“ಹಲವಾರು ಕಡೆಗಳಲ್ಲಿ ಸೀತಾಲ್ಕುಚ್ಚಿಯ ಘಟನೆ ಮರುಕಳಿಸುತ್ತದೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್‌ಗೆ ಚುನಾವಣಾ ಆಯೋಗವು ಗುರುವಾರ ಸಂಜೆ 24 ಗಂಟೆಗಳ ಪ್ರಚಾರ ನಿಷೇಧ ಹೇರಿದೆ. ಆಯೋಗವು ದಿಲೀಪ್ ಘೋಷ್‌ಗೆ ಕಟುವಾಗಿ ಎಚ್ಚರಿಕೆ ನೀಡಿದ್ದು ನೀತಿ ಸಂಹಿತೆ ಜಾರಿಯಲ್ಲಿರುವಾಗ ಸಾರ್ವಜನಿಕವಾಗಿ ಅಂತಹ ಮಾತುಗಳನ್ನು ಬಳಸದಂತೆ ಹೇಳಿದೆ.
ಪಶ್ಚಿಮ ಬಂಗಾಳದಲ್ಲಿ ಕಳೆದ ಶನಿವಾರ ನಡೆದ ನಾಲ್ಕನೇ ಹಂತದ ಮತದಾನದ ಸಂದರ್ಭ ಸಿತಾಲ್ಕುಚ್ಚಿಯಲ್ಲಿ ಕೇಂದ್ರ ಭದ್ರತಾ ಪಡೆಗಳು ನಡೆಸಿದ ಗೋಲಿಬಾರ್ ಘಟನೆಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಸ್ಥಳೀಯ ಗುಂಪೊಂದು ತಮ್ಮ ಮೇಲೆ ದಾಳಿ ಮಾಡಿದ್ದರಿಂದ ಗುಂಡು ಹಾರಿಸಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ. ಆದರೆ ಸ್ಥಳೀಯರ ಪ್ರಕಾರ ಅಲ್ಲಿ ಯಾವುದೆ ಹಿಂಸಾಚಾರ ನಡೆದಿಲ್ಲ, ಭದ್ರತಾ ಪಡೆಗಳು ಏಕಾಏಕಿ ಗುಂಡು ಹಾರಿಸಿವೆ ಎಂದು ಹೇಳಿದ್ದಾರೆ. ಅಲ್ಲದೆ ಘಟನೆಯ ವಿಡಿಯೋಗಳು ವೈರಲಾಗಿದ್ದು, ಭದ್ರತಾ ಪಡೆಗಳು ನೀಡಿರುವ ಹೇಳಿಕೆಗಳು ಸುಳ್ಳು ಎಂದು ತೋರಿಸುತ್ತಿದೆ.
ಇದನ್ನೂ ಓದಿ: ಬಂಗಾಳ: ಸೀತಾಲ್ಕುಚ್ಚಿ ಗೋಲಿಬಾರ್ ವಿಡಿಯೋ ವೈರಲ್, ಕೇಂದ್ರ ಪಡೆಗಳ ಮೇಲೆ ಸಂಶಯದ ಹುತ್ತ!
ದಿಲೀಪ್ ಘೋಷ್ ಮೇಲಿನ ನಿಷೇಧವು ಏಪ್ರಿಲ್ 15 ರ ಸಂಜೆ 7 ರಿಂದ ಏಪ್ರಿಲ್ 16 ರವರೆಗೆ ಜಾರಿಯಲ್ಲಿರುತ್ತದೆ, ಈ ಸಮಯದಲ್ಲಿ ಅವರಿಗೆ ಚುನಾವಣಾ ಪ್ರಚಾರಕ್ಕೆ ಅನುಮತಿ ಇರುವುದಿಲ್ಲ.
“ದಿಲೀಪ್ ಘೋಷ್ ಪ್ರಚೋದನಕಾರಿ ಮತ್ತು ಉದ್ವೇಗಕಾರಿ ಹೇಳಿಕೆಗಳನ್ನು ನೀಡಿದ್ದು ಅದು ಕಾನೂನು ಸುವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಜೊತೆಗೆ ಚುನಾವಣಾ ಪ್ರಕ್ರಿಯೆಯ ಮೇಲೆ ಕೂಡಾ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ” ಎಂದು ಆಯೊಗದ ಆದೇಶದಲ್ಲಿ ತಿಳಿಸಲಾಗಿದೆ.
