Homeಅಂಕಣಗಳುಮೋದಿ ಹತ್ಯೆಯ ಸಂಚು ಎಂಬ ಚಿಂದಿ ಕಾಗದ

ಮೋದಿ ಹತ್ಯೆಯ ಸಂಚು ಎಂಬ ಚಿಂದಿ ಕಾಗದ

- Advertisement -
- Advertisement -

ನಕ್ಸಲ್ ಗುಂಪಿನಿಂದ ಮೊದಿ ಹತ್ಯೆಗೆ ಸಂಚು ಎಂಬ ಸ್ಫೋಟಕ ಸುದ್ದಿ ಪುಣೆಯ ಪೊಲೀಸರಿಂದ ಪ್ರಕಟವಾದ ದಿನದಿಂದ ಈ ಪ್ರಕರಣದ ಬಗ್ಗೆ ವಿಶ್ಲೇಷಣೆ ನಡೆದಿದೆ. ದೇಶಾದ್ಯಂತ ಸಂಚಲನ ಉಂಟುಮಾಡುತ್ತೆ ಎಂದು ಭಾವಿಸಿದ್ದ ಪೊಲೀಸರಿಗೆ ಮತ್ತು ಭಾಜಪಕ್ಕೆ ತಜ್ಞರು ಈ ಪ್ರಕರಣದ ಎಳೆ ಎಳೆ ವಿಶ್ಲೇಷಣೆ ಮಾಡುತ್ತಿದ್ದಂತೆ ಇದೊಂದು ಮಹಾ ಮುಜುಗರದ ಸಂಗತಿಯಾಗುವ ಲಕ್ಷಣ ಇದೆ.
ಪ್ರಕರಣದ ತಿರುಳು ಇಷ್ಟು. ಜನವರಿ 1ರಂದು ಭೀಮಾ ಕೋರೇಗಾಂವ್‍ನಲ್ಲಿ 200 ಕ್ಕೂ ಮಿಕ್ಕಿ ದಲಿತ ಸಂಘಟನೆಗಳು ರ್ಯಾಲಿ ನಡೆಸಿದ ಸಂದರ್ಭದಲ್ಲಿ ಉಂಟಾದ ಹಿಂಸಾಚಾರ ದೇಶದ ಗಮನ ಸೆಳೆದಿತ್ತು. ಈ ಪ್ರಕರಣದಲ್ಲಿ ಹಿಂದುತ್ವದ ಉಗ್ರ ಪ್ರತಿಪಾದಕರಾದ ಮನೋಹರ್ ಭಿಡೆ ಮತ್ತು ಮಿಲಿಂದ ಏಕ್ಬೊಟೆಯವರ ಕೈವಾಡ ಇದ್ದದ್ದು ಪ್ರಚುರವಾಗಿತ್ತು.. ಏಕ್ಬೊಟೆಯ ಬಂಧನವಾದರೂ ಇನ್ನೊಬ್ಬ ಪೇಶ್ವಾಯೀ ಮನಃಸ್ಥಿತಿಯ ಮನೋಹರ್ ಭಿಡೆ ಬಂಧನ ಆಗಲೇ ಇಲ್ಲ. ಭಾಜಪ ಸರ್ಕಾರ ಇರುವ ಮಹಾರಾಷ್ಟ್ರದಲ್ಲಿ ಈ ಬಂಧನವಾಗುವುದು ಶಕ್ಯವಿಲ್ಲ ಎಂಬುದು ಜನಜನಿತವಾಗಿತ್ತು.

ಆದರೆ ಏಕಾಏಕಿ ಮೊನ್ನೆ ಪೊಲೀಸರು ಈ ಹಿಂಸಾಚಾರದ ಪ್ರಕರಣದ ಹಿನ್ನೆಲೆಯಲ್ಲಿ ಐದು ಮಂದಿಯನ್ನು ನಕ್ಸಲ್ ಸಂಪರ್ಕ ಹೊಂದಿದವರು ಮತ್ತು ಮೋದಿ ಹತ್ಯೆಗೆ ಸಂಚು ಹೂಡಿದವರು ಎಂಬ ಆಪಾದನೆಯೊಂದಿಗೆ ಬಂಧಿಸಿದ್ದಾರೆ. ಅದೂ UಂPಂ ಎಂಬ ಕರಾಳ ಕಾಯಿದೆಯನ್ವಯ. ಇದು ಜಾಮೀನು ದೊರಕದ ಉಗ್ರಗಾಮೀ ಚಟುವಟಿಕೆಗಳ ಪ್ರತಿಬಂಧಕ ಕಾಯಿದೆಯಷ್ಟೇ ಘೋರ.
