ನಿನ್ನೆಯಷ್ಟೇ ಟಿಡಿಪಿಯ ನಾಲ್ವರು ರಾಜ್ಯಸಭಾ ಸದಸ್ಯರು ಬಿಜೆಪಿ ಸೇರಿದ್ದಾರೆ. ಇದರಲ್ಲಿ ಐ.ಸಿ.ಚೌಧರಿ ಮತ್ತು ಚಿ.ಎಂ ರಮೇಶ ಬಿಜೆಪಿಗೆ ಸೇರಿದ್ದಾರೆ ಎನ್ನುವುದಕ್ಕಿಂತ ಬಿಜೆಪಿಗೆ ಶರಣಾಗಿದ್ದಾರೆ ಅಥವಾ ಬಿಜೆಪಿ ಬ್ಲ್ಯಾಕ್‍ಮೇಲ್ ತಂತ್ರದಿಂದ ಈ ಇಬ್ಬರನ್ನು ಎಳೆದುಕೊಂಡಿದೆ ಎನ್ನುವುದೇ ಸೂಕ್ತ…. ಎನಿ ಹೌ ಥ್ಯಾಂಕ್ಸ್ ಟು ಸಿಬಿಐ, ಐಟಿ, ಇ,ಡಿ…… ತಿನ್ನಲ್ಲ, ತಿನ್ನಲು ಬಿಡಲ್ಲ ಅನ್ನುತ್ತಲೇ ತಿಂದು ಸಿಕ್ಕು ಹಾಕಿಕೊಂಡವರನ್ನು ಅಪ್ಪಿಗೊಳ್ಳುವ ಈ ವಿದ್ಯಾಮಾನ ಇನ್ನಷ್ಟು ವಿಸ್ತರಿಸುವ ಲಕ್ಷಣಗಳಿವೆ.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರ ಟಿಡಿಪಿ ಪಕ್ಷದಿಂದ ಮೂವರು ರಾಜ್ಯಸಭಾ ಸದಸ್ಯರನ್ನು ಬಿಜೆಪಿ ಎಗರಿಸಿದೆ. ವೈ.ಎಸ್ ಚೌಧರಿ, ಸಿಎಂ. ರಮೇಶ, ಗರಿಕಪತಿ ಮೋಹನರಾವ್ ಮತ್ತು ಟಿ.ಜಿ. ವೆಂಕಟೇಶ ಟಿಡಿಪಿ ತೊರೆದು ಅಮಿತ್‍ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ. ಇವರಲ್ಲಿ ವೈ.ಎಸ್, ಚೌಧರಿ ಮತ್ತು ಸಿ.ಎಂ. ರಮೇಶ ಉದ್ಯಮಿಗಳೂ ಆಗಿದ್ದು ವಿವಿಧ ಹಣಕಾಸು ಹಗರಣಗಳಲ್ಲಿ ಈಟಿ, ಸಿಬಿಐ ಮತ್ತು ಜಾರಿದಳದ ತನಿಖೆ ಎದುರುಸುತ್ತಿದ್ದಾರೆ.
7-8 ತಿಂಗಳ ಹಿಂದೆಯಷ್ಟೇ ಇವರನ್ನು ‘ಆಂಧ್ರ ಮಲ್ಯ’ಗಳು ಎಂದಿದ್ದ ಬಿಜೆಪಿ ಇವರಿಬ್ಬರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ರಾಜ್ಯಸಭಾದ ಮುಖ್ಯಸ್ಥರಿಗೆ ಪತ್ರ ಬರೆದು ಒತ್ತಾಯಿಸಿತ್ತು. ಈಗಲೂ ಈ ಇಬ್ಬರಿಗೆ ಯಾವ ಕ್ಲೀನ್‍ಚಿಟ್ ಸಿಕ್ಕಿಲ್ಲ. ಆದರೆ ಈ ‘ಆಂಧ್ರ ಮಲ್ಯಗಳನ್ನು’ ಬಿಜೆಪಿ ಸೇರಿಸಿಕೊಂಡಿದೆ. ಗೊತ್ತಿದ್ದೇ ಈ ಇಬ್ಬರು ಇನ್ನು ನಿರಾಳರಾಗಲಿದ್ದಾರೆ..