Homeಅಂಕಣಗಳುಇಬ್ಬರು ಲೆಜೆಂಡ್ರಿ ಬೊಮ್ಮಯ್ಯಗಳು

ಇಬ್ಬರು ಲೆಜೆಂಡ್ರಿ ಬೊಮ್ಮಯ್ಯಗಳು

- Advertisement -
- Advertisement -

ನಮ್ಮ ಎಳೆಯ ಮಕ್ಕಳ ಕಣ್ಣಲ್ಲಿ ಅಮ್ಮನ ಕಸಿನ್ ಡಾ|| ಎಂ.ಬೊಮ್ಮಯ್ಯ ಅಂದರೆ ಯಾವುದೋ ಲೋಕದಿಂದ ಪವಾಡ ಮಾಡಲು ಭೂಮಿಗೆ ಬಂದವರಂತೆ ಭಾಸವಾಗುತ್ತಿದ್ದರು. ಅವರು ವೈದ್ಯಲೋಕದ ಜೀನಿಯಸ್ ಎಂದೇ ಪ್ರತೀತಿ ಇತ್ತು. ಇವರೂ ಕೂಡ ಸಾವ್ಡೆ ಚರ್ಚ್ ಸ್ಕೂಲಿನಲ್ಲೆ ಓದಿದವರು. ಅಮ್ಮನಿಗೆ ಜ್ಯೂನಿಯರ್. ಇವರ ಬಗ್ಗೆ ವಿದ್ಯಾರ್ಥಿ ದೆಸೆಯಿಂದಲೇ ಹುಟ್ಟಿಕೊಂಡ ದಂತಕತೆಗಳು ಒಂದೆರಡಲ್ಲ. ಯಾರಾದರೂ ಸಂಗ್ರಹಿಸಿದರೆ ಅದೇ ಒಂದು ದೊಡ್ಡ ಪುಸ್ತಕವಾಗಬಹುದು, ಅಷ್ಟಿದೆ!
ಇವರು ಮೈಸೂರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ತರಗತಿಗಳಲ್ಲಿ ಅಧ್ಯಾಪಕರಿಗೆ ಕಷ್ಟಕರವಾದ ಪ್ರಶ್ನೆ ಕೇಳಿ ತಡವರಿಸುವಂತೆ ಮಾಡುತ್ತಿದ್ದರಂತೆ. ಸಹಪಾಠಿಗಳು ಮತ್ತು ಕೆಲ ಅಧ್ಯಾಪಕರು ಇವರಿಗೆ ‘ಃoಥಿ Pಡಿoಜಿessoಡಿ’ ಎಂದು ನಾಮಕರಣ ಮಾಡಿದ್ದರಂತೆ. ಡಾ|| ಎಂ.ಬೊಮ್ಮಯ್ಯನವರು ಕೆಂಪಗಿದ್ದದ್ದರಿಂದ ಕೆಂಪಣ್ಣನೆಂಬ ಅಡ್ಡಹೆಸರೇ ನಮಗೆಲ್ಲ ಹೆಚ್ಚು ಚಿರಪರಿಚಿತವಾಗಿತ್ತು. ಕೆಂಪಣ್ಣ ಊರಿಗೆ ಬಂದಾಗ ದಾರಿಯಲ್ಲಿ ನಡೆದುಹೋಗುತ್ತಿದ್ದರೆ ಎಲ್ಲರ ಮನೆಯೊಳಗಿಂದ ಗಂಡು ಹೆಣ್ಣುಗಳು ಇಣುಕಿ ನೋಡುತ್ತಾ ನಿಲ್ಲುತ್ತಿದ್ದರು. ಮಕ್ಕಳಾದ ನಾವೂ ಕೂಡ ಕೆಂಪಣ್ಣ ಧರಿಸುತ್ತಿದ್ದ ಸೂಟು-ಬೂಟು ಜೊತೆಗೆ ಅವರ ಮೀಸೆಯನ್ನೂ ಗಮನಿಸುತ್ತಿದ್ದೆವು. ಕೆಂಪಣ್ಣನು ಫ್ರೆಂಚ್‍ಮೀಸೆ ಬಿಡುವ ಸ್ಟೈಲ್‍ಕಂಡು ಪಡ್ಡೆಹುಡುಗರು ತಲೆ ಕೆಡಿಸಿಕೊಳ್ಳುತ್ತಿದ್ದರು. ಇಂಗ್ಲಿಷ್ ಸಿನಿಮಾ ನೋಡಿ ಕಲ್ತವನೆ ಎಂದು ಕೆಲವರು ಮಾತಾಡಿಕೊಳ್ಳುತ್ತಿದ್ದರು. ಕೆಂಪಣ್ಣ ಯಾವುದಾದರೂ ಇಂಗ್ಲಿಷ್ ಸಿನಿಮಾಕ್ಕೆ ಸೇರಿಕೊಂಡ್ರೆ ಒಳ್ಳೆಯ ನಟನಾಗಬಹುದೆಂಬ ಚರ್ಚೆಯೂ ನಡೆಯುತ್ತಿತ್ತು. ಏಕೆಂದರೆ ನಾಟಕಗಳಲ್ಲಿ ಒಳ್ಳೆಯ ನಟನೆಯನ್ನೂ ಕೆಂಪಣ್ಣ ಮಾಡುತ್ತಿದ್ದರು. ಮೆಡಿಕಲ್ ಕಾಲೇಜಿನ ವಾರ್ಷಿಕೋತ್ಸವದ ಸ್ಪರ್ಧೆಗಳಲ್ಲಿ ಇವರು ಹಳೆಯ ದಿನಪತ್ರಿಕೆಗಳಲ್ಲಿ ಸೂಟ್ ಹೊಲೆಸಿಕೊಂಡು ಛದ್ಮವೇಷಧಾರಿಯಾಗಿ ಸ್ಪರ್ಧಿಸಿ ಪ್ರಥಮ ಬಹುಮಾನ ಪಡೆದಿದ್ದರು.