ಈ ಐವರು ಯಾರು?
ನಾಗಪುರದ ಮಾನವಹಕ್ಕು ವಕೀಲರಾದ ನಾಗೇಂದ್ರ ಸುರೇಂದ್ರ ಗಾಡ್ಲಿಂಗ್, ಹಿರಿಯ ದಲಿತ ಹಕ್ಕು ಹೋರಾಟಗಾರ ಸುಧೀರ್ ಧವಾಲೆ, ಖಿISS ಪದವೀಧರರಾದ ಮಹೇಶ್ ರಾವುತ್, ದೆಹಲಿಯ ಸಾಮಾಜಿಕ ಕಾರ್ಯಕರ್ತ ರೊನಾ ವಿಲ್ಸನ್ ಮತ್ತು ನಾಗಪುರ ವಿವಿಯ ಇಂಗ್ಲಿಷ್ ಪ್ರೊಫೆಸರ್ ಶೋಮಾಸೆನ್.
ಈ ಐವರೂ ಮಾನವ ಹಕ್ಕು ಉಲ್ಲಂಘನೆ ಮತ್ತಿತರ ಸಂದರ್ಭಗಳಲ್ಲಿ ಸತತವಾಗಿ ದನಿ ಎತ್ತಿದವರು. ಇವರನ್ನು ಬಂಧಿಸಿರುವ ಪೊಲೀಸರು, ಈ ಐದು ಮಂದಿಗೆ ನಿಷೇಧಿತ ಮಾವೋವಾದಿಗಳೊಂದಿಗೆ ಸಂಪರ್ಕವಿತ್ತು; ಭೀಮಾ ಕೋರೆಗಾಂವ್ ಪ್ರಕರಣದ ವಿಚಾರಣೆ ನಡೆಸುವಾಗ ಈ ಸಂಪರ್ಕದ ವಿವರ ದೊರಕಿತು ಎಂದಿದ್ದಾರೆ. ಇವರು ರಾಜೀವ್ ಗಾಂಧಿ ಹತ್ಯೆಯ ರೀತಿಯ ಹತ್ಯೆಯ ಸಂಚು ಮಾಡಿದ್ದರು ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲಾ ಪವಾರ್ ಆರೋಪಿಸಿದ್ದಾರೆ.
ಇಷ್ಟು ಭೀಕರ ಸಂಚಿಗೆ ಸಾಕ್ಷ್ಯಾಧಾರಗಳೇನು ಎಂದು ಕೇಳಿದರೆ ಪೊಲೀಸರು ಒಂದು ಸುದೀರ್ಘ ಪತ್ರವನ್ನು ಉಲ್ಲೇಖಿಸಿದ್ದಾರೆ. ಪೊಲೀಸರು ಹಾಸ್ಯಾಸ್ಪದವಾಗಿರುವುದು ಈ ಪುರಾವೆಯ ಕಾರಣಕ್ಕೇ. ಪೊಲೀಸರ ಪ್ರಕಾರ ದೆಹಲಿಯಲ್ಲಿ ಅವರಿಗೆ ಒಂದು ಪುಟದ ಇಡೀ ಸಂಚು; ಹಣಕಾಸಿನ ಪೂರೈಕೆಯ ವಿವರ ಇರುವ ಪತ್ರ ದೊರಕಿದೆ. ಈ ಪತ್ರದ ದಿನಾಂಕ 2017ರದ್ದು. ಆ ಪತ್ರದಲ್ಲಿ ಸವಿಸ್ತಾರವಾಗಿ ಸಂಚಿನ ವಿವರ, ಯಾರ್ಯಾರು ಇದರಲ್ಲಿ ಇದ್ದಾರೆ, ಯಾರ್ಯಾರನ್ನು ಸಂಪರ್ಕಿಸಬೇಕು ಎಂದು ಬರೆಯಲಾಗಿದೆ.
