Homeರಾಜಕೀಯಸಾಲಮನ್ನಾ : ರಾಜಕೀಯ ಜಾಣ್ಮೆ ತೋರಲು ಕುಮಾರಸ್ವಾಮಿಗೆ ಅವಕಾಶ

ಸಾಲಮನ್ನಾ : ರಾಜಕೀಯ ಜಾಣ್ಮೆ ತೋರಲು ಕುಮಾರಸ್ವಾಮಿಗೆ ಅವಕಾಶ

- Advertisement -
- Advertisement -
  • ನೀಲಗಾರ |

ಜೆಡಿಎಸ್‍ನ ಪ್ರಣಾಳಿಕೆ ರೂಪಿಸುವಾಗ ತನಗೆ ಸಂಪೂರ್ಣ ಬಹುಮತ ಬರುವುದಿಲ್ಲವೆಂಬುದು ಕುಮಾರಸ್ವಾಮಿಯವರಿಗೆ ಖಚಿತವಾಗಿ ಗೊತ್ತಿತ್ತು. ಆದರೆ, ಅತಂತ್ರ ವಿಧಾನಸಭೆಯಾದಾಗ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದ್ದೇ ಇತ್ತಾದ್ದರಿಂದ ಸಾಲಮನ್ನಾ ಮಾಡಬೇಕಾದ ಜವಾಬ್ದಾರಿ ತನ್ನ ಮೇಲೆ ಇರುತ್ತದೆ ಎಂಬುದು ಗೊತ್ತಿರದೇ, ರೈತರ ಸಾಲಮನ್ನಾ ಭರವಸೆ ಅವರು ನೀಡಿದ್ದರು ಎಂದುಕೊಳ್ಳಲಾಗದು. ಜೆಡಿಎಸ್ ಎಂದರೆ ದೇವೇಗೌಡರೂ ಇದ್ದಾರೆ ಮತ್ತು ಕುಮಾರಸ್ವಾಮಿ ಸಹಾ ಅಷ್ಟು ಅಪಕ್ವ ರಾಜಕಾರಣಿ ಅಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಕೆಲವೊಮ್ಮೆ ಅಸಾಧ್ಯ ಎಂದು ತೋರುವ ಚುನಾವಣಾ ಭರವಸೆಗಳನ್ನೂ ರಾಜಕೀಯ ಪಕ್ಷಗಳು ಈಡೇರಿಸಿವೆ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಅಂತಹ ಧೈರ್ಯ ಇನ್ನೂ ಹೆಚ್ಚು. ಉಳಿದ ಬಾಬ್ತುಗಳಿಗೆ ಕಡಿಮೆ ಹಣ ನೀಡಿ, ಕೆಲವು ಜನಪ್ರಿಯ ಕಾರ್ಯಕ್ರಮಗಳನ್ನು ಮಾತ್ರ ಮುಂದಿಟ್ಟುಕೊಂಡು ಅಧಿಕಾರ ನಡೆಸಿಕೊಂಡು ಹೋಗಲು ಬೇಕಾದ ರಿಸ್ಕ್ ಮತ್ತು ಲೆಕ್ಕಾಚಾರ ಎರಡರ ಬಗ್ಗೆಯೂ ಅವರಿಗೆ ಅರಿವಿರುತ್ತದೆ. ಅಂತಿಮವಾಗಿ ಅಂತಹ ಆರ್ಥಿಕ ನಡೆಯಿಂದ ರಾಜ್ಯಕ್ಕೆ ಒಳ್ಳೆಯದಾಯಿತೋ ಅಥವಾ ಕೆಟ್ಟದಾಯಿತೋ ಎಂಬುದು ಬೇರೆ ಸಂಗತಿ. ಆದರೆ, ಹಾಗೂ ನಡೆಸಲು ಸಾಧ್ಯವಿದೆ ಎಂಬುದಕ್ಕೆ ದಕ್ಷಿಣ ಭಾರತದ ನಮ್ಮ ನೆರೆಯ ರಾಜ್ಯಗಳಲ್ಲಿಯೇ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.

ಆದರೆ, ರಾಜ್ಯದ ಒಟ್ಟಾರೆ ಬಜೆಟ್‍ನ ಪ್ರಮಾಣವನ್ನೂ ಮೀರಿ ಹೋಗುವಷ್ಟು ಚುನಾವಣಾ ಭರವಸೆಗಳೇ ಇದ್ದರೆ? ಜೆಡಿಎಸ್‍ನ ಪ್ರಣಾಳಿಕೆ ಅಂತಹ ಹಲವು ಅಂಶಗಳನ್ನು ಹೊಂದಿದೆ. ಸಾಲಮನ್ನಾ ಬಿಡಿ, ಈ ಐದು ವರ್ಷಗಳಲ್ಲಿ ಒಮ್ಮೆ ಮಾತ್ರ ಮಾಡಬಹುದು. ಆದರೆ, 24 ವರ್ಷಗಳನ್ನು ಮೀರಿದ ಬಿಪಿಎಲ್ ಮಹಿಳೆಯರಿಗೆಲ್ಲರಿಗೂ ತಲಾ 2,000 ರೂ ಮಾಸಾಶನ ನೀಡುವ ವಾಗ್ದಾನ ಅವರ ಪ್ರಣಾಳಿಕೆಯಲ್ಲಿದೆ. ಪ್ರತೀ ವರ್ಷವೂ ಸುಮಾರು 30,000 ಕೋಟಿ ರೂ.ಗಳನ್ನು ಅದಕ್ಕೆಂದೇ ಎತ್ತಿಡಬೇಕಾಗುತ್ತದೆ. ಅದಂತೂ ಸಾಧ್ಯವೇ ಇರದ ಭರವಸೆ. ಮದ್ಯಪಾನ ನಿಷೇಧದ ಭರವಸೆ ನೀಡಿ ಮಹಿಳೆಯರ ಮತ ಪಡೆಯಬಹುದೆಂಬ ಧೈರ್ಯ ತೋರಲು ಸಾಧ್ಯವಾಗದ ಪಕ್ಷ ಮಾತ್ರ ಇಂತಹ ಭರವಸೆ ನೀಡುತ್ತದೆ.

ಚುನಾವಣೆಗೆ ಮುಂಚೆಯೇ ಸಾಲಮನ್ನಾಕ್ಕೆ ಎಲ್ಲಿಂದ ಹಣ ತರಬಹುದು ಎಂಬುದಕ್ಕೆ ತನ್ನದೇ ಯೋಜನೆಗಳಿವೆ ಎಂದು ಕುಮಾರಸ್ವಾಮಿ ಹೇಳಿದ್ದರು. ಜಿಎಸ್‍ಟಿಯ ಕಾರಣಕ್ಕೆ ರಾಜ್ಯವು ನೇರವಾಗಿ ಸಂಗ್ರಹಿಸಬಹುದಾದ ತೆರಿಗೆಯ ವ್ಯಾಪ್ತಿಯು ಮಿತಿಗೊಳಪಟ್ಟಿದೆ. ಹೀಗಿದ್ದ ಮೇಲೆ ಅವರ ಯೋಜನೆ ಏನಾಗಿರಬಹುದು? ಒಂದು ಮೂಲದ ಪ್ರಕಾರ, ಈಗಾಗಲೇ ಎ.ಟಿ.ರಾಮಸ್ವಾಮಿ ವರದಿ ಸೇರಿದಂತೆ ಕೆಲವು ಅಂದಾಜಿನ ಪ್ರಕಾರ ಬೆಂಗಳೂರು ಸುತ್ತಲು ಅಕ್ರಮವಾಗಿ ಒತ್ತುವರಿಯಾಗಿರುವ ಸಾವಿರಾರು ಎಕರೆ ಭೂಮಿಯ ಮೇಲೆ ಹಾಕಬಹುದಾದ ದಂಡ ಅಥವಾ ಮುಟ್ಟುಗೋಲು ಮಾಡಿಕೊಂಡು ಹರಾಜು ಹಾಕುವುದರಿಂದ ಬರುವ ಹಣದಲ್ಲಿ ಸಾಲಮನ್ನಾ ಮಾಡಬಹುದು. ಅದರ ಸದ್ಯದ ಮಾರುಕಟ್ಟೆ ಮೌಲ್ಯದ ಅರ್ಧದಷ್ಟು ಸಿಕ್ಕಿದರೂ, ಇದು ಸಾಧ್ಯ ಎಂಬ ಲೆಕ್ಕಾಚಾರವು ಕುಮಾರಸ್ವಾಮಿಯವರ ತಲೆಯಲ್ಲಿದೆಯಂತೆ. ಇದನ್ನು ಸಂಪೂರ್ಣ ಅಸಾಧ್ಯ ಎನ್ನಲಾಗದು. ಇದರ ಜೊತೆಗೆ ಗಣಿಗಾರಿಕೆಯ ಮೇಲೆ ಹೇರಬಹುದಾದ ದಂಡ, ತೆರಿಗೆ, ರಾಯಲ್ಟಿ ಹೆಚ್ಚಳದ ಮೂಲಕವೂ ವರಮಾನ ಗಳಿಕೆ ಸಾಧ್ಯ ಎಂಬುದು ಬಹುಶಃ ಅವರ ತಲೆಯಲ್ಲಿರುವ ಇನ್ನೊಂದು ಸಾಧ್ಯತೆ.

ಕೆಲವು ಅಕ್ರಮಗಳನ್ನು ‘ಬಲಿ ಹಾಕುವ’ ಮೂಲಕ ಒಂದು ಕಡೆ ಹೀರೋ ಇಮೇಜ್ ಸಹಾ ಸಂಪಾದಿಸಬಹುದು, ಜನಪ್ರಿಯ ಕಾರ್ಯಕ್ರಮಗಳಿಗೆ ಹಣವನ್ನೂ ಹೊಂದಿಸಿಕೊಳ್ಳಬಹುದು. ಆದರೆ, ಪಕ್ಷದೊಳಗೆ ಯಾವ ವಿರೋಧವೂ ಇಲ್ಲದೇ ತನ್ನ ಮಾತೇ ಅಂತಿಮ ಎಂಬ ಪರಿಸ್ಥಿತಿ ಇದ್ದಾಗ ಮಾತ್ರ ಇಂಥವು ಸಾಧ್ಯ. ಇಲ್ಲವೇ ಸೈದ್ಧಾಂತಿಕವಾಗಿ ಆ ಪಕ್ಷದ ಅಜೆಂಡಾದಲ್ಲಿ ಆ ನೀತಿ ಇದ್ದು, ಅದರ ಸಮರ್ಥನೆಗೆ ಇಡೀ ಪಕ್ಷ ಸನ್ನದ್ಧವಾಗಿರಬೇಕು. ಎಡಪಕ್ಷಗಳು ಕೇರಳ ಮತ್ತು ಬಂಗಾಳದಲ್ಲಿ ಭೂಸುಧಾರಣೆಯನ್ನು ಜಾರಿಗೆ ತಂದದ್ದು ಹಾಗೆಯೇ. ನೋಟು ರದ್ದತಿ ಸಹಾ ಇಂಥದ್ದೇ ಹೀರೋ ಕೆಲಸ ಮಾಡಲು ಹೊರಟ ಮೋದಿಯ ದೊಡ್ಡ ಎಡವಟ್ಟಾಗಿತ್ತು. ಕುಮಾರಸ್ವಾಮಿಯವರಿಗೂ ಅಂತಹ ದೊಡ್ಡ ವಿರೋಧ ಅವರ ಪಕ್ಷದೊಳಗೆ ಬರಲು ಸಾಧ್ಯವಿಲ್ಲ; ಆದರೆ, ಅವರು ನಡೆಸುತ್ತಿರುವುದು ಸಮ್ಮಿಶ್ರ ಸರ್ಕಾರ. ವಿವಿಧ ಖಾತೆಗಳನ್ನು ಪಡೆಯಲಿರುವ ಕಾಂಗ್ರೆಸ್‍ನ ಮಂತ್ರಿಗಳು ತಮ್ಮ ತಮ್ಮ ಇಲಾಖೆಗಳಿಗೂ ಅನುದಾನ ಕೇಳುತ್ತಾರೆ. ಆಗ ಅವೆಲ್ಲವನ್ನೂ ಹತ್ತಿಕ್ಕಿ, ತನಗೆ ವಿಶೇಷ ಇಮೇಜ್ ತಂದುಕೊಡುವ ಜನಪ್ರಿಯ ಕಾರ್ಯಕ್ರಮಗಳಿಗೆ ಮಾತ್ರ ಹಣ ಹೊಂದಿಸುವುದು ಕುಮಾರಸ್ವಾಮಿಯವರಿಗೆ ಸುಲಭವೇ ಎಂಬುದು ಈಗಿನ ಪ್ರಶ್ನೆ.

ಇದನ್ನು ಗಮನಿಸಿಯೇ ಯಡಿಯೂರಪ್ಪನವರು ಸಾಲಮನ್ನಾಕ್ಕೆ ಒತ್ತಾಯಿಸಿ ಬೆನ್ನು ಬೀಳುತ್ತೇನೆ ಎಂಬ ಸೂಚನೆ ರವಾನಿಸಿದ್ದಾರೆ. ಸಾಲಮನ್ನಾ ಮಾಡಿದರೆ, ಸಮ್ಮಿಶ್ರ ಸರ್ಕಾರದಲ್ಲಿ ಬಿರುಕುಂಟಾಗುತ್ತದೆ. ಮಾಡದಿದ್ದರೆ, ಕುಮಾರಸ್ವಾಮಿಯವರನ್ನು ವಚನಭ್ರಷ್ಟರೆಂದು ಬಿಂಬಿಸುವುದು ಸುಲಭವಾಗುತ್ತದೆ ಎಂಬುದು ಅವರ ಲೆಕ್ಕಾಚಾರ. ಆದರೆ, ನಿನ್ನೆ ಕುಮಾರಸ್ವಾಮಿಯವರು 2 ಹಂತದಲ್ಲಿ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. 15 ದಿನಗಳಲ್ಲಿ ಮೊದಲ ಕಂತಿನ ನಿಯಮಗಳು ಹೊರಬೀಳಲಿವೆ. ಬಲಾಢ್ಯರಾದ ಕೆಲವು ವಿಭಾಗಗಳನ್ನು ಹೊರಗಿಟ್ಟು ಉಳಿದವರಿಗೆ ಮೊದಲ ಕಂತಿನಲ್ಲಿ ಬೆಳೆ ಸಾಲಮನ್ನಾ ಮಾಡುವ ಸಾಧ್ಯತೆ ಹೆಚ್ಚಿದೆ. ಹಳೆಯ ಸಾಲ ಮನ್ನಾ ಆಗಿ ಮಳೆಗಾಲದ ಬೆಳೆಗೆ ಹೊಸ ಸಾಲವು -ಸಾಲ ಪಡೆಯುವ ಸಾಧ್ಯತೆ ಇರುವ ರೈತರೆಲ್ಲರಿಗೆ- ಸಿಕ್ಕರೆ, ಅಲ್ಲಿಗೆ ಕುಮಾರಸ್ವಾಮಿಯವರು ಗೆದ್ದಂತೆ. ಸಿದ್ದರಾಮಯ್ಯನವರು 50,000 ರೂ.ವರೆಗಿನ ಸಹಕಾರೀ ಸಾಲಮನ್ನಾ ಮಾಡಿದ ತಕ್ಷಣ, ‘ಸಂಪೂರ್ಣ ಸಾಲಮನ್ನಾ’ದ ಒತ್ತಾಯ ಬಿದ್ದು ಹೋದಂತೆ, ವಿರೋಧ ಪಕ್ಷಕ್ಕೆ ಹೆಚ್ಚಿನ ಅಸ್ತ್ರ ಉಳಿಯುವುದಿಲ್ಲ. ಎರಡನೆಯ ಕಂತಿನ ಸಾಲ ಮನ್ನಾ ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹೋಗುತ್ತದೆ. ಹೊಸ ಸರ್ಕಾರವು ‘ವಿಶೇಷ ಸಂಪನ್ಮೂಲ ಸಂಗ್ರಹ’ದ ಯೋಜನೆಗಳನ್ನು ರೂಪಿಸಿ ಅದರಿಂದ ದೊಡ್ಡ ಪ್ರಮಾಣದ ಸಂಪನ್ಮೂಲ ಸಂಗ್ರಹ ಆಗುವವರೆಗೆ ಇದು ಮುಂದಕ್ಕೆ ಹೋಗಬೇಕಾಗುತ್ತದೆ.

ವಾಸ್ತವದಲ್ಲಿ ಈ ಮಧ್ಯೆ ಆಗಬೇಕಿರುವ ಇನ್ನೊಂದು ‘ರಾಜಕೀಯ’ ರಾಜ್ಯಕ್ಕೆ ಒಳ್ಳೆಯದು ಮಾಡಬಲ್ಲದು. ಕುಮಾರಸ್ವಾಮಿಯವರಿಗೆ ಆಸಕ್ತಿ ಇದ್ದರೆ, ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯನವರು ಕಳೆದ ಸರ್ಕಾರದ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮಂಡಿಸಿದ ಖಾಸಗಿ ನಿರ್ಣಯವನ್ನು ತರಿಸಿ ಓದಿಕೊಳ್ಳಬೇಕು. ಅದರಲ್ಲಿ ತರ್ಕಬದ್ಧವಾಗಿ ಮುಂದಿಡಲಾದ ‘ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್’ ಇದೆ. ರಾಜಸ್ತಾನವನ್ನು ಬಿಟ್ಟರೆ ಅತೀ ಹೆಚ್ಚು ಬರಪೀಡಿತ ಪ್ರದೇಶವನ್ನು ಹೊಂದಿರುವ ರಾಜ್ಯವೆಂದರೆ ಕರ್ನಾಟಕ. ಕಳೆದ 17 ವರ್ಷಗಳಲ್ಲಿ 11 ವರ್ಷಗಳ ಕಾಲ ರಾಜ್ಯದ ಅರ್ಧಕ್ಕೂ ಹೆಚ್ಚು ತಾಲೂಕುಗಳು ಬರವನ್ನೆದುರಿಸಿವೆ. ನಮ್ಮ ಗ್ರಾಮೀಣ ಭಾಗ ತತ್ತರಿಸಿ ಹೋಗಿದೆ. ದೇಶದಲ್ಲಿ ಅತೀ ಹೆಚ್ಚು ರೈತರ ಆತ್ಮಹತ್ಯೆಗಳು ಸಂಭವಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಇಂತಹದೇ ಪರಿಸ್ಥಿತಿಯನ್ನು ಎದುರಿಸುತ್ತಿರುವ, ಕರ್ನಾಟಕದಂತೆಯೇ ‘ಮಳೆ ನೆರಳಿನ ಪ್ರದೇಶ’ವಾದ ವಿದರ್ಭಕ್ಕೆ ಯುಪಿಎ ಸರ್ಕಾರವು ವಿಶೇಷ ಪ್ಯಾಕೇಜ್‍ಅನ್ನು ಘೋಷಿಸಿತ್ತು. ಬಿಹಾರಕ್ಕೆ ಕೇಂದ್ರವು ವಿಶೇಷ ಪ್ಯಾಕೇಜ್ ಕೊಟ್ಟಿದೆ. ತೆಲಂಗಾಣವನ್ನು ಕಳೆದುಕೊಂಡ ಆಂಧ್ರವು ವಿಶೇಷ ಪ್ಯಾಕೇಜ್ ಮತ್ತು ವಿಶೇಷ ಸ್ಥಾನಮಾನ ಕೊಡಲಿಲ್ಲವೆಂದು ಕೇಂದ್ರದ ವಿರುದ್ಧ ತಿರುಗಿಬಿದ್ದಿದೆ. ಮೊದಲಿಗೆ ವೈಎಸ್‍ಆರ್ ಕಾಂಗ್ರೆಸ್‍ನ ಜಗನ್ ಶುರು ಮಾಡಿದ ಈ ‘ಬಂಡಾಯ’ವು ಈಗ ಚಂದ್ರಬಾಬು ನಾಯ್ಡು ತೆಕ್ಕೆಗೆ ಜಾರಿದೆ. ಎರಡು ವರ್ಷಗಳ ಕೆಳಗೆ ದೆಹಲಿಯಲ್ಲಿ ಈ ವಿಚಾರವನ್ನು ಮುಂದಿಟ್ಟುಕೊಂಡು ಜಗನ್ ಬೃಹತ್ ಪ್ರತಿಭಟನೆ ಆಯೋಜಿಸಿದ್ದರು. ಈಗ ಅದೇ ವಿಚಾರದ ಮೇಲೆ ನಾಯ್ಡು ಎನ್‍ಡಿಎಯಿಂದಲೇ ಹೊರಬಂದಿದ್ದಾರೆ.

ಇದೇ ರೀತಿಯ ವಿಶೇಷ ಪ್ಯಾಕೇಜ್‍ಅನ್ನು ಕರ್ನಾಟಕದ ಸರ್ಕಾರ ಮುಂದಿಡಬೇಕು. ಪುಟ್ಟಣ್ಣಯ್ಯನವರ ಖಾಸಗಿ ನಿರ್ಣಯದಲ್ಲಿ ಹೇಳಲಾಗಿರುವಂತೆ ಶೇ.35ಅನ್ನು ರಾಜ್ಯ ಸರ್ಕಾರವು ಹೊರಬೇಕು; ಸಾಲಮನ್ನಾ ಮೂಲಕ ಈಗಾಗಲೇ ತಾವು ಅದನ್ನು ಮಾಡಿದ್ದೇವೆ. ಶೇ.65ನ್ನು ಕೇಂದ್ರ ಕೊಡಬೇಕೆಂದು ವಿಧಾನಮಂಡಲದ ನಿರ್ಣಯ ಮಾಡಿ ಒತ್ತಾಯಿಸಬೇಕು. ಆಗ ನಿಜಕ್ಕೂ ಜನಪರವಾದ ಸಮಸ್ಯೆಯ ಮೇಲೆ ಕೇಂದ್ರವನ್ನು ಎದುರಿಸಬಹುದು. ಕುಮಾರಸ್ವಾಮಿಯವರು ಈ ಜಾಣ್ಮೆಯನ್ನು ತೋರುವರೇ ಕಾದು ನೋಡಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...

ಮಧ್ಯಪ್ರದೇಶ| ವಂದೇ ಮಾತರಂ ಹಾಡಲು ನಿರಾಕರಣೆ; ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್

ಏಪ್ರಿಲ್ 8 ರಂದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನ ಬಜೆಟ್ ಅಧಿವೇಶನದಲ್ಲಿ ಧಾರ್ಮಿಕ ಮತ್ತು ಸಾಂವಿಧಾನಿಕ ಕಾರಣಗಳನ್ನು ಉಲ್ಲೇಖಿಸಿ ವಂದೇ ಮಾತರಂ ಹಾಡಲು ನಿರಾಕರಿಸಿದ್ದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್...

ನ್ಯಾಯಾಂಗ ಸೇವೆಗಳು, ಸರ್ಕಾರಿ ಸಮಿತಿಗಳಲ್ಲಿ ಶೇ. 50 ಮಹಿಳಾ ಪ್ರಾತಿನಿಧ್ಯ ಕೋರಿ ಪಿಐಎಲ್ : ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸರ್ಕಾರಿ ಸಮಿತಿಗಳು ಮತ್ತು ನ್ಯಾಯಾಂಗ ಸೇವೆಯ ಖಾಲಿ ಇರುವ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಪ್ರಾತಿನಿಧ್ಯ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ಗುರುವಾರ...

ರಷ್ಯಾ ತೈಲ ಖರೀದಿಸಲು ಭಾರತಕ್ಕೆ ನೀಡಿದ್ದ ಕಾಲಾವಕಾಶ ವಿಸ್ತರಿಸುವುದಿಲ್ಲ: ಅಮೆರಿಕ

ಇರಾನ್ ಮತ್ತು ರಷ್ಯಾದಿಂದ ತೈಲವನ್ನು ಖರೀದಿಸಲು ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಈವರೆಗೆ ನೀಡಲಾಗಿದ್ದ ನಿರ್ಬಂಧ ಸಡಿಲಿಕೆಯನ್ನು ಇನ್ನು ಮುಂದೆ ಮುಂದುವರಿಸುವುದಿಲ್ಲ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಬುಧವಾರ (ಏ.15)...