Homeಕರ್ನಾಟಕಒಕ್ಕಲಿಗ-ಲಿಂಗಾಯತ-ಅಹಿಂದ `ಕೈ' ಹಿಡಿಯುತ್ತಾ ಕ್ಯಾಸ್ಟ್ ಕೆಮಿಸ್ಟ್ರಿ?

ಒಕ್ಕಲಿಗ-ಲಿಂಗಾಯತ-ಅಹಿಂದ `ಕೈ’ ಹಿಡಿಯುತ್ತಾ ಕ್ಯಾಸ್ಟ್ ಕೆಮಿಸ್ಟ್ರಿ?

- Advertisement -
- Advertisement -

ಸತತ ಮೂರು ತಿಂಗಳ ಗೊಂದಲ, ಲಾಬಿ, ಪಕ್ಷದೊಳಗಿನ ಆಂತರಿಕ ಕಿತ್ತಾಟಗಳಿಗೆ ಕೊನೆಗೂ ತೆರೆ ಎಳೆದಿರುವ ಕಾಂಗ್ರೆಸ್ ಹೈಕಮಾಂಡ್ ದಿನೇಶ್ ಗುಂಡೂರಾವ್ ರಾಜೀನಾಮೆಯಿಂದ ತೆರವಾಗಿದ್ದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ‘ಟ್ರಬಲ್ ಶೂಟರ್’ ಡಿ.ಕೆ.ಶಿವಕುಮಾರ್ ಅವರನ್ನು ನೇಮಕ ಮಾಡಿದೆ.

ಕನಕಪುರ ಕ್ಷೇತ್ರದ ಶಾಸಕ ಡಿ.ಕೆ.ಶಿವಕುಮಾರ್ ಕೊನೆಗೂ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಂತರ ಕಾಂಗ್ರೆಸ್ ಚುಕ್ಕಾಣಿ ಹಿಡಿದಿರುವ ಮೊದಲ ಒಕ್ಕಲಿಗ ನಾಯಕ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಆದರೆ, ಪಕ್ಷದ ಅಧ್ಯಕ್ಷ ಗಾದಿಗೆ ಏರಿದಷ್ಟು ಆ ಸ್ಥಾನವನ್ನು ನಿಭಾಯಿಸುವ ಕೆಲಸ ಅಷ್ಟು ಸುಲಭದ್ದಲ್ಲ ಎಂಬ ಸತ್ಯ ಸ್ವತಃ ಡಿಕೆಶಿಗೂ ಗೊತ್ತು.

ಡಿಕೆಶಿ ಜೊತೆಗೆ ಪಕ್ಷಕ್ಕೆ ಮೂವರು ಕಾರ್ಯಾಧ್ಯಕ್ಷರನ್ನೂ ಆಯ್ಕೆ ಮಾಡಲಾಗಿದೆ. ಈಶ್ವರ್ ಖಂಡ್ರೆ ತಮ್ಮ ಸ್ಥಾನದಲ್ಲೇ ಮುಂದುವರೆದಿದ್ದರೆ, ನಾಯಕ ಸಮಾಜಕ್ಕೆ ಸೇರಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅಲ್ಪಸಂಖ್ಯಾತ ಸಮಾಜಕ್ಕೆ ಸೇರಿದ ಸಲೀಂ ಅಹ್ಮದ್ ಅವರನ್ನು ಮೊದಲ ಬಾರಿಗೆ ಪಕ್ಷದ ಕಾರ್ಯಾಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ರಾಜ್ಯ ಘಟಕದಲ್ಲಿ ಕಾರ್ಯಾಧ್ಯಕ್ಷ ಹುದ್ದೆಗೆ ಒಂದಕ್ಕಿಂತ ಹೆಚ್ಚು ನಾಯಕರನ್ನು ಆಯ್ಕೆ ಮಾಡಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

ಆದರೆ, ಡಿಕೆಶಿ ಹಾಗೂ ಮೂವರು ಕಾರ್ಯಾಧ್ಯಕ್ಷರ ಆಯ್ಕೆಯ ಹಿಂದೆ ಕಾಂಗ್ರೆಸ್ ಪಕ್ಷವು ಬಿಜೆಪಿಯಂತೆ ಜಾತಿ ಮತಗಳನ್ನು ಕ್ರೋಢೀಕರಿಸುವ stratergy ಮಾಡಿದೆಯೋ ಅಥವಾ ಪಕ್ಷದ ಶಕ್ತಿಕೇಂದ್ರಗಳನ್ನು ತೃಪ್ತಿಗೊಳಿಸಲು ಸರ್ಕಸ್ ಮಾಡಿದೆಯೋ ಎಂಬುದು ಪ್ರಶ್ನೆ. ಬಹುಶಃ ಎರಡೂ ಆಗಿರುವ ಸಾಧ್ಯತೆಗಳೇ ಹೆಚ್ಚು.

ಲಿಂಗಾಯತ-ಒಕ್ಕಲಿಗ ಸಮೀಕರಣ

ರಾಜ್ಯ ರಾಜಕೀಯದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಪ್ರಭಾವ ಢಾಳಾಗಿದೆ. ಎಲ್ಲಾ ಚುನಾವಣೆಯಲ್ಲೂ ದಲಿತರು ಅಲ್ಪಸಂಖ್ಯಾತರು ರಾಜ್ಯದ ಮೊದಲ ಮತ್ತು ಮೂರನೇ ದೊಡ್ಡ ಸಮುದಾಯಗಳಾಗಿವೆ. ಅವೇ ಗೆಲುವಿಗೆ ನಿರ್ಣಾಯಕ ಎಂದು ಹೇಳಲಾಗುತ್ತದೆಯಾದರೂ ಪ್ರಭಾವದಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಪಾಲು ಹೆಚ್ಚೇ ಇದೆ ಎಂಬುದು ಇದುವರೆಗಿನ ಇತಿಹಾಸ. ದೇವೇಗೌಡರ ಕಾರಣಕ್ಕೆ ಅಥವಾ ಯಡಿಯೂರಪ್ಪನವರ ಕಾರಣಕ್ಕೆ ಇವೆರಡು ಸಮುದಾಯಗಳು ಬೇರೆ (1989, 2013) ಬೇರೆಯಾಗಿ ನಿಂತಾಗ ಕಾಂಗ್ರೆಸ್ ಆರಿಸಿ ಬಂದಿದೆ ಎಂಬುದು ಒಂದು ಕಡೆ ಕಂಡರೆ, ಕಾಂಗ್ರೆಸ್‍ನಲ್ಲೂ ಒಕ್ಕಲಿಗ ಮತ್ತು ಲಿಂಗಾಯಿತ ನಾಯಕರುಗಳು ಕೆಪಿಸಿಸಿಯ ಚುಕ್ಕಾಣಿ ಹಿಡಿದಾಗಲೇ (1989, 1999) ಭಾರೀ ಬಹುಮತ ಬಂದಿದೆ ಎಂಬುದೂ ಇನ್ನೊಂದು ಕಡೆ ಕಾಣುತ್ತಿದೆ.

ಶಿವಮೊಗ್ಗದಿಂದ ಆರಂಭಿಸಿ ಬೀದರ್‍ವರೆಗಿದ್ದು, ಉತ್ತರ ಕರ್ನಾಟಕದ ಭಾಗದಲ್ಲಿ ಅಧಿಕವಾಗಿರುವ, ಶೇ.17ರಷ್ಟು ಮತದಾರರಿದ್ದಾರೆ ಎನ್ನಲಾಗುವ ಲಿಂಗಾಯತ ಕೋಮಿನವರು ಕಳೆದ ಎರಡು ದಶಕಗಳಿಂದ ಯಡಿಯೂರಪ್ಪನವರನ್ನು ತನ್ನ ನಾಯಕನೆಂದು ಹೆಚ್ಚೆಚ್ಚು ಒಪ್ಪಿಕೊಳ್ಳುತ್ತಾ ಬಂದಿದ್ದಾರೆ. ಲಿಂಗಾಯತ ನಾಯಕ ಎಂಬುದು ಯಡಿಯೂರಪ್ಪ ಬೆನ್ನಿಗಿರುವ ಟ್ರಂಪ್ ಕಾರ್ಡ್. ಇದೇ ಕಾರಣಕ್ಕೆ ಅವರು ಈವರೆಗೆ ಸಿಎಂ ಸ್ಥಾನದಲ್ಲಿ ಭದ್ರವಾಗಿದ್ದಾರೆ ಎಂದರೂ ತಪ್ಪಿಲ್ಲ.