ಸ್ವಲ್ಪದರಲ್ಲೇ ಆರೋಪಮುಕ್ತರೂ ಆಗಲಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ತನ್ನ ಎದುರಾಳಿ ಪಡೆಗಳಿಂದ ಎಂಎಲ್‍ಎ, ಎಂಪಿಗಳನ್ನು ಸೆಳೆಯಲು ಸಿಬಿಐ, ಐಟಿ ಮತ್ತು ಇ,ಡಿ ಇಲಾಖೆಗಳನ್ನು ಬಿಜೆಪಿ ಬಳಸಿಕೊಂಡು ಬಂದಿದ್ದು ಈಗಾಗಲೇ ಕಣ್ಣೆದುರೇ ಇದೆ. 330ರಷ್ಟು ಎನ್‍ಡಿಎ ಬಲವಿದ್ದರೂ ಬಿಜೆಪಿಗೆ ಎಂಪಿಗಳ ಅಗತ್ಯವಿದೆ. ಏಕೆಂದರೆ ಅದಕ್ಕೆ ಈಗ ತುರ್ತಾಗಿ ಬೇಕಿರುವುದು ರಾಜ್ಯಸಭೆಗಳಲ್ಲಿ ಬಹುಮತ ತಲುಪುವುದು. ಸಂಘ ಪರಿವಾರದ ಅಜೆಂಡಾಗಳನ್ನು ಮಸೂದೆ ರೂಪದಲ್ಲಿ ಅಂಗೀಕರಿಸಲು ರಾಜ್ಯಸಭೆಯಲ್ಲು ಬಹುಮತ ಬೇಕು. ಈಗ ಅದು ರಾಜ್ಯಸಭೆಯತ್ತ ಗಮನ ನೀಡಿದೆ. ಮುಂಬರುವ ಹಲವು ವಿಧಾನಸಭೆಗಳಲ್ಲಿ ಭಾರಿ ಪ್ರಮಾಣದಲ್ಲಿ ಗೆದ್ದರೆ, ರಾಜ್ಯಸಭೆಯಲ್ಲಿ ಬಹುಮತ ಪಡೆಯಲು ಸಾಧ್ಯ ಎಂಬ ಗುರಿಯೋಂದಿಗೆ ಅದು ಈಗಲೇ ಮುನ್ನುಗುತ್ತಿದೆ.
ಚಂದ್ರಬಾಬು ನಾಯ್ಡು ಎನ್‍ಡಿಎ ಜೊತೆಗಿದ್ದಾಗ ಚೌಧರಿ ಮತ್ತು ರಮೇಶರ ಮೇಲೆ ಯಾವ ಕೇಸುಗಳನ್ನು ಹಾಕಿರಲಿಲ್ಲ. ನಾಯ್ಡು ಎನ್‍ಡಿಎ ತೊರೆದ ನಂತರ ಸಿಬಿಐ, ಇ.ಡಿ ಮತ್ತು ಐಟಿ ಇಲಾಖೆಗಳು ಈ ಇಬ್ಬರು ಎಂಪಿ ಕಂ ಉದ್ಯಮಿಗಳ ಹಿಂದೆ ಬಿದ್ದವು. ಆಗಲಿಂದಲೂ ಬಿಜೆಪಿ ಸೇರಿ ಪಾರಾಗಲು ಇವರ ಮೇಲೆ ಒತ್ತಡವಿತ್ತು. ಈಗ ಆಂಧ್ರದಲ್ಲಿ ಟಿಡಿಪಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡ ಮೇಲೆ ಈ ಇಬ್ಬರು ತನಿಖೆಯಿಂದ ಪಾರಾಗಲು ಬಿಜೆಪಿ ಸೇರಿದ್ದಾರೆ. ತನ್ನ ವಿರುದ್ಧ ವಿಪಕ್ಷಗಳನ್ನು ಒಗ್ಗೂಡಿಸಲು ಯತ್ನಿಸಿದ್ದ ನಾಯ್ಡು ಮೇಲೇಯೂ ಬಿಜೆಪಿ ಸೇಡು ತೀರಿಸಿಕೊಂಡಿದೆ.
