ಇಂದಿನ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಪ್ರವಾಹ ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
“ರಾಜ್ಯದಲ್ಲಿ ನೆರೆ ಬಂದು 6 ತಿಂಗಳು ಕಳೆದಿದ್ದರೂ ಹಾನಿಗೀಡಾದ 7,777 ಶಾಲೆಗಳ ದುರಸ್ತಿಯಾಗಿಲ್ಲ. ಮಕ್ಕಳು ಶಾಲೆ ಇಲ್ಲದೆ ಜಗಲಿ, ಮರದ ಕೆಳಗೆ, ಶೆಡ್ ನಲ್ಲಿ ಪಾಠ ಕೇಳುವಂತಾಗಿದೆ. ಹೀಗಾದರೆ ಮಕ್ಕಳ ಭವಿಷ್ಯದ ಗತಿಯೇನು?” ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.
“ಸಚಿವ ಸುರೇಶ್ ಕುಮಾರ್ ದುಡ್ಡಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಹೇಳಿ ಜಾರಿಕೊಂಡಿದ್ದಾರೆ. ಹುಣಸೂರಿನಲ್ಲಿ 3500 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಗ್ರಾಮಸ್ಥರೇ ಶೆಡ್ ಹಾಕಿ ಶಾಲೆ ನಡೆಸುತ್ತಿದ್ದಾರೆ. ಕೊಡಗು ಜಿಲ್ಲೆಯ ಒಂದು ಗ್ರಾಮದ ಶಾಲೆ ಇದುವರೆಗೂ ತೆರೆದೇ ಇಲ್ಲ. ಸುರೇಶ್ ಕುಮಾರ್ ಅವರೇ ಇನ್ನಾದರೂ ಎಚ್ಚೆತ್ತುಕೊಂಡು ಕೆಲಸ ಮಾಡಿ” ಎಂದು ಹೇಳಿದ್ದಾರೆ.
“ಪ್ರವಾಹದಿಂದ ಮೀನುಗಾರರ ದೋಣಿಗೆ ಮತ್ತು ಬಲೆಗೆ ಹಾನಿಯಾಗಿದೆ. ಎನ್‌ಡಿಆರ್‌ಎಫ್ ನಿಯಮ ಪ್ರಕಾರ ಅವರಿಗೆ ಪರಿಹಾರ ಕೊಡಲು ಅವಕಾಶವಿದ್ದರೂ ಅಧಿಕಾರಿಗಳು ಲೈಸೆನ್ಸ್ ಇಲ್ಲ ಎಂಬ ಕಾರಣ ನೀಡಿ ಪರಿಹಾರ ನಿರಾಕರಿಸಿರುವುದು ಸರಿಯಲ್ಲ, ಅವರಿಗೆ ತಕ್ಷಣ ಪರಿಹಾರ ನೀಡಿ” ಎಂದು ಸರ್ಕಾರವನ್ನು ಒತ್ತಾಯಿಸಿದರು.
“ಕೃಷಿ ಭೂಮಿ ಕಳೆದುಕೊಂಡವರಿಗೆ ರೂ.1129 ಕೋಟಿ ಪರಿಹಾರ ನೀಡಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಅದು ಯಾವ ರೈತರಿಗೂ ತಲುಪಿಲ್ಲ ಎಂದರಲ್ಲದೆ ಇದಕ್ಕಾಗಿ ನಿತ್ಯ ರಾಜ್ಯದಾದ್ಯಂತ ಪ್ರತಿಭಟನೆ ನಡೆಯುತ್ತಿದೆ ಎಂದರು. ರಾಮದುರ್ಗದ 32 ಗ್ರಾಮ, 8 ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಪರಿಹಾರ ಸಿಗಲಿಲ್ಲ ಎಂದು ಅಸಿಸ್ಟಂಟ್ ಕಮಿಷನರ್‌ಗೆ ಜನರು ದಿಗ್ಭಂದನ ಹಾಕಿದ್ದರು” ಎಂದರು.