ಇನ್ನು ಹಾಸನ, ಮೈಸೂರು, ಮಂಡ್ಯ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಹಂಚಿ ಹೋಗಿರುವ ಶೇ.12 ರಷ್ಟು ಒಕ್ಕಲಿಗರು ದೇವೇಗೌಡರನ್ನು ತಮ್ಮ ನಾಯಕ ಎಂದು ಒಪ್ಪಿಕೊಂಡಿದ್ದಾರೆ ಎಂಬುದೇನೋ ನಿಜ. ಆದರೆ, ಈ ಮತಗಳು ಜೆಡಿಎಸ್‍ನಿಂದ ಹೊರಹೋಗಲಾರಂಭಿಸಿವೆ.

ಒಂದು ಕಾಲದಲ್ಲಿ ದೇವೇಗೌಡ ಮತ್ತು ಆನಂತರ ಎಸ್.ಎಂ.ಕೃಷ್ಣ ಬೆನ್ನಿಗೆ ಗಟ್ಟಿಯಾಗಿ ನಿಂತಿದ್ದ ಒಕ್ಕಲಿಗ ಮತಗಳು 2018ರಲ್ಲಿ ಗಟ್ಟಿಯಾಗಿ ಎಚ್‍ಡಿಕೆ ಜೊತೆಗಿದ್ದವು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಮತ್ತು ನಿಖಿಲ್ ಕುಮಾರಸ್ವಾಮಿಯ ಸೋಲು ಬೇರೆ ನೋಟವನ್ನು ಕೊಡುತ್ತಿವೆ. ಡಿಕೆಶಿ ಒಕ್ಕಲಿಗರಾದರೂ ಈವರೆಗೆ ಅವರೂ ಸಹ ಒಕ್ಕಲಿಗ ಮತಗಳ ಬ್ರ್ಯಾಂಡ್ ನಾಯಕನಾಗಲು ಆಗಿರಲಿಲ್ಲ. ಲಿಂಗಾಯತ ಮತಗಳಂತೆ ಒಕ್ಕಲಿಗ ಮತಗಳು ಒಂದೇ ಕಡೆಯಲ್ಲಿ ಗಟ್ಟಿಯಾಗಿಲ್ಲದ ಸಂದರ್ಭದಲ್ಲಿ ಡಿಕೆಶಿಗೆ ಕೆಪಿಸಿಸಿಯ ಅಧ್ಯಕ್ಷ ಪಟ್ಟ ಸಿಕ್ಕಿದೆ.

ಹೀಗಾಗಿ ನಾಯಕ ನಿರ್ವಾತ ಸ್ಥಿತಿ ಅನುಭವಿಸುತ್ತಿರುವ ಒಕ್ಕಲಿಗ ಸಮಾಜದ ಮತಗಳನ್ನು ದೃವೀಕರಿಸಬೇಕು, ಲಿಂಗಾಯತ ಮತಗಳು ಬಿಜೆಪಿಯ ಬೆನ್ನಿಗೆ ಇರುವಂತೆ ಒಕ್ಕಲಿಗ ಮತಗಳನ್ನು ಕಾಂಗ್ರೆಸ್ ಪಕ್ಷದ ಮತಬ್ಯಾಂಕ್ ಆಗಿ ಪರಿವರ್ತಿಸಿಕೊಳ್ಳಬೇಕು ಎಂಬುದು ಕಾಂಗ್ರೆಸ್ ಹೈಕಮಾಂಡ್ ಇರಾದೆ. ಇದೊಂದೇ ಕಾರಣಕ್ಕೆ ಸರಿಸುಮಾರು 20 ವರ್ಷಗಳ ನಂತರ ಕಾಂಗ್ರೆಸ್‍ನಲ್ಲಿ ಅಧ್ಯಕ್ಷ ಗಾದಿಯನ್ನು ಒಕ್ಕಲಿಗ ಸಮಾಜದ ನಾಯಕನಿಗೆ ನೀಡಿಲ್ಲ. ಆದರೆ ಡಿಕೆಶಿ ಕಾಂಗ್ರೆಸ್‍ಗೆ ಸಲ್ಲಿಸಿರುವ ‘ಸೇವೆ’ಯ ಜೊತೆಗೆ ಇದೂ ಒಂದು ಖಚಿತ ಲೆಕ್ಕಾಚಾರವೆಂಬುದನ್ನು ಅಲ್ಲಗಳೆಯಲಾಗದು.

ದಿನೇ ದಿನೇ ಹೈಕಮಾಂಡ್‍ಗೆ ಹತ್ತಿರವಾದ ಡಿಕೆಶಿ

ಇದರಾಚೆಗೆ ಇನ್ನೊಂದು ಪ್ರಶ್ನೆ ಏಳುವುದು ಸದ್ಯಕ್ಕೆ ಕಾಂಗ್ರೆನ ಜನನಾಯಕರೆಂದರೆ ಅದು ಸಿದ್ದರಾಮಯ್ಯನವರು ಮಾತ್ರ. ಹೀಗಿದ್ದರೂ ಡಿಕೆಶಿಗೆ ಪಟ್ಟ ಕಟ್ಟಲು ಹೈಕಮಾಂಡ್ ಸಖ್ಯ ಪ್ರಮುಖ ಪಾತ್ರ ವಹಿಸಿದೆ.

ಕಾಂಗ್ರೆಸ್‍ನಲ್ಲಿ ನಾಯಕರಿಗೆ ಕೊರತೆ ಇಲ್ಲ. ಆದರೆ, ಡಿಕೆಶಿಯಂತಹ ಟಫ್ ನಾಯಕರಿಗೆ ಖಂಡಿತ ಕೊರತೆ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿಕೆ ಶಿವಕುಮಾರ್, ಹಲವು ಸಂದರ್ಭಗಳಲ್ಲಿ ಪಕ್ಷವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಪಕ್ಷ ನೀಡಿದ ಜವಾಬ್ದಾರಿಗಳನ್ನು ಒಂಚೂರು ಚ್ಯುತಿ ಬಾರದ ಹಾಗೆ ನಿಭಾಯಿಸಿದ್ದಾರೆ.

ಹಲವು ರಾಜ್ಯಗಳಲ್ಲಿ ರಾಜಕೀಯ ಬಿಕ್ಕಟ್ಟು ಎದುರಾದಾಗ ಕಾಂಗ್ರೆಸ್ ಶಾಸಕರನ್ನು ರಾಜ್ಯದಲ್ಲಿ ಸುರಕ್ಷಿತವಾಗಿ ನೋಡಿಕೊಂಡಿದ್ದಾರೆ. ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರನ್ನು ರಾಜ್ಯಸಭೆಗೆ ಮರುಆಯ್ಕೆ ಮಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೇ, ಈ ಕೆಲಸಗಳಿಗಾಗಿ ಕೇಂದ್ರ ಸರ್ಕಾರದ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಐಟಿ, ಇಡಿ ದಾಳಿಗೂ ಒಳಗಾಗಿ ಜೈಲುವಾಸ ಸಹ ಅನುಭವಿಸಿದ್ದಾರೆ. ಎಂತಹ ಸಂದರ್ಭದಲ್ಲಿಯೂ ಪಕ್ಷದ ವಿರುದ್ಧ ನಡೆದುಕೊಳ್ಳದೆ, ಪಕ್ಷ ತೊರೆಯದೆ ನಿಷ್ಠೆ ತೋರಿರುವುದನ್ನು ಪರಿಗಣಿಸಿ, ಹೈಕಮಾಂಡ್ ಡಿಕೆಶಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕರುಣಿಸಿದೆ ಎನ್ನಲಾಗುತ್ತಿದೆ.