ಮಾವೋವಾದಿ ಸಂಘಟನೆಗಳ ಕಾರ್ಯಚರಣೆ ಮತ್ತು ಸಂವಹನ ವಿಧಾನ ಗೊತ್ತಿರುವ ತಜ್ಞರು ಪೊಲೀಸರ ಈ ಪತ್ರ ಪುರಾವೆ ನೋಡಿ ನಗುತ್ತಿದ್ದಾರೆ. ನಿಷೇಧಿತ ಯಾವ ಗುಂಪುಗಳೂ ನೇರಾನೇರಾ ಪುಟಗಟ್ಟಲೆ ವಿವರಗಳನ್ನು ಬರೆಯುವುದಿಲ್ಲ. ಅಷ್ಟೇಕೆ, ತಮ್ಮ ಕೇಡರ್ ಬಿಟ್ಟು ಉಳಿದ ನಾಗರಿಕ ಸಮಾಜದ ಹೋರಾಟಗಾರರೊಂದಿಗೆ ವ್ಯವಹರಿಸುವಾಗ ಅಗತ್ಯಕ್ಕಿಂತ ಹೆಚ್ಚು ಸುಳಿವು ನೀಡುವುದೇ ಇಲ್ಲ. ಅಷ್ಟೇ ಅಲ್ಲ, ಯಾವುದೇ ಪತ್ರ/ ಲಿಖಿತ ದಾಖಲೆ ಇಡುವುದಿಲ್ಲ. ವರ್ಷದ ಮೇಲೆ ಪೊಲೀಸರ ಕೈಗೆ ಸಿಗುವ ಹಾಗೆ ಇಡುವ ಮೇಧಾವಿತನದ ಬಗ್ಗೆ ಪೊಲೀಸರೇ ಹೇಳಬೇಕು.
ಆದರೆ ಈ ಕಾನೂನು ಹೇಗಿದೆಯೆಂದರೆ ಪೊಲೀಸರ ಎಬಡುತನ ಕಣ್ಣಿಗಿಡಿದರೂ ಅದು ಸಿದ್ಧವಾಗಲೂ ವರ್ಷಗÀಟ್ಟಲೆಬೇಕು. ಕೋರ್ಟುಗಳ ಏಣಿ ಹತ್ತಿ ಇಳಿಯಬೇಕು.
ಈಗಾಗಲೇ ದೇಶದ ಪ್ರಜ್ಞಾವಂತ ವಕೀಲರ ದಂಡು ಈ ಐವರ ಪರವಾಗಿ ಅಖಾಡಾಕ್ಕೆ ಇಳಿದಿದೆ. ಈ ಐವರ ಬಗ್ಗೆ ಮಾಧ್ಯಮಗಳಲ್ಲಿ ಮೋದಿ ಭಕ್ತವಲಯಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಅವ್ಯಾಹತ ಅಪಪ್ರಚಾರ ನಡೆದಿದೆ ಇಷ್ಟು ದಿನ ಅವರ ಮಿತಿಯಲ್ಲಿ ಸ್ಥಳೀಯವಾಗಿ ಅಷ್ಟೇ ಗೊತ್ತಿದ್ದ ಈ ಐವರ ಬಗ್ಗೆ ದೇಶ ಕುತೂಹಲದಲ್ಲಿ ನೋಡುತ್ತಿದೆ.
