HomeಅಂಕಣಗಳುShe said: ಹೇಳಿಕೊಳ್ಳಲಾಗದ ಒಡಲಾಳದ ಸಂಕಟಕ್ಕೆ ದನಿಯಾದ ಪತ್ರಕರ್ತೆಯರ ಕಥನ

She said: ಹೇಳಿಕೊಳ್ಳಲಾಗದ ಒಡಲಾಳದ ಸಂಕಟಕ್ಕೆ ದನಿಯಾದ ಪತ್ರಕರ್ತೆಯರ ಕಥನ

- Advertisement -
- Advertisement -

ಭಾರತದಲ್ಲಿ ಸೆಪ್ಟಂಬರ್ ಮತ್ತು ಅಕ್ಟೋಬರ್ 2018ರಲ್ಲಿ #meToo ಲೈಂಗಿಕ ದೌರ್ಜನ್ಯ ಪ್ರಕರಣಗಳು ಸರಣಿಯಾಗಿ ಬಿಚ್ಚಿಕೊಳ್ಳತೊಡಗಿದವು. ಭಾರಿ ಹೆಸರು ಪಡೆದ ನಟರಿಂದ ಹಿಡಿದು, ನಿರ್ದೇಶಕರು, ಪತ್ರಕರ್ತರು ಮತ್ತು ಇನ್ನಿತರ ಪ್ರತಿಷ್ಠಿತರು ತಮ್ಮ ಅಧಿಕಾರ ದುರುಪಯೋಗದಿಂದ ತಮ್ಮ (ಕಿರಿಯ) ಸಹೋದ್ಯೋಗಿಗಳ ಮೇಲೆ ಲೈಂಗಿಕ ಅತಿಕ್ರಮಣ, ಹಲ್ಲೆ, ದೌರ್ಜನ್ಯಗಳನ್ನು ನಡೆಸಿದ ಕಥೆಗಳು ಮುಖ್ಯವಾಹಿನಿ-ಸ್ವತಂತ್ರ-ಸಾಮಾಜಿಕ ಮಾಧ್ಯಮಗಳಲ್ಲಿ ಮೂಡಿದವು. ಅತಿಕ್ರಮಣಕಾರರ ವಿರುದ್ಧ ಕ್ರಮಕ್ಕೆ ಮುಂದಾಗಲು, ಉದ್ಯೋಗದ ಸ್ಥಳಗಳನ್ನು ಮಹಿಳೆಯರಿಗೆ ಮತ್ತು ಕಿರಿಯ ಉದ್ಯೋಗಿಗಳಿಗೆ ಸುರಕ್ಷಿತಗೊಳಿಸಲು ಮುಂದಾಗುವಂತೆ ದೊಡ್ಡ ಕೂಗು ಕೇಳಿಬಂತು. ಇದರಿಂದ ಪ್ರತಿಷ್ಠಿತ ಸ್ಥಾನಗಳಲ್ಲಿದ್ದು ಪ್ರಬಲರಾಗಿದ್ದ ಹಲವು ಲೈಂಗಿಕ ಅತಿಕ್ರಮಣಕಾರರು ಸಾರ್ವಜನಿಕ ಮುಜುಗರವನ್ನು ಅನುಭವಿಸಿದರು; ಕೆಲವರು ಕೋರ್ಟ್‌ನಲ್ಲಿ ದಾವೆ ಹೂಡಿ ತಮ್ಮ ಪ್ರಬಲತೆಯನ್ನು ಅಲ್ಲಿಯೂ ಮೆರೆದರು. ಉದ್ಯೋಗದ ಸ್ಥಳಗಳಲ್ಲಿ ಅಷ್ಟೋ ಇಷ್ಟೋ ಸುಧಾರಣೆಗಳು