ಆಂಧ್ರ ಮಲ್ಯಗಳ ಅಪ್ಪುಗೆ
ಕಳೆದ ನವಂಬರ್ ನಲ್ಲಿ ಬಿಜೆಪಿ ಎಂಪಿ ಮತ್ತು ವಕ್ತಾರ ಜಿವಿಎಲ್ ನರಸಿಂಹರಾವ್ ಈ ಇಬ್ಬರನ್ನು ‘ಆಂಧ್ರ ಮಲ್ಯಗಳು’ ಎಂದು ಅಪಾದಿಸಿ, ಇವರಿಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಲಿ ಎಂದು ರಾಜ್ಯಸಭಾದ ನೀತಿಸಂಹಿತೆ ಸಮಿತಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಈಗ ಅದೇ ಮಲ್ಯಗಳು ಬಿಜೆಪಿಯ ದೇಶಭಕ್ತರು! ಹಿಂದಿನ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ಅಂದಿನ ವಿಶೇಷಾಧಿಕಾರಿ ರಾಕೇಶ ಅಸ್ಥಾನಾ ನಡುವೆ ನಡಿದಿದ್ದ ಗದ್ದಲದಲ್ಲಿ ಟಿಡಿಪಿಯಲ್ಲಿದ್ದ ರಮೇಶ ಹೆಸರು ಕೇಳಿ ಬಂದಿತ್ತು. ಈತನ ಕಂಪನಿಯೊಂದರ ಮೇಲೆ ಐಟಿ ಇಲಾಖೆ ತನಿಖೆ ನಡೆಸುತ್ತಿತ್ತು. ಟಿಡಪಿಯಲ್ಲಿದ್ದ ಇನ್ನೊಬ್ಬ ಸದಸ್ಯ ಚೌಧರಿ ಮೇಲೆ ಬ್ಯಾಂಕುಗಳಿಗೆ ಮಾಡಿದ ಹಣಕಾಸು ವಂಚನೆಗಾಗಿ ಸಿಬಿಐ ಮತ್ತು ಇ.ಡಿ., ಸಂಸ್ಥೆಗಳು ಕಣ್ಣಿಟ್ಟಿದ್ದವು.
ಕಳೆದ ಅಕ್ಟೋಬರ್‍ನಲ್ಲಿ ರಮೇಶನಿಗೆ ಸಂಬಂಧಿಸಿದ ಕಂಪನಿ ರಿತ್ವಿಕ್ ಪ್ರಾಜೆಕ್ಟ್ಸ್‍ನಲ್ಲಿ ನೂರು ಕೋಟಿ ಮೌಲ್ಯದ ಸಂಶಯಾಸ್ಪದ ವಹಿವಾಟನ್ನು ಐಟಿ ಇಲಾಖೆ ಪತ್ತೆ ಹಚ್ಚಿತ್ತು. ಅದರಲ್ಲಿ ಗುರುತಿಸಲಾಗದ ವಹಿವಾಟಿನಿಂದ 75 ಕೋಟಿಗಳನ್ನು ಮತ್ತು ಸಂಶಯಾಸ್ಪದ 27 ಕೋಟಿಗಳ ಅಪರಾ ತಪರಾ ನಡೆದಿರುವುದನ್ನು ಐಟಿ ಗುರುತಿಸಿತ್ತು. ಕಳೆದ ಅಕ್ಟೋಬರ್ 12ರಂದು ರಮೇಶನ ಕಡಪಾ ಮನೆ ಮತ್ತು ಹೈದರಾಬಾದ್ ಕಚೇರಿ ಮೇಲೆ ಐಟಿ ದಾಳಿ ನಡೆಸಿತ್ತು. ಸಿಬಿಐನ ಅಧಿಕಾರಿಗಳ ಜಗಳದಲ್ಲಿ ಈ ಎಂಪಿ ರಮೇಶನ ವಿಷಯವೂ ಬಂದು, ಈತ ಆ ಅಧಿಕಾರಿಗಳನ್ನು ‘ಫಿಕ್ಸ್’ ಮಾಡಲು ಯತ್ನಿಸಿದ್ದಾನೆ ಎಂದು ಸಾಕ್ಷಿಯೊದು ಆಪಾದಿಸಿತ್ತು.
ಟಿಡಿಪಿ ಮೋದಿ-1 ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುವ ಮೊದಲು ಚೌಧರಿ ಎನ್‍ಡಿಎ ಸರ್ಕಾರದಲ್ಲಿ ರಾಜ್ಯ ಸಚಿವರಾಗಿದ್ದರು. ನಂತರ ಈ ಚೌಧರಿಯ ಮೇಲೆ ಸಿಬಿಐ ಮೂರು ಎಫ್‍ಐಆರ್ ಗಳನ್ನು ದಾಖಲಿಸಿದೆ. ಚೌಧರಿಗೆ ಸೇರಿದ ವಿದ್ಯುತ್ ತಯಾರಿಸುವ ಬೆಸ್ಟ್ ಕ್ರಾಂಪ್ಟನ್ ಕಂಪನಿಯು ಬ್ಯಾಂಕಿಂಗ್ ವಲಯದಿಂದ 360 ಕೋಟಿ ಸಾಲ ಪಡೆದು ವಂಚಿಸಿದೆ ಎಂದು ಎಫ್‍ಆರ್‍ಐನಲ್ಲೆ ಆರೋಪಿಸಲಾಗಿದೆ. ಸಿಬಿಐ ಮಾಹಿತಿಯ ಆಧಾರದಲ್ಲಿ ಇ.ಡಿ ಕೂಡ ಚೌಧರಿ ಮೇಲೆ ಕೇಸು ದಾಖಲಿಸಿ ತನಿಖೆ ನಡೆಸುತ್ತಿದೆ. ಕಳೆದ ಅಕ್ಟೋಬರರ್ 2ರಂದು ಹೈದಾರಾಬಾದ್‍ನ ಚೌಧರಿ ಮನೆ ಮತ್ತು ಕಚೇರಿಗಳ ಮೇಲೆ ದಾಳಿ 12 ವಂಚಕ ಕಂಪನಿಗಳ ಸೀಲ್‍ಗಳು ಮತ್ತು ದಾಖಲೆಗಳನ್ನು ವಶ ಮಾಡಿಕೊಂಡಿತ್ತು. ಚೌಧರಿಯ ಸುಜನಾ ಕಂಪನಿಯ ಮೇಲೂ 5,700 ಕೋಟಿಗಳ ವಂಚನೆಯ ಕುರಿತೂ ಇ.ಡಿ ತನಿಖೆ ನಡೆಸುತ್ತಿದೆ.
ಇಂತಹ ಗಂಭೀರ ಆರೋಪ ಎದುರಿಸುತ್ತಿರುವ ಚೌಧರಿ ಮತ್ತು ರಮೇಶರ ಮೇಲಿನ ತನಿಖೆ ಇನ್ನೂ ಮುಗಿದಿಲ್ಲ. ಆಗ ‘ಆಂಧ್ರ ಮಲ್ಯ’ಗಳಾಗಿದ್ದ ಇವರಿಬ್ಬರೂ ಈಗ ದೇಶಭಕ್ತರಾಗಿ ಬದಲಾಗಿದ್ದಾರೆಯೇ ಎಂಬ ಪ್ರಶ್ನೆಗೆ ‘ಜೈ ಶ್ರೀರಾಮ್’ ಎಂಬ ಉತ್ತರವೇ ಬರಬಹುದೇನೋ?
ಸಿಬಿಐ, ಇಡಿ ಮತ್ತು ಐಟಿ ಇಲಾಖೆಗಳನ್ನು ಬಳಸಿಕೊಂಡು ವಂಚಕ ಜನಪ್ರತಿನಿಧಿಗಳನ್ನು ತನ್ನತ್ತು ಸೆಳೆಯುವ ‘ಮೋಡಸ್ ಆಪರೆಂಡಿ’ಯನ್ನು ಬಿಜೆಪಿ ಅನುಸರಿಸುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಶಾರದಾ ಚಿಟ್ ಹಗರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದ ಟಿಎಂಸಿಯ ಮುಕುಲ್‍ರಾಯ್ ಮತ್ತು ಇತರರನ್ನು ಸೇರಿಸಿಕೊಂಡ ಬಿಜೆಪಿ ನಂತರದಲ್ಲಿ ಅವರನ್ನೇ ಬಳಸಿಕೊಂಡು ಪಶ್ಚಿಮ ಬಂಗಾಳದಲ್ಲಿ ಮಮತ ವಿರುದ್ಧ ತನ್ನ ನೆಲೆಯನ್ನು ಗಟ್ಟಿ ಮಾಡಿಕೊಂಡಿತ್ತು. ಹೀಗೆ ಬಿಜೆಪಿ ಸೇರುವ ಮಲ್ಯಗಳು ತನಿಖೆಗಳಿಂದ ಬಚಾವಾಗುತ್ತಲಿದ್ದಾರೆ, ಮುಂದೆ ಸಂಪೂರ್ಣ ಆರೋಪಮುಕ್ತರೂ ಆಗುತ್ತಾರೆ.
ವಿಜಯ ಮಲ್ಯ, ನೀರವ್ ಮೋದಿ ಬಿಜೆಪಿಗೆ ಸೇರ್ಪಡೆಗೊಂಡರೆ ದೇಶಭಕ್ತರಾಗುವ ಅವಕಾಶಗಳು ಉಂಟೇನೋ?
(ಆಧಾರ: ಇಂಡಿಯನ್ ಎಕ್ಸ್‍ಪ್ರೆಸ್)
ಇದನ್ನು ಓದಿ: ರಿಯಲ್ ಎಸ್ಟೇಟ್ ಹಗರಣದ ಕೇಸಿನಿಂದ ಬಚಾವಾಗಲು ಬಿಜೆಪಿ ಸೇರಿದರಾ ಗೌತಮ್ ಗಂಭೀರ್