ಡಾ|| ಬೊಮ್ಮಯ್ಯನವರು ವೈದ್ಯರಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ ಜಾಗಗಳಲ್ಲಿ ತಮ್ಮದೇ ವಿಶೇಷ ಚಿಕಿತ್ಸಾ ಕ್ರಮಗಳಿಂದ ಹೆಸರುವಾಸಿಯಾಗಿದ್ದರು. ಅವರು ರೋಗಿಗಳಿಗೆ ನೀಡುತ್ತಿದ್ದ ಚಿಕಿತ್ಸೆಗಳು ವೈದ್ಯಕೀಯವಾಗಿ ರೂಢಿಗತ ಚಿಕಿತ್ಸಾ ಕ್ರಮಗಳಾಗಿರುತ್ತಿರಲಿಲ್ಲ. ಅವರ ಅರಿವಿನ ಮಿಂಚೊಳಗೆ ಮೂಡಿದ ಹೊಳಹುಗಳಾಗಿರುತ್ತಿದ್ದವು. ಕೆಲವೊಮ್ಮೆ ವೈದ್ಯಲೋಕ ವಿಸ್ಮಯಪಟ್ಟ ಸಂಗತಿಗಳೂ ಇವೆ. ಒಂದು ಸಲ ಮಂಡ್ಯ ಸರ್ಕಾರಿ ಜನರಲ್ ಆಸ್ಪತ್ರೆಗೆ ಹಳ್ಳಿಯ ಗರ್ಭಿಣಿಯೊಬ್ಬಳು ಹೆರಿಗೆಗಾಗಿ ಬಂದಾಗ ಆಕೆಗೆ ಹೆರಿಗೆ ಮಾಡಿಸಲು ವೈದ್ಯರು ಶ್ರಮಿಸಿದರೂ ಫಲಕಾರಿಯಾಗಲಿಲ್ಲವಂತೆ. ತಾಯಿಯ ಜೀವಕ್ಕೆ ಸಂಚಕಾರ ಉಂಟಾದಾಗ ಡಾ|| ಬೊಮ್ಮಯ್ಯನವರನ್ನು ಮನೆಯಿಂದ ಕರೆಯಿಸಿದರು. ಆದರೆ ಆ ಗರ್ಭಿಣಿಯು, ಗಂಡಸಾದ ಬೊಮ್ಮಯ್ಯನವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಲಿಲ್ಲ. ಆಗ ಬೊಮ್ಮಯ್ಯನವರು ಇದೊಂದು ಸವಾಲೆಂದು ಸ್ವೀಕರಿಸಿ ಹೆಂಗಸಿನಂತೆ ಸೀರೆ ಉಟ್ಟುಕೊಂಡು ಬಂದು, ಅವಳ ಹೊಟ್ಟೆಯ ಯಾವುದೋ ಒಂದು ಬಿಂದುವಿನ ಮೇಲೆ ಉರಿಯುತ್ತಿದ್ದ ಸಿಗರೇಟಿನ ಬಿಸಿ ತಾಗಿಸಿದ ಕೂಡಲೆ ಸುಸೂತ್ರವಾಗಿ ಹೆರಿಗೆ ಯಾಯಿತು ಎಂಬ ಈ ಪ್ರಸಂಗ ಪುಂಖಾನುಪುಂಖವಾಗಿ ಮಂಡ್ಯದÀಲ್ಲಿ ಮನೆ ಮಾತಾಯಿತು.
ಮತ್ತೊಮ್ಮೆ ಮುಸಲ್ಮಾನರ ಹುಡುಗನೊಬ್ಬನ ನಾಲಿಗೆ ಇದ್ದಕ್ಕಿದ್ದಂತೆ ಬಾಯಿಂದ ಹೊರಗೆ ಚಾಚಿಕೊಂಡು ಒಳಕ್ಕೆ ಎಳೆದುಕೊಳ್ಳಲು ಆಗುತ್ತಿರಲಿಲ್ಲ ಎಂಬ ಪ್ರಸಂಗ. ಮಂಡ್ಯ ಮತ್ತು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿದ್ದ ವೈದ್ಯರಿಗೆ ತೋರಿಸಿದರೂ ಪ್ರಯೋಜನವಾಗದೆ ಎಲ್ಲರೂ ಹತಾಶರಾಗಿ ಕೈಚೆಲ್ಲಿ ಕುಳಿತಾಗ ಯಾರೋ ಒಬ್ಬರು ಅವರಿಗೆ ಬೊಮ್ಮಯ್ಯನವರ ಹೆಸರು ಹೇಳಿ, ಅವರ ಬಳಿಗೆ ಹುಡುಗನನ್ನು ಕರೆತಂದರಂತೆ. ಇವರು ಕೂಡಲೆ ಯಾವುದೋ ಒಂದು ಇಂಜೆಕ್ಷನ್ ಚುಚ್ಚಿ, ನಿನ್ನ ಹೆಸರೇನು ಎಂದು ಕೇಳಿದರೆ ಆ ಹುಡುಗ ಮಾಮದ್ ಎಂದÀನಂತೆ. ಹುಡುಗನ ನಾಲಿಗೆ ಯಥಾಸ್ಥಾನ ಸೇರಿಕೊಂಡಿತು! ಈ ಕೌತುಕವನ್ನು ನಿಂತು ನೋಡುತ್ತಿದ್ದವರ ಕಣ್ಣಿಗೆ ಕೆಂಪಣ್ಣ ಒಬ್ಬ ಪವಾಡ ಸದೃಶ್ಯ ವೈದ್ಯರಾಗಿ ಕಂಡರೆ ಅದರಲ್ಲಿ ಆಶ್ಚರ್ಯವೇನು? ಈ ಜಾತಿಯಲ್ಲಿ ಹುಟ್ಟದೇ ಇದ್ದರೆ ವಿಶ್ವಖ್ಯಾತಿಯನ್ನು ಪಡೆಯುತ್ತಿದ್ದರೆಂದು ಎಲ್ಲರೂ ಮಾತನಾಡಿ ಕೊಳ್ಳುತ್ತಿದ್ದರು.
