ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ, ಜನರು ಅನೇಕ ಹವ್ಯಾಸಗಳನ್ನ ರೂಡಿಸಿಕೊಂಡರು. ಕೆಲವು ಹೊಸ ಹೊಸ ಅಡಿಗೆ ಕಲಿಯಲು ಪ್ರಯತ್ನಿಸಿದರು. ಕೆಲವರು ಮನೆಯಲ್ಲೇ ಮಾಸ್ಕ್ ತಯಾರಿಸೋದು, ಕೈದೋಟದ ಕೆಲಸ, ಮನೆಯಲ್ಲೇ ಜಿಮ್, ಡಯಟಿಂಗ್, ಹಾಡು, ಡ್ಯಾನ್ಸ್ ತರಬೇತಿ ಮುಂತಾದವನ್ನು ಪ್ರಯತ್ನಿಸಿ ತಮ್ಮ ಬೇಸರ ಕಳೆದುಕೊಂಡಿದ್ದಾರೆ.
ಆದರೆ ಕೇರಳದ ಈ ಯುವತಿ ಲಾಕ್‌ಡೌನ್ ಸಮಯವನ್ನು ಅಧ್ಯಯನಕ್ಕಾಗಿ ಬಳಸಿ, 3 ತಿಂಗಳಲ್ಲಿ 350 ಆನ್‌ಲೈನ್ ಕೋರ್ಸ್‌ಗಳನ್ನು ಮಾಡಿದ್ದಾರೆ. ಈ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಆರತಿ ಕೊಚ್ಚಿಯ ಎಲಂಕಾರ ಮೂಲದವರಾಗಿದ್ದು, ಎಂಇಎಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಎಸ್ಸಿ ಬಯೋಕೆಮಿಸ್ಟ್ರಿ ವಿದ್ಯಾರ್ಥಿನಿಯಾಗಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಜಿಲ್ಲಾಧಿಕಾರಿ ಮೇಲೆ ಕ್ರಮ ಏಕಿಲ್ಲ?: ಮಾಯಾವತಿ ಪ್ರಶ್ನೆ
ವಿದ್ಯಾರ್ಥಿನಿ ಆರತಿ ಹೇಳುವಂತೆ, ’ನನ್ನ ಕಾಲೇಜು ಅಧ್ಯಾಪಕರು ನನಗೆ ಆನ್‌ಲೈನ್ ಕೋರ್ಸ್ಗಳನ್ನ ನನಗೆ ಪರಿಚಯಿಸಿದರು. ಆನ್‌ಲೈನ್ ಕೋರ್ಸ್‌ಗಳದ್ದು ಒಂದು ದೊಡ್ಡ ಶ್ರೇಣಿಯಿದೆ. ಪ್ರತಿ ಕೋರ್ಸ್ನ ಅವಧಿ ಹಾಗೂ ಪಠ್ಯಕ್ರಮ ಭಿನ್ನವಾಗಿರುತ್ತದೆ. ನನ್ನ ಕಾಲೇಜು ಪ್ರಾಂಶುಪಾಲರಾದ ಪಿ.ಮೊಹಮ್ಮದ್, ಹನೀಫಾ ಕೆ.ಜಿ.ಮತ್ತು ಬೋಧಕ ಸಿಬ್ಬಂದಿ ನೀಲಿಮಾ ಟಿ.ಕೆ. ಅವರ ಸಹಾಯದಿಂದ ನಾನು ಪ್ರತಿ ಕೋರ್ಸ್ ಅನ್ನು ಸಮಯಕ್ಕೆ ಪೂರ್ಣಗೊಳಿಸಿದೆ’ ಎನ್ನುತ್ತಾರೆ.
ಆರತಿಯ ತಂದೆಯ ಹೆಸರು ಮಾಲಿಯೆಕ್ಕಲ್ ಮೇದತಿಲ್ ಎಂ.ಆರ್.ರಘುನಾಥ್ ಮತ್ತು ತಾಯಿಯ ಹೆಸರು ಕಲಾದೇವಿ. ವಿಶ್ವದಾಖಲೆ ನಿರ್ಮಿಸಿರುವ ಮಗಳ ಸಾಧನೆ ಬಗ್ಗೆ ತಂದೆ-ತಾಯಿ ಸಂತಸ ವ್ಯಕ್ತಪಡಿಸುತ್ತಾರೆ.
ಜಾನ್ ಹಾಕಿನ್ಸ್ ವಿಶ್ವವಿದ್ಯಾಲಯ, ವರ್ಜೀನಿಯಾ ವಿಶ್ವವಿದ್ಯಾಲಯ, ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯ, ಕೋಪನ್ ಹ್ಯಾಗನ್ ವಿಶ್ವವಿದ್ಯಾಲಯ, ರೋಚೆಸ್ಟರ್ ವಿಶ್ವವಿದ್ಯಾಲಯ, ಎಮೋರಿ ವಿಶ್ವವಿದ್ಯಾಲಯ, ಕೊರ್ಸೆರಾ ಪ್ರಾಜೆಕ್ಟ್ ನೆಟ್‌ವರ್ಕ್ ಮತ್ತು ಡೆನ್ಮಾರ್ಕ್‌ನ ತಾಂತ್ರಿಕ ವಿಶ್ವವಿದ್ಯಾಲಯಗಳು ಆರತಿ ಕೋರ್ಸ್‌ಗಳನ್ನು ಪಡೆದ ವಿಶ್ವವಿದ್ಯಾಲಯಗಳಲ್ಲಿ ಸೇರಿವೆ ಎಂದು ವರದಿಯಾಗಿದೆ.


