Homeಮುಖಪುಟಎಲ್ಲರನ್ನೂ ಅತಂತ್ರತೆಯಲ್ಲಿಟ್ಟಿರುವ ಉಪಚುನಾವಣೆಯಲ್ಲಿ ಏನಾಗಬಹುದು?

ಎಲ್ಲರನ್ನೂ ಅತಂತ್ರತೆಯಲ್ಲಿಟ್ಟಿರುವ ಉಪಚುನಾವಣೆಯಲ್ಲಿ ಏನಾಗಬಹುದು?

- Advertisement -
- Advertisement -

| ಸುನಿಲ್ ಶಿರಸಂಗಿ |

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮತದಾರರನ್ನು ಓಲೈಸಿಕೊಳ್ಳುವುದು ಅಷ್ಟು ಸುಲಭವಲ.್ಲ ಒಂದಡೆ ಅನರ್ಹರನ್ನು ಮಣಿಸಲು ಕಾಂಗ್ರೆಸ್ ತನ್ನ ಬತ್ತಳಿಕೆಯಲ್ಲಿನ ಎಲ್ಲ ತಂತ್ರಗಳನ್ನು ಬಳಸಿಕೊಳ್ಳುತಿದೆ. ಇನ್ನು ಈ ರಾಜೀನಾಮೆ ಪರ್ವದಲ್ಲಿ ತನ್ನ 3 ಶಾಸಕರನ್ನು ಕಳೆದುಕೊಂಡಿರುವ ಜೆಡಿಎಸ್ ಅವುಗಳನ್ನು ಗೆಲ್ಲಲು ಶತಪ್ರಯತ್ನ ಮಾಡುತ್ತದೆ. ಜೊತೆಗೆ ಇನ್ನು 2ರಿಂದ 3 ಕ್ಷೇತ್ರಗಳ ಸೋಲು ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದೆ.

ಅನರ್ಹ ಶಾಸಕರ ರಾಜಕೀಯ ಅತಂತ್ರ ಸ್ಥಿತಿಯ ನಡುವೆಯೇ ಅವರಿಂದಾಗಿಯೇ ಬಂದೆರಗಿರುವ 15 ಕ್ಷೇತ್ರಗಳ ಉಪಚುನಾವಣೆಯ ಪ್ರಕ್ರಿಯೆಗೆ ಚಾಲನೆ ದೊರತಿದೆ.

ಅನರ್ಹರಿಗೆ ಬಿಜೆಪಿ ಬಿಸಿತುಪ್ಪವಾದರೆ, ಬಿಜೆಪಿಗೆ ಅನರ್ಹರು ಬಿಸಿತುಪ್ಪವಾಗಿದ್ದಾರೆ. ನುಂಗುವ ಹಾಗಿಲ್ಲ, ಉಗುಳುವ ಮಾತೇ ಇಲ್ಲ. ಶಾಸಕರ ರಾಜೀನಾಮೆಯಿಂದಲೇ ಬಿ.ಎಸ್.ಯಡ್ಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಚನೆಯಾದದ್ದು ಅನ್ನುವುದರಲ್ಲಿ ಸಂದೇಹವಿಲ್ಲ. ಅದನ್ನು ಯಡ್ಡಿ ಪದೇ ಪದೇ ಬೇರೆ ಬೇರೆ ರೀತಿಯಲ್ಲಿ ಹೇಳಿಯೂ ಆಗಿದೆ.

ತಂತಿಯ ಮೇಲೆ ನಡೆಯುತ್ತಿರುವ ಅನರ್ಹ ಶಾಸಕರು ಒಂದು ಸಲ ಸುಪ್ರಿಂಕೋರ್ಟ್‍ನತ್ತ ಇನ್ನೊಂದು ಸಲ ಇಷ್ಟವಿಲ್ಲದೆ ಅಪ್ಪಿಕೊಳ್ಳಲು ಸಿದ್ದವಾಗಿರುವ ಬಿಜೆಪಿಯತ್ತ, ಮತ್ತೊಂದು ಸಲ ಕ್ಷೇತ್ರದ ಮತದಾರರತ್ತ ಪಿಳಿ ಪಿಳಿ ಕಣ್ಣು ಬಿಟ್ಟು ನೋಡುವಂತಾಗಿದೆ.