ಶಾಕ್ ಟ್ರೀಟ್‍ಮೆಂಟ್ ಕೊಡುತ್ತಿದ್ದ ಇವರು ಬೇರೆ ಜಾತಿಯವರಿಗೆ ಒಂದು ಶಾಕ್‍ನಂತೆಯೇ ಇದ್ದರು. ದಲಿತೇತರ ವೈದ್ಯರು ಇವರ ಚಾತುರ್ಯಕ್ಕೆ ಹೊಟ್ಟೆ ಕಿಚ್ಚಿಂದ ಡಾ|| ಬೊಮ್ಮಯ್ಯನವರನ್ನು ಹೆಜ್ಜೆಹೆಜ್ಜೆಗೂ ತುಳಿಯಲು ಮಾಡುವ ಷಡ್ಯಂತ್ರ ಸಾಮಾನ್ಯವಾಗಿರುತ್ತಿತ್ತು. ತನ್ನ ಪ್ರತಿಭೆಗೆ ತಕ್ಕ ಸ್ಥಾನಮಾನ ದೊರೆಯದ್ದನ್ನು ಕಂಡು ಬೊಮ್ಮಯ್ಯನವರು ಸದಾ ಕುದಿಯುತ್ತಿದ್ದರು. ಒಂದೊಂದು ಸಲ ಕೆಂಡಾಮಂಡಲವಾಗಿ, ಜಾತಿ-ಭೇದ ಮಾಡುತ್ತಿದ್ದವರಿಗೆ ಚಪ್ಪಲಿಯಲ್ಲಿ ಹೊಡೆದು ಕೋಪ ಹಿಂಗಿಸಿಕೊಳ್ಳುತ್ತಿದ್ದರಂತೆ. ತನ್ನ ಪ್ರತಿಭೆಗೆ ಜಾತೀಯತೆಯ ಬಣ್ಣ ಬಳಿಯುತ್ತಿದ್ದುದು ಇವರನ್ನು ರೊಚ್ಚಿಗೇಳಿಸುತ್ತಿತ್ತು. ಅವರ ವಿದ್ವತ್ತಿನ ಅಹಂಕಾರದಿಂದಾಗಿ, ಜಗತ್ತಿನ ಎಲ್ಲರಿಂದಲೂ ನಿರೀಕ್ಷೆಗಳನ್ನಿಟ್ಟುಕೊಳ್ಳುವುದು ಮೂರ್ಖತನ ಎಂಬ ಅರಿವು ಇವರಿಗೆ ಬರಲೇ ಇಲ್ಲ. ಸರ್ಕಾರಕ್ಕೆ ಇವರ ವಿರುದ್ಧ ಮೇಲಿಂದ ಮೇಲೆ ದೂರುಗಳು ತಲುಪಿ, ಕೊನೆಗೆ ಸುಮಾರು ನಲವತ್ತೈದರ ಹರೆಯದಲ್ಲಿ ಸರ್ಕಾರ ಇವರಿಗೆ ಕಡ್ಡಾಯ ನಿವೃತ್ತಿಯನ್ನು ನೀಡಿ ಮನೆಗೆ ಕಳುಹಿಸಿಬಿಟ್ಟಿತು. ಇದರಿಂದ ಆಘಾತಗೊಂಡ ಬೊಮ್ಮಯ್ಯನವರು, ಒಂದು ಸಣ್ಣ ಗುಡಿಸಲಿನಲ್ಲಿ ಸದಾ ಪಾನಮತ್ತರಾಗಿ ನೆಲದ ಮೇಲೆ ಮಲಗಿರುತ್ತಿದ್ದರು. ಆ ಗುಡಿಸಲಿಗೆ ಮಾಂಡವ್ಯ ಎಂದು ಕಲಾತ್ಮಕವಾಗಿ ತನ್ನ ಕೈ ಬರಹದಲ್ಲಿ ಬರೆದು ಒಂದು ಚಿಕ್ಕ ರಟ್ಟಿನ ಬೋರ್ಡ್ ತೂಗು ಹಾಕಿದ್ದರು. ಊರಿನವರು ಕೆಂಪಣ್ಣನನ್ನು ಮನೆಗೆ ಕಳುಹಿಸಿದವರಿಗೆ ಹಿಡಿ ಶಾಪ ಹಾಕುತ್ತಿದರು. ಇನ್ನು ಕೆಲವರು, ಅವನಿಗೆ ಬುದ್ಧಿ ಹೆಚ್ಚಾಗಿ ಕಂಟ್ರೋಲ್ ಮಾಡ್ಕಳಕ್ಕಾಗದೆ ಹುಚ್ಚುಚ್ಚಾಗಿ ಆಡಿದರೆ ಇನ್ನೇನಾದದು ಎನ್ನುತ್ತಿದ್ದರು. ಪಾಪ ಕೆಂಪಣ್ಣ ಡಾ|| ಬೊಮ್ಮಯ್ಯನವರಾಗಿ ಉಳಿಯಲಿಲ್ಲ. ನಿನ್ನೆ ಮೊನ್ನೆಯ ಹುಡುಗರು, ಕೆಂಪಣ್ಣ ಬತ್ತಾವನೆ ಓಡುರ್ಲಾ ಹಿಡ್ಕತ್ತನೆ… ಎಂದು ಸುಮ್ಮಸುಮ್ಮನೆ ಹೆದರಿಕೊಳ್ಳುತ್ತಿದ್ದರು. ಹಾಗೂ ಹೀಗೂ ಒಂದಷ್ಟು ವರ್ಷ ಕ್ರಿಯಾಶೀಲವಾಗೇ ಕೆಂಪಣ್ಣ ಇದ್ದರು. ರವೀಂದ್ರನಾಥ ಠಾಕೂರರ ಗೀತಾಂಜಲಿಯನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಅಚ್ಚು ಹಾಕಿಸಿದರು. ಆಗ ನಾನು ಪ್ರೈಮರಿಯಲ್ಲಿದ್ದೆ. ಆ ಪುಸ್ತಕವನ್ನು ನಾನು ಕೂಡ ನೋಡಿ ಒಂದೆರಡು ಪುಟ ಓದಿದ್ದೆ. ಈ ಪುಸ್ತಕವನ್ನು ಪತ್ನಿ ಪ್ರೊ.ಗೀತಾ ಅವರಿಗೆ ಅರ್ಪಿಸಿದ್ದಾರೆ. ಪ್ರೊ|| ಗೀತಾ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ.