ಸುಧೀರ ಧವಾಲೆ: ನಾಗಪುರದ ಇಂದೊರಾದ ಸ್ಲಮ್ ಒಂದರ ದಲಿತ ಕುಟುಂಬದಲ್ಲಿ ಜನಿಸಿದ 54ರ ಹರಯದ ಧವಾಲೆ ಚಳವಳಿಯ ಕಾಲಾಳು ಎಂದೇ ಗುರುತಿಸಿಕೊಂಡವರು. ನಾಯಕತ್ವದ ಕೌಶಲ್ಯಕ್ಕಿಂತ ಹೆಚ್ಚಾಗಿ ಸಂಘಟಕನಾಗಿ ಗಮನ ಸೆಳೆದಿದ್ದೇ ಜಾಸ್ತಿ. ಮಹಾರಾಷ್ಟ್ರದ ಯಾವುದೇ ಪ್ರತಿಭಟನೆ ಮತ್ತು ಸತ್ಯ ಶೋಧನಾ ಕೆಲಸಗಳಲ್ಲಿ ಧವಾಲೆ ಬಹುಮುಖ್ಯ ಹೆಸರು. 2002ರ ಗುಜರಾತ್ ಹಿಂಸಾಚಾರದ ಹಿನ್ನೆಲೆಯಲ್ಲಿ ಧವಾಲೆ ವಿದ್ರೋಹಿ ಎಂಬ ದ್ವೈಮಾಸಿಕ ಪತ್ರಿಕೆ ಶುರುಮಾಡಿದ್ದರು; ಜೊತೆಗೇ ರಮಾಬಾಯಿನಗರ್-ಖೈರ್ಲಾಂಜಿ ಹತ್ಯಾಕಾಂಡ ವಿರೋಧಿ ಸಂಘರ್ಷ ಸಮಿತಿ ಎಂಬ ಸಂಘಟನೆಯನ್ನೂ ಆರಂಭಿಸಿದ್ದರು. ಈ ಸಂಘಟನೆ ಹೆಚ್ಚು ಕಾಲ ಉಳಿಯಲಿಲ್ಲ. ಆದರೆ ತದನಂತರ ರಿಪಬ್ಲಿಕನ್ ಪ್ಯಾಂಥರ್ಸ್ ಜಾತಿಯ ಅಂತಾಚಿ ಚಲವಳ್ (ಜಾತಿ ವಿನಾಶ ಚಳವಳಿ) ಎಂಬ ಸಂಘಟನೆಯಲ್ಲಿ ಧವಾಲೆ ಕ್ರಿಯಾಶೀಲರಾದರು. ಇದು ಆರಂಭವಾಗಿದ್ದೇ ಬಾಬಾ ಸಾಹೇಬರ ಚೈತ್ಯಭೂಮಿಯಲ್ಲಿ.
ಅವರ ಗೆಳೆಯರ ಪ್ರಕಾರ ಹದಿಹರೆಯದಲ್ಲೇ ರಾಜಕೀಯ ಪ್ರಜ್ಞೆ ರೂಪಿಸಿಕೊಂಡಿದ್ದ ಧವಾಲೆ ಆರಂಭದಲ್ಲಿ ಸಿಪಿಐ ( ಎಂ-ಎಲ್ ) ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದರು. ಅದು 1994ರಲ್ಲಿ ನಿಷೇಧಕ್ಕೊಳಗಾದಾಗ, ಉದ್ಯೋಗ ಹುಡುಕಿಕೊಂಡು ಧವಾಲೆ ನಾಗಪುರಕ್ಕೆ ಬಂದರು. ಅವರ ಪತ್ರಿಕೆ ವಿದ್ರೋಹಿ ಮೊದಲು ನಾಲ್ಕುಪುಟಗಳ ಪುಟ್ಟ ಪತ್ರಿಕೆಯಾಗಿದ್ದುದು ಕ್ರಮೇಣ ಗಮನಾರ್ಹ ಪಾಕ್ಷಿಕವಾಗಿ ಬೆಳೆಯಿತು. ಈ ಹೋರಾಟದ ಮನೋಭಾವದಿಂದಾಗಿ ಪೊಲೀಸರ ಜೊತೆಯ ತಿಕ್ಕಾಟ ಎಂದಿನಿಂದಲೂ ಇತ್ತು. 2011ರಲ್ಲಿ ನಕ್ಸಲ್ ಸಂಪರ್ಕದ ಆಪಾದನೆ ಹೊರಿಸಿ ಪೊಲೀಸರು ಧವಾಲೆಯವರನ್ನು ಜೈಲಿಗೆ ತಳ್ಳಿದ್ದರು. ಪೊಲೀಸರ ಅಸಂಬದ್ಧ ಸಾಕ್ಷ್ಯಾಧಾರಗಳಿಂದಾಗಿ ಬಿಡುಗಡೆಯಾದರೂ 40 ತಿಂಗಳು ಜೈಲು ಅನುಭವಿಸಿದ್ದರು.
200 ದಲಿತ ಸಂಘಟನೆಗಳ ಸಂಘಟಿತ ಎಲ್ಗಾರ್ ಪರಿಷತ್ ಧವಾಲೆಯವರ ಕೂಸು. ಈ ಸಮಾವೇಶದ ಯಶಸ್ಸೇ ಧವಾಲೆ ಬಂಧನಕ್ಕೆ ಕಾರಣ ಎಂದು ಅವರ ಸಹವರ್ತಿಗಳು ಅಭಿಪ್ರಾಯಪಡುತ್ತಾರೆ.
ಸುರೇಂದ್ರ ಗಾಡ್ಲಿಂಗ್: ಧವಾಲೆಯವರ ನೆರೆಹೊರೆಯಲ್ಲೇ ಜನಿಸಿದ ಗಾಡ್ಲಿಂಗ್ ನಾಗಪುರದ ದಲಿತ ಕೇರಿಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಗಳನ್ನೂ ರಾಜಕೀಯ ಪ್ರಜ್ಞೆ ಬೆಳೆಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುವ ಮೂಲಕ ಮನೆಮಾತಾದವರು. ಹೋರಾಟದ ಹಾದಿಯಲ್ಲಿ ಕಾನೂನು ಪದವಿಯನ್ನೂ ಗಳಿಸಿದ ಗಾಡ್ಲಿಂಗ್, ಎಲ್ಲಾ ರೀತಿಯ ದಬ್ಬಾಳಿಕೆಗೆ ಒಳಗಾಗಿ ಕೇಸು ಮೈಮೇಲೆ ಎಳಕೊಂಡವರ ಪರವಾಗಿ ಕಾನೂನು ಹೋರಾಟ ನಡೆಸುವ ವಕೀಲರಾಗಿ ಬೆಳೆದರು. ಬಂದನಕ್ಕೊಳಗಾಗುವಾಗ ಅವರು ಜಿ.ಎನ್ ಸಾಯಿಬಾಬಾ ಅವರ ಪ್ರಕರಣದಲ್ಲಿ ವಾದಿಸುತ್ತಿದ್ದರು. ಈ ವರ್ಷ ಅವರ ಮನೆÀ ಮೇಲೆ ಪೊಲೀಸು ಧಾಳಿ ನಡೆದಾಗ ಅವರ ಪತ್ನಿಯಲ್ಲಿ ಕೇವಲ ಐದು ಸಾವಿರ ರೂಪಾಯಿ ಇದ್ದದ್ದು ಕಂಡು ಪೊಲೀಸರೇ ಚಕಿತಗೊಂಡಿದ್ದರು. ನೂರಾರು ಕೇಸುಗಳನ್ನು ವಾದಿಸುವಾಗಲೂ ಗಾಡ್ಲಿಂಗ್ ಕಾಸೇನು ಮಾಡಿಕೊಂಡಿರಲಿಲ್ಲ.
ಈಗ ಅವರ ಬಂಧನದ ವಿರುದ್ಧ ಕಾನೂನು ಹೋರಾಟ ಸಂಘಟಿಸಲು ಮಾತ್ರ ಅಲ್ಲ; ಅವರು ಪ್ರತಿನಿಧಿಸುತ್ತಿದ್ದ ಪ್ರಕರಣಗಳಿಗೆ ಬೇರೆ ವಕೀಲರನ್ನು ಹುಡುಕುವುದೂ ಅವರ ಗೆಳೆಯರ ತುರ್ತಿನ ಕೆಲಸವಾಗಿ ಬಿಟ್ಟಿದೆ.