ದಿಲೀಪ್ ಘೋಷ್ ಹೇಳಿಕೆಯ ವಿರುದ್ದ ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
“ಯಾರಾದರೂ ತಮ್ಮ ಮಿತಿಗಳನ್ನು ಮೀರಿದರೆ ಸೀತಾಲ್ಕುಚ್ಚಿಯಲ್ಲಿ ಏನಾಯಿತು ಎಂದು ನೀವು ನೋಡಿದ್ದೀರಿ. ಅದರಂತೆ ಹಲವಾರು ಸ್ಥಳಗಳಲ್ಲಿ ಸೀತಾಲ್ಕುಚ್ಚಿ ನಡೆದಂತೆ ನಡೆಯುತ್ತದೆ” ಎಂದು ದಿಲೀಪ್ ಘೋಷ್ ಹೇಳಿದ್ದರು.
ಇದನ್ನೂ ಓದಿ: ಸೀತಾಲ್ಕುಚ್ಚಿ ಶೂಟೌಟ್ ಬಗ್ಗೆ ವಿವಾದಿತ ಹೇಳಿಕೆ: ರಾಹುಲ್ ಸಿನ್ಹಾಗೆ 48 ಗಂಟೆ ಪ್ರಚಾರಕ್ಕೆ ನಿಷೇಧ
ಆಯೋಗದ ನೋಟಿಸ್‌ಗೆ ನೀಡಿದ ಉತ್ತರದಲ್ಲಿ, ದಿಲೀಪ್ ಘೋಷ್, “ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಗೆ ಸಂಬಂಧಿಸಿದ ಹಿಂಸಾಚಾರವು ವಿಶಿಷ್ಟವಾಗಿದೆ. ತೃಣಮೂಲ ಕಾಂಗ್ರೆಸ್ ನಾಯಕರು ಮುಕ್ತ, ನ್ಯಾಯಯುತ ಮತ್ತು ಶಾಂತಿಯುತ ಮತದಾನದ ಪ್ರಕ್ರಿಯೆಯನ್ನು ಅಪಾಯಕ್ಕೆ ತಳ್ಳುವ ಮೂಲಕ ಭಯ ಮತ್ತು ಬೆದರಿಕೆಯ ವಾತಾವರಣವನ್ನು ಸೃಷ್ಟಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
“ಪಕ್ಷದ ರಾಜ್ಯಾಧ್ಯಕ್ಷರಾಗಿ, ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ನಿಂತು ಮತದಾರರನ್ನು ಭಯವಿಲ್ಲದೆ ಮತ ಚಲಾಯಿಸುವಂತೆ ಪ್ರೋತ್ಸಾಹಿಸುವುದು ಕರ್ತವ್ಯವಾಗಿದೆ. ನೀತಿ ಸಂಹಿತೆಗೆ ವಿರುದ್ಧವಾದ ಯಾವುದೇ ಹೇಳಿಕೆ ನೀಡುವುದು ತನ್ನ ಉದ್ದೇಶವಲ್ಲ” ಎಂದು ಅವರು ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.
“ತನ್ನ ಹೇಳಿಕೆಯು ಗೊಂದಲ ಸೃಷ್ಟಿಸುವ, ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆಗೆ ಋಣಾತ್ಮಕ ಪರಿಣಾಮ ಬೀರುವ ದುಷ್ಕರ್ಮಿಗಳು ಮತ್ತು ಸಮಾಜ ವಿರೋಧಿಗಳನ್ನು ಉದ್ದೇಶಿಸಿ ಹೇಳಲಾಗಿದೆ” ಎಂದು ಅವರು ಆಯೋಗಕ್ಕೆ ತಿಳಿಸಿದ್ದಾರೆ. ಜೊತೆಗೆ ತಮ್ಮ ಮಾತು ತಪ್ಪಾಗಿದ್ದರೆ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಂಗಾಳ ಚುನಾವಣೆ: ಸೀತಾಲ್ಕುಚ್ಚಿ ಶೂಟೌಟ್ ಬಗ್ಗೆ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕರು


