ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರಾರಂಭಿಸಿದ ಐತಿಹಾಸಿಕ ಹೋರಾಟಕ್ಕೆ ಎರಡು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ರೈತ ಸಂಘಗಳು ಶನಿವಾರ ದೇಶಾದ್ಯಂತ ರಾಜಭವನಗಳಿಗೆ ಮೆರವಣಿಗೆಗಳನ್ನು ನಡೆಸಲಿವೆ. ರೈತ ವಿರೋಧಿ ಕಾನೂನುಗಳ ವಿರುದ್ಧ ನಡೆಸಿದ ಸುಮಾರು ಒಂದು ವರ್ಷದ ದೀರ್ಘ ಹೋರಾಟದ ನಂತರ ಬಿಜೆಪಿ ಸರ್ಕಾರ ರೈತರ ಮುಂದೆ ಮಂಡಿಯೂರಿ ಸೋಲೊಪ್ಪಿಕೊಂಡಿತ್ತು.
ಸರ್ಕಾರ ನೀಡಿದ್ದ ವಿವಿಧ ಭರವಸೆಗಳನ್ನು ಈಡೇರಿಸದ ಕಾರಣ ಅದರ ವಿರುದ್ಧ ಕೂಡಾ ರೈತರ ಪ್ರತಿಭಟನೆಯಲ್ಲಿ ದಾಖಲಿಸಲಾಗುವುದು ಎಂದು ರೈತ ಮುಖಂಡರು ಶುಕ್ರವಾರ ಹೇಳಿದ್ದಾರೆ. ಬೆಳೆಗಳ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಚರ್ಚೆ ನಡೆಸಿ ಕಾನೂನು ತರುವುದಾಗಿ ಸರಕಾರ ಲಿಖಿತವಾಗಿ ಹೇಳಿಕೊಂಡಿದ್ದರೂ ಇಲ್ಲಿಯವರೆಗೆ ಏನೂ ಮಾಡಿಲ್ಲ ಎಂದು ರೈತ ಮುಖಂಡರು ದೂರಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ವಿಶೇಷವಾಗಿ ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ ಹಾಗೂ ದೇಶದಾದ್ಯಂತದ ಲಕ್ಷಾಂತರ ರೈತರು, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಒಂದು ವರ್ಷಕ್ಕೂ ಹೆಚ್ಚು ಕಾಲ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನವೆಂಬರ್‌ನಲ್ಲಿ ಮೂರು ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಇದನ್ನೂ ಓದಿ: ದಿಟ್ಟ ರೈತ ಹೋರಾಟದ ಕುರಿತ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಈಗ ಆನ್‌ಲೈನ್‌ನಲ್ಲಿ ಲಭ್ಯ
“ನಮ್ಮ ಹಲವು ಬೇಡಿಕೆಗಳಿಗೆ ಲಿಖಿತವಾಗಿ ಒಪ್ಪಿಗೆ ನೀಡಿದರೂ ಏನೂ ಆಗಿಲ್ಲ. ಇದು ದೇಶದ ರೈತರಿಗೆ ಮೋಸ ಮಾಡಿದ ದೇಶದ್ರೋಹಿ ಎಂದು ಸರ್ಕಾರ ಸಾಬೀತು ಮಾಡಿದೆ. ಸರ್ಕಾರವು ಕಾರ್ಪೊರೇಟ್‌ಗಳನ್ನು ರಕ್ಷಿಸುತ್ತಿದೆ… ರೈತರ ಬೇಡಿಕೆಯನ್ನು ಈಡೇರಿಸುವ ಉದ್ದೇಶವೇ ಇಲ್ಲ ಎಂದು ಸಾಬೀತುಪಡಿಸಿದ್ದಾರೆ” ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ನಾಯಕ ಹನ್ನನ್ ಮೊಲ್ಲಾ ಅವರು ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಹನ್ನನ್ ಮೊಲ್ಲಾ ಅವರು ಲಕ್ನೋದಲ್ಲಿ ನಡೆಯುವ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೃಷಿ ಕಾನೂನುಗಳ ವಿರುದ್ಧ ಆಂದೋಲನದ ನೇತೃತ್ವ ವಹಿಸಿದ್ದ ರೈತ ಸಂಘಗಳ ಸಂಘಟನೆಯಾದ ಎಸ್‌ಕೆಎಂ ಕೂಡ ಡಿಸೆಂಬರ್ 8 ರಂದು ಮುಂದಿನ ಹೋರಾಟದ ಹಾದಿಯನ್ನು ನಿರ್ಧರಿಸಲು ಸಭೆಯನ್ನು ಕರೆದಿದೆ.
