Homeಮುಖಪುಟಮಳೆನೀರು ಕೊಯ್ಲು, ಕೆರೆ ಪುನರುಜ್ಜೀವನ ಮುಂತಾದುವು ಯಾರಿಗೂ ಬೇಕಿಲ್ಲ ಯಾಕೆ?

ಮಳೆನೀರು ಕೊಯ್ಲು, ಕೆರೆ ಪುನರುಜ್ಜೀವನ ಮುಂತಾದುವು ಯಾರಿಗೂ ಬೇಕಿಲ್ಲ ಯಾಕೆ?

- Advertisement -
- Advertisement -

| ಹೇಮಲತಾ ಶೆಣೈ, ಬೆಂಗಳೂರು |

ಕರ್ನಾಟಕದ ನಗರಗಳ ನೀರಿನ ಬವಣೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ಗೆಲ್ಲುವ ಲಕ್ಷಣ ಕಾಣುತ್ತಿಲ್ಲ. ಯಾಕೆಂದರೆ ಅಳಿದುಳಿದ ಕೆರೆಗಳನ್ನು ಅಭಿವೃದ್ಧಿಪಡಿಸುವುದು, ಮಳೆನೀರು ಕೊಯ್ಲಿನ ಮೂಲಕ ನೀರು ಸಂಗ್ರಹ ಇತ್ಯಾದಿ ನಮಗೆ ಎಟಕುವಂತಹದನ್ನು ಮಾಡಬೇಕೆನ್ನುವ ತಜ್ಞರ ಮಾತು ಅಧಿಕಾರಸ್ಥರ ಕಿವಿಯೊಳಗೆ ಹೋಗುವುದೇ ಇಲ್ಲ. ನದಿ ತಿರುವು, ನದಿ ಜೋಡಣೆ, ಮೋಡ ಬಿತ್ತನೆಯಂತಹ ದೊಡ್ಡ ಖರ್ಚಿನ ಬಾಬತ್ತುಗಳು ಮಾತ್ರ ಅವರಿಗೆ ಆಕರ್ಷಕವಾಗಿ ಕಾಣುತ್ತವೆ. ನೇತ್ರಾವತಿಯಲ್ಲಿ ನೀರು ಕಡಿಮೆಯಾಗಿ ಒಣಗಲು ಶುರುವಾಗಿದ್ದರೂ – ಈ ಬೇಸಿಗೆಯಲ್ಲಿ ನೀರಿನ ತೀವ್ರ ಕೊರತೆಯ ಕಾರಣ ಧರ್ಮಸ್ಥಳದ ಯಾತ್ರಾರ್ಥಿಗಳಿಗೆ ತಮ್ಮ ಪ್ರವಾಸವನ್ನು ಕೆಲ ದಿನ ಮುಂದೂಡಲು ದೇವಸ್ಥಾನದ ಆಡಳಿತಾಧಿಕಾರಿಗಳೇ ಮನವಿ ಮಾಡಿದ್ದನ್ನು ಸ್ಮರಿಸಬಹುದು – ಅಧಿಕಾರಸ್ಥರು ಈಗಲೂ ‘ನೇತ್ರಾವತಿ ತಿರುವು ಯೋಜನೆ’ಯ ಮಾತನ್ನೇ ಆಡುತ್ತಿದ್ದಾರೆ.

ಬೆಂಗಳೂರಿನ ಜನಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಹೊಟ್ಟೆಪಾಡಿಗಾಗಿ ಮತ್ತು ನೀರಿನ ಕೊರತೆಯಿಂದಾಗಿ ಹಳ್ಳಿಗಾಡಿನಿಂದ, ನಮ್ಮದೇ ರಾಜ್ಯದ ಬೇರೆಬೇರೆ ಭಾಗಗಳಿಂದ ಮಾತ್ರವಲ್ಲದೆ ನಾನಾ ರಾಜ್ಯಗಳಿಂದಲೂ ಅಸಂಖ್ಯಾತ ಜನರು ಬೆಂಗಳೂರನ್ನು ಆಶ್ರಯಿಸಿ ಬರುತ್ತಲೇ ಇದ್ದಾರೆ.

ಬೆಂಗಳೂರಿನ ನೀರಿನ ಬವಣೆ ನಿವಾರಣೆಗೆ ತಜ್ಞರ ಸಲಹೆಯೆಂದರೆ ಮಳೆನೀರು ಸಂಗ್ರಹ – ಒಂದು, ಕೆರೆಗಳಲ್ಲಿ ಹೂಳೆತ್ತಿ ಅಭಿವೃದ್ಧಿಪಡಿಸಿ ನೀರು ಸಂಗ್ರಹ; ಎರಡು, ಕಟ್ಟಡಗಳಲ್ಲಿ ಮಳೆನೀರು ಕೊಯ್ಲು. ಇದರಿಂದ ಸಾಕಷ್ಟು ನೀರು ಭೂಮಿಯಲ್ಲಿ ಇಂಗಿ ಜಲಮಟ್ಟ ಮೇಲೇರಿ ಬಾವಿ-ಬೋರ್‍ವೆಲ್‍ಗಳಲ್ಲೂ ನೀರು ಬರುತ್ತದೆ. ಇದು ಅನಿವಾರ್ಯ. ಇಷ್ಟರಲ್ಲಾಗಲೇ ಕೆರೆಗಳ ಹೂಳೆತ್ತಿ ಅಭಿವೃದ್ಧಿಪಡಿಸಿ ಮಳೆನೀರು ಸಂಗ್ರಹಕ್ಕೆ ಸಿದ್ಧವಾಗಿರಬೇಕಿದ್ದ ಕೆರೆಗಳು ಹಾಗೇ ಇದ್ದಾವೆ.

ಜನಪ್ರತಿನಿಧಿಗಳಿಗೆ ತಮ್ಮ ಏರಿಯದ ಕೆರೆಗಳನ್ನು ನೀರಿನ ಸಂಗ್ರಹಕ್ಕೆ ಸಿದ್ಧ ಮಾಡುವ ತರಾತುರಿಯೇ ಇಲ್ಲ. ಕೋರ್ಟು ಎಷ್ಟು ಚಾಟಿ ಬೀಸಿದರೂ ಇವರ ದಪ್ಪ ಚರ್ಮಕ್ಕೆ ನಾಟುವುದೇ ಇಲ್ಲ. ಯಾಕಿದು ಹೀಗೆ? ಕೆರೆ ಜಾಗ ಒತ್ತುವರಿ ಮಾಡಿಕೊಂಡಿರುವ ಪ್ರಭಾವಿಗಳು-ಬಲಾಢ್ಯರಿಂದ ಅದನ್ನು ಬಿಡಿಸಿಕೊಳ್ಳಬೇಕಾಗುತ್ತೆ, ಅದು ಇವರಿಗೆ ಬೇಡವಾಗಿದೆಯಾ?

ಹಲವೆಡೆ ಏರಿಯದ ಜನರು ಸೇರಿ ತಾವೇ ದುರಸ್ತಿ, ಹೂಳೆತ್ತುವುದು ಮಾಡಿಕೊಂಡಿದ್ದಾರೆ. ಯುವ ಸಾಫ್ಟ್‍ವೇರ್ ಇಂಜಿನಿಯರ್ ಒಬ್ಬರು ತಮ್ಮ ಖರ್ಚಿನಿಂದಲೇ ಕೆರೆಗಳನ್ನು ರಿಪೇರಿ ಮಾಡಿಸುತ್ತಿರುವುದು, ಜನಾನುರಾಗಿ ವ್ಯಕ್ತಿಯೊಬ್ಬರು ಎಷ್ಟೋ ಬಾವಿ ತೋಡಿಸುವ ಪಣ ತೊಟ್ಟು ತಮ್ಮಷ್ಟಕ್ಕೆ ಆ ಕೆಲಸ ಮಾಡುತ್ತಿರುವುದು ಇವೆಲ್ಲ ಪತ್ರಿಕೆಗಳಲ್ಲಿ ವರದಿಯಾಗುತ್ತಿರುತ್ತವೆ; ಇಷ್ಟು ದಿನ ಬಂದ ಮಳೆಗೆ ಅವೆಲ್ಲ ತುಂಬಿವೆ. ಆದರೆ ಜನಪ್ರತಿನಿಧಿಗಳು-ಅಧಿಕಾರಸ್ತರು ಇಂತಹ ಕೆಲಸ ಮಾಡಿಸಿದ್ದನ್ನು ಓದಿದ್ದು ನೆನಪಿಲ್ಲ! ಇನ್ನೂ ಕೆಲವು ಕೆರೆಗಳು ರಿಪೇರಿ ಆಗಿ ನೀರು ಸಂಗ್ರಹಿಸಲಿ ಎಂಬ ಕಾರಣಕ್ಕೋ ಎಂಬಂತೆ ನಮ್ಮ ಮುಂಗಾರು ನಾಕ್ನಾಕೇ ದಿನ ಹಿಂದೆ ಸರಿಯುತ್ತಿದೆ.

ಇನ್ನು, ಕಟ್ಟಡಗಳಲ್ಲಿ ಮಳೆನೀರು ಕೊಯ್ಲಿನ ವಿಚಾರಕ್ಕೆ ಬಂದರೆ, ಜನರು ಯಾಕೋ ಆ ಬಗ್ಗೆ ಕಾಳಜಿನೇ ವಹಿಸುತ್ತಿಲ್ಲ. ಹೊಸ ಕಟ್ಟಡಗಳಲ್ಲಿ ಮಳೆನೀರು ಕೊಯ್ಲಿನ ವ್ಯವಸ್ಥೆಯನ್ನು ಸರಕಾರ ಕಡ್ಡಾಯಗೊಳಿಸಿ ಕಾಯ್ದೆ ಮಾಡಿ ತನ್ನ ‘ಕರ್ತವ್ಯ ಪೂರೈಸಿ’ ಹಲವು ವರ್ಷಗಳೇ ಸಂದುವು. ಆದರೆ ಬೇಕಾದಷ್ಟು ಬಹುಮಹಡಿ ವಸತಿ ಸಮುಚ್ಚಯಗಳು, ಸರಕಾರಿ ಕಟ್ಟಡಗಳಲ್ಲೇ ಇದನ್ನು ಅಳವಡಿಸಿಲ್ಲ. ಅವರು ಅದಕ್ಕಾಗಿ ದಂಡ ಕಟ್ಟುತ್ತಾರೆ ಹೊರತು ಮಳೆನೀರು ಕೊಯ್ಲು ಮಾಡುತ್ತಿಲ್ಲ. ಯಾಕೆ?

ಮಿಕ್ಕ ರಾಜ್ಯಗಳಲ್ಲಿ ಇದೆಲ್ಲ ಹೇಗೆ ನಡೆಯುತ್ತಿದೆ? ನೆರೆ ರಾಜ್ಯ ತಮಿಳುನಾಡಿನಲ್ಲಿ ಜಯಲಲಿತಾ ಸಿಎಂ ಆಗಿದ್ದಾಗ ಎಷ್ಟು ಕಟ್ಟುನಿಟ್ಟಾಗಿ ಮತ್ತು ಕ್ರಮಬದ್ಧ ವೃತ್ತಿಪರತೆಯಿಂದ ಈ ಕೆಲಸ ಮಾಡಿಸುತ್ತಿದ್ದರೆಂದರೆ, ಮನೆ ಕಟ್ಟುವ ಪರವಾನಗಿ ಬೇಕಿರುವವರಿಂದ ಸರಕಾರ ಅಥವಾ ಸಂಬಂಧಿತ ಸ್ಥಳೀಯ ಆಡಳಿತಗಳೇ ಮಳೆನೀರು ಕೊಯ್ಲಿನ ವ್ಯವಸ್ಥೆಗೆ ನಿಗದಿತ ಹಣ ಕಟ್ಟಿಸಿಕೊಂಡು ಅದರ ವ್ಯವಸ್ಥೆ ಮಾಡುವಂತೆ ಕಡ್ಡಾಯ ಮಾಡಲಾಗಿತ್ತು. ಹಾಗೆಯೇ ಬ್ಯಾಂಕಿನಿಂದ ಕೃಷಿ ಸಾಲ ಬೇಕಿದ್ದಲ್ಲಿ ಕೃಷಿ ಹೊಂಡ ನಿರ್ಮಿಸಲೇ ಬೇಕಿತ್ತು. ನಮ್ಮಲ್ಲೇಕೆ ಇಂತಹ ಕ್ರಮಗಳನ್ನು ಕಟ್ಟುನಿಟ್ಟಾಗಿ ಅಳವಡಿಸುವುದಿಲ್ಲ?

ಬಹುಮಹಡಿ ಕಟ್ಟಡಗಳ ಹಾಗೂ ದೊಡ್ಡದೊಡ್ಡ ಮನೆಗಳ ನಿವಾಸಿಗಳು ಎಂದಾದರೂ ನೀರಿಗಾಗಿ ಕೊಡ ಹಿಡಿದು ಕ್ಯೂ ನಿಲ್ಲುವುದು ಇದೆಯಾ? ಇಲ್ಲ. ಆ ಮನೆಗಳ ಸಂಪುಗಳೆಲ್ಲ ರಾತ್ರಿಯೇ ತುಂಬಿ ನೀರೆಲ್ಲ ಹರಿದುಹೋಗುತ್ತಿರುತ್ತದೆ. ಆದ್ದರಿಂದಲೇ ಅವರಿಗೆ ನೀರು ಕೊಯ್ಲಿನ ಜರೂರತ್ತು ಕಾಣುತ್ತಿಲ್ಲ. [ನಾವು ವಾಸ ಇರುವ ಕಟ್ಟಡದಲ್ಲಿ ಮಳೆನೀರು ಕೊಯ್ಲಿನಿಂದ ಬೋರ್‍ವೆಲ್‍ಗೆ ನೀರು ಮರುಪೂರಣ ವ್ಯವಸ್ಥೆಯಿದೆ. ಆದರೆ ನಮ್ಮ ಪಕ್ಕದ ಕಟ್ಟಡದಲ್ಲಿ ಆ ವ್ಯವಸ್ಥೆ ಮಾಡಿರಲಿಲ್ಲ. ಅವರ ಬೋರ್‍ವೆಲ್ ಬತ್ತಿಹೋಗಿ, ಟ್ಯಾಂಕರ್ ನೀರು ಸಹ ಸಾಕಾಗದೆ, ಮಾಲೀಕರು ನಿವಾಸಿಗಳಿಗೆ ನೀರಿನ ‘ರೇಶನ್’ ಅಳವಡಿಸಿದ್ದಾರೆ. ಹೀಗಾದ ನಂತರ ಈಗ ಮಳೆನೀರು ಕೊಯ್ಲಿನ ವ್ಯವಸ್ಥೆ ಮಾಡಿದ್ದಾರೆ; ಆದರೆ ಆ ನಂತರ ಮಳೆಯೇ ಬಂದಿಲ್ಲ ಇನ್ನೂ!]

ಆದ್ದರಿಂದ ಮಳೆನೀರು ಸಂಗ್ರಹ ಸುಗಮವಾಗಿ ಆಗಬೇಕೆಂದರೆ ಬರೀ ದಂಡ ಕಟ್ಟಿಸಿಕೊಳ್ಳುವುದಲ್ಲ. ದುಡ್ಡಿನಿಂದ ನೀರು ಉತ್ಪಾದನೆ ಆಗುವುದಿಲ್ಲ! ಮನೆ ನಿರ್ಮಾಣದ ಪರವಾನಗಿ ಕೊಡುವಾಗಲೇ ಮಳೆನೀರು ಕೊಯ್ಲಿಗೆ ದುಡ್ಡು ಕಟ್ಟಿಸಿಕೊಂಡು ಅಥಾರಿಟಿಗಳೇ ಅದನ್ನು ನಿರ್ಮಿಸುವ ವ್ಯವಸ್ಥೆಯಾಗಬೇಕು; ಅಥವಾ ಮಳೆನೀರು ಕೊಯ್ಲಿನ ವ್ಯವಸ್ಥೆ ಮಾಡದಿದ್ದರೆ ಅವರಿಗೆ ನೀರು ಪೂರೈಕೆಯನ್ನು ಬಂದ್ ಮಾಡುವ ನಿಬಂಧನೆಯೊಂದಿಗೇನೇ ಪರವಾನಗಿ ಕೊಡಬೇಕು ಮತ್ತು ಇದನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು.

ಈಗಾಗಲೇ ಬಹಳ ತಡವಾಗಿದೆ. ಈ ವರ್ಷದ ಬೇಸಿಗೆಯಲ್ಲಿ ಬೆಂಗಳೂರಿನ ಅದೆಷ್ಟೋ ಸಣ್ಣದೊಡ್ಡ ಬಹುಮಹಡಿ ಕಟ್ಟಡಗಳಲ್ಲಿನ ಬೋರ್‍ವೆಲ್‍ಗಳು ಒಣಗಿಹೋಗಿ ಟ್ಯಾಂಕರ್ ನೀರಿಗಾಗಿ ಪರದಾಡುವ ದೃಷ್ಯ ಕಾಮನ್ ಆಗಿತ್ತು. ಒಂದು ವೇಳೆ ಟ್ಯಾಂಕರುಗಳಿಗೇ ನೀರು ಸಿಗದೆ ಹೋದರೆ? ಧರ್ಮಸ್ಥಳ, ಉಡುಪಿ, ಸುಬ್ರಮಣ್ಯ, ಕೊಲ್ಲೂರು ಮುಂತಾದ ಪ್ರಖ್ಯಾತ ಯಾತ್ರಾಸ್ಥಳಗಳಲ್ಲೆಲ್ಲ ನೀರಿಗಾಗಿ ಹಾಹಾಕಾರದಂಥ ಪರಿಸ್ಥಿತಿ ನಿರ್ಮಾಣವಾಗಿದ್ದು ಜನರಿಗೂ ಅಧಿಕಾರಸ್ತರಿಗೂ ಎಚ್ಚರಿಕೆಯ ಗಂಟೆಯಾಗಬೇಕಿದೆ. ಮಳೆನೀರು ಸಂಗ್ರಹವನ್ನು ಗರಿಷ್ಠ ಪ್ರಮಾಣಕ್ಕೆ ಮಾಡಿರೆಂಬ ನಮ್ಮ ಜಲತಜ್ಞರ ಸಲಹೆಯನ್ನು ಎಲ್ಲರೂ ಪಾಲಿಸಿದರೆ ಮಾತ್ರ ಉಳಿಗಾಲ ಎಂದು ಅನ್ನಿಸುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...