Homeಅಂಕಣಗಳುರಾಜಕಾರಣದಲ್ಲಿ ಶೈಕ್ಷಣಿಕ ಅರ್ಹತೆ

ರಾಜಕಾರಣದಲ್ಲಿ ಶೈಕ್ಷಣಿಕ ಅರ್ಹತೆ

- Advertisement -
- Advertisement -

ಕುಮಾರಸ್ವಾಮಿಯವರ ಸರ್ಕಾರ ಮೂರು ಅಗ್ನಿಪರೀಕ್ಷೆಗಳನ್ನು ಹಾಯಬೇಕಾಯಿತು. ಅ. ಸದನದಲ್ಲಿ ಬಹುಮತ ರುಜುವಾತು ಪಡಿಸುವುದು. ಆ. ಮಂತ್ರಿಮಂಡಲ ರಚನೆ. ಇ. ಖಾತೆ ಹಂಚಿಕೆ ಮತ್ತು ಹಂಚಿಕೆ ಬಳಿಕ ಎದ್ದ ಬಿರುಗಾಳಿಯಲ್ಲಿ ಬೇಕಾದ ಖಾತೆ ಸಿಗಲಿಲ್ಲವೆಂಬ ಬೇಸರಿಗಳನ್ನು ಒಲಿಸುವುದು. ಈ ಮೂರನೆಯ ಕೆಲಸದಲ್ಲಿ ಹೆಚ್ಚು ಸುದ್ದಿಯಾಗಿದ್ದು ಜಿ.ಟಿ. ದೇವೇಗೌಡರಿಗೆ ಕೊಡಲಾದ ಉನ್ನತ ಶಿಕ್ಷಣ ಖಾತೆ. ಈ ಖಾತೆ ಹಂಚಿಕೆ ಹಿಂದಿನ ತರ್ಕವೇನೆÉಂದು ಸ್ಪಷ್ಟವಾಗುತ್ತಿಲ್ಲ. ಆದರೆ ಇದರಿಂದ ಎದ್ದ ಸಾರ್ವಜನಿಕ ಟೀಕೆಗಳಿಂದಲೊ ತಮ್ಮ ಶೈಕ್ಷಣಿಕ ಕೀಳರಿಮೆಯಿಂದಲೂ ಗೌಡರು ಆ ಖಾತೆ ನನಗೊಲ್ಲೆ ಎಂದರು. ದೊಡ್ಡಗೌಡರಲ್ಲಿ ಹೋಗಿ `ಜನ ತಮಾಶೆ ಮಾಡುತ್ತಿದ್ದಾರೆ, ಜನರ ಜತೆ ಬೆರೆಯುವಂತಹ ಸಹಕಾರ ನೀರಾವರಿ ತರಹದ ಖಾತೆ ಕೊಡಿ’ ಎಂದು ಅಲವತ್ತುಕೊಂಡರು. ಸದ್ಯಕ್ಕೆ, ಮುಖ್ಯಮಂತ್ರಿಯವರೇ ಶಿಕ್ಷಣ ಖಾತೆಯನ್ನು ತಮ್ಮಲ್ಲಿಟ್ಟುಕೊಂಡು, ಅವರಿಗೆ ಬೇರೆ ಖಾತೆ ಕೊಡಲು ಚಿಂತನೆ ಮಾಡುತ್ತಿರುವಲ್ಲಿಗೆ ಪ್ರಕರಣ ಬಂದು ನಿಂತಿದೆ. ಹಿಂದೆ ರೈತಾಪಿ ಗ್ರಾಮೀಣ ಹಿನ್ನೆಲೆಯಿಂದ ಬಂದ ಪಾಟೀಲರಿಗೆ ಐಟಿಖಾತೆ ಕೊಟ್ಟಾಗಲೂ ಉದ್ಯಮವಲಯದಿಂದ ಟೀಕೆ-ಅದನ್ನು ಅಮೆರಿಕದಲ್ಲಿದ್ದು ಬಂದಿರುವ ಕೃಷ್ಣಭೈರಾರೆಡ್ಡಿಯವರಿಗೆ ಕೊಡಬೇಕಾಗಿತ್ತು ಎಂಬ ಸಲಹೆಯ ಸಮೇತ- ಬಂದಿತ್ತು.
