Homeರಾಜಕೀಯತೂತ್ತುಕುಡಿಯ ನರಮೇಧದ ಪಾಠಗಳು

ತೂತ್ತುಕುಡಿಯ ನರಮೇಧದ ಪಾಠಗಳು

- Advertisement -
- Advertisement -

ಪ್ರೊ. ನಗರಗೆರೆ ರಮೇಶ್ |

2007ರಲ್ಲಿ ಪಶ್ಚಿಮಬಂಗಾಳದ ನಂದಿಗ್ರಾಮದಲ್ಲಿ ನಡೆದ ನರಮೇಧದ ನಂತರ ಈಗ ತಮಿಳುನಾಡಿನಲ್ಲಿ ಅದಕ್ಕಿಂತಲೂ ಭೀಕರವಾದ ತೂತ್ತುಕುಡಿ ನರಮೇಧ ನಡೆದಿದೆ. ಆದರೆ ಮೇ 22 ಮತ್ತು 23 ರಂದು ತೂತ್ತುಕುಡಿ ಎಂಬ ಜಿಲ್ಲಾ ಕೇಂದ್ರದಲ್ಲಿ ನಡೆದ ಪೊಲೀಸ್ ಫೈರಿಂಗ್‍ನಲ್ಲಿ 13 ಜನರ ಪ್ರಾಣಕಳೆದುಕೊಂಡಿದ್ದು, 100ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿ ಆಸ್ಪತ್ರೆಗಳಲ್ಲಿ ನರಳುತ್ತಿದ್ದಾರೆ.

ಈ ದುರ್ಘಟನೆಗೆ ಮುನ್ನ ನೂರು ದಿನಗಳ ಕಾಲ ಜನರು ಶಾಂತಿಯುತ ಪ್ರತಿಭಟನೆ ನಡೆಸಿದ್ದರು. ಹೀಗಿದ್ದರೂ ತಮ್ಮತ್ತ ಕಣ್ಣನ್ನು ಹಾಯಿಸದ ಸರ್ಕಾರವನ್ನು ಬಡಿದೆಬ್ಬಿಸಲು ಮೇ 22ರಂದು ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಹೊರಟಿದ್ದರು, ಅಷ್ಟೆ. ಘೇರಾವ್, ಮುತ್ತಿಗೆ ಇತ್ಯಾದಿ ಯಾವುದೇ ಯೋಜನೆಗಳಿರಲಿಲ್ಲ. ತಮ್ಮ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿ, ಬೃಹತ್ ಜನಬೆಂಬಲ ಪ್ರದರ್ಶನ ಮಾಡುವುದಷ್ಟೇ ಹೋರಾಟಗಾರರ ಉದ್ದೇಶವಾಗಿತ್ತು. ಹೀಗಿದ್ದಾಗ ಮಾರ್ಗಮಧ್ಯದಲ್ಲೇ ಏಕಾಏಕಿ ನಿರಾಯುಧ ಜನರ ಮೇಲೆ ಮುಗಿಬಿದ್ದ ಪೋಲಿಸ್ ಬಲಗಳು ಜಲಿಯನ್‍ವಾಲಾಬಾಗ್ ಹತ್ಯಾಕಾಂಡದ ಮಾದರಿ ಕಾರ್ಯಾಚರಣೆ ನಡೆಸಿದ್ದಾರೆ.

ತೂತ್ತುಕುಡಿಯ ಜನರ ಅಪರಾಧವಾದರೂ ಏನು?

ಕಡಲ ಕಿನಾರೆಯಲ್ಲಿರುವ ತೂತ್ತುಕುಡಿಯಲ್ಲಿ ‘ಸ್ಟೆರ್‍ಲೈಟ್ ಕಾಪರ್’ ಎಂಬ ತಾಮ್ರ ತಯಾರಿಕಾ ಕಂಪನಿಯಿದೆ. ಇದು ‘ವೇದಾಂತ’ ಎಂಬ ಹೆಸರಿನ ಹಾಲಿ ಲಂಡನ್‍ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಹುರಾಷ್ಟ್ರೀಯ ಕಂಪನಿಯ ಅಂಗಸಂಸ್ಥೆ. 1994ರಲ್ಲಿ ಇಲ್ಲಿ ಸ್ಥಾಪನೆಗೊಂಡ ಈ ಕಾರ್ಖಾನೆ ಬಹುಬೇಗನೆ ಸುತ್ತಲಿನ ವಾತವರಣವನ್ನು ಕಲುಷಿತಗೊಳಿಸಿತು. ಅಂತರ್ಜಲ ಮಲಿನಗೊಂಡು, ಕುಡಿಯುವ ಗಾಳಿ ಧೂಳು, ಹೊಗೆಮಯವಾಗಿ ವಿಚಿತ್ರ ಕಾಯಿಲೆಗಳು ವ್ಯಾಪಕವಾಗಿವೆ. ಹತ್ತಾರು ಬಾರಿ ಅಪಾಯಕಾರಿ ಗ್ಯಾಸ್ ಲೀಕ್ ಆಗಿ ಜನರು ಸಾವುನೋವು ಉಂಡಿದ್ದಾರೆ. ಸ್ಟೆರ್‍ಲೈಟ್ ವಿರುದ್ಧ ಪ್ರತಿಭಟನೆಗಳೂ ನಿರಂತರ ನಡೆಯುತ್ತಲೇ ಇವೆ.

ಇಂಥಾ ಚರಿತ್ರೆಯಿರುವ ಸ್ಟೆರ್‍ಲೈಟ್ ಕಂಪನಿಯ ತಾಮ್ರ ಉತ್ಪಾದನಾ ಸಾಮಥ್ರ್ಯ ವಾರ್ಷಿಕ 4 ಲಕ್ಷ ಟನ್‍ಗಳು! ಇದು ತಾಮ್ರ ತಯಾರಿಕೆಯಲ್ಲಿ ಜಗತ್ತಿನ ಕೆಲವೇ ಬೃಹತ್ ಕೈಗಾರಿಕೆಗಳಲ್ಲಿ ಒಂದು. ಸ್ಟೆರ್‍ಲೈಟ್ ಕಂಪನಿಯ ತೂತ್ತುಕುಡಿ ಘಟಕದ ಸಾಮಥ್ರ್ಯವನ್ನು ವಾರ್ಷಿಕ 8 ಲಕ್ಷ ಟನ್‍ಗಳಿಗೆ ವಿಸ್ತರಿಸುವ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಮತಿ ಕೊಟ್ಟಿವೆ. ಹೊಸ ಘಟಕದ ನಿರ್ಮಾಣ ಕಾರ್ಯವೂ ಬಿರುಸಿನಿಂದ ನಡೆದಿತ್ತು. ಆಗಲೇ ಹೈರಾಣಾಗಿರುವ ಜನರನ್ನು ಈ ಕ್ರಮ ಮತ್ತಷ್ಟು ಕೆರಳಿಸಿತ್ತು.