ಇದಕ್ಕೆ ಮುಂಚೆ ಬಳ್ಳಾರಿ ಉಪಚುನಾವಣೆಯೂ ಸೇರಿದಂತೆ ಹಲವು ಜವಾಬ್ದಾರಿಗಳನ್ನು ‘ಯಶಸ್ವಿಯಾಗಿ ನಿಭಾಯಿಸಿದ ಕೀರ್ತಿ’ ಅವರದ್ದು. ಏಕೆಂದರೆ ಪಕ್ಷವನ್ನು ಮುನ್ನಡೆಸಲು ಬೇಕಾದ ವರ್ಚಸ್ಸು ಮತ್ತು ಸಂಪನ್ಮೂಲ ಡಿಕೆಶಿ ಬಳಿ ಹೇರಳವಾಗಿದೆ. ಯಾವುದೇ ಸವಾಲನ್ನು ತನಗೆ ಒದಗಿರುವ ಅವಕಾಶವೆಂದು ಸ್ವೀಕರಿಸುವ ಡಿಕೆಶಿ ಕಷ್ಟಕಾಲದಲ್ಲಿ ಸಮರ್ಥವಾಗಿ ಎದುರಿಸುವ ಧೈರ್ಯ, ಚಾಣಾಕ್ಷತನ ಉಳ್ಳವರು.

ಹೀಗಾಗಿ ಡಿಕೆಶಿ ಅವರಿಗೆ ಪಕ್ಷದ ಉನ್ನತ ಹುದ್ದೆ ನೀಡುವ ಮೂಲಕ ಒಕ್ಕಲಿಗ ಮತಗಳು ಅಧಿಕವಾಗಿರುವ ರಾಮನಗರ, ಹಾಸನ, ಮಂಡ್ಯ ಹಾಗೂ ಹಳೆ ಮೈಸೂರು ಭಾಗದಲ್ಲಿರುವ ಒಕ್ಕಲಿಗರ ಮತಗಳನ್ನು ಧೃವೀಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಶಾಶ್ವತ ಮತ ಬ್ಯಾಂಕ್ ನಿರ್ಮಿಸಿಕೊಳ್ಳುವುದು ಕಾಂಗ್ರೆಸ್ ಹೈಕಮಾಂಡ್ ಪ್ರಮುಖ ಉದ್ದೇಶ.

ಕಾರ್ಯಾಧ್ಯಕ್ಷ ಹುದ್ದೆಯಲ್ಲೂ ಜಾತಿ ಸಮೀಕರಣ

ಒಕ್ಕಲಿಗ ಸಮಾಜದ ಡಿ.ಕೆ.ಶಿವಕುಮಾರ್ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಏರಿದರೆ ಅವರ ಬೆನ್ನಿಗೆ ಇದೇ ಮೊದಲ ಬಾರಿಗೆ ಪಕ್ಷಕ್ಕೆ ಮೂರು ಜನ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ.

ಉತ್ತರ ಕರ್ನಾಟಕ ಭಾಗದ ಲಿಂಗಾಯತ ಸಮುದಾಯವನ್ನು ಸೆಳೆಯುವ ಸಲುವಾಗಿ ಈಶ್ವರ್ ಖಂಡ್ರೆ, ಶ್ರೀರಾಮುಲು ಅವರಿಗೆ ಡಿಸಿಎಂ ಪದವಿ ನೀಡಲಿಲ್ಲ ಎಂದು ಬಿಜೆಪಿ ವಿರುದ್ಧ ಮುನಿಸಿಕೊಂಡಿರುವ ನಾಯಕ ಸಮುದಾಯದ ಮತಗಳನ್ನು ಸೆಳೆಯುವ ಸಲುವಾಗಿ ಸತೀಶ್ ಜಾರಕಿಹೊಳಿ ಹಾಗೂ ಅಲ್ಪಸಂಖ್ಯಾತ ಮತಗಳನ್ನು ಸೆಳೆಯುವ ಸಲುವಾಗಿ ಸಲೀಂ ಅಹ್ಮದ್ ಅವರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ.

