Homeಮುಖಪುಟನಮ್ಮ ಮತದಾರ ಮಾರಿಕೊಂಡಿದ್ಯಾವಾಗ? ಬಿ ಚಂದ್ರೇಗೌಡರ ಅನುಭವ ಬರಹ

ನಮ್ಮ ಮತದಾರ ಮಾರಿಕೊಂಡಿದ್ಯಾವಾಗ? ಬಿ ಚಂದ್ರೇಗೌಡರ ಅನುಭವ ಬರಹ

ಶಾಂತವೇರಿ ಗೋಪಾಲಗೌಡರು, ಕಡಿದಾಳು ಮಂಜಪ್ಪನವರು ಬರೀ ಕೈಮುಗಿದು ಭಾಷಣ ಮಾಡಿ ಮತ ಪಡೆದು ಗೆದ್ದು ಬರುತ್ತಿದ್ದರು. ಆದರೀಗ ಮತಗಳು ಮಾರಾಟಕ್ಕಿಟ್ಟ ಸರಕುಗಳಾಗಿವೆ.....

- Advertisement -
- Advertisement -

ಗೆಳೆಯನೊಬ್ಬ ಪಿಎಲ್‍ಡಿ ಬ್ಯಾಂಕಿನ ಡೈರೆಕ್ಟರ್ ಚುನಾವಣೆಗೆ ನಿಲ್ಲುತ್ತೇನೆ, ನಿಮ್ಮ ಸಲಹೆಬೇಕೆಂದು ಹೇಳಿದ. ಮೊನ್ನೆ ತಾನೆ ಆತನ ಜಮೀನಿನ ಸುತ್ತ ಕಲ್ಲುಕಂಬ ನೆಡಲು ವ್ಯಾಪಾರ ಮುಗಿಸಿ ಅಡ್ವಾನ್ಸ್ ಕೊಡುವ ಆಶ್ವಾಸನೆ ಕೊಡಿಸಿ ಬಂದ ಮೂರೇ ದಿನಕ್ಕೆ ಗೆಳೆಯ ಆ ವಿಷಯ ಅಲ್ಲಿಗೇ ಬಿಟ್ಟು ಚುನಾವಣೆಗೆ ನಿಲ್ಲುವ ಉಮೇದು ಪ್ರಕಟಿಸಿದ್ದರಿಂದ, ಗೊಂದಲಕ್ಕೊಳಗಾದ ನಾನು, “ನೋಡಪ್ಪಾ ಯಾವತ್ತು ಮತದಾರ ಮತ ಮಾರಿಕೊಳ್ಳಲು ತಯಾರಾದನೋ ಹಾಗೆಯೇ, ಅಭ್ಯರ್ಥಿಯಾದವನು ಕೊಳ್ಳಲು ರೆಡಿಯಾದನೋ ಅವತ್ತೇ ನಮ್ಮ ಚುನಾವಣಾ ಹೋರಾಟ ಕಮರಿಹೋಗಿವೆ. ಇದೊಂದು ವ್ಯವಹಾರಸ್ಥರ ವ್ಯಾಪಾರ, ನಿನಗಿಷ್ಟ ಬಂದಂತೆ ಮಾಡು” ಎಂದೆ.

