ಬಂಗಾಳ: ಸೀತಾಲ್ಕುಚ್ಚಿ ಗೋಲಿಬಾರ್‌ ವಿಡಿಯೋ ವೈರಲ್, ಕೇಂದ್ರ ಪಡೆಗಳ ಮೇಲೆ ಸಂಶಯದ ಹುತ್ತ! | ನಾನುಗೌರಿ

ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಮತದಾನದ ವೇಳೆ ಕೂಚ್ ‌ಬಿಹಾರ್‌ ಜಿಲ್ಲೆಯ ಸೀತಾಲ್ಕುಚಿಯಲ್ಲಿ ಮತದಾನದ ಸಂದರ್ಭದಲ್ಲಿ ಗುಂಪೊಂದು ಮತಗಟ್ಟೆಯ ಮೇಲೆ ದಾಳಿ ಮಾಡಿತೆಂದು ಅರೆಸೇನಾ ಪಡೆಗಳು ಗೋಲಿಬಾರ್ ನಡೆಸಿ ನಾಲ್ಕು ಜನರನ್ನು ಹತ್ಯೆ ಮಾಡಿದ್ದವು. ಆದರೆ ಗೋಲಿಬಾರ್‌ ನಡೆದ ಪ್ರದೇಶದ್ದು ಎಂದು ಎನ್ನಲಾಗಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅರೆ ಸೇನಾಪಡೆಗಳ ಹೇಳಿಕೆ ಮೇಲೆ ಸಂಶಯ ಉಂಟು ಮಾಡಿದೆ.

ಪ್ರಸ್ತುತ ವಿಡಿಯೋವನ್ನು ಇಂಡಿಯಾ ಟುಡೆ ಸಹಾಯಕ ಸಂಪಾದಕ ಇಂದ್ರಜಿತ್ ಕುಂದು ಅವರು ತಮ್ಮ ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅವರು ತಮ್ಮ ಟ್ವೀಟ್‌ನಲ್ಲಿ, “ಕೂಚ್‌ಬೆಹಾರ್ ಜಿಲ್ಲೆಯ ಸೀತಾಲ್ಕುಚಿಯಲ್ಲಿ ಕೇಂದ್ರ ಪಡೆಗಳು ಗುಂಡು ಹಾರಿಸಿ ನಾಲ್ಕು ಸ್ಥಳೀಯರನ್ನು ಹತ್ಯೆ ಮಾಡಿದ ನಾಲ್ಕು ದಿನಗಳ ನಂತರ, ಅಂದು ಏನಾಯಿತು ಎಂಬುದನ್ನು ತೋರಿಸುವ ಹೊಸ ವೈರಲ್ ವಿಡಿಯೋ ಹೊರಬಿದ್ದಿದೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಬಹುಜನ ಭಾರತ: ನಂದಿಗ್ರಾಮ ಬರೆಯಲಿದೆಯೇ ಜನತಂತ್ರದ ಭವಿಷ್ಯವನು?

ಇಷ್ಟೇ ಅಲ್ಲದೆ ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒಬ್ರಿಯಾನ್, “11 ನಿಮಿಷಗಳ ವೀಡಿಯೊ ಈಗ  ಸಾಮಾಜಿಕ ಜಾಲತಾಣದಲ್ಲಿ ಸಿಗುತ್ತಿದ್ದು, ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದ ಘಟನೆಯು ಸಂಪೂರ್ಣವಾಗಿ ಬಹಿರಂಗಪಟ್ಟಿದೆ. ಸೊಂಟದಿಂದ ಕೆಳಗೆ ಗುಂಡು ಹಾರಿಸುವ ಬದಲು ಕೇಂದ್ರ ಪಡೆಗಳು ಅವರನ್ನು ಕೊಲ್ಲಲು ಕಾರಣವೇನು? ಈ ಪ್ರಶ್ನೆ ಮತ್ತು ಇತರ ಹಲವು ಕಠಿಣ ಪ್ರಶ್ನೆಗಳಿಗೆ ಮೋದಿ, ಶಾ, ಚುನಾವಣಾ ಆಯೋಗ ಉತ್ತರಿಸಬೇಕಾಗಿದೆ. ಸತ್ಯ ಗೆಲ್ಲುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