ಈ ಮೂಲಕ ಲಿಂಗಾಯತ, ವಾಲ್ಮೀಕಿ, ಅಲ್ಪಸಂಖ್ಯಾತ ಸಮುದಾಯಕ್ಕೆ ಆದ್ಯತೆ ನೀಡುವ ತಂತ್ರಗಾರಿಕೆ ಅನುಸರಿಸಲಾಗಿದೆ. ಅಷ್ಟೇ ಅಲ್ಲದೇ, ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗಕ್ಕೆ ಮೂರು ಕಾರ್ಯಾಧ್ಯಕ್ಷ ಸ್ಥಾನ, ದಕ್ಷಿಣ ಕರ್ನಾಟಕಕ್ಕೆ ಹಾಗೂ ಒಕ್ಕಲಿಗ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಪ್ರಾದೇಶಿಕ ಸಮಾನತೆಯನ್ನು ಕಾಯ್ದುಕೊಳ್ಳುವ ಲೆಕ್ಕಾಚಾರವನ್ನು ಕೆಪಿಸಿಸಿ ಪ್ರದರ್ಶಿಸಿದೆ.

ಪ್ರಸ್ತುತ ಇಡೀ ದೇಶದಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಪಾಲಿಗೆ ಬೂತ್ ಮಟ್ಟದಿಂದ ಗಟ್ಟಿ ನೆಲೆ ಇರುವ ಕೆಲವೇ ಕೆಲವು ರಾಜ್ಯಗಳ ಪೈಕಿ ಕರ್ನಾಟಕ ಸಹ ಒಂದು. ಆದರೆ, ಕಳೆದ ವಿಧಾನಸಭೆ, ಲೋಕಸಭೆ ಹಾಗೂ ಉಪಚುನಾವಣೆಗಳಲ್ಲಿನ ಸಾಲು-ಸಾಲು ಸೋಲು ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿತ್ತು. ಹೀಗಾಗಿ ಕಾರ್ಯಕರ್ತರಲ್ಲಿ ಮತ್ತೆ ಉತ್ಸಾಹ ತುಂಬಿ ಪಕ್ಷವನ್ನು ಸಂಘಟಿಸಿ ಗೆಲುವಿನ ಹಳಿಗೆ ಮರಳಿಸಲು ಕಾಂಗ್ರೆಸ್ ಇಂತಹ ಜಾತಿ ಸಮೀಕರಣಕ್ಕೆ ಮೊರೆ ಹೋಗಿದೆ.

ಆದರೆ, ಪಕ್ಷದೊಳಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಡಿಕೆಶಿ ವಿರುದ್ಧ ನಿಂತಿದ್ದು ಈ ಸಮಸ್ಯೆಯನ್ನು ಡಿಕೆಶಿ ಹೇಗೆ ನಿಭಾಯಿಸುತ್ತಾರೆ? ಮೂವರು ಕಾರ್ಯಾಧ್ಯಕ್ಷರೂ ಸಿದ್ದರಾಮಯ್ಯನವರ ಕ್ಯಾಂಡಿಡೇಟುಗಳೇ, ಹಾಗಾಗಿ ಅವರೂ ತಂಡದ ಜೊತೆಗೆ ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂಬುದು ಕಾಂಗ್ರೆಸ್‍ನ ಒಂದು ವಲಯದ ಮಾತಾದರೂ, ಉಳಿದವರು ಮುಂದಿನ ದಿನಗಳಲ್ಲಿ ಬಣ ರಾಜಕಾರಣ ತಲೆಯೆತ್ತಬಹುದು ಎನ್ನುತ್ತದೆ. ಯಾವುದಕ್ಕೂ ಮುಂದಿನ ದಿನಗಳಷ್ಟೇ ಇದಕ್ಕೆ ಉತ್ತರ ನೀಡಬಲ್ಲದು. ಆರಂಭದಲ್ಲೇ ಎಲ್ಲಾ ನಾಯಕರ ಮನೆಗಳಿಗೂ ಎಡತಾಕಿ ವಿಶ್ವಾಸ ಕುದುರಿಸಿಕೊಳ್ಳುವ ಕೆಲಸವನ್ನಂತೂ ಡಿಕೆಶಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಆಗಲೇಬೇಕೆಂಬ ಆಕಾಂಕ್ಷೆಯುಳ್ಳ ಡಿಕೆಶಿ ಇನ್ನೂ ಎಷ್ಟು ವರ್ಷಗಳ ಕಾಲ ಸಮತೋಲನ ಕಾಪಾಡಿಕೊಳ್ಳುವ ತಾಳ್ಮೆ ತೋರುತ್ತಾರೆ ನೊಡಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...