ಅನರ್ಹರಿಗಿರುವ ಮೊದಲನೆ ಆತಂಕ ಸುಪ್ರಿಂಕೋರ್ಟ್‍ನದ್ದು, ಬುಧವಾರ ಬರುವ ತೀರ್ಪು ವಿರುದ್ದ ಬಂದರೆ ಬಹಳಷ್ಟು ಅನರ್ಹರ ರಾಜಕೀಯ ಭವಿಷ್ಯವೇ ಮುಗಿದಂತೆ. ಇನ್ನು ತೀರ್ಪು ಇವರ ಪರವಾಗಿ ಬಂದರು ಕೇವಲ ಮುಂದಿನ ಗುರಿಯ ಮೊದಲು ಸಣ್ಣ ಮೆಟ್ಟಿಲು ಹತ್ತಿದಂತೆ ಮಾತ್ರ…

ಯಾರ ರಾಜೀನಾಮೆಯಿಂದ ತಮಗೆ ಸರಕಾರ ರಚಿಸಲು ಸಾಧ್ಯವಾಯ್ತು ಎನ್ನುವುದನ್ನು ಎಷ್ಟೇ ಸಾರಿ ಆಡಿದರೂ, ಮತ್ತೆ ಮತ್ತೆ ಬಿಜೆಪಿಯೊಳಗಿನ ಭಿನ್ನಮತಗಳು ಅನರ್ಹ ಶಾಸಕರನ್ನು ಅಡಕತ್ತರಿಯಲ್ಲೇ ಇಟ್ಟಿದೆ. ಅನರ್ಹರೆಲ್ಲರಿಗೂ ಟಿಕೆಟ್ ನೀಡಿ ಅವರನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದು ನಂಬಲು ಯಾರು ಸಿದ್ಧರಿಲ್ಲ..

ಯಾವ ಕುಮಾರಸ್ವಾಮಿ ಮೇಲೆ ಗೂಬೆ ಕೂರಿಸಿ ಆರೋಪಗಳ ಸುರಿಮಳೆಗೈದು ರಾಜೀನಾಮೆ ನೀಡಿದರೋ ಅದೇ ಕುಮಾರಸ್ವಾಮಿ ಮತ್ತೆ ಅನರ್ಹರಿಗೆ ಆತಂಕ ತಂದಿಟ್ಟಿದ್ದಾರೆ.

ಉಪಚುನಾವಣೆಯಲ್ಲಿ ಅನರ್ಹರನ್ನು ಗೆಲ್ಲಿಸಿಕೊಂಡು ಬರುವ ವಿಶ್ವಾಸವನ್ನು ಕಳೆದುಕೊಂಡಿರುವ ಕೇಸರಿ ಪಡೆ ದಕ್ಷಿಣ ಭಾರತದಲ್ಲಿರುವ ಏಕೈಕ ಬಿಜೆಪಿ ಸರಕಾರವನ್ನು ಉಳಿಸಿಕೊಳ್ಳಲು ಹೊಸ ದಾರಿ ಹುಡುಕುತ್ತಿದೆ.

ಇಂತಹ ಅವಕಾಶಕ್ಕಾಗಿ ಕಾಯುತ್ತಿರುವ ದೇವೇಗೌಡ ಮತ್ತು ಮಗ ಕುಮಾರಸ್ವಾಮಿ ನಾವಿರುವುದೇ ನಿಮ್ಮ ಸರಕಾರ ಉಳಿಸುವುದಕ್ಕಾಗಿ, ಆ ಮೂಲಕ ಅಧಿಕಾರ ಅನುಭವಿಸುವುದಕ್ಕಾಗಿ ಅಂತ ಸೂಚನೆ ಕೊಟ್ಟಾಗಿದೆ.

ಸುಪ್ರೀಂಕೋರ್ಟಿನ ಆದೇಶ (ಬುಧವಾರ 13-11-2019ರಂದು ಪ್ರಕಟವಾಗಲಿದೆ) ತಮ್ಮ ಪರವಾಗಿ ಬಂದ್ರು ಬಿಜೆಪಿ ಹೈಕಮಾಂಡನ್ನು ಒಲೈಸಿಕೊಂಡು ಕೇಸರಿ ಪಕ್ಷದ ಟಿಕೆಟ್ ಪಡೆದರು ಅನರ್ಹರು ನಿಟ್ಟುಸಿರು ಬಿಡುವಂತಿಲ್ಲ.

ಯಾಕೆಂದರೆ ನಿಜವಾದ ಪರೀಕ್ಷೆ ಆರಂಭವಾಗುವುದೇ ಅಲ್ಲಿಂದ. ಕ್ಷೇತ್ರದ ಮೇಲೆ ಎಷ್ಟೇ ಹಿಡಿತವಿದ್ದರು ಸಹ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮತದಾರರನ್ನು ಓಲೈಸಿಕೊಳ್ಳುವುದು ಅಷ್ಟು ಸುಲಭವಲ.್ಲ ಒಂದಡೆ ಅನರ್ಹರನ್ನು ಮಣಿಸಲು ಕಾಂಗ್ರೆಸ್ ತನ್ನ ಬತ್ತಳಿಕೆಯಲ್ಲಿನ ಎಲ್ಲ ತಂತ್ರಗಳನ್ನು ಬಳಸಿಕೊಳ್ಳುತಿದೆ. ಇನ್ನು ಈ ರಾಜೀನಾಮೆ ಪರ್ವದಲ್ಲಿ ತನ್ನ 3 ಶಾಸಕರನ್ನು ಕಳೆದುಕೊಂಡಿರುವ ಜೆಡಿಎಸ್ ಅವುಗಳನ್ನು ಗೆಲ್ಲಲು ಶತಪ್ರಯತ್ನ ಮಾಡುತ್ತದೆ. ಜೊತೆಗೆ ಇನ್ನು 2ರಿಂದ 3 ಕ್ಷೇತ್ರಗಳ ಸೋಲು ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದೆ.

ಈಗಾಗಲೆ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು 18ರಂದು ಕೊನೆಗೊಳ್ಳಲಿದೆ. ಸಮಯದ ವಿರುದ್ದ ಹೋರಾಡುತ್ತಿರುವ ಅನರ್ಹರು ಅಷ್ಟರೊಳಗೆ ಎಲ್ಲವನ್ನೂ ಮಾಡಬೇಕಿದೆ.

ಯಾರ್ಯಾರ ಸಾಧ್ಯತೆ/ಅಸಹಾಯಕತೆ ಏನು?
ಬಿಜೆಪಿ ಮತ್ತು ಯಡ್ಯೂರಪ್ಪ

ಹೈಕಮಾಂಡ್‍ನ ಅಸಹಕಾರ, ಸ್ವಪಕ್ಷೀಯರ ಭಿನ್ನರಾಗದ ಮಧ್ಯೆಯೂ ಮುಖ್ಯಮಂತ್ರಿ ಪಟ್ಟ ಉಳಿಸಿಕೊಳ್ಳಲು ಹೋರಾಡುತ್ತಿರುವ ಬಿ.ಎಸ್.ಯಡ್ಯೂರಪ್ಪ ಅದಕ್ಕಾಗಿ ಅನರ್ಹರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರಬೇಕು. ಇಲ್ಲವಾದರೆ ಜೆಡಿಎಸ್ ಬೆಂಬಲ ಪಡೆಯವಲ್ಲಿ ಸಫಲವಾಗಬೇಕು..

