ದೇಶದ ಕೊರೊನಾ ಸೋಂಕಿತರಲ್ಲಿ ಹೆಚ್ಚು ಸಾವಿರಾರು ಮಂದಿ ಆಕ್ಸಿಜನ್ ಪೂರೈಕೆ ಇಲ್ಲದೆ ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪಿಎಂ ಕೇರ್ಸ್‌ನ ನೆರವಿನಲ್ಲಿ 551 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
ದೇಶದ ಹಲವು ಸ್ಥಳಗಳಲ್ಲಿ ಆಕ್ಸಿಜನ್ ಕೊರತೆಯ ವರದಿಗಳು ಹೆಚ್ಚಾಗುತ್ತಿರುವ ಕಾರಣ, ಜೀವ ಉಳಿಸುವ ಅನಿಲದ ಲಭ್ಯತೆಯನ್ನು ಹೆಚ್ಚಿಸಲು ದೇಶಾದ್ಯಂತ ಸಾರ್ವಜನಿಕ ಆರೋಗ್ಯ ಸೌಲಭ್ಯ ಘಟಕಗಳಲ್ಲಿ 500 ಕ್ಕೂ ಹೆಚ್ಚು ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುವುದು ಎಂದಿದೆ.
551 ಸ್ಥಾವರಗಳ ಸ್ಥಾಪನೆಗೆ ಹಣ ಹಂಚಿಕೆ ಮಾಡಲು ಪಿಎಂ ಕೇರ್ಸ್ ಫಂಡ್ ತಾತ್ವಿಕವಾಗಿ ಅನುಮೋದನೆ ನೀಡಿದೆ ಎಂದು ಪ್ರಧಾನಿ ಕಚೇರಿ (ಪಿಎಂಒ) ಭಾನುವಾರ ತಿಳಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟಕಗಳನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರಬೇಕು ಎಂದು ನಿರ್ದೇಶಿಸಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ: ಕೊರೊನಾ ತಲ್ಲಣ: #ModiOxygenDo, भाषणबाज_मोदी, #oxygenbedslekkakodi ಟ್ವಿಟರ್ ಟ್ರೆಂಡ್
ಈ ಆಮ್ಲಜನಕ ಉತ್ಪಾದನಾ ಘಟಕಗಳು ಜಿಲ್ಲಾ ಮಟ್ಟದಲ್ಲಿ ಆಮ್ಲಜನಕದ ಲಭ್ಯತೆಗೆ ಪ್ರಮುಖ ಉತ್ತೇಜನ ನೀಡುತ್ತವೆ ಎನ್ನಲಾಗಿದೆ.
ಈ ಮೀಸಲಾದ ಸ್ಥಾವರಗಳನ್ನು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಜಿಲ್ಲಾ ಕೇಂದ್ರಗಳಲ್ಲಿ ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುವುದು. ಅವುಗಳ ಹೊಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೂಲಕ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಪಿಎಸ್‌ಎ (Pressure Swing Adsorption) ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸುವ ಹಿಂದಿನ ಮೂಲ ಉದ್ದೇಶವೆಂದರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದಾಗಿದೆ. ಆಮ್ಲಜನಕ ಉತ್ಪಾದನಾ ಸೌಲಭ್ಯವು ಈ ಆಸ್ಪತ್ರೆಗಳು ಮತ್ತು ಜಿಲ್ಲೆಯ ದಿನನಿತ್ಯದ ವೈದ್ಯಕೀಯ ಆಮ್ಲಜನಕದ ಅಗತ್ಯಗಳನ್ನು ಪೂರೈಸುತ್ತದೆ.
ಇದರಿಂದ ಜಿಲ್ಲೆಗಳಲ್ಲಿನ ಸರ್ಕಾರಿ ಆಸ್ಪತ್ರೆಗಳು ಆಮ್ಲಜನಕದ ಪೂರೈಕೆಯಲ್ಲಿ ಹಠಾತ್ ಅಡೆತಡೆಗಳನ್ನು ಎದುರಿಸುವುದಿಲ್ಲ. ಜೊತೆಗೆ ಕೊರೊನಾ ಸೋಂಕಿತ ರೋಗಿಗಳು ಮತ್ತು ಆಮ್ಲಜನಕ ಅಗತ್ಯವಿರುವ ಇತರ ರೋಗಿಗಳಿಗೆ ಸಹಾಯವಾಗುತ್ತದೆ ಎಂದು ತಿಳಿಸಿದೆ.
ರಾಷ್ಟ್ರ ರಾಜಧಾನಿಯ ಹಲವಾರು ಆಸ್ಪತ್ರೆಗಳು ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆಯಿಂದ ಬಳಲುತ್ತಿವೆ. ಕೆಲವು ಆಸ್ಪತ್ರೆಗಳು ಅಲ್ಪಾವಧಿಯ ವ್ಯವಸ್ಥೆಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದರೂ, ಸೋಂಕಿತರ ತೀವ್ರ ಏರಿಕೆ ನೊಡುತ್ತಿದ್ದರೆ ಈ ಸಮಸ್ಯೆ ಇಲ್ಲಿಗೆ ಮುಗಿಯುವಂತಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಸಾಂಕ್ರಾಮಿಕ ದುರಂತದ ಸಮಯದಲ್ಲಿ ಐಪಿಎಲ್ ಕವರೇಜ್ ಮಾಡುವುದಿಲ್ಲವೆಂದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್!