ಆದರೆ ಆತ ತನ್ನ ಉಮೇದುವಾರಿಕೆಗೆ ಗಣ್ಯರ ಸಲಹೆ ಇದೆ ಎಂಬುದನ್ನು ಅವರಿವರಲ್ಲಿ ಹೇಳಲು ಮತ್ತೂ ಮುಂದುವರಿದು “ಅಲ್ಲ ಕಣಣ್ಣಾ ನಾನು ಈಗಾಗ್ಲೆ ಯರಡಸತಿ ನಿಂತು, ಐದಾರೋಟಲ್ಲಿ ಸೋತಿದ್ದಿನಿ, ಅದ ಓಟು ಮಾಡೋರಿಗೆ ಹೇಳ್ತಿನಿ, ಈಗಾಗ್ಲೆ ಮಾಜಿ-ಹಾಲಿ ಎಮ್ಮೆಲ್ಲೆಗಳಿಗೆ ನನ್ನನ್ನು ಪರಿಗಣಿಸಿ ಅಂದ್ರೆ ಅವುರ್ಯಾರು ನನ್ನ ಪೋನಿಗೆ ಉತ್ತರನೆ ಕೊಡ್ತಾಯಿಲ್ಲ. ಕಾಂಗ್ರೆಸ್ ಜನತಾದಳದ ಕ್ಯಾಂಡೇಟೆದ್ರಿಗೆ ನಿಲ್ಲಲೇಬೇಕು ಅಂತ ತೀರ್ಮಾನ ಮಾಡಿದ್ದೀನಿ. ಈಗ ಹಿಂದೆ ಸರದ್ರೆ ಅವುಮಾನ” ಎಂದ.

ಓಹ್ ಓ ನಮ್ಮ ಅಭ್ಯರ್ಥಿ ಆತ್ಮಹತ್ಯೆಗೆ ತಯಾರಿ ನಡೆಸಿಯಾಗಿದೆ ಇನ್ನ ಯಾವುದೇ ವಿವೇಕದ ಮಾತು ವ್ಯರ್ಥ ಅನ್ನಿಸಿತು. ಆದ್ದರಿಂದ “ನಿನ್ನ ಗೆಲುವಿಗೆ ಕಾರಣ ಹೇಳು” ಅಂದೆ. ಎರಡು ಸತಿ ಸೋತಿದ್ದಿನಿ. ನಮ್ಮೂರೋರು ನನ್ನ ಕೈಬಿಡಲ್ಲ. ನನ್ನ ತಾಯಿ ತವರೂರಿನೋರು ಅಷ್ಟೇ. ನನ್ನ ಅತ್ತಿಗೆ ಊರಿನೋರು ನನಿಗಾಕ್ತಾರೆ. ನನ್ನೆಂಡ್ತಿ ಊರೋರು ಕಾಯ್ತಾ ಅವುರೆ, ನಿಮ್ಮ ಊರಲ್ಲಿ ಎಂಟು ಓಟವೆ. ಈಜಿಯಾಗಿ ಗೆಲ್ತಿನಿ” ಎಂದ. ಟೋಟಲಿ ಓಟೆಷ್ಟವೆ ಎಂದೆ. “ನೂರಾಎಪ್ಪತ್ತವೆ. ಅದರಲ್ಲಿ ಹತ್ತು ಓಟು ಸತ್ತೋಗ್ಯವೆ. ಇನ್ನ ಹತ್ತು ಅನಾರೋಗ್ಯ ಲಕ್ವದ ಹೊಡತ ಹಿಂಗೆ ಅಪ್ಸೆಂಟಾದ್ರೂ, ನೂರಾ ಐವತ್ತು ಪೋಲಾಯ್ತವೆ. ಮೂರು ಜನ ಅಭ್ಯರ್ಥಿಗಳು ಹಂಚಿಕೊಂಡ್ರೂ ನನಿಗೆ ಎಪ್ಪತ್ತು ಓಟು ಸಾಕು ಕಣಣ್ಣ ಗೆದ್ದಂಗೆಯ” ಎಂದ.

ಗೆಳಯನ ಲೆಕ್ಕಾಚಾರದಲ್ಲಿ ಅವನಾಗಲೇ ಗೆದ್ದಾಗಿತ್ತು. ನಾಮಪತ್ರ ಹಿಂಪಡೆಯುವ ದಿನ ಗೆಳೆಯನಿಗೆ, ದಳದ ಅಭ್ಯರ್ಥಿ ಒಂದು ಲಕ್ಷ ತೆಗೆದುಕೊಂಡು ನಾಮಪತ್ರ ವಾಪಸ್ ಪಡೆದುಕೊಳ್ಳಲು ಆಮಿಷ ಒಡ್ಡಿದರೂ ಗೆಳೆಯ ಬಗ್ಗಲಿಲ್ಲ. ಅದೇನಾದ್ರೂ ಆಗ್ಲಿ ನಿಂತಗಳದೆಯಾ ಎಂದು ಎದ್ದು ಬಂದ. ಮುಂದಿನದು ಮತದಾರನ ಭೇಟಿ. ಮೊದಲ ಸುತ್ತಿನಲ್ಲಿ ಎಲ್ಲರನ್ನೂ ಭೇಟಿ ಮಾಡಿ ಮಾತನಾಡಿಸಿದ್ದಾಯ್ತು. ಎರಡನೇ ಬೇಟೆಯಲ್ಲಿ ಅವರು ತೆಗೆದುಕೊಳ್ಳುವ ಎಣ್ಣೆ ಯಾವುದೆಂದು ವಿಚಾರಿಸಿ ಟವಲ್‍ನಿಂದ ಮುಚ್ಚಿಕೊಂಡು ಅವರ ಜೇಬಿಗೆ ಹಸ್ತಾಂತರಿಸಿದ್ದಾಯ್ತು. ಆಗ ಅಭ್ಯರ್ಥಿ ಮತ್ತು ಮತದಾರನ ಮುಖ ಅಗಮ್ಯ ಲೋಕ ದಿಟ್ಟಿಸಿ ಆನಂದಗೊಂಡವು.

ಈ ನಡುವೆ ಅಭ್ಯರ್ಥಿಗಳ ಖಾಸಾ ಪರಿಚಾರಕರು, ತಮ್ಮವರ ಎದುರಾಳಿಗಳು ಏನೇನು ಹಂಚುತ್ತಾರೆಂಬ ಮಾಹಿತಿ ಸಂಗ್ರಹಿಸಿ ತಮ್ಮ ಲೀಡರುಗಳಿಗೆ ತಲುಪಿಸುತ್ತಿದ್ದರಿಂದ, ಮತದಾರ ಕಂಠಪೂರ್ತಿಯ ಅಮಲಲ್ಲಿದ್ದು, “ಇದಪ್ಪ ಚುನಾವಣೆ ಅಂದ್ರೆ ಇವು ಆಗಾಗ್ಗೆ ಬಂದ್ರೆ ಎಷ್ಟು ಚನ್ನಾಗಿರತದೆ ಈ ಲೋಕ” ಎನ್ನುವಂತಾದರು. ಆದರೂ, ಈ ಮತದಾರನೆಂಬ ನಟಸಾರ್ವಭೌಮ ಯಾವ ಗುಟ್ಟನ್ನೂ ಬಿಟ್ಟು ಕೊಡದೆ “ನಿಮಗಾಗಿ ಕಾಯ್ತಿದ್ದೆ, ನನ್ನೋೀಟು ಯಾರಿಗೂ ಹಾಕಲ್ಲ ಅದು ನಿನಿಗೇ ಮೀಸಲು ಎನ್ನುವಂತೆ ಅಭಿನಯಿಸಿದ್ದು ಮಾತ್ರ ಯಾವ ಕಲಾವಿದನಿಂದಲೂ ಸಾಧ್ಯವಿಲ್ಲ.

