1984 ರ ಸಿಖ್ ವಿರೋಧಿ ಗಲಭೆಯ ತನ್ನ ಪಾತ್ರಕ್ಕಾಗಿ ದೆಹಲಿ ಹೈಕೋರ್ಟ್‌ನಿಂದ 2018 ರಲ್ಲಿ ಶಿಕ್ಷೆಗೊಳಗಾಗಿ ತಿಹಾರ್ ಜೈಲಿನಲ್ಲಿರುವ ಮಾಜಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.
ಸಜ್ಜನ್ ಕುಮಾರ್ ಅವರ ಆರೋಗ್ಯದ ಬಗ್ಗೆ ವಕೀಲರು ಎತ್ತಿದ ಕಳವಳಗಳನ್ನು ಬದಿಗೊತ್ತಿದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠ, ಇದು ಸಾಮಾನ್ಯ ಪ್ರಕರಣವಲ್ಲ ಎಂದು ಹೇಳಿದೆ.
ಇದನ್ನೂ ಓದಿ: ಹಿಂದೂ-ಸಿಖ್ ಸಮುದಾಯದ ಅರ್ಥಶಾಸ್ತ್ರಜ್ಞ ಗೆಳೆಯರಿಬ್ಬರೂ ಭಾರತದ ಪ್ರಸ್ತುತ ಸ್ಥಿತಿ ಕುರಿತು ಬರೆದ ಭಾವನಾತ್ಮಕ ಪತ್ರ.
“ಇದು ಸಣ್ಣ ಪ್ರಕರಣವಲ್ಲ. ನಾವು ನಿಮಗೆ ಜಾಮೀನು ನೀಡಲು ಸಾಧ್ಯವಿಲ್ಲ” ಎಂದು ಸಿಜೆಐ ಬೊಬ್ಡೆ ಹೇಳಿದರು. ಆದರೂ ಮುಖಾಮುಖಿ ವಿಚಾರಣೆ ಪುನರಾರಂಭವಾದ ಕೂಡಲೇ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಜ್ಜನ್ ಕುಮಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ಮಾಡುವುದಾಗಿ ನ್ಯಾಯಪೀಠ ಹೇಳಿದೆ.
1984 ರ ಹತ್ಯಾಕಾಂಡದಲ್ಲಿ ಅವರ ಪಾತ್ರಕ್ಕಾಗಿ 2018 ರ ಡಿಸೆಂಬರ್‌ನಲ್ಲಿ ದೆಹಲಿ ಹೈಕೋರ್ಟ್ 74 ವರ್ಷದ ರಾಜಕಾರಣಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಆಗಿನ ಪ್ರಧಾನಿ ಇಂದಿರಾ ಗಾಂಧಿಯನ್ನು ಅವರ ಸಿಖ್ ಅಂಗರಕ್ಷಕರು ಹತ್ಯೆ ಮಾಡಿದ ಪ್ರತೀಕಾರವಾಗಿ 1984 ರಲ್ಲಿ ಸಿಖ್ ಸಮುದಾಯವನ್ನು ಗುರಿಯಾಗಿಸಿಕೊಂಡು ಗಲಭೆಗಳು ಭುಗಿಲೆದ್ದಿದ್ದವು.
ಇದನ್ನೂ ಓದಿ: ಆಪರೇಷನ್ ‘ಬ್ಲೂ ಸ್ಟಾರ್’ ಮತ್ತು ಇಂದಿರಾ ಗಾಂಧಿ ಹತ್ಯೆಗೆ ಕಾರಣಗಳೇನು? ಹೇಗೆ ನಡೆಯಿತು.. ಪ್ರತ್ಯಕ್ಷದರ್ಶಿಯ ವರದಿ
ಸಜ್ಜನ್ ಅವರ ವಕೀಲ ವಿಕಾಸ್ ಸಿಂಗ್ ಕಕ್ಷಿದಾರ ಈಗಾಗಲೇ 18 ತಿಂಗಳು ಜೈಲಿನಲ್ಲಿದ್ದು, ಅವರ ಆರೋಗ್ಯ ಮತ್ತು ತೂಕವನ್ನು ಮರಳಿ ಪಡೆಯಲು ಒಂದು ತಿಂಗಳ ಕಾಲ ಮಧ್ಯಂತರ ಜಾಮೀನು ನೀಡಬೇಕು ಎಂದು ಕೇಳಿದ್ದರು.
“ಕೋರ್ಟ್ ಹೇರುವ ಯಾವುದೇ ಷರತ್ತನ್ನು ನಾನು ಪಾಲಿಸುತ್ತೇನೆ. ಕನಿಷ್ಠ 1 ತಿಂಗಳ ಕಾಲ ಮಧ್ಯಂತರ ಜಾಮೀನು ನೀಡಬೇಕು” ಎಂದು ವಿಕಾಸ್ ಸಿಂಗ್ ಒತ್ತಿ ಹೇಳಿದ್ದರು.
ಸಿಖ್ ಗಲಭೆ ಸಂತ್ರಸ್ತರನ್ನು ಪ್ರತಿನಿಧಿಸುತ್ತಿದ್ದ ವಕೀಲರು ಅವರ ಜಾಮೀನು ಅರ್ಜಿಯನ್ನು ವಿರೋಧಿಸಿದರು. ಅವರಿಗೆ ಜೈಲಿನಲ್ಲಿ ಉತ್ತಮ ಆರೈಕೆ ನೀಡಲಾಗುತ್ತಿದೆ ಎಂದು ಹೇಳಿದರು.
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಮಾರ್ಚ್ 11 ರ ವರದಿಯನ್ನು ಗಮನಿಸಿದ ನ್ಯಾಯಾಲಯ, ಸಜ್ಜನ್ ಅವರ ತೂಕವು ವಾಸ್ತವವಾಗಿ ಅವರು ಮಾಡಿದ ಪ್ರತಿಪಾದನೆಗೆ ವಿರುದ್ಧವಾಗಿದ್ದು, ಹೆಚ್ಚಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ಮೋದಿ ಸರ್ವಾಧಿಕಾರ ಇಂದಿರಾಗಾಂಧಿ ಸರ್ವಾಧಿಕಾರ ಒಂದೇನಾ?..: ಪ್ರಭಾತ್ ಪಟ್ನಾಯಕ್