ಈ ಪ್ರಕರಣಗಳು ಅಕ್ಷರಸ್ಥ ವಿದ್ಯೆ, ಪದವಿ ಶಿಕ್ಷಣ ಹಾಗೂ ಖಾತೆಯ ಸ್ವರೂಪ ನಡುವಣ ಸಂಬಂಧ ಕುರಿತಂತೆ ಸಮಾಜದಲ್ಲಿರುವ ಜನಪ್ರಿಯ ಗ್ರಹಿಕೆಯ ದ್ಯೋತಕವಾಗಿವೆ. ಈ ಗ್ರಹಿಕೆ ಮೂರು ಪ್ರಶ್ನೆ ಹುಟ್ಟಿಸಿದೆ. 1. ನಿರ್ದಿಷ್ಟ ಖಾತೆ ನಿರ್ವಹಿಸಲು ರಾಜಕಾರಣಿಗೆ ಇರಬೇಕಾದುದು ಆ ಖಾತೆ ಸಂಬಂಧ ಶೈಕ್ಷಣಿಕ ಅರ್ಹತೆಯೊ ಅನುಭವವೊ ಆಸಕ್ತಿಯೊ ಆಡಳಿತಾತ್ಮಕ ದಕ್ಷತೆಯೊ? 2. ಶೈಕ್ಷಣಿಕ ಅರ್ಹತೆ ಎನ್ನುವಾಗ ಇರುವ ಶಿಕ್ಷಣ ಅಥವಾ ವಿದ್ಯೆಯ ಪರಿಕಲ್ಪನೆ ಯಾವುದು? 3. ಶೈಕ್ಷಣಿಕ ಅರ್ಹತೆಯ ಪರವಾಗಿ ವಾದಿಸುತ್ತಿರುವ ಜನ ಯಾರು ಮತ್ತು ಅವರು ಪ್ರತಿಪಾದಿಸುತ್ತಿರುವ ಮೌಲ್ಯ ಮತ್ತು ಮರೆಮಾಚುತ್ತಿರುವ ಸಂಗತಿಗಳು ಯಾವುವು?
ರಾಜಕಾರಣಿಯೊಬ್ಬನಿಗೆ ನಿರ್ದಿಷ್ಟ ಖಾತೆ ನಿಭಾಯಿಸಲು ಸಂವಿಧಾನವು ಶೈಕ್ಷಣಿಕ ಇಲ್ಲವೇ ಅನುಭವದ ಹಿನ್ನೆಲೆಯನ್ನು ನಿರ್ದಿಷ್ಟಪಡಿಸಿಲ್ಲ. ಇದರಿಂದ ಪದವೀಧರರಲ್ಲದ ಎಚ್.ಡಿ. ದೇವೇಗೌಡರು ಪ್ರಧಾನಿಗಳಾದರು. ಪದವಿ ವಿಷಯದಲ್ಲಿ ಸಂಶಯಕ್ಕೀಡಾಗಿರುವ ಸ್ಮøತಿ ಇರಾನಿಯವರೂ ವಿಶ್ವವಿದ್ಯಾಲಯಗಳ ಆಡಳಿತ ನೋಡಿಕೊಳ್ಳುವ ಮಾನವ ಸಂಪನ್ಮೂಲ ಖಾತೆಗೆ ಮಂತ್ರಿಯಾಗಿದ್ದರು. ಆದ್ದರಿಂದ ಜಿ.ಟಿ.ದೇವೇಗೌಡರು ಶಿಕ್ಷಣಖಾತೆ ಮಂತ್ರಿಯಾಗುವುದು ಔಚಿತ್ಯದ ಅಥವಾ ನೈತಿಕ ಪ್ರಶ್ನೆ ಆಗಬಹುದೇ ಹೊರತು, ಕಾನೂನಾತ್ಮಕ ಸಂವಿಧಾನಾತ್ಮಕ ತೊಡಕಲ್ಲ. ಆದರೂ ಔಪಚಾರಿಕ ಪದವಿಯ ಹಿನ್ನೆಲೆ ಕೊಡುವ ಅಧಿಕೃತತೆ, ಅದು ಹುಟ್ಟಿಸುವ ಕೀಳರಿಮೆ, ಮೋದಿ ಮತ್ತು ಸ್ಮøತಿ ತಾವೂ ಪದವಿ ಪಡೆದಿದ್ದೇವೆ ಎಂದು ರುಜುವಾತುಪಡಿಸುವ ಒತ್ತಡಕ್ಕೆ ದೂಡಿರುವುದನ್ನು ಗಮನಿಸಬಹುದು.