ಇನ್ನು ಬಿಜೆಪಿ ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿನ ಚುನಾವಣಾ ಫಲಿತಾಂಶದ ನಂತರ ಮಧ್ಯಂತರ ಚುನಾವಣೆಗೆ ಹೊಗುವ ಸ್ಥಿತಿಯಲ್ಲಿ ಇಲ್ಲ.. ಹಾಗಾಗಿ ಮತ್ತೆ ಯಡ್ಯೂರಪ್ಪ ಬೆಂಬಲಿಸಲೇಬೇಕಾದ ಅನಿವಾರ್ಯ ಸ್ಥಿತಿ ಅಮಿತ್ ಶಾ ಬಳಗಕ್ಕೆ ಬಂದಿದೆ..

ಅನರ್ಹರು:

ಕೋಟಿನಲ್ಲಿ ತಮ್ಮ ಪರವಾಗಿ ತೀರ್ಪು ಬಂದರೆ ಬಿಜೆಪಿ ಹೈಕಮಾಂಡನ್ನು ಓಲೈಸಿಕೊಂಡು ಟಿಕೆಟ್ ಪಡೆದು ಮತದಾರರ ಮನಗೆದ್ದು ಬಿಎಸ್‍ವೈ ಸಂಪುಟದಲ್ಲಿ ಮಂತ್ರಿಗಿರಿ ಭಾಗ್ಯ ಪಡೆಯುವುದು. ತೀರ್ಪು ವಿರುದ್ದ ಬಂದರೆ ತಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಿ ಅವರು ಗೆಲ್ಲುವ ಹಾಗೆ ಮಾಡುವುದು. ಇದಷ್ಟು ಸರಳ ಅಲ್ಲ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಆದರೆ, ಬೇರೇನೂ ದಾರಿಯಿಲ್ಲ.

ಜೆಡಿಎಸ್:

ತಮ್ಮ ಶಾಸಕರು ರಾಜೀನಾಮೆ ನೀಡಿರುವುದರಿಂದ ಕಳೆದುಕೊಂಡಿರುವ ಮೂರು ಸ್ಥಾನಗಳನ್ನು ಗೆಲ್ಲುವ ಪ್ರಯತ್ನಕ್ಕಿಂತ ಹೆಚ್ಚಾಗಿ ಯಾವುದೇ ಕಾರಣಕ್ಕೂ ಬಿಜೆಪಿಗೆ ಬಹುಮತ ಬರದ ಹಾಗೆ ನೋಡಿಕೊಳ್ಳುವುದು. ಆಗ ಸರಕಾರ ಗೌಡರ ಮರ್ಜಿಯಲ್ಲಿ ಇರುವ ಹಾಗೆ ನೋಡಿಕೊಳ್ಳಬಹುದು.

ಅಂದರೆ, ಉಳಿದ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುವಂತೆ ಮಾಡುವುದು. ಈ ಸದ್ಯ ಗೌಡರು ನಖಶಿಖಾಂತ ವಿರೋಧಿಸುತ್ತಿರುವ ಸಿದ್ದರಾಮಯ್ಯನವರ ಕ್ಯಾಂಡಿಡೇಟುಗಳನ್ನು ಸ್ವತಃ ಅವರೇ ಗೆಲ್ಲಿಸಿದರೆ ಮಾತ್ರ ಜೆಡಿಎಸ್‍ಗೆ ಅನುಕೂಲವಿದೆ.

ಕಾಂಗ್ರೆಸ್

ತಮ್ಮ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಉಪಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದು. ಯಾವುದೇ ಕಾರಣಕ್ಕೆ ಬಿಜೆಪಿಗೆ ಬಹುಮತ ಬರದೆ ಇರುವ ಹಾಗೆ ನೋಡಿಕೊಳ್ಳುವುದು. ಆಗ ಬರುವ ಮಧ್ಯಂತರ ಚುನಾವಣೆಗಾಗಿ ಸಿದ್ದವಾಗುವುದು. ಇದೇ ಅವರ ಆಯ್ಕೆ ಎಂದು ದೇವೇಗೌಡರೂ ಹೇಳುತ್ತಿದ್ದಾರೆ. ಆದರೂ ಇದು ಅಷ್ಟು ಸುಲಭದ ಸಂಗತಿ ಅಲ್ಲ. ಕಾಂಗ್ರೆಸ್ ಒಡೆದ ಮನೆಯಾಗಿರುವುದು ಒಂದು ಕಾರಣವಾಗಿದ್ದರೆ, ನಂತರದ ಚುನಾವಣೆಯನ್ನು ಎದುರಿಸಲು ಬೇಕಾದ ಗಟ್ಟಿ ಹೈಕಮ್ಯಾಂಡ್ ಅಥವಾ ಸ್ಟೇಟ್ ಕಮ್ಯಾಂಡ್ 2018ರಲ್ಲಿದ್ದ ಪರಿಸ್ಥಿತಿಯಲ್ಲೂ ಇಲ್ಲ.