ತಮ್ಮ ಜೀವನದ ಜೊತೆ ಚೆಲ್ಲಾಟ ಆಡುತ್ತಿರುವ ಈ ಕಂಪನಿಯನ್ನು ಶಾಶ್ವತವಾಗಿ ಮುಚ್ಚಬೇಕೆಂಬುದು ಈಗ ತೂತ್ತುಕುಡಿಯ ಜನರ ಒಕ್ಕೊರಲಿನ ಆಗ್ರಹವಾಗಿದೆ. ಕಳೆದ ನೂರು ದಿನಗಳಿಂದ ಧರಣಿ, ಸತ್ಯಾಗ್ರಹ ನಡೆಸಿದ್ದು ಕೂಡ ಈ ಒಂದು ಬೇಡಿಕೆಗಾಗಿಯೇ. ಜಿಲ್ಲಾಧಿಕಾರಿ ಕಚೇರಿಗೆ ಹೊರಟಿದ್ದ ಮೆರವಣಿಗೆಯನ್ನು ಅಡ್ಡಗಟ್ಟಿದ ಪೊಲೀಸ್‍ಪಡೆಗಳು ಜನರಲ್ ಡಯರ್‍ನ ಮಾದರಿಯಲ್ಲಿ ಫೈರಿಂಗ್ ನಡೆಸಿವೆ. ಎಲ್ಲಕ್ಕಿಂತಲೂ ಆಘಾತಕಾರಿಯಾದ ಅಂಶವೆಂದರೆ, ಹೀಗೆ ಗೋಲಿಬಾರ್ ನಡೆಸಬೇಕಾದ ಸ್ಥಿತಿಯೂ ಅಲ್ಲಿರಲಿಲ್ಲ; ಗೋಲಿಬಾರ್‍ಗೆ ಮುನ್ನ ಕೈಗೊಳ್ಳಲೇಬೇಕಾದ ಯಾವ ಕ್ರಮವನ್ನೂ ಪೊಲೀಸರು ಅನುಸರಿಸಲಿಲ್ಲ. ಜನರ ಗುಂಪು ನಿಯಂತ್ರಣಕ್ಕೆ ಬಾರದೇ ಇದ್ದಾಗ ಜನರನ್ನು ಚದುರಿಸಲು ಟಿಯರ್ ಗ್ಯಾಸ್ ಬಳಸಬೇಕು, ನಂತರ ರಬ್ಬರ್ ಗುಂಡುಗಳನ್ನು ಬಳಸಬೇಕು, ಫೈರಿಂಗ್ ಮಾಡುವ ಮುಂಚೆ ಧ್ವನಿವರ್ದಕ ಬಳಸಿ ಅನೌನ್ಸ್ ಮಾಡಬೇಕು, ಗಾಳಿಯಲ್ಲಿ ಗುಂಡು ಹಾರಿಸಬೇಕು. ಇವೆಲ್ಲ ಕ್ರಮಗಳೂ ಫಲ ನೀಡದಿದ್ದಾಗ ಅಂತಿಮವಾಗಿ ಸೊಂಟದ ಕೆಳಗಿನ ಭಾಗಕ್ಕೆ ಗುಂಡು ಹಾರಿಸಬಹುದು, ಅದೂ ಸಂಬಂಧಪಟ್ಟ ವರಿಷ್ಠಾಧಿಕಾರಿಯ ಆದೇಶ ಬಂದ ನಂತರ.

ಆದರೆ ಸ್ಟೆರ್‍ಲೈಟ್ ಕಂಪನಿಯ ಕೃಪಾಕಟಾಕ್ಷದಲ್ಲಿದ್ದ ತಮಿಳುನಾಡಿನ ಪೊಲೀಸ್ ಮತ್ತು ಆಡಳಿತ ಯಂತ್ರಾಂಗಕ್ಕೆ ಈ ಯಾವ ಕಾನೂನು ಕ್ರಮಗಳನ್ನು ಅನುಸರಿಸುವುದೂ ಬೇಕಿರಲಿಲ್ಲ. ಅವರಿಗೆ ಬೇಕಾಗಿದ್ದುದೆಲ್ಲಾ ಒಂದೆ. ತಮ್ಮ ‘ನೆಚ್ಚಿನ’ ಕಂಪನಿಯ ವಿರುದ್ಧದ ದನಿಗಳನ್ನು ಅಡಗಿಸುವುದಷ್ಟೇ ಅವರ ಅಜೆಂಡಾ ಆಗಿತ್ತು. ಆದ್ದರಿಂದಲೇ ವಿಶೇಷ ಸೇನಾ ಕಾರ್ಯಾಚರಣೆಯಲ್ಲಿ ಬಳಸಲಾಗುವ ಸ್ನೈಪರ್ ರೈಫಲ್ಲುಗಳನ್ನು ಬಳಸಲಾಯ್ತು. ಶಾರ್ಪ್ ಶೂಟರ್‍ಗಳನ್ನು ಕರೆಸಲಾಯ್ತು. ಪೊಲೀಸ್ ಸಮವಸ್ತ್ರವಿಲ್ಲದೆ ಸಾಮಾನ್ಯ ದಿರಿಸಿನಲ್ಲಿದ್ದ ಶೂಟರ್‍ಗಳು ಪೋಲೀಸ್ ವಾಹನದ ಮೇಲೇರಿ ತಮ್ಮ ಟಾರ್ಗೆಟ್‍ಗಳಿಗೆ ಗುರಿಮಾಡಿ ಗುಂಡು ಹಾರಿಸುತ್ತಿದ್ದ ವಿಡಿಯೋಗಳು ಮಾಧ್ಯಮಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗಿವೆ. ಅಲ್ಲದೆ, ‘ಕನಿಷ್ಟ ಒಂದು ಹೆಣವಾದರೂ ಬೀಳಬೇಕು’ ಎಂಬ ಪೊಲೀಸರ ನಡುವಿನ ಸಂಭಾಷಣೆ ಈಗ ವೈರಲ್ ಆಗಿದೆ.

ಪರಿಣಾಮವಾಗಿ, 11 ವರ್ಷದ ಬಾಲಕಿ, 17 ವರ್ಷದ ಒಬ್ಬ ಹುಡುಗ, ಹಲವು ಮಹಿಳೆಯರೂ ಒಳಗೊಂಡು ಒಟ್ಟು 13 ಮಂದಿ ಹತರಾಗಿದ್ದಾರೆ. ಇನ್ನೂ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ನೂರಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾದ ಪೊಲೀಸ್ ಫೈರಿಂಗ್ ಆದೇಶ ಕೊಟ್ಟವರು ಯಾರು ಎಂಬುದೇ ನಿಗೂಡ! ಕೊನೆಗೆ ಹೇಗೋ ಮಾಡಿ ಒಬ್ಬ ತಹಸೀಲ್ದಾರ್‍ನ ತಲೆಗೆ ಈ ಜವಾಬ್ದಾರಿ ಕಟ್ಟಿ, ಆತನನ್ನು ಸಸ್ಪೆಂಡ್ ಮಾಡುವ ನಾಟಕ ನಡೆಸಿ ಕಣ್ಣೊರೆಸುವ ಪ್ರಯತ್ನ ನಡೆಸಿದೆ. ‘ದುಷ್ಕರ್ಮಿಗಳು’ ಪೊಲೀಸರ ಮೇಲೆ ಮಾರಣಾಂತಿಕ ದಾಳಿ ನಡೆಸಿದರು, ಆತ್ಮರಕ್ಷಣೆಯ ಸಲುವಾಗಿ ಪೊಲೀಸರು ‘ಅನಿವಾರ್ಯವಾಗಿ’ ಗುಂಡು ಹಾರಿಸಬೇಕಾಯ್ತು ಎಂಬ ಮಾಮೂಲಿ ಸ್ಟೋರಿಯನ್ನು ಸರ್ಕಾರ ಮತ್ತು ಪೊಲೀಸರು ಹೇಳುತ್ತಿದ್ದಾರೆ. ಆದರೆ ಅದನ್ನು ತಮಿಳುನಾಡಿನ ಜನ ಮಾತ್ರವಲ್ಲ; ಸಂವೇದನೆಯುಳ್ಳ ಯಾವೊಬ್ಬ ಮನುಷ್ಯರೂ ನಂಬಲು ತಯಾರಿಲ್ಲ. ಯಾಕೆಂದರೆ ಸತ್ಯ ಎಲ್ಲರ ಕಣ್ಣೆದುರಿಗಿದೆ. ಪೊಲೀಸರ ಈ ಹೇಳಿಕೆಯ ಬಗ್ಗೆ ‘ಆತ್ಮ ರಕ್ಷಣೆಗಾಗಿ ಗುಂಡು ಹಾರಿಸುವವರು ಸ್ನೈಪರ್ ರೈಫಲ್‍ಗಳನ್ನು ಬಳಸಿ, ವಾಹನದ ಮೇಲೇರಿ ಗುಂಡು ಹಾರಿಸುತ್ತಾರಾ?’ ಎಂಬ ನಟ ಕಮಲ್ ಹಾಸನ್ ಪ್ರಶ್ನೆಗೆ ಸದ್ಯ ಯಾರಬಳಿಯೂ ಉತ್ತರವಿಲ್ಲ. ಒಂದಂತೂ ಸ್ಪಷ್ಟ. ಫೈರಿಂಗ್ ಮಾಡಿ ಹೋರಾಟಗಾರರ ಹೆಣಗಳನ್ನು ಕೆಡವಬೇಕೆಂಬ ಒಂದು ಪೂರ್ವನಿಗದಿತ ಯೋಜನೆಯ ಭಾಗವಾಗಿಯೇ ಇಷ್ಟೆಲ್ಲಾ ನಡೆದಿದೆ. ಇದು ಬಹುತೇಕ ವಿಶ್ಲೇಷಕರ ಅಭಿಪ್ರಾಯ ಕೂಡ.

ಈ ಹತ್ಯಾಕಾಂಡದ ದಾರುಣ ಸುದ್ದಿ ತಿಳಿದು ತಮಿಳುನಾಡಿನ ಜನತೆ ಬೀದಿಗಿಳಿದರು. ಸಂಘಟನೆಗಳು, ವಿರೋಧ ಪಕ್ಷಗಳೂ ಹೋರಾಟಕ್ಕಿಳಿದಿದ್ದಾರೆ. ಈ ಪ್ರತಿಭಟನೆಯ ದನಿ ದೇಶಾದ್ಯಂತ ಮಾರ್ದನಿಸಿದೆ. ವೇದಾಂತ ಕಂಪನಿಯ ಮಾಲಿಕ ಅನಿಲ್ ಅಗರ್‍ವಾಲ್‍ನ ಲಂಡನ್ ನಿವಾಸದೆದುರು ಸಾವಿರಾರು ಮಂದಿ ಒಗ್ಗೂಡಿ ಪ್ರತಿಭಟಿಸಿದ್ದಾರೆ. ಲಂಡನ್‍ನ ಹೈಕಮಿಷನರ್ ಕಚೇರಿಯ ಮುಂದೆಯೂ ಪ್ರತಿಭಟನೆ ನಡೆದಿದೆ.

ಹೀಗೆ ತಮ್ಮ ಬಂಡವಾಳ ಬಯಲಾಗುತ್ತಿದ್ದಂತೆ, ಅಲ್ಲಿನ ಜಿಲ್ಲಾಧಿಕಾರಿ ಮತ್ತು ಎಸ್‍ಪಿಯನ್ನು ವರ್ಗಾವಣೆ ಮಾಡುವ ನಾಟಕ ನಡೆಸಿದ್ದಾರೆ. ಜೊತೆಗೆ ‘ಕ್ರಿಶ್ಚಿಯನ್ ಮೆಷಿನರಿಗಳ ಕುತಂತ್ರ’, ‘ಫಾರಿನ್ ಫಂಡೆಡ್ ಸಂಘಟನೆಗಳು, ಸಮಾಜ ಘಾತುಕ ಶಕ್ತಿಗಳು ಇದರಲ್ಲಿ ನುಸುಳಿವೆ’ ಎಂಬಂಥಾ ಮಾಮೂಲಿ ಹಳಸಲು ವಾದಗಳನ್ನು ತೂರಿಬಿಡುವ ಹತಾಶ ಪ್ರಯತ್ನಕ್ಕೆ ಈಗ ಸರ್ಕಾರ ಇಳಿದಿದೆ. ಏನೇ ಆದರೂ ಸರಿ, ಸ್ಟೆರ್‍ಲೈಟ್ ಕಂಪನಿಯ ಮಾಲಿಕರಿಗೆ ಮಾತ್ರ ಯಾವುದೇ ಚ್ಯುತಿ ಬರಬಾರದಷ್ಟೇ. ಇದು ಕೇಂದ್ರ ಹಾಗೂ ರಾಜ್ಯದ ಆಡಳಿತಾರೂಡ ಸರ್ಕಾರಗಳ ಆದ್ಯತೆ.

ಸ್ಟೆರ್‍ಲೈಟ್ ಅನಿವಾರ್ಯತೆ ಯಾರಿಗಿದೆ?