ಚುನಾವಣೆ ಕೇವಲ ಮೂರು ದಿನ ಇದೆ ಎನ್ನುವಾಗ, ದಳದ ಅಭ್ಯರ್ಥಿ ಮೂರು ಸಾವಿರ ಹಂಚುತ್ತಾನೆಂಬ ಸುದ್ದಿ ಬಂತು. ಇನ್ನ ಕಾಂಗ್ರೆಸ್‍ನವರು ಐದು ಸಾವಿರ ಕೊಡುತ್ತಾರೆಂಬುದು ಖಾತ್ರಿಯಾಯ್ತು. ಗೆಳೆಯ “ಅವರೇನು ಕೊಡುತ್ತಾರೊ ಅದಕ್ಕೆ ಡಬಲ್” ಎಂದ. ಎದುರಾಳಿಗಳು ತತ್ತರಿಸಿದರು. ಅವರ ಕಾರ್ಯಕರ್ತರ ಎಣ್ಣೆ ಪಾರ್ಟಿಗಳು ಜೋರಾದವು. ಆಗ ನಾನು ಗೆಳೆಯನಿಗೆ, “ಈಗಲೂ ನೀನು ಸುಮ್ಮನಾಗಬಹುದು” ಎಂದೆ. ಯಾಕಣ್ಣ ಎಂದ. “ನೀನು ಡೈರೆಕ್ಟರಾಗುವ ಬ್ಯಾಂಕು ಸಾಲಕೊಟ್ಟು ದಿವಾಳಿ ಅಂಚಿನಲ್ಲಿದೆ. ಶಾ-ಮೋದಿ ದೇಶದ ಬ್ಯಾಂಕು ಹೇಗಿರಬೇಕೊ ಹಾಗಾಗಿದೆ. ಟ್ರ್ಯಾಕ್ಟರ್ ಸಾಲ ತೆಗೆದುಕೊಂಡವರು ಯಾರೂ ಸಾಲಕಟ್ಟಿಲ್ಲ. ಸಾಲ ತೆಗೆದುಕೊಂಡವರೆಲ್ಲಾ ಬ್ಯಾಂಕಿನ ಸದಸ್ಯರು. ನಿರ್ದೇಶಕರುಗಳ ಸಂಬಂಧಿಕರು, ಈ ಬ್ಯಾಂಕ್‍ನ ನೋಡಿದರೆ ಕಳ್ಳು-ಬಳ್ಳಿ, ನಂಟರು ಇಷ್ಟರು ಬೀಗರು ಬಿಜ್ಜರು ಕೊಳ್ಳೆಹೊಡೆಯಲು ಮಾಡಿಕೊಂಡ ಖಾರಸ್ತಾನದಂತಿದೆ. ಕುಮಾರಣ್ಣ ಬಂದು ಸಾಲಮನ್ನಾ ಮಾಡುತ್ತಾನೆಂದು ಎಲ್ಲಾ ಕಾಯುತ್ತಾ ಬ್ಯಾಂಕ್ ಬಾಗಲಾಕುವುದನ್ನು ಕಾಯುತ್ತಿದ್ದಾರೆ, ಅಲ್ಲಿಗೋಗಿ ಏನು ಮಾಡ್ತಿ ಎಂದೆ “ನೋಡಣ್ಣ ಯುದ್ಧ ಭೂಮಿಯಿಂದ ಹಿಂದಕ್ಕೋಗಬಾರ್ದು, ಆ ನನ ಮಕ್ಕಳು ಐದಾರು ಸಾವುರ ಕೊಡೋಕ್ಕೆ ರೆಡಿಯಾಗ್ಯವುರೆ ನಾನು ಹತ್ತು ಸಾವುರ ಕೊಡ್ತೀನಿ” ಎಂದ. ಇದು ಚುನಾವಣಾ ಹುಚ್ಚಿನ ಅಂತಿಮ ಘಟ್ಟದಂತೆ ಕಂಡು ಸುಮ್ಮನಾದೆ.

ಮರುದಿನ ಮತದಾನವಿರಬೇಕಾದರೆ, ಅಭ್ಯರ್ಥಿ ತಾನು ಸೆಲೆಕ್ಟ್ ಮಾಡಿದ ನೂರು ಜನರಿಗೆ ತಲಾ ಹತ್ತು ಸಾವಿರದಂತೆ ಚೆಕ್ ಹರಿದು ರಾತ್ರಿಯೆಲ್ಲಾ ಮನೆಮನೆಗೂ ತಲುಪಿಸಿ ಕಾಲಿಗೆ ಬಿದ್ದು ಗೆದ್ದ ಖುಷಿಯಲ್ಲಿ ಆರಾಮವಾದ. ಆದರೆ ಮತದಾನದ ದಿನ ಎದುರಾಳಿಗಳು ಅವು ಬೋಗಸ್ ಚೆಕ್ಕುಗಳು, ಕ್ಯಾಶಾಗಲ್ಲ ಮಡಿಕಳಿ ಇದ ಅಂತ ಇನ್ನೊಂದು ಸಾವಿರವನ್ನ ಜೇಬಿಗೆ ತುರುಕಿದರು. ಮತದಾರರಿಗೆ ಈಗಾಗಲೇ ಜೇಬಲ್ಲಿದ್ದ ಹದಿನೈದು ಸಾವಿರ ಹಣಕ್ಕಿಂತ ಹತ್ತು ಸಾವಿರ ಚೆಕ್ಕು ಭರವಸೆ ಮೂಡಿಸಲಿಲ್ಲ. ಈಗಾಗಲೇ ಬ್ಯಾಂಕುಗಳು ಅವರ ನಂಬಿಕೆಯನ್ನು ಅಲ್ಲಾಡಿಸಿರುವುದರಿಂದ, ಕ್ಯಾಶ್ ಕೊಟ್ಟವರಿಗೆ ಒಟು ಮಾಡಿದರು. ಆದ್ದರಿಂದ ಚೆಕ್ ವಿತರಿಸಿದ ವ್ಯಕ್ತಿ ಮೂರನೇ ಸ್ಥಾನಕ್ಕೆ ಬಂದ.

ಅಂತಹ ಸೊಲಿನಲ್ಲಿಯೂ ಆತನ ಮುಖದಲ್ಲಿ ಕಂಡ ಸಂತಸ ಯಾವುದೆಂದರೆ ಕಾಂಗ್ರೆಸ್ ಅಭ್ಯರ್ಥಿಯನ್ನು ತೆಗೆದುದಾಗಿತ್ತು. ಗೆದ್ದ ದಳದ ಅಭ್ಯರ್ಥಿಯ ಮುಂದೆ ಚೆಕ್ಕನ್ನು ಬ್ಯಾಂಕಿಗೆ ಹಾಕಲು ಮತ ಹಾಕಿದವರಿಗೇ ಮನಸ್ಸು ಬರಲಿಲ್ಲ. ಚೆಕ್ ವಿತರಿಸಿದ ಅಭ್ಯರ್ಥಿಯ ಇನ್ನೊಂದು ಮಾತೆಂದರೆ “ ಕಳೆದ ಚುನಾವಣೆಯಲ್ಲಿ ಈ ಮತದ ಬೆಲೆ ಕೇವಲ ಒಂದು ಸಾವಿರವಾಗಿತ್ತು. ಈಗ ಹತ್ತು ಸಾವಿರ ತಲುಪಿದೆ. ಒಂದೆರಡು ಸಾವಿರದಲ್ಲಿ ಗೆದ್ದು ಹೋಗುತ್ತಿದ್ದವರಿಂದ, ಕನಿಷ್ಟ ಒಂದು ಓಟಿಗೆ ಎಂಟು ಸಾವಿರ ಕಕ್ಕಿಸಿದ್ದೇನೆ. ಆದ್ದರಿಂದ ಮುಂದೆ ಬರೋರು ಸೋಲಲಿ ಗೆಲ್ಲಲಿ ಪ್ರತಿ ಮತಕ್ಕೆ ಹತ್ತು ಸಾವಿರ ಕೊಡಲು ತಯಾರಾಗಿ ಬರಬೇಕು. ಎಂದು ವಿಕಟ್ಟಾಸದಿಂದ ನಕ್ಕ.

ಈ ಸಂಗತಿಯನ್ನು ನಾನು ಮಾಜಿ ಮಂತ್ರಿಗಳಾದ ಹೆಚ್.ಟಿ. ಕೃಷ್ಣಪ್ಪನವರಿಗೆ ಹೇಳಿದಾಗ ಅವರು “ಅಯ್ಯೋ ಹತ್ತು ಸಾವುರಕ್ಕೊದ್ರಿ ನೀವು, ಕೆ.ಎಂ.ಎಫ್ ಚೇರ್ಮನ್‍ಗಿರಿಗೆ ಓಟು ಮಾಡೂರ ಓಟಿನ ಬೆಲೆ ಪ್ರತಿ ಓಟಿಗೆ ಎಂಬತ್ತು ಸಾವಿರ ತಲುಪಿದೆ. ಅದ್ರಿಂದ ಈ ದೇಶದ ಪ್ರಜಾಪ್ರಭುತ್ವದ ಅವನತಿ ಶುರುವಾಗಿ ಬಹಳ ವರ್ಷಗಳಾಗಿವೆ. ಮತದಾರನಿಗೆ ಕೈ ಮುಗಿಯೋ ಕಾಲಹೋಯ್ತು ಈಗೇನಿದ್ರೂ “ತಲುಪ್ತ” ಅನ್ತ ಕೈ ಸನ್ನೆ ವ್ಯವಹಾರ ನಡಿತಿದೆ. ಇದರಿಂದ ಮತದಾರ ತನ್ನ ಹಕ್ಕನ್ನೇ ಮಾರಿಕೊಂಡವನೆ, ಗೆದ್ದವನು ಯಾರಿಗೂ ಕೇರ್ ಮಾಡದೆ ಕ್ಷೇತ್ರನ ಕೊಳ್ಳೆ ಹೊಡಿತನೆ. ಇದು ಬಹಳ ದೊಡ್ಡ ದುರಂತ” ಎಂದರು.

ಮತದಾರ ತನ್ನನ್ನು ಮಾರಿಕೊಂಡ ಸಂಗತಿ ಇತ್ತೀಚಿನದ್ದು ಎಂದು ಭಾವಿಸಿದ್ದೆ ನನಗೆ ಬಳ್ಳಾರಿ ಎಸ್ಪಿಯಾಗಿದ್ದ ಕಾ.ಡಿ.ಸಿ ರಾಜಪ್ಪನವರು ಹೇಳಿದ ಸಂಗತಿ ಇನ್ನೂ ದಂಗುಬಡಿಸಿತು. ಅವರು ಬಳ್ಳಾರಿ ಎಸ್ಪಿಯಾಗಿದ್ದಾಗ ಸಂಗ್ರಹಿಸಿದ ಮಾಹಿತಿ ಪ್ರಕಾರ, ಈ ನಾಡಿಗೆ ಮೊದಲ ಚುನಾವಣೆ ನಡೆದದ್ದು 1952ರಲ್ಲಿ. ಆಗ ಬಳ್ಳಾರಿ ಪ್ರಾಂತ್ಯದ ಅವಿಭಕ್ತ ಕುಟುಂಬದ ಯಜಮಾನರೊಬ್ಬರು ತಮ್ಮ ದೈನಂದಿನ ಆದಾಯ ಮತ್ತು ಖರ್ಚಿನ ಪುಸ್ತಕದಲ್ಲಿ. ಚುನಾವಣೆಯಲ್ಲಿ ಓಟು ಮಾಡಿದ್ದಕ್ಕಾಗಿ ಬಂದ ಹಣ ನಲವತ್ತೆಂಟು ರೂಪಾಯಿಗಳು ಎಂದು ದಾಖಲಿಸಿದ್ದರಂತೆ. 24 ಜನರಿದ್ದ ಆ ಅವಿಭಕ್ತ ಕುಟುಂಬದ ತಲಾ ಓಟಿಗೆ ಎರಡು ರೂಪಾಯಿಯಂತೆ ಅಭ್ಯರ್ಥಿ 48 ರೂ ಕೊಟ್ಟಿದ್ದು ಆ ಯಜಮಾನರಿಗೆ ಆದಾಯವಾಗಿ ಕಂಡು ಅದನ್ನು ದಾಖಲಿಸಿದ್ದರಂತೆ. 1952ರ ಎರಡು ರೂಪಾಯಿ ಇವತ್ತಿಗೆ ಹತ್ತು ಸಾವಿರ ಆಗಬಹುದು, ಆಗದೆಯೂ ಇರಬಹುದು ಆದರೆ ಆರಂಭದ ಚುನಾವಣೆಯಲ್ಲೇ ಅಭ್ಯರ್ಥಿ ಹಣ ಕೊಟ್ಟಿದ್ದು ಮತದಾರ ಪಡೆದದ್ದು ದಾಖಲಾಗಿ ಹೋಗಿದೆ ಬಳ್ಳಾರಿಯಲ್ಲಿ ಕುಬೇರರೂ ಕೂಡ ಮಾರಿಕೊಂಡ ಓಟಿನ ಹಣ ಲೈಟ್ ಬಿಲ್ಲಾಗಲಿ ಅಥವಾ ಟಿ.ವಿ. ಬಿಲ್ ಆಗಲಿ ಆನ್ನುತ್ತಾರಂತೆ.

ಇದಕ್ಕೆ ವ್ಯತಿರಿಕ್ತವಾದ ಚುನಾವಣೆಗಳು ಆ ದಶಕದಲ್ಲೇ ನಡೆದು ಹೋಗಿವೆ. ಶಾಂತವೇರಿ ಗೋಪಾಲಗೌಡರು, ಕಡಿದಾಳು ಮಂಜಪ್ಪನವರು ಬರೀ ಕೈಮುಗಿದು ಭಾಷಣ ಮಾಡಿ ಮತ ಪಡೆದು ಗೆದ್ದು ಬರುತ್ತಿದ್ದರು. ಅದರಲ್ಲೂ ಗೋಪಾಲಗೌಡರು ಮತದಾರರಿಂದಲೆ ಹಣ ಪಡೆದು ಅವರುಗಳ ಮನೆಯಲ್ಲೇ ಉಂಡು ಮಲಗಿ ಬರುತ್ತಿದ್ದರು. ಆಗ ಅಪ್ಪಿತಪ್ಪಿ ಓಟು ಕೇಳಿದ್ದು ಕಡಮೆ. ಕನ್ನಡ ಸಾಹಿತ್ಯ ಮತ್ತು ದೇಶ ವಿದೇಶಗಳ ಸಂಗತಿಗಳನ್ನು ಭಾಷಣದಲ್ಲಿ ಹೇಳಿ ಬರುತ್ತಿದ್ದರು. ಅವರ ಕ್ಷೇತ್ರದ ಚುನಾವಣಾ ವೆಚ್ಚ ದಳದಿಂದ ಎಂಟು ಸಾವಿರದವರೆಗೂ ಆಗುತ್ತಿತ್ತು. ಅವರ ಕೊನೆಯ ಚುನಾವಣೆಯ ಖರ್ಚುವೆಚ್ಚದ ದಾಖಲೆ ಅವರ ಶಿಷ್ಯರಾದ ಕೊಣಂದೂರು ಲಿಂಗಪ್ಪನವರ ಬಳಿ ಈಗಲೂ ಇದೆ. ಅವನ್ನೆಲ್ಲಾ ಕೇಳಿದರೆ ಯಾವುದೊ ಜಾನಪದ ಕತೆ ಕೇಳಿದಂತಾಗುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...