“ಪ್ರವಾಹದಲ್ಲಿ ಹಾನಿಗೊಳಗಾದ 1.24 ಲಕ್ಷ ಮನೆಗಳಿಗೆ ಪರಿಹಾರದ ರೂಪದಲ್ಲಿ ರೂ.800 ಕೋಟಿ ನೀಡಿದ್ದೇವೆ ಎಂದು ರಾಜ್ಯಪಾಲರ ಭಾಷಣದಲ್ಲಿ ಸರ್ಕಾರ ಹೇಳಿದೆ. ಆದರೆ ಇದೇ ಸರ್ಕಾರ ಹಿಂದೆ ನೀಡಿದ್ದ ಜಾಹಿರಾತಿನಲ್ಲಿ 2 ಲಕ್ಷದ 57 ಸಾವಿರ ಮನೆಗಳು ಹಾನಿಗೊಳಗಾಗಿವೆ ಎಂದು ಹೇಳಿತ್ತು. ಹಾಗಾದರೆ ಉಳಿದ ಮನೆಗಳಿಗೆ ಏಕೆ ಪರಿಹಾರ ನೀಡಿಲ್ಲ? ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮತ್ತೊಮ್ಮೆ ಪ್ರವಾಹ ಬಂದು ಸುಮಾರು 10 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದಿದ್ದ ಬೆಳೆ ನಾಶವಾಯಿತು, ಸಾವಿರಾರು ಮನೆಗಳು ನೆಲಕ್ಕುರುಳಿದವು, ಜನ ಜಾನುವಾರುಗಳ ಜೀವ ಹಾನಿಯಾಯಿತು. ಇದಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಿ, ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಯಾಕೆ ನೀಡಿಲ್ಲ?” ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿಸರು.
“ತೆರಿಗೆ ಸಂಗ್ರಹದಲ್ಲಿ ಕರ್ನಾಟಕವೂ ದೆಹಲಿ, ಮಹಾರಾಷ್ಟ್ರದ ನಂತರ 3ನೇ ಸ್ಥಾನದಲ್ಲಿದೆ. ಕೇಂದ್ರ ಬಜೆಟ್‌ನಲ್ಲಿ ನೀಡಬೇಕಾಗಿದ್ದ ಅನುದಾನದಲ್ಲಿ ರೂ.17000 ಕೋಟಿ ಕಡಿಮೆಯಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಜಿಎಸ್‌ಟಿ ಪಾಲು, ಪ್ರವಾಹ ಪರಿಹಾರ ನಿಧಿ ಸಮರ್ಪಕವಾಗಿ ಬಂದಿಲ್ಲ. ಹೀಗಾದರೆ ರಾಜ್ಯದ ಅಭಿವೃದ್ಧಿ ಆಗುವುದು ಹೇಗೆ? ಬಿಜೆಪಿ ಸರ್ಕಾರ ಬಂದು 7 ತಿಂಗಳಾಗಿದೆ. ಯಾವುದಾದರೂ ಒಂದು ಹೊಸ ಜನಪರ ಯೋಜನೆ ಆರಂಭಿಸಿದೆಯೇ? ಅರಣ್ಯ ಹೆಚ್ಚಳ ತಮ್ಮ ಸಾಧನೆ ಎಂದು ಸಚಿವರೊಬ್ಬರು ತಮ್ಮ ಭಾಷಣದಲ್ಲಿ ಹೇಳಿದ್ದರು, ಬರೀ ಏಳೇ ತಿಂಗಳಲ್ಲೇ ಇವರು ಅರಣ್ಯ ಬೆಳೆಸಿದರೇ? ಹಾಲು ಉತ್ಪಾದನೆ ಹೆಚ್ಚಳ, ಬಂಡವಾಳ ಹೂಡಿಕೆ ಇವೆಲ್ಲ ಹಿಂದಿನ ನಮ್ಮ ಸರ್ಕಾರದ ಸಾಧನೆಗಳು” ಎಂದರು.
“ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ರೂ.5 ಪ್ರೋತ್ಸಾಹ ಧನ ನೀಡುವ ಯೋಜನೆ ‘ಕ್ಷೀರಧಾರೆ’ ಪ್ರಾರಂಭಿಸಿದ್ದು ನಾವು. ಒಂದು ದಿನಕ್ಕೆ ರೂ.4 ಕೋಟಿ ಪ್ರೋತ್ಸಾಹಧನ ನೀಡಲಾಗುತ್ತಿದೆ. ಈ ಕಾರಣದಿಂದ ಇಂದು ನಿತ್ಯ 80 ಲಕ್ಷ ಲೀಟರ್ ಗೂ ಅಧಿಕ ಹಾಲು ಉತ್ಪಾದನೆ ಆಗುತ್ತಿದೆ. ನಮ್ಮ ಸರ್ಕಾರ ಪ್ರೋತ್ಸಾಹಧನ ನೀಡುವ ಮುನ್ನ ನಿತ್ಯ 55 ಲಕ್ಷ ಲೀಟರ್ ಹಾಲು ಮಾತ್ರ ಉತ್ಪಾದನೆಯಾಗುತ್ತಿತ್ತು. ಈಗ ನಮ್ಮ ರಾಜ್ಯ ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನ ತಲುಪಿದೆ ಎಂದರೆ ಅದಕ್ಕೆ ಕಾರಣ ಹಿಂದಿನ ನಮ್ಮ ಸರ್ಕಾರವೇ ಹೊರತು ಈಗಿನ ಬಿಜೆಪಿ ಸರ್ಕಾರವಲ್ಲ” ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕರಕ್ಕೆ ನೆನಪಿಸಿದರು.