ವಿಡಿಯೋದಲ್ಲಿ ಆಕ್ರೋಶ ಭರಿತ ಜನರು, ಗುಂಡಿನ ದಾಳಿಗಳು, ರಕ್ತಸಿಕ್ತ ಸ್ಥಿತಿಯಲ್ಲಿ ಮಲಗಿರುವ ಯುವಕರನ್ನು ಕಾಣಬಹುದಾಗಿದೆ. ಗುಂಡು ಹಾರಿಸಿದ ನಂತರ ಗ್ರಾಮಸ್ಥರು ಕೇಂದ್ರ ಪಡೆಗಳನ್ನು ಬೆನ್ನಟ್ಟುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: ಬಂಗಾಳ ಚುನಾವಣೆ: ಸೀತಾಲ್ಕುಚ್ಚಿ ಶೂಟೌಟ್ ಬಗ್ಗೆ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕರು

ಆನಂದ್ ಬಝಾರ್‌ ಪತ್ರಿಕೆ ಈ ಹನ್ನೊಂದು ನಿಮಿಷಗಳ ವಿಡಿಯೋವನ್ನು ತನ್ನ ಯೂಟ್ಯೂಬ್‌ನಲ್ಲಿ ಅಪ್‌ಲೋಡ್  ಮಾಡಿದೆ.

ಇಷ್ಟೇ ಅಲ್ಲದೆ ನ್ಯೂಸ್‌ಲಾಂಡ್ರಿ ಈ ಕುರಿತು ತನಿಖಾ ವರದಿಯನ್ನು ಮಾಡಿದೆ. “ಕೇಂದ್ರ ಪಡೆಗಳ ಮೇಲೆ ಯಾವುದೇ ಗುಂಪುಗಳು ದಾಳಿ ಮಾಡಿಲ್ಲ. ಬದಲಾಗಿ ಮತದಾನ ಮಾಡಲೆಂದು ನಿ೦ತವರ ಮೇಲೆ ಕೇಂದ್ರ ಪಡೆಗಳೇ ಗು೦ಡು ಹಾರಿಸಿತು” ಎಂದು ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆಯನ್ನು ಉಲ್ಲಖಿಸಿ ಅದು ವರದಿ ಮಾಡಿದೆ.

ವಿಡಿಯೋದಲ್ಲಿ ಕಾಣಿಸಿಕೊಂಡಿರುವಂತೆ ಜನರು ದೊಣ್ಣೆಗಳನ್ನು ಹಿಡಿದು ಅಲ್ಲಿಗೆ ಧಾವಿಸುತ್ತಾರಾದರೂ ಗುಂಡು ಹಾರಿಸುವುದಕ್ಕಿಂತ ಮುಂಚೆ ಅಲ್ಲಿರುವ ಯಾವುದೇ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುವುದಿಲ್ಲ. ಗುಂಡಿನ ಸದ್ದು ಕೇಳಿಸಿದ ನಂತರ ಹಾಗೂ ಅಲ್ಲಿ ಮೂವರು ನೆಲಕ್ಕೆ ಬಿದ್ದ ನಂತರ ಆಕ್ರೋಶಿತ ಜನರು ಭದ್ರತಾ ಸಿಬ್ಬಂದಿಗಳನ್ನು ಬೆನ್ನಟ್ಟುವುದನ್ನು ಕಾಣಬಹುದಾಗಿದೆ.


ಇದನ್ನೂ ಓದಿ: ಸೀತಾಲ್ಕುಚ್ಚಿ ಶೂಟೌಟ್ ಬಗ್ಗೆ ವಿವಾದಿತ ಹೇಳಿಕೆ: ರಾಹುಲ್ ಸಿನ್ಹಾಗೆ 48 ಗಂಟೆ ಪ್ರಚಾರಕ್ಕೆ ನಿಷೇಧ

LEAVE A REPLY

Please enter your comment!
Please enter your name here