ಆಗಿರುವುದಕ್ಕೆ ಸಾಧ್ಯವಿದೆ. ಆದರೆ, ಉದ್ಯೋಗದ ಸ್ಥಳಗಳಲ್ಲಿ ಸಾರ್ವಜನಿಕ ಪಿಡುಗಾಗಿ ಬೆಳೆದಿದ್ದ ಲೈಂಗಿಕ ಅತಿಕ್ರಮಣತೆ ಮತ್ತು ದೌರ್ಜನ್ಯ ಸಾರ್ವಜನಿಕರ ನಡುವೆ ಚರ್ಚೆಗೆ ಬಂದದ್ದು, ಕೆಲವರಲ್ಲಾದರೂ ಇದರ ಬಗ್ಗೆ ತಿಳಿವು-ಅರಿವು ಮೂಡಲು ಸಾಧ್ಯವಾಯಿತು; ಒಡಲಾಳದ ಸಂಕಟವನ್ನು ಹೊರಹಾಕಲು ವೇದಿಕೆಗಳು ದೊರೆತದ್ದು #meToo ಚಳವಳಿಯ ಮತ್ತೊಂದು ಯಶಸ್ಸು ಎನ್ನಬಹುದು. ಭಾರತದಲ್ಲಿ #meToo ಕಥನ ಸರಣಿ ಬಿಚ್ಚಿಕೊಳ್ಳುವುದಕ್ಕೂ ಒಂದು ವರ್ಷ ಮೊದಲು ಯುಎಸ್‌ಎನಲ್ಲಿ ಇದು ದೊಡ್ಡ ಸಾರ್ವಜನಿಕ ಚರ್ಚೆಯಾಗಿ ರೂಪುಗೊಂಡಿತ್ತು. ಅದು ಆ ಮಟ್ಟಕ್ಕೆ ಬೆಳೆಯಲು ಕಾರಣ ಹಾಲಿವುಡ್‌ನ ಪ್ರಖ್ಯಾತ ನಿರ್ಮಾಪಕ ಹಾರ್ವಿ ವೇನ್‌ಸ್ಟೈನ್ ಎಂಬ ಪ್ರಭಾವಿಯ ಲೈಂಗಿಕ ದೌರ್ಜನ್ಯಗಳನ್ನು ಬಯಲಿಗೆಳೆದಿದ್ದ ’ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ವರದಿ. ಹಗಲು ರಾತ್ರಿ ತಮ್ಮ ತನಿಖಾ ಪತ್ರಿಕೋದ್ಯಮದಿಂದ ಇದನ್ನು ಬಯಲಿಗೆಳೆದಿದ್ದವರು ಜೋಡಿ ಕ್ಯಾಂಟನ್ ಮತ್ತು ಮೇಗನ್ ಟೂಯಿ. ಈ ಪತ್ರಿಕೋದ್ಯಮದ ಕಥಾನಕ ಈಗ ದೃಶ್ಯರೂಪದಲ್ಲಿ ’ಶಿ ಸೆಡ್’ ಸಿನಿಮಾವಾಗಿ ಮೂಡಿಬಂದಿದ್ದು, ಪತ್ರಿಕೋದ್ಯಮದ ಮೌಲ್ಯಗಳು ಕುಸಿಯುತ್ತಿರುವ ಸಮಯದಲ್ಲಿ ಎಚ್ಚರಿಕೆಯ ಕರೆಗಂಟೆಯಂತೆ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಿದೆ.

ಹಾರ್ವಿ ವೇನ್‌ಸ್ಟೈನ್

ನ್ಯೂಯಾರ್ಕ್ ಟೈಮ್ಸ್ ತನಿಖಾ ಪತ್ರಕರ್ತೆ ಮೇಗನ್ ಟೂಯಿ (ಕ್ಯಾರಿ ಮಾಲಿಗನ್ ಈ ಪಾತ್ರವನ್ನು ನಿಭಾಯಿಸಿದ್ದಾರೆ) ಡೊನಾಲ್ಡ್ ಟ್ರಂಪ್ (ಅಧ್ಯಕ್ಷನಾಗುವುದಕ್ಕೆ ಮುಂಚೆ) ಬಗ್ಗೆ ಆರೋಪಿಸಲಾಗಿದ್ದ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ತನಿಖೆ ಮಾಡುವುದರ ಮೂಲಕ ಸಿನಿಮಾ ಆರಂಭವಾಗುತ್ತದೆ. ಅದಕ್ಕೆ ತಾರ್ಕಿಕ ಅಂತ್ಯ ಸಿಗಲು ಸಾಧ್ಯವಾಗದೆ ಇದ್ದರೂ, ಬಲಪಂಥೀಯ ಧೋರಣೆಯ ಫಾಕ್ಸ್ ನ್ಯೂಸ್‌ನ ಆಂಕರ್ ಒಬ್ಬನನ್ನು ಲೈಂಗಿಕ ಕಿರುಕುಳದ ಕಾರಣಕ್ಕೆ ಕೆಲಸದಿಂದ ವಜಾಮಾಡಿದ ಪ್ರಕರಣ, ಬೇರೆಬೇರೆ ವಲಯಗಳಲ್ಲಿ ಇಂತಹ ದೌರ್ಜನ್ಯಗಳನ್ನು ವರದಿ ಮಾಡಲು ಪ್ರೇರಕವಾಗುತ್ತದೆ. ಆಗ ಟೈಮ್ಸ್‌ನ ಮತ್ತೊಬ್ಬ ತನಿಖಾ ಪತ್ರಕರ್ತೆ ಜೋಡಿ ಕ್ಯಾಂಟರ್ (ಜೋಯಿ ಕಜಾನ್ ಈ ಪಾತ್ರವನ್ನು ನಿರ್ವಹಿಸಿದ್ದಾರೆ) ತನಿಖೆಗೆ ಹಾಲಿವುಡ್‌ಅನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ. ತನಿಖಾ ಪತ್ರಕರ್ತೆಯಾಗಿದ್ದರಿಂದ ಹಾಲಿವುಡ್‌ನ ಹೆಚ್ಚು ಸಂಪರ್ಕವಿರದ ಜೋಡಿ ತನ್ನ ತನಿಖೆಯಲ್ಲಿ ಹಲವು ಅಡೆತಡೆಗಳನ್ನು ಎದುರಿಸುತ್ತಾರೆ. ಸಂಪರ್ಕದ ಸಮಸ್ಯೆ ಒಂದೆಡೆಯಾದರೆ, ಲೈಂಗಿಕ ಕಿರುಕುಳಗಳಿಗೆ ತುತ್ತಾಗಿರುವ ಸಂತ್ರಸ್ತೆಯರ ದಶಕಗಳ ಕಾಲದ ಒಡಲ ನೋವು ಅವರನ್ನು ಹೆಚ್ಚು ಮಾತನಾಡುವುದಕ್ಕೆ ಬಿಡುತ್ತಿರುವುದಿಲ್ಲ. ಹೆರಿಗೆ ರಜೆಯ ಮೇಲೆ ತೆರಳಿದ್ದ ಮೇಗನ್ ಟೂಯಿ ಕೆಲಸಕ್ಕೆ ಹಿಂದಿರುಗಿ ತನಿಖೆಗೆ ಜೋಡಿಯ ಜತೆಯಾಗುತ್ತಾಳೆ. ಸಂತ್ರಸ್ತೆಯರನ್ನು ಪತ್ತೆ ಹಚ್ಚುವುದರಿಂದ ಹಿಡಿದು, ದಾಖಲೆಗಳನ್ನು ಸಂಗ್ರಹಿಸುವ, ಅವುಗಳನ್ನು ತಾಳೆ ಹಾಕುವ, ವರದಿ ಬರೆಯಲು ಇರುವ ಕಂದರಗಳನ್ನು ತುಂಬಲು ಹೆಣಗುವ, ಶೋಷಕನ ಪ್ರಭಾವಿ ಒತ್ತಡವನ್ನು ನಿಭಾಯಿಸುವ ರೋಚಕ ಕಥೆಯಾಗಿ ಸಿನಿಮಾ ಮುಂದುವರಿಯುತ್ತದೆ.

ಜೋಡಿ ಕ್ಯಾಂಟರ್ ಮತ್ತು ಮೇಗನ್ ಟೂಯಿ

ಇದನ್ನೂ ಓದಿ: ಪಠ್ಯಪುಸ್ತಕವಾಯಿತು, ಈಗ ಶಾಲಾ ಕೊಠಡಿಗಳ ಕೇಸರೀಕರಣ!

ಇಬ್ಬರು ಪತ್ರಕರ್ತರ ಶ್ರದ್ಧೆ ಮತ್ತು ರೋಚಕ ತನಿಖೆಯು, ಬಯೋಪಿಕ್ ರೂಪದಲ್ಲಿ ಮೂಡಿಬಂದಿರುವ ಈ ಡ್ರಾಮಾದಲ್ಲಿ ಹಲವು ಅಂಶಗಳು ಮನಸ್ಸಿನಲ್ಲಿ ಉಳಿದುಕೊಳ್ಳುತ್ತವೆ. ಕೆಲವನ್ನು ಇಲ್ಲಿ ಅವಲೋಕಿಸಬಹುದು; ಮೊದಲನೆಯದಾಗಿ, ಇಬ್ಬರೂ ಪತ್ರಕರ್ತೆಯರ ಜರ್ನಲಿಸಂ ಪ್ಯಾಶನ್. ಜೋಡಿ ಕ್ಯಾಂಟರ್‌ಗೆ ಇಬ್ಬರು ಚಿಕ್ಕ ಮಕ್ಕಳು. ದುಡಿಯುವ ಗಂಡ. ಮಕ್ಕಳ ಆರೈಕೆ ನೋಡಿ ಸಂತೈಸುವುದರ ಜೊತೆಗೆ ತನ್ನ ಪ್ಯಾಶನ್‌ಅನ್ನು ಕೂಡ ನಿಭಾಯಿಸುವ ರೀತಿ ಅನನ್ಯವಾಗಿ ಮೂಡಿದೆ. ಅದೇ ರೀತಿ, ಹೆರಿಗೆ ರಜಕ್ಕೆ ತೆರಳಿರುವ ಮೇಗನ್ ಟೂಯಿ, ಪೋಸ್ಟ್ ಪ್ರಗ್ನೆನ್ಸಿ ಡಿಪ್ರಶನ್‌ಗೆ ಒಳಗಾಗುತ್ತಾಳೆ. ಮತ್ತೆ ತನ್ನ ನೆಚ್ಚಿನ ಕೆಲಸಕ್ಕೆ ಮರಳಿದ ನಂತರವೇ ಆಕೆಗೆ ಆ ಖಿನ್ನತೆಯಿಂದ ತುಸು ರಿಲೀಫ್ ಸಾಧ್ಯ. ಎರಡನೆಯದಾಗಿ, ಪತ್ರಿಕೋದ್ಯಮ ಬೇಡುವ ರಿಗರಸ್ ಆದ ತನಿಖೆಯ ಚಿತ್ರಣ; ಸಂತ್ರಸ್ತರು-ಇತರ ಪ್ರತ್ಯಕ್ಷದರ್ಶಿಗಳು ತಮ್ಮ ಕಥೆ ಹೇಳುವುದಕ್ಕೆ ಕನ್ವಿನ್ಸ್ ಮಾಡುವ, ಸಾಕ್ಷ್ಯಗಳನ್ನು ಕಲೆ ಹಾಕುವ ತಾಕಲಾಟ, ಅವುಗಳನ್ನು ವೆರಿಫೈ ಮಾಡಿ ಲಿಂಕ್‌ಗಳನ್ನು ಬೆಸೆಯುವ ತ್ರಾಸ ಇವೆಲ್ಲವನ್ನೂ ಬಹಳ ಸೂಕ್ಷ್ಮವಾಗಿ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ ನಿರ್ದೇಶಕಿ ಮಾರಿಯಾ ಶ್ರಾಡರ್. ಸಂತ್ರಸ್ತ ಮಹಿಳೆಯರನ್ನು ಮಾತನಾಡಿಸುವುದು ಸುಲಭವಿರದೆ ಜೋಡಿ ಕ್ಯಾಂಟರ್ ಒಂದು ಹಂತದಲ್ಲಿ ಹತಾಶಳಾಗಿ, ’ತಾನು ಹಿಂದೆ ಮಾಡಿದ್ದ ವರದಿಯಲ್ಲಿ ಇದನ್ನ ಸಾಧಿಸಿದ್ದು ಹೇಗೆ’ ಎಂದು ಮೇಗನ್‌ಳನ್ನು ಕೇಳಿದಾಗ ಆಕೆ, “ನೀವು ಆಡುವ ಮಾತುಗಳಿಂದ ಕನಿಷ್ಠ ಮುಂದಿನ ನಟಿಯರ ಜೀವನದಲ್ಲಿ ಇಂತಹ ಕಿರುಕುಳಗಳು ಸಾಧ್ಯವಾಗದಂತೆ ತಡೆಯಬಹುದು” ಎಂದು ಹೇಳಿ ಪ್ರಯತ್ನಿಸಿದೆ ಅನ್ನುತ್ತಾಳೆ. ಹೀಗೆ ಮೂರನೆಯದಾಗಿ, ಲೈಂಗಿಕ ಕಿರುಕುಳಕ್ಕೆ ಒಳಗಾದ ಸಂತ್ರಸ್ತೆಯರು ತಮ್ಮ ಮೇಲಾದ ದೌರ್ಜನ್ಯದ ವಿರುದ್ಧ ಸುಲಭವಾಗಿ ಮಾತನಾಡಲಾಗದ ಪರಿಸ್ಥಿತಿಯನ್ನು ಸಿನಿಮಾ ಹಿಡಿದಿಡುತ್ತದೆ. ಒಂದು ದೃಶ್ಯದಲ್ಲಿ ಒಬ್ಬ ಸಂತ್ರಸ್ತೆಯನ್ನು ಕಾಣಲು ಮೇಗನ್ ಹೋದಾಗ, ಆಕೆ “ಇಪ್ಪತ್ತು ವರ್ಷಗಳಿಂದ ನನ್ನ ಕಥೆ ಕೇಳಲು ಯಾರಾದರೂ ಬರುತ್ತಾರೆ ಎಂದು ಕಾಯುತ್ತಿದ್ದೆ” ಎಂದು ನೊಂದುಕೊಳ್ಳುವ ದೃಶ್ಯ ಈ ವಸ್ತುವನ್ನು ಹ್ಯಾಂಡಲ್ ಮಾಡಿರುವ ಸೂಕ್ಷ್ಮತೆಗೆ ಸಾಕ್ಷಿಯಾಗಿದೆ.

ಮಾರಿಯಾ ಶ್ರಾಡರ್

ತನಿಖಾ ಪತ್ರಿಕೋದ್ಯಮದ ಕಥೆಯಾಗಿ ಮತ್ತು ಪತ್ರಕರ್ತರ ಬಯೋಪಿಕ್ ರೂಪ ಪಡೆದಿರುವುದರಿಂದ, ಸಿನಿಮಾ ಸರಣಿ ಸೆಕ್ಷುಯಲ್ ಅಫೆಂಡರ್ ಹಾರ್ವಿ ವೇನ್‌ಸ್ಟೈನ್‌ನ ಬಗ್ಗೆ ಮತ್ತು ಆತನ ಪ್ರಭಾವದ ಬಗ್ಗೆ ವೀಕ್ಷಕರಿಗೆ ದೊಡ್ಡ ಚಿತ್ರಣವನ್ನು ಕಟ್ಟಿಕೊಡುವುದಿಲ್ಲ. ಆತನ ಪಾತ್ರವನ್ನು ಹಿನ್ನೆಲೆಯಲ್ಲೇ ಕಟ್ಟಿಕೊಡುವ ತಂತ್ರ ಬಹುಶಃ ಸಂತ್ರಸ್ತರ ನೋವು ಸಿಡಿದರೆ ಒಬ್ಬ ಪ್ರಭಾವಿಯನ್ನು ಕೂಡ ಮಣಿಸಲಬಲ್ಲದು ಎಂಬುದನ್ನು ಕಟ್ಟಿಕೊಡಲು ಮಾಡಿದ ಪ್ರಯತ್ನ ಎನಿಸುತ್ತದೆ. ಮಿರಾಮ್ಯಾಕ್ಸ್‌ನಂತಹ ಬೃಹತ್ ನಿರ್ಮಾಣ ಸಂಸ್ಥೆಯನ್ನು ಮುನ್ನಡೆಸುತ್ತಿದ್ದ, ’ಪಲ್ಪ್ ಫಿಕ್ಷನ್’ ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳನ್ನು ನಿರ್ಮಿಸಿ ಹಲವು ಆಸ್ಕರ್ ಪ್ರಶಸ್ತಿಗಳನ್ನು ಗಳಿಸಿದ್ದ ವ್ಯಕ್ತಿ ಹಾರ್ವಿ; ಯುಎಸ್‌ಎನಲ್ಲಿ ಹಿಲರಿ ಕ್ಲಿಂಟನ್ ಸೇರಿದಂತೆ ಡೆಮಾಕ್ರಟ್ ಪಕ್ಷದ ಪ್ರಭಾವಿಗಳ ಜೊತೆಗೆ ಗುರುತಿಸಿಕೊಂಡವನು; ಸುಮಾರು ಮೂರು ದಶಕಗಳ ಕಾಲ ಹಲವು ಯುವ ನಟಿಯರು ಮತ್ತು ಕಿರಿಯ ಸಹೋದ್ಯೋಗಿಗಳಿಗೆ ನಿರಂತರ ಲೈಂಗಿಕ ಕಿರುಕುಳಗಳ ನೀಡಿ, ಸುಮಾರು 12 ಪ್ರಕರಣಗಳಲ್ಲಿ ಹಣಕಾಸಿನ ಸೆಟಲ್‌ಮೆಂಟ್ ಮಾಡಿ, ಅವರು ತಮ್ಮ ಕಥೆಯನ್ನು ಯಾರಿಗೂ ಹೇಳಿಕೊಳ್ಳದಂತೆ (ವೈದ್ಯರ ಬಳಿ ಕೂಡ) ನಿರ್ಬಂಧ ಹೇರಿ ಒಪ್ಪಂದಗಳನ್ನು ಮಾಡಿಕೊಂಡು ಬಚಾವಾಗುತ್ತಿದ್ದ ಅಪರಾಧಿ. ಹಲವಾರು ಬಾರಿ ಈತನ ವಿಷಯ ವರದಿಯಾಗುವ ಹಂತಕ್ಕೆ ಬಂದಾಗ ತನ್ನ ಪ್ರಭಾವ ಬಳಸಿ ಆ ವರದಿಗಳನ್ನು ಸಾಯಿಸುತ್ತಿದ್ದ ವ್ಯಕ್ತಿ. ಹೀಗೆ ತನ್ನ ಅಧಿಕಾರವನ್ನು ಎಲ್ಲೆ ಮೀರಿ ದುರುಪಯೋಗಮಾಡಿಕೊಂಡು ಅದನ್ನು ತನ್ನ ಲೋಲುಪತೆಗೆ ಬಳಸಿಕೊಳ್ಳುತ್ತಿದ್ದ ವ್ಯಕ್ತಿಯ ಪ್ರಭಾವದ ಬಗ್ಗೆ ಸಿನಿಮಾದಲ್ಲಿಯೇ ಒಂದು ಕಡೆ ಸಂತ್ರಸ್ತೆಯೊಬ್ಬಳು ಹೇಳುವ ಮಾತುಗಳು ಹೀಗಿವೆ: ’ನಾನು 28 ವರ್ಷದ ಮಹಿಳೆ ವೃತ್ತಿಪರ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಹಾರ್ವಿ ವೇನ್‌ಸ್ಟೈನ್ 64 ವರ್ಷದವ, ಜಗತ್‌ಪ್ರಖ್ಯಾತ ಮತ್ತು ಅದು ಅವನ ಕಂಪನಿಯಾಗಿತ್ತು. ಪವರ್ ಸಮತೋಲನ ಹೀಗಿತ್ತು; ನಾನು:0, ಹಾರ್ವಿ ವೇನ್‌ಸ್ಟೈನ್:10.

2020ರಲ್ಲಿ ವಿಚಾರಣೆಯಾಗಿ, ಹಲವು ಪ್ರಕರಣಗಳಲ್ಲಿ ಹಾರ್ವಿ ವೇನ್‌ಸ್ಟೈನ್ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿ ಆತ 29 ವರ್ಷಗಳ ಜೈಲುಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ತನಿಖಾ ಪತ್ರಿಕೋದ್ಯಮದ ವರದಿಯೊಂದು ಈ ಮಟ್ಟದ ತಿರುವು ಪಡೆಯಲು ಅಲ್ಲಿನ ಓದುಗರು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯನ್ನು ಸಬ್‌ಸ್ಕ್ರೈಬ್ ಮಾಡಿ ತನಿಖಾ ಪತ್ರಿಕೋದ್ಯಮಕ್ಕೆ ಸಹಕರಿಸಿದ್ದೂ ಒಂದು ಕಾರಣ ಎನ್ನುತ್ತಾರೆ ಪತ್ರಕರ್ತೆ ಜೋಡಿ ಕ್ಯಾಂಟರ್ ಒಂದು ಸಂದರ್ಶನದಲ್ಲಿ. ಭಾರತದಲ್ಲಿ #meToo ಚಳವಳಿ ಈ ರೀತಿಯ ತಾರ್ಕಿಕ ಅಂತ್ಯ ಕಾಣಲು ಸಾಧ್ಯವಾಗಲಿಲ್ಲ. ಬಹುಶಃ ಇಲ್ಲಿನ ಪತ್ರಿಕೋದ್ಯಮದ ಸ್ವರೂಪವೂ ಅದಕ್ಕೆ ಒಂದು ಕಾರಣವಿರಬಹುದು. ಅಲ್ಲಲ್ಲಿ ಉಳಿದಿರುವ ಗಂಭೀರ ಪತ್ರಕರ್ತರಿಗೆ ಆ ಮಟ್ಟದ ಬೆಂಬಲ ಸಿಗದ ವಾತಾವರಣ ಸೃಷ್ಟಿಯಾಗಿರುವುದೂ ಮತ್ತೊಂದು ಕಾರಣವಿರಬಹುದು. ಒಟ್ಟಿನಲ್ಲಿ ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಒಳ್ಳೆಯ ಜರ್ನಲಿಸಂನ ಪ್ರಾಮುಖ್ಯತೆ ಮತ್ತದರ ಶಕ್ತಿಯನ್ನು ಹಿಡಿದಿಡುವ ಹಾಗೂ ಲೈಂಗಿಕ ದೌರ್ಜನ್ಯಗಳ ಬಗ್ಗೆ ವರದಿ ಮಾಡುವ ಸಂಕಷ್ಟಗಳ ಬಗ್ಗೆ ಚಿತ್ರಿಸಿರುವ She said ಇಂದಿಗೆ ಪ್ರಮುಖವಾದ ಸಿನಿಮಾ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...