Homeಮುಖಪುಟಖಾಸಗಿ ವಲಯದ ಶೇ.50 ರಷ್ಟು ಲಸಿಕೆ  9 ಕಾರ್ಪೋರೇಟ್‍ ಆಸ್ಪತ್ರೆಗಳ ಪಾಲು: ಸಣ್ಣ ನಗರಗಳಲ್ಲಿ ಲಸಿಕೆ...

ಖಾಸಗಿ ವಲಯದ ಶೇ.50 ರಷ್ಟು ಲಸಿಕೆ  9 ಕಾರ್ಪೋರೇಟ್‍ ಆಸ್ಪತ್ರೆಗಳ ಪಾಲು: ಸಣ್ಣ ನಗರಗಳಲ್ಲಿ ಲಸಿಕೆ ಕೊರತೆ

- Advertisement -

ದೇಶದ 9 ಕಾರ್ಪೋರೇಟ್‍ ಅಂದರೆ ಬೃಹತ್‍ ಆಸ್ಪತ್ರೆ ಸಮೂಹಗಳು ಖಾಸಗಿ ಆಸ್ಪತ್ರೆಗಳು ಖರೀದಿಸಿದ ಒಟ್ಟು ಲಸಿಕೆಗಳಲ್ಲಿ ಅರ್ಧದಷ್ಟನ್ನು ಖರೀದಿಸಿ ಸ್ಟಾಕ್ ಮಾಡಿಕೊಂಡಿವೆ ಎಂದು ಇಂಡಿಯನ್‍ ಎಕ್ಸ್‌ಪ್ರೆಸ್‍ ವರದಿ ಮಾಡಿದೆ.

ಕೇಂದ್ರ ಸರ್ಕಾರವು ತನ್ನ ಲಸಿಕಾ ನೀತಿಯನ್ನು ಪರಿಷ್ಕರಿಸಿ ಮುಕ್ತ ಮಾರುಕಟ್ಟೆಗೆ ಬಿಟ್ಟಿದ್ದರ ಪರಿಣಾಮ ಇದಾಗಿದೆ. ಮೊದಲ ತಿಂಗಳೊಂದರಲ್ಲೇ ಖಾಸಗಿ ಆಸ್ಪತ್ರೆಗಳು ಖರೀದಿಸಿದ 1.20 ಕೋಟಿ ಡೋಸ್‍ ಲಸಿಕೆಗಳಲ್ಲಿ 9 ಕಾರ್ಪೋರೇಟ್‍ ಆಸ್ಪತ್ರೆಗಳು 60.57 ಲಕ್ಷ ಡೋಸ್‍ಗಳನ್ನು ಖರೀದಿಸಿವೆ. ಈ ಪಂಚತಾರಾ ಆಸ್ಪತ್ರೆಗಳು ಹೆಚ್ಚಾಗಿ ಮಹಾನಗರಗಳಲ್ಲೇ ಇದ್ದು, ದೇಶದ ಎರಡನೇ ಹಂತದ ನಗರ-ಪಟ್ಟಣಗಳ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯ ಕೊರತೆಯಾಗಿದೆ. ಬೆಂಗಳೂರಿನ ಮಧ್ಯಮ ಗಾತ್ರದ ಆಸ್ಪತ್ರೆಗಳಲ್ಲೂ ಲಸಿಕೆ ಪ್ರಮಾಣ ಕಡಿಮೆಯಿದೆ.

ಇದು ಲಸಿಕಾ ನೀತಿ ಸೃಷ್ಟಿಸಿರುವ ಅಸಮಾನ ಹಂಚಿಕೆ ಮತ್ತು ಅಸಮಾನ ಲಭ್ಯತೆಗೆ ದಾರಿ ಮಾಡಿಕೊಟ್ಟಿದೆ. ಮೇ ತಿಂಗಳಲ್ಲಿ ಖಾಸಗಿ ವಲಯಕ್ಕೆ ಮೀಸಲಾದ ಕೋವಿಡ್‍ ಲಸಿಕೆಗಳಲ್ಲಿ ಶೇ, 50ರಷ್ಟು ಈ 9 ಕಾರ್ಪೋರೇಟ್‍ ಆಸ್ಪತ್ರೆ ಸಮೂಹಗಳ ಕೈಸೇರಿದೆ.

ಉಳಿದ ಶೇ.50ರಷ್ಟು ಲಸಿಕೆಗಳು ಸುಮಾರು 300 ಆಸ್ಪತ್ರೆಗಳಿಗೆ ವಿತರಣೆಯಾಗಿದೆ. ಈ ಯಾವ ಆಸ್ಪತ್ರೆಗಳೂ  ಎರಡನೇ ಶ್ರೇಣಿಯ ನಗರಗಳಲ್ಲಿ ಕೆಲಸ ನಿರ್ವಹಿಸುತ್ತಿಲ್ಲ.

ಖಾಸಗಿ ಆಸ್ಪತ್ರೆಗಳು ಮೇ ತಿಂಗಳಿನಲ್ಲಿ 1.20 ಕೋಟಿ ಡೋಸ್‍ ಖರೀದಿಸಿದ್ದು, ಈ ತಿಂಗಳಲ್ಲಿ ಖರೀದಿಯಾದ ಲಸಿಕೆಗಳ ಶೇ.15.6ರಷ್ಟಾಗಿದೆ. ರಾಜ್ಯ ಸರ್ಕಾರಗಳು ಶೇ 33.5 (2.66 ಕೋಟಿ ಡೋಸ್‍) ಮತ್ತು ಕೇಂದ್ರ ಸರ್ಕಾರವು ಶೇ. 50.9 (4.03 ಕೋಟಿ ಡೋಸ್‍) ಲಸಿಕೆ ದಾಸ್ತಾನು ಮಾಡಿವೆ.

ಅಪೊಲೋ ಆಸ್ಪತ್ರೆ ಸಮೂಹದ 9 ಆಸ್ಪತ್ರೆಗಳು 16.1 ಲಕ್ಷ ಡೋಸ್‍, ಮ್ಯಾಕ್ಸ್‌ ಕೇರ್‌ನ 6 ಆಸ್ಪತ್ರೆಗಳು 12.97 ಲಕ್ಷ ಡೋಸ್‍, ರಿಲಾಯನ್ಸ್‌ ಫೌಂಡೇಶನ್‍ ನಡೆಸುವ ಎಚ್‍ಎನ್‍ ಟ್ರಸ್ಟ್ ಸಮೂಹ 9.89 ಲಕ್ಷ ಡೋಸ್‍, ಮೆಡಿಕಾ ಸಮೂಹವು 6.26 ಲಕ್ಷ ಡೋಸ್‍, ಪೋರ್ಟಿಸ್‍ ಹೆಲ್ತ್‍ಕೇರ್‌ನ ಎಂಟು ಆಸ್ಪತ್ರೆಗಳು 4.48 ಲಕ್ಷ ಡೋಸ್‍, ಗೋದ್ರೇಜ್‍ ಸಮೂಹ ಆಸ್ಪತ್ರೆಗಳು 3.35 ಲಕ್ಷ, ಮಣಿಪಾಲ್‍ ಹೆಲ್ತ್ ಕೇರ್ ಸಮೂಹ 3.24 ಲಕ್ಷ ಡೋಸ್‍, ನಾರಾಯಣ ಹೃದಯಾಲಯ 2.02 ಲಕ್ಷ ಡೋಸ್‍ ಮತ್ತು ಟೆಕ್ನೋ ಇಂಡಿಯಾ ಸಮೂಹ 2 ಲಕ್ಷ ಡೋಸ್‍ ಖರೀದಿ ಮಾಡಿವೆ.

ಈ ಆಸ್ಪತ್ರೆಗಳು ಮೆಟ್ರೋ, ರಾಜ್ಯ ರಾಜಧಾನಿ ಮತ್ತು ಒಂದನೇ ಶ್ರೇಣಿಯ ನಗರಗಳಲ್ಲಿ ತಮ್ಮ ಘಟಕಗಳನ್ನು ಹೊಂದಿವೆ. ಸೀರಂ ಕಂಪನಿಯ ಕೋವಿಶೀಲ್ಡ್ ಅನ್ನು 600 ರೂ.ಗಳಿಗೆ ಮತ್ತು ಭಾರತ್‍ ಬಯೋಟೆಕ್‍ನ ಕೊವ್ಯಾಕ್ಸಿನ್‍ ಅನ್ನು 1,200 ರೂ,ಗಳಿಗೆ ಈ ಆಸ್ಪತ್ರೆಗಳು ಖರೀದಿಸಿವೆ.

ಬೆಂಗಳೂರಿನ ನ್ಯಾಷನಲ್‍ ಇನ್ಸಿಟ್ಯೂಟ್‍ ಆಫ್‍ ಅಡ್ವಾನ್ಸ್ ಸ್ಟಡೀಸ್‍ನ  ಪ್ರಾಧ್ಯಾಪಕ ತೇಜಲ್‍ ಕಾಂಟಿಕರ್, “ಲಸಿಕಾ ತಯಾರಕ ಕಂಪನಿಗಳು ಹೆಚ್ಚಿನ ದರ ಸಿಗುವ ಕಾರ್ಪೋರೇಟ್‍ ಆಸ್ಪತ್ರೆಗಳಿಗೆ ಲಸಿಕೆ ಮಾರಲು ಆಸಕ್ತಿ ತೋರಿವೆ’’ ಎನ್ನುತ್ತಾರೆ. ಅಂದರೆ ನಿಗದಿತ ದರಕ್ಕಿಂತಲೂ ಹೆಚ್ಚಿನ ದರಕ್ಕೂ ಲಸಿಕೆ ಖರೀದಿಸಿರಬಹುದು ಮತ್ತು ಶ್ರೀಮಂತರಿಗೆ ಅವನ್ನು ಇನ್ನೂ ಹೆಚ್ಚಿನ ದರದಲ್ಲಿ ನೀಡಿರಬಹುದು.

ಈ ಆಸ್ಪತ್ರೆಗಳು ಗ್ರಾಹಕರಿಗೆ ಕೋವಿಶೀಲ್ಡ್ ಅನ್ನು 850-1000 ರೂಗೆ ಮತ್ತು ಕೋವ್ಯಾಕ್ಸಿನ್‍ ಅನ್ನು 1,250 ರೂಗೆ ಒದಗಿಸುತ್ತಿವೆ. ಇದು ನಗರ ನಿವಾಸಿಗಳ ಒಂದು ವರ್ಗಕ್ಕೆ ಮಾತ್ರ ಅನುಕೂಲಕರವಾಗಿದ್ದು, ಕೆಳ ಮಧ್ಯಮ ವರ್ಗದವರ ಕೈಗೆ ಎಟುಕದ ದರವಾಗಿದೆ.

ನಿಮ್ಮಲ್ಲಿರುವ ಲಸಿಕೆಗಳನ್ನು ಸಣ್ಣ ನಗರಗಳಿಗೆ ವಿತರಿಸುತ್ತೀದ್ದೀರಾ ಎಂದು ಇಂಡಿಯನ್  ಎಕ್ಸ್ ಪ್ರೆಸ್‍ ಕೇಳಿದ ಪ್ರಶ್ನೆಗಳಿಗೆ ಈ ಆಸ್ಪತ್ರೆಗಳು ಇನ್ನೂ ಉತ್ತರಿಸಿಲ್ಲ.

ಕೇಂದ್ರದ ಲಸಿಕಾ ನೀತಿಯನ್ನು ಈಗಾಗಲೇ ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ರಾಜ್ಯ ಸರ್ಕಾರಗಳು ಲಸಿಕೆಯ ಅಸಮಾನ ಹಂಚಿಕೆಯ ಬಗ್ಗೆ ದೂರುತ್ತಿವೆ. ಇದೇ ಹೊತ್ತಲ್ಲಿ ಖಾಸಗಿ ವಲಯಕ್ಕೆ ನಿಗದಿಯಾದ ಲಸಿಕೆಗಳಲ್ಲಿ ಶೇ. 50 ರಷ್ಟು ಕೇವಲ 9 ಸಮೂಹ ಆಸ್ಪತ್ರೆಗಳ ಪಾಲಾಗಿವೆ.

ಉಚಿತ ಲಸಿಕೆ ನೀಡಬೇಕಾದ ಹೊಣೆಯಿಂದ ತಪ್ಪಿಸಿಕೊಂಡ ಕೇಂದ್ರ ಸರ್ಕಾರ ತಯಾರಕ ಕಂಪನಿಗಳು, ದೊಡ್ಡ ಆಸ್ಪತ್ರೆ ಸಮೂಹಗಳ ಪರ ನಿಂತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.


ಇದನ್ನೂ ಓದಿ: ಕೋವಿಡ್-19; ಆದ ಎಡವಟ್ಟುಗಳು ಮತ್ತು ಬೇಕಿರುವ ಎಚ್ಚರ: ಡಾ. ಜಿ ಎನ್ ಮಲ್ಲಿಕಾರ್ಜುನಪ್ಪ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಂಗನಾ ಪೋಸ್ಟ್‌ಗಳಿಗೆ ಸೆನ್ಸಾರ್‌ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

0
ನಟಿ ಕಂಗನಾ ರಣಾವತ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುವ ಪೋಸ್ಟ್‌ಗಳನ್ನು ಇನ್ನು ಮುಂದೆ ಸೆನ್ಸಾರ್ ಮಾಡಬೇಕು ಎಂದು ಒತ್ತಾಯಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ ಎಂದು ಬಾರ್ ಅಂಡ್‌‌ ಬೆಂಚ್ ವರದಿ...
Wordpress Social Share Plugin powered by Ultimatelysocial
Shares