ಮತದಾರ:

ಒಟ್ಟಾರೆ ಕರ್ನಾಟಕದ ಮತದಾರ ಮಾತ್ರ ಅತಂತ್ರ, ಅಶಕ್ತ ಸರಕಾರಗಳ ಕೈಯಲ್ಲಿ ಸಿಕ್ಕು ನರಳುವುದು ತಪ್ಪಲ್ಲ.

ಇದು ನೀತಿ ಸಂಹಿತೆಯ ಉಲ್ಲಂಘನೆ ವ್ಯಾಪ್ತಿಗೆ ಬರುವುದಿಲ್ಲವೇ?

ಅನರ್ಹಗೊಂಡ ಶಾಸಕರುಗಳ ಕ್ಷೇತ್ರಗಳಿಗೆ ಚುನಾವಣಾ ಆಯೋಗವು ಅಕ್ಟೋಬರ್‍ನಲ್ಲಿ ಚುನಾವಣೆ ಎಂದು ಘೋಷಣೆ ಮಾಡಿ ಆದೇಶ ಹೊರಡಿಸಿತ್ತು. ನಂತರ ತಾನೇ ಸುಪ್ರೀಂಕೋರ್ಟಿನಲ್ಲಿ ಚುನಾವಣೆಯನ್ನು ಮುಂದೂಡುವುದರ ಕುರಿತು ಹೇಳಿಕೆ ನೀಡಿಬಿಟ್ಟಿತು. ಸಹಜವಾಗಿ ಅಷ್ಟು ದಿನಗಳ ಕಾಲ ನೀತಿ ಸಂಹಿತೆ ಇರುವುದು ಸಾಧ್ಯವಿರಲಿಲ್ಲ.

ಇದರ ಲಾಭ ಪಡೆದ ಅಧಿಕಾರಾರೂಢ ಬಿಜೆಪಿ ಪಕ್ಷವು ಸದರಿ ಕ್ಷೇತ್ರಗಳಿಗೆ ಅನುದಾನದ ಹೊಳೆ ಹರಿಸುತ್ತಿದೆ. ಅದಕ್ಕಾಗಿ ಬೇರೆ ಶಾಸಕರ ಕ್ಷೇತ್ರಗಳಿಗೆ ನೀಡಿದ ಅನುದಾನವನ್ನೂ ಕಡಿತಗೊಳಿಸಲಾಗಿದೆ. ಹಿಂದಿನ ಸರ್ಕಾರದ ಸಂದರ್ಭದಲ್ಲಿ ಘೋಷಿಸಲಾದ ತಾಲೂಕುಗಳ ಜೊತೆಗೆ ಘೋಷಿತವಾಗದ, ಮಂಚೇನಹಳ್ಳಿ ತಾಲೂಕನ್ನು ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಕೆ.ಸುಧಾಕರ್ ಅನುಕೂಲಕ್ಕಾಗಿ ಘೋಷಿಸಲಾಯಿತು. ಗೌರಿಬಿದನೂರು ತಾಲೂಕು ವ್ಯಾಪ್ತಿಗೆ ಬರುತ್ತಿದ್ದ ಮಂಚೇನಹಳ್ಳಿ ಹೋಬಳಿಯು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತಿತ್ತು. ಈಗ ಚಿಕ್ಕಬಳ್ಳಾಪುರದ ಮೂರು ಹೋಬಳಿಗಳಲ್ಲೇ ಒಂದನ್ನು ಕಿತ್ತು ಮಂಚೇನಹಳ್ಳಿಗೆ ಕೊಡಬೇಕು. ಆ ಕಡೆ ಗೌರಿಬಿದನೂರು ತಾಲೂಕಿನಿಂದ ಕಿತ್ತು ಸೇರಿಸಿದರೆ ಅವರು ಅತಂತ್ರರಾಗುತ್ತಾರೆ. ಅದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಕನಕಪುರದಿಂದ ಕಿತ್ತು ಮೆಡಿಕಲ್ ಕಾಲೇಜನ್ನು ನೀಡಲಾಯಿತು. ಇವೆರಡೂ ಸುಧಾಕರ್ ತನ್ನ ಸಾಧನೆ ಎಂಬಂತೆ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಹಾಗೆಯೇ ಹೊಸಕೋಟೆ ತಾಲೂಕಿನಲ್ಲೂ ಹಲವಾರು ಯೋಜನೆಗಳನ್ನು ಯಡಿಯೂರಪ್ಪನವರು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಸಮ್ಮುಖದಲ್ಲಿ ಘೋಷಿಸಿದರು. ಇವ್ಯಾವುವೂ ಚುನಾವಣಾ ನೀತಿ ಸಂಹಿತೆ ವ್ಯಾಪ್ತಿಗೆ ಬರುವುದಿಲ್ಲ. ಏಕೆಂದರೆ ನೀತಿ ಸಂಹಿತೆ ಘೋಷಣೆಯಾಗುವ (ನವೆಂಬರ್ 12ಕ್ಕೆ) ಮುಂಚೆಯೇ ಆಗಿಬಿಟ್ಟಿವೆ.

ಮದ್ಯ ನಿಷೇಧಕ್ಕಾಗಿ ಹೋರಾಡುತ್ತಿರುವ ಮಹಿಳೆಯರು ಇದೇ ನ.12ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಧರಣಿ ಮಾಡಲು ಅನುಮತಿ ಕೇಳಿದ್ದರು. ನೀತಿ ಸಂಹಿತೆ ಶುರುವಾದ ಮೇಲೆ ಯಾರೂ ಬಂದು ಭರವಸೆ ನೀಡಲಾಗದು ಎಂಬ ಕಾರಣ ಹೇಳಿ ನಿರಾಕರಿಸಲಾಯಿತು. ನಂತರ ಅವರು ನ.7ರಂದು ಒಂದು ದಿನದ ಧರಣಿ ಮಾಡಿದರು (ನೂರರ ನೋಟ ಅಂಕಣದಲ್ಲಿ ಅದರ ವಿವರಗಳಿವೆ).
ಯಾರಿಗೂ ಬೇಡವಾಗಿದ್ದ, ಶಾಸಕರ ಮತ್ತು ಬಿಜೆಪಿಯ ಅಧಿಕಾರದ ದಾಹದ ಕಾರಣಕ್ಕೆ ಬರುತ್ತಿರುವ ಉಪಚುನಾವಣೆಯಿಂದ ಆಗುತ್ತಿರುವ ನೀತಿ ಸಂಹಿತೆ ಉಲ್ಲಂಘನೆ ಮತ್ತು ಜನಸಾಮಾನ್ಯರಿಗಾಗುತ್ತಿರುವ ನಷ್ಟಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಸಹಾ ಯಾರಿಗೂ ಬೇಡವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಕೊಲೆಗೆ ರಾಜಕೀಯ ಬಣ್ಣ ಬಳಿದ ಅಣ್ಣಾಮಲೈ: ಪ್ರಕರಣ ದಾಖಲು

0
ಮಹಿಳೆಯೋರ್ವರ ಸಾವಿಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಮಾಹಿತಿ ಪೋಸ್ಟ್ ಮಾಡಿದ ಆರೋಪದ ಮೇಲೆ ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಮಿಳುನಾಡಿನ ಕಡಲೂರು ಜಿಲ್ಲೆಯ ಪಕ್ಕಿರಿಮಣಿಯಂ...