ನೇಪಾಳದಲ್ಲಿ ಸಾಮಾಜಿಕ ಮಾಧ್ಯಮ ತಾಣಗಳ ಮೇಲಿನ ನಿಷೇಧವನ್ನು ವಿರೋಧಿಸಿ ಯುವಜನರು ಹಮ್ಮಿಕೊಂಡಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ಸೋಮವಾರ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಮತ್ತು 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಈ ಪ್ರಕ್ಷುಬ್ಧತೆಯು ಪ್ರಧಾನಿ ಕೆ.ಪಿ ಶರ್ಮಾ ಒಲಿ ಅವರ ಸಮ್ಮಿಶ್ರ ಸರ್ಕಾರದ ಪಾಲುದಾರ ನೇಪಾಳಿ ಕಾಂಗ್ರೆಸ್‌ನ ಗೃಹ ಸಚಿವ ರಮೇಶ್ ಲೇಖಕ್ ಅವರ ರಾಜೀನಾಮೆಗೆ ಕಾರಣವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ ಪರಿಸ್ಥಿತಿಯ ಜವಾಬ್ದಾರಿಯನ್ನು ಹೊತ್ತುಕೊಂಡು ಲೇಖಕ್ ನೈತಿಕ ಆಧಾರದ ಮೇಲೆ ರಾಜೀನಾಮೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ಪಿಟಿಐಗೆ ತಿಳಿಸಿವೆ.
ಹಿಂಸಾಚಾರ ತೀವ್ರಗೊಳ್ಳುತ್ತಿದ್ದಂತೆ, ನೇಪಾಳಿ ಸೈನ್ಯವನ್ನು ಕಠ್ಮಂಡುವಿನಲ್ಲಿ ನಿಯೋಜಿಸಲಾಗಿದೆ. ಸೈನಿಕರು ನ್ಯೂ ಬನೇಶ್ವರ್‌ನಲ್ಲಿರುವ ಸಂಸತ್ ಸಂಕೀರ್ಣದ ಸುತ್ತಲಿನ ರಸ್ತೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ರಾತ್ರಿ ತಡವಾಗಿ, ಸಾಮಾಜಿಕ ಮಾಧ್ಯಮ ತಾಣಗಳನ್ನು ನಿಷೇಧಿಸುವ ತನ್ನ ಹಿಂದಿನ ಆದೇಶವನ್ನು ಹಿಂತೆಗೆದುಕೊಂಡಿರುವುದಾಗಿ ಸರ್ಕಾರ ಘೋಷಿಸಿದೆ.
ತುರ್ತು ಸಚಿವ ಸಂಪುಟ ಸಭೆಯ ನಂತರ, ಸಾಮಾಜಿಕ ಮಾಧ್ಯಮ ತಾಣಗಳನ್ನು ನಿಷೇಧಿಸುವ ತನ್ನ ಹಿಂದಿನ ನಿರ್ಧಾರವನ್ನು ಸರ್ಕಾರ ಹಿಂತೆಗೆದುಕೊಂಡಿದೆ ಎಂದು ನೇಪಾಳ ಸಂವಹನ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪೃಥ್ವಿ ಸುಬ್ಬ ಗುರುಂಗ್ ತಿಳಿಸಿದ್ಧಾರೆ.
‘ಜೆನ್ ಝೀ’ಗಳ ಬೇಡಿಕೆಗಳ ಮೇರೆಗೆ ಸಾಮಾಜಿಕ ಮಾಧ್ಯಮ ತಾಣಗಳನ್ನು ಪುನರಾರಂಭಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಮಾಹಿತಿ ಸಚಿವಾಲಯವು ಸಂಬಂಧಿತ ಸಂಸ್ಥೆಗಳಿಗೆ ಆದೇಶಿಸಿದೆ ಎಂದು ಗುರುಂಗ್ ಹೇಳಿದ್ದಾರೆ.
ನೇಪಾಳ ಪೊಲೀಸ್ ವಕ್ತಾರ ಬಿನೋದ್ ಘಿಮಿರೆ ಮಾತನಾಡಿ, ಪ್ರತಿಭಟನೆಯ ಸಂದರ್ಭದಲ್ಲಿ ಕಠ್ಮಂಡುವಿನ ವಿವಿಧ ಭಾಗಗಳಲ್ಲಿ ನಡೆದ ಘರ್ಷಣೆಯಲ್ಲಿ 17 ಜನರು ಸಾವನ್ನಪ್ಪಿದ್ದಾರೆ ಮತ್ತು ಪೂರ್ವ ನೇಪಾಳದ ಸುನ್ಸಾರಿ ಜಿಲ್ಲೆಯಲ್ಲಿ ಇಬ್ಬರು ಪ್ರತಿಭಟನಾಕಾರರು ಪೊಲೀಸ್ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸಾವುಗಳ ಬಗ್ಗೆ ಪ್ರಧಾನಿ ಓಲಿ ಅವರು ದುಖಃ ವ್ಯಕ್ತಪಡಿಸಿದ್ದು, ಶಾಂತಿಯುತ ಪ್ರತಿಭಟನೆ ಹಿಂಸೆಗೆ ತಿರುಗಲು ವ್ಯವಸ್ಥಿತ ಪಿತೂರಿ ಕಾರಣ ಎಂದಿದ್ದಾರೆ. ಘಟನೆ ಕುರಿತು ತನಿಖೆಗೆ ಆದೇಶಿಸಿರುವ ಅವರು, 15 ದಿನಗಳಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.