ಮಹೇಶ್ ರಾವುತ್: ಮಹಾರಾಷ್ಟ್ರದ ವಿದರ್ಭಾದ ಲಖಪುರ್ ಹಳ್ಳಿಯಲ್ಲಿ ಜನಿಸಿದ 30ರ ಹರೆಯದ ರಾವುತ್ ಶಾಲಾ ದಿನಗಳಲ್ಲೇ ತಂದೆಯನ್ನು ಕಳೆದುಕೊಂಡು ನೆಂಟರ ಮನೆಯಲ್ಲಿ ಹಾಗೂಹೀಗೂ ವಿದ್ಯಾಭ್ಯಾಸ ಮುಂದುವರಿಸಿದರು. 2009ರಲ್ಲಿ ಪ್ರತಿಷ್ಠಿತ ಖಿISS ಸಂಸ್ಥೆಯಲ್ಲಿ ಸಮಾಜ ಕಾರ್ಯ ಅಧ್ಯಯನಕ್ಕೆ ಸೇರಿದ ರಾವುತ್ ಪ್ರಧಾನ ಮಂತ್ರಿ ಗ್ರಾಮೀಣಾಭಿವೃದ್ಧಿ ಫೆಲೋಶಿಪ್ ಪಡೆದ ಅತ್ಯಂತ ಕಿರಿಯ ಪ್ರತಿಭೆ. ಈ ಅವಧಿಯಲ್ಲೇ ಅವರ ರಾಜಕೀಯ ಪ್ರಜ್ಞೆ ವಿಕಾಸವಾದದ್ದು. ಈ ಫೆಲೋಶಿಪ್‍ನ ಅವಧಿ ಮುಗಿದದ್ದೇ ರಾವುತ್ ಗಡಚಿರೋಲಿಯ ಆದಿವಾಸಿಗಳ ಜೊತೆ ಕೆಲಸ ಮಾಡಿದರು. ಅಲ್ಲಿ ಇಲ್ಲಿ ಉಪನ್ಯಾಸ ನೀಡಿ ಅದರಲ್ಲಿ ಬಂದ ಸಂಭಾವನೆಯಲ್ಲಿ ಕೆಲಸ ಮುಂದುವರಿಸುತ್ತಿದ್ದರು. ಸುರಜ್‍ಗರ್ ಗಣಿಗಾರಿಕೆಯ ವಿರುದ್ಧ ಆದಿವಾಸಿಗಳನ್ನು ಸಂಘಟಿಸಿ ಹೋರಾಡಿದ ರಾವುತ್, ‘ವಿಸ್ತಾಪನ್ ವಿರೋಧಿ ಜನ ವಿಕಾಸ್’ ಆಂದೋಲನದ ಸಂಚಾಲಕರಾಗಿ ತೆಂಡು ಎಲೆಗಳ ವಹಿವಾಟಿನ ದಲ್ಲಾಳಿಗಳನ್ನು ದೂರವಿಟ್ಟು ನೇರ ಮಾರುಕಟ್ಟೆಯಲ್ಲಿ ಮಾರುವಂತೆ ಆದಿವಾಸಿಗಳನ್ನು ಸಂಘಟಿಸಿದರು.
ಯಥಾಪ್ರಕಾರ ಈ ಹೋರಾಟಗಳಿಂದಾಗಿ ಹತ್ತು ಹಲವು ಕೇಸುಗಳನ್ನು ಪೊಲೀಸರು ಜಡಿದಿದ್ದರು. ಆದರೆ ಈ ಪ್ರಕರಣ ಮಾತ್ರಾ ಎಲ್ಲರನ್ನೂ ಆಘಾತಕ್ಕೀಡುಮಾಡಿದೆ. ಅಲ್ಸರೇಟಿವ್ ಕೊಲೈಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿರುವ ರಾವುತ್ ಕಳೆದ ಆರು ತಿಂಗಳಿಂದ ಚಿಕಿತ್ಸೆ ಪಡೆಯುತ್ತಾ ಮನೆಯಲ್ಲೇ ಸುಧಾರಿಸಿಕೊಳ್ಳುತ್ತಿದ್ದರು.
ರೊನಾ ವಿಲ್ಸನ್: 47ರ ಹರೆಯದ ವಿಲ್ಸನ್ ಕೇರಳದ ಕೊಲ್ಲಂ ಜಿಲ್ಲೆಯವರಾದರೂ ಕಳೆದ ಎರಡು ದಶಕಗಳಿಂದ ದೆಹಲಿಯಲ್ಲೇ ಕೆಲಸ ಮಾಡುತ್ತಿದ್ದವರು. ಜೆ. ಎನ್. ಯು. ನಲ್ಲಿ ಓದುತ್ತಿರುವಾಗಲೇ ಸಕ್ರಿಯ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ವಿಲ್ಸನ್, ರಾಜಕೀಯ ಬಂಧಿಗಳ ಬಿಡುಗಡೆಗಾಗಿರುವ ಸಮಿತಿಯ ಸಕ್ರಿಯ ಕಾರ್ಯಕರ್ತ. ದೇಶದಲ್ಲಿ ರಾಜಕೀಯ ಕಾರಣಗಳಿಗಾಗಿ ಬಂಧಿತರಾಗಿರುವವರ ಪ್ರಕರಣಗಳನ್ನು ಎತ್ತಿಕೊಂಡು ಹೋರಾಡುತ್ತಿರುವ ಈ ಸಮಿತಿಯ ಕೆಲಸ ಬಲು ಘನವಾದದ್ದು. ಮಹಾರಾಷ್ಟ್ರದ ಎಲ್ಗಾರ್ ಪರಿಷದ್ ಸಮಾವೇಶಕ್ಕೂ ವಿಲ್ಸನ್‍ಗೂ ಯಾವ ಸಂಬಂಧವೂ ಇಲ್ಲ. ಅಷ್ಟೇಕೆ ಕಳೆದ ಕೆಲವು ತಿಂಗಳುಗಳಿಂದ ಮತ್ತೆ ಅಧ್ಯಯನ / ಸಂಶೋಧನೆಗೆ ಮರಳಬೇಕೆಂದು ಬಯಸಿದ್ದ ವಿಲ್ಸನ್ ಲಂಡನ್ನಿನ ವಿವಿಯೊಂದಕ್ಕೆ ಸಂಶೋಧನಾ ವಿದ್ಯಾರ್ಥಿಯಾಗಿ ಸೇರುವ ಪ್ರಯತ್ನದಲ್ಲಿದ್ದರು.