ಇನ್ನು ಮಂತ್ರಿಯಾದವರು ಪಡೆದ ಪದವಿಗೂ ಅವರ ಖಾತೆಗೂ ಇರುವ ಸಂಬಂಧದಲ್ಲೂ ನಿರ್ಬಂಧವಿಲ್ಲ. ಭಾರತದ ಶಕ್ತಿ ರಾಜಕಾರಣಕ್ಕೆ ಪ್ರವೇಶಿಸಿದ ಹೆಚ್ಚು ಜನರು ಕಾನೂನು ಪದವಿ ಹಿನ್ನೆಲೆಯವರು. ವಕೀಲಿಕೆ ಹಿನ್ನೆಲೆಯ ಸಿದ್ದರಾಮಯ್ಯ ಹಣಕಾಸು ಮಂತ್ರಿಯಾಗಿ ಹತ್ತಕ್ಕಿಂತ ಹೆಚ್ಚು ಬಜೆಟ್ ಮಂಡಿಸಿದರು; ಅರ್ಥತಜ್ಞರಾಗಿದ್ದ ಮನಮೋಹನ ಸಿಂಗ್ ಪ್ರಧಾನಮಂತ್ರಿಯಾದರು; ಎಚ್.ಡಿ ದೇವೇಗೌಡರು ರಾಜಕಾರಣಕ್ಕೆ ಬರುವ ಮೊದಲು ನೀರಾವರಿ ಇಲಾಖೆಯ ಇಂಜಿನಿಯರಾಗಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಿದ್ದ ಖಾದರ್ ತಮಗೆ ಕೊಟ್ಟ ಆರೋಗ್ಯ ಆಹಾರ ಖಾತೆಯಲ್ಲಿಯೂ, ಎಂ.ಬಿ. ಪಾಟೀಲರು ನೀರಾವರಿಯಲ್ಲಿ ಒಳ್ಳೆಯ ಕೆಲಸ ಮಾಡಿದರೆಂಬ ವರದಿಗಳಿವೆ. ಕಾರುಚಾಲಕ ಹಿನ್ನೆಲೆಯಿಂದ ಬಂದ ಜಾಫರ್ ಶರೀಫ್ ಉನ್ನತ ಶಿಕ್ಷಣ ಪಡೆದ ಎಷ್ಟೊ ಮಂತ್ರಿಗಳಿಗೆ ಹೋಲಿಸಿದರೆ, ರೈಲ್ವೆಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದರೆನ್ನಲಾಗುತ್ತದೆ. ಭಾರತದ ಅನೇಕ ಕ್ರಿಯಾಶೀಲ ರಾಜಕಾರಣಿಗಳಿಗೆ ಶೈಕ್ಷಣಿಕವಾಗಿ ದೊಡ್ಡ ಪದವಿಗಳಿರಲಿಲ್ಲ. ಅದು ಅವರು ತಮ್ಮ ಖಾತೆ ನಿಭಾಯಿಸುತ್ತ ಪಡೆದ ಗಳಿಸಿದ ಯಶಸ್ಸು-ಸೋಲುಗಳಿಗೂ ತಾರ್ಕಿಕ ಕಾರಣವಾಗಲಿಲ್ಲ.
ಹಿಂದೆ ರಾಜಕಾರಣಕ್ಕೆ ಭೂಮಾಲೀಕ ಮತ್ತು ವಕೀಲಿ ಹಿನ್ನೆಲೆಯವರು ಹೆಚ್ಚು ಬರುತ್ತಿದ್ದರು. ಈಗ ಉದ್ಯಮಿಗಳು ಸಿನಿಮಾನಟರು ಭೂಗತಲೋಕದವರು ಅಧ್ಯಾಪಕರು ವ್ಯಾಪಾರಿಗಳು ಗಣಿಮಾಲಿಕರು ಚಳವಳಿಗಾರರು-ಅದೊಂದು ನೂರಾರು ಹೊಳೆ ಕೂಡುವ ಕಡಲು. ಹೀಗಾಗಿ ಶಾಸಕರ-ಸಂಸದರ ಅನುಭವದ ಹಿನ್ನೆಲೆಗೂ ಅವರ ಖಾತೆಗೂ ಸಮೀಕರಣ ಸಾಧಿಸುವುದು ಅಸಾಧ್ಯ. ಆದರೂ ಲೋಕೋಪಯೋಗಿ ಖಾತೆಗಿಲ್ಲದ ಅರ್ಹತೆಯ ಪ್ರಶ್ನೆ, ಉನ್ನತ ಶಿಕ್ಷಣ, ತಂತ್ರಜ್ಞಾನದಂತಹ ವಿಶೇಷ ಪರಿಣತಿಯ ಕ್ಷೇತ್ರವನ್ನು ಮುನ್ನಡೆಸುವವರಿಗೆ ಕೇಳಲಾಗುತ್ತದೆ. ಈ ಅಪೇಕ್ಷೆ ತಪ್ಪಲ್ಲ. ವೈರುಧ್ಯವೆಂದರೆ ಈ ಹಿಂದೆ ಉದ್ಯಮ ವೈದ್ಯಕೀಯ ವ್ಯಾಪಾರಿ ಹಿನ್ನೆಲೆಯವರೆಲ್ಲ ಶಿಕ್ಷಣ ಮಂತ್ರಿಯಾದಾಗ ನಾವು ಈ ಪ್ರಶ್ನೆಯನ್ನು ಎತ್ತೇಯಿಲ್ಲ. ಬೌದ್ಧಿಕ ಹಿನ್ನೆಲೆಯ ರಾಯರೆಡ್ಡಿಯವರು ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನೇ ಮೊಟಕು ಮಾಡುವ ವಿಧೇಯಕ ತಂದಾಗಲೂ ಪ್ರಶ್ನೆ ಎತ್ತಲಿಲ್ಲ.
ಭಾರತದ ಅಕ್ಷರಸ್ಥ ವರ್ಗಗಳಲ್ಲಿ ವಿದ್ಯೆ-ಶಿಕ್ಷಣ ಕುರಿತು ಕೆಲವು ಮೂಢನಂಬಿಕೆಯಿವೆ. ಅಕ್ಷರಕ್ಕೂ ವಿದ್ಯೆಗೂ ಯಾಂತ್ರಿಕ ಸಂಬಂಧ ಏರ್ಪಟ್ಟಿದ್ದ ಸಮಾಜದಲ್ಲಿ ಅಕ್ಷರದಾಚೆ ಇರುವ ಲೋಕೋಪಯೋಗಿ ವಿದ್ಯೆಗಳನ್ನು ಮಾನ್ಯ ಮಾಡುವ ಮನೋಭಾವ ಇರುವುದಿಲ್ಲ. ಅಲ್ಲಿ ಅನಕ್ಷರಸ್ಥರನ್ನು ಗೇಲಿಮಾಡುವ ಕತೆಗಳೂ ನುಡಿಗಟ್ಟುಗಳೂ ಹುಟ್ಟಿಕೊಳ್ಳುತ್ತವೆ. ಅನಕ್ಷರಸ್ಥನೊಬ್ಬ ಒಳ್ಳೇಕವಿಯಾದರೆ ದೇವತೆ ವರಪ್ರಸಾದವೆಂಬ ಮಿತ್ ಸಿದ್ಧವಾಗುತ್ತದೆ. ಇವು ಅಕ್ಷರವಿದ್ಯೆಯನ್ನು ದೈಹಿಕ ದುಡಿಮೆ ಮತ್ತು ಸೃಜನಶೀಲ ಪ್ರತಿಭೆಯ ಜತೆ ಸಾವಯವ ಸಂಬಂಧ ಕತ್ತರಿಸಿಕೊಂಡು ಹುಟ್ಟಿದ ನಂಬಿಕೆಗಳು. ತನ್ನಪ್ಪ ಅಮ್ಮ ಅವಿದ್ಯಾವಂತರು ಎಂದು ಹೆಮ್ಮೆಯಿಂದಲೂ ಅಳುಕಿನಿಂದಲೊ ಹೇಳಿಕೊಳ್ಳುವ ಪದವೀಧರ ಮಕ್ಕಳಿಗೆ ಅವರು ಅನಕ್ಷರಸ್ಥ ನಿಜ. ಆದರೆ ಅವರಲ್ಲಿ ಬೇಸಾಯ ಬಡಗಿತನ ಕಮ್ಮಾರಿಕೆ ನೇಕಾರಿಯಂತಹ ಅಮೂಲ್ಯ ವಿದ್ಯೆಯಿತ್ತು ಎಂಬುದರ ಖಬರಿರುವುದಿಲ್ಲ. ಇದಕ್ಕೆ ಪೂರಕವಾಗಿ ಅಕ್ಷರಸ್ಥ ಸಂಸ್ಕøತಿಯಿಂದ ಬಂದವರಂತೂ ತಮ್ಮನ್ನು ದೇವತೆಗಳೆಂದೇ ಭಾವಿಸಿರುತ್ತಾರೆ. ಈ ಗರ್ವಕ್ಕೆ ಶಿಕ್ಷಣದಲ್ಲಿರುವ `ಉನ್ನತ’ ಶಬ್ದವೂ ಇಂಬಾಗಿದೆ. ವಿಶ್ವವಿದ್ಯಾಲಯದ ಔಪಚಾರಿಕ ಪದವಿ ಶಿಕ್ಷಣವು ಸಾಮಾಜಿಕ ಅಂತಸ್ತಾಗಿರುವ ಸಮಾಜದಲ್ಲಿ, ನಮ್ಮ ಸುತ್ತ ಯಾಕಾಗಿ ಅನಕ್ಷರತೆ ಇದೆ, ಅಕ್ಷರವಿದ್ಯೆ ಕೆಲವರಿಗೇ ಸೀಮಿತವಾಗಿದೆ ಎಂಬ ಬಗ್ಗೆ ಚಿಂತನೆ ಮಾಡದ ವರ್ಗವಿರುತ್ತದೆ. ಇದು ಇಂಗ್ಲಿಷ್ ಭಾಷೆಯನ್ನೇ ಜ್ಞಾನವೆಂದು ಭಾವಿಸಿರುತ್ತದೆ. ಅಕ್ಷರೀವಿದ್ಯೆ, ವಿವಿ ಪದವಿ ಹಾಗೂ ಇಂಗ್ಲಿಷು ಇಲ್ಲದವರನ್ನು ತುಚ್ಛವಾಗಿ ನೋಡುತ್ತದೆ. ತನ್ನ ಮಾತುಕತೆಯಲ್ಲೇ ಅನಕ್ಷರಸ್ಥ ಅಥವಾ ಪದವಿರಹಿತ ಜನರಲ್ಲಿ ಕೀಳರಿಮೆ ಸೃಷ್ಟಿಸುತ್ತದೆ. ಆದರೆ ಈ ವರ್ಗ ಮರೆಯುವ ಅಥವಾ ಮರೆಮಾಚುವ ಸಂಗತಿಯೆಂದರೆ; ಉನ್ನತಶಿಕ್ಷಣ ಕೊಡುತ್ತಿರುವ ವಿಶ್ವವಿದ್ಯಾಲಯಗಳಲ್ಲಿ ದಡ್ಡರೂ ಸೋಮಾರಿಗಳೂ ಸಹ ತುಂಬಿರಬಹುದು; ರಾಜಕೀಯ ಪ್ರಭುಗಳಿಗೆ ತಮ್ಮ ಪದವಿಯ ತಮ್ಮ ವಿಶ್ವವಿದ್ಯಾಲಯದ ಘನತೆಯನ್ನು ಅಡವಿಟ್ಟು ಬಾಗುವ ಕುಲಪತಿಗಳಿರಬಹುದು; ಹೆಚ್ಚು ಬುದ್ಧಿವಂತರು ದೊಡ್ಡ ಪದವಿ ಪಡೆದವರಲ್ಲಿ ಜಾತಿವಾದಿಗಳು ಮತೀಯವಾದಿಗಳು ಭ್ರಷ್ಟರು ಜನರ ಬಗ್ಗೆ ಪ್ರೀತಿಯಿಲ್ಲದವರು ಇರಬಹುದು ಎಂಬುದನ್ನು. ವೈದ್ಯ ವಕೀಲ ಪತ್ರಕರ್ತ ಇಂಜಿನಿಯರ್ ಮುಂತಾದವರಿಗೆ ಅವರ ವೃತ್ತಿಗೆ ಬೇಕಾದ ಶೈಕ್ಷಣಿಕ ಅರ್ಹತೆಯಿರಬೇಕು ಎನ್ನುವುದು ಸರಿ. ಆದರೆ ಈ ಅರ್ಹತೆಗೆ ಬೇಕಾದ ಪ್ರಾಮಾಣಿಕತೆ ಮಾನವೀಯತೆ ಶೈಕ್ಷಣಿಕ ಪ್ರೀತಿ, ನಿಷ್ಪಕ್ಷಪಾತಗಳು ಇವೆಯಾ ಎಂದು ಕೇಳದಿರುವುದು ಹಿಪಾಕ್ರಸಿ. ಇಂತಹ ಹಿಪಾಕ್ರಟಿಕ್ ವರ್ಗಕ್ಕೆ, ರಾಜಕಾರಣಿಯ ಶೈಕ್ಷಣಿಕ ಹಿನ್ನೆಲೆ ಕೇಳುವುದಕ್ಕೆ ನೈತಿಕತೆ ಉಳಿದಿರುತ್ತದೆಯೇ? ದೇವೇಗೌಡರ ಶೈಕ್ಷಣಿಕ ಅರ್ಹತೆ ಮೇಲೆ ಜೋಕು ಕಟ್ಟಿದವರಲ್ಲಿ ಹೆಚ್ಚಿನವರು ಅಂತರ್ಜಾಲದಲ್ಲಿ ಈಜಾಡುವವರು; ಇಂಗ್ಲೀಶನ್ನು ಬಳಸುವವರು. ಮೇಲ್ಜಾತಿಯವರು; ತಂತ್ರಜ್ಞಾನ ಪತ್ರಿಕೋದ್ಯಮ ಕ್ಷೇತ್ರದವರು; ತಮ್ಮ ಜಾತಿ ಮತ್ತು ಕುಟುಂಬದ ಹಿನ್ನೆಲೆಯಲ್ಲಿ ಅಕ್ಷರವನ್ನು ಸಾಂಸ್ಕøತಿಕ ಬಂಡವಾಳವನ್ನಾಗಿ ಪಡೆದವರು; ಅನಕ್ಷರತೆ ಶೂದ್ರತ್ವ ದಲಿತತ್ವ ಮುಸ್ಲಿಮರು ಬುಡಕಟ್ಟುಗಳ ಬಗ್ಗೆ ತಿರಸ್ಕಾರವುಳ್ಳವರು; ಮೀಸಲಾತಿ ಪ್ರತಿಭೆಗೆ ವಿರೋಧಿ ಎಂದು ನಂಬಿದವರು; ಅಮೆರಿಕದಲ್ಲಿ ತಮ್ಮ ಪ್ರತಿಭೆಯನ್ನು ತೊಡಗಿಸಲು ಅವಕಾಶಕ್ಕಾಗಿ ಹಾತೊರೆವವರು; ಸಂಗೀತ ಸಾಹಿತ್ಯ ಕ್ಷೇತ್ರ್ರಗಳಲ್ಲಿ ತಳಸ್ತರದ ಜನ ಪ್ರವೇಶಿಸುವ ಬಗ್ಗೆ ಸಹನೆಯಿಲ್ಲದವರು; ದಲಿತರ ಮೇಲೆ ಹಲ್ಲೆಗೆ ಮತೀಯವಾದಕ್ಕೆ ಮೌನಸಮ್ಮತಿ ನೀಡುವವರು; ಶಿಕ್ಷಣ ವ್ಯವಸ್ಥೆಯಲ್ಲಿ ಮತೀಯವಾದವನ್ನೊ ವ್ಯಾಪಾರಿ ಹಿತಾಸಕ್ತಿಗಳನ್ನೊ ಸಂಸ್ಕøತಿ ಹೆಸರಲ್ಲಿ ಕಂದಾಚಾರವನ್ನೊ ತುರುಕುವಾಗ ತಲ್ಲಣಿಸದವರು; ಲೇಖಕರ ಮೇಲೆ ಹಲ್ಲೆ ಕೊಲೆಯಾದಾಗ ಗುಪ್ತವಾಗಿ ಸಂಭ್ರಮಿಸಿದವರು. ಈ ಮನೋಭಾವ ಅನಕ್ಷರತೆ ಮಾಡದ ಅನಾಹುತ ಮಾಡಬಲ್ಲುದು.
ಬಲಪಂಥೀಯ ಸರ್ಕಾರಗಳು ಅಧಿಕಾರ ಕೈಗೆ ತೆಗೆದುಕೊಂಡಾಗೆÉಲ್ಲ ವಿಶ್ವವಿದ್ಯಾಲಯಗಳನ್ನು ಅಲ್ಲಿ ನಮ್ಮ ಸಿದ್ಧಾಂತ ವಿರೋಧಿಸುವ ವಿಚಾರವಾದಿಗಳು ತುಂಬಿಕೊಂಡಿದ್ದಾರೆ ಎಂದು ಹಗೆಗಣ್ಣಲ್ಲೇ ನೋಡುತ್ತವೆ. ನಟನೆಯ ಲೋಕದಿಂದ ಬಂದ ಸ್ಮøತಿಇರಾನಿ ಅವರಿಗೆ ಮಾನವ ಸಂಪನ್ಮೂಲ ಖಾತೆಯನ್ನು, ವಿಶ್ವವಿದ್ಯಾಲಯಗಳಲ್ಲಿರುವ ಚಿಂತಕರು ವಿಜ್ಞಾನಿಗಳು ಬುದ್ಧಿಜೀವಿಗಳಿಗೆ ಮುಜುಗರ ಮಾಡಲೆಂದೇ ಕೊಡಲಾಗಿದೆ; ಶಿಕ್ಷಣದ ಬಗ್ಗೆ ಗೊತ್ತಿಲ್ಲದ ಮಂತ್ರಿಯಿದ್ದರೆ ಸಂಘಪರಿವಾರಕ್ಕೆ ತನ್ನ ಅಜೆಂಡಾಗಳನ್ನು ಹೇರುವುದು ಸುಲಭ ಎಂಬ ವ್ಯಾಖ್ಯಾನ ಮಾಡಲಾಯಿತು. ಸ್ಮøತಿಯವರ ಕಾಲದಲ್ಲಿಯೇ ಕನ್ಹಯ್ಯ ಸೆರೆಮನೆಗೆ ಹೋಗಿದ್ದು: ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡಿದ್ದು. ಸಾರ್ವಜನಿಕ ಟೀಕೆ ಎದುರಿಸಿದ ಬಳಿಕ ಸ್ಮøತಿಯವರ ಬದಲಿಗೆ ಪದವೀಧರರಾದ ಆರೆಸ್ಸೆಸ್ ಹಿನ್ನೆಲೆಯ ಮೇಲ್ಜಾತಿಯ ಜಾವಡೇಕರ್ ಬಂದಿದ್ದಾರೆ. ಹಾರ್ವರ್ಡ್ ಪದವಿಯುಳ್ಳ ಸುಬ್ರಹ್ಮಣ್ಯಸ್ವಾಮಿಯವರ ಬುದ್ಧಿವಂತಿಕೆ, ತರ್ಕಶೀಲತೆ, ವಾಗ್ಮಿತೆ, ಇಂಗ್ಲೀಷಿನ ಮೇಲಿನ ಪ್ರಭುತ್ವದ ಬಗ್ಗೆ ದಂತಕತೆಗಳಿವೆ. ಆದರೆ ಅವರ ಸಾಮಾಜಿಕ ಗ್ರಹಿಕೆ ಸಂಕುಚಿತ. ಸದ್ಯ ಭಾರತದ ಸಂಸ್ಕøತಿ ಮಂತ್ರಿಯಾಗಿರುವರು ಕಲಬುರ್ಗಿ ಕೊಲೆಯಾದ ಬಂದ ಪ್ರತಿಭಟನೆಗೆ, ಲೇಖಕರಿಗೆ ಉಸಿರುಗಟ್ಟುವ ವಾತಾವರಣ ಇದ್ದರೆ ಅವರು ಬರೆಯುವುದನ್ನು ನಿಲ್ಲಿಸಲಿ ಎಂದು ಅಪ್ಪಣೆ ಕೊಟ್ಟರು. ಇದನ್ನು ಹೇಗೆ ಅರ್ಥಮಾಡಿಕೊಳ್ಳುವುದು?
ಈ ಚರ್ಚೆಯ ಉದ್ದೇಶ ದೇವೇಗೌಡರು ಶಿಕ್ಷಣ ಖಾತೆ ನಿಭಾಯಿಸಲು ಸಮರ್ಥರು ಅಥವಾ ಅಸಮರ್ಥರು ಎಂದು ಪ್ರತಿಪಾದಿಸುವುದಲ್ಲ. ರಾಜಕಾರಣಿಯ ದಕ್ಷತೆ-ಅದಕ್ಷತೆಗಳಿಗೆ ಶೈಕ್ಷಣಿಕ ಹಿನ್ನೆಲೆ ಆತ್ಯಂತಿಕ ಮಾನದಂಡವಾಗಬೇಕಿಲ್ಲ ಎಂದು ಸೂಚಿಸುವುದು. ವಾಸ್ತವದಲ್ಲಿ ದೇವೇಗೌಡರಿಗೆ ಶಿಕ್ಷಣ ಖಾತೆ ಇಷ್ಟವಿಲ್ಲ. ಶಿಕÀ್ಷಣವು ಲೋಕೋಪಯೋಗಿ ಸಾರಿಗೆ ಇಂಧನದ ಹಾಗೆ ಶಕ್ತಖಾತೆಯಲ್ಲ ಎಂಬುದೂ ಕಾರಣವೂ ಇದ್ದೀತು. ಬಿಜೆಪಿಯೇತರ ಪಕ್ಷದ ಸರ್ಕಾರಗಳಲ್ಲಿ ಸಾಮಾನ್ಯವಾಗಿ ಹಣಕಾಸು ಗೃಹ ಇಂಧನದಂತಹ ಪ್ರಭಾವೀ ಖಾತೆಗಳಿಗೆ ಸ್ಪರ್ಧೆ; ಶಿಕ್ಷಣವನ್ನು ಕೇಳುವವರಿರುವುದಿಲ್ಲ. ಹಿಂದೆ ದೇಶಪಾಂಡೆಯವರಿಗೆ ಈ ಖಾತೆಕೊಟ್ಟಾಗ ಅವರು ಉಸಿರುಗಟ್ಟಿಹೋದರು. ಉದ್ಯಮಿಯಾಗಿ ಅವರಿಗೆ ಭಾರೀ ಕೈಗಾರಿಕೆಯ ಖಾತೆ ಬೇಕಾಗಿತ್ತು. ಅದನ್ನು ಮುಂದೆ ಪಡೆದರು ಕೂಡ. ಆದರೆ ಸೈದ್ಧಾಂತಿಕ ಹಿನ್ನೆಲೆಯ ಎಡ ಮತ್ತು ಬಲಪಂಥೀಯ ಸರ್ಕಾರಗಳಿಗೆ ಶಿಕ್ಷಣಖಾತೆ ಬಹಳ ಮಹತ್ವದ್ದು. ಅದನ್ನು ಅವರಲ್ಲೇ ಹೆಚ್ಚು ಬುದ್ಧಿವಂತರಾದ ಸೈದ್ಧಾಂತಿಕ ಸ್ಪಷ್ಟತೆಯುಳ್ಳವರಿಗೆ ಕೊಡುತ್ತಾರೆ. ಶಿಕ್ಷಣ ವ್ಯವಸ್ಥೆ ಮೂಲಕ ಸಮಾಜದ ಆಲೋಚನಾಕ್ರಮ ಬದಲಿಸಬಹುದು ಎಂಬುದು ಅವಕ್ಕೆ ಗೊತ್ತು.
ಮುಖ್ಯ ಸಂಗತಿ ರಾಜಕಾರಣಿಗೆ/ಮಂತ್ರಿಗೆ ಶೈಕ್ಷಣಿಕ ಪದವಿಯಿರುವುದು-ಇಲ್ಲದಿರುವುದಲ್ಲ. ಅವರಿಗೆ ಆ ಖಾತೆಯಲ್ಲಿ ಆಸಕ್ತಿ ಪ್ರೀತಿ ಇದೆಯೊ ಇಲ್ಲವೊ ಎನ್ನುವುದು. ಇದ್ದರೆ ಅವರ ನಿಲುವು ಯಾವುದು ಮತ್ತು ಅದರ ಪರಿಣಾಮಗಳೇನು ಎನ್ನುವುದು. ಅವರ ಆಡಳಿತ ದಕ್ಷತೆ ಎಂತಹದ್ದೆನ್ನುವುದು. ಸೈನಿಕ ಹಿನ್ನೆಲೆಯಿಂದ ಬಂದ ಹೈದರಾಲಿಗೆ ಓದುಬರಹ ನಾಸ್ತಿಯಾಗಿತ್ತು. ಆದರೆ ಅವನಿಗೆ ಪ್ರಚಂಡವಾದ ರಾಜಕೀಯ ಪ್ರತಿಭೆಯಿತ್ತು. ಮೈಸೂರು ಅರಸರ, ಪಾಳೆಗಾರರ, ಬ್ರಿಟಿಷರ ಫ್ರೆಂಚರ ಅವನು ರಾಜಕೀಯ ಬಿಕ್ಕಟ್ಟು ನಿಭಾಯಿಸಿದ ಬಗೆ ಅಪೂರ್ವ. ಇದಕ್ಕಾಗಿ ಪೂರ್ಣಯ್ಯನ ಜಾಣ್ಮೆಯೂ ಅವನಿಗೆ ನೆರವಾಗಿರಬಹುದು. ಎಷ್ಟೊ ಸಲ ಸೂಕ್ಷ್ಮತೆ ಜನಪರತೆ ಪ್ರಾಮಾಣಿಕತೆ ಇರುವ ಅಧಿಕಾರಿಗಳು ಸಲಹೆಗಾರರು ಇದ್ದರೆ ದೊರೆ/ಮಂತ್ರಿ ಒಳ್ಳೆಯ ಕೆಲಸ ಮಾಡಬಹುದು. ವೈಯಕ್ತಿಕವಾಗಿ ದೊಡ್ಡಪದವಿ, ಒಳ್ಳೇತÀನ, ಉದಾರತೆ, ಪ್ರಾಮಾಣಿಕತೆಗಳಿದ್ದೂ ದುಷ್ಟ ಅಧಿಕಾರಿಗಳ ಕೈಗೊಂಬೆಯಾದರೆ ಒಳ್ಳೆಯ ಕೆಲಸ ಮಾಡಲಾಗದೇ ಹೋಗಬಹುದು.

– ರಹಮತ್ ತರೀಕೆರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...