“ಜನರ ಮಾತು ಕೇಳಲು ಸರ್ಕಾರ ಸಿದ್ಧವಿಲ್ಲದಿರುವುದನ್ನು ನಾವು ನೋಡಿದ್ದೇವೆ. ನಾವು ಮತ್ತೊಂದು ಚಳುವಳಿಯನ್ನು ಪ್ರಾರಂಭಿಸಿದ್ದೇವೆ. ಹೀಗಾಗಿ ನಾವು ದೇಶಾದ್ಯಂತ ರ್‍ಯಾಲಿಗಳನ್ನು ನಡೆಸುತ್ತೇವೆ. ಈ ಬಾರಿ ನಮ್ಮ ಚಳುವಳಿ ದೆಹಲಿಗೆ ಸೀಮಿತವಾಗಿ ಇರುವುದಿಲ್ಲ, ಇಡೀ ದೇಶಕ್ಕೆ ಸೀಮಿತವಾಗಿದೆ. ಆಯಾ ರಾಜ್ಯಗಳ ರಾಜಭವನ ಮತ್ತು ರಾಜ್ಯಪಾಲರ ಜ್ಞಾಪಕ ಪತ್ರವನ್ನು ಹಸ್ತಾಂತರಿಸಿ ರೈತರು ಪಾದಯಾತ್ರೆ ನಡೆಸಲಿದ್ದಾರೆ” ಎಂದು ಹನ್ನನ್ ಮೊಲ್ಲಾ ಹೇಳಿದ್ದಾರೆ.
ಇದನ್ನೂ ಓದಿ: ಚಳವಳಿಗಾರರು ಚುನಾವಣೆ ಗೆಲ್ಲಬೇಕಾದರೆ…
ಎಂಎಸ್‌ಪಿ ಕುರಿತು ಸಮಿತಿಯನ್ನು ಸರಿಯಾಗಿ ರಚಿಸಲಾಗಿಲ್ಲ ಹಾಗೂ ಆಂದೋಲನದ ಸಮಯದಲ್ಲಿ ರೈತರ ವಿರುದ್ಧ ದಾಖಲಿಸಲಾದ “ಸುಳ್ಳು” ಪ್ರಕರಣಗಳನ್ನು ಹಿಂಪಡೆಯಲಾಗಿಲ್ಲ ಎಂದು ರೈತ ಸಂಘ ಹೇಳಿಕೊಂಡಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ ಪ್ರಧಾನಿ ಮೋದಿ, ಎಂಎಸ್‌ಪಿ ಮೇಲಿನ ಕಾನೂನು ಖಾತರಿಗಾಗಿ ರೈತರ ಬೇಡಿಕೆಯನ್ನು ಚರ್ಚಿಸಲು ಸಮಿತಿಯನ್ನು ರಚಿಸುವುದಾಗಿ ಭರವಸೆ ನೀಡಿದ್ದರು.
“ಎಂಎಸ್‌ಪಿ ಕುರಿತ ಸರ್ಕಾರದ ಸಮಿತಿಯನ್ನು ಕಿಸಾನ್ ಮೋರ್ಚಾ ತಿರಸ್ಕರಿಸಿದೆ. ಮೋದಿ ಸರ್ಕಾರ ರದ್ದು ಮಾಡಿದ ಕೃಷಿ ಕಾನೂನುಗಳನ್ನು ಬೆಂಬಲಿಸಿದ ‘ತಥಾಕಥಿತ ರೈತ ನಾಯಕರು’ ಅದರ ಸದಸ್ಯರಾಗಿದ್ದಾರೆ. ರೈತರ ಕಾನೂನು ಹಕ್ಕುಗಳನ್ನು ಖಾತರಿಪಡಿಸುವ ಬಗ್ಗೆ ಮಾತನಾಡುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರೈತ ಹೋರಾಟಗಳ ಹಿನ್ನೆಲೆಯಲ್ಲಿ ಚಳವಳಿಗಳು ಮತ್ತು ಚುನಾವಣೆಗಳು
ಈ ಮಧ್ಯೆ, ಎಸ್‌ಕೆಎಂ ಸದಸ್ಯ ಅಭಿಮನ್ಯು ಸಿಂಗ್ ಕೊಹರ್ ಮಾತನಾಡಿ, ರೈತರ ಬೇಡಿಕೆಯನ್ನು ಈಡೇರಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ, ಹೀಗಾಗಿ ಇನ್ನೊಂದು ಚಳವಳಿ ನಡೆಯುವ ಅಗತ್ಯವಿದೆ ಎಂದು ಹೇಳಿದ್ದಾರೆ.