ಶೋಮಾ ಸೆನ್: ನಾಗಪುರದ ವಿವಿಯ ಇಂಗ್ಲಿಷ್ ವಿಭಾಗದ ಪ್ರೊಫೆಸರ್ ಶೋಮಾ ಸೆನ್ ಮಾನವ ಹಕ್ಕು ವಿಚಾರದಲ್ಲಿ ಗಟ್ಟಿ ದನಿ ಎತ್ತುತ್ತಿದ್ದ ಆತ್ಮಸಾಕ್ಷಿಯ ಖನಿ. ಪಾಠ ಮಾಡುತ್ತಾ ಕೂರುವ ಬದಲು ಪಾಠದೊಂದಿಗೆ ಸಾಮಾಜಿಕ ಪ್ರಜ್ಞೆ; ಹೋರಾಟ ತುಂಬಿಕೊಂಡ ಧೀಮಂತೆ. ಎಲ್ಲಾ ಮಾನವ ಹಕ್ಕು ಉಲ್ಲಂಘನೆಯ ಸಂದರ್ಭಗಳಲ್ಲಿ ಕ್ರಿಯಾಶೀಲವಾಗಿದ್ದ ಶೋಮಾ ಸೆನ್, ಇನ್ನೀಗ ಅರುವತ್ತರ ಹುಟ್ಟು ಹಬ್ಬ ಆಚರಿಸಿಕೊಳ್ಳುವವರಿದ್ದರು. “ಇತ್ತೀಚೆಗೆ ನಮ್ಮ ಅಮ್ಮ ಸ್ವಲ್ಪ ಆರಾಮ ಬದುಕಿಗೆ ಹೊರಳಿಕೊಳ್ಳುವ ಹಂತದಲ್ಲಿದ್ದರು. ಈಗ ನೋಡಿ.. ಈ ಕೇಸು” ಎಂದು ಶೋಮಾ ಅವರ ಪುತ್ರಿ ಕೋಯೆಲ್ ಹೇಳುತ್ತಾರೆ.
ಇದು ಈ ಐವರ ಜಾತಕ.
ದಲಿತರ ಸಂಘಟಿತ ಹೋರಾಟವನ್ನು ಮುರಿಯುವ ಮಹಾರಾಷ್ಟ್ರ ಸರ್ಕಾರದ ಹುನ್ನಾರ ಈ ಪ್ರಕರಣದಲ್ಲಿ ಕಣ್ಣಿಗೆ ಗಿಡಿಯುತ್ತಿದೆ. ದಲಿತ ಸಮಾವೇಶದ ತದನಂತರದ ದಲಿತ ಅಸ್ಮಿತೆಯ ವಿಶ್ವಾಸಾರ್ಹತೆಯನ್ನು ಹಾಳುಮಾಡುವುದು ಸರ್ಕಾರದ ಉದ್ದೇಶ. ದಲಿತ ವಿರೋಧಿ ದುಷ್ಟರ ಕೈ ಬಲಪಡಿಸಲು ನಡೆಸಿದ ಹುನ್ನಾರ ಇದು; ಸಂಶಯವೇ ಬೇಡ. ಹಾಗೆಂದು ನೇರಾನೇರಾ ದಲಿತರನ್ನು ಎದುರು ಹಾಕಿಕೊಳ್ಳದೇ, ದಲಿತರಿಗೆ ನಕ್ಸಲ್ ಹಣೆಪಟ್ಟಿ ಕಟ್ಟಿ ಅವರೊಂದಿಗೆ ಹೋರಾಟದ ಸಂಗಾತಿಗಳಾಗಿ ಕ್ರಿಯಶೀಲರಾಗಿದ್ದವರನ್ನೂ ಪ್ರಕರಣದಲ್ಲಿ ಆರೋಪಿಗಳಾಗಿ ಖೆಡ್ಡಾಕ್ಕೆ ಬೀಳಿಸಿದರೆ ದಲಿತ ಹೋರಾಟ ಮುಗ್ಗುರಿಸುತ್ತೆ; ಅವರ ಪರ ಮಾತಾಡುವ ಇತರರ ಸ್ಥೈರ್ಯವೂ ಕುಸಿಯುತ್ತೆ ಎಂಬುದು ಈ ನಡೆಯ ಹುರುಳು.
ಇದರೊಂದಿಗೇ ಮೋದಿ ಕೊಲೆ ಸಂಚು ಎಂಬ ಬೊಂಬಡಿ ದೇಶಾದ್ಯಂತ ಸಂಚಲನ ಸೃಷ್ಟಿಸಿ ಅನುಕಂಪದ ಅಲೆ ಹುಟ್ಟಿ ಮತ್ತೆ ಮುಂದಿನ ಚುನಾವಣೆಗೆ ಅನುಕೂಲವಾದೀತು ಎಂಬ ಲೆಕ್ಕಾಚಾರ ಅಂಥಾ ಗುಟ್ಟೇನಲ್ಲ. ಆದರೆ ಯಾವ ಗಟ್ಟಿ ಪುರಾವೆಗಳನ್ನೂ ನೀಡದೇ ಪ್ರಕರಣ ದಾಖಲು ಮಾಡಿರುವ ಪೊಲೀಸರ ಎಡವಟ್ಟಿನಿಂದಾಗಿ ಪ್ರಾಯಶಃ ಮೋದಿ ಹೊಸ ಸಂಚಿನ ಕಥೆ ಕಟ್ಟಬೇಕೇನೋ.
ಆದರೆ ಪೋಲೀಸರ ಸಂಚಿಗೆ ಬಲಿಯಾಗಿರುವ ಈ ಹೋರಾಟಗಾರರ ಬಿಡುಗಡೆಯ ಯತ್ನ ಬಿನಾಯಕ್ ಸೆನ್ ಪ್ರಕರಣದಂತೆ ಸುದೀರ್ಘ ಆಗಲಿದೆ. ಪ್ರಭುತ್ವದ ಪರವಾಗಿ ಆಖಾಡಕ್ಕಿಳಿವ ಪೊಲೀಸ್ ವ್ಯವಸ್ಥೆಯನ್ನು ನಿಯಂತ್ರಿಸಲು ನಮ್ಮ ನ್ಯಾಯಾಂಗ ಅಷ್ಟೇನೂ ಸಶಕ್ತವಾಗಿಲ್ಲ. ಪ್ರಾಯಶಃ ನಾವು ಮುಂದಿನ ದಿನಗಳಲ್ಲಿ ಇಂಥಾ ಪೊಲೀಸ್ ಕಾರ್ಯಾಚರಣೆಗೆ ಅಂತ್ಯ ಹಾಡುವ ಕ್ಷಿಪ್ರ ನ್ಯಾಯಾಂಗ ಮಧ್ಯಪ್ರವೇಶದ ಬಗ್ಗೆ ಗಮನ ಸೆಳೆಯಬೇಕಾಗಿದೆ.

– ಕೆ.ಪಿ.ಸುರೇಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ದೇಶದ ಶ್ರೀಮಂತ ಉದ್ಯಮಿಗಳ ‘ಸಾಧನ’: ರಾಹುಲ್ ಗಾಂಧಿ

0
ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದ ಕೆಲವೇಕೆಲವು ಶ್ರೀಮಂತ ಉದ್ಯಮಿಗಳ ಸಾಧನ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದ ನೈಜ ಸಮಸ್ಯೆಗಳಿಂದ ಜನರನ್ನು ಬೇರೆಡೆಗೆ ಸೆಳೆಯುವುದು, ಭಾರತದ...