Homeಅಂಕಣಗಳುಉತ್ತರ ಕನ್ನಡ ಜಿಲ್ಲೆಯ ರಾಜಕೀಯ ಸಂಕಥನ : ಹಳೇ ಹಾದಿ ಮತ್ತು ಹೊಸ ತುದಿ

ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ಸಂಕಥನ : ಹಳೇ ಹಾದಿ ಮತ್ತು ಹೊಸ ತುದಿ

- Advertisement -
- Advertisement -

ವಿಧಾನಸಭಾ ಚುನಾವಣೆಯ ಗುಂಗಿನ್ನೂ ಇಳಿದಿಲ್ಲ; ಅದಾಗಲೇ ಲೋಕಸಭಾ ಕದನದ ಕುತೂಹಲ ಉತ್ತರ ಕನ್ನಡದಲ್ಲಿ ಕೆರಳುತ್ತಿದೆ. ಪಾರ್ಲಿಮೆಂಟ್ ಜಿದ್ದಾಜಿದ್ದಿಗೆ ಒಂದು ವರ್ಷವೂ ಇಲ್ಲ. ಮೋದಿ ಮಾಮನ ತಲೆಯಲ್ಲಿ ಅವಧಿಪೂರ್ವ ಇಲೆಕ್ಷನ್ ಹುಕ್ಕಿ ಹೊಕ್ಕರೂ ಹೊಕ್ಕಬಹುದೆಂಬ ತರ್ಕ ಮಂಡಿಸುತ್ತಿವೆ. ಇತ್ತೀಚೆಗೆ ದೇಶದಾದ್ಯಂತ ನಡೆದ ಉಪಚುನಾವಣೆಯಲ್ಲಿ ಕೇಸರಿಪಡೆ ಸತತವಾಗಿ ಮುಗ್ಗರಿಸಿದ ಘಟನಾವಳಿಗಳ ವಿಮರ್ಶೆ, ಇಂಥ ಪರ್ವಕಾಲದಲ್ಲಿ ನತದೃಷ್ಟ ಉತ್ತರ ಕನ್ನಡ ನಿಜನಾಯಕನಿಗಾಗಿ ಹಸಿರು ಹಂಬಲಿಸುತ್ತಿದೆ! ಇಡೀ ಜಿಲ್ಲೆಯನ್ನು ಪ್ರತಿಭಾವಿಸುವ-ಪ್ರತಿನಿಧಿಸುವ ಪ್ರಬುದ್ಧ-ದೂರದೃಷ್ಟಿಯ ಮನುಷ್ಯತ್ವದ ಮುಖಂಡನೊಬ್ಬ ಈ ಪಾರ್ಲಿಮೆಂಟ್ ಚುನಾವಣೆಯ ಹೊತ್ತಲ್ಲಾದರೂ ಹುಟ್ಟಬಹುದಾ ಎಂಬ ಕಾತರ ಉತ್ತರಕನ್ನಡಿಗರದು.
ಅಂದಿನ ರಾಜಕಾರಣ
ಸುಮಾರು ಹದಿನಾಲ್ಕು ಲಕ್ಷ ಜನವಸತಿಯ ಉತ್ತರ ಕನ್ನಡದ ವಿಸ್ತೀರ್ಣ ನಾಲ್ಕು ಗೋವಾ ರಾಜ್ಯಕ್ಕೆ ಸವiನಾದದ್ದು. ಒಂದು ಕಾಲದಲ್ಲಿ ಇಂದಿನ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಸೇರಿ ದೇ ಆಗಿದ್ದವು. ಹೊನ್ನಾವರ ಜಿಲ್ಲಾಕೇಂದ್ರವಾಗಿತ್ತು. ಒಡೆಯುವ ಕಸುಬಿನಲ್ಲಿ ನಿಪುಣರಾದ ಬಿಳಿಯರು ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡವೆಂದು ಇಬ್ಭಾಗಿಸಿದ್ದರು. ಸ್ವಾತಂತ್ರ್ಯೋತ್ತರ ದಿನಗಳಲ್ಲಿ ಶ್ರೀನಿವಾಸ ಮಲ್ಯ, ರಂಗನಾಥ ಶೆಣೈ, ಟಿ.ಎಂ.ಎ. ಪೈರಂಥ ದೂರದೃಷ್ಟಿಯ ಮತ್ತು ಜನಾದರಣೀಯರ ಮುಂದಾಳತ್ವ ಸಿಕ್ಕಿತು. ಆದರೆ ಆ ಭಾಗ್ಯ ಉತ್ತರ ಕನ್ನಡಕ್ಕೆ ಬರಲಿಲ್ಲ. ದಕ್ಷಿಣ ಕನ್ನಡದ ಜೋಕಿಂ ಆಳ್ವರನ್ನು ಕಾಂಗ್ರೆಸ್ ಉತ್ತರ ಕನ್ನಡದ ಮೇಲೆ ಬಲವಂತದಿಂದ ಹೇರಿತು. ಈ ಜಡಭರತ ಸ್ವಭಾವದ ಜೋಕಿಂ ನಿರಂತರ ಮೂರು ಅವಧಿಗೆ ಕೆನರಾ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿಪಾದಿಸಿದರು. ಆತನನ್ನು ಜಿಲ್ಲೆಯ ಜನ ಅನಿವಾರ್ಯವಾಗಿ ಸಹಿಸಿಕೊಂಡಿದ್ದರೇ ಹೊರತು ಒಬ್ಬ ಜನಪರ ನಾಯಕನಾಗಿ ಒಪ್ಪಿಕೊಳ್ಳಲೇ ಇಲ್ಲ.
ಜೋಕಿಂ ಆಳ್ವ ಉತ್ತರ ಕನ್ನಡಕ್ಕೆ ವಕ್ಕರಿಸಿ ಎಂಪಿಗಿರಿಯ ಸುಖ-ಸಂತೋಷ ಅನುಭವಿಸಿದ್ದಕ್ಕೊಂದು ಭಾವನಾತ್ಮಕ ಹಿನ್ನೆಲೆಯಿದೆ. ಇಡೀ ಕರ್ನಾಟಕದಲ್ಲಿ “ಗಾಂಧಿ ಜಿಲ್ಲೆ” ಎಂಬ ಪ್ರತೀತಿ ಇದ್ದದ್ದು ಉತ್ತರ ಕನ್ನಡಕ್ಕೆ ಮಾತ್ರ! “ಕರ್ನಾಟಕದ ಗಾಂಧಿ” ಎಂದೇ ಪ್ರಸಿದ್ಧರಾಗಿದ್ದ ತಿಮ್ಮಪ್ಪ ನಾಯಕ ಇದೇ ಜಿಲ್ಲೆಯವರು. ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣೆ ಮುಂತಾದ ಪ್ರಮುಖ ರಾಷ್ಟ್ರೀಯ ಆಂದೋಲನಗಳಲ್ಲಿ ದೇಶಕ್ಕೇ ಮಾದರಿ ಎಂಬಂತೆ ಹೋರಾಡಿದ ಜಿಲ್ಲೆಯಿದು. ಹೀಗಾಗಿ ಮಹಾತ್ಮ ಗಾಂಧಿಯೆಂದರೆ ಕಾಂಗ್ರೆಸ್, ಕಾಂಗ್ರೆಸೆಂದರೆ ಗಾಂಧೀಜಿ ಎಂಬಂಥ ಅವಿನಾಭಾವ ಸಂಬಂಧ ಹೊಂದಿದ್ದ ಉತ್ತರ ಕನ್ನಡಿಗರ ಪ್ರಥಮ ಮತ್ತು ಪರಮೋಚ್ಛ ನಿಷ್ಠೆ ಕಾಂಗ್ರೆಸ್ ಕುರಿತಾಗಿತ್ತು. ಈ ಭಾವುಕತೆಯನ್ನು ಕಾಂಗ್ರೆಸ್‍ನ ಅಗ್ರಣಿಗಳು ತಮ್ಮ ರಾಜಕಾರಣಕ್ಕೆ ಬೇಕಾದಂತೆ ಬಳಸಿಕೊಂಡರು.
ದಕ್ಷಿಣ ಕನ್ನಡದಲ್ಲಿ ಮಲ್ಯಾರಿಗೆ ಲೋಕಸಭೆ ಸ್ಥಾನ ಕೊಟ್ಟ ನಂತರ ಅಲ್ಲಿನ ಬಹುಸಂಖ್ಯಾತ ಕ್ರಿಶ್ಚಿಯನ್ನರಿಗೆ ಅವಕಾಶ ಕೊಡಲು ಆಸ್ಪದವಿರಲಿಲ್ಲ. ಹಾಗಾಗಿ ಕಾಂಗ್ರೆಸ್‍ನಲ್ಲಿ ಬಹುಕಾಲದ ನಿಷ್ಠೆ ಪ್ರದರ್ಶಿಸುತ್ತಾ ಬಂದಿದ್ದ ಜೋಕಿಂ ಆಳ್ವರಿಗೆ ಉತ್ತರ ಕನ್ನಡದಂಥ ಸುರಕ್ಷಿತ ಕ್ಷೇತ್ರ ಬೇರೊಂದಿಲ್ಲವೆಂದು ಕಾಂಗ್ರೆಸ್ ಹೈಕಮಾಂಡ್ ಇಲ್ಲಿಗೆ ರವಾನಿಸಿತ್ತು. ಆಳ್ವ ಈಗಿನ ಪುಢಾರಿಗಳಂತೆ ಜನದ್ರೋಹಿ ಭ್ರಷ್ಟ-ದುಷ್ಟ ಅಥವಾ ಅನುಕೂಲಸಿಂಧು, ಮತಾಂಧ ಕಟುಕನಾಗಿರಲಿಲ್ಲ ಎಂಬುದೇನೋ ನಿಜ. ಆದರೆ ಈ ಜಿಲ್ಲೆಯ ಭೌಗೋಳಿಕ ಉದ್ದಗಲವೂ ಗೊತ್ತಿಲ್ಲದ ಈತ ಒಂದೂವರೆ ದಶಕÀ ಕಾಲ ನಿರುಪಯುಕ್ತ, ನಿಷ್ಪ್ರಯೋಜಕ ಎಂಪಿಯಾಗಿ ಕಾಲಕಳೆದರೇ ವಿನಃ ಇಲ್ಲಿಯ ಜನರೊಡನೆ ಭಾವನಾತ್ಮಕವಾಗಿ ಬೆರೆಯಲೇ ಇಲ್ಲ. ಹೀಗಾಗಿ ಸ್ವಾತಂತ್ರ್ಯೋತ್ತರದ ಆರಂಭದ ಘಟ್ಟದಲ್ಲೇ ಉತ್ತರ ಕನ್ನಡ ಅನಾಯಕತ್ವದಿಂದ ತೀವ್ರ ಹಿನ್ನಡೆಗೆ ತುತ್ತಾಯಿತು.
ಈ ಅವಧಿಯಲ್ಲಿ ಜಿಲ್ಲೆಗೆ ನಾಯಕತ್ವ ಕೊಡುವ ಸಕಲ ಗುಣಲಕ್ಷಣ ಹೊಂದಿದ್ದ ಹೋರಾಡಗಾರ ದಿನಕರ ದೇಸಾಯಿ ಜನಮಾನಸದಲ್ಲಿ ಮುಖಂಡರಾಗಿ ಬಿಂಬಿತರಾಗಿದ್ದರು. ಇದಕ್ಕೆ ಕಾರಣವೂ ಇದೆ. ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಈ ಜಿಲ್ಲೆಯ ಜನರನ್ನು-ಅದರಲ್ಲೂ ವಿಶೇಷವಾಗಿ ರೈತ-ಕೂಲಿಕಾರ ಶ್ರಮಜೀವಿಗಳನ್ನು ಎದೆಗೆ ಹಚ್ಚಿಕೊಂಡು ಸಂಘಟನೆಯ ಛಲ-ಬಲ ಹುಟ್ಟುವಂತೆ ಮಾಡಿದ್ದೇ ದೇಸಾಯಿ ಮತ್ತವರ ಸಂಗಾತಿಗಳಾಗಿದ್ದ ಎಸ್.ವಿ. (ಗಿರಿ) ಪಿಕಳೆ ಮತ್ತು ದಯಾನಂದ ನಾಡಕರ್ಣಿ. ಈ ತ್ರಿಮೂರ್ತಿಗಳಲ್ಲಿ ದೇಸಾಯರು ಹಲವು ಕಾರಣಗಳಿಂದ ಇಡೀ ಜಿಲ್ಲೆಯ ಮನಸೂರೆಗೊಂಡಿದ್ದರು. ಒಬ್ಬ ಜನಸೇವಕ ಕವಿಯೂ ಆಗಿದ್ದು ಆಕರ್ಷಕ ವ್ಯಕ್ತಿತ್ವ ರೂಢಿಸಿಕೊಳ್ಳಲು ದೇಸಾಯರಿಗೆ ಸಾಧ್ಯವಾಗಿದ್ದಿರಬಹುದು.
ದಿನಕರ ದೇಸಾಯರದ್ದು ಬೆವರಿನ ಸಂಸ್ಕøತಿಯ ಮಂದಿಗಾಗಿ ದುಡಿಯುವ-ಮಿಡಿಯುವ ಸ್ವಭಾವ. ಗೋಪಾಲಕೃಷ್ಣ ಗೋಖಲೆ ಸ್ಥಾಪಿಸಿದ್ದ “ಭಾರತ ಸೇವಕ ಸಮಾಜ (Servants of India) ದ ಆಜೀವ ಕಾರ್ಯಕರ್ತನಾಗಿ ಅರ್ಪಿಸಿಕೊಂಡಿದ್ದ ದಿನಕರ ದೇಸಾಯಿ ಆ ಸೇವಾಸಂಸ್ಥೆಯ ಮುಂಬೈ ಬ್ರಾಂಚಿನ ಅಧ್ಯಕ್ಷರೂ ಆಗಿದ್ದರು. ಅದೇ ಹೊತ್ತಿಗೆ ಮುಂಬೈನ ಕಾರ್ಪೊರೇಷನ್‍ನ ವಿರೋಧ ಪಕ್ಷದ ಮುಂಚೂಣಿ ನಾಯಕರಾಗಿಯೂ ಮಿಂಚಿದ್ದರು. ಮುಂಬೈನಲ್ಲಿ ಕಡಲ ಕಾರ್ಮಿಕ ಸಂಘ ಸ್ಥಾಪಿಸಿ ಬಹುಕಾಲ ಅದರ ಪದಾಧಿಕಾರಿಯಾಗಿ ಕಾರ್ಮಿಕ ಹೋರಾಟದ ಬಗ್ಗೆ ಸ್ಪಷ್ಟ ಪರಿಕಲ್ಪನೆಯನ್ನು ಹೊಂದಿದ್ದರು. ದೇಸಾಯಿ ಭಾರತ ಕಾರ್ಮಿಕ ಸಂಘಗಳ ಪ್ರತಿನಿಧಿಯಾಗಿ ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಪಾಲ್ಗೊಂಡು ವಿಶ್ವದ ಗಮನ ಸೆಳೆದಿದ್ದರು. ಅದೇ ವೇಳಗೆ ಜನ್ಮಕೊಟ್ಟ ನೆಲದಲ್ಲಿ ರೈತ-ಕೂಲಿಕಾರ ಶ್ರಮಜೀವಿಗಳನ್ನು ಕೆಂಬಾವುಟದಡಿಯಲ್ಲಿ ಒಗ್ಗೂಡಿಸಿ ಶೋಷಕ ಜಮೀನ್ದಾರಿ ವರ್ಗದಲ್ಲಿ “ಹಾವಳಿ ಮಂಜ” ಅನ್ನಿಸಿದ್ದರು; ಜನಸಾಮಾನ್ಯರ ಬಾಯಲ್ಲಿ ದೇಸಾಯಿ “ದೀನಬಂಧು” ಆಗಿದ್ದರು.
ಅಂದಿನ ಸಂದರ್ಭದಲ್ಲಿ ದಿನಕರ ದೇಸಾಯರಿಗೆ ಜಿಲ್ಲೆಯ ನಾಯಕತ್ವ ವಹಿಸಿಕೊಳ್ಳಲು ಎಲ್ಲಾ ದಿಕ್ಕಿನಿಂದಲೂ ಅನುಕೂಲಗಳಿದ್ದವು. ಆದರೆ ಮೊದಲೆರಡು ಮಹಾಚುನಾವಣೆಯಲ್ಲಿ ಲೋಕಸಭೆಗೆ ಸ್ಪರ್ಧಿಸಿ ದೇಸಾಯಿ ಸೋತರು. ಜಿಲ್ಲೆಯ ಮನಃಸ್ಥಿತಿ ಸೂಕ್ಷ್ಮವಾಗಿ ಗ್ರಹಿಸಿದ ದೇಸಾಯಿ ತನಗೆ ಜಿಲ್ಲೆಯನ್ನು ದಿಲ್ಲಿಯಲ್ಲಿ ಪ್ರತಿನಿಧಿಸುವ ಬಹುಮತದ ಜನಾದೇಶ ಇಲ್ಲವೆಂದುಕೊಂಡು ಬೆವರಿನ ವರ್ಗದ ಸಂಘಟನೆಗಷ್ಟೇ ತೊಡಗಿಸಿಕೊಂಡರು; ಶಿಕ್ಷಣ ಮತ್ತು ಸಾಮಾಜಿಕ ರಂಗಕ್ಕಷ್ಟೇ ಒಡ್ಡಿಕೊಂಡರು. 1967ರಲ್ಲಿ ಅದುವರೆಗೆ ರೈತಸಭೆಯನ್ನಷ್ಟೇ ಪ್ರತಿನಿಧಿಸುತ್ತಿದ್ದ ದೇಸಾಯರನ್ನು ಉತ್ತರ ಕನ್ನಡದ ಜನರು ಲೋಕಸಭೆಗೆ ಕಳಿಸಿದರು. ಆದರೆ ಅವಧಿ ಪೂರ್ವವೇ ಮಧ್ಯಂತರ ಚುನಾವಣೆ ಘೋಷಿಸಿದ್ದ ಇಂದಿರಾಗಾಂಧಿಯ “ಗರೀಬಿ ಹಠಾವೋ” ಗಾಳಿಗೆ ಕೊಚ್ಚಿಹೋದ ಹಲವು ಘಟಾನುಘಟಿಗಳಲ್ಲಿ ದೇಸಾಯರೂ ಒಬ್ಬರಾದರು. ಹೀಗಾಗಿ ಈ ನಾಲ್ಕು ವರ್ಷದ ಸಂಸದ ಸಂದರ್ಭ ಬಿಟ್ಟರೆ ಇನ್ಯಾವಾಗಲೂ ದೇಸಾಯಿ ಪೂರ್ಣಾವಧಿ ಜನಪ್ರತಿನಿಧಿಯಾಗಿ ಜಿಲ್ಲೆಯನ್ನು ರಾಜ್ಯ ಅಥವಾ ಕೇಂದ್ರ ಸರ್ಕಾರದ ಮುಂದೆ ಪ್ರತಿನಿಧಿಸಲೇ ಇಲ್ಲ.
ದೇಸಾಯರ ನಾಯಕತ್ವಕ್ಕೂ ಕೆಲವು ಇತಿಮಿತಿಗಳಿದ್ದವು. ಒಂದು ಹಂತದವರೆಗಷ್ಟೇ ನಾಯಕತ್ವ ನೀಡುವ ಅವಕಾಶ ಅವರಿಗಿತ್ತು. ಎ¯್ಲ ಹಂತದಲ್ಲೂ ಎಲ್ಲ ದಿನಗಳಲ್ಲೂ ರಾಜಕಾರಣ ಮಾಡಿಕೊಂಡಿರಲು ಸಾಧ್ಯವಾಗದಂಥ ತೊಂದರೆಗಳಿದ್ದವು. ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಆಜೀವ ಕಾರ್ಯಕರ್ತರು ಯಾವುದೇ ರಾಜಕೀಯ ಪಕ್ಷದ ಸಕ್ರಿಯ ಸದಸ್ಯರಾಗಿರಬಾರದೆಂಬ ಶರತ್ತು ಇತ್ತು. ಹೀಗಾಗಿ ಆತ ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಿ ಸಮಾಜವಾದಿ ಪಕ್ಷದ ಬೆಂಬಲ ಪಡೆದಿದ್ದರೇ ಹೊರತು ಒಂದು ರಾಜಕೀಯ ಪಕ್ಷದ ನಾಯಕರಾಗಿ ಬೆಳೆಯಲಿಲ್ಲ. ಒಂದು ಜಿಲ್ಲೆ ಅಥವಾ ನಾಡಿಗೆ ನಾಯಕತ್ವ ಕೊಡುವ ಎಲ್ಲಾ ಅರ್ಹತೆ-ಸಾಮಥ್ರ್ಯವಿದ್ದರೂ ರಾಜಕೀಯ ಚರಿಷ್ಮ ಬೇಕೆಬೇಕು. ಆ ವಿಷಯದಲ್ಲಿ ಅಸಹಾಯಕರಾಗಿದ್ದ ದೇಸಾಯಿ ಎಲ್ಲಾ ಕಾಲಕ್ಕೆ ಮತ್ತು ಎಲ್ಲ ವರ್ಗಕ್ಕೆ ಸಲ್ಲುವ ಲೀಡರಾಗಲೇ ಇಲ್ಲ!!
1960ರ ದಶಕದಲ್ಲಿ ದೇಸಾಯರ ರೈತಕೂಟದಲ್ಲಿ ಬಿರುಕುಂಟಾಯಿತು. ದುರ್ಬಲ ವರ್ಗದ ಹಿತಚಿಂತನೆಯಲ್ಲಿ ದೇಸಾಯಿಗಿಂತಲೂ ಒಂದು ಹೆಜ್ಜೆ ಮುಂದಿದ್ದ ನಿಷ್ಠೂರವಾದಿ ಗಿರಿ ಪಿಕಳೆ ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ದೂರಾದರು. ದೇಸಾಯಿ ಕೆನರಾ ವೆಲ್ಫೆರ್ ಟ್ರಸ್ಟಿನ ವಿದ್ಯಾಸಂಸ್ಥೆಗಳಿಗೆ ಬಂಡವಾಳಶಾಹಿಗಳಿಂದ ದೇಣಿಗೆ ತರುತ್ತಿದ್ದುದನ್ನು ಪಿಕಳೆ ಪ್ರಬಲವಾಗಿ ವಿರೋಧಿಸಿದ್ದರು. ಇದರಿಂದ ಕೆರಳಿದ ದೇಸಾಯಿ ಟ್ರಸ್ಟಿನಿಂದ ಪಿಕಳೆಯನ್ನ ವಜಾ ಮಾಡುತ್ತಾರೆ. ಆನಂತರ ದೇಸಾಯಿ-ಪಿಕಳೆ-ನಾಡಕರ್ಣಿಗಳ ದಾರಿ ಬದಲಾಗಿಬಿಟ್ಟಿತು. ಈ ತ್ರಿಮೂರ್ತಿಗಳು ಜಿಲ್ಲೆಯ ಎಲ್ಲಾ ವರ್ಗದ ಬೇಕುಬೇಡ ಗಮನದಲ್ಲಿಟ್ಟುಕೊಂಡು ಒಂದಾಗಿ ಸೇವೆ ಮುಂದುವರೆಸಿದ್ದರೆ ಸಮರ್ಥ ನಾಯಕತ್ವ ಕೊಡಬಹುದಿತ್ತು. ಇಷ್ಟಿದ್ದರೂ ಉತ್ತರ ಕನ್ನಡ ಇವತ್ತಿಗೂ ಕೃತಜ್ಞತೆ, ಆರಾಧನೆ ಭಾವನೆಯಿಂದ ಮತ್ತೆ-ಮತ್ತೆ ಸ್ಮರಿಸುವುದು ದಿನಕರ ದೇಸಾಯಿ ಮತ್ತು ಗಿರಿ ಪಿಕಳೆಯವರನ್ನೇ!!
ಇಂದಿನ ದುರಂತ
ಹಾಗೆ ನೋಡಿದರೆ ಉತ್ತರ ಕನ್ನಡದಲ್ಲಿ ಪ್ರತಿಭಾವಂತರಿಗೇನೂ ಕೊರತೆಯಿಲ್ಲ ರಾಮಕೃಷ್ಣ ಹೆಗಡೆ, ದೇವರಾಯ ನಾಯ್ಕ, ಆರ್.ವಿ.ದೇಶಪಾಂಡೆ, ಮಾರ್ಗರೇಟ್ ಆಳ್ವ, ಅನಂತಕುಮಾರ್ ಹೆಗಡೆ………. ಹೀಗೆ ಹಲವರಿಗೆ ಜಿಲ್ಲೆಗೊಂದು ಗಟ್ಟಿ ನಾಯಕತ್ವ ಕೊಡುವ ಅವಕಾಶವಿತ್ತು. ಆದರೆ ಈ ಎಡಬಿಡಂಗಿಗಳು ಜಿಲ್ಲೆಯ ನಾಡಿಮಿಡಿತ ಅರಿಯದೇ ಹೋದರು. ಜನರಿಗೆ ಬೇಡವಾದ “ಈಸಂ”ಗಳಲ್ಲಿ ಮೈಮರೆತು ಸ್ವಾರ್ಥ ಸಾಧಿಸಿಕೊಂಡು ಕೃತಘ್ನರಾಗಿ ಚರಿತ್ರೆ ಸೇರಿದರು. “ಸರ್ವರಿಗೆ ಸಮಪಾಲು – ಸರ್ವರಿಗೆ ಸಮಬಾಳು” ಎಂಬ ಧ್ಯೇಯ ಮುಂದಿಟ್ಟುಕೊಂಡು ಯಾವ ಜಿಲ್ಲೆಯಲ್ಲಿ ಸಮಾಜವಾದಿ ಆಂದೋಲನಗಳು ನಡೆದವೋ ಅದೇ ಜಿಲ್ಲೆಯಲ್ಲೀಗ ಹೊಡಿ-ಬಡಿ-ಕೊಚ್ಚು-ಕೊಲ್ಲು ಸಂಸ್ಕøತಿಯ ಬಿಜೆಪಿಗೆ ಸೇರಿದ ಬಹುಸಂಖ್ಯೆ ಎಮ್ಮೆಲ್ಲೆ-ಎಂಪಿಗಳಿದ್ದಾರೆ. ಈ ಚೆಡ್ಡಿಗಳ ಹಿಂದೂತ್ವದ ಅನಾಹುತ, ಧೋರಣೆಗಳೇನೇ ಇರಲಿ, ಅವರಲ್ಲಾದರೂ ಒಬ್ಬ ನಿರ್ವಿವಾದ ನಾಯಕ ಮೂಡಿಬಂದಾನಾ ಎಂದರೆ, ಊಹುಂ ಅಲ್ಲೂ ಯಾರಿಲ್ಲ ಯೋಗ್ಯತಾವಂತರು: ಎಲ್ಲರೂ ಕಲಬೆರಕೆ ಯೋಗವಂತರೇ!! ಇವರದೆಲ್ಲ ಅಧಿಕಾರ, ಅಹಂ, ಹೊಟ್ಟೆಪಾಡಿಗಷ್ಟೇ ಹಿಂದೂತ್ವ, ಹೇಳೋದು ಬ್ರಹ್ಮಾಂಡ; ತಿನ್ನೋದು ಮಸಿಕೆಂಡವೇ……….
ದುರಂತ ನೋಡಿ, ಮಹಾ ಮೇಧಾವಿ ಎಂದು ರಾಷ್ಟ್ರಮಟ್ಟದಲ್ಲೇ ಭ್ರಮೆ ಮೂಡಿಸಿದ್ದ ರಾಮಕೃಷ್ಣ ಹೆಗಡೆಯಿಂದಲೂ ಜಿಲ್ಲೆಗೊಂದು ನ್ಯಾಯ-ನಾಯಕತ್ವ ಕೊಡಲಾಗಲಿಲ್ಲ! ರಾಜಕೀಯ-ಸಾಮಾಜಿಕ-ಸಾಂಸ್ಕøತಿಕವಾಗಿ ತಮ್ಮದೇ ಛಾಪು ಬಿತ್ತಿದ್ದ ಹೆಗಡೆಜೀ ಇಡೀ ದೇಶದ ಗಮನ ಸೆಳೆದವರು. ಆರು ವರ್ಷ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು, ಅರ್ಥಮಂತ್ರಿಯಾಗಿ ಮಹತ್ವ ಎಲ್ಲ ಸ್ಥಾನಮಾನ ಅನುಭವಿಸಿದವರು. ಮನಸ್ಸು ಮಾಡಿದ್ದರೆ ಹೆಗಡೆಜೀ ಜಿಲ್ಲೆಗೊಂದು ನಿವ್ರ್ಯಾಜ್ಯ ನಾಯಕತ್ವ ಕೊಡಬಹುದಿತ್ತು. ಆದರೆ ಆತ ಹೆತ್ತ ಜಿಲ್ಲೆಗೆ ಬೆನ್ನು ಹಾಕಿ ಹೋದರು. ರಾಷ್ಟ್ರ ರಾಜಕಾರಣದ ಖಯಾಲಿಗೆ ಬಿದ್ದು ತನ್ನನ್ನು ಎತ್ತರಕ್ಕೇರಿಸಿದ್ದ ಜಿಲ್ಲೆಯ ಪಾಲಿಗೆ ಕೃತಘ್ನರಾದರು. ದಿನಕರ ದೇಸಾಯರ ಸಮಾಜವಾದಿ ಮೂಸೆಯಲ್ಲಿ ಮೂಡಿಬಂದ ಹಿಂದುಳಿದ ದೀವರು(ಈಡಿಗ) ವರ್ಗಕ್ಕೆ ಸೇರಿದ ಜಿ.ದೇವರಾಯ ನಾಯ್ಕರ ಕೈಲಿ ಅನ್ಯಾಯವಾಗಿ 15 ವರ್ಷ ಎಂಪಿಗಿರಿಯಿತ್ತು. ನಾಯ್ಕ ಹೆಸರಿಗಷ್ಟೇ ಸಂಸದರಾಗಿದ್ದರೇ ಹೊರತು ಜಿಲ್ಲೆಯ ಎಲ್ಲಾ ವರ್ಗದ ನಾಯಕ ಎನಿಸಿಕೊಳ್ಳುವ ಕಾರ್ಯವೈಖರಿ ಆತನದಾಗಿರಲಿಲ್ಲ. ನಾಲ್ಕೂವರೆ ವರ್ಷ ಎಂಪಿಯಾಗಿದ್ದ ಮ್ಯಾಗಿ ನಾಯಕತ್ವ ಜೊಡುವ ಪ್ರಾಮಾಣಿಕ ಪ್ರಯತ್ನ-ಅಭಿವೃದ್ಧಿ ಕೆಲಸ ಮಾಡಿದ್ದರು. ಆದರೆ ದೇಶಪಾಂಡೆ ಬನದ ದ್ವೇಷಾಸೂಯೆಗೆ ಆಕೆ ಬಲಿಯಾಗಿ ಹೋದರು.
ಬುರ್ನಾಸ್ ಬಾಯಿ-ಭಾವನೆ-ಭಂಗಿಗಳ ಅನಂತ್ಮಾಣಿ ಯಾನೆ ಅನಂತಕುಮಾರ್ ಹೆಗಡೆ ಕಟ್ಟರ್ ಹಿಂದೂತ್ವದ ಸಂಸದ. ಐದು ಬಾರಿ ಗೆದ್ದಿರುವ ಈತ ಮೂರು ಬಿಲ್ಲಿ ಕೆಲಸ ಜಿಲ್ಲೆಗೆ ಮಾಡಿಲ್ಲ. ಮಜಾ ಎಂದರೆ, ಬಾಯಿ ತೆರೆದರೆ ಹಿಂದೂತ್ವದ ವೇದಾಂತ ಹೇಳುವ ಈ ಮಾಣಿಗೆ ಜಿಲ್ಲೆಯ ಹಿಂದೂಗಳಿಗೆ ನಿವ್ರ್ಯಾಜ್ಯ ನಾಯಕತ್ವ ಕೊಡಲಾಗಿಲ್ಲ. ನಾಯಕತ್ವಕ್ಕೆ ಬೇಕಾದ ಪ್ರಬುದ್ಧತೆ, ದೂರದೃಷ್ಟಿ ಇಲ್ಲದ ಈ ಸಂಘಪರಿಪಾರದ ವಾರಾನ್ನದ ಹುಡುಗ ಇವತ್ತು ಕೋಟಿಗೆ ತೂಗುವುದು ಇಂಡಿಯಾದ ಸಂವಿಧಾನದ ಪವಾಡ!! ಗ್ರಾಪಂ ಮೆಂಬರಿಕೆ ಯೋಗ್ಯತೆಯೂ ಇಲ್ಲದ ಅನಂತ್ಮಾಣಿ ಕೇಂದ್ರ ಮಂತ್ರಿ ಎಂಬುದೇ ಜನತಂತ್ರದ ವಿಕಟ ವ್ಯಂಗ್ಯ. ಜನರಿಗೆ ಸದಾ ನಾಟ್‍ರೀಚಬಲ್ ಆಗಿರುವ ಈತ ಐದು ಬಾರಿ ಎಂಪಿಯಾಗಿರುವುದು ಸಂದರ್ಭದ ಪಿತೂರಿಯಿಂದಲೇ ಹೊರತು ಹಿಂದೂತ್ವ ತಾಕತ್ತಿನಿಂದಲ್ಲ!
ಕಳೆದ ಮೂರುವರೆ ದಶಕದಿಂದ ಯಾವ ಪಕ್ಷದ ಸರ್ಕಾರವಿದ್ದರೂ ತಾನೂ ಸಂಪುಟ ದರ್ಜೆ ಮಂತ್ರಿಯೋ, ವಿರೋಧ ಪಕ್ಷದ ನಾಯಕನೋ, ಕೆಪಿಸಿಸಿ ಅಧ್ಯಕ್ಷನೋ ಆಗಿ ಆಯಕಟ್ಟೆ ಸ್ಥಾನದಲ್ಲಿದ್ದು ಆತ್ಮರಕ್ಷಣಾತ್ಮಕ ರಾಜಕಾರಣ ಮಾಡುವ ಆರ್.ವಿ.ದೇಶಪಾಂಡೆ ಉತ್ತರ ಕನ್ನಡದ ಉಸ್ತುವಾರಿ ವಹಿಸಿಕೊಂಡವ. ನಾಚಿಕೆಗೇಡಿನ ಸಂಗತಿ ಎಂದರೆ ಈ 35 ವರ್ಷದ ಉಸ್ತುವಾರಿ ರಾಜಕಾರಣ ಬಳಸಿಕೊಂಡು ಜಿಲ್ಲೆಯ ಪ್ರಶ್ನಾತೀತ ನಾಯಕನಾಗಲು ಆತನಿಂದ ಸಾಧ್ಯವಾಗಲೇ ಇಲ್ಲ! ಅಧಿಕಾರ ಇರುವಾಗಷ್ಟೇ ಆತನ ವರ್ಚಸ್ಸು. ಈ ಮುದಿ ವಯಸ್ಸಿನಲ್ಲಿ ದೇಶಪಾಂಡೆ ಮಗ ಪ್ರಶಾಂತ್‍ನನ್ನು ಲೋಕಸಭೆಗೆ ಕಳಿಸುವ ಗಡಿಬಿಡಿಗೆ ಬಿದ್ದಿದ್ದಾರೆ. ಕಳೆದ ಬಾರಿಯೂ ಲೋಕಸಭೆ ಚುನಾವಣಾ ಅಖಾಡಕ್ಕೆ ಮಗನನ್ನು ಇಳಿಸಿದ್ದ ದೇಶಪಾಂಡೆಗೆ ಆತನ ಸುತ್ತಲಿದ್ದವರೇ ಮೋಸ ಮಾಡಿದ್ದರು. ಈಗಾತ ಮತ್ತೆ ಪಕ್ಷದ ಪ್ರಭಾವಿಗಳ ಜತೆ ಅನೈತಿಕ ಹೊಂದಾಣಿಕೆ ಮಾಡಿಕೊಂಡು “ಆಟ” ನಡೆಸಿದ್ದಾರೆ.
ದೇಶಪಾಂಡೆಯ ಅಡ್ಜೆಸ್ಟ್‍ಮೆಂಟ್ ಪಾಲಿ’ಟಿಕ್ಸ್’ನಿಂದಾಗಿಯೇ ಶಿರಸಿಯಲ್ಲಿ ಗೆಲ್ಲುವ ಸಾಧ್ಯತೆಯಿದ್ದ ಕಾಂಗ್ರೆಸ್‍ನ ಭೀಮಣ್ಣ ನಾಯ್ಕ ಸೋಲುವಂತಾಯಿತು. ಬಹುಕಾಲದ ಬಿಜೆಪಿ ಮಿತ್ರ ಕಾಗೇರಿ ಗೆಲುವಿಗೆ ದೇಶಪಾಂಡೆ ಒಳಗೊಳಗೇ ಕಸರತ್ತು ಮಾಡಿದ್ದರು. ಅತ್ತ ಕಾರವಾರ, ಭಟ್ಕಳದಲ್ಲಿ ಬಿಜೆಪಿ ಕೇಂದ್ರ ಮಂತ್ರಿ ಅನಂತ್ಮಾಣಿ ಜತೆ ಒಪ್ಪಂದ ಮಾಡಿಕೊಂಡು ಮಂಕಾಳು ವೈದ್ಯ ಸತೀಶ್ ಸೈಲ್ ಗೆಲ್ಲದಂತೆ ನೋಡಿಕೊಂಡಿದ್ದಾರೆ. ಯಲ್ಲಾಪುರದಲ್ಲಿ ಸ್ವಪಕ್ಷದ ಶಿವರಾಮು ಹೆಬ್ಬಾರ್ ಸೋಲಿಸಲು ದೇಶಪಾಂಡೆ ಮಾಡಿದ ಪ್ರಯತ್ನ ಕೈಗೂಡದಂತೆ ಹವ್ಯಕರ ಸ್ವರ್ಣವಲ್ಲ್ಲಿ ಸ್ವಾಮಿ ನೋಡಿಕೊಂಡರು. ಸ್ವಾಮಿಯ ಜನಿವಾರ ಮಂತ್ರದಿಂದ ಹೆಬ್ಬಾರ್ ಬಚಾವಾಗಿದ್ದಾರೆ. ದೇಶಪಾಂಡೆಯ ಕಂತ್ರಿತಂತ್ರಗಳಿಂದ ರೋಸತ್ತುಹೋಗಿರುವ ಮ್ಯಾಗಿ ಆತನಿಗೆ ಕುಮ್ಮಿಯ ಸಮ್ಮಿಶ್ರದಲ್ಲಿ ಮಂತ್ರಿಯಾಗದಂತೆ ಮಾಡುವ ಹಠಕ್ಕೆ ಬಿದ್ದಿದ್ದರು. ನೇರ ದೇವೇಗೌಡ ಮನೆಗೆ ದೌಡಾಯಿಸಿದ್ದ ಮ್ಯಾಗಿಯಜ್ಜಿ ವೈರಿ ದೇಶಪಾಂಡೆ ಹಣಿಯಲು ತರಹೇವಾರಿ ಟ್ರಿಕ್ಸು ಮಾಡಿದ್ದರು.
ದೇಶಪಾಂಡೆ ಮಂತ್ರಿಯಾದರೆ ಮತ್ತೆ ತನ್ನ ಮಗನಿಗೆ ಕೆನರಾದ ಕಾಂಗ್ರೆಸ್ ಎಂಪಿ ಟಿಕೆಟ್ ತಪ್ಪಿಸುತ್ತಾನೆಂಬ ಭಯ ಮ್ಯಾಗಿಗೆ. ದೇಶಪಾಂಡೆಯ ದೂ(ದು)ರಾಲೋಚನೆಯೇ ಬೇರೆ. ಇಂದಲ್ಲ ನಾಳೆ ತನ್ನ ಮಗ ಕೆನರಾದ ಎಂಪಿಯಾಗಲೇಬೇಕೆಂಬ ದೊಡ್ಡ ಆಸೆ ಇಟ್ಟುಕೊಂಡಿರುವ ದೇಶಪಾಂಡೆ ಬಿಜೆಪಿ ಕೇಂದ್ರ ಮಂತ್ರಿ ಅನಂತ್ಮಾಣಿ ಜತೆ ಸೇರಿ ಹಾಲಕ್ಕಿ ಒಕ್ಕಲಿಗರು ಪರಿಶಿಷ್ಟ ಪಂಗಡ(ಎಸ್.ಟಿ)ಕ್ಕೆ ಸೇರದಂತೆ ಕರಾಮತ್ತು ಮಾಡುತ್ತಿದ್ದಾರೆ. ಇಬ್ಬರಿಗೂ ಇರುವ ಅಸ್ತಿತ್ವದ ಪ್ರಶ್ನೆ ಕೆನರಾದಲ್ಲಿ ಸುಮಾರು 4 ಲಕ್ಷದಷ್ಟಿರುವ ಹಾಲಕ್ಕಿ ಒಕ್ಕಲಿಗರು ಎಸ್‍ಟಿ ಮೀಸಲಾತಿ ಪಡೆದರೆ ಮುಂದೆ ಕೆನರಾ ಎಸ್‍ಟಿ ಮೀಸಲಾತಿ ಕ್ಷೇತ್ರವಾಗುತ್ತದೆಂಬ ಆತಂಕ ದೇಶಪಾಂಡೆ ಮತ್ತು ಅನಂತ್ಮಾಣಿಗೆ ನಿದ್ದೆಗೆಡಿಸುತ್ತಿದೆ. ಹಾಲಕ್ಕಿಗಳ ಜತೆ ಬುಡಕಟ್ಟು ಸಮುದಾಯದ ಕುಣಬಿ, ಮರಾಠಿಗಳು ಸೇರಿದರೆ ಕೆನರಾ ಸಾಮಾನ್ಯ ಕ್ಷೇತ್ರವಾಗಿರಲು ಸಾಧ್ಯವೇ ಇಲ್ಲ. ಹೀಗಾಗಿ ಮೈಸೂರಿನ ಬುಡಕಟ್ಟು ಸಂಶೋಧನಾ ಕೇಂದ್ರದ ಬಸನಗೌಡನ ಮೂಲಕ ಕಿತಾಪತಿ ಮಾಡಿಸುತ್ತಿರುವ ದೇಶಪಾಂಡೆ ಹಾಲಕ್ಕಿಗಳು ಎಸ್‍ಟಿ ಆಗದಂತೆ ಮಸಲತ್ತು ಮಾಡುತ್ತಿದ್ದಾರೆ. ಮುಗ್ಧ ಹಾಲಕ್ಕಿಗಳಿಗೆ ತನ್ನ ವಿಕೃತಿ ಗೊತ್ತಾಗದಂತೆ ಜಾಗರೂಕತೆ ವಹಿಸುವ ದೇಶಪಾಂಡೆ, ಹಾಲಕ್ಕಿ ಮುಖಂಡರ ನಿಯೋಗ ದಿಲ್ಲಿಗೆ ಕರೆದೊಯ್ದು ಕೇಂದ್ರ ಹಿಂದುಳಿದ ವರ್ಗದ ಇಲಾಖೆಯ ಮಂತ್ರಿ ಭೇಟಿ ಮಾಡಿಸಿ ಪಾಪದ ಹಾಲಕ್ಕಿ ಒಕ್ಕಲಿಗರಿಗೆ ದೇಶಪಾಂಡೆ-ಅನಂತ್ಮಾಣಿ ಹೊಂದಾಣಿಕೆ ರಾಜಕಾರಣದ ವಂಚನೆ ಮೋಸ ಮಾಡುತ್ತಿದ್ದಾರೆ.
ದೇಶಪಾಂಡೆಯದು ದುಡ್ಡಿನ ಅಡ್ಡದಾರಿಯ ನಾಯಕತ್ವವಾದರೆ, ಅನಂತ್ಮಾಣಿಯದು ಧರ್ಮೋನ್ಮಾದದ “ದಂಡ” ‘ನಾಯಕತ್ವ’. ಅಧಿಕಾರ-ಹಣ-ಧರ್ಮದಿಂದ ನೇತಾರನಾಗುವೆನೆನ್ನುವುದೇ ಮೂರ್ಖತನ! ಪಕ್ಷ-ಪಂಗಡ ಬಿಟ್ಟು ಯೋಚಿಸುವ ಜಾತಿ-ಧರ್ಮ ಮೀರಿ ನಿಲ್ಲುವ, ಜಿಲ್ಲೆಯ ಭೌಗೋಳಿಕ, ಸಾಮಾಜಿಕ, ಆರ್ಥಿಕ ಪರಿಕಲ್ಪನೆಯುಳ್ಳ, ದ್ವೇಷ ರಾಜಕಾರಣ ಮಾಡದೇ ಎಲ್ಲರನ್ನೂ ತೂಗಿಸಿಕೊಂಡು ಹೋಗಬಲ್ಲ ಸಮಚಿತ್ತದ ಜನನಾಯಕನಿಗಾಗಿ ಉತ್ತರ ಕನ್ನಡ ಕಾಯುತ್ತಿದೆ. ಈ ಬಾರಿಯ ಪಾರ್ಲಿಮೆಂಟ್ ಇಲೆಕ್ಷನ್‍ನ್ನಲ್ಲಿ ಅಂಥದೊಂದು ಪವಾಡ ಆದೀತಾ?

– ಶುದ್ದೋಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...