ಈ ನಮ್ಮ ಜೀನಿಯಸ್ ಮಾಡುತ್ತಿದ್ದ ತರಲೆಗಳು ಒಂದೆರಡಲ್ಲ. ಒಂದು ಸಲ ಊರಿನಲ್ಲಿ ಆಡುತ್ತಿದ್ದ ಒಂದು ನಾಟಕದಲ್ಲಿ ಬೊಮ್ಮಯ್ಯನವರ ಪಾತ್ರಕ್ಕೆ ಗಿರಿಜಾ ಮೀಸೆ ಬೇಕಾಗಿತ್ತಂತೆ. ನಮ್ಮ ನೆಂಟರೊಬ್ಬರಿಗೆ ಪೂಜಾರಿ ಜುಟ್ಟಿನ ಕೂದಲು ಒಂದು ಮೊಳದುದ್ದ ಇತ್ತು. ಅದರ ಮೇಲೆ ಇವರ ಕಣ್ಣು ಬಿತ್ತು! ಆ ಆಸಾಮಿ ನಾಟಕ ನೋಡ್ತಾ ಹಾಗೇ ಮಂಪರು ನಿದ್ದೆಗೆ ಜಾರಿದ ಸಮಯದಲ್ಲಿ ಅವರ ಜುಟ್ಟನ್ನು ಮೆಲ್ಲನೆ ಕತ್ತರಿಸಿ ಗಿರಿಜಾ ಮೀಸೆಯಾಗಿಸಿ ಬೊಮ್ಮಯ್ಯ ಅದನ್ನು ತನ್ನ ಮೂಗಿನ ಕೆಳಗೆ ಅಲಂಕರಿಸಿದರಂತೆ. ನಾಟಕದಲ್ಲಿ ಇವರ ಪಾತ್ರಕ್ಕೆ ಅಪಾರ ಹೊಗಳಿಕೆ ಸಿಕ್ಕಿತು. ಆಮೇಲೆ ಬೊಮ್ಮಯ್ಯನವರಿಗೆ ಪೀಕಲಾಟ ಶುರುವಾಯಿತು. ಗಿರಿಜಾ ಮೀಸೆಗಾಗಿ ಕೂದಲನ್ನು ಕತ್ತರಿಸಿದ್ದೇನೊ ಸರಿ, ಆದರೆ ಆ ಜುಟ್ಟಿನ ಮನುಷ್ಯ ದೂರ್ವಾಸನ ಖಾಸಾ ಅಣ್ಣನೆಂದು ಊರಲ್ಲಿ ಪ್ರಸಿದ್ಧಿಯಾಗಿದ್ದನು. ಯಾರೊಬ್ಬರೂ ಅವನ ಮುಂದೆ ನಿಂತು ಮಾತನಾಡುತ್ತಿರಲಿಲ್ಲ. ಮಕ್ಕಳಂತೂ ಹೆದರಿ ಅವಿತುಕೊಳ್ಳುತ್ತಿದ್ದರು. ರಾತ್ರಿಯೆಲ್ಲ ಬಯಲಲ್ಲಿ ನಿದ್ದೆಮಾಡಿ ಬೆಳಗಿನ ಜಾವ ನಾಟಕ ಮುಗಿದಾಗ ಎಚ್ಚರಗೊಂಡು ಮನೆಯ ಕಡೆ ಹೆಜ್ಜೆ ಹಾಕುವಾಗ ಎಂದಿನಂತೆ ಆ ಪೂಜಾರಿ ಜುಟ್ಟಿನ ಮನುಷ್ಯ ತನ್ನ ಉದ್ದನೆಯ ತಲೆ ಕೂದಲನ್ನು ಒಮ್ಮೆ ಜೋರಾಗಿ ಕೊಡವಿ ಹೆಣ್‍ಗಂಟು ಹಾಕಲು ಜುಟ್ಟಿಗೆ ಕೈಹಾಕಿದರೆ ಆ ಜುಟ್ಟು ಇಲ್ಲದಿರುವುದನ್ನು ಕಂಡು ನಖಶಿಖಾಂತ ಕುಣಿದಾಡತೊಡಗಿದನಂತೆ. ಇವನ ರೌದ್ರಾವತಾರಕ್ಕೆ ಕಾರಣ ತಿಳಿದವರು ಮುಸಿಮುಸಿ ನಗುತ್ತಾ ಮನೆಗೆ ತೆರಳಿದರೆ, ಮಹಿಳೆಯರು ಬಾಯಿಗೆ ತಮ್ಮ ಸೆರಗನ್ನು ಅಡ್ಡ ಹಿಡಿದು ನಗು ತಡೆಯಲು ಕಷ್ಟಪಟ್ಟರಂತೆ. ಆದರೆ ಊರಿನ ಯಾರೊಬ್ಬರೂ ಈ ಸತ್ಯವನ್ನು ಜುಟ್ಟಪ್ಪನಿಗೆ ಹೇಳುವ ಸಾಹಸ ಮಾಡಲಿಲ್ಲ. ಗಂಡನ ಸ್ವಭಾವಕ್ಕಂಜಿ ಹೆಂಡತಿ ಕೂಡ ನಿಜವನ್ನು ಬಾಯಿಬಿಡಲಿಲ್ಲ. ಆ ನಾಟಕಕ್ಕಿಂತ ಈ ನಾಟಕವೇ ಹೆಚ್ಚು ಪ್ರಸಿದ್ಧಿ ಪಡೆಯಿತು!
ಇನ್ನೊಬ್ಬ ಪ್ರತಿಭಾವಂತರು ಎಂ.ಬಿ. ಬೊಮ್ಮಯ್ಯ. ಇವರು ಅಮ್ಮನ ಪ್ರೀತಿಯ ಅಣ್ಣ. ಪ್ರಪ್ರಥಮವಾಗಿ ಬಿ.ಎ ಪದವಿ ಪಡೆದÀವರಾಗಿದ್ದರು. ಇವರು ನಮ್ಮ ಬಳಗದವರಲ್ಲಿ ಮೊದಲಿಗರಾಗಿ ಅಮಲ್ದರರಾಗಿ ನೇಮಕಗೊಂಡರು, ಆಮೇಲೆ ಅಸಿಸ್ಟೆಂಟ್ ಕಮೀಷನ್‍ರಾಗಿ ಬಡ್ತಿಯನ್ನು ಪಡೆದು ನಿವೃತ್ತಿಯಾದರು. ಇವರನ್ನು ಕಂಡರೆ ನಮಗೆಲ್ಲ ತುಂಬ ಗೌರವ ಮತ್ತು ಅಷ್ಟೇ ಭಯ ಕೂಡ ಇತ್ತು. ಮೈಸೂರಿಂದ ಮಂಡ್ಯಕ್ಕೆ ಬರುತ್ತಾರೆಂದರೆ ಕುರಿಕೊಟ್ಟಿಗೆಯ ಗುಡಿಸಲ ಸೋಗೆಯ ನೆರಿಕೆ ಕಿಂಡಿಯಿಂದ ಇವರು ಬರುವ ದಾರಿಯನ್ನೇ ನೋಡುತ್ತಿದ್ದೆ. ಎದುರಿಗೆ ನಿಂತು ಒಂದು ದಿನವೂ ಮಾತಾಡಿಸಲಿಲ್ಲ. ಆದರೂ ದೊಡ್ಡಮಾಮನೆಂದರೆ ಎಲ್ಲಿಲ್ಲದ ಅಭಿಮಾನವಿತ್ತು. ಇವರು ಮೈಸೂರು ಮಹಾರಾಜರಿಂದ ಬಿ.ಎ. ಪದವಿ ಪಡೆದಿದ್ದನ್ನು ಅಮ್ಮ ಹೆಮ್ಮೆಯಿಂದ ನಮ್ಮ ಜೊತೆ ಹೇಳಿಕೊಂಡಿದ್ದರು.
ಆಗಲೂ ಮೈಸೂರಿನಲ್ಲಿ ನಡೆಯುತ್ತಿದ್ದ ದಸರಾ ಉತ್ಸವ ವಿಶ್ವಖ್ಯಾತಿಯನ್ನು ಪಡೆದಿತ್ತು. ಅದರಲ್ಲೂ ಜಂಬೂ ಸವಾರಿಯನ್ನು ಎಷ್ಟು ಬಣ್ಣಿಸಿದರೂ ಸಾಲದು. ಒಂದು ಸಲ ಜಂಬೂ ಸವಾರಿ ಮೈಸೂರಿನಲ್ಲಿ ಮಾತ್ರ ನಡೆಯುತ್ತದೋ? ಎಂದು ನನ್ನಣ್ಣನನ್ನು ಕೇಳಿದ್ದೆ. ಆಗ ಅವನು…ಹೂಂ… ಇಡೀ ಭೂಮಂಡಲದ ಮೇಲೆ ಜಂಬೂಸವಾರಿ (ಚಿನ್ನದ ಸಿಂಹಾಸನದ ಮೆರವಣಿಗೆ) ಎಲ್ಲೂ ನಡೆಯುವುದಿಲ್ಲ, ನಮ್ಮ ಮೈಸೂರು ರಾಜರು ಮಾತ್ರ ಅದನ್ನು ನಡೆಸುತ್ತಾರೆ ಎಂದಿದ್ದನು. ಅಣ್ಣನ ಮಾತುಗಳನ್ನು ಕೇಳಿ ಮಿಡಲ್ ಸ್ಕೂಲಿನ ವಿದ್ಯಾರ್ಥಿನಿಯಾಗಿದ್ದ ನಾನು ಬೆರಗಾಗಿದ್ದೆ. ಇಂತಹ ದಸರಾ-ದರ್ಬಾರ್ ವೀಕ್ಷಿಸಲು ಒಂದು ಸಲ ನಮ್ಮ ದೊಡ್ಡಮಾಮನವರು, ತಮ್ಮ ಬಂಧುಬಳಗದವರನ್ನು ಕರೆಯಿಸಿ ಅವರನ್ನೆಲ್ಲ ಅರಮನೆಯ ದರ್ಬಾರ್ ನೋಡಲು ಕರೆದುಕೊಂಡು ಹೋಗಿದ್ದರು. ನನ್ನ ಅಮ್ಮನೂ ಜೊತೆಗೆ ಹೋಗಿದ್ದರು. ಮಹಾರಾಜರು ಚಿನ್ನದ ಸಿಂಹಾಸನದ ಮೇಲೆ ನಡೆಸುವ ದರ್ಬಾರನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತು. ದೊಡ್ಡಮಾಮನು ತನ್ನ ಬಂಧುಬಳಗಕ್ಕೆ ಒದಗಿಸಿದ ಈ ಸುಯೋಗವನ್ನು ಬಹುಸಂತೋಷ ದಿಂದ ಅನುಭವಿಸಲು ಎಲ್ಲರೂ ಆಸೀನರಾಗಿದ್ದರು. ಈ ನೆಂಟರಲ್ಲಿ ಒಬ್ಬರು ಸಣ್ಣಕೂಸಿನ ತಾಯಿಯೂ ಇದ್ದರು. ಮಹಾರಾಜರನ್ನು ಹತ್ತಿರದಿಂದ ನೋಡುವ ಹಂಬಲದಿಂದ ಹಾಲುಹಸುಳೆಯನ್ನು ಪರವಾನಗಿ ಇಲ್ಲದಿದ್ದರೂ ಕರೆತಂದಿದ್ದರು. ಆ ಕೂಸು ಸ್ವಲ್ಪ ಹೊತ್ತು ದರ್ಬಾರಿನಲ್ಲಾಗುತ್ತಿದ್ದ ಗೌಜುಗದ್ದಲಗಳ ನಡುವೆ ಆಟ ಆಡಿಕೊಂಡಿದ್ದು ಮಲಮೂತ್ರವನ್ನು ವಿಸರ್ಜಿಸಿ ಬಿಟ್ಟಿತಂತೆ. ಎತ್ತ ತಿರುಗಿದರೂ ಸೂಟು-ಬೂಟು ಧರಿಸಿದವÀರು, ರೇಷ್ಮೆ ಸೀರೆಗಳವರು. ಆ ತಾಯಿಯು ಕೂಸಿನ ಜೊತೆ ತಂದಿದ್ದ ಒಂದು ತುಂಡು ಬಟ್ಟೆಯಿಂದ ಅದರ ಕಕ್ಕವನ್ನು ಒರೆಸಿ ಎಲ್ಲಿಗೆ ಹಾಕಬೇಕೆಂದು ತಿಳಿಯದೆ, ಎಷ್ಟೋ ಹೊತ್ತು ಅದನ್ನು ಕೈಯಲ್ಲೇ ಇಟ್ಟುಕೊಂಡಿದ್ದು ಕೊನೆಗೆ ಅಕ್ಕಪಕ್ಕದವರ ಗಮನ ಪೂರ್ತಿ ಮಹಾರಾಜರು ಕುಳಿತಿದ್ದ ಚಿನ್ನದ ಸಿಂಹಾಸನದ ಕಡೆಗೆ ಇರುವುದನ್ನು ಗಮನಿಸಿ, ತನ್ನ ಮುಂದೆ ಇದ್ದ ಕಟಕಟೆಯ ಮೇಲಿಂದ ಅದನ್ನು ಕೆಳಕ್ಕೆ ಹಾಕೆ ಬಿಟ್ಟಳಂತೆ! ಅನಂತರ, ತನ್ನನ್ನು ಯಾರೂ ಗಮನಿಸಲಿಲ್ಲವೆಂಬುದನ್ನು ಖಾತ್ರಿ ಮಾಡಿಕೊಂಡು ನೆಮ್ಮದಿಯಾಗಿ ಕುಳಿತು ದರ್ಬಾರನ್ನು ವೀಕ್ಷಿಸಿ ಸಂತೋಷವಾಗಿ ಎಲ್ಲರ ಜೊತೆ ಊರಿಗೆ ಇವಳೇನೊ ಮರಳಿದಳು! ಆಮೇಲಿನ ಅವಾಂತರ? ಇತ್ತ ಕೆಳಗೆ ಹಾಕಿದ ಕೂಸಿನ ಪ್ರಸಾದ ಅದೇ ನೇರಕ್ಕೆ ಕೆಳಗೆ ಕುಳಿತಿದ್ದ ಸೂಟುಧಾರಿ ವಿದೇಶೀಯನ ಕೋಟಿನ ಮೇಲಕ್ಕೆ ಬಿದ್ದು ಅದೇನೆಂದು ತಿಳಿದ ಅವನು ಅಸಹ್ಯಮಾಡಿ ಕೊಂಡು ವಾಶ್ ರೂಮಿನ ಕಡೆ ದೌಡಾಯಿಸಿ ದನಂತೆ. ಆಮೇಲೆ ಇದು ಇಲ್ಲಿ ಹೇಗೆ ಬಂದಿತು? ಮೇಲಿನ ಆಸನಗಳಲ್ಲಿ ಯಾರು ಕುಳಿತಿದ್ದರು ಎಂಬಿತ್ಯಾದಿ ಯಾಗಿ ತನಿಖೆಯೂ ನಡೆಯಿತಂತೆ.
ಈ ಪ್ರಕರಣವನ್ನು ದೊಡ್ಡಮಾಮನ ಮೂರನೆಯ ಮಗ ಪರಮೇಶಿ ಅಭಿನಯದ ಮೂಲಕ ವಿವರಿಸಿ ನಮ್ಮನ್ನು ರಂಜಿಸುತ್ತಿದ್ದನು. ಈ ನಮ್ಮ ಗಲಾಟೆಯನ್ನು ಕೇಳಿ ಬಂದ ಅಮ್ಮನು ಎನ್ರಪ್ಪಾ ಇಷ್ಟೊಂದು ನಗ್ತಾ ಇದ್ದೀರಿ ಏನು ವಿಷಯ? ಎಂದರು. ಆಗ ಪರಮೇಶಿ ಮತ್ತೆ ಅಭಿನಯಿಸಿ ಅಮ್ಮನಿಗೆ ತಿಳಿಸಲು ಪ್ರಯತ್ನಪಟ್ಟನು. ಆದರೆ ಅಮ್ಮ ಅವನನ್ನು ಅರ್ಧಕ್ಕೆ ತಡೆದು, ಲೋ.. ಪರಮು ನೀ ಸುಮ್ನಿರು, ಜೋರಾಗಿ ಹೇಳಬೇಡ… ಯಾರಾದರೂ ಮಾರಾಜರ ಕಿವಿಗೆ ಹಾಕಿದರೇನು ಗತಿ? ಅಣ್ಣಂಗೆ ಕೆಲ್ಸದಿಂದ ತೆಗದು ಹಾಕಿ ಬಿಟ್ಟರೇನು ಮಾಡುವುದು? ಎಂದು ಹೆದರಿಸಿದರು. ಆಗ ನಾನು, ನಾವು ಮಾತಾಡ್ತಾ ಇರೋದು ಮಂಡ್ಯದಲ್ಲಿ… ಇಲ್ಲಿಂದ ಸೀದಾ ರಾಜನ ಕಿವಿಗೆ ತಲುಪುತ್ತಾ? ಎಂದೆ. ಮತ್ತ್ತೆ ಬಿದ್ದು ಬಿದ್ದು ನಗಲು ಶುರುಮಾಡಿದೆವು. ಅಮ್ಮ, ಅಯ್ಯೋ ಆ ಹಳ್ಳಿಯವ್ಕೆ ಹುಳ್ಳಿಕಜ್ಜಾಯ ಅಂತ… ಅವರನ್ನು ಕರ್ಕಂಡೋದ್ರೆ ಹೀಗೆ ಆಗೋದು ಎಂದು ತೀರ್ಪು ನೀಡಿ ಅವರಣ್ಣನಿಗೆ ಕೆಟ್ಟ ಹೆಸರು ತಂದವರ ಅಶಿಸ್ತನ್ನು ಹೀಗಳೆದು ಕಣ್ಣು ಮೆಡ್ಡರಿಸಿದಾಗ ನಾವು ಸುಮ್ಮನಾಗಬೇಕಾಯಿತು.
ಒಂದು ದಿನ ಪ್ರೊ. ಜೆ.ಬಿಲ್ಲಯ್ಯನವರು ನನ್ನ ದೊಡ್ಡಮಾಮ ಎಂ.ಬಿ. ಬೊಮ್ಮಯ್ಯ ನವರ ಬಗ್ಗೆ ಪ್ರಸ್ತಾಪಿಸಿದರು. ಪ್ರೊ. ಜೆ.ಬಿಲ್ಲಯ್ಯ (ಜಾನ್ ಬಿಲ್ಲಯ್ಯ) ನವರು ಮಹಾರಾಜಕಾಲೇಜಿನಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ವಿರಾಮದ ವೇಳೆ ನನ್ನ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಒಮ್ಮೆ ಪ್ರೊ. ಜೆ.ಬಿಲ್ಲಯ್ಯನವರು ಹಾಗೂ ಎಂ.ಬಿ.ಬೊಮ್ಮಯ್ಯನವರು ಮತ್ತು ಇನ್ನೂ ಕೆಲವು ಗೆಳೆಯರು ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಭೇಟಿಯಾಗಲು ಪುಣೆಗೆ ಹೋಗಿದ್ದನ್ನು ಹೇಳಿದರು. ಅಂಬೇಡ್ಕರರು ಆಗ ಬಿಡುವಿಲ್ಲದ ಕಾರ್ಯಗಳಲ್ಲಿ ನಿರತರಾಗಿದ್ದರಂತೆ. ಕೊನೆಗೂ ಇವರುಗಳಿಗೆ ಹೇಗೋ ಅಂಬೇಡ್ಕರ್ ಅವರನ್ನು ಭೇಟಿಯಾಗಲು ಐದು ನಿಮಿಷದ ಅವಕಾಶ ಸಿಕ್ಕಿತಂತೆ. ಡಾ|| ಅಂಬೇಡ್ಕರ್ ಅಂದು ತುಂಬಾ ಸೀರಿಯಸ್ ಮೂಡ್‍ನಲ್ಲಿದ್ದ ರಂತೆ. ಮೈಸೂರಿನಿಂದ ಹೋಗಿದ್ದ ಈ ಗೆಳೆಯರ ತಂಡವನ್ನು ಚೂಪಾಗಿ ನೋಡಿದ ಅಂಬೇಡ್ಕರ್ ಎದ್ದು ನಿಂತು ನಿಮಗೆ ಏನು ಬೇಕು? ಎಂದು ಗಡುಸಾಗಿ ಕೇಳಿದರಂತೆ. ಇವರಿಗೆ ಅವರ ಪ್ರಶ್ನೆಯಿಂದ ಕಕ್ಕಾಬಿಕ್ಕಿಯಾಗಿ ಕೆಲವು ಸೆಕೆಂಡ್‍ಗಳ ಕಾಲ ಸುಮ್ಮನೆ ನಿಂತುಬಿಟ್ಟರಂತೆ. ಅವರ ಅಜಾನುಬಾಹು ದೇಹವನ್ನು ಕಂಡು ಬೆಚ್ಚಿ ಜೀವ ಡಗ್ ಆದಂಗಾಗಿ ಮಾತು ಬೆಬೆ ಅಂತಿತ್ತಂತೆ. ಆಗ ಸಮಯೋಚಿತವಾಗಿ ಬೊಮ್ಮಯ್ಯನವರು, ನಾವು ಇಂತಿಂಥವರು ಮೈಸೂರಿನಿಂದ ನಿಮ್ಮನ್ನು ಕಂಡು ಮಾತನಾಡಿಸಿ ಗೌರವ ಸೂಚಿಸಲು ಬಂದೆವು ಎಂದು ಅರುಹಿದರಂತೆ. ಆದರೆ ಅಂಬೇಡ್ಕರ್ ಅವರಿಗೆ ಇವರ ಜೊತೆ ಕಾಲಾಯಾಪನೆ ಮಾಡಲು ಕಾಲಾವಕಾಶ ಇರಲಿಲ್ಲ. ಅವರು ‘What is the use of coming here to see me? What are you doing for your community? At least you contribute Rs. 5 every month from your salary’ ’ ಎಂದು ಸೂಚಿಸಿ ಎದ್ದು ಹೊರಟರಂತೆ! ಕೇವಲ ಐದು ನಿಮಿಷಗಳ ಆ ಭೇಟಿಯಿಂದ, ಅವರು ನೀಡಿದ ಅಮೂಲ್ಯವಾದ ಸೂಚನೆಯನ್ನು ಮೈಸೂರಿನ ಗೆಳೆಯರು ತಮ್ಮ ತಲೆಯ ಮೇಲೆ ಹೊತ್ತು ತಂದರು. ಅಂದಿನಿಂದ ಎಂ.ಬಿ.ಬೊಮ್ಮಯ್ಯನವರು ಪರಿಶಿಷ್ಟರ ಏಳ್ಗೆಗಾಗಿ ತಾವು ಬದುಕಿರುವವರೆಗೂ ದುಡಿದರು. ನಾನೊಮ್ಮೆ ದೇವಯ್ಯ ಹರವೆಯವರ ಜೊತೆ ಲೋಕಾಭಿರಾಮವಾಗಿ ಮಾತಾಡ್ತ ಎಂ.ಬಿ.ಬೊಮ್ಮಯ್ಯ ನವರು ನಮ್ಮ ಮಾವ ಎಂದು ಹೇಳಿದಾಗ ಅವರು ಎದ್ದುನಿಂತು ಆ ಹೆಸರಿಗೇನೆ ಕೈಮುಗಿದು ನಮ್ಮ ಊರಸುತ್ತಲಿನ ದೀನದಲಿತರಿಗೆಲ್ಲ ಸೈಟು ಮನೆ ಕಟ್ಟಿಸಿಕೊಟ್ಟವರು ಅವರೇನೆ ಎಂದರು. ಅಂಬೇಡ್ಕರ್ ಭೇಟಿ ಬಗ್ಗೆ ಹೇಳುವಾಗ ಪ್ರೊ. ಬಿಲ್ಲಯ್ಯನವರು ಮರೆಯದೇ ಒಂದು ಮಾತನ್ನು ಹೇಳಿಯೇ ತೀರುತ್ತಾರೆ, `ಅಂಬೇಡ್ಕರ್ ಅವರ ಲೈಬ್ರರಿ, ಆ ಉದ್ದ ಆ ಅಗಲ, ಆ ತುಂಬಿದ ಪುಸ್ತಕಗಳ ನೋಡಿ ನನ್ನ ಜೀವ ದಗ್ ಅಂದೋಯ್ತು’- ಎಂದು ಕಣ್ಣಗಲಿಸಿ ಹೇಳುತ್ತಿದ್ದರು.
ಪ್ರೊ. ಬಿಲ್ಲಯ್ಯನವರ ಮಾತುಗಳೇ ಹಾಗೆ. ಇಂಗ್ಲಿಷ್‍ನಲ್ಲಿ ಮಾತಾಡಿದರೆ ಥೇಟ್ ಶೇಕ್ಸ್‍ಪಿಯರಿಯನ್ ಇಂಗ್ಲಿಷ್. ಕನ್ನಡಕ್ಕೆ ಬಂದರೆ ಹಳ್ಳಿ ಸೊಗಡಿನ ಮಾತು. ಅವರು ಒಂದು ರೀತಿ ಮುಗ್ಧರೂ ಹೌದು. ಒಂದು ಸಲ ನಾನು ಅವರೊಡನೆ ಮಾತಾಡ್ತ ನನ್ನ ಗುರುಗಳಾದ ಪ್ರೊ. ಸಿ.ಪಾರ್ವತಮ್ಮನವರ ಬಗ್ಗೆ ಮೆಚ್ಚಿಗೆ ಮಾತಾಡಿದೆ. ಅವರು ನನ್ನ ಮಾತನ್ನು ಕೊಂಚ ತಡೆದು- ನಿಮ್ಮ ಮೇಡಂರವರಿಗೆ ಯಾಕೋ ನನ್ನ ಬಗ್ಗೆ ಸ್ವಲ್ಪ ಅಸಮಾಧಾನವಿದೆ ಎಂದರು. ಯಾಕೆ ಸಾರ್? ಅಂದೆ. `ಅದೇ ನೋಡಿ ಒಂದು ಸಲ ನಾನು ಮಾರಾಣಿ ಕಾಲೇಜಿನ ಮುಂದೆ ನಡಕಂಡು ಕಾಲೇಜಿಗೆ ಬತ್ತಿದ್ದಿ. ಎದುರಿಗೆ ಪಾರ್ವತಮ್ಮನೋರು ಸಿಕ್ಕಿದರು. ಸಹಜವಾಗಿ ಪರಸ್ಪರ ನಮಸ್ಕಾರ ಹೇಳಿಕೊಂಡೆವು. ಆನಂತರ ನಾನು ಸೀದಾ ಕಾಲೇಜಿಗೆ ಬಂದೆ. ಒಂದೆರಡು ದಿನಗಳ ನಂತರ, ನನ್ನ ಸ್ನೇಹಿತರ ನಡುವೆ ಡಾ. ಸಿ.ಪಾರ್ವತಮ್ಮನವರ ಹೆಸರಿನ ಪ್ರಸ್ತಾಪ ಬಂತು. ಆಗ ನಾನು ಸುಮ್ಮನಿರಲಾರದೆ “ಜಚಿಥಿ beಜಿoಡಿe ಥಿesಣeಡಿಜಚಿಥಿ I ಛಿಡಿosseಜ heಡಿ ಟಿeಚಿಡಿ ಒಚಿhಚಿಡಿಚಿಟಿi’s ಛಿoಟಟege ಎಂದು ಏಳ್ದಿ. ಸಹಜವಾಗೆ ಏಳ್ದಿ. ಆ ಮಾತು ಅಲ್ಲೇ ಇದ್ದ ಒಬ್ಬ ತುಂಟ ಮೇಷ್ಟ್ರಿಗೆ ಹೆಂಗೆ ಕೇಳಿಸ್ತೊ ಏನೋ. ಅವ, Whಚಿಣ ತಿhಚಿಣ? ಙou ಛಿಡಿosseಜ heಡಿ oಟಿ ಣhe sಣಡಿeeಣ ಎಂದು ಅಪಾರ್ಥವಾಗಿಸಿ ಲಕಲಕನೆ ನಕ್ಕ. ಆಮೇಲೆ ಎಲ್ಲರಿಗೂ ಅದು ಒಳ್ಳೆ ಗೇಲಿಯ ಮಾತಾಗಿಬಿಟ್ಟಿತು. ಆ ನಂತರ ಇವರಲ್ಲೇ ಇದ್ದ ಒಬ್ಬ ಸುಮ್ನಿರಲಾರದೆ ಈ ಪ್ರಸಂಗವನ್ನು ನಿಮ್ಮ ಮೇಡಂ ಕಿವಿಗೆ ಊದಿದನಂತೆ’ ಎಂದರು. ತಮ್ಮ ಮಾತನ್ನು ಮುಂದುವರೆಸಿ ಆಮೇಲೆ, ಇನ್ಯಾವೊತ್ತೊ ನನಗೆ ಡಾ. ಪಾರ್ವತಮ್ಮನವರು ಸಿಕ್ಕಿದರು. ನನ್ನ ಮುಖ ಕಂಡೇಟ್ಗಲೆ, ಇಂಗ್ಲಿಷ್‍ನಲ್ಲಿ ಚಾರ್.. ಪಾರ್ ಅಂತ ಕೋಪದಿಂದ ಬೈದರು! ಅಷ್ಟ್ ಜಿನ್‍ದಿಂದ ನನ್ನ ಜೊತೆ ಅವರು ಒಂದು ಹಲೋ ಕೂಡ ಹೇಳೋದಿಲ್ಲ ಎಂದು ಆಕಾಶದ ಕಡೆ ಒಮ್ಮೆ ನೋಡಿ ವಿಷಾದ ವ್ಯಕ್ತಪಡಿಸಿದರು. ಮೇಡಂ ಕೋಪ ಏನೆಂದು ತಿಳಿದಿದ್ದ ನಾನು ಅವರ ಮಾತಿಗೆ ಯಾವ ಪ್ರತಿಕ್ರಿಯೆಯನ್ನು ತೋರಿಸಲಿಲ್ಲ. ಇವೆಲ್ಲಾ ಇರಲಿ, ಅಂಬೇಡ್ಕರ್‍ರವರನ್ನು ಭೇಟಿ ಮಾಡಿದ್ದ ಆ ಕಾಲದವರೆಲ್ಲ ಪ್ರಖರ ಸೂರ್ಯನಿಂದ ಬೆಳಕು ಪಡೆದು ಪ್ರತಿಫಲಿಸುತ್ತಿರು ವವರಂತೆ ಆದಷ್ಟೂ ಬದ್ಧತೆಯಿಂದ ಬದುಕುತ್ತಿದ್ದರು ಮತ್ತು ಸಮಾಜಕ್ಕೆ ಕೊಡುಗೆ ನೀಡುತ್ತಿದ್ದರು.

……ಮುಂದಿನ ಸಂಚಿಕೆಯಲ್ಲಿ
ದೇಮಾನ ಬೇಸಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...