ಮದ್ಯ ಮುಕ್ತ ರಾಜ್ಯ ಗುಜರಾತ್‌ನಲ್ಲಿ ಅಕ್ರಮ ವಿಷಕಾರಿ ಮದ್ಯ ಸೇವಿಸಿ 36 ಜನರು ಸಾವನಪ್ಪಿದ್ದಾರೆ. ಹತ್ತಾರು ಜನ ಅಸ್ವಸ್ಥಗೊಂಡಿದ್ದಾರೆ. ಈ ಕುರಿತು ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ಅಕ್ರಮ ಮದ್ಯಕ್ಕೆ ಹಲವಾರು ಕುಟುಂಬಗಳು ಬಲಿಯಾಗಿವೆ. ರಾಜ್ಯದಲ್ಲಿ ನಿತ್ಯ ಕೋಟ್ಯಂತರ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗುತ್ತಿದೆ. ಇದು ಅತ್ಯಂತ ಕಳವಳಕಾರಿ ವಿಷಯ. ಬಾಪು ಮತ್ತು ಸರ್ದಾರ್ ಪಟೇಲರ ನಾಡಿನಲ್ಲಿ ಇಂತಹ ಅಕ್ರಮ ದಂಧೆಯಲ್ಲಿ ತೊಡಗಿರುವ ಇವರು ಯಾರು? ಈ ಮಾಫಿಯಾ ಗ್ಯಾಂಗ್ ಅನ್ನು ರಕ್ಷಿಸುವ ಅಧಿಕಾರದಲ್ಲಿರುವವರು ಯಾರು?” ಎಂದು ಪ್ರಶ್ನಿಸಿದ್ದಾರೆ.
ಗುಜರಾತ್‌ನ ಅಹಮದಾಬಾದ್ ಮತ್ತು ಬೊಟಾಡ್ ಜಿಲ್ಲೆಗಳಲ್ಲಿ ಕಳ್ಳಭಟ್ಟಿ ಮದ್ಯ ಸೇವಿಸಿ 36 ಜನರು ಸಾವನಪ್ಪಿದ್ದಾರೆ. ಹಲವು ಜನರು ಅಸ್ವಸ್ಥರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣದಲ್ಲಿ ಕನಿಷ್ಠ 13 ಜನರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಗುಜರಾತ್‌ನಲ್ಲಿ ಮದ್ಯದ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ಗುಜರಾತ್ ನಿಷೇಧ ಕಾಯಿದೆಯ ಪ್ರಕಾರ, ಅನುಮತಿಯಿಲ್ಲದೆ ಮದ್ಯವನ್ನು ಖರೀದಿಸುವುದು, ಸೇವಿಸುವುದು ಅಥವಾ ಮಾರಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಬಹುದಾಗಿದ್ದು, ಮೂರು ತಿಂಗಳಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಕಳೆದ ಸೋಮವಾರ ಗುಜರಾತ್‌ನಲ್ಲಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ಮದ್ಯ ಮುಕ್ತ ರಾಜ್ಯದಲ್ಲಿ ಅಕ್ರಮ ಮದ್ಯವನ್ನು ಹೇಗೆ ವಿತರಿಸಲಾಯಿತು ಎಂದು ಪ್ರಶ್ನಿಸಿದ್ದರು ಮತ್ತು ಅಕ್ರಮ ಮದ್ಯ ಜಾಲವನ್ನು ಟೀಕಿಸಿದ್ದರು.
ಜುಲೈ ಆರಂಭದಲ್ಲಿ, ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕಚ್ ಜಿಲ್ಲೆಯ ಮುಂದ್ರಾ ಬಂದರಿನಲ್ಲಿ ಕಂಟೇನರ್‌ನಿಂದ ₹ 376 ಕೋಟಿ ಮೌಲ್ಯದ 75 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿತ್ತು. ಮೇ ತಿಂಗಳಲ್ಲಿ ಇದೇ ಬಂದರಿನಲ್ಲಿ ₹500 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ರಾಜ್ಯದ ಅಕ್ರಮ ಡ್ರಗ್ಸ್ ಜಾಲದ ಕುರಿತು ದನಿಯೆತ್ತಿದ್ದಾರೆ.
ಇದನ್ನೂ ಓದಿ: ‘ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೊರಟರೆ ಕರಾವಳಿ ತಾಲಿಬಾನ್ ಆಗಲ್ವಾ?’


