ಮಾಡಿಸುತ್ತಿದ್ದರು. ಈಗ ಅನಾಥರಾಗುವವರೆಂದರೆ ಆತನಿಂದ ಹಣ ಪಡೆದು ಕಾರ್ಯಕ್ರಮ ಮಾಡುತ್ತಿದ್ದ ಅಬ್ಬೇಪಾರಿಗಳಂತಲ್ಲಾ, ಥೂತ್ತೇರಿ.

ಮೈಸೂರಿನಲ್ಲಿ ಯುವತಿಯೊಬ್ಬಳು ಫ್ರೀ ಕಾಶ್ಮೀರ ಎಂಬ ಫಲಕ ಪ್ರದರ್ಶಿಸಿದ್ದಕ್ಕೆ ನಮ್ಮ ಪೊಲೀಸರು ದೇಶದ್ರೋಹದ ಕೇಸುಮಾಡಿ ಕೋರ್ಟಿಗೆ ಎಳೆದಿರುವುದರಿಂದ, ದೇಶಭಕ್ತ ವಕೀಲರೆಲ್ಲಾ ಸೇರಿ ಆಕೆಯ ಪರ ಯಾರೂ ವಕಾಲತ್ತು ವಹಿಸಬಾರದೆಂಬ ತೀರ್ಮಾನ ತೆಗೆದುಕೊಂಡಿದ್ದಾರಲ್ಲಾ. ಈ ಬಗ್ಗೆ ವಕೀಲರ ನಡೆಯನ್ನ ಸಿದ್ದರಾಮಯ್ಯ ಟೀಕಿಸಿದಾಗ ನೀವೆ ಬಂದು ವಾದಿಸಿ ಎಂದು ರಾಘವೇಂದ್ರ ಎಂಬ ವಕೀಲ ಸವಾಲು ಹಾಕಿದ್ದಾನಲ್ಲಾ. ಈ ವಕೀಲರು ತಾವೇ ಕೋರ್ಟೆಂದು ಭಾವಿಸಿರುವಂತಿದೆ. ವಕೀಲರ ಸಂಘದ ತೀರ್ಮಾನದಂತೆ ಕೋರ್ಟು ನಡೆಯುವುದಿಲ್ಲ. ಆರೋಪಿ ಮೇಲಿನ ಆರೋಪ ತೀರ್ಮಾನವಾಗುವುದು ನ್ಯಾಯಾಲಯದಲ್ಲೇ ಹೊರತು ವಕೀಲರ ಗುಂಪಿನಲ್ಲಲ್ಲ ಎಂಬುದನ್ನು ವಕೀಲರು ಮನಗಾಣಬೇಕು. ಇದೆಲ್ಲಾ ಸರ್ವಾಧಿಕಾರಿಗಳ ಆಡಳಿತದ ಸಂದರ್ಭದಲ್ಲಿ ಹುಟ್ಟುವ ಘೋಷಣೆಗಳು. ವಕೀಲರು ಸಂವಿಧಾನಾತ್ಮಕವಾಗಿ ದತ್ತವಾಗಿರುವ ಹಕ್ಕುಗಳ ಬಗ್ಗೆ ಗಾಢವಾಗಿ ಯೋಚಿಸಿದರೆ ಹೀಗಾಗುವುದಿಲ್ಲವಂತಲ್ಲಾ ಥೂತ್ತೇರಿ.

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Un Constitutional opinions in Mysore Bar decession is wrong. Speeking truth is not a crime. Where as the loyers protect the Constitution. All world is observing the desession of Mysore Bar Associations attitude.This kind of actions are not good for society.

LEAVE A REPLY

Please enter your comment!
Please enter your name here

- Advertisment -

Must Read

ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ಪರೇಡ್‌ ಮೈದಾನ ಸಜ್ಜು, ಸಾರ್ವಜನಿಕರಿಗಿಲ್ಲ ಪ್ರವೇಶ

0
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಬೆಂಗಳೂರಿನ  ಮಹಾತ್ಮ ಗಾಂಧಿ ರಸ್ತೆಯ ಮಾಣಿಕ್ ಷಾ ಪರೇಡ್‌ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ಗೆ ಸಾರ್ವಜನಿಕರಿಗೆ ಅವಕಾಶ ನೀಡಿಲ್ಲ. ಆಹ್ವಾನ ಪತ್ರಗಳು ಮತ್ತು ಪಾಸ್ ಹೊಂದಿರುವವರಿಗೆ ಮಾತ್ರ ಪರೇಡ್‌ನಲ್ಲಿ...
Wordpress Social Share Plugin powered by Ultimatelysocial
Shares