Homeಅಂಕಣಗಳುಪಠ್ಯಪುಸ್ತಕವಾಯಿತು, ಈಗ ಶಾಲಾ ಕೊಠಡಿಗಳ ಕೇಸರೀಕರಣ!

ಪಠ್ಯಪುಸ್ತಕವಾಯಿತು, ಈಗ ಶಾಲಾ ಕೊಠಡಿಗಳ ಕೇಸರೀಕರಣ!

- Advertisement -
- Advertisement -

ಕರ್ನಾಟಕದಲ್ಲಿ ಎರಡು ವಿದ್ಯಮಾನಗಳು ನವೆಂಬರ್ 13ರ ಒಂದೇ ದಿನ ನಡೆದವು. ಮೊದಲನೆಯದು, ಕರ್ನಾಟಕದಾದ್ಯಂತ ವಿವೇಕ ಯೋಜನೆಯಡಿ ನಿರ್ಮಾಣವಾಗುತ್ತಿರುವ ಸುಮಾರು 7500 ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಘೋಷಿಸಿದ್ದು; ಎರಡನೆಯದು, ಸಂಘ ಪರಿವಾರದ ದ್ವೇಷ ಚಿಂತನೆಗಳನ್ನು ಪ್ರಚಾರ ಮಾಡಲು ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ರಚಿಸಿರುವ ’ಟಿಪ್ಪು ನಿಜ ಕನಸುಗಳು’ ಎಂಬ ನಾಟಕ ಪುಸ್ತಕ ಬಿಡುಗಡೆಯಲ್ಲಿ, ಮೈಸೂರು ಸಂಸದ ಪ್ರತಾಪ್ ಸಿಂಹ ಮಾತನಾಡುತ್ತಾ ’ಮೈಸೂರಿನ ಜೆಎಸ್‌ಎಸ್ ಕಾಲೇಜು ಬಳಿ ನಿರ್ಮಿಸಿರುವ ಬಸ್ ನಿಲ್ದಾಣದ ಮೇಲಿನ ಗುಮ್ಮಟ(ಗುಂಬಜ್)ದ ಮಾದರಿಯ ವಿನ್ಯಾಸವನ್ನು ಬದಲಿಸದಿದ್ದರೆ ಜೆಸಿಬಿ ತರಿಸಿ ಕೆಡವುತ್ತೇನೆ’ ಎಂಬ ಬೆದರಿಕೆ ಹಾಕಿದ್ದು! ಚುನಾವಣೆ ಸನ್ನಿಹಿತವಾಗುತ್ತಿರುವ ಸಮಯದಲ್ಲಿ ಎಲ್ಲ ಸಂಗತಿಗಳನ್ನು ಮತ್ತು ಸಂಕೇತಗಳನ್ನು ಕೇಸರೀಕರಣಗೊಳಿಸಲು ಸಂಘ ಪರಿವಾರ ತುದಿಗಾಲಲ್ಲಿ ನಿಂತಿರುವುದು ಬಿಜೆಪಿಯ ಹತಾಶೆಯಂತೆ ಕಂಡರೂ, ಒಡಕಿನ ರಾಜಕಾರಣ ತೀವ್ರವಾಗುತ್ತಿರುವ ದುರಂತಕ್ಕೆ ಸಾಕ್ಷಿಯಾಗಿದೆ.

ಇದು ಕೊಠಡಿಯ ವಿನ್ಯಾಸಕಾರರ ಸಲಹೆಯಂತೆ ಮಾಡಲಾಗುತ್ತಿದೆ ಎಂದಿದ್ದಾರೆ ಶಿಕ್ಷಣ ಸಚಿವರು. ’ಶಾಲೆಗಳಲ್ಲಿನ ಹಲವು ಮೂಲಸೌಕರ್ಯಗಳ ಕೊರತೆಗಳೂ ಸೇರಿದಂತೆ ನೂರಾರು ಸಮಸ್ಯೆಗಳಿರುವಾಗ ಕೇಸರಿ ಬಣ್ಣದ ಹಿಂದೆ ಸರ್ಕಾರ ಬಿದ್ದಿರುವುದೇಕೆ’ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ ಪ್ರಿಯಾಂಕಾ ಖರ್ಗೆ, ’ಬಿಜೆಪಿ ಸರ್ಕಾರದ ಕಾಳಜಿ ನಿಜವಾಗಿದ್ದರೆ ರಾಷ್ಟ್ರಧ್ವಜದ ಬಣ್ಣಗಳನ್ನು ಶಾಲಾ ಕೊಠಡಿಗಳಿಗೆ ಹೊಡೆಸಬಾರದೇಕೆ’ ಎಂದು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ’ಕೇಸರಿ ರಾಷ್ಟ್ರಧ್ವಜದ ಬಣ್ಣಗಳಲ್ಲಿ ಒಂದು ಹಾಗೂ ಸ್ವಾಮಿ ವಿವೇಕಾದಂದರು ಕೇಸರಿ ಧಿರಿಸನ್ನು ಧರಿಸುತ್ತಿದ್ದರು. ಕಾಂಗ್ರೆಸ್‌ಗೆ ಕೇಸರಿ ಬಣ್ಣದ ಬಗ್ಗೆ ಅಲರ್ಜಿ ಇದೆ ಮತ್ತು ಅವರು ಪ್ರಗತಿಯ ವಿರೋಧಿಗಳು’ ಎಂದು ದೂಷಿಸಿದ್ದಾರೆ. ಸಂಘ ಪರಿವಾರದ ಲಾಂಛನ ’ಭಗವಾಧ್ವಜ’ದ ಬಣ್ಣವನ್ನು ಶಾಲಾ ಕೊಠಡಿಗಳಿಗೆ ಹೊಡೆಸುತ್ತೇವೆ ಎಂದು ನೇರವಾಗಿ ಹೇಳಿಕೊಳ್ಳಲಾಗದೆ, ಈಗ ಅಡ್ಡದಾರಿಯಲ್ಲಿ ಸರ್ಕಾರ ಹೆಜ್ಜೆಯಿಟ್ಟಿದೆ. ಥೇಟ್ ಪಠ್ಯಪುಸ್ತಕದ ಪರಿಷ್ಕರಣೆಯಲ್ಲಿ ಮಾಡಿದಂತೆಯೇ! 2022-23ನೇ ಸಾಲಿನ ಹತ್ತನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿ ಆರ್‌ಎಸ್‌ಎಸ್‌ನ ಮುಂದಾಳು ಹೆಡಗೇವಾರ್‌ರ ಪಾಠವೊಂದನ್ನು ಪರಿಚಯಿಸಿ, ಅದರಲ್ಲಿ ಭಗವಾಧ್ವಜವನ್ನು, ಧ್ವಜವೆಂದು ತಿರುಚಿ ಸುಳ್ಳು ಹೇಳಿದ್ದು ಇನ್ನೂ ಹಸಿಯಾಗಿರುವಾಗಲೇ!

ಪ್ರತಾಪ್ ಸಿಂಹ

ಸಂವಿಧಾನ ನಡಾವಳಿ ಸಭೆಯಲ್ಲಿ ನಮ್ಮ ರಾಷ್ಟ್ರಧ್ವಜದ ಬಗ್ಗೆ ಚರ್ಚೆಯಾದಾಗ, ಸಭೆಯ ಸದಸ್ಯರಾಗಿದ್ದ ಮುಸ್ಲಿಂ ಲೀಗ್‌ನ ಸಯ್ಯದ್ ಮುಹಮದ್ ಸಾದುಲ್ಲಾ ಹೀಗೆ ಹೇಳಿದ್ದರು: “ಭಾರತ ತನ್ನ ಆಧ್ಯಾತ್ಮಿಕ ಉನ್ನತಿಗೆ ಚಿರಪರಿಚಿತವೇ. ಜಗತ್ತಿನ ವಿವಿಧ ದೇಶಗಳಿಗೆ ಅತ್ಯುನ್ನತ ಆಧ್ಯಾತ್ಮಿಕ ಸಂದೇಶವನ್ನು ಕಳುಹಿಸುವ ಛಾತಿಯನ್ನು ಭಾರತ ಹೊಂದಿದೆ ಎಂದು ಎಲ್ಲೆಲ್ಲೂ ನಂಬಲಾಗಿದೆ. ಎಲ್ಲರಿಗೂ ತಿಳಿದಿರುವಂತೆಯೇ, ಕೇಸರಿ ಅಂತಹ ಆಧ್ಯಾತ್ಮಿಕ ಜೀವನವನ್ನು ಬದುಕಿದವರ ಸಂಕೇತ; ಅದು ಹಿಂದೂಗಳಿಗೆ ಮಾತ್ರವಲ್ಲದೆ ಮುಸಲ್ಮಾನರಿಗೂ. ಆದುದರಿಂದ ನಮ್ಮ ಸಾಧುಸಂತರು, ಪೀರ್‌ಗಳ ಮತ್ತು ಪಂಡಿತರ ಕಾರ್ಯಕ್ಷೇತ್ರವಾದ ಆತ್ಮಸಮರ್ಪಣೆಯ ತ್ಯಾಗದ ಅತ್ಯುನ್ನತ ತಳಹದಿಯನ್ನು ಕೇಸರಿ ನಮಗೆ ಸದಾ ನೆನಪಿಸಬೇಕು. ಆದುದರಿಂದ ಧ್ವಜದಲ್ಲಿ ಈ ಬಣ್ಣದ ಸೇರ್ಪಡೆಯನ್ನು ನಾನು ಸ್ವಾಗತಿಸುತ್ತೇನೆ”. ಇಲ್ಲಿ ವಿಪರ್ಯಾಸ ನೋಡಿ, ಇದೇ ಮಹಮದ್ ಸಾದುಲ್ಲಾ ಅವರ ಬಗ್ಗೆ ಇದ್ದ ಉಲ್ಲೇಖವನ್ನು ಪಠ್ಯ ಪರಿಷ್ಕರಣೆಯ ಸಂದರ್ಭದಲ್ಲಿ ತೆಗೆದುಹಾಕಲಾಗಿತ್ತು! ಹಲವು ಪ್ರತಿಭಟನೆಗಳ ನಂತರವೂ ಆ ಉಲ್ಲೇಖವನ್ನು ಮತ್ತೆ ಸೇರ್ಪಡಿಸುವ ಗೋಜಿಗೆ ಸರ್ಕಾರ ಹೋಗಲಿಲ್ಲ! ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಬಿಜೆಪಿ ಸರ್ಕಾರದ ಸಚಿವರು ಸಾದುಲ್ಲ ಅವರು ಹೇಳಿದಂತೆ ಕೇಸರಿ ಹಿಂದೂಗಳಿಗೆ ಹೇಗೋ ಹಾಗೆಯೇ ಮುಸಲ್ಮಾನರಿಗೂ ಆಧ್ಯಾತ್ಮಿಕ ಸಂಕೇತ; ಕೇಸರಿ ಸಾಧುಸಂತರಂತೆ ಪೀರ್‌ಗಳಿಗೂ ಆತ್ಮಸಮರ್ಪಣೆಯ ಸಂಕೇತವಾಗಿತ್ತು ಎಂಬುದನ್ನು ಎದೆಮುಟ್ಟಿ ಹೇಳಬಲ್ಲರಾ? ಹಾಗಿದ್ದರೆ ಅವರ ಸಂಸದ ಬಸ್ ಶೆಲ್ಟರ್ ಒಂದಕ್ಕೆ ಗುಮ್ಮಟ ವಿನ್ಯಾಸವಿದೆ ಎಂಬ ಕಾರಣಕ್ಕೆ ಜೆಸಿಬಿ ಕರೆಸಿ ಪುಡಿಗುಟ್ಟುತ್ತೇನೆ ಎಂಬುದನ್ನು ಇವರು ಒಪ್ಪಿಕೊಳ್ಳದೇ ಇರುತ್ತಾರೆಯೇ?

ಇದನ್ನೂ ಓದಿ: ಶಾಲೆಗಳಿಗೆ ಕೇಸರಿ ಬಣ್ಣ ಆತುರದ ನಿರ್ಧಾರ: ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್

ಮುಸ್ಲಿಮರಿಂದ ಬರಲಾಯಿತು ಎನ್ನಲಾದ ಗುಮ್ಮಟ ವಿನ್ಯಾಸ ಈಗ ಹಲವು ಕೂಡುಸಂಸ್ಕೃತಿಯ ಭಾಗವಾಗಿ ಬೆಳೆದುಹೋಗಿದೆ. ಎಷ್ಟೋ ದೇವಾಲಯಗಳು, ಅರಮನೆಗಳು ಮತ್ತು ಇತರ ಸಾಮಾನ್ಯ ಕಟ್ಟಡಗಳು ಗುಂಬಜ್ ವಿನ್ಯಾಸವನ್ನು ತಮ್ಮದಾಗಿಸಿಕೊಂಡಿವೆ. ಯಾವ ಯಾವುದನ್ನೆಲ್ಲಾ ಜೆಸಿಬಿ ತರಿಸಿ ಪುಡಿಗುಟ್ಟುತ್ತೀರಿ ಎಂದು ಸಾಮಾನ್ಯ ಜನರೇ ಕೇಳುತ್ತಿದ್ದಾರೆ. ಮೈಸೂರು ಅರಮನೆ, ಕಾರಂಜಿ ಮಹಲ್, ಜಗನ್ಮೋಹನ ಪ್ಯಾಲೇಸ್, ಲಲಿತ ಮಹಲ್, ಮೈಸೂರು ಜಿಲ್ಲಾಧಿಕಾರಿ ಕಚೇರಿ, ಮಹಾನಗರ ಪಾಲಿಕೆ ಕಚೇರಿ ಹೀಗೆ ಮೈಸೂರಿನಲ್ಲಿಯೇ ಹಲವು ಕಟ್ಟಡಗಳಲ್ಲಿ ಗುಂಬಜ್‌ಗಳಿವೆ. ಇವೆಲ್ಲವನ್ನೂ ಒಡೆಯಲು ಸಂಸದ ಪ್ರತಾಪ್ ಸಿಂಹ ಮುಂದಾಗುವರೇ? ಅಥವಾ ’ಕೇಸರಿಯ ಮೇಲೆಯೇ ರಾಜಕಾರಣ ಮಾಡುತ್ತೇವೆ; ತಡೆಯುವುದಾದರೆ ತಡೆಯಿರಿ’ ಎಂದು ಸದಾ ಫ್ಯೂಡಲ್ ಮಾತುಗಳನ್ನಾಡುತ್ತಲೇ ಬದುಕುವ ಸಿ.ಟಿ ರವಿ ಇದಕ್ಕೂ ಯೆಸ್ ಅಂದಾರೆಯೇ? ಮಸೀದಿಗಳಲ್ಲಿ ಸನಾತನ ಧರ್ಮದ ಕುರುಹುಗಳನ್ನು ಹುಡುಕುತ್ತಿದ್ದವರು ಇನ್ನು ಮುಂದೆ ಇತರ ಕಟ್ಟಡಗಳಲ್ಲಿ ಮುಸ್ಲಿಂ ವಿನ್ಯಾಸಗಳನ್ನು ಹುಡುಕಲು ಪ್ರಾರಂಭಿಸುವರೇ? ಒಟ್ಟಿನಲ್ಲಿ ಕೇಡುಗಾಲಕ್ಕೆ ಕುದುರೆ ಮೊಟ್ಟೆ ಇಟ್ಟಂತೆ ಕರ್ನಾಟಕದಲ್ಲಿ ಸಂಘ ಪರಿವಾರಿಗಳ ಆಟಾಟೋಪ ಮಿತಿಮೀರುತ್ತಿದೆ.

ಕಾಂಗ್ರೆಸ್‌ನ ನಿಧಾನಗತಿಯ ಮತ್ತು ನಿರ್ಲಕ್ಷೆಯ ಪ್ರತಿಕ್ರಿಯೆಗಳು

ಇಷ್ಟೆಲ್ಲಾ ಅದ್ವಾನಗಳು ಘಟಿಸುತ್ತಿದ್ದರೂ ಕೋಮು ರಾಜಕೀಯವನ್ನು ವಿರೋಧಿಸುತ್ತೇವೆ ಎಂದು ಹೇಳಿಕೊಳ್ಳುವ ವಿರೋಧ ಪಕ್ಷವಾದ ಕಾಂಗ್ರೆಸ್ ಯಾವ ಫೋರ್ಸ್‌ನಲ್ಲಿ ಪ್ರತಿಕ್ರಿಯೆ ನೀಡಬೇಕಿತ್ತೋ ಅದು ಕಾಣದಾಗಿದೆ. ಕೋಮು ರಾಜಕೀಯದಲ್ಲಿ ತನ್ನ ಪೊಸಿಷನ್‌ಅನ್ನು ಸ್ಪಷ್ಟಪಡಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಹೆಣಗುತ್ತಿರುವುದು ನಿರ್ವಿವಾದ. ಇತ್ತೀಚಿಗೆ ಸತೀಶ್ ಜಾರಕಿಹೊಳಿ ಅವರು ’ಹಿಂದೂ’ ಪದದ ಬಗೆಗಿರುವ ಹಲವು ವ್ಯಾಖ್ಯಾನಗಳಲ್ಲಿ ಒಂದನ್ನು ಸಭೆಯೊಂದರಲ್ಲಿ ನಿರ್ವಚಿಸಿದಾಗ ಸಂಘ ಪರಿವಾರ ಸಲ್ಲದ ಕಾರಣಕ್ಕೆ ಸತೀಶ್ ಅವರನ್ನು ಹಳಿದು ವಿರೋಧಿಸಿ ಪ್ರತಿಕ್ರಿಯೆ ತೋರಿತ್ತು. ಆದರೆ ಸತೀಶ್ ಜಾರಕಿಹೊಳಿಯವರ ಜೊತೆಗೆ ಕಾಂಗ್ರೆಸ್‌ನ ಪ್ರಮುಖ ಮುಖಂಡರು ನಿಲ್ಲದ ಕಾರಣ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದುಕೊಳ್ಳಬೇಕಾಯಿತು. ಇನ್ನು ಇಡಬ್ಲ್ಯುಎಸ್ ಮೀಸಲಾತಿಯ ಪ್ರಕರಣದ ವಿಷಯದಲ್ಲಿಯೂ, ಹಿಂದುಳಿದ ಸಮುದಾಯಗಳಿಗೆ ಆಗುತ್ತಿರುವ ಅನ್ಯಾಯವನ್ನು ಮರೆತು ಇಡಬ್ಲ್ಯುಎಸ್‌ಅನ್ನು ಸ್ವಾಗತಿಸುವುದಾಗಿ ಕಾಂಗ್ರೆಸ್ ಪಕ್ಷ ಹೇಳಿತ್ತು. ಈಗ ಒತ್ತಡ ಬಂದನಂತರ ತನ್ನ ನಿಲುವನ್ನು ವಿಮರ್ಶಿಸಿಕೊಳ್ಳುವ ಮಾತನ್ನಾಡಿದೆ. ಪಠ್ಯ ಮತ್ತು ಶಾಲಾ ಕೊಠಡಿಗಳ ಕೇಸರೀಕರಣದ ವಿಷಯವಾಗಲೀ, ಪ್ರತಾಪ್ ಸಿಂಹ, ಸಿ.ಟಿ ರವಿ ಮುಂತಾದ ಬಿಜೆಪಿ ಮುಖಂಡರ ದ್ವೇಷ ಭಾಷಣಗಳ ಅಥವಾ ಟಿಪ್ಪು ಸುಲ್ತಾನನ ಬಗ್ಗೆ ಹಬ್ಬಿಸುತ್ತಿರುವ ಸುಳ್ಳುಗಳ ವಿಚಾರದಲ್ಲಾಗಲೀ ಇಡೀ ಕಾಂಗ್ರೆಸ್ ಪಕ್ಷ ಒಗ್ಗಟ್ಟು ಮತ್ತು ಒಮ್ಮತದಿಂದ ಅವುಗಳನ್ನು ಹತ್ತಿಕ್ಕುವ ದೃಢ ನಿಲುವನ್ನು ತಳೆಯದೆ ಹೋಗುತ್ತಿರುವುದು ಬಹುಶಃ ಪಕ್ಷಕ್ಕೆ ದೀರ್ಘಕಾಲೀನವಾಗಿ ಸಹಾಯ ಮಾಡಲಾರದು. ಅಲ್ಲೋ ಇಲ್ಲೋ ಚದುರಿದಂತೆ ಕಾಣುವ ಪ್ರಿಯಾಂಕಾ ಖರ್ಗೆಯಂತಹವರ ವಿರೋಧಗಳು ಸಾಮಾನ್ಯ ಜನರಲ್ಲಿ ಅಭಿಪ್ರಾಯ ರೂಪಿಸುವುದಕ್ಕೆ ಸೋಲುತ್ತಿವೆ. ಕನ್ವಿಕ್ಷನ್ ಇಲ್ಲದ ಕಾಂಗ್ರೆಸ್ ಮುಖಂಡರ ಪ್ರಹಸನಗಳು ಸಪ್ಪೆಯಾಗಿ ಕಾಣುತ್ತಿವೆ.

ಸತೀಶ್ ಜಾರಕಿಹೊಳಿ

ಹಿಂದುತ್ವ ಬೇರೇ ಹಿಂದೂಯಿಸಂ ಬೇರೆ ಎಂಬಂತಹ ನಿಲುವನ್ನು ನಿರ್ವಹಿಸುವುದರಲ್ಲಿಯೇ ಕಾಲ ಕಳೆದರೆ ಸಾಲದು ಎಂಬುದನ್ನು ಕಾಂಗ್ರೆಸ್ ಪಕ್ಷ ಅರ್ಥಮಾಡಿಕೊಳ್ಳಬೇಕಿದೆ. ಕೆಲವು ಕಡೆ ಮೃದು ಹಿಂದುತ್ವ ಧೋರಣೆ, ಇನ್ನೂ ಹಲವೆಡೆ ಹಿಂದುತ್ವದ ಬದಲಿಗೆ ’ನಿಜ’ ಹಿಂದೂ ಧರ್ಮದ ಪರಿಪಾಲನೆ ಎಂಬಂತೆ ನಡೆದುಕೊಂಡು, ಬಿಜೆಪಿಯ ವಿಭಜಕ ನೀತಿಗಳನ್ನು ಹಿಮ್ಮೆಟ್ಟಿಸಲು ಕಾಂಗ್ರೆಸ್ ಹೆಣಗಾಡುತ್ತಿದೆ. ’ನೋಟುಗಳ ಮೇಲೆ ಲಕ್ಷ್ಮಿ, ಸರಸ್ವತಿಯ ಚಿತ್ರಗಳನ್ನು ಹಾಕಿ’ ಎಂದ ಎಎಪಿ ಪಕ್ಷದ ಮೃದು ಹಿಂದುತ್ವ ಧೋರಣೆಯೂ ಕಾಂಗ್ರೆಸ್‌ಅನ್ನು ಕಂಗೆಡಿಸಿದಂತಿದೆ. ಸುಳ್ಳನ್ನು ಪೂರ್ಣ ವಿರೋಧಿಸಲಾಗದೆ, ಸತ್ಯವನ್ನು ಪೂರ್ತಿ ಅಪ್ಪಿಕೊಳ್ಳಲಾಗದೆ, ತಮ್ಮ ನಿಲುವನ್ನು ಸ್ಪಷ್ಟಪಡಿಸಿಕೊಳ್ಳಲಾಗದೆ ತಾಕಲಾಟದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಮುಖಂಡ ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆ ಅಷ್ಟೇನೂ ಸ್ಪಷ್ಟತೆಯನ್ನು ತಂದುಕೊಟ್ಟಂತೆ ಕಾಣುತ್ತಿಲ್ಲ. ಆರ್‌ಎಸ್‌ಎಸ್ ನೀತಿಯನ್ನು ಪೂರ್ಣ ಮಟ್ಟದಲ್ಲಿ ಹಿಮ್ಮೆಟ್ಟಿಸುವ ಯೋಜನೆಯೂ ಅದರ ಬಳಿ ಇದ್ದಂತಿಲ್ಲ. ಆದರೆ ಕಾಂಗ್ರೆಸ್ ಸದ್ಯದ ರಾಜಕೀಯದಲ್ಲಿ ಒಮ್ಮೆ ಗೆದ್ದುಬಿಡುವ ಒಂದೇ ಗುರಿಯನ್ನು ಹಾಕಿಕೊಳ್ಳದೆ, ಹಿಂದುತ್ವಕ್ಕೆ ಎದುರಾಗಿ ಜಾತ್ಯತೀತ ಪರಂಪರೆಯನ್ನು ಗಟ್ಟಿಯಾಗಿ ಅನುಸರಿಸಿ ಪ್ರತಿಪಾದಿಸುವ, ಹಿಂದೂಯಿಸಂನಲ್ಲಿರುವ ಬ್ರಾಹ್ಮಣ್ಯವನ್ನು ತೊಲಗಿಸಿ, ಶೋಷಿತರ ಮತ್ತು ಹಿಂದುಳಿದವರ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತುವ ರಾಜಕೀಯವನ್ನು ಮೈಗೂಡಿಸಿಕೊಳ್ಳಬೇಕಿದೆ. ಆ ಮೂಲಕ ಕಾರ್ಯಕರ್ತರನ್ನು ಸಂಘಟಿಸುವ, ರಾಜಕೀಯ ಆಂದೋಲನಗಳನ್ನು ರೂಪಿಸಿ ಜನರ ಬೆಂಬಲವನ್ನು ಗಳಿಸಿಕೊಳ್ಳುವತ್ತ ಮುನ್ನಡೆಯಬೇಕಿದೆ. ನಿಜ ಜಾತ್ಯತೀತ ಭಾರತದ ಕನಸಿಗೆ ಪಣ ತೊಡಬೇಕಿದೆ. ಅದಷ್ಟೇ ದೇಶವನ್ನು ಉಳಿಸುವ ದಾರಿಯಾದೀತು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...