Homeಮುಖಪುಟದೆಹಲಿಯ ಸರ್ಕಾರೀ ಶಾಲೆ ಮಕ್ಕಳು ಖಾಸಗಿ ಶಾಲೆಗಳನ್ನು ಹಿಂದಿಕ್ಕಿದ್ದು ಹೇಗೆ?

ದೆಹಲಿಯ ಸರ್ಕಾರೀ ಶಾಲೆ ಮಕ್ಕಳು ಖಾಸಗಿ ಶಾಲೆಗಳನ್ನು ಹಿಂದಿಕ್ಕಿದ್ದು ಹೇಗೆ?

- Advertisement -
- Advertisement -

ಜಿ.ಆರ್.ವಿದ್ಯಾರಣ್ಯ, ಮೈಸೂರು |

2015ರಲ್ಲಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗಿನಿಂದಲೂ ದೆಹಲಿಯ ಆಪ್ ಸರಕಾರ ಸಾರ್ವಜನಿಕ ಶಿಕ್ಷಣಕ್ಕೆ ಕೊಟ್ಟಿರುವ ಆದ್ಯತೆಯ ಫಲಸ್ವರೂಪವಾಗಿ ದೆಹಲಿಯ ಬಡ ಮಕ್ಕಳು ಸರಕಾರಿ ಶಾಲೆಯಲ್ಲಿ ಉತ್ತಮ ಗುಣ ಮಟ್ಟದ ಶಿಕ್ಷಣ ಪಡೆಯುವದರ ಜೊತೆಗೆ, ಖಾಸಗಿ “ಕಾನ್ವೆಂಟ್” ಶಾಲೆಯ ಮಕ್ಕಳಿಗಿಂತ ಒಂದು ಕೈಮಿಗಿಲಾಗಿ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ ಎಂಬುದು ಇತ್ತೀಚೆಗೆ ಪ್ರಕಟಗೊಂಡ ಸಿಬಿಎಸ್‍ಇ ಶಾಲೆಯ 12ನೆಯ ತರಗತಿ (ದ್ವಿತೀಯ ಪಿಯು) ಫಲಿತಾಂಶದಿಂದ ಸಿದ್ಧವಾಗಿದೆ. ಈ ವರ್ಷ ದೆಹಲಿ ಸರಕಾರಿ ಶಾಲೆಯ ಉತ್ತೀರ್ಣ ಫಲಿತಾಂಶ 94.24% ಆಗಿದ್ದು, ರಾಜ್ಯದ ಎಲ್ಲಾ ಶಾಲೆಗಳ ಒಟ್ಟಾರೆ ಫಲಿತಾಂಶ 91.87% ಆಗಿರುತ್ತದೆ. ಸರಕಾರಿ ಶಾಲೆಗೆ ಹೋಲಿಸಿದರೆ ಖಾಸಗಿ ಶಾಲೆಗಳ ಫಲಿತಾಂಶ ಮಾತ್ರ 82.59% ಇರುತ್ತದೆ. ಸರಕಾರಿ ಶಾಲೆಗಳ ಫಲಿತಾಂಶ ಕಳೆದ ನಾಲ್ಕು ವರ್ಷದಿಂದ ಸತತವಾಗಿ ಉತ್ತಮಗೊಳ್ಳುತ್ತಾ ಬಂದಿದ್ದು, 2016ರಲ್ಲಿ 85.9%, 2017ರಲ್ಲಿ 88.2%, 2018ರಲ್ಲಿ 90.6% ರಿಂದ 2019ರಲ್ಲಿ 94.24%ಕ್ಕೆ ಏರಿರುವುದರ ಜೊತೆಗೆ ಇದು ಸರಕಾರಿ ಶಾಲೆಗಳ ಅತ್ಯಂತ ಹೆಚ್ಚಿನ ದಾಖಲೆಯ ಫಲಿತಾಂಶವಾಗಿದೆ. ದೆಹಲಿಯ ಸರಕಾರಿ ಶಾಲೆಗಳಿಂದ ಒಟ್ಟು 1,29,917 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ ವಿದ್ಯಾರ್ಥಿನಿಯರು 96.3% ಉತ್ತೀರ್ಣರಾಗಿದ್ದರೆ ಗಂಡು ಮಕ್ಕಳ ಪೈಕಿ 91.48% ತೇರ್ಗಡೆ ಹೊಂದಿರುತ್ತಾರೆ. 203 ಶಾಲೆಗಳಲ್ಲಿ 100% ಮಕ್ಕಳು ಉತ್ತೀರ್ಣರಾಗಿದ್ದರೆ ಇನ್ನು 732 ಶಾಲೆಗಳಿಗೆ 90% ಅಥವಾ ಅಧಿಕ ಯಶಸ್ಸು ದೊರೆತಿದೆ. ಈ ವರ್ಷ ದೇಶ-ವಿದೇಶದ ಒಟ್ಟು 12.05ಲಕ್ಷ ವಿದ್ಯಾರ್ಥಿಗಳು ಸಿಬಿಎಸ್‍ಇ ಶಾಲೆಯ 12ನೆಯ ತರಗತಿ ಪರೀಕ್ಷೆಗೆ ಕುಳಿತಿದ್ದರು. ಅದರಲ್ಲಿ ತಿರುವನಂತಪುರಂ ವಿಭಾಗದ ಮಕ್ಕಳು ಅತ್ಯಂತ ಹೆಚ್ಚು ಅಂದರೆ 98.20% ತೇರ್ಗಡೆಯಾಗಿ ಪ್ರಥಮ ಸ್ಥಾನದಲ್ಲಿದ್ದು, ಚೆನ್ನೈ ಶಾಲೆಗಳ 92.23% ವಿದ್ಯಾರ್ಥಿಗಳು ಪಾಸಾಗಿ ಎರಡನೆಯ ಸ್ಥಾನ ಪಡೆದಿದ್ದಾರೆ. ದೆಹಲಿಯ ಮಕ್ಕಳು 91.87%ನೊಂದಿಗೆ ತೃತೀಯ ಸ್ಥಾನದಲ್ಲಿದ್ದಾರೆ. ಕೇಂದ್ರ ಸರಕಾರದ ಸ್ವಾಮ್ಯದಲ್ಲಿರುವ ಕೇಂದ್ರೀಯ ವಿದ್ಯಾಲಯಗಳ ಪ್ರದರ್ಶನವೂ ಸಹ ಉತ್ತಮವಾಗಿದೆ. ಸಿಬಿಎಸ್‍ಇ 10ನೆಯ ತರಗತಿ ಫಲಿತಾಂಶ ಇನ್ನೂ ಹೊರಬಿದ್ದಿಲ್ಲ.

ಉತ್ತಮಗೊಂಡಿರುವ ಸರಕಾರಿ ಶಾಲೆಯ ಮಕ್ಕಳ ಪ್ರದರ್ಶನ ಆಕಸ್ಮಿಕವೇನಲ್ಲ. ಇದರ ಹಿಂದೆ ಸರಕಾರದ ಯೋಚನೆ, ಯೋಜನೆ ಮತ್ತು ಎಲ್ಲಾ ಪಾಲುದಾರರ ಪರಿಶ್ರಮವೂ ಇದೆ. ದೇಶದಲ್ಲಿ ಸಾರ್ವಜನಿಕ ಶಿಕ್ಷಣಕ್ಕೆ ಅತ್ಯಂತ ಹೆಚ್ಚಿನ ಅನುದಾನ ತನ್ನ ವಾರ್ಷಿಕ ವೆಚ್ಚದ 26% ದೆಹಲಿ ಸರಕಾರ ತನ್ನ ಮುಂಗಡಪತ್ರದಲ್ಲಿ ನೀಡುತ್ತಿದೆ. ಬೇರೆ ಯಾವ ರಾಜ್ಯವೂ ಇಷ್ಟು ಹೆಚ್ಚಿನ ಹಣ ಸಾರ್ವಜನಿಕ ಶಿಕ್ಷಣಕ್ಕೆ ವಿನಿಯೋಗಿಸುತ್ತಿಲ್ಲ. ಭಾರತ ಸರಕಾರ ತನ್ನ ವಾರ್ಷಿಕ ಮುಂಗಡಪತ್ರದ 3% ಸಹ ಶಿಕ್ಷಣಕ್ಕೆ ಖರ್ಚು ಮಾಡುತ್ತಿಲ್ಲ. ಕರ್ನಾಟಕ (ಮತ್ತು ಇತರ ರಾಜ್ಯಗಳು) ಸಾವಿರಾರು ಸರಕಾರಿ ಕನ್ನಡ ಶಾಲೆಗಳನ್ನು ಪ್ರತಿ ವರ್ಷ ಮುಚ್ಚುತ್ತಿದ್ದರೆ ದೆಹಲಿ ಮಾತ್ರ ಹೊಸ ಶಾಲೆಗಳನ್ನು ತೆರೆಯುತ್ತಿದೆ. ಹೊಸ ಶಾಲೆಗಳ ಜೊತೆಗೆ ಮತ್ತು ಹಾಲಿ ಶಾಲೆಗಳಲ್ಲಿ ಹೊಸ ಕೊಠಡಿಗಳ ನಿರ್ಮಾಣ, ಕಟ್ಟಡ ಮತ್ತು ಪೀಠೋಪಕರಣ ನವೀಕರಣವೂ ನಡೆಯುತ್ತಿದೆ. ಇಂದಿನ ದೆಹಲಿ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳ ಹೋಲಿಕೆಯಲ್ಲಿ ಯಾವ ರೀತಿಯಲ್ಲೂ ಕಡಿಮೆಯಿಲ್ಲ, ಬದಲಾಗಿ ಇನ್ನೂ ಚೆನ್ನಾಗಿವೆ ಎಂಬುದು ಶಾಲಾ ಮಕ್ಕಳ ಪೋಷಕರ ಅನಿಸಿಕೆ. ಶಾಲೆಗಳಲ್ಲಿ ಸ್ಮಾರ್ಟ್ ತರಗತಿ, ವಿದ್ಯುನ್ಮಾನ ಬಿಳಿ ಫಲಕ, ಆಧುನಿಕ ಕುರ್ಚಿ-ಬೆಂಚು, ಆಧುನಿಕ ಪ್ರಯೋಗಶಾಲೆ, ಸಿಸಿಟಿವಿ ಕಣ್ಗಾವಲು, ಅಂತರ್ರಾಷ್ಟ್ರೀಯ ಮಟ್ಟದ ಆಟದ ಮೈದಾನ, ಪಠ್ಯೇತರ ಚಟುವಟಿಕೆಗೆ ವಿಶೇಷ ಕೊಠಡಿಗಳು, ಪುಸ್ತಕಾಲಯ, ಈಜುಕೊಳ, ಆಡಿಯೋ-ವೀಡಿಯೋ ವ್ಯವಸ್ಥೆಯುಳ್ಳ ಸಭಾಂಗಣ, ಇವೆಲ್ಲವೂ ಇದೆ ಎಂದರೆ ಆಶ್ಚರ್ಯವಲ್ಲವೇ? ಇವೆಲ್ಲದರ ಜೊತೆಗೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ನರ್ಸರಿ (ಶಿಶುವಿಹಾರ), ಪ್ರತಿ ತಿಂಗಳು ಮತ್ತು ವಾರ್ಷಿಕ ಶಿಕ್ಷಕ-ಪೋಷಕರ ಸಭೆಗಳು, ಬೇಸಿಗೆ ಶಿಬಿರ, ಹಿಂದುಳಿದ ಮಕ್ಕಳಿಗೆ ವಿಶೇಷ ಕಲಿಕಾ ಶಿಬಿರವನ್ನೂ ನಡೆಸಲಾಗುತ್ತಿದೆ. ಸರಕಾರಿ ಶಾಲೆಯ ಮಕ್ಕಳು ಇಂದು ತಮ್ಮ ಶಾಲೆಯನ್ನು ಅತ್ಯಂತ ಹೆಮ್ಮೆಯಿಂದ ಬೇರೆ ಮಕ್ಕಳಿಗೆ ತೋರಿಸುತ್ತಾರೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಕಾನ್ವೆಂಟ್ ಶಾಲೆಗಳಲ್ಲಿ ಶಿಕ್ಷಣ ಪಡೆದ ಸುಶಿಕ್ಷಿತ ಮತದಾರರು ಸರಕಾರಿ ಶಾಲೆಗಳಿಗೆ ತೆರಳಿ ಅಲ್ಲಿ ತಮ್ಮ ಮತದಾನ ಮಾಡುವ ಸಂದರ್ಭದಲ್ಲಿ ಸರಕಾರಿ ಶಾಲೆಗಳ ದುಃಸ್ಥಿತಿ ನೋಡಿ ಮರುಗಿದ್ದುಂಟು. ಆದರೆ ದೆಹಲಿಯಲ್ಲಿ ಮಾತ್ರ ಕಾಂಗ್ರೆಸ್ ಪಕ್ಷದ ಹಲವು ನಾಯಕರು ಚುನಾವಣಾ ಆಯೋಗ ಇಲ್ಲಿಯ ಸರಕಾರಿ ಶಾಲೆಯಲ್ಲಿ ಚುನಾವಣಾ ವ್ಯವಸ್ಥೆ ಮಾಡಕೂಡದು, ಶಾಲೆಯ ಮೆರುಗು ನೋಡಿ ಜನರೆಲ್ಲರೂ ಕೇವಲ ಆಮ್ ಆದ್ಮಿ ಪಾರ್ಟಿಗೆ ಮತಹಾಕುತ್ತಾರೆ, ನಮ್ಮ ಮಾತು ಯಾರೂ ಕೇಳುವುದಿಲ್ಲ ಎಂದು ವ್ಯಥೆಪಟ್ಟಿದ್ದೂ ಉಂಟು. ರಾಜಕೀಯದ ಮಾತು ಹಾಗಿರಲಿ.

ಆಪ್ ಸರಕಾರ ಕೇವಲ ಹಣ ಖರ್ಚು ಮಾಡಿ ಶಾಲೆಯ ಮೂಲಭೂತ ಸೌಕರ್ಯ ಮಾತ್ರ ಉತ್ತಮಗೊಳಿಸಿಲ್ಲ, ಹೊಸ ಶಿಕ್ಷಕರ ನೇಮಕಾತಿ ಮಾಡಿದೆ (ಕೆಲ ನೇಮಕಾತಿ ಮತ್ತು ಹಂಗಾಮಿ ಶಿಕ್ಷಕರನ್ನು ಖಾಯಂಗೊಳಿಸುವ ಕಡತ ದುರ್ದೈವವಶಾತ್ ಉಪರಾಜ್ಯಪಾಲರ ಕಚೇರಿಯಲ್ಲಿ ಸಿಲುಕಿಕೊಂಡಿದೆ). ಕೆಲ ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹಿಂದೆ 150ರಿಂದ 200 ಇದ್ದುದನ್ನು, ಹೊಸ ಕೊಠಡಿಗಳ ನಿರ್ಮಾಣದಿಂದ, ಈಗ ಸುಮಾರು 40ಕ್ಕೆ ಇಳಿಸಲಾಗಿದೆ. 10,000 ಹೊಸ ಕೊಠಡಿಗಳ ನಿರ್ಮಾಣ ಸಂಪೂರ್ಣವಾಗಿದ್ದು ಇನ್ನೂ 10,000 ಕೊಠಡಿಗಳು ನಿರ್ಮಾಣ ಹಂತದಲ್ಲಿವೆ.

ಸರಕಾರಿ ಶಾಲೆಗಳ ಮುಖ್ಯೋಪಾಧ್ಯಾಯರನ್ನು ಶಾಲೆಯ ಮೂಲಭೂತ ಸೌಕರ್ಯದ ಮೇಲ್ವಿಚಾರಣೆಯ ಕೆಲಸದಿಂದ ಮುಕ್ತಗೊಳಿಸಿ, ಶಾಲಾ ನಿರ್ವಹಣೆಗೆಂದೇ ಪ್ರತ್ಯೇಕ ವ್ಯವಸ್ಥಾಪಕರನ್ನು ನೇಮಿಸಲಾಗಿದೆ. ಮುಖ್ಯೋಪಾಧ್ಯಾಯರು ಕೇವಲ ಶಿಕ್ಷಣದ ಗುಣಮಟ್ಟದ ಮೇಲೆ ಮತ್ತು ಇತರ ಶಿಕ್ಷಕರ ಮೇಲೆ ಗಮನ ಇರಿಸುತ್ತಾರೆ. ಮುಖ್ಯೋಪಾಧ್ಯಾಯರ ಜೊತೆಗೆ ಇತರ ವಿಷಯ ಶಿಕ್ಷಕರನ್ನು ಸಹ ಉನ್ನತ ಪ್ರಶಿಕ್ಷಣಕ್ಕಾಗಿ ಕೇಂಬ್ರಿಜ್, ಸಿಂಗಾಪುರ ಮತ್ತು ಐಐಎಂ (ಅಹಮದಾಬಾದ್) ಮುಂತಾದ ಕಡೆಗೆ ಕಳುಹಿಸಿ ಅವರಿಗೆ ವಿಶೇಷ ತರಬೇತಿ ಕೊಡಿಸಲಾಗುತ್ತಿದೆ. ಶಾಲಾ ಪಠ್ಯಕ್ರಮದ ಜೊತೆಗೆ ಮಕ್ಕಳಿಗೆ ಹ್ಯಾಪಿನೆಸ್ ಕರಿಕ್ಯುಲಂ ಅಡಿಯಲ್ಲಿ ಜೀವನದ ಮೌಲ್ಯಗಳು, ಸಂತೋಷದಿಂದ ಹೇಗೆ ಇರುವುದು ಮತ್ತು ಬೇರೆ ಬೇರೆ ರೀತಿಯ ಒತ್ತಡಗಳನ್ನು ಹೇಗೆ ನಿಭಾಯಿಸುವುದು ಎಂಬುದನ್ನೂ ಸಹ ಕಲಿಸಲಾಗುತ್ತಿದೆ. ದೆಹಲಿಯ ಈ ವಿಧಾನಗಳು ಅಂತರಾಷ್ಟ್ರೀಯ ಮನ್ನಣೆ ಪಡೆದಿದ್ದು ಈಗಾಗಲೇ ಅಮೇರಿಕದ ಹಲವು ರಾಜ್ಯಗಳು ಈ ಹ್ಯಾಪಿನೆಸ್ ಕರಿಕ್ಯುಲಂ ವಿಧಾನವನ್ನು ಅನುಸರಿಸಿವೆ.

12ನೆಯ ತರಗತಿಯ ನಂತರ ಉನ್ನತ ಶಿಕ್ಷಣಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಅವರ ಕುಟುಂಬದ ಯಾವುದೇ ಆಸ್ತಿಯ ಆಧಾರ ಪಡೆಯದೇ, ಸರಕಾರದ ಖಾತರಿಯ ಮೇಲೆ, ಬ್ಯಾಂಕಿನಿಂದಲೂ ಹತ್ತು ಲಕ್ಷದವರೆಗೆ ವಿದ್ಯಾಭ್ಯಾಸ ಸಾಲ ಕೊಡಿಸಲಾಗುತ್ತಿದೆ. ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕುಶಲತೆ ಅಭಿವೃದ್ಧಿ ಕೇಂದ್ರದ ಜೊತೆಗೆ ಸ್ವ-ಉದ್ಯೋಗಕ್ಕೆ ಶಾಖೋತ್ಪನ್ನ ಘಟಕವೂ ಇವೆ. ಕೆಲಸ ಸಿಕ್ಕ ನಂತರ ಮಕ್ಕಳೇ ತಮ್ಮ ಸಾಲ ತೀರಿಸುತ್ತಾರೆ. ಶಾಲೆಯ ಶಿಕ್ಷಣದ ಜೊತೆಗೆ 10 ಮತ್ತು 12ನೆಯ ತರಗತಿ ಮಕ್ಕಳಿಗೆ, ಅವರ ವಿದ್ಯಾಭ್ಯಾಸಕ್ಕೆ ತೊಂದರೆ ಬಾರದಂತೆ, ವೃತ್ತಿ ಶಿಕ್ಷಣ ತರಬೇತಿಯನ್ನೂ ಸಹ ನೀಡಲಾಗುತ್ತಿದೆ. ಉನ್ನತ ವ್ಯಾಸಂಗಕ್ಕೆ ಇಚ್ಛೆ ಪಡದಿದ್ದಲ್ಲಿ ಮಕ್ಕಳು ತಮ್ಮ ಕುಶಲತೆಯ ಆಧಾರದ ಮೇಲೆ ಸ್ವ-ಉದ್ಯೋಗ ಪ್ರಾರಂಭಿಸಲು ಬೇಕಾದ ತರಬೇತಿ ಅವರಿಗೆ ನೀಡಲಾಗುತ್ತಿದೆ. ಇದರಲ್ಲಿ ಹೆಣ್ಣು ಮಕ್ಕಳಿಗೆ ಫ್ಯಾಶನ್ ಡಿಜೈನಿಂಗ್, ಆರ್ಟಿಫಿಶಿಯಲ್ ಜ್ಯುವೆಲರಿ ತಯಾರಿಸುವುದು, ಬ್ಯೂಟಿಷಿಯನ್ ಇತ್ಯಾದಿ ತರಗತಿಗಳಿದ್ದರೆ, ಗಂಡು ಮಕ್ಕಳಿಗೆ ಮೊಬೈಲ್ ರಿಪೇರಿ, ಕಂಪ್ಯೂಟರ್ ಸೆಂಟರ್, ಕಾರು ಚಾಲನೆ ಮುಂತಾದ ವಿಷಯಗಳ ತರಬೇತಿ ಪಡೆಯುವ ಅವಕಾಶವಿದೆ.

ಆಪ್ ಸರಕಾರ ಕೇವಲ ಶಿಕ್ಷಕರ ಮೇಲೆ ತನ್ನ ಗಮನ ಕೇಂದ್ರೀಕರಿಸುತ್ತಿಲ್ಲ, ಶಾಲೆಯ ಸ್ವಚ್ಛತೆ, ಸ್ವಚ್ಛತಾ ಕರ್ಮಚಾರಿಗಳ ಅಭಿವೃದ್ಧಿಯ ಕಡೆಯೂ ಸಹ ಗಮನ ಹರಿಸಿದೆ. ಈ ಹಿಂದೆ ಶಾಲೆಗಳಲ್ಲಿ ಸ್ವಚ್ಛತಾ ಕರ್ಮಚಾರಿಗಳು ಸಂಬಳದ ರೂ.9,000/ಕ್ಕೆ ಪುಸ್ತಕದಲ್ಲಿ ಸಹಿ ಹಾಕಿ, ಕೈಯಲ್ಲಿ ರೂ.5,000/- ಪಡೆಯುತ್ತಿದ್ದರು ಆದರೆ ಆಪ್ ಸರಕಾರ ಬಂದ ಕೂಡಲೇ ಅವರ ಸಂಪೂರ್ಣ ಹಣ ರೂ.9,000/- ಅವರ ಕೈ ಸೇರಲಾರಂಭಿಸಿತು. ನಂತರ ಅವರ ಸಂಬಳ ಪರಿಷ್ಕರಣೆಯಾಗಿ ಈಗ ರೂ.14,000/- ಕೈಗೆ ಸಿಗುತ್ತಿದೆ. ಬೇರೆ ರಾಜ್ಯದಲ್ಲಿ ಇಂತಹ ಉದಾಹರಣೆ ಇಲ್ಲ.

ಸಾರ್ವಜನಿಕ ಶಿಕ್ಷಣದ ಈ ಕ್ರಾಂತಿಯ ಹಿಂದೆ ಇರುವ ಎರಡು ಮುಖ್ಯ ಹೆಸರುಗಳೆಂದರೆ ದೆಹಲಿಯ ಉಪ-ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಶ್ರೀ ಮನೀಶ್ ಸಿಸೋಡಿಯ ಮತ್ತು ಶಿಕ್ಷಣ ಇಲಾಖೆಯ ಸಲಹೆಗಾರ್ತಿ, ಶ್ರೀಮತಿ ಆತಿಶಿ ಮರ್ಲೀನಾ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಶ್ರೀರಕ್ಷೆಯೂ ಸಹ ಇವರ ಹಿಂದಿದೆ. ಆತಿಶಿಯವರು ಕೇಂಬ್ರಿಜ್ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದು, ಲಕ್ಷಾಂತರ ರೂ. ಸಂಬಳ ಪಡೆಯುವ ಕೆಲಸದ ಅವಕಾಶವನ್ನು ಬಿಟ್ಟು, ದೇಶದ ಮಕ್ಕಳಿಗಾಗಿ ಏನಾದರೂ ಮಾಡಬೇಕು ಎಂಬ ಅತ್ಯುನ್ನತ ಧ್ಯೇಯದಿಂದ ತಿಂಗಳಿಗೆ ಕೇವಲ ಒಂದು ರೂ. ಸಂಬಳಕ್ಕೆ ಶಿಕ್ಷಣ ಇಲಾಖೆಗೆ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಉಪ-ಮುಖ್ಯಮಂತ್ರಿ ಮನೀಶ್ ಸಿಸೋಡಿಯ ಹಗಲು-ರಾತ್ರಿ ಕೆಲಸಮಾಡಿ, ಶಾಲೆಗಳಿಗೆ ಧಿಡೀರ್ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುತ್ತಿದ್ದಾರೆ. ಕೇಂದ್ರ ಸರಕಾರದ ಅಸಹಯೋಗ ಮತ್ತು ಅಡೆತಡೆಗಳನ್ನು ಎದುರಿಸುತ್ತಾ ನಾಲ್ಕು ವರ್ಷದಲ್ಲಿ ಇಷ್ಟೆಲ್ಲಾ ಸಾಧಿಸಿ ತೋರಿಸಿರುವುದು ಇಡೀ ದೇಶಕ್ಕೆ ಹೆಮ್ಮೆಯ ವಿಷಯ. ಆದರೆ ಮುಖ್ಯವಾಹಿನಿ ಮಾಧ್ಯಮ ಇದನ್ನು ತೋರಿಸುತ್ತಿಲ್ಲ. ಅವರ ಈ ಸಾಧನೆಗಾಗಿ ದೇಶದ ಅತ್ಯುನ್ನತ ಶಿಕ್ಷಣ ಸಚಿವ ಎಂಬ ಬಿರುದು ಮನೀಶ್ ಸಿಸೋಡಿಯ ಅವರಿಗೆ ಲಭಿಸಿದೆ. ಇಂತಹ ವ್ಯಕ್ತಿಗಳು ಎಲ್ಲಾ ರಾಜ್ಯ ಸರಕಾರದಲ್ಲಿದ್ದರೆ ನಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುವುದರಲ್ಲಿ ಸಂದೇಹವಿಲ್ಲ, ಏಕೆಂದರೆ ಕೇವಲ ಶಿಕ್ಷಣದಲ್ಲಿಗೆ ಭಾರತದ ಪ್ರಗತಿ.

ವಿ.ಸೂ:ಲೇಖನದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿದ್ದು, ಅದು ನಾನುಗೌರಿ.ಕಾಂ ಸಂಪಾದಕೀಯ ತಂಡದ ಅಭಿಪ್ರಾಯ ಆಗಿರಬೇಕೆಂದೇನಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...