‘ನೀನೊಬ್ಬಳೆ ಅಲ್ಲ, ನಿನ್ನೊಂದಿಗೆ ನಾವಿದ್ದೇವೆ’ ಎಂದು ಹೇಳುವ ಮೂಲಕ ಉನ್ನವೋ ಸಂತ್ರಸ್ತೆಯ ಪರ ದೆಹಲಿಯಲ್ಲಿ ಪ್ರತಿಭಟನೆ ನಡೆಯಿತು. ಕೂಡಲೇ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಒತ್ತಾಯಿಸಲಾಯಿತು.
ಉತ್ತರಪ್ರದೇಶದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಪ್ರಮುಖ ಆರೋಪಿಯಾಗಿರುವ ಉನ್ನಾಂವ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ಸಂತ್ರಸ್ತ ಯುವತಿ ಮತ್ತು ಆಕೆಯ ವಕೀಲರು ತೀವ್ರವಾಗಿ ಗಾಯಗೊಂಡು ಪ್ರಾಣಾಪಾಯದಲ್ಲಿದ್ದರೆ, ಆಕೆಯ ಇಬ್ಬರು ಸಂಬಂಧಿಕರು ಅಪಘಾತದಲ್ಲಿ ನಿಧನರಾಗಿದ್ದಾರೆ. ಈ ಹಿಂದೆಯೂ ಕೂಡ ಸಂತ್ರಸ್ತೆಯ ತಂದೆ ಜೈಲಿನಲ್ಲಿಯೇ ಅನುಮಾಸ್ಪದವಾಗಿ ಸಾವಿಗೀಡಾಗಿದ್ದರು.
ಈ ಹಿನ್ನೆಲಯಲ್ಲಿ ಅತ್ಯಾಚಾರದ ಆರೋಪಿ ಶಾಸಕನು ಆಗಿದ್ದಲ್ಲದೇ ಆಡಳಿತದಲ್ಲಿರುವ ಬಿಜೆಪಿ ಪಕ್ಷದವರಾಗಿರುವುದರಿಂದ ಅಧಿಕಾರ ದುರುಪಯೋಗ ಮಾಡಿಕೊಂಡು, ಸಾಕ್ಷ್ಯ ನಾಶಕ್ಕೆ ಈ ರೀತಿ ಸಂತ್ರಸ್ತೆಯ ಪ್ರಾಣಕ್ಕೆ ಎರವಾಗಿರುವುದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದೇಶಾದ್ಯಂತ ಖಂಡನೆ ವ್ಯಕ್ತವಾಗಿತ್ತು.

ಕೇವಲ ಸಾಮಾಜಿಕ ಜಾಲತಾಣದಲ್ಲಿ ಮಾತ್ರವಲ್ಲದೇ ನಾವು ನೇರವಾಗಿ ಬೀದಿಗಿಳಿದು ಹೋರಾಟ ಮಾಡಬೇಕೆಂದು ಸ್ವರಾಜ್ ಇಂಡಿಯಾ ಪಕ್ಷದ ಯೋಗೇಂದ್ರ ಯಾದವ್ ರವು ನಿನ್ನೆ ಬೆಳಿಗ್ಗೆ ಕರೆ ನೀಡಿದ್ದರು.
“ಉನ್ನಾಂವ್ ಘಟನೆ ನೋಡಿ ನಿಮಗೆ ಆಕ್ರೋಶ ಹುಟ್ಟುತ್ತಿಲ್ಲವೇ? ಹೌದು ಎಂದಾದರೆ, ಆ ಧೈರ್ಯಶಾಲಿ ಮಹಿಳೆಯೊಂದಿಗೆ ನಿಲ್ಲಲು ಇಂದು ಸಂಜೆ 7 ಗಂಟೆಗೆ ದೆಹಲಿಯ ಇಂಡಿಯಾ ಗೇಟ್ ಬಳಿ ಬನ್ನಿ ಸೇರಿಕೊಳ್ಳಿ.” #TumAkeliNahinHo (you are not alone ನೀನೊಬ್ಬಳೆ ಅಲ್ಲ) ಎಂಬ ಹ್ಯಾಷ್ ಟ್ಯಾಗ್ ಬಳಸಿದ್ದರು. ಈ ಕರೆಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತಲ್ಲದೇ ನೂರಾರು ಜನ ಇಂಡಿಯಾ ಗೇಟ್ ಬಳಿ ಸೇರಿ ಟಾರ್ಚ್ ಲೈಟ್ ಹಿಡಿದು ಪ್ರತಿಭಟಿಸಿದ್ದರು.

ಇಂದು ದೇಶಾದ್ಯಂತ ಲಕ್ಷ ಕೋಟಿ ಜನರು ಇದೆಂತಾ ಅನ್ಯಾಯ ಎಂದು ಈ ಘಟನೆಯನ್ನು ಖಂಡಿಸುತ್ತಿದ್ದಾರೆ. ಅದನ್ನೇ ಸಾರಿ ಹೇಳಲು ನಾವು ಇಲ್ಲಿ ಬಂದಿದ್ದೇವೆ. ಆ ಯುವತಿಯ ವಿಶ್ವಾಸ ಹುದುಗಿಸುವ ಯತ್ನ ನಡೆಯುತ್ತಿರುವಾಗ ಆಕೆಯ ಜೊತೆ ನಿಲ್ಲುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಯೋಗೇಂದ್ರ ಯಾದವ್ ತಿಳಿಸಿದ್ದಾರೆ.