ತಮಿಳುನಾಡಿನ ಜನರಿಗಾಗಲಿ, ಭಾರತದ ಜನರಿಗಾಗಲಿ ಈ ಸ್ಟೆರ್‍ಲೈಟ್‍ನ ಅನಿವಾರ್ಯತೆ ಖಂಡಿತಾ ಇಲ್ಲ. ಆದರೆ ಸರ್ಕಾರಗಳು ಹಾಗೂ ಅವರ ಆಸ್ಥಾನ ಪಂಡಿತರು ಇಂಥಾ ಕಂಪನಿಗಳು ಬಂಡವಾಳ ತೊಡಗಿಸುವುದರಿಂದಲೇ ದೇಶದ ಅಭಿವೃದ್ಧಿ ಎಂಬ ಸಿದ್ಧಾಂತವನ್ನು ವ್ಯವಸ್ಥಿತವಾಗಿ ಹರಡಿಬಿಟ್ಟಿದ್ದಾರೆ. ಆದರೆ ಈ ಕಂಪನಿಯ ವಾಸ್ತವ ಇನ್ನಷ್ಟು ವಿಚಿತ್ರವಾಗಿದೆ. ಸ್ಟೆರ್‍ಲೈಟ್ ಕಂಪನಿಯ ಮಾಲಿಕತ್ವ ವೇದಾಂತ ರಿಸೋರ್ಸಸ್ ಎಂಬ ಕಂಪನಿಯ ಕೈಯಲ್ಲಿದೆ. ಈ ವೇದಾಂತ ಕಂಪನಿ ನಮ್ಮಲ್ಲಿ ಬಂಡವಾಳ ಹೂಡಿ, ಉದ್ಧಾರ ಮಾಡೋದು ಹಾಗಿರಲಿ, ನಮ್ಮದೇ ಬ್ಯಾಂಕುಗಳ ಲಕ್ಷಾಂತರ ಕೋಟಿ ಬಂಡವಾಳವನ್ನು ನುಂಗಿ ನೀರು ಕುಡಿದಿದೆ. 2015ರ ಅಂಕಿ ಅಂಶಗಳ ಪ್ರಕಾರ ವೇದಾಂತ ಕಂಪನಿ ನಮ್ಮ ರಾಷ್ಟ್ರೀಯ ಬ್ಯಾಂಕುಗಳಿಂದ 1.03 ಲಕ್ಷ ಕೋಟಿ ಸಾಲ ಪಡೆದು ಸುಸ್ತಿದಾರ ಪಟ್ಟಿಯಲ್ಲಿದೆ.

ಈ ವೇದಾಂತ ಕಂಪನಿಯ ಮಾಲಿಕ ಅನಿಲ್ ಅಗರ್‍ವಾಲ್ ಎಂಬ ಮಾರ್ವಾಡಿಯ ಕತೆ ಕೇಳಿದರೆ ಬಹುಶಃ ಯಾರೂ ನಂಬಲಿಕ್ಕಿಲ್ಲ. ಪಾಟ್ನಾ ಮೂಲದ ಈತ ಮೂಲತಃ ಒಬ್ಬ ಸಣ್ಣ ಗುಜರಿ ವ್ಯಾಪಾರಿ. 80ರ ದಶಕದಲ್ಲಿ ತನ್ನ ವ್ಯಾಪಾರದ ವಿಸ್ತರಣೆಗಾಗಿ ಈತ 25 ಲಕ್ಷ ರೂಪಾಯಿಗಳ ಸಾಲದ ಪಡೆಯಲು ಪಟ್ಟಪಾಡು ಅಷ್ಟಿಷ್ಟಲ್ಲ. ವಿವಿಧ ಬ್ಯಾಂಕುಗಳ ಮುಂದೆ ವರ್ಷಾನುಗಟ್ಟಲೆ ಅಲೆದರೂ ಇವನಿಗೆ 25 ಲಕ್ಷ ಸಾಲ ಕೊಡಲು ಯಾರೂ ಮುಂದಾಗಲಿಲ್ಲ. ಕೊನೆಗೆ ಈತನಿಗೆ ಆ ಸಾಲ ಸಿಕ್ಕಿದ್ದು ಕರ್ನಾಟಕದ ಮಣಿಪಾಲ ಮೂಲದ ಸಿಂಡಿಕೇಟ್ ಬ್ಯಾಂಕ್‍ನಿಂದ. ತನ್ನ ಮೇಲೆ ನಂಬಿಕೆಯಿಟ್ಟು 25 ಲಕ್ಷ ಸಾಲ ಕೊಟ್ಟ ಬ್ಯಾಂಕ್ ಮ್ಯಾನೇಜರ್‍ನನ್ನು ಹೊಗಳಿ ಈತ ತನ್ನ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾನೆ. ಆ 25 ಲಕ್ಷ ಮೊತ್ತವೇ ತನ್ನ ಜೀವನದ ಟರ್ನಿಂಗ್ ಪಾಯಿಂಟ್ ಎಂದು ಹೇಳಿಕೊಂಡಿದ್ದಾನೆ.

ನಂತರ ಈತ ಮಾಡಿದ್ದೇನು? ವಿವಿಧ ರಾಜ್ಯಗಳ ಹಾಗೂ ಕೇಂದ್ರದ ಸರ್ಕಾರಿ ಅಧಿಕಾರಿಗಳನ್ನು ಮತ್ತು ರಾಜಕಾರಣಿಗಳನ್ನು ಬುಟ್ಟಿಗೆ ಹಾಕಿಕೊಂಡು ಸರ್ಕಾರಿ ಸ್ವಾಮ್ಯದ ಸ್ವತ್ತುಗಳನ್ನು ದುಗ್ಗಾಣಿ ಬೆಲೆಗೆ ವಶಪಡಿಸಿಕೊಂಡು ಕೋಟಿ ಕೋಟಿ ಬಾಚುತ್ತಾ ನಡೆದ. ನಂತರ ಮೈನಿಂಗ್ ಧಂದೆಗೆ ಇಳಿದು ಬಳ್ಳಾರಿ ಗಣಿಧಣಿಗಳಂತೆ ಸಾವಿರಾರು ಕೋಟಿಗಳನ್ನು ಲೂಟಿಹೊಡೆದ. ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಯೋಜನೆ ಅತ್ಯಂತ ದೊಡ್ಡ ಫಲಾನುಭವಿಗಳಲ್ಲಿ ಈತನೂ ಅಗ್ರಗಣ್ಯ. ಭಾರೀ ಲಾಭದಲ್ಲಿದ್ದ ಸರ್ಕಾರಿ ಸ್ವಾಮ್ಯದ ಅಲ್ಯುಮಿನಿಯಂ, ಬಾಕ್ಸೈಟ್ ಉದ್ಯಮಗಳನ್ನು ಅಂದಿನ ಎನ್‍ಡಿಎ ಸರ್ಕಾರ ಈತನ ಬಾಯಿಗೆ ಹಾಕಿತು. ಜೊತೆಗೆ ಹೊಂದಿಕೊಂಡಿದ್ದ ಅದಿರು ಗಣಿಗಳನ್ನೂ ನೀಡಿತು. ಅಂದಿನ ರಾಜಕಾರಣಿಗಳೂ, ಅಧಿಕಾರಿಗಳೂ ಕೂಡ ಒಂದುರೀತಿಯಲ್ಲಿ ಈತನ ಪಾಲುದಾರರಾಗಿದ್ದರು. ಹೀಗೆ ರಾಜಕಾರಣಿ-ಅಧಿಕಾರಿಗಳ ಪಾಲುದಾರಿಕೆಯೊಂದಿಗೆ, ನಮ್ಮದೇ ಬ್ಯಾಂಕುಗಳ ಬಂಡವಾಳವನ್ನು ಬಳಸಿಕೊಂಡು ಒಂದಾದ ನಂತರ ಒಂದರಂತೆ ವಿವಿಧ ಕ್ಷೇತ್ರಗಳಿಗೆ ಈತ ಎಂಟ್ರಿ ಕೊಟ್ಟಿದ್ದಾನೆ. ತೈಲ ಸಂಸ್ಕರಣೆ, ಗಣಿಗಾರಿಕೆ, ಉಕ್ಕು, ತಾಮ್ರ, ಅಲ್ಯುಮಿನಿಯಂ ಮುಂತಾದ ಲೋಹಗಳ ತಯಾರಿಕೆ ಮುಂತಾದ ನಾನಾ ಕ್ಷೇತ್ರಗಳಿಗೆ ವಿಸ್ತರಿಸಿಕೊಂಡಿದ್ದಾನೆ.

ಹೀಗಿದ್ದಾಗ ವೇದಾಂತ ಹೆಸರಿನಲ್ಲಿ ಬಾಂಬೆ ಷೇರು ಮಾರುಕಟ್ಟೆಯಲ್ಲಿದ್ದ ಕಂಪನಿ ನೋಂದಣಿಯನ್ನು ರದ್ದುಪಡಿಸಿಕೊಂಡು, ವೇದಾಂತ ಪಿಎಲ್‍ಸಿ ಹೆಸರಿನಲ್ಲಿ ಲಂಡನ್ ಸ್ಟಾಕ್ ಎಕ್ಸ್‍ಚೇಂಜ್‍ನಲ್ಲಿ 2004ರಲ್ಲಿ ನೋಂದಣಿ ಮಾಡಿಸಿದ್ದಾನೆ. ಅಲ್ಲಿಂದಾಚೆಗೆ ಈ ಮಹಾನುಭಾವನ ಕಂಪನಿ ಫಾರಿನ್ ಕಂಪನಿ ಎಂಬ ಹಣೆಪಟ್ಟಿ ತಗುಲಿಸಿಕೊಂಡು ವ್ಯವಹರಿಸಲು ಶುರುಮಾಡಿದೆ. ವಿದೇಶಿ ಹೂಡಿಕೆಯನ್ನು ತರುವ ನೆಪದಲ್ಲಿ ಭಾರತದ ಸಂಪನ್ಮೂಲಗಳನ್ನು ಹಾಗೂ ಮಾರುಕಟ್ಟೆಯನ್ನು ದೋಚಲು ನಮ್ಮ ಸರ್ಕಾರಗಳು ರತ್ನಗಂಬಳಿ ಹಾಸಿಕೊಟ್ಟಿವೆ. ಜಾಗತೀಕರಣದ ಒಳಮರ್ಮಗಳಲ್ಲಿ ಇಂಥಾ ಮಸಲತ್ತೂ ಕೂಡ ಪ್ರಮುಖವಾದುದು.

ಹೀಗೆ ದೈತ್ಯಾಕಾರದಲ್ಲಿ ಬೆಳೆದಿರುವ ಅನಿಲ್ ಅಗರ್‍ವಾಲ್ ಇಂದಿನ ಪ್ರಧಾನಿ ನರೇಂದ್ರಮೋದಿಯವರಿಗೆ ಪರಮಾಪ್ತ. ಕಳೆದ ತಿಂಗಳು ಪ್ರಧಾನಿಯ ಲಂಡನ್ ಭೇಟಿಯ ವೇಳೆಯಲ್ಲಿ ವೇದಾಂತ ಕಂಪನಿ ‘ಮೋದಿಯವರ ಅಬಿವೃದ್ಧಿಯ ಯೋಜನೆಗಳಲ್ಲಿ ತಾವು ಹೆಮ್ಮೆ ಪಾಲುದಾರರು’ ಎಂದು ಅಲ್ಲಿನ ಪತ್ರಿಕೆಗಳಿಗೆ ಜಾಹಿರಾತು ಕೂಡ ನೀಡಿತ್ತು. ಹೀಗೆ ಹಳ್ಳಿಯಿಂದ ದೆಲ್ಲಿಯವರೆಗೆ ಈತನ ಕಬಂಧ ಬಾಹುಗಳು ಚಾಚಿಕೊಂಡಿವೆ. ಸದ್ಯ ತಮಿಳುನಾಡು ಸರ್ಕಾರ ಸ್ಟೆರ್‍ಲೈಟ್ ಕಂಪನಿ ಮುಚ್ಚುವುದಾಗಿ ಘೋಷಿಸಿದ್ದರೂ ಅದು ಕೇವಲ ತಾತ್ಕಾಲಿಕ ನಡೆ ಮಾತ್ರ. ಈಗಿನ ಹೋರಾಟದ ಕಾವು ತಣಿಸುವ ಒಂದು ಉಪಕ್ರಮವಷ್ಟೆ. ಹೀಗೆ ಒಮ್ಮೆ ಮುಚ್ಚುವುದು, ಮತ್ತೆ ಕೆಲವು ದಿನಗಳಲ್ಲೇ ಪುನರಾರಂಭ ಮಾಡುವುದು ಇದು ಸ್ಟೆರ್‍ಲೈಟ್ ಇತಿಹಾಸದಲ್ಲಿ ಈಗಾಗಲೇ ಐದು ಬಾರಿ ಪುನರಾವರ್ತನೆಯಾಗಿದೆ.

ಅಭಿವೃದ್ದಿಯ ಹೆಸರಿನಲ್ಲಿ, ವಿದೇಶಿ ಬಂಡವಾಳದ ಮುಸುಕಿನಲ್ಲಿ ಭಾರತದ ಆರ್ಥಿಕತೆ, ರಾಜಕೀಯ, ಸಂಪನ್ಮೂಲ, ಜನಜೀವನ ಎಲ್ಲೆಡೆ ಅಮರಿಕೊಂಡಿರುವ ಈ ದುಷ್ಟಶಕ್ತಿಗಳನ್ನು ತೊಲಗಿಸದಿದ್ದರೆ ಭಾರತೀಯರಿಗೆ ನೆಮ್ಮದಿಯೆಂಬುದು ಕನಸಿನ